ಶಿವಣ್ಣ ಈಗ ಶಿವಪ್ಪ!

ಸೆಂಚುರಿ ಸ್ಟಾರ್‌ನ ೧೨೩ನೇ ಚಿತ್ರವಿದು

ಮಾಸ್‌ ಶಿವಪ್ಪನ ಖದರ್‌ ಶುರು…

ಈ ಹಿಂದೆ ಶಿವರಾಜಕುಮಾರ್‌ ಹಾಗೂ ಡಾಲಿ ಇಬ್ಬರೂ ಹೊಸದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. “ಟಗರು” ಮೂಲಕ ಜೋರು ಸುದ್ದಿಯಾಗಿದ್ದ “ಡಾಲಿ” ಧನಂಜಯ್‌ ಅವರು ಶಿವರಾಜಕುಮಾರ್‌ ಅವರೊಂದಿಗೆ ನಟಿಸುವ ಸಿನಿಮಾಗೆ ಆಗ ಶೀರ್ಷಿಕೆ ಪಕ್ಕಾ ಆಗಿರಲಿಲ್ಲ. ಇದೀಗ ಶಿವರಾಜಕುಮಾರ್‌ ಅಭಿನಯದ ಹೊಸ ಚಿತ್ರಕ್ಕೆ “ಶಿವಪ್ಪ” ಎಂಬ ಹೆಸರನ್ನಿಡಲಾಗಿದೆ. ಅಂದಹಾಗೆ, “ಶಿವಪ್ಪ” ಶಿವರಾಜಕುಮಾರ್‌ ಅಭಿನಯದ ೧೨೩ನೇ ಸಿನಿಮಾ ಎಂಬದು ವಿಶೇಷ. “ಶಿವಪ್ಪ” ಹೆಸರಲ್ಲೇ ಮಾಸ್‌ ಫೀಲ್‌ ಇದೆ. ಶಿವರಾಜಕುಮಾರ್‌ ಸಿನಿಮಾಗೆ “ಶಿವಪ್ಪʼ ಹೆಸರು ಒಂದು ರೀತಿ ಪಾಸಿಟಿವ್‌ ಆಗಿದ್ದು, ಇಡೀ ಸಿನಿಮಾದಲ್ಲಿ ಶಿವಣ್ಣ ಹೈಲೈಟ್‌ ಎನ್ನಲಾಗಿದೆ.

ಇನ್ನು, ಈ ಚಿತ್ರದಲ್ಲಿ ಶಿವರಾಜಕುಮಾರ್‌ ಹಾಗೂ ಡಾಲಿ ಧನಂಜಯ್‌ ಅವರೊಂದಿಗೆ ಯುವ ನಟ ಪೃಥ್ವಿ ಅಂಬರ್‌ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ತಾರಾಬಳಗದ ಆಯ್ಕೆ ನಡೆದಿದ್ದು, ನವೆಂಬರ್‌ ೨೩ರಿಂದಲೇ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಆರಂಭದ ಎರಡು ದಿನಗಳ ಕಾಲ ಶಿವರಾಜ್ ಕುಮಾರ್, ಪೃಥ್ವಿ ಅಂಬರ್ ಕಾಂಬಿನೇಷನ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ನವೆಂಬರ್‌ ೨೫ರ ಬಳಿಕ ಡಾಲಿ ಧನಂಜಯ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎಂಬುದು ಚಿತ್ರ ನಿರ್ದೇಶಕರ ಹೇಳಿಕೆ.


“ಶಿವಪ್ಪ” ಇದೊಂದು ಪಕ್ಕಾ ಮಾಸ್‌ ಫೀಲ್‌ ಇರುವ ಸಿನಿಮಾ. “ಶಿವಪ್ಪ” ಚಿತ್ರದಲ್ಲಿ ಶಿವರಾಜಕುಮಾರ್‌ ಅವರು ಮೂರು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂಬುದು ವಿಶೇಷ. ಸದ್ಯ ಉಳಿದ ಪಾತ್ರಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಚಿತ್ರದ ನಾಯಕಿ ಯಾರು ಅನ್ನುವುದಕ್ಕಿನ್ನೂ ಸಮಯವಿದೆ ಎನ್ನುವ ಚಿತ್ರತಂಡ, ಸದ್ಯ ನಟರ ಭಾಗದ ಚಿತ್ರೀಕರಣದತ್ತ ಗಮನಹರಿಸಿದ್ದಾರೆ.


