ಅಂಬೇಡ್ಕರ್ ಎನ್ನುವ ಹೆಸರು ಟಿವಿ ಚಾನೆಲ್ ಗಳಿಗೆ ಬರೀ ಟಿಆರ್ ಪಿ ಸರುಕಾ?

ಒಂದು ಕಾಲದಲ್ಲಿ ಅಂಬೇಡ್ಕರ್ ಅವರನ್ನು ವಿರೋಧಿಸಿದ ಮನಸ್ಸು ಗಳೇ ಇವತ್ತು ಅವರನ್ನು ಕೊಂಡಾಡುತ್ತಿವೆ‌ . ಮತ್ತೊಂದಿಷ್ಟು ಮನಸ್ಸು ಗಳು ಅವರ ಹೆಸರನ್ನು ಟಿಆರ್ ಪಿ ಸರಕನ್ನಾಗಿ ಮಾಡಿಕೊಂಡಿವೆ. ಅವರ ಉದ್ದೇಶ ನಿಜಕ್ಕೂ ಅದಲ್ಲ ಎನ್ನುವುದಾದರೆ, ಅಂಬೇಡ್ಕರ್ ಹೆಸರಲ್ಲಿ ದಲಿತ ಸಮಯದಾಯಕ್ಕೆ ಮಹತ್ತರವಾದ ಒಂದು ಕೊಡುಗೆ ಯಾಕೆ ನೀಡಬಾರದು? ಕೊರೋನಾ‌ ನೆರವಿಗೆ 5 ಕೋಟಿ ನೀಡುವ ‘ಜೀ ‘ ಕನ್ನಡ, ರಾಜ್ಯದ ದಲಿತ ಸಮಯದಾಯಕ್ಕೆ ನೆರವು ಯಾಕೆ ನೀಡಿ, ಹೊಸ ದಾಖಲೆ ಯಾಕೆ ಮಾಡಬಾರದು?


ಕನ್ನಡ‌‌ ಕಿರುತೆರೆ ಮಟ್ಟಿಗೆ ಇತ್ತೀಚೆಗೆ ಹಲವು ಕೌತುಕಗಳು ಘಟಿಸಿವೆ. ವಿಶೇಷವಾಗಿ ‘ಜೀ ಕನ್ನಡ ‘ ವಾಹಿನಿಯ ‘ ಮಹಾನಾಯಕ’ ಧಾರಾವಾಹಿ ಮನೆ ಮಾತಾಗಿದ್ದು ಕನ್ನಡ ಕಿರುತೆರೆಯ ಮಟ್ಟಿಗೆ ಸಂಚಲನದ ಸುದ್ದಿ. ಇದರೊಂದಿಗೆ ‘ಜೀ ‘ಕನ್ನಡ ಹೊಸ ವೀಕ್ಷಕ ವರ್ಗವನ್ನೇ ತನ್ನ ಬುಟ್ಟಿಗೆ ಹಾಕಿಕೊಂಡಿದೆ.‌ ಒಂದೇ ಒಂದು ಘಟನೆಯ ಮೂಲಕ ರಾಜ್ಯದ ದಲಿತ ಸಮುದಾಯ ‘ಮಹಾನಾಯಕ ‘ಧಾರಾವಾಹಿ ತನ್ನದೇ ಕಾರ್ಯಕ್ರಮ‌ ಅನ್ನುಷ್ಟರ ಮಟ್ಟಿಗೆ ಅಪ್ಪಿ, ಒಪ್ಪಿ ,ಸ್ವೀಕರಿಸಿ ಮನೆ ಮಾತಾಗಿಸಿದೆ. ಇದಕ್ಕೆ ಪ್ರತಿಯಾಗಿ’ ಜೀ‌ ‘ ಕನ್ನಡ ಆ‌ ಸಮುದಾಯಕ್ಕೆ ಕೊಟ್ಟಿದ್ದೇನು ಎನ್ನುವ ಪ್ರಶ್ನೆ‌ ಸಹಜವಾಗಿಯೇ ಈಗ ಹುಟ್ಟಿಕೊಂಡಿದೆ.

