ಆಕ್ಟ್ 1978 ಅನ್ನೋದು ಅನುಭವದ ಕತೆ – ಮಂಸೋರೆ

ಐಟಂ ಸಾಂಗ್ ಇಲ್ಲ‌ ಅನ್ನೋದನ್ನ ಬಿಟ್ಟರೆ ಇದು ಪಕ್ಕಾ ಕಮರ್ಷಿಯಲ್ ಆ್ಯಂಡ್ ಮಾಸ್ ಸಿನಿಮಾ ಅಂದ್ರು ಅವಾರ್ಡ್ಸ್ ವಿನ್ನರ್ ಡೈರೆಕ್ಟರ್

ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳ ಮೂಲಕ ಗಮನ‌ಸೆಳೆದ ನಿರ್ದೇಶಕರ ಪೈಕಿ ಮಂಸೋರೆ ಕೂಡ ಒಬ್ಬರು. ಹರಿವು, ನಾತಿ ಚೆರಾಮಿ’ ಚಿತ್ರಗಳ ನಂತರ ಈಗ ವಿಭಿನ್ನ ಶೀರ್ಷಿಕೆ ಹಾಗೂ ವಿಶಿಷ್ಟ ಕಥಾ ಹಂದರದ ‘ಆಕ್ಟ್ 1978 ‘ ಚಿತ್ರದೊಂದಿಗೆ ಸುದ್ದಿಯಲ್ಲಿದ್ದಾರೆ. ಹಲವು ಕಾರಣಕ್ಕೆ ಈ ಚಿತ್ರ ಕುತೂಹಲ‌ ಮೂಡಿಸಿದೆ. ವಿಶೇಷವಾಗಿ ಈ ಚಿತ್ರ ಲಾಕ್ ಡೌನ್ ನಂತರ ತೆರೆ ಕಾಣುತ್ತಿರುವ ಮೊದಲ‌ಚಿತ್ರ ಎನ್ನುವುದು ದೊಡ್ಡ ಕ್ಯೂರಿಯಾಸಿಟಿ ಮೂಡಿಸಿದೆ. ನವೆಂಬರ್ 20 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಈ ಚಿತ್ರದ ವಿಶೇಷತೆ ಕುರಿತು ಅವರೊಂದಿಗೆ ‘ಸಿನಿ ಲಹರಿ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

– ಲಾಕ್ ಡೌನ್ ನಂತರ ತೆರೆ ಕಾಣುತ್ತಿರುವ ಮೊದಲ ಸಿನಿಮಾ ನಿಮ್ದು. ಇದೊಂಥರ ಸಾಹಸ. ಹಾಗೆಯೇ ಸವಾಲು. ಇದು ಯಾಕೆ, ಹೇಗೆ, ಅಷ್ಟು ಕಾನ್ಪಿಡೆನ್ಸ್ ಏನು ?

ಕಾನ್ಫಿಡೆನ್ಸ್ ಅಂದ್ರೆ ಸಿನಿಮಾ‌. ಅದರಾಚೆ ಸಾಹಸ, ಸವಾಲು ಎನ್ನುವುದಕ್ಕಿಂತ, ಇದೇ ನಮಗೆ ಸರಿಯಾದ ಸಮಯ. ಸೋಲೋ, ಗೆಲ್ಲವೋ ಇಂತಹ ಟೈಮ್ ಮತ್ತೆ ಸಿಗಲ್ಲ ಎನ್ನುವುದು ನನ್ನ ಭಾವನೆ. ಯಾಕಂದ್ರೆ ಹತ್ತಾರು ಸಿನಿಮಾಗಳ ನಡುವೆ ಬಂದು ಕಳೆದು ಹೋಗುವುದಕ್ಕಿಂತ ವಿಶಾಲವಾದ ಈ ಸಂದರ್ಭದಲ್ಲಿ ಬಂದು ಜನರನ್ನು ತಲುಪಲು ಪ್ರಮಾಣಿಕವಾಗಿ ಪ್ರಯತ್ನ ಮಾಡೋಣ ಎನ್ನುವುದು ನಮ್ಮ ಲೆಕ್ಕಚಾರ. ಗೊತ್ತಿಲ್ಲ, ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೋ ಅಂತ‌. ಆದ್ರೆ ಇಲ್ಲಿ ತನಕ ಸಿಕ್ಕಿರುವ ರೆಸ್ಪಾನ್ಸ್ ನೋಡಿದ್ರೆ, ಪಾಸಿಟಿವ್ ವೈಬ್ರೇಷನ್ ಅಂತೂ ಇದ್ದೇ ಇದೆ.

