Categories
ಟಾಲಿವುಡ್

ನಾಗಚೈತನ್ಯರನ್ನು ನಿರ್ದೇಶಿಸಿದ ಫರ್ಹಾ ಖಾನ್

ಬಾಲಿವುಡ್‌ನ ಪ್ರತಿಭಾವಂತ ನೃತ್ಯಸಂಯೋಜಕಿ, ಚಿತ್ರನಿರ್ದೇಶಕಿ ಫರ್ಹಾ ಖಾನ್‌ ತೆಲುಗು ನಟ ನಾಗಚೈತನ್ಯರನ್ನು ನಿರ್ದೇಶಿಸಿದ್ದಾರೆ. ಆದರೆ ಇದು ಸಿನಿಮಾ ಅಲ್ಲ. ನಾಗಚೈತನ್ಯ ನಟಿಸಿರುವ ಜಾಹೀರಾತೊಂದನ್ನು ನಿರ್ದೇಶಿಸಿರುವ ಫರ್ಹಾ ಟ್ವಿಟರ್‌ನಲ್ಲಿ ಯುವನಟನ ಜೊತೆಗಿನ ಫೋಟೋ ಹಂಚಿಕೊಂಡು ಸಂತಸಪಟ್ಟಿದ್ದಾರೆ. ವಿಶೇಷವೆಂದರೆ 1990ರಲ್ಲಿ ಫರ್ಹಾ ಅವರು ನಾಗಚೈತನ್ಯರ ತಂದೆ – ನಟ ನಾಗಾರ್ಜುನ ಅವರ ಸಿನಿಮಾ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದರಂತೆ.

ನಾಗಚೈತನ್ಯ ಜೊತೆಗಿನ ಫೋಟೋ ಹಂಚಿಕೊಂಡಿರುವ ಫರ್ಹಾ, “ಇಪ್ಪತ್ತೈದು ವರ್ಷಗಳ ಹಿಂದೆ ನಾಗಾರ್ಜುನ ಅವರಿಗೆ ನೃತ್ಯ ಸಂಯೋಜಿಸಿದ್ದೆ. ಆಗಿನಿಂದಲೂ ನಾಗಾರ್ಜುನ ನನಗೆ ಒಳ್ಳೆಯ ಸ್ನೇಹಿತರಾಗಿದ್ದಾರೆ. ಈಗ ನಾಗ್ ಪುತ್ರನ ಜಾಹೀರಾತು ನಿರ್ದೇಶಿಸಿದ್ದೇನೆ. ಬದುಕು ಒಂದು ರೌಂಡು ಹೊಡೆದಿದೆ. ನನಗೆ ಹೆಚ್ಚು ವಯಸ್ಸಾಯ್ತೇನೋ ಎಂದು ಗೊಂದಲವಾಗುತ್ತಿದೆ!” ಎಂದು ಬರೆದುಕೊಂಡಿದ್ದಾರೆ.

‘ಲವ್‌ ಸ್ಟೋರಿ’ ತೆಲುಗು ಚಿತ್ರದಲ್ಲಿ ಸಾಯಿ ಪಲ್ಲವಿ, ನಾಗ ಚೈತನ್ಯ

ಹಿರಿಯ ನೃತ್ಯ ಸಂಯೋಜಕಿ ಫರ್ಹಾ ಖಾನ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದಿದ್ದಾರೆ ನಾಗ ಚೈತನ್ಯ. ಇನ್ನು ಮುಂದಿನ ತಿಂಗಳು ಏಪ್ರಿಲ್‌ 16ರಂದು ಅವರ ‘ಲವ್‌ ಸ್ಟೋರಿ’ ಸಿನಿಮಾ ತೆರೆಕಾಣಲಿದೆ. ಶೇಖರ್ ಕಮ್ಮುಲು ನಿರ್ದೇಶನದ ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿ. ವಿಕ್ರಂ ಕುಮಾರ್ ನಿರ್ದೇಶನದ ‘ಥ್ಯಾಂಕ್‌ ಯೂ’ ತೆಲುಗು ಚಿತ್ರದಲ್ಲಿ ನಾಗಚೈತನ್ಯ ಹಾಕಿ ಆಟಗಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಈ ವರ್ಷಾಂತ್ಯದಲ್ಲಿ ಥಿಯೇಟರ್‌ಗೆ ಬರಲಿದೆ.

Categories
ಟಾಲಿವುಡ್

ಅಲಿಯಾ ‘ಆರ್‌ಆರ್‌ಆರ್‌’ ಫಸ್ಟ್‌ಲುಕ್‌ ಔಟ್

ರಾಜ್‌ಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್‌ಆರ್‌ಆರ್‌’ ಚಿತ್ರದಲ್ಲಿನ ನಟಿ ಅಲಿಯಾ ಭಟ್‌ ಫಸ್ಟ್‌ಲುಕ್‌ ಇಂದು ಬಿಡುಗಡೆಯಾಗಿದೆ. ಬಾಲಿವುಡ್‌ ನಟಿ ಅಲಿಯಾ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಜನ್ಮದಿನದ ಉಡುಗೊರೆಯಾಗಿ ನಿರ್ದೇಶಕ ರಾಜ್‌ಮೌಳಿ ಫಸ್ಟ್‌ಲುಕ್‌ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ. “ಭರಪೂರ ಆತ್ಮವಿಶ್ವಾಸದ ದಿಟ್ಟ ಮಹಿಳೆ ಸೀತಾ” ಎನ್ನುವ ಒಕ್ಕಣಿಯೊಂದಿಗೆ ರಾಜ್‌ಮೌಳಿ ಅಲಿಯಾ ಪಾತ್ರದ ಫೋಟೋ ಟ್ವೀಟ್ ಮಾಡಿದ್ದಾರೆ.

