ಹಲವು ತಿರುವುಗಳ ರೂಮ್ ಬಾಯ್!

 

ಪ್ರತಿಭಾವಂತ ಹುಡುಗರ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್

ಇದು ದೀಪಾವಳಿ ಧಮಾಕ…

ಕನ್ನಡ ಚಿತ್ರರಂಗ ಮತ್ತೆ ಉತ್ಸಾಹದೊಂದಿಗೆ ತನ್ನ ಕಾರ್ಯಚಟುವಟಿಕೆಯಲ್ಲಿ ತೊಡಗಿದೆ. ಅದೇ ಉತ್ಸಾಹ ಮತ್ತು ಹುರುಪಿನೊಂದಿಗೆ ಚಿತ್ರಗಳು ಕೂಡ ಶುರುವಾಗುತ್ತಿವೆ. ಆ ಸಾಲಿಗೆ ಈಗ ‘ರೂಮ್ ಬಾಯ್’ ಚಿತ್ರ ಸೆಟ್ಟೇರುತ್ತಿದೆ. ಹೌದು ‘ರೂಮ್ ಬಾಯ್’ ಹೆಸರಲ್ಲೇ ಒಂದು ರೀತಿ ಮಜವಿದೆ. ಅಂತಹ ಮನರಂಜನೆಯ ಸಿನಿಮಾ ನಮನ ಎಂಬ ಉದ್ದೇಶದಿಂದ ಇಲ್ಲೊಂದು ಪ್ರತಿಭಾವಂತರ ತಂಡ ‘ರೂಮ್ ಬಾಯ್’ ಸಿನಿಮಾ ಕೈಗೆತ್ತಿಕೊಡಿದೆ. ದೀಪಾವಳಿ ಹಬ್ಬದಂದು ಚಿತ್ರತಂಡ ತನ್ನ ಫಸ್ಟ್ ಲುಕ್ ರಿಲೀಸ್ ಮಾಡಿದೆ.

ಲಿಖಿತ್ ಸೂರ್ಯ, ನಾಯಕ

ಸಿನಿಮಾದ ಶೀರ್ಷಿಕೆ ನೋಡಿದರೆ, ಇದು ಪಕ್ಕಾ ಪಡ್ಡೆ ಹುಡುಗರಿಗೆಂದೇ ಮಾಡುತ್ತಿರುವ ಸಿನಿಮಾ ಎನಿಸಿದರೂ, ಚಿತ್ರದಲ್ಲೊಂದು ವಿಶೇಷತೆ ಇದೆ. ಫೋರ್ಸ್ ಕೂಡ ಇದೆ.
ಅಂದಹಾಗೆ, ‘ರೂಮ್ ಬಾಯ್’ ಐ ಕ್ಯಾನ್ ಪ್ರೊಡಕ್ಷನ್ ಮೂಲಕ ಈ ಚಿತ್ರ ತಯಾರಾಗುತ್ತಿದೆ.
‘ರೂಮ್ ಬಾಯ್’ ಫಸ್ಟ್ ಲುಕ್ ನೋಡಿದವರಿಗೆ ಇದೊಂದು ಹೋಟೆಲ್ ವೊಂದರ ‘ರೂಮ್ ಬಾಯ್’ ಕಥೆ ಅನಿಸುತ್ತೆ. ಈ ಕಲರ್ ಫುಲ್ ಫಸ್ಟ್ ಲುಕ್ ಅನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಎಡಗೈಯಲ್ಲೊಂದು ವೈನ್ ತುಂಬಿದ ಗ್ಲಾಸ್ , ಬಲಗೈಯಲ್ಲೊಂದು ಕಬ್ಬಿಣದ ರಾಡು ಹಿಡಿದು ನಿಂತಿರುವ ಹೀರೋ ಕಾಣುತ್ತಾನೆ. ಆ ಕಬ್ಬಿಣದ ರಾಡನ್ನು ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಜಿನುಗುತ್ತಿರುವ ರಕ್ತದ ಹನಿಗಳು ಕಾಣುತ್ತವೆ. ಅಲ್ಲಿಗೆ ಅಲ್ಲೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎಂಬುದನ್ನು‌ ಅರಿಯಬಹುದು. ಕನ್ನಡದಲ್ಲಿ ಈಗಾಗಲೇ ಸಸ್ಪೆನ್ಸ್ ಥ್ರಿಲ್ಲರ್ ಕಥೆಗಳಿಗೇನೂ ಬರವಿಲ್ಲ. ಅದೇ ಹಾದಿಯಲ್ಲಿ ಸಾಗಲಿರುವ ಈ ಚಿತ್ರದಲ್ಲಿ ಹಲವಾರು ವಿಶೇಷತೆಗಳಿವೆ ಎಂಬುದು ಚಿತ್ರತಂಡದ ಹೇಳಿಕೆ.


ಈ ಚಿತ್ರಕ್ಕೆ ಲಿಖಿತ್ ಸೂರ್ಯ ಹೀರೋ. ಈ ಚಿತ್ರಕ್ಕೆ ರವಿ‌ ನಾಗಡದಿನ್ನಿ ನಿರ್ದೇಶಕರು.
ಲಿಖಿತ್ ಸೂರ್ಯ ಇಲ್ಲಿ ನಟನೆ ಜೊತೆಗೆ ಇದೇ ಮೊದಲ‌ ಸಲ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ತಮ್ಮ ಆಪ್ತ ಕೆಲ ಗೆಳೆಯರೂ ಕೂಡ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಲಿಖಿತ್ ಸೂರ್ಯ ಅವರಿಗೆ ಸಿನಿಮಾ ಹೊಸದಲ್ಲ. ಈ ಹಿಂದೆ ‘ಲೈಫು ಸೂಪರ್’ ಮತ್ತು ‘ಆಪರೇಷನ್ ನಕ್ಷತ್ರ’ ಚಿತ್ರ ಮಾಡಿದ್ದಾರೆ. ಇದರೊಂದಿಗೆ ತೆಲುಗಿಗೂ ಎಂಟ್ರಿಯಾಗಿರುವ ಲಿಖಿತ್ ಸೂರ್ಯ, ‘ರಾಮಾಪುರಂ’ ಹೆಸರಿನ ಚಿತ್ರದಲ್ಲೂ ಹೀರೋ ಆಗಿ ನಟಿಸಿದ್ದಾರೆ. ಸದ್ಯ ಎರಡನೇ ಹಂತದ ಚಿತ್ರೀಕರಣ ಮುಗಿದರೆ, ‘ರಾಮಾಪುರಂ’ ಪೂರ್ಣಗೊಳ್ಳಲಿದೆ. ಈಗ ಐ ಕ್ಯಾನ್ ಪ್ರೊಡಕ್ಷನ್ ಮೂಲಕ ‘ರೂಮ್‌ ಬಾಯ್’ ಮಾಡುತ್ತಿದ್ದಾರೆ.

ರವಿ ನಾಗಡದಿನ್ನಿ, ನಿರ್ದೇಶಕ

ಇನ್ನು ನಿರ್ದೇಶಕ ರವಿ ನಾಗಡದಿನ್ನಿ ಅವರಿಗೂ ಈ ‘ರೂಮ್ ಬಾಯ್’ ಮೊದಲ ಪ್ರಯತ್ನ. ಹಾಗಂತ ಇವರಿಗೆ ಸಿನಿಮಾ ರಂಗ ಹೊಸದಲ್ಲ. ನಿರ್ದೇಶಕನ ಕನಸು ಕಟ್ಟಿಕೊಂಡಿದ್ದ ರವಿ ನಾಗಡದಿನ್ನಿ ಸಾಫ್ಟ್ ವೇರ್ ಕೆಲಸವನ್ನೇ ಬಿಟ್ಟು ಈ ಕಲರ್ ಫುಲ್ ಲೋಕಕ್ಕೆ ಎಂಟ್ರಿಯಾದವರು.
ಹೌದು, ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ರವಿ, ಸಿನಿಮಾ ರಂಗದಲ್ಲಿ ಸಾಧಿಸಕೆಂಬ ಆಸೆ ಹುಟ್ಟಿದ್ದೇ ತಡ, ಕೆಲಸ ಬಿಟ್ಟು 2011 ರಲ್ಲಿ ಗಾಂಧಿನಗರ ಕಡೆ ಮುಖ ಮಾಡಿದವರು.
ಬಿಸಿಲೂರು ಎಂದೇ ಕರೆಸಿಕೊಳ್ಳುವ ರಾಯಚೂರು ಜಿಲ್ಲೆಯ ನಾಗಡದಿನ್ನಿ ಎಂಬ ಸಣ್ಣ ಹಳ್ಳಿಯಲ್ಲಿದ್ದ ರವಿ
ಸಿನಿಮಾ ಪ್ರೀತಿ ಬೆಳೆಸಿಕೊಂಡು ಇತ್ತ ಮುಖ ಮಾಡಿದ್ದಾರೆ.
ಈ ಸಿನಿಮಾಗೂ ಮುನ್ನ ರವಿ ನಾಗಡದಿನ್ನಿ ಒಂದಿಷ್ಟು ಕಿರು ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ನಂತರದ‌ ದಿನಗಳಲ್ಲಿ ಸಂಭಾಷಣೆಗಾರ ಪ್ರಶಾಂತ ರಾಜಪ್ಪನವರ ಪರಿಚಯವಾಗಿ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿಂದ ‘ತಿರುಪತಿ ಎಕ್ಸಪ್ರೆಸ್ಸ್ ‘, ‘ಲೈಫು ಸೂಪರ್’ ಸಿನಿಮಾಗಳಿಗೆ ಇವರು‌ ಮಾತುಗಳನ್ನು ಪೋಣಿಸಿದ್ದಾರೆ.
‘ವೀಲ್ ಚೇರ್ ರೋಮಿಯೋ’, ‘ಮೃಗಶಿರ’ ಸೇರಿದಂತೆ ಕೆಲವು ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದಾರೆ.
ಅವರ ಕೆಲಸ‌ ನೋಡಿದ ಅನೇಕ ಸಿನಿಮಾ ಗೆಳೆಯರು ಬೆನ್ನೆಲಬಾಗಿ ನಿಂತಿದ್ದಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಅವರು ಸಾಫ್ಟ್ ವೇರ್ ಕೆಲಸ‌ ಬಿಟ್ಟು ಸಿನಿಮಾ ಕಡೆ ವಾಲಿದಾಗ ಮನೆಯಲ್ಲಿ ಬೆಂಬಲಕ್ಕೆ ನಿಂತವರು ಸಹೋದರಿ ಅನ್ನಪೂರ್ಣ ಹಾಗು ಬಾವ ಬಲಬೀಮಾ. ಇವರೊಂದಿಗೆ ಗೆಳೆಯರಾದ ಸಂತೋಷ ಹೆಬ್ಬಾಳ ,ಬಂದೆ ನವಾಜ್ ಸಾಥ್‌ ಕೊಟ್ಟಿದ್ದನ್ನು ಸ್ಮರಿಸುತ್ತಾರೆ ನಿರ್ದೇಶಕ ರವಿ‌ ನಾಗಡದಿನ್ನಿ.

ಮೊದಲ ಪ್ರಯತ್ನ
ರವಿ ನಾಗಡದಿನ್ನಿ ಈಗ ತಮ್ಮ ನಿರ್ದೇಶನದ ಮೊದಲ ಸಿನಿಮಾ ‘ರೂಮ್ ಬಾಯ್’ ನಿರ್ದೇಶನಕ್ಕೆ ಅಣಿಯಾಗಿದ್ದಾರೆ.
ಇನ್ನು ಅವರ ಈ ಪ್ರಯತ್ನಕ್ಕೆ ನಾಯಕ ಲಿಖಿತ್ ಸೂರ್ಯ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ನಾಯಕನ ಆಯ್ಕೆ ಮಾತ್ರ ಆಗಿದ್ದು, ಇಷ್ಟರಲ್ಲೇ ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯಲಿದೆ.
ಕಥೆ ಲಿಖಿತ್ ಸೂರ್ಯ ಬರೆದರೆ, ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ರವಿ ನಾಗಡದಿನ್ನಿ ಹೊತ್ತಿದ್ದಾರೆ. ಚಿತ್ರಕಥೆಗೆ ಇವರಿಬ್ಬರ ಶ್ರಮವೂ ಇದು.

ಇದು ಸೈಕಲಾಜಿಕಲ್ ಥ್ರಿಲ್ಲರ್

ಕಥೆ‌ ಬಗ್ಗೆ ಹೇಳುವ ನಿರ್ದೇಶಕರು, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿದೆ. ಈಗಿನ ಟ್ರೆಂಡ್ ಜೊತೆಗೆ ವಿಭಿನ್ನ ಸಿನಿಮಾ ಕಟ್ಟಿ ಕೊಡುವ ಪ್ರಯತ್ನದಲ್ಲಿದ್ದಾರಂತೆ ನಿರ್ದೇಶಕರು.
ಅಂದಹಾಗೆ, ದೀಪಾವಳಿ ಹಬ್ಬದ ದಿನದಂದು‌ ಗೋಧೂಳಿ ಸಮಯದಂದು ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ಡಿಸೆಂಬರ್ ತಿಂಗಳಿಂದ ಚಿತ್ರದ ಶೂಟಿಂಗ್ ಶರುವಾಗಲಿದೆ . ಸುಮಾರು 30 ದಿನಗಳ ಕಾಲ ಬೆಂಗಳೂರಲ್ಲಿ ಚಿತ್ರೀಕರಣ ನಡೆಯಲಿದೆ .


ಈ ಚಿತ್ರಕ್ಕೆ ರೋಣದ ಬಕ್ಕೇಶ್ ಸಂಗೀತ ನೀಡಿದರೆ, ಅರುಣ್ ಎಎನ್ ಆರ್ ಅವರ ಛಾಯಾಗ್ರಹಣವಿದೆ. ಕಿರಣ್ ಕುಮಾರ್ ಅವರ ಸಂಕಲನವಿದೆ. ಸದ್ಯ ‘ರೂಮ್ ಬಾಯ್ ‘ ಫಸ್ಟ್ ಲುಕ್ ಗೆ ಮೆಚ್ಚುಗೆ ಸಿಗುತ್ತಿದೆ.

Related Posts

error: Content is protected !!