ತಲೆದಂಡದ ಗುಂಗು, ಮಲೆನಾಡಿನ ಮೆರಗು
ಎಲ್ಲೆಡೆಹಸಿರು, ಬೆಟ್ಟ ಗುಡ್ಡ,ಅವುಗಳ ನಡುವೆ ಬೋರ್ಗೆರೆಯುವ ಜಲಪಾತ, ತಣ್ಣನೆಯ ವಾತಾವರಣ, ಮನಸ್ಸಿಗೆ ಹಿತ ನೀಡುವ ಹಿತವಾದ ಗಾಳಿ, ಅಲಲ್ಲಿ ಕಾಫಿತೋಟ, ಮಧುರವಾಗಿ ಕೇಳಿಸುವ ಪ್ರಾಣಿ -ಪಕ್ಷಿ ಸಂಕುಲದ ಸಪ್ಪಳ…ಅಬ್ಬಾ, ಕಾಫಿನಾಡು ಚಿಕ್ಕಮಗಳೂರು ಅಂದ್ರೇನೆ ಹಾಗೆ. ಅಲ್ಲಿದ್ದವರಿಗಿಂತ ಬಯಲು ನಾಡಿನ ಜನರಿಗೆ ಅದೊಂದು ಸ್ವರ್ಗದ ಸೀಮೆ. ಅದರಲ್ಲೂ ಮಳೆಗಾಲದ ಮಳೆಯೊಳಗಡೆ ಚಿಕ್ಕಮಗಳೂರಿಗೆ ಕಾಲಿಟ್ಟರೆ ಅದೊಂದು ರೋಮಾಂಚಕಾರಿ ಅನುಭವ.ಸದ್ಯಕ್ಕೀಗ ಚಿಕ್ಕಮಗಳೂರಿಗೆ ಹೋಗಿ ಅಂತಹ ಅನುಭವ ಕಂಡು ಬಂದಿದ್ದಾರೆ ನಟ ಸಂಚಾರಿ ವಿಜಯ್ !
ಸಂಚಾರಿಯವರ ಈ ಸಂಚಾರ ಯಾಕಾಗಿ? ಯಾವುದಾದ್ರೂ ಚಿತ್ರೀಕರಣವೇ, ಇಲ್ಲವೇ ಸುಮ್ನೆ ಕಣ್ಣೋಟದ ಪ್ರಯಾಣವೇ? ನಟ ವಿಜಯ್ ಅವರ ಪ್ರಕಾರ ಇವೆರಡೂ ಅಲ್ಲ. ಕೊರೋನಾ ಕಾಲದಲ್ಲಿಚಿತ್ರೀಕರಣ ಇಲ್ಲ, ಹೊರ ಊರುಗಳಿಗೂ ಹೋಗಿರಲಿಲ್ಲ ಎನ್ನುವುದು ನಿಜವಾಗಿದ್ದರೂ, ನಾನು ಚಿಕ್ಕಮಗಳೂರು ಹೋಗಿದ್ದು ಒಂದು ಖಾಸಗಿ ಕೆಲಸದ ಮೇಲೆ. ಹಾಗೆಯೇ ಸಮಯ ಇತ್ತು, ಅದನ್ನೇ ಬಳಸಿಕೊಂಡು ಚಿಕ್ಕಮಗಳೂರಿನಿಂದ ಬಾಳೆ ಹೊನ್ನುರು ಮಾರ್ಗವಾಗಿ ಶೃಂಗೇರಿಗೆ ಹೋಗಿ ಬಂದೆ.
ಅವರು ಏನೇ ಹೇಳಿದ್ರೂ ಅವರ ಈ ಜಾಲಿಮೂಡ್ ನ ಪ್ರವಾಸಕ್ಕಿದ್ದ ಪ್ರೇರಣೆ ‘ಕಿಯಾ ‘! ಉಳಿದಂತೆ ಅವರೀಗ ತಲೆ ದಂಡ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಮೇಲೊಬ್ಬ ಮಾಯಾವಿ, ಪುಕ್ಸಟೆ ಲೈಪು ರಿಲೀಸ್ ಗೆ ರೆಡಿ ಆಗಿವೆ. ಮತ್ತೆ ಮೂರು ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ.
ಕೊರೋನಾ ಭೀತಿ ದೂರವಾದರೆ ಅವು ಇಷ್ಟರಲ್ಲಿಯೇ ಶುರುವಾಗಲಿವೆ. ಬಹುತೇಕ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಆ ಸಿನಿಮಾಗಳಿಗೆಚಾಲನೆ ಸಿಗಬಹುದು ಎನ್ನುವ ಮಾತುಅವರದು. ಉಳಿದಂತೆ ಇಲ್ಲಿ ‘ ಕಿಯಾ’ ಬೇರಾರು ಅಲ್ಲ.ಅವರು ತೆಗೆದುಕೊಂಡಿರುವ ಹೊಸಕಾರು!