Categories
ಸಿನಿ ಸುದ್ದಿ

ಲಹರಿ‌ ವೇಲು ಎಂಬ ಪ್ರೇರಕ ಶಕ್ತಿ…!


ಬನ್ನಿ ಸಾಹೇಬ್ರೆ, ಮಾಡೋಣ ಅಂದಿದ್ದೇ ಸಿನಿ‌ಲಹರಿ ಹುಟ್ಟಿಗೆ ಕಾರಣ ಅಂದ್ರೆ….

ಹೊಸತೆನ್ನುವುದರ ಆರಂಭ ಹೇಗೆ, ಎಲ್ಲಿ, ಯಾವಾಗ ಎನ್ನುವುದು ಗೊತ್ತೇ ಆಗುವುದಿಲ್ಲ‌. ಎಲ್ಲವೂ ಆಕಸ್ಮಿಕ ಎನ್ನುವ ಹಾಗೆ‌. ಸಣ್ಣದೋ, ದೊಡ್ಡದೋ ಒಂದು ಹೊಸ ಸಾಹಸ, ಒಂದು ಪ್ರಯತ್ನ ಅಥವಾ ಒಂದು ಹೊಸ ಕನಸು ನನಸಾಗುವುದಕ್ಕೆ ಒಂದು ನೆಪ ಬೇಕು ಅಷ್ಟೇ. ಒಬ್ಬರ ಪ್ರೇರಣೆಯೋ, ಇಲ್ಲವೇ ಒಬ್ಬರು ಮಾದರಿಯಾಗಿಯೋ, ಇಲ್ಲವೇ ಇನ್ನೋಬ್ಬರ ಮನೋಸ್ಥೈರ್ಯ ದ ಮಾತುಗಳೋ ನಮ್ಮ‌ ಸಾಹಸಗಳಿಗೆ ನೀರೆರೆದು , ಪುಷ್ಟಿ‌ನೀಡಿ ಬಿಡುತ್ತವೆ. ಒಟ್ಟಿನಲ್ಲಿ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ನಾವೇನೋ‌ ಮಾಡುತ್ತೇವೆ ಅಂತ ಹೊರಟಾಗ ಪಾಸಿಟಿವ್ ಮಾತುಗಳೇ ದೊಡ್ಡ ಶಕ್ತಿ. ಅವತ್ತು ಅಂತಹ ಮಾತುಗಳನ್ನಾಡುವ ಮೂಲಕ‌ ‘ಸಿನಿ‌ಲಹರಿ’ ಶುರುವಿಗೆ ಪ್ರೇರಕರಾದವರು ಲಹರಿ ಸಂಸ್ಥೆಯ ಮಾಲೀಕರಾದ‌ ಲಹರಿ‌ ವೇಲು .

‘ಸಿನಿ‌ಲಹರಿ ‘ ಹೆಸರಿನ‌ ಒಂದು ವೆಬ್ ಸೈಟ್ ಮತ್ತು ಯುಟ್ಯೂಬ್ ಚಾನೆಲ್‌ ಇವತ್ತು ಶುರುವಾಗಿ ನಿಮ್ಮ‌ಮುಂದೆ ಅನಾವರಣಗೊಂಡಿದ್ದರೆ ಅದಕ್ಕೆ ಪ್ರೇರಕರಾದವರು ಅನೇಕರು. ಅದರಲ್ಲಿ‌ ಮೊದಲಿಗರು ಲಹರಿ ವೇಲು.‌ ಒಂದು ಸಂಕಷ್ಟದ ಕಾಲದಲ್ಲಿ‌ ಅವರು ‘ ಬನ್ನಿ‌ ಸಾಹೇಬ್ರೆ, ಮಾಡೋಣ …ಅಂತೆನ್ನದೇ ಇದ್ದಿದ್ದರೆ ಇದು ಶುರುವಾಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ಆ ಒಂದು‌ ಮಾತಿನಿಂದ ‘ಸಿನಿ ಲಹರಿ’ ಶುರುವಾಯ್ತು.‌ ಅದರ ಅಲೋಚನೆ ಹುಟ್ಟಿಕೊಂಡಿದ್ದ ಸಂದರ್ಭವೇ ವಿಚಿತ್ರ ವಾಗಿತ್ತು.ಆ ದಿನಗಳಲ್ಲೇ ಲಹರಿ‌ ವೇಲು ಅವರು ತಮ್ಮ ಕಚೇರಿಯಲ್ಲಿ ಸರಿ‌ಸುಮಾರು 3 ಗಂಟೆಯಷ್ಟು ಕಾಲ ಕೂರಿಸಿಕೊಂಡು, ಸುದೀರ್ಘವಾಗಿ‌ ಮಾತನಾಡಿ, ಸಾಹೇಬ್ರೆ, ನೀವು ಮಾಡ್ತೀರಾ ಮಾಡಿ’ ಅಂತ ಬೆನ್ನು ತಟ್ಟಿದ್ದು ‘ಸಿನಿ‌ಲಹರಿ ‘ಹುಟ್ಟಿಗೆ ಕಾರಣ. ಈ ನೆನಪು ಯಾಕಂದ್ರೆ , ಅವತ್ತಿನ ಸಂದರ್ಭವೇ ಭಿನ್ನವಾಗಿತ್ತು.‌ಆ ದಿನಗಳಲ್ಲಿ ನಮಗೆ ಅವರು ಸಿಕ್ಕರು ಎನ್ನುವ ಕಾರಣಕ್ಕೆ.