ಇದು ಯಾಕೆ, ಹೇಗೆ ಎನ್ನುವ ಮುಂಚೆ’ ಜೀ ಕನ್ನಡದ ಹಿನ್ನೆಲೆ ಏನು ಅನ್ನೋದು ಒಂದಷ್ಟು ದಲಿತ ಸಮುದಾ ಯದ ಜನರಿಗೆ ತಿಳಿಯುವುದು ಒಳ್ಳೆಯದು. ‘ಜೀ’ ಕನ್ನಡ ಸದ್ಯಕ್ಕೆ ಕನ್ನಡ ಕಿರುತೆರೆಯ ಒಂಬರ್ ಒನ್ ಚಾನೆಲ್. ಅದರಲ್ಲೂ ಇತ್ತೀಚಿನ ಕೆಲ ವರ್ಷಗಳ ಈಚೆಗೆ ಕನ್ನಡ ಕಿರುತೆರೆ ವೀಕ್ಷಕರ ಮುಂದೆ ಅದು ತಂದ ಕೆಲವು ರಿಯಾಲಿಟಿ ಶೋ‌ ಗಳು ಭಾರೀ ಜನ ಮೆಚ್ಚುಗೆ ಮೂಲಕ ಲಾಭದಾಯಕ ಕಾರ್ಯಕ್ರಮ‌ ಆಗಿವೆ.

ಈಚೆಗೆ ಅದರ ಧಾರಾವಾಹಿಗಳೂ ಅಷ್ಟೇ ಜನಪ್ರಿಯತೆ ಪಡೆದಿರುವುದು ಕೂಡ ಗೊತ್ತಿರುವ ವಿಚಾರ. ಅದರ ನಡುವೆಯೇ ಮಹಾನಾಯಕ ಧಾರಾವಾಹಿಯೂ ಕೂಡ ಅದರ ಯಶಸ್ವಿ ಧಾರಾವಾಹಿಗಳಲ್ಲಿ ಒಂದಾಗಿದ್ದು, ವಿಶೇಷ. ಅದಕ್ಕೆ ಕಾರಣ ಮಹಾ ನಾಯಕ ಅಂಬೇಡ್ಕರ್ ಅವರ ಮೇಲೆ ದಲಿತ ಸಮುದಾಯಕ್ಕಿದ್ದ ಅಭಿಮಾನ.

ಕನ್ನಡದ ಮಹಾನಾಯಕ ಧಾರಾವಾಹಿಯ ಮೂಲ ಹಿಂದಿ.‌ ಅಂಬೇಡ್ಕರ್ ಮೇಲಿನ ಅಭಿಮಾನಕ್ಕೆ ಉಜ್ವಲ್ ಸುಶೀಲ್ ಕುಮಾರ್ ಶಿಂಧೆ ಹಾಗೂ ಸ್ಮೃತಿ ಸುಶೀಲ್ ಕುಮಾರ್ ಶಿಂಧೆ ನೇತ್ವತ್ವದ ಸೊಬೋ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಮಹಾ ನಾಯಕ ಧಾರಾವಾಹಿ ಯನ್ನು ಹಿಂದಿಯ ‘ಜೀ’ ಟಿವಿಗೆ ನಿರ್ಮಾಣ ಮಾಡಿತ್ತು.