ವೈವಿಧ್ಯಮಯ ಪಾತ್ರಗಳ ಮೂಲಕ ಬಾಲಿವುಡ್‌ನಲ್ಲಿ ಛಾಪು ಮೂಡಿಸುತ್ತಿರುವ ಅಲಿಯಾ ಭಟ್‌ ಇದೀಗ ‘ಆರ್‌ಆರ್‌ಆರ್‌’ (ರೌದ್ರಂ ರಣಂ ರುಧಿರಂ) ಚಿತ್ರದೊಂದಿಗೆ ದಕ್ಷಿಣಕ್ಕೆ ಬಂದಿದ್ದಾರೆ. ಸ್ವಾತಂತ್ರ್ಯಪೂರ್ವದ ಕತೆಯ ಈ ಚಿತ್ರಕ್ಕೆ ಹೊಂದುವಂತಹ ರೆಟ್ರೋ ಲುಕ್‌ನಲ್ಲಿ ಅಲಿಯಾ ಗಮನ ಸೆಳೆಯುತ್ತಿದ್ದಾರೆ. ಸುಮಾರು 1920ರ ಕಾಲಘಟ್ಟದ ಕತೆ ಎನ್ನುವುದು ರಾಜ್‌ಮೌಳಿ ಅವರ ಹೇಳಿಕೆ.

ತೆಲುಗಿನ ಬುಡಕಟ್ಟು ಜನಾಂಗದ ವೀರರ ಪಾತ್ರಗಳಲ್ಲಿ (ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರನ್ ಭೀಮ್‌) ರಾಮ್‌ ಚರಣ್‌ ಮತ್ತು ಜ್ಯೂನಿಯರ್ ಎನ್‌ಟಿಆರ್‌ ನಟಿಸಿದ್ದಾರೆ. ಬಾಲಿವುಡ್‌ ನಟ ಅಜಯ್‌ ದೇವಗನ್‌, ಸಮುದ್ರಖನಿ, ಒಲಿವಿಯಾ ಮೋರಿಸ್‌, ಅಲಿಸನ್ ಡೂಡಿ, ರೇ ಸ್ಟೀವನ್‌ಸನ್‌ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ವರ್ಷ ಅಕ್ಟೋಬರ್ 31ರಂದು ಸಿನಿಮಾ ತೆರೆಕಾಣಲಿದೆ. ಇನ್ನು ಅಲಿಯಾ ಭಟ್‌ ‘ಆರ್‌ಆರ್‌ಆರ್‌’ ಅಲ್ಲದೆ ‘ಗಂಗೂಬಾಯಿ ಕಥಿಯಾವಾಡಿ’ ಮತ್ತು ‘ಬ್ರಹ್ಮಾಸ್ತ್ರ’ ಹಿಂದಿ ಚಿತ್ರಗಳು ತೆರೆಗೆ ಸಿದ್ಧವಾಗುತ್ತಿವೆ.

Categories
ಟಾಲಿವುಡ್

ಚಿತ್ರರಂಗದಲ್ಲಿ ಹನ್ನೊಂದು ವರ್ಷ ಪೂರೈಸಿದ ಸಮಂತಾ; ಈಗಲೂ ಅವರು ಬೇಡಿಕೆಯ ನಟಿ

ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಮಂತಾ ಅಕ್ಕಿನೇನಿ ಜನಪ್ರಿಯ ನಟಿ. ಗ್ಲಾಮರಸ್ ನಟಿಯಾಗಿ ಬೆಳ್ಳಿತೆರೆ ಪ್ರವೇಶಿಸಿದ ಅವರು ಇದೀಗ ಅಪರೂಪದ, ವಿಶಿಷ್ಟ ಕತೆಗಳಲ್ಲಿ ನಟಿಸತೊಡಗಿದ್ದಾರೆ. ಸ್ವತಃ ತಮ್ಮ ಹೆಸರಿನಿಂದಲೇ ಥಿಯೇಟರ್‌ಗೆ ಪ್ರೇಕ್ಷಕರನ್ನು ಕರೆತರುವಷ್ಟು ಖ್ಯಾತಿ ಅವರದಾಗಿದೆ. ಇಂದಿಗೆ ಅವರು ಸಿನಿಮಾ ಪ್ರವೇಶಿಸಿ ಹನ್ನೊಂದು ವರ್ಷ. ತೆಲುಗು ಜನಪ್ರಿಯ ನಟ ನಾಗ ಚೈತನ್ಯ ಪತ್ನಿಯಾಗಿ, ಪ್ರತಿಷ್ಠಿತ ಅಕ್ಕಿನೇನಿ ಕುಟುಂಬದ ಸೊಸೆಯಾಗಿ ವೈಯಕ್ತಿಕ ಬದುಕಿನಲ್ಲೂ ಆಕೆ ಸಂತೃಪ್ತರು.