ಅದ್ಹೆಂಗೆ ಅಂತೀರಾ? ಲಾಕ್ ಡೌನ್ ಆಗಷ್ಟೇ ತೆರವಾಗಿದ್ದ ಸಂದರ್ಭ. ಜನರ ಓಡಾಟಕ್ಕೆ ಒಂದಷ್ಟು ನಿರ್ಬಂಧಗಳು ಸಡಿಲಗೊಂಡಿದ್ದವು ಎನ್ನುವುದನ್ನು ಬಿಟ್ಟರೆ, ಕೊರೋನಾ‌ ಹರಡುವಿಕೆಯ ಅಬ್ಬರ ಮಾತ್ರ ಕಿಂಚಿತ್ತು ಕಮ್ಮಿ ಆಗಿರಲಿಲ್ಲ. ಜನ ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಪಡುತ್ತಿದ್ದರು. ನಂಗಂತೂ ಎದುರಿಗೆ ಬಂದವರೆಲ್ಲ ಕೊರೋನಾ ದಂತೆಯೇ ಕಾಣುತ್ತಿದ್ದರು. ಆ ದಿನಗಳಲ್ಲೇ ನಾನು ಊರಿನಿಂದ ವಾಪಾಸ್ ಬೆಂಗಳೂರಿಗೆ ಬಂದಿದ್ದೆ.ಆ ಹೊತ್ತಿಗಾಗಲೇ ನಾನು ನಿರುದ್ಯೋಗಿ. ಮಾನಸಿಕ‌‌ ಕಿರಿ‌ಕಿರಿ‌ ಆಗಿ, ಕೆಲಸ ಬೇಡ ಅಂತ ಬಿಟ್ಟು ಬಿಟ್ಟಿದ್ದೆ.’ ಅನ್ನ ಹಳಸಿತ್ತು, ನಾಯಿ ಹಸಿದಿತ್ತು ‘ ಅನ್ನೋ ಪರಿಸ್ಥಿತಿ ನಾನು ಕೆಲಸ ಬಿಟ್ಟ ಸಂಸ್ಥೆಗೂ ಇತ್ತು. ಅಲ್ಲಿದ್ದ ಕೆಲವರು ಸಂಭ್ರಮಾಚರಣೆ ಮಾಡಿದ್ದರು. ಆ ಬಗ್ಗೆ ತಲೆ‌ ಕಡೆಸಿಕೊಳ್ಳದೆ, ಎರಡ್ಮೂರು ತಿಂಗಳು ಊರಲ್ಲೇ ಇದ್ದೆ. ವಾಪಾಸ್ ಬೆಂಗಳೂರಿಗೆ ಬರಲೇಬೇಕು.ಬಂದ್ಮೇಲೆ ಏನು ಅಂತ ಗೆಳೆಯ ವಿಜಯ್ ಭರಮ ಸಾಗರ ಜತೆ ಚರ್ಚೆ ಮಾಡುತ್ತಿದ್ದಾಗ, ಆತನೆ, ವೆಬ್ಸೈಟ್ ಪ್ರಪೋಜಲ್ ಇಟ್ಟಿದ್ದ.‌ ಆದರೆ ಅದಕ್ಕೆಲ್ಲ ಯಾರು ಬೆಂಬಲ‌ ನೀಡ್ತಾರೆ, ಹಣಕಾಸು ಹೇಗೆ ಅಂತೆಲ್ಲ ಯೋಚಿಸುತ್ತಲೇ ಬೆಂಗಳೂರಿಗೆ ಬಂದೆ