ಮಹಾರಾಷ್ಟ್ರವು ಮೊದಲೇ ಅಂಬೇಡ್ಕರ್ ಹುಟ್ಟಿದ ನೆಲ. ಇನ್ನು ಅಂಬೇಡ್ಕರ್ ಅವರ ಬದುಕು ಕಿರುತೆರೆ ಯಲ್ಲಿ ಬರುತ್ತದೆ ಅಂದರೆ, ನೋಡದೆ ಇರುತ್ತಾ? ನಿರೀಕ್ಷೆ ಯಂತೆ ಕಿರುತೆರೆಯಲ್ಲಿ ದೊಡ್ಡ ಬೆಂಬಲ ಸಿಕ್ಕಿತು. ಒಂದೆಡೆ ನಿರ್ಮಾಣ ಸಂಸ್ಥೆ , ಮತ್ತೊಂದೆಡೆ ಜೀ ಟಿವಿ ಇಬ್ಬರು ಅದ್ಬುತ ಲಾಭ ಪಡೆದರು.‌ಅದರ ರುಚಿ ಕಂಡ ‘ಜೀ ‘ಕನ್ನಡ ಕೂಡ ಮಹಾ ನಾಯಕ‌ ಧಾರಾವಾಹಿಯನ್ನು ಕನ್ನಡಕ್ಕೆ ತಂತು. ಅದಕ್ಕೆ ನೆಪವಾಗಿದ್ದು ಲಾಕ್ ಡೌನ್ .

ಕನ್ನಡಕ್ಕೆ ಬಂದ ಹಲವು ಧಾರಾವಾಹಿಗಳಿಗೆ ಲಾಕ್ ಡೌನ್ ಒಂದು ನೆಪವಾಯಿತು. ಮಹಾ‌ನಾಯಕ ಧಾರಾವಾಹಿ ಕನ್ನಡಕ್ಕೆ ಬಂದಿದ್ದು ಕೂಡ ಹಾಗೆಯೇ. ಅಂಬೇಡ್ಕರ್ ಅವರ ಮೇಲಿನ ದೊಡ್ಡ ಅಭಿಮಾನಕ್ಕಾಗಲಿ, ರಾಜ್ಯದ ದಲಿತ ಸಮುದಾಯಕ್ಕೆ ಅಂಬೇಡ್ಕರ್ ಅವರನ್ನ ಪರಿಚಯಿಸಬೇಕೆನ್ನುವ ಮಹತ್ವಾಕಾಂಕ್ಷೆಯಿಂದಾಗಲಿ ಅಲ್ಲ. ಅದೊಂದು ಟಿಆರ್ ಪಿ ಧಾರಾವಾಹಿ. ಅದು ಕನ್ನಡದಲ್ಲೂ ಟಿಆರ್ ಪಿ ತರಬಲ್ಲದು ಎನ್ನುವ ಒಂದೇ ಉದ್ದೇಶದೊಂದಿಗೆ ಶುರುವಾದ ‘ಮಹಾನಾಯಕ’ ಧಾರಾವಾಹಿ ರಾತ್ರೋರಾತ್ರಿ ಮನೆ ಮಾತಾಗಿದ್ದು ಆ ಒಂದು ಘಟನೆಯ ಮೂಲಕ.

ಅದೆಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ, ಅವತ್ತು ಜೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ತಮ್ಮ ಪೇಸ್ ಬುಕ್ ಖಾತೆಯಲ್ಲಿ ‘ಮಹಾನಾಯಕ’ ಧಾರಾವಾಹಿ‌‌ ನಿಲ್ಲಿಸುವಂತೆ ಬೆದರಿಕೆ ಕರೆ ಬರುತ್ತಿವೆ ಅಂದಿದ್ದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಆ ಹೇಳಿಕೆ ದಲಿತ ಸಂಘಟನೆಗಳ ನಿದ್ದೆ ಗೆಡಿಸಿತು. ರಾಜ್ಯದ ದಲಿತ ಸಂಘಟನೆಗಳು ಎದ್ದು ಕುಳಿತವು. ಧಾರಾವಾಹಿಗೆ ಬೆಂಬಲಕ್ಕೆ ನಿಂತವು. ರಾಜ್ಯದ‌ ಮೂಲೆ ಮೂಲೆಗೂ ಧಾರಾವಾಹಿ ಪರವಾದ ಅಲೆ ಎದ್ದಿತು.