ಆಕ್ಟ್ 1978 ಹೆಸರಲ್ಲಿ ಏನನ್ನು ಹೇಳಲು ಹೊರಟ್ಟಿದ್ದೀರಿ, ಇದು ಯಾರ ಮತ್ತು ಯಾವ ಕಾನೂನಿನ ಪರವಾದ ಸಿನಿಮಾ?

ಹೆಸರೇ ಹೇಳುವಂತೆ ಇದೊಂದು ಕಾನೂನಿನ ಸುತ್ತಲ ಕತೆ ಎನ್ನುವುದು ಸತ್ಯ, ಆದರೆ ಅದೇ ಚಿತ್ರದ ಪ್ರಧಾನ‌ಕತೆ ಅಲ್ಲ. ಒಂದು ಕಾನೂನಿನ ಸುತ್ತ ಬೇರೆಯದೇ ಆದ ಅನೇಕ ಸಂಗತಿಗಳಿವೆ. ಅವೆಲ್ಲವೂ ಹೊಸತಾದ ಅಂಶಗಳು. ಒಂದಂತೂ ಸತ್ಯ, ಇವೆಲ್ಲ ಜನರ ಮನಸ್ಸಿಗೆ ಹತ್ತಿರವಾದ ವಿಷಯ. ಒಂದಲ್ಲೊಂದು ರೀತಿಯಲ್ಲಿ ಸಾಮಾನ್ಯ ಜನರು ಅಧಿಕಾರಿ‌ಶಾಹಿ ವ್ಯವಸ್ಥೆಯಲ್ಲಿ ನಲುಗಿರುತ್ತಾರೆ. ಅವರಿಗೆ ಇದು ಬಹುಬೇಗ ಕನೆಕ್ಟ್ ಆಗುತ್ತದೆ ಎನ್ನುವ ನಂಬಿಕೆ ನಮ್ಮದು.

ಈ ಕತೆಗೆ ಸ್ಪೂರ್ತಿ ಏನು? ಇದನ್ನೇ ಸಿನಿಮಾ ಮಾಡ್ಬೇಕು ಅಂತೆನಿಸಿದ್ದು ಯಾಕೆ?

ಒಂದೇ ಮಾತಿನಲ್ಲಿ ಹೇಳುವುದಾದರೆ ಅಧಿಕಾರಿ ಶಾಹಿಯೇ ಈ ಕತೆಗೆ ಸ್ಪೂರ್ತಿ. ಈ ದೇಶದಲ್ಲಿ ಯಾರೆಲ್ಲ, ಹೇಗೆಲ್ಲ ಬದಲಾದರೂ ಅಧಿಕಾರಿ ಶಾಹಿ ಮಾತ್ರ ಬದಲಾಗದು. ಅವರೆಲ್ಲ ಜನರಿಗೆ ತಾವು ಸೇವಕರು ಎನ್ನುವುದಕ್ಕಿಂತ ಜನರೇ ತಮಗೆ ಸೇವಕರೆಂ ದುಕೊಂಡಿದ್ದಾರೆ. ಹೀಗಾಗಿ ಸಾಮಾನ್ಯ ಜನರು ಒಂದಲ್ಲೊಂದು ರೀತಿಯಲ್ಲಿ ಹಲವಾರು ವರ್ಷಗಳಿಂದ ಅಧಿಕಾರಿ ಶಾಹಿ ದೌರ್ಜನ್ಯದಡಿ ನಲುಗಿದವರೆ‌ . ಇಂತಹದೇ ಒಂದು ಅನುಭವ ನನಗೂ ಆಯಿತು. ತಂದೆಯವರ ಪೆನ್ಸೆಷನ್ ಗೆ ಅಂತ ಓಡಾಡುವಾಗ ಸಾಕಷ್ಟು ನೋವಿನ ಅನುಭವ ಆಯ್ತು‌. ನನ್ನಂತಹ ವಿದ್ಯಾವಂತ ಯುವಕನ ಸ್ಥಿತಿಯೇ ಹೇಗಾದರೆ, ಏನು ಅರಿಯದ ಸಾಮಾನ್ಯರ ಜನರ ಗತಿಯೇನು ಅಂತ ಯೋಚಿಸುತ್ತಿದ್ದೆ. ಆಗ ಹುಟ್ಟಿದ ಕತೆ ಇದು‌.