ಏನಾದರೂ ಮಾಡಲೇ ಬೇಕು ಎನ್ನುವ ಚರ್ಚೆಯಲ್ಲೆ ವಾರ ಕಳೆಯಿತು. ಅಲ್ಲಿ ಇಲ್ಲಿ ಒಂದಷ್ಟು ಗೆಳೆಯರ ಜತೆ ಮಾತುಕತೆ ನಡೆಯಿತು. ಅಲ್ಲಿಂದ ಒಂದಿನ ಲಹರಿವೇಲು ಅವರನ್ನ ಭೇಟಿ ಮಾಡುವ ಆಲೋಚನೆಬಂತು.ತಕ್ಷಣವೇ ಕಾಲ್ ಮಾಡಿಮಾತನಾಡಿದೆ. ನಾಳೆಯೇ ಆಫೀಸ್ ಗೆ ಬನ್ನಿ,ಅಂದ್ರು. ಅದೇ ಮಾತಿನಂತೆ ಮಧ್ಯಾಹ್ನ 2 ಗಂಟೆಗೆ ಅವರದೇ ಆಫೀಸ್ ನಲ್ಲಿ ಭೇಟಿಯಾದೆವು. ‘ ನಾಲ್ಕು ತಿಂಗಳಾದವು ಸಾಹೇಬ್ರೆ, ಅಫೀಸ್ ಮುಖ ನೋಡದೆ. ನಿಮಗಾಗಿಯೇ ಇವತ್ತು ಇಲ್ಲಿಗೆ ಬಂದೆ. ಬೇರೆ ಯಾರೇ ಆಗಿದ್ದರೂ, ಆಫೀಸ್ ಗೆ ಬರುತ್ತಿರಲಿಲ್ಲ’ ಅಂತ ಕೊರೋನಾ ಆತಂಕದ ಬದುಕನ್ನು ವಿವರಿಸುತ್ತಾ ಮಾತಿಗೆ ಕುಳಿತರು.


ಮೂರು ತಾಸು ಮಾತುಕತೆ ನಡೆಯಿತು. ನಮ್ಮಪರಿಸ್ಥಿತಿ ಕೇಳಿ ನೊಂದುಕೊಂಡರು. ಕೊನೆಗೆ ಅವರು ಹೇಳಿದ್ದು ಒಂದೇ ಮಾತು, ‘ ಸಾಹೇಬ್ರೆ , ನೀವೆನು ಯೋಚನೆ ಮಾಡ್ಬೇಡಿ. ನೀವೇನು, ನಿಮ್ಮಸಾಮಾರ್ಥ್ಯವೇನು ಅಂತ ನಂಗೊತ್ತು. ನಾನಿದ್ದೇನೆ, ವೆಬ್ ಸೈಟ್ ಮಾಡಿ, ಒಳ್ಳೆಯದಾಗುತ್ತೆ ‘ ಅಂದ್ರು.ಆ ಒಂದು ಮಾತು ನಮಗೆ ಅನೆ ಬಲ ನೀಡಿತು. ಅಲ್ಲಿಂದಶುರುವಾದ ವೆಬ್ ಸೈಟ್ ಕೆಲಸಕ್ಕೆ ಅನೇಕರು ಸಾಥ್ ಕೊಟ್ಟರು.ಅನೇಕರುಪ್ರೊತ್ಸಾಹ ದಾಯಕಮಾತುಗಳನ್ನು ಆಡಿದರು.ಹಲವರು ನಾವಿದ್ದೇವೆ ಮಾಡಿ ಅಂತ ಬೆನ್ನಿಗೆ ನಿಂತಿರು. ಅದೆಲ್ಲದರ ಪ್ರತಿಫಲವೇ’ ಸಿನಿಲಹರಿ’. ಎಲ್ಲದರಿಗೂ ಧನ್ಯವಾದ.

Categories
ಸಿನಿ ಸುದ್ದಿ

ರಾಜ್ಯೋತ್ಸವ ವಿಶೇಷ, ಮಾರಿಗೋಲ್ಡ್ ಶೀರ್ಷಿಕೆ ಫಸ್ಟ್ ಲುಕ್ !

ಒಂದು ಗನ್‌, ಬುಲೆಟ್ಸ್‌ ಹಾಗೂ ಗೋಲ್ಡ್‌ ಬಿಸ್ಕತ್‌ ! 