ಈಗಾಗಲೇ ತಮಿಳಿನಲ್ಲಿ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿ, ಛಾಯಾಗ್ರಾಹಕರಾಗಿ ಸಾಕಷ್ಟು ಹೆಸರು ಮಾಡಿರುವ ವಿಜಯ್ ಮಿಲ್ಟನ್, ಕನ್ನಡದಲ್ಲಿ ಈಗಾಗಲೇ ಬಂದಿರುವ “ಅಟ್ಟಹಾಸ” ಹಾಗೂ ಬಿಡುಗಡೆಯಾಗಬೇಕಿರುವ ಧ್ರುವ ಸರ್ಜಾ ಅಭಿನಯದ “ಪೊಗರು” ಚಿತ್ರಕ್ಕೂ ಇವರೇ ಛಾಯಾಗ್ರಾಹಕರು. ಇನ್ನು, “ಶಿವಪ್ಪ” ವಿಜಯ್‌ ಮಿಲ್ಟನ್‌ ಅವರ ಕನ್ನಡದ ಮೊದಲ ನಿರ್ದೇಶನದ ಚಿತ್ರ ಎಂಬುದು ವಿಶೇಷ. ಸದ್ಯ ಶಿವರಾಜಕುಮಾರ್‌ ಸಾಕಷ್ಟು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲೂ ಶಿವಣ್ಣ ನಟಿಸುತ್ತಿದ್ದು, ಆ ಚಿತ್ರದಲ್ಲಿ ಪ್ರಭುದೇವ ಅವರೊಂದಿಗೆ ಶಿವಣ್ಣ ನಟಿಸುತ್ತಿದ್ದಾರೆ. “ಭಜರಂಗಿ 2” ಚಿತ್ರ ರೆಡಿಯಾಗಿದೆ.

ಇದರೊಂದಿಗೆ ತೆಲುಗಿನ ನಿರ್ದೇಶಕರೊಬ್ಬ ಸಿನಿಮಾದಲ್ಲೂ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಅದೇನೆ ಇರಲಿ, ಈಗ “ಶಿವಪ್ಪ” ಒಂದು ಕತೂಹಲವನ್ನಂತೂ ಕೆರಳಿಸಿದೆ. ಆ ಕುತೂಹಲಕ್ಕೆ ಕಾರಣ, ಶಿವರಾಜಕುಮಾರ್‌ ಹೈಲೈಟ್‌ ಆಗಿರೋದು, ಡಾಲಿ ಧನಂಜಯ್‌ ಜೊತೆಗಿರೋದು. ವಿಜಯ್ ಮಿಲ್ಟನ್‌ ‌ನಿರ್ದೇಶನ ಮಾಡುತ್ತಿರೋದು. ಎಲ್ಲದ್ದಕ್ಕೂ ಹೆಚ್ಚಾಗಿ, ಕೃಷ್ಣ ಸಾರ್ಥಕ್‌ ನಿರ್ಮಾಣ ಮಾಡುತ್ತಿರೋದು. ಸದ್ಯಕ್ಕೆ ಚಿತ್ರ ಒಂದು ಹೆಸರಿನ ಮೂಲಕವೇ ಸದ್ದು ಮಾಡಿದೆ. ಮುಂದಿನ ದಿನಗಳಲ್ಲಿ ಚಿತ್ರದ ಒಂದೊಂದೇ ಮಾಹಿತಿ ಹೊರಬೀಳಲಿದೆ.

Related Posts

error: Content is protected !!