ಸೂಪರ್‌ಹಿಟ್ ‘ಕಿರಿಕ್ ಪಾರ್ಟಿ’ ಬೆಡಗಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‌ನ ಬೇಡಿಕೆಯ ನಟಿ. ದಕ್ಷಿಣದ ಚಿತ್ರಗಳಲ್ಲದೆ ಅವರೀಗ ಬಾಲಿವುಡ್‌ಗೂ ಹಾರಿದ್ದಾರೆ. ಇದೀಗ ಮಂಗಳೂರು ಮೂಲದ ಕೃತಿ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಅವರು ನಾಯಕಿಯಾಗಿ ನಟಿಸಿದ ಚೊಚ್ಚಲ ತೆಲುಗು ಸಿನಿಮಾ ‘ಉಪ್ಪೆನ’ ದೊಡ್ಡ ಯಶಸ್ಸು ಕಂಡಿದೆ. ಕೃತಿ ಅವರು ‘ಪಕ್ಕದ್ಮನೆ ಹುಡ್ಗಿ’ ಇಮೇಜ್‌ನ ಪಾತ್ರದಲ್ಲಿ ತೆಲುಗು ಜನರ ಮನಸೂರೆಗೊಂಡಿದ್ದಾರೆ. ಈ ಚಿತ್ರದ ಗೆಲುವಿನೊಂದಿಗೆ ಮತ್ತೆರೆಡು ತೆಲುಗು ಚಿತ್ರಗಳಿಗೆ ಸಹಿ ಹಾಕಿರುವ ಆಕೆಯ ಸಂಭಾವನೆಯೂ ಈಗ ದುಬಾರಿಯಾಗಿದೆ.
ಮುಂಬಯಿಯಲ್ಲಿ ಜನಿಸಿದ ಕೃತಿ ಮಾಡೆಲಿಂಗ್ ಮೂಲಕ ಗ್ಲಾಮರ್ ಜಗತ್ತಿಗೆ ಪರಿಚಯವಾದರು. ಆಕಸ್ಮಿಕ ಎನ್ನುವಂತೆ ‘ಉಪ್ಪೆನ’ ತೆಲುಗು ಸಿನಿಮಾ ಅವಕಾಶ ಒದಗಿ ಬಂದಿತು. ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ವೈಷ್ಣವ್ ತೇಜ್ ಈ ಚಿತ್ರದ ಹೀರೋ ಎನ್ನುವುದು ಅವರಿಗೆ ದೊಡ್ಡ ವರವಾಯ್ತು. ಮತ್ತೊಂದೆಡೆ ಈ ಚಿತ್ರದಲ್ಲಿ ಅವರ ತಂದೆ ಪಾತ್ರದಲ್ಲಿ ಖ್ಯಾತ ನಟ ವಿಜಯ್ ಸೇತುಪತಿ ನಟಿಸಿದ್ದಾರೆ. ಮೆಗಾ ಕುಟುಂಬದ ಉತ್ತಮ ಪ್ರೊಮೋಷನ್ ಕೂಡ ಚಿತ್ರದ ಯಶಸ್ಸಿಗೆ ನೆರವಾಯ್ತು.
ಕೋವಿಡ್ ಸಂಕಷ್ಟದ ನಂತರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡ ಮೊದಲ ಟಾಲಿವುಡ್ ಚಿತ್ರವಾಗಿ ‘ಉಪ್ಪೆನ’ ಗುರುತಿಸಿಕೊಂಡಿದೆ. ಮುಗ್ಧ, ಮುದ್ದುಮೊಗದ ಕೃತಿ ತೆಲುಗು ನಾಡಿನ ಸಿನಿಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೃತಿಗೆ ಈಗಿನ್ನೂ ಹದಿನೇಳರ ಹರೆಯ. ‘ಉಪ್ಪೆನ’ ನಂತರ ಅವರು ಎರಡು ತೆಲುಗು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ನಾನಿ ನಟನೆಯ ‘ಶ್ಯಾಂ ಸಿಂಘ ರಾಯ್’ ಮತ್ತು ಸುಧೀರ್ ಬಾಬು ಹೀರೋ ಆಗಿ ನಟಿಸುತ್ತಿರುವ ಮತ್ತೊಂದು ಚಿತ್ರಕ್ಕೆ ಅವರು ನಾಯಕಿ. ಥಿಯೇಟರ್‌ಗಳಲ್ಲಿ ಯಶಸ್ಸು ಕಂಡ ‘ಉಪ್ಪೆನ’ ಸದ್ಯದಲ್ಲೇ ಓಟಿಟಿಯಲ್ಲೂ ಪ್ರೀಮಿಯರ್ ಆಗಲಿದೆ.