ಮಾರಿಗೋಲ್ಡ್‌ ಚಿತ್ರತಂಡ ಬಿಡುಗಡೆ ಮಾಡಿರುವ ಶೀರ್ಷಿಕೆ ಫಸ್ಟ್‌ ಲುಕ್‌ ನೋಡಿದರೆ, ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಬರುತ್ತೆ. ಆ ಪೋಸ್ಟರ್‌ನಲ್ಲಿ ಒಂದು ಗನ್‌, ಬುಲೆಟ್ಸ್‌ ಹಾಗೂ ಗೋಲ್ಡ್‌ ಬಿಸ್ಕತ್‌ಗಳಿವೆ. ಹೀಗಾಗಿ ಸಣ್ಣದ್ದೊಂದು ಕುತೂಹಲವಂತೂ ಈ “ಮಾರಿಗೋಲ್ಡ್‌” ಮೇಲಿದೆ”

“ದೂದ್‌ಪೇಡ” ದಿಗಂತ್‌ ಅಭಿನಯದ “ಮಾರಿಗೋಲ್ಡ್”‌ ಚಿತ್ರದ ಮಾತಿನಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿಸಿಕೊಂಡಿದೆ ಚಿತ್ರತಂಡ. ಆರಂಭಕ್ಕೂ ಮುನ್ನವೇ ಒಂದಷ್ಟು ಸುದ್ದಿಯಾಗಿದ್ದ “ಮಾರಿಗೋಲ್ಡ್”‌ ಇದೀಗ ಮತ್ತೊಂದು ಸುದ್ದಿಗೆ ಕಾರಣವಾಗಿದೆ. ಕನ್ನಡ ರಾಜ್ಯೋತ್ಸವದಂದು ಚಿತ್ರತಂಡ ಶೀರ್ಷಿಕೆ ಫಸ್ಟ್ ‌ಲುಕ್‌ ಬಿಡುಗಡೆ ಮಾಡಿದೆ. ಶೀರ್ಷಿಕೆ ಮೂಲಕವೇ ಒಂದಷ್ಟು ಕುತೂಹಲ ಮೂಡಿಸಿದ್ದ ಚಿತ್ರತಂಡ, ಈಗ ಫಸ್ಟ್‌ ಲುಕ್‌ ಬಿಡುಗಡೆ ಮಾಡುವ ಮೂಲಕ ಹೊಸದೊಂದು ನಿರೀಕ್ಷೆ ಹುಟ್ಟಿಸಿದೆ. ರಘುವರ್ಧನ್‌ ನಿರ್ಮಾಣದ ಈ ಚಿತ್ರವನ್ನು ರಾಘವೇಂದ್ರ ಎಂ. ನಾಯಕ್‌ ನಿರ್ದೇಶನ ಮಾಡಿದ್ದಾರೆ.

ನಿರ್ದೇಶಕ ರಾಘವೇಂದ್ರ ಎಂ.ನಾಯಕ್

ಇದು ಇವರಗೆ ಮೊದಲ ಸಿನಿಮಾ. “ಮಾರಿಗೋಲ್ಡ್”‌ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಆ ಕಾರಣಕ್ಕೆ ಇದು ಸಾಕಷ್ಟು ವಿಶೇಷ ಎನಿಸಿಕೊಂಡಿದೆ. ಇದೊಂದು ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಕಥಾಹಂದರ ಹೊಂದಿದ್ದು, ದಿಗಂತ್‌ ಅವರಿಗೆ ಸಂಗೀತಾ ಶೃಂಗೇರಿ ಜೋಡಿಯಾಗಿದ್ದಾರೆ. ಇವರೊಂದಿಗೆ ಸಂಪತ್‌ ಕುಮಾರ್‌, ಕಾಕ್ರೋಚ್‌ ಸುಧಿ, ಯಶ್‌ ಶೆಟ್ಟಿ, ರಾಜ್‌ಬಲವಾಡಿ, ಗಣೇಶ್‌ರಾವ್‌ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಈ ಚಿತ್ರಕ್ಕೆ ಕೆ.ಎಸ್.‌ ಚಂದ್ರಶೇಖರ್‌ ಛಾಯಾಗ್ರಹಣವಿದೆ. ವೀರ್‌ಸಮರ್ಥ್‌ ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ. ರಘು ನಿಡುವಳ್ಳಿ ಅವರ ಸಂಭಾಷಣೆ ಇದೆ. ಯೋಗರಾಜ್‌ ಭಟ್‌, ಕವಿರಾಜ್‌, ವಿಜಯ್‌ ಭರಮಸಾಗರ ಸಾಹಿತ್ಯವಿದೆ.‌