ಅನುಭವದ ಕತೆಗಳು ಕೆಲವೊಮ್ಮೆ ಡಾಕ್ಯುಮೆಂಟರಿ ರೂಪದಲ್ಲೇ ತೆರೆಗ ಬಂದು ಬಿಡುವ ಸಾಧ್ಯತೆಗಳೇ ಹೆಚ್ಚು. ಅದನ್ನು ಇದು ಮೀರಿ ರಂಜಿಸುವುದು ಹೇಗೆ?

ಹಾಗೆ ಆಗೋದಿಕ್ಕೆ ಇದನ್ನ ಬಿಟ್ಟಿಲ್ಲ. ಇದರ ಚಿತ್ರಕತೆ ಶೈಲಿಯೇ ವಿಭಿನ್ನ. ಅನೇಕ ಸಿನಿಮ್ಯಾಟಿಕ್ ರೂಪಗಳನ್ನು ಇಲ್ಲಿ ಅಳವಡಿಸಿಕೊಂಡಿದ್ದೇವೆ. ಥ್ರಿಲ್ಲರ್ ಶೈಲಿಯಾಗಿರ ಬಹುದು,ಪಾತ್ರಗಳನ್ನು ತಂದ ಬಗೆಯಾಗಲಿ, ಸಂಭಾಷಣೆಯಾಗಲಿ, ಎಲ್ಲವನ್ನು ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾದ ರೂಪದಲ್ಲೇ ತೆರೆಗೆ ತಂದಿದ್ದೇವೆ. ಅದೊಂದೇ ಕಾರಣಕ್ಕೆ ಇದೊಂದು ಪಕ್ಕಾ ಮಾಸ್ ಸಿನಿಮಾವೂ ಹೌದು. ಹಾಗೆಯೇ ಇದೊಂದು  ಹೊಸ್ಟೇಜ್ ಥ್ರಿಲರ್ ಕತೆ.

ಪೋಸ್ಟರ್ ಮೂಲಕ ಕುತೂಹಲ‌ಮೂಡಿದ್ದು ಇದೊಂದು ಮಹಿಳಾ ಪ್ರಧಾನ ಸಿನಿಮಾವೇ ಎನ್ನುವ ಬಗ್ಗೆ, ಇದು ಹೇಗೆ?

ಇಲ್ಲ, ಇದು ಮಹಿಳಾ ಪ್ರಧಾನ ಸಿನಿಮಾ ಅಲ್ಲ. ಬದಲಿಗೆ ಮಹಿಳಾ ಕೇಂದ್ರಿತ ಸಿನಿಮಾ. ಸಾಮಾನ್ಯವಾಗಿ ಮಾಲಾಶ್ರೀ‌ಸಿನಿಮಾಗಳು, ತೆಲುಗಿನಲ್ಲಿ‌ವಿಜಯ ಶಾಂತಿ ಅಭಿನಯದ ಸಿನಿಮಾಗಳು ಹೇಗೆ ಹೆಣ್ಣಿನ ರೂಪದ ಗಂಡು ಸಿನಿಮಾಗಳಾಗಿ ಗಮನ ಸೆಳೆಯುತ್ತವೆಯೋ, ಹಾಗೆಯೇ ಇದು ಕೂಡ ಮಹಿಳಾ ಕೇಂದ್ರಿತ ಸಿನಿಮಾ‌.‌ನಟಿ ಯಜ್ಞಾ ಶೆಟ್ಟಿ ಇದರ ಕೇಂದ್ರ ಬಿಂದು‌. ಬಹುತೇಕ ಕತೆಗಳು ಹೀರೋ ಮೂಲಕ ತೆರೆದುಕೊಳ್ಳುವುದು ನಿಮಗೂ ಗೊತ್ತು. ನಾವ್ಯಾಕೆ ಒಬ್ಬ ಮಹಿಳೆಯ ಮೂಲಕ ಹೇಳಬಾರದು ಅಂತ ಯೋಚಿಸಿ, ಹಾಗೆ ಮಾಡಿದೆವು. ಅದರಲ್ಲೂ ಇನ್ನೊಂಚೂರು ವಿಶೇಷ ಇರಲಿ, ಅಂತ ಒಬ್ಬ ತುಂಬು ಗರ್ಭಿಣಿ ರೂಪ ತೊಡಿಸಿದ್ದೇವು. ಅದೇ ರೀತಿ ಸಿನಿಮಾ ಕೂಡ ತುಂಬು ಗರ್ಭಿಣಿ ಯ ಹಾಗೆ ಎಲ್ಲಾ ವಿಶೇಷತೆ ತುಂಬಿಕೊಂಡು ಆಕರ್ಷಣೆ ಮೂಡಿಸುತ್ತದೆ‌.