ಧಾರಾವಾಹಿ ಬೆಂಬಲಿಸಿ, ಬ್ಯಾನರ್, ಪೋಸ್ಟರ್ ಎದ್ದು ನಿಂತವು.‌ಮಹಾನಾಯಕ ಧಾರಾವಾಹಿ ತಮ್ಮದೇ ಕಾರ್ಯಕ್ರಮವೆಂದೇ ಸ್ವೀ’ಕರಿಸಿದರು.’ ಜೀ’ ಕನ್ನಡಕ್ಕೆ‌ ದಲಿ‌ತ ಸಮುದಾಯದ ಹೊಸ ವರ್ಗವೇ ಸಿಕ್ಕಿತು‌. ಎಂದೂ ಧಾರಾವಾಹಿ ನೋಡದ ಒಂದು ಸಮುದಾಯ’ ಜೀ’ ಕನ್ನಡ ದ ಪಾಲಾಯಿತು‌. ಜೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಸನ್ಮಾನ ಕಾರ್ಯಕ್ರಮಗಳು‌ ನಡೆದವು.

” ಅಂಬೇಡ್ಕರ್ ಅವರ ಬದುಕಿನ ಕುರಿತ ‘ಮಹಾನಾಯಕ’ ಧಾರಾವಾಹಿಯ ಮೂಲಕ ದಲಿತ ಸಮುದಾಯದ ಹೊಸ ವರ್ಗವನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಭಾರೀ ಲಾಭ ಮಾಡಿಕೊಂಡ ‘ಜೀ ಕನ್ನಡ’ ವಾಹಿನಿ, ಆ ಸಮುದಾಯದ ಪರ ನಿಜಕ್ಕೂ ಏನನ್ನಾದರೂ ಮಾಡಬೇಕಿತ್ತು ಅನ್ನೋದು ದಲಿತ ಮುಖಂಡರ ಮಾತು.” 

ಇದು ಧಾರಾವಾಹಿ ಮನೆ ಮಾತಾಗುವಂತೆ ಮಾಡಿತು.
ನಗರ, ಪಟ್ಟಣ, ಊರು ಹೀಗೆ ರಾಜ್ಯದ ಯಾವುದೇ ಮೂಲೆಗೂ ಹೋದರೂ ಇವತ್ತು ಮಹಾನಾಯಕ ಧಾರಾವಾಹಿ ಪರವಾಗಿ ದಲಿತ‌ ಸಂಘಟನೆಗಳು ಹಾಕಿರುವ ಬೃಹತ್ ಪ್ರಮಾಣದ ಬ್ಯಾನರ್ ಹಾಗೂ ಪೋಸ್ಟರ್ ಗಳು ನಿಮಗೆ ಕಾಣುತ್ತವೆ. ಎಲ್ಲಿಯಾ ಜೀ ಕನ್ನಡ, ಇನ್ನೆಲ್ಲಿಯಾ ದಲಿತ ಸಮುದಾಯ? ಟಿಆರ್ ಪಿ ದೃಷ್ಟಿಯಿಂದಲೂ ಜೀ ಕನ್ನಡ ದೊಡ್ಡ ಲಾಭ ಪಡೆಯಿತು.‌

ಇದೆಲ್ಲ ವೂ ಸಾಧ್ಯವಾಗಿದ್ದು ಅಂಬೇಡ್ಕರ್ ಹೆಸರು. ಅವರ ಮೇಲೆ ದಲಿತ ಸಮುದಾಯಕ್ಕಿರುವ ಅಭಿಮಾನ. ಹಾಗಾದರೆ ಅಂಬೇಡ್ಕರ್ ತಮ್ಮವರೇ ಎಂದು ಧಾರಾವಾಹಿ ಸ್ವೀಕರಿಸಿದ ದಲಿತ ಸಮುದಾಯಕ್ಕೆ ‘ಜೀ ‘ಕನ್ನಡ ಕೊಟ್ಟಿದ್ದೇನು ಅನ್ನೋದು ಸದ್ಯದ ಪ್ರಶ್ನೆ. ಮುಂದಾದರೂ ಇದಕ್ಕೆ ಉತ್ತರ ಸಿಗಬಹುದೇ

Related Posts

error: Content is protected !!