ನಿರ್ಮಾಪಕ‌, ರಘುವರ್ಧನ್

ಅದೇನೆ ಇರಲಿ, ಚಿತ್ರತಂಡ ಬಿಡುಗಡೆ ಮಾಡಿರುವ ಫಸ್ಟ್‌ ಲುಕ್‌ ನೋಡಿದರೆ, ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಬರುತ್ತೆ. ಆ ಪೋಸ್ಟರ್‌ನಲ್ಲಿ ಒಂದು ಗನ್‌, ಬುಲೆಟ್ಸ್‌ ಹಾಗೂ ಗೋಲ್ಡ್‌ ಬಿಸ್ಕತ್‌ಗಳಿವೆ. ಹೀಗಾಗಿ ಸಣ್ಣದ್ದೊಂದು ಕುತೂಹಲವಂತೂ ಈ “ಮಾರಿಗೋಲ್ಡ್‌” ಮೇಲಿದೆ.ಅಂದಹಾಗೆ, ದಿಗಂತ್‌ ಸದ್ಯ ಬಿಝಿಯಾಗಿದ್ದಾರೆ. ಇತ್ತೀಚೆಗೆ ಅವರ “ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರ ಕೂಡ ಸೆಟ್ಟೇರಿದೆ. ಜೊತೆಗೆ ತೆಲುಗು ಚಿತ್ರದ ರಿಮೇಕ್‌ ಸಿನಿಮಾ ಕೂಡ ಮುಹೂರ್ತ ಕಂಡಿದೆ. ಅದರೊಂದಿಗೆ ಯೋಗರಾಜ್‌ ಭಟ್‌ ಅವರ “ಗಾಳಿಪಟ 2” ಸಿನಿಮಾದಲ್ಲೂ ಇದ್ದಾರೆ.‌ “ಮಾರಿಗೋಲ್ಡ್‌” ಚಿತ್ರದ ಫಸ್ಟ್ ಲುಕ್‌ ಈಗಷ್ಟೆ ಬಿಡುಗಡೆಯಾಗಿದ್ದು, ಇಷ್ಟರಲ್ಲೇ ಒಂದೊಂದೇ ವಿಶೇಷತೆಗಳು ಚಿತ್ರತಂಡದಿಂದ ಹೊರಬೀಳಲಿವೆ.

Categories
ಸಿನಿ ಸುದ್ದಿ

‘ಸಿನಿ‌ಲಹರಿ ‘ ಆರಂಭಕ್ಕೆ ರಾಜ್ಯೋತ್ಸವದ‌ ಮೆರಗು

ಆರಂಭ ಮತ್ತು ಉದ್ಘಾಟನೆಯ ಸಂದರ್ಭಗಳೇ ಕಾಕತಾಳೀಯ

ಭಾಷೆ ಮತ್ತು ಸಿನಿಮಾ ನಡುವೆ ಕರುಳು ಬಳ್ಳಿ ಸಂಬಂಧ. ಭಾಷೆಯೇ ಮೊದಲಾದರೂ, ಭಾಷೆಯ  ಉಳಿವಿಗೆ ಸಿನಿಮಾದ್ದು ಅಳಿಲು ಸೇವೆ ಎಂದರೆ ತಪ್ಪಲ್ಲ. ಭಾಷೆ ಮೂಲಕ ಸಿನಿಮಾ ಬೆಳೆದರೂ, ಸಿನಿಮಾ ಮೂಲಕವೂ ಭಾಷೆ ಬೆಳೆಯುತ್ತೆ ಎನ್ನುವುದು ಅಷ್ಟೇ ಸತ್ಯ. ಅವರೆಡರ ಮಧ್ಯೆ ಕೊಂಡಿಯಾದ ಸಿನಿಮಾ ಪತ್ರಿಕೋದ್ಯಮ ಇವತ್ತು ಡಿಜಿಟಲ್ ಆದ ಹೊತ್ತಲ್ಲಿ ಸಿನಿಲಹರಿ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್  ಕನ್ನಡ ರಾಜ್ಯೋತ್ಸವ ದಿನವೇ ಲೋಕಾರ್ಪಣೆ ಆಗುತ್ತಿರುವುದು ಹೆಮ್ಮೆ.