ಗೌತಮ್ ಮೆನನ್ ನಿರ್ದೇಶನದ ‘ಯೇ ಮಾಯ ಚೇಸಾವೆ’ (2010) ತೆಲುಗು ಚಿತ್ರದೊಂದಿಗೆ ಅವರು ಸಿನಿಮಾಗೆ ಪರಿಚಯವಾಗಿದ್ದು. ನಾಗ ಚೈತನ್ಯ ಹೀರೋ ಆಗಿ ನಟಿಸಿದ್ದ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಈ ಗೆಲುವು ಅವರ ವೃತ್ತಿ ಬದುಕಿಗೆ ಚಿಮ್ಮು ಹಲಗೆಯಾಯ್ತು. ಮುಂದೆ ಅವರು ನಟಿಸಿದ ಸಾಕಷ್ಟು ಸಿನಿಮಾಗಳು ದೊಡ್ಡ ಯಶಸ್ಸು ಕಂಡವು. ದೂಕುಡು, ಬೃಂದಾವನಂ, ಅತ್ತಾರಿಂಟಿಕಿ ದಾರೇದಿ, ಈಗಾ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು, ಮನಂ, ಸನ್‌ಆಫ್‌ ಸತ್ಯಮೂರ್ತಿ, ಜನತಾ ಗ್ಯಾರೇಜ್‌, ರಂಗಸ್ಥಳಂ, ಮಹಾನಟಿ ಚಿತ್ರಗಳಲ್ಲಿ ಪ್ರೇಕ್ಷಕರು ಅವರನ್ನು ಮೆಚ್ಚಿಕೊಂಡರು.

ತಮಿಳಿನಲ್ಲೂ ಅವರು ಸಾಕಷ್ಟು ಯಶಸ್ಸು ಕಂಡ ತಾರೆ. ಕತ್ತಿ, ಥೆರಿ, 24, ಮೆರ್ಸಲ್‌, ಸೂಪರ್ ಡಿಲಕ್ಸ್‌ ಕೆಲವು ಉದಾಹರಣೆ. ಅವರ ನಾಯಕಿಪ್ರಧಾನ ಸಿನಿಮಾ ‘ಓಹ್ ಬೇಬಿ’ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತು. ಈ ಮೂಲಕ ಹೀರೋ ಇಲ್ಲದೆಯೇ ಸ್ವತಃ ತಮ್ಮ ನಾಮಬಲದಿಂದ ಸಿನಿಮಾ ಗೆಲ್ಲಿಸಬಲ್ಲೆ ಎನ್ನುವುದನ್ನು ಅವರು ಸಾಬೀತು ಮಾಡಿದರು. ಕಳೆದ ವರ್ಷ ಅವರ ‘ಜಾನು’ ಸಿನಿಮಾ ತೆರೆಕಂಡಿತ್ತು. ಈ ವರ್ಷ ‘ದಿ ಫ್ಯಾಮಿಲಿ ಮ್ಯಾನ್‌’ ವೆಬ್‌ ಸರಣಿಯೊಂದಿಗೆ ಅವರು ಓಟಿಟಿಗೂ ಪದಾರ್ಪಣೆ ಮಾಡಿದ್ದಾರೆ. ಸದ್ಯ ತೆಲುಗು ಸಿನಿಮಾ ‘ಶಾಕುಂತಲಂ’ ಮತ್ತು ತಮಿಳು ‘ಕಥುವಾಕುಲ ರೆಂಡು ಕಾಧಲ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಹನ್ನೊಂದು ವರ್ಷ ಪೂರೈಸಿದರುವ ಸಮಂತಾಗೆ ಅವರ ತಾರಾ ನಟಿ ಕೀರ್ತಿ ಸುರೇಶ್ ಶುಭ ಹಾರೈಸಿದ್ದಾರೆ.

ಸಮಂತಾಗೆ ನಟಿ ಕೀರ್ತಿ ಸುರೇಶ್ ಅವರಿಂದ ಅಭಿನಂದನೆ

Categories
ಟಾಲಿವುಡ್

ಯಾರಾಗಲಿದ್ದಾರೆ ‘ಸೀತಾ’? ಅನುಷ್ಕಾ ಅಥವಾ ಕೀರ್ತಿಗೆ ಒಲಿಯಲಿದೆಯೇ ಅದೃಷ್ಟ?

ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ದೊಡ್ಡ ಯಶಸ್ಸು ಫ್ಯಾಂಟಸಿ ಐತಿಹಾಸಿಕ ಚಿತ್ರಗಳಿಗೆ ಪ್ರೇರಣೆ ನೀಡಿದೆ. ಮೊನ್ನೆಯಷ್ಟೇ ಬಹುಕೋಟಿ ವೆಚ್ಚದ ‘ಮಹಾವೀರ್ ಕರ್ಣ’ ಸೆಟ್ಟೇರಿತು. ಈಗ ಬಹುಭಾಷಾ ಸಿನಿಮಾ ‘ಸೀತಾ’ಗೆ ಚಾಲನೆ ಸಿಕ್ಕಿದೆ. ಅಲೌಕಿಕ್ ದೇಸಾಯಿ ನಿರ್ದೇಶನದ ಚಿತ್ರಕ್ಕೆ ಬಾಹುಬಲಿ, ಮಗಧೀರ, ಭಜರಂಗಿ ಭಾಯಿಜಾನ್‌, ಮಣಿಕರ್ಣಿಕಾ ಚಿತ್ರಗಳಿಗೆ ಚಿತ್ರಕಥೆ ಹೆಣೆದ ಕೆ.ವಿ.ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಹೆಣೆದಿದ್ದಾರೆ. ಮನೋಜ್ ಮುನ್ಸ್‌ಟಾಶಿರ್‌ ಸಂಭಾಷಣೆ ಬರೆಯುತ್ತಿದ್ದಾರೆ. ಈಗ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ತಾರಾಬಳಗದ ಆಯ್ಕೆ ನಡೆಯಲಿದೆ.

ಕೆ.ವಿ.ವಿಜಯೇಂದ್ರ ಪ್ರಸಾದ್

ಹ್ಯೂಮನ್ ಬೀಯಿಂಗ್ ಸ್ಟುಡಿಯೋ ನಿರ್ಮಿಸಲಿರುವ ಸಿನಿಮಾ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ಗುಲ್ಲು ಎದ್ದಿದೆ. ದಕ್ಷಿಣದಲ್ಲಿ ಈಗಾಗಲೇ ಹೆಸರು ಮಾಡಿರುವ ಅನುಷ್ಕಾ ಶೆಟ್ಟಿ ಮತ್ತು ಕೀರ್ತಿ ಸುರೇಶ್‌ ಇಬ್ಬರಲ್ಲಿ ಒಬ್ಬರು ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ಹೇಳುತ್ತವೆ. ‘ಬಾಹುಬಲಿ’ ಚಿತ್ರದೊಂದಿಗೆ ಅನುಷ್ಕಾ ಮತ್ತು ‘ಮಹಾನಟಿ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಸುರೇಶ್‌ ಪ್ಯಾನ್‌ ಇಂಡಿಯಾ ಹಿರೋಯಿನ್‌ಗಳಾಗಿ ಹೆಸರು ಮಾಡಿದ್ದಾರೆ. ಹಾಗಾಗಿ ಇವರಲ್ಲೊಬ್ಬರು ‘ಸೀತೆ’ಯಾಗುವುದು ಖಚಿತ ಎನ್ನಲಾಗಿದೆ.

Categories
ಟಾಲಿವುಡ್

‘ಮೋಸಗಲ್ಲು’ ತೆಲುಗು ಸಿನಿಮಾ ಟ್ರೈಲರ್ ಔಟ್; ಇದು ನೈಜ ಘಟನೆ ಆಧರಿಸಿದ ಥ್ರಿಲ್ಲರ್

ಮಂಚು ವಿಷ್ಣು ಮತ್ತು ಕಾಜಲ್ ಅಗರ್‌ವಾಲ್‌ ನಟನೆಯ ‘ಮೋಸಗಲ್ಲು’ ತೆಲುಗು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮೆಗಾಸ್ಟಾರ್ ಚಿರಂಜೀವಿ ಇಂದು ಟ್ರೈಲರ್‌ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಅಮೆರಿಕಾದಲ್ಲಿ ನಡೆದ ಬಹುದೊಡ್ಡ ಮೊತ್ತದ ಸೈಬರ್ ಕ್ರೈಂ ದರೋಡೆ ಪ್ರಕರಣ ಆಧರಿಸಿ ಹೆಣೆದ ಕತೆಯಿದು. ಬಾಲಿವುಡ್ ನಟ ಸುನೀಲ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದೊಂದಿಗೆ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.

ಟ್ರೈಲರ್ ನೋಡಿದಾಗ ಮುಖ್ಯಪಾತ್ರಧಾರಿಗಳಾದ ಮಂಚು ವಿಷ್ಣು ಮತ್ತು ಕಾಜಲ್ ಅಗರ್‌ವಾಲ್‌ ಹಣಕ್ಕಾಗಿ ಏನು ಬೇಕಾದರೂ ಮಾಡುವವರಂತೆ ಕಾಣುತ್ತಾರೆ! ನೋಡುಗರಲ್ಲಿ ಸಾಕಷ್ಟು ಕುತೂಹಲ ಉಂಟುಮಾಡುವ ಸನ್ನಿವೇಶಗಳಿದ್ದು, ಸಂಭಾಷಣೆಗಳಿಲ್ಲದೆ ಹಿನ್ನೆಲೆ ಸಂಗೀತವಷ್ಟೇ ಇರುವುದು ವಿಶೇ‍ಷ. ಕೆಲವು ಸ್ಟಂಟ್‌ಗಳಿದ್ದು, ಭರಪೂರ ಆಕ್ಷನ್‌ ದೃಶ್ಯಗಳೂ ಇರುತ್ತವೆ ಎನ್ನುವುದಕ್ಕೆ ಸಾಕ್ಷ್ಯ ನುಡಿಯುತ್ತವೆ. ಜೆಫ್ರೀ ಗೀ ಚಿನ್‌ ನಿರ್ದೇಶನದ ಈ ಸ್ಟೈಲಿಶ್‌ ಸಿನಿಮಾ ಮುಂದಿನ ತಿಂಗಳಲ್ಲಿ ತೆರೆಕಾಣಲಿದೆ.

Categories
ಟಾಲಿವುಡ್

ಟಾಲಿವುಡ್‌ನಲ್ಲಿ ಕನ್ನಡದ ಮಿಂಚು ಕೃತಿ ಶೆಟ್ಟಿ; ‘ಉಪ್ಪೆನ’ ಚಿತ್ರ ನಟಿಗೆ ಸಿಕ್ಕಾಪಟ್ಟೆ ಡಿಮಾಂಡ್

ಸೂಪರ್‌ಹಿಟ್‌ ‘ಕಿರಿಕ್ ಪಾರ್ಟಿ’ ಬೆಡಗಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‌ನ ಬೇಡಿಕೆಯ ನಟಿ. ದಕ್ಷಿಣದ ಚಿತ್ರಗಳಲ್ಲದೆ ಅವರೀಗ ಬಾಲಿವುಡ್‌ಗೂ ಹಾರಿದ್ದಾರೆ. ಇದೀಗ ಮಂಗಳೂರು ಮೂಲದ ಕೃತಿ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಅವರು ನಾಯಕಿಯಾಗಿ ನಟಿಸಿದ ಚೊಚ್ಚಲ ತೆಲುಗು ಸಿನಿಮಾ ‘ಉಪ್ಪೆನ’ ದೊಡ್ಡ ಯಶಸ್ಸು ಕಂಡಿದೆ. ಕೃತಿ ಅವರು ‘ಪಕ್ಕದ್ಮನೆ ಹುಡ್ಗಿ’ ಇಮೇಜ್‌ನ ಪಾತ್ರದಲ್ಲಿ ತೆಲುಗು ಜನರ ಮನಸೂರೆಗೊಂಡಿದ್ದಾರೆ. ಈ ಚಿತ್ರದ ಗೆಲುವಿನೊಂದಿಗೆ ಮತ್ತೆರೆಡು ತೆಲುಗು ಚಿತ್ರಗಳಿಗೆ ಸಹಿ ಹಾಕಿರುವ ಆಕೆಯ ಸಂಭಾವನೆಯೂ ಈಗ ದುಬಾರಿಯಾಗಿದೆ.

ಮುಂಬಯಿಯಲ್ಲಿ ಜನಿಸಿದ ಕೃತಿ ಮಾಡೆಲಿಂಗ್‌ ಮೂಲಕ ಗ್ಲಾಮರ್ ಜಗತ್ತಿಗೆ ಪರಿಚಯವಾದರು. ಆಕಸ್ಮಿಕ ಎನ್ನುವಂತೆ ‘ಉಪ್ಪೆನ’ ತೆಲುಗು ಸಿನಿಮಾ ಅವಕಾಶ ಒದಗಿ ಬಂದಿತು. ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ವೈಷ್ಣವ್‌ ತೇಜ್‌ ಈ ಚಿತ್ರದ ಹೀರೋ ಎನ್ನುವುದು ಅವರಿಗೆ ದೊಡ್ಡ ವರವಾಯ್ತು. ಮತ್ತೊಂದೆಡೆ ಈ ಚಿತ್ರದಲ್ಲಿ ಅವರ ತಂದೆ ಪಾತ್ರದಲ್ಲಿ ಖ್ಯಾತ ನಟ ವಿಜಯ್ ಸೇತುಪತಿ ನಟಿಸಿದ್ದಾರೆ. ಮೆಗಾ ಕುಟುಂಬದ ಉತ್ತಮ ಪ್ರೊಮೋಷನ್‌ ಕೂಡ ಚಿತ್ರದ ಯಶಸ್ಸಿಗೆ ನೆರವಾಯ್ತು.

ಕೋವಿಡ್ ಸಂಕಷ್ಟದ ನಂತರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡ ಮೊದಲ ಟಾಲಿವುಡ್‌ ಚಿತ್ರವಾಗಿ ‘ಉಪ್ಪೆನ’ ಗುರುತಿಸಿಕೊಂಡಿದೆ. ಮುಗ್ಧ, ಮುದ್ದುಮೊಗದ ಕೃತಿ ತೆಲುಗು ನಾಡಿನ ಸಿನಿಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೃತಿಗೆ ಈಗಿನ್ನೂ ಹದಿನೇಳರ ಹರೆಯ. ‘ಉಪ್ಪೆನ’ ನಂತರ ಅವರು ಎರಡು ತೆಲುಗು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ನಾನಿ ನಟನೆಯ ‘ಶ್ಯಾಂ ಸಿಂಘ ರಾಯ್‌’ ಮತ್ತು ಸುಧೀರ್ ಬಾಬು ಹೀರೋ ಆಗಿ ನಟಿಸುತ್ತಿರುವ ಮತ್ತೊಂದು ಚಿತ್ರಕ್ಕೆ ಅವರು ನಾಯಕಿ. ಥಿಯೇಟರ್‌ಗಳಲ್ಲಿ ಯಶಸ್ಸು ಕಂಡ ‘ಉಪ್ಪೆನ’ ಸದ್ಯದಲ್ಲೇ ಓಟಿಟಿಯಲ್ಲೂ ಪ್ರೀಮಿಯರ್ ಆಗಲಿದೆ.

