ದೃಶ್ಯಂ ಸರಣಿಗೆ ರೆಡಿಯಾದ ವೆಂಕಿ! ಜೀತು ಜೋಸೆಫ್ ನಿರ್ದೇಶನದಲ್ಲೇ ಬರಲಿರುವ ಚಿತ್ರ

ಜೀತು ಜೋಸೆಫ್ ನಿರ್ದೇಶನದಲ್ಲಿ ಮೋಹನ್‌ಲಾಲ್ – ಮೀನಾ ನಟಿಸಿರುವ ‘ದೃಶ್ಯಂ2’ ಮೊನ್ನೆಯಷ್ಟೇ ಅಮೇಜಾನ್ ಪ್ರೈಂನಲ್ಲಿ ಪ್ರೀಮಿಯರ್ ಆಗಿದೆ. ವೀಕ್ಷಕರು ಮತ್ತು ವಿಶ್ಲೇಷಕರು ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ‘ದೃಶ್ಯಂ2’ ತೆಲುಗು ರೀಮೇಕ್ ಸೆಟ್ಟೇರುತ್ತಿದೆ. ಜೀತು ಜೋಸೆಫ್ ಅವರೇ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ವೆಂಕಟೇಶ್ ನಟಿಸುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಉಳಿದ ತಾರಾಬಳಗದ ಆಯ್ಕೆ ಜಾರಿಯಲ್ಲಿದೆ.

ನಿರ್ದೇಶಕ ಜೀತು ಜೋಸೆಫ್ ಇಂದು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ‘ದೃಶ್ಯಂ2’ ತೆಲುಗು ಅವತರಣಿಕೆಯನ್ನು ಘೋಷಿಸಿದ್ದಾರೆ. ನಟ ವೆಂಕಟೇಶ್ ಮತ್ತಿತರರೊಂದಿಗಿನ ಅವರ ಫೋಟೋ ಜೊತೆಗೆ ಈ ಸುದ್ದಿ ಹೊರ ಬಿದ್ದಿದೆ. ‘ದೃಶ್ಯಂ’ ಮೊದಲ ಸರಣಿಯ ತೆಲುಗು ಅವತರಣಿಕೆ 2014ರಲ್ಲಿ ತೆರೆಕಂಡಿತ್ತು. ಆ ಚಿತ್ರವನ್ನು ಸುಪ್ರಿಯಾ ನಿರ್ದೇಶಿಸಿದ್ದರು. ಅಲ್ಲಿ ವೆಂಕಟೇಶ್ ಜೊತೆ ಮೀನಾ, ನಾದಿಯಾ ನಟಿಸಿದ್ದರು.

ಅಮೇಜಾನ್‌ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗಿರುವ ‘ದೃಶ್ಯಂ2’ ಮಲಯಾಳಂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟ ಮೋಹನ್ ಲಾಲ್ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಯಶಸ್ಸಿಗೆ ಕಾರಣರಾದ ತಂತ್ರಜ್ಞರು ಹಾಗೂ ವೀಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ‘ದೃಶ್ಯಂ2’ ತೆಲುಗು ಅವತರಣಿಕೆ ಸೆಟ್ಟೇರುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ, ತಮಿಳು ಮತ್ತು ಹಿಂದಿಯಲ್ಲೂ ತಯಾರಾಗುವ ಸಾಧ್ಯತೆಗಳಿವೆ. ಕನ್ನಡ ‘ದೃಶ್ಯ’ದಲ್ಲಿ ರವಿಚಂದ್ರನ್ ನಟಿಸಿದ್ದರು. ಸರಣಿಯಲ್ಲೂ ಅವರೇ ಇರುತ್ತಾರೆಯೇ ಎಂದು ಕಾದುನೋಡಬೇಕು.

Related Posts

error: Content is protected !!