‘ ಸಿನಿ ಲಹರಿ’  ವೆಬ್ ಸೈಟ್ ಆರಂಭ, ಅದರ ಉದ್ಘಾಟನೆಯ ಸಂದರ್ಭ ಎರಡೂ ಕಾಕತಾಳೀಯ. ಇದೆಲ್ಲ ಯಾವುದೂ ಪೂರ್ವ ಯೋಜಿತ ಅಲ್ಲ.  ಕೆಲಸ ಇಲ್ಲ ಅಂತ ಆತಂಕದಲ್ಲಿದ್ದಾಗ ಒಂದು ಸಿನಿಮಾ ನ್ಯೂಸ್ ವೆಬ್ ಸೈಟ್ ಮಾಡೋಣ, ಅದರ ಹೆಚ್ಚಿನ ಪಾಲು  ಕನ್ನಡ ಸಿನಿಮಾಕ್ಕಾಗಿಯೇ ಮೀಸಲಿಡೋಣ ಅಂತಂದುಕೊಂಡಿದಷ್ಟೆ. ‌ಮುಂದೆ, ಖಾಲಿ ಜೇಬು ಇಟ್ಕೊ‌ಂಡು ಅದೇನ್ ಮಾಡ್ತೇವೋ.. ಅಂತ ನಮ್ಗೆ ನಾವೇ ಕಾಲೆಳೆದುಕೊಂಡು ಒಂದಷ್ಟು ದಿನ ತಿರುಗಾಡಿದೆವು.‌ ಕೊನೆಗೊಂದು‌ ದಿನ ಅದಕ್ಕೆ ಅಂತಿಮ‌ ರೂಪವೂ ಸಿಕ್ಕಿತು.‌ಅನೇಕ ಜನ ಸಹಕಾರ‌ ನೀಡಿದರು.‌ ಅದೆಲ್ಲದರ ಪ್ರಯತ್ನವಾಗಿ’  ಸಿನಿ ಲಹರಿ ‘ ಒಂದು ರೂಪ ಪಡೆಯಿತು.‌

ಕೊನೆಗೆ ಅದಕ್ಕೆ ಚಾಲನೆ ಎಂದು? ಅದರ ಉದ್ಘಾಟನಾ ಕಾರ್ಯಕ್ರಮ ಹೇಗಿರಬೇಕು ? ಯಾರನ್ನು ಕರೀಬೇಕು ? ಅಂತಂದುಕೊಂಡಾಗಲೂ, ಹೀಗೆಲ್ಲ ಆಗಬಹುದು‌ ಅಂತ ನಿರೀಕ್ಷೆ ಮಾಡಿರಲಿಲ್ಲ‌. ಮೊದಲು ಅಕ್ಟೋಬರ್  ಫಸ್ಟ್ ವೀಕ್ ಅಂತ‌ ಆಲೋಚಿಸಿದ್ದೇವು. ಕೊನೆಗೆ ಅಕ್ಟೋಬರ್‌ 29 ಫೈನಲ್ ಅಂತಲೂ ನಿರ್ಧಾರ ಮಾಡಿಕೊಂಡೆವು. ನಾವೇನೋ ರೆಡಿ ಇದ್ದರೂ, ಅದಕ್ಕೆ ಬೇಕಾದ ಹಾಲ್, ಗೆಸ್ಟ್, ಇತ್ಯಾದಿ ಹೊಂದಾಣಿಕೆ ಆಗಲಿಲ್ಲ. ಕೊನೆಗೆ ಅದು ಸರಿಯಾಗಿದ್ದು ನವೆಂಬರ್  1ಕ್ಕೆ.