Categories
ಟಾಲಿವುಡ್

ಸೀಟಿಮಾರ್‌ ಟೀಸರ್ ರಿಲೀಸ್‌ – ಮೊದಲ ಬಾರಿ ತೆರೆಮೇಲೆ ಗೋಪಿಚಂದ್‌-ತಮನ್ನಾ


ಸಂಪತ್‌ನಂದಿ ನಿರ್ದೇಶನದ ‘ಸೀಟಿಮಾರ್’ ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಗೋಪಿಚಂದ್‌ ಮತ್ತು ತಮನ್ನಾ ಮೊದಲ ಬಾರಿ ಜೊತೆಯಾಗಿ ನಟಿಸಿರುವ ಚಿತ್ರವಿದು. ಏಪ್ರಿಲ್‌ 2ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಕಬಡ್ಡಿ ಹಿನ್ನೆಲೆಯಲ್ಲಿ ಸಖತ್ ಆಕ್ಷನ್‌-ಡ್ರಾಮಾ ಇರುವುದನ್ನು ‘ಸೀಟಿಮಾರ್‌’ ಟೀಸರ್ ಸಾರಿ ಹೇಳುತ್ತಿದೆ. ಚಿತ್ರದಲ್ಲಿ ಗೋಪಿಚಂದ್‌ ಮತ್ತು ತಮನ್ನಾ ಕಬಡ್ಡಿ ಕೋಚ್‌ಗಳು!

ಗೋಪಿಚಂದ್‌ ಆಂಧ್ರ ಕಬಡ್ಡಿ ತಂಡದ ಕೋಚ್ ಆದರೆ ತಮನ್ನಾ ತೆಲಂಗಾಣ ತಂಡದ ಕೋಚ್‌. ಟೀಸರ್‌ನಲ್ಲಿ ತಮನ್ನಾಗೆ ಹೆಚ್ಚು ಸ್ಪೇಸ್‌ ಇದ್ದಂತಿಲ್ಲ. ಡೈಲಾಗ್ ಕೂಡ ಇಲ್ಲವಾದ್ದರಿಂದ ತೆರೆ ಮೇಲಿನ ಗೋಪಿಚಂದ್‌-ತಮನ್ನಾ ಕೆಮಿಸ್ಟ್ರಿ ಹೇಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳದ್ದು. ಚಿತ್ರತಂಡದ ಮೂಲಗಳು ಹೇಳುವಂತೆ ಚಿತ್ರದಲ್ಲಿ ತಮನ್ನಾ ತೆಲಂಗಾಣ ಶೈಲಿ ತೆಲುಗು ಮಾತನಾಡುತ್ತಾರಂತೆ. ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲೇ ಈ ಸಸ್ಪ್ರೈಸ್‌ ಸಿಗಲಿ ಎನ್ನುವುದು ನಿರ್ದೇಶಕರ ನಿಲುವು ಎನ್ನಲಾಗಿದೆ.

ನಿರ್ದೇಶಕ ಸಂಪತ್ ನಂದಿ ಅವರ ಜೊತೆ ಗೋಪಿಚಂದ್‌ ಅವರಿಗೆ ಇದು ಎರಡನೇ ಸಿನಿಮಾ. ‘ಸೀಟಿಮಾರ್‌’ ಟೀಸರ್‌ನಲ್ಲಿ ಗೋಪಿಚಂದ್‌ ಪಾತ್ರವನ್ನು ಮ್ಯಾಕೋ ಕಬಡ್ಡಿ ಕೋಚ್‌ ಎನ್ನುವಂತೆ ತೋರಿಸಲಾಗಿದೆ. ರಾವ್ ರಮೇಶ್ ಮತ್ತು ತರುಣ್ ಅರೋರಾ ಮುಖ್ಯಪಾತ್ರಗಳಲ್ಲಿ ಕಾಣಿಸುತ್ತಾರೆ. ದಿಗಂಗನ ಸೂರ್ಯವಂಶಿ ಮತ್ತು ನಟಿ ಭೂಮಿಕಾ ಚಾವ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಣಿಶರ್ಮ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Categories
ಟಾಲಿವುಡ್

ನಟಿ ಚಾರ್ಮಿ – ವಿಜಯ್‌ ದೇವರಕೊಂಡ ಜಾಲಿ ರೈಡ್‌! ಲೈಗರ್‌ ಶೂಟಿಂಗ್‌ನಲ್ಲಿ ಮಸ್ತ್‌ ಮಜಾ!!


ವಿಜಯ್ ದೇವರಕೊಂಡ ನಟಿಸುತ್ತಿರುವ ಹಿಂದಿ ಮತ್ತು ತೆಲುಗು ದ್ವಿಭಾಷಾ ‘ಲೈಗರ್‌’ ಚಿತ್ರಕ್ಕೆ ಸದ್ಯ ಮುಂಬಯಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದ ನಾಯಕಿ ಅನನ್ಯಾ ಪಾಂಡೆ. ದಕ್ಷಿಣ ಭಾರತದ ಖ್ಯಾತ ನಟಿ ಚಾರ್ಮಿ ಅವರು ಈ ಚಿತ್ರದ ನಿರ್ಮಾಪಕರಲ್ಲೊಬ್ಬರು ಎನ್ನುವುದು ವಿಶೇಷ. ಕರಣ್‌ಜೋಹರ್‌ ಮತ್ತು ಪುರಿ ಜಗನ್ನಾಥ್ ಕೂಡ ಚಿತ್ರದ ಸಹನಿರ್ಮಾಪಕರು. ನಟಿ ಚಾರ್ಮಿ ಚಿತ್ರೀಕರಣದುದ್ದಕ್ಕೂ ಸಿನಿಮಾ ತಂಡದೊಂದಿಗೆ ಇದ್ದಾರೆ. ಆಗಿಂದಾಗ್ಗೆ ಅಲ್ಲಿನ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾ ಸಿನಿಮಾ ಕುರಿತಂತೆ ಸುದ್ದಿಗಳನ್ನು ಅಪ್‌ಡೇಟ್ ಮಾಡುತ್ತಾ ಇರುತ್ತಾರೆ.

ನಟಿ ಚಾರ್ಮಿ ತಮ್ಮ ಟ್ವಿಟರ್‌ನಲ್ಲಿ ಹಾಕಿರುವ ಎರಡು ಫೋಟೋಗಳು ಈಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ. ‘ಲೈಗರ್‌’ ಚಿತ್ರೀಕರಣದ ಬಿಡುವಿನ ಸಂದರ್ಭದಲ್ಲಿ ಚಾರ್ಮಿ ಸ್ಕೂಟರ್ ರೈಡ್ ಮಾಡಿದ್ದಾರೆ. ಹಿಂದೆ ನಟ ವಿಜಯ್ ದೇವರಕೊಂಡ ಅವರು ಕುಳಿತಿರುವುದು ವಿಶೇ‍‍ಷ! “ನಾನು ಸ್ಕೂಟರ್ ಓಡುಸುತ್ತಿದ್ದರೆ, ನನ್ನ ಮೇಲೆ ವಿಶ್ವಾಸವಿಟ್ಟು ವಿಜಯ್ ಕುಳಿತಿದ್ದಾರೆ. ಹೀಗೆ, ಮುಂಬಯಿಯಲ್ಲಿ ನಮ್ಮದೊಂದು ಜಾಲಿ ರೈಡ್‌” ಎಂದಿದ್ದಾರೆ ಚಾರ್ಮಿ. ‘ಲೈಗರ್‌’ ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿದ್ದು, ವಿಜಯ್‌ ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಮತ್ತು ಹಿಂದಿ ಅಲ್ಲದೆ ದಕ್ಷಿಣದ ವಿವಿಧ ಭಾಷೆಗಳಿಗೂ ಡಬ್ ಆಗಿ ಇದೇ ಸೆಪ್ಟೆಂಬರ್‌ 9ರಂದು ಸಿನಿಮಾ ಬಿಡುಗಡೆಯಾಗಲಿದೆ.

Categories
ಟಾಲಿವುಡ್ ಸಿನಿ ಸುದ್ದಿ

ದೃಶ್ಯಂ ಸರಣಿಗೆ ರೆಡಿಯಾದ ವೆಂಕಿ! ಜೀತು ಜೋಸೆಫ್ ನಿರ್ದೇಶನದಲ್ಲೇ ಬರಲಿರುವ ಚಿತ್ರ

ಜೀತು ಜೋಸೆಫ್ ನಿರ್ದೇಶನದಲ್ಲಿ ಮೋಹನ್‌ಲಾಲ್ – ಮೀನಾ ನಟಿಸಿರುವ ‘ದೃಶ್ಯಂ2’ ಮೊನ್ನೆಯಷ್ಟೇ ಅಮೇಜಾನ್ ಪ್ರೈಂನಲ್ಲಿ ಪ್ರೀಮಿಯರ್ ಆಗಿದೆ. ವೀಕ್ಷಕರು ಮತ್ತು ವಿಶ್ಲೇಷಕರು ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ‘ದೃಶ್ಯಂ2’ ತೆಲುಗು ರೀಮೇಕ್ ಸೆಟ್ಟೇರುತ್ತಿದೆ. ಜೀತು ಜೋಸೆಫ್ ಅವರೇ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ವೆಂಕಟೇಶ್ ನಟಿಸುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಉಳಿದ ತಾರಾಬಳಗದ ಆಯ್ಕೆ ಜಾರಿಯಲ್ಲಿದೆ.

ನಿರ್ದೇಶಕ ಜೀತು ಜೋಸೆಫ್ ಇಂದು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ‘ದೃಶ್ಯಂ2’ ತೆಲುಗು ಅವತರಣಿಕೆಯನ್ನು ಘೋಷಿಸಿದ್ದಾರೆ. ನಟ ವೆಂಕಟೇಶ್ ಮತ್ತಿತರರೊಂದಿಗಿನ ಅವರ ಫೋಟೋ ಜೊತೆಗೆ ಈ ಸುದ್ದಿ ಹೊರ ಬಿದ್ದಿದೆ. ‘ದೃಶ್ಯಂ’ ಮೊದಲ ಸರಣಿಯ ತೆಲುಗು ಅವತರಣಿಕೆ 2014ರಲ್ಲಿ ತೆರೆಕಂಡಿತ್ತು. ಆ ಚಿತ್ರವನ್ನು ಸುಪ್ರಿಯಾ ನಿರ್ದೇಶಿಸಿದ್ದರು. ಅಲ್ಲಿ ವೆಂಕಟೇಶ್ ಜೊತೆ ಮೀನಾ, ನಾದಿಯಾ ನಟಿಸಿದ್ದರು.

ಅಮೇಜಾನ್‌ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗಿರುವ ‘ದೃಶ್ಯಂ2’ ಮಲಯಾಳಂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟ ಮೋಹನ್ ಲಾಲ್ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಯಶಸ್ಸಿಗೆ ಕಾರಣರಾದ ತಂತ್ರಜ್ಞರು ಹಾಗೂ ವೀಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ‘ದೃಶ್ಯಂ2’ ತೆಲುಗು ಅವತರಣಿಕೆ ಸೆಟ್ಟೇರುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ, ತಮಿಳು ಮತ್ತು ಹಿಂದಿಯಲ್ಲೂ ತಯಾರಾಗುವ ಸಾಧ್ಯತೆಗಳಿವೆ. ಕನ್ನಡ ‘ದೃಶ್ಯ’ದಲ್ಲಿ ರವಿಚಂದ್ರನ್ ನಟಿಸಿದ್ದರು. ಸರಣಿಯಲ್ಲೂ ಅವರೇ ಇರುತ್ತಾರೆಯೇ ಎಂದು ಕಾದುನೋಡಬೇಕು.

Categories
ಟಾಲಿವುಡ್

ರಾಮ್‌ ಚರಣ್‌ಗೆ ರಶ್ಮಿಕಾ ಜೋಡಿ!?


ಕನ್ನಡ ನಟಿ ರಶ್ಮಿಕಾ ಮಂದಣ್ಣ ಒಂದಾದ ಮೇಲೊಂದು ದೊಡ್ಡ ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಿದ್ದಾರೆ. ದಕ್ಷಿಣದ ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ನಟಿಸಿದ ಬೆಡಗಿ ಇದೀಗ ‘ಮಿಷನ್‌ ಮಜ್ನೂ’ ಬಾಲಿವುಡ್‌ ಚಿತ್ರೀಕರಣದಲ್ಲಿದ್ದಾರೆ. ಇದೀಗ ಬಂದ ಸುದ್ದಿಯ ಪ್ರಕಾರ ಅವರು ತೆಲುಗು ಸ್ಟಾರ್‌ ರಾಮ್‌ ಚರಣ್‌ ತೇಜಾ ನಟನೆಯ ದುಬಾರಿ ಪ್ಯಾನ್‌ ಇಂಡಿಯಾ “3ಡಿ” ಸಿನಿಮಾದ ನಾಯಕಿಯಾಗಲಿದ್ದಾರಂತೆ. ಸೈನ್ಸ್-ಫಿಕ್ಷನ್ ಸಿನಿಮಾಗಳ ಜನಪ್ರಿಯ ನಿರ್ದೇಶಕ ಶಂಕರ್ ನಿರ್ದೇಶನದ ಚಿತ್ರವಿದು ಎನ್ನುವುದು ವಿಶೇಷ.


ಸದ್ಯ ರಶ್ಮಿಕಾ ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ. ತಮ್ಮ ಚಿತ್ರಕ್ಕೆ ಅವರೇ ನಾಯಕಿಯಾಗಲಿ ಎನ್ನುವುದು ರಾಮ್‌ ಚರಣ್‌ ಇರಾದೆ. ಹಾಗಾಗಿ ಚಿತ್ರತಂಡದಿಂದ ನಟಿಗೆ ಆಹ್ವಾನವೂ ಹೋಗಿದೆ. ಆದರೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾಗೆ ಹೊಸ ಚಿತ್ರಕ್ಕೆ ಡೇಟ್ಸ್ ಹೊಂದಿಸಿಕೊಳ್ಳುವುದು ಕಷ್ಟವಾಗಿದೆ. ಆದರೆ ರಾಮ್‌ ಚರಣ್‌ – ಶಂಕರ್‌ ಸಿನಿಮಾ ಕೈಬಿಡಲು ಅವರಿಗೂ ಇಷ್ಟವಿಲ್ಲ.

ಹಾಗಾಗಿ ಬಹುತೇಕ ಅವರೇ ಚಿತ್ರದ ನಾಯಕಿಯಾಗಬಹುದು. ಇನ್ನು ಸದ್ಯದಲ್ಲೇ ಅಲ್ಲು ಅರ್ಜುನ್ ಜೊತೆಗೆ ಅವರು ನಟಿಸಿರುವ ‘ಪುಷ್ಪ’ ತೆಲುಗು ಸಿನಿಮಾ ತೆರೆಗೆ ಬರುತ್ತಿದೆ. ಅಲ್ಲದೆ ಇಂದು ಅವರು ನಾಯಕಿಯಾಗಿರುವ ಕನ್ನಡ ಸಿನಿಮಾ ‘ಪೊಗರು’ ತೆರೆಕಂಡಿದ್ದು, ಇದರ ತೆಲುಗು ಅವತರಣಿಕೆಯೂ ಆಂಧ್ರದಲ್ಲಿ ತೆರೆಕಂಡಿದೆ.

error: Content is protected !!