ಪಾತ್ರಗಳ ವಿಚಾರದಲ್ಲಿ ಇದೊಂದು ದೊಡ್ಡ ತಾರಾಗಣ ಇರುವ ಸಿನಿಮಾ.‌ಅಷ್ಟೂ ಪಾತ್ರಗಳ ಪ್ರಾಧಾನ್ಯತೆ ಹೇಗೆ?

ನನ್ನ ಹಿಂದಿನ ಸಿನಿಮಾ ನೋಡಿದವರಿಗೆ ಪಾತ್ರಗಳ ಸೃಷ್ಟಿಯ ವಿಚಾರದಲ್ಲಿ ನಾನು ತೆಗೆದುಕೊಳ್ಳುವ ಎಚ್ಚರ ಗೊತ್ತೇ ಇರುತ್ತೆ. ಚಿಕ್ಕದೊಂದು ಪಾತ್ರವೂ ಇಲ್ಲಿ ಅನವಶ್ಯಕ ಎನಿಸುವುದಿಲ್ಲ. ಪ್ರತಿ ಪಾತ್ರಕ್ಕೂ‌ ಅದರದ್ದೇಯಾದ ಪ್ರಾಮುಖ್ಯತೆ ಇರುತ್ತದೆ. ಆ ಕಾರಣಕ್ಕೂ ಇದೊಂದು ವಿಶೇಷವಾದ ಸಿನಿಮಾ. ಚಿತ್ರದ ನಾಯಕಿ ಯಜ್ಞಾ‌ಶೆಟ್ಟಿ ಅವರ ಪಾತ್ರಕ್ಕಿರುವ ಪ್ರಾಮುಖ್ಯತೆ ಸುರೇಶ್ ಸರ್, ವಿಜಯ್ ಸರ್, ಮೊದಲ್ಗೊಂಡು ಉಳಿದವರ ಪಾತ್ರಕ್ಕೂ ಇದೆ‌ . ಅದು ಈ ಸಿನಿಮಾ‌ದ ಸ್ಪೆಷಲ್. ಹಾಗೆಯೇ ಹಾಸ್ಟೆಜ್ ಥ್ರಿಲ್ಲರ್ ಇದರ ಇನ್ನೊಂದು ವಿಶೇಷ. ನಿಷ್ಕರ್ಷ ಸಿನಿಮಾದ ಶೈಲಿಯಲ್ಲಿ ಇದರ ಕಥಾ ಹಂದರವೂ ಇದೆ.ಆದರೆ ಇದು ವಿಭಿನ್ನ.‌ಅದು ಹೇಗೆ ಅನ್ನೋದಿಕ್ಕೆ ಸಿನಿಮಾ ನೋಡಬೇಕು.

ಇದೊಂದು ಪಕ್ಕಾ ಮಾಸ್ ಅಥವಾ ಕಮರ್ಷಿಯಲ್ ಸಿನಿಮಾ ಹೇಗೆ?

ಮೊದಲಿಗೆ ಅದಕ್ಕೆ ಪೂರಕವಾಗುವುದು ಕತೆ. ಇದೊಂದು ಥ್ರಿಲ್ಲರ್ ಸಿನಿಮಾ. ತುಂಬಾ ಅಪರೂಪಕ್ಕೆ ಇಂತಹ ಕತೆ ಕಾಣಲು ಸಾಧ್ಯ. ಜತೆಗೆ ಚಿತ್ರಕತೆ. ನನ್ನ ಹಿಂದಿನ ಸಿನಿಮಾಗಳಿಗಿಂತ ತುಂಬಾ ವಿಭಿನ್ನವಾದ ಶೈಲಿಯಲ್ಲಿ ಇದೆ ಇದರ ಚಿತ್ರಕತೆ. ವಾಸ್ತದ ಜತೆಗೆ ಸಿನಿಮ್ಯಾಟಿಕ್ ತುಂಬಾ ಇದೆ. ಐಟಂ ಸಾಂಗ್ ಇಲ್ಲ ಎನ್ನುವುದನ್ನು ಬಿಟ್ಟರೆ, ಅನೇಕ ಮಾಸ್ ಎಲಿಮೆಂಟ್ಸ್ ಚಿತ್ರದಲ್ಲಿವೆ.

Related Posts

error: Content is protected !!