ಇದೆಲ್ಲ ಹೇಗಾಯಿತೋ ಗೊತ್ತಿಲ್ಲ. ಒಂಥರ ಕಾಕತಾಳೀಯ. ನಾವು ಶುರು ಮಾಡುವ ವೆಬ್ ಸೈಟ್ ಬಹುತೇಕ ಕನ್ನಡಕ್ಕೆ ಮೀಸಲಾಗಿರಬೇಕು ಎಂದುಕೊಂಡಿದ್ದರ ಶುಭ ಸೂಚಕವೋ ಏನೋ, ಇದು’  ಕನ್ನಡ ರಾಜ್ಯೋತ್ಸವ’ ದಂದೇ ಲೋಕಾರ್ಪಣೆ ಆಗುವ ಭಾಗ್ಯ. ಅದು ಸಿನಿ‌ಮಾ ಮತ್ತು ಭಾಷೆಯ ನಡುವಿರುವ ಅವಿನಾಭಾವ ಸಂಬಂಧದ ಪ್ರತೀಕವೂ ಹೌದು.
ಸಿನಿಮಾ‌ ಮತ್ತು ಭಾಷೆ ಒಂದಕ್ಕೊಂದು ಅಂಟಿಕೊಂಡಿವೆ. ಮೂಕಿ‌ ಚಿತ್ರದ ಯುಗ ಮುಗಿದ ನಂತರ ಟಾಕಿ ಸಿನಿಮಾದ ಯುಗ ಶುರುವಾಯಿತು. ಅಲ್ಲಿಂದ ಇಲ್ಲಿ ತನಕ ಸಿನಿಮಾ‌ ಮತ್ತು ಭಾಷೆ ಅಂದ್ರೆ ಅದೊಂದು ಕರುಳುಬಳ್ಳಿ ಸಂಬಂಧ. ಭಾಷೆಯ ಮೂಲಕ ಸಿನಿಮಾ ಬೆಳೆಯುತ್ತೋ, ಅಥವಾ  ಸಿನಿಮಾ ಮೂಲಕ ಭಾಷೆ ಬೆಳೆಯುತ್ತೋ ಅದೀಗ ತರ್ಕಕ್ಕೆ ನಿಲುಕದ ಮಾತು.

ಭಾಷೆಯೇ ಮೊದಲಾದರೂ,ಈಗ ಅದೆಷ್ಟೋ‌ ದೇಶಗಳಲ್ಲಿ ಕನ್ನಡ ಸಿನಿಮಾಗಳಿಗೆ ಬೇಡಿಕೆಯಿದೆ ಎಂದಾದರೆ ಅದು ಕನ್ನಡ ಭಾಷೆಯ ಕಾರಣಕ್ಕಾಗಿ ಅಲ್ಲವೇ? ಹಾಗೊಂದು ನಂಟು ಭಾಷೆ ಮತ್ತು ಸಿನಿಮಾ ನಡುವಿದೆ. ಅಂತಹ ಅಂಟು, ನಂಟಿನ‌ ನಡುವೆ ಕನ್ನಡ ಸಿನಿಮಾಕ್ಕಾಗಿಯೇ ಒಂದು‌ ಕನ್ನಡ ಭಾಷೆಯ ಹೊಚ್ಚ ಹೊಸ ವೆಬ್ ಸೈಟ್ , ಕನ್ನಡ ರಾಜ್ಯೋತ್ಸವದ ದಿನವೇ ಉದ್ಘಾಟನೆ ಗೊಳ್ಳುತ್ತಿರುವುದು ನಮ್ಮ‌ಹೆಮ್ಮೆ. ‘ಸಿನಿ‌ಲಹರಿ’ ಯ ಸೌಭಾಗ್ಯ.

Categories
ಸಿನಿ ಸುದ್ದಿ

ಸಕ್ಸಸ್‌ಫುಲ್‌ ಜರ್ನಿ ನಿರೀಕ್ಷೆಯಲ್ಲಿ ಶ್ರೀಮುರಳಿ

ಡಿಸೆಂಬರ್‌ಗೆ ಟೀಸರ್‌, ಏಪ್ರಿಲ್ ಗೆ‌ ಮದಗಜ ರಿಲೀಸ್‌ ಸಾಧ್ಯತೆ

 

ರೋರಿಂಗ್‌ ಸ್ಟಾರ್‌ ಶ್ರೀಮುರಳಿ. ಈ ಹೆಸರು ಹೇಳಿದಾಕ್ಷಣ, ಸಿನಿರಂಗಕ್ಕೆ ಎಂಟ್ರಿಯಾಗಿರುವ ಹೊಸಬರಿಗೆ ಒಂಥರಾ ಖುಷಿ. ಅದಕ್ಕೆ ಕಾರಣ, ಅರಂಭದಿಂದಲೂ ಹೊಸಬರನ್ನು ಪ್ರೋತ್ಸಾಹಿಸಿಕೊಂಡು ಬಂದಿರುವ ಶ್ರೀಮುರಳಿ, ಅದೆಷ್ಟೋ ಹೊಸಬರ ಚಿತ್ರಗಳಿಗೆ ಶುಭಕೋರುವ ಮೂಲಕ ಪ್ರೀತಿಯ ಮಾತುಗಳನ್ನಾಡಿ, ಹುರಿದುಂಬಿಸಿದವರು. ಆ ಕಾರಣಕ್ಕೆ ಶ್ರೀಮುರಳಿ ಹೊಸ ಪ್ರತಿಭೆಗಳ ಪಾಲಿಗೆ ರಿಯಲ್‌ ಹೀರೋ. ಶ್ರೀಮುರಳಿ ಅವರ ಜರ್ನಿ ಕೂಡ ಆರಂಭದಲ್ಲಿ ಸುಲಭವಾಗಿರಲಿಲ್ಲ.

“ಅನೇಕ ಏಳು-ಬೀಳುವಿನ ನಡುವೆಯೂ ಆದೇ ಮುಗಳ್ನಗೆ ಮೂಲಕ ಎಲ್ಲರ ಮನಸ್ಸು ಗೆಲ್ಲುವ ಮೂಲಕವೇ ಅವರು ಚಿತ್ರರಂಗದಲ್ಲಿ ಗೆಲುವಿನ ಮೆಟ್ಟಿಲೇರಿ ನಿಂತರು. ಎಲ್ಲೆಲ್ಲೂ ತಮ್ಮದ್ದೊಂದು ಛಾಪು ಮೂಡಿಸುವುದರ ಜೊತೆಗೆ ಸಿನಿರಸಿಕರ ಮನದಲ್ಲಿ, ಚಿತ್ರರಂಗದ ಅಂಗಳದಲ್ಲಿ “ಭರಾಟೆ” ಎಬ್ಬಿಸಿದ್ದಂತೂ ಸುಳ್ಳಲ್ಲ. ಅದೇ ಮೈಲೇಜ್‌ ಉಳಿಸಿಕೊಂಡಿರುವ ಶ್ರೀಮುರಳಿ ಮತ್ತೊಂದು ಬಹುದೊಡ್ಡ ನಿರೀಕ್ಷೆಯಲ್ಲೂ ಇದ್ದಾರೆ”

 

ಅನೇಕ ಏಳು-ಬೀಳುವಿನ ನಡುವೆಯೂ ಆದೇ ಮುಗಳ್ನಗೆ ಮೂಲಕ ಎಲ್ಲರ ಮನಸ್ಸು ಗೆಲ್ಲುವ ಮೂಲಕವೇ ಅವರು ಚಿತ್ರರಂಗದಲ್ಲಿ ಗೆಲುವಿನ ಮೆಟ್ಟಿಲೇರಿ ನಿಂತರು. ಎಲ್ಲೆಲ್ಲೂ ತಮ್ಮದ್ದೊಂದು ಛಾಪು ಮೂಡಿಸುವುದರ ಜೊತೆಗೆ ಸಿನಿರಸಿಕರ ಮನದಲ್ಲಿ, ಚಿತ್ರರಂಗದ ಅಂಗಳದಲ್ಲಿ “ಭರಾಟೆ” ಎಬ್ಬಿಸಿದ್ದಂತೂ ಸುಳ್ಳಲ್ಲ. ಅದೇ ಮೈಲೇಜ್‌ ಉಳಿಸಿಕೊಂಡಿರುವ ಶ್ರೀಮುರಳಿ ಮತ್ತೊಂದು ಬಹುದೊಡ್ಡ ನಿರೀಕ್ಷೆಯಲ್ಲೂ ಇದ್ದಾರೆ.
ಹೌದು, ಶ್ರೀಮುರಳಿ ಸದ್ಯಕ್ಕೆ “ಮದಗಜ”ನ ಜಪದಲ್ಲಿದ್ದಾರೆ. ಹಾಗೆ ನೋಡಿದರೆ, ಅವರು “ಉಗ್ರಂ” ಗೆಲುವಿನ ನಂತರ ಸಾಕಷ್ಟು ಚ್ಯೂಸಿ ಆಗಿದ್ದಂತೂ ಹೌದು. ಆ ಎಚ್ಚರ ಇದ್ದುದರಿಂದಲೇ ಅವರು, ಒಂದೊಂದೇ ಸಿನಿಮಾವನ್ನು ಕೊಡುವ ಮೂಲಕ ಇಂದಿಗೂ ಅಸ್ತಿತ್ವ ಉಳಿಸಿಕೊಂಡಿದ್ದಾರೆ.

 

ಈಗ “ಮದಗಜ” ಕೂಡ ದೊಡ್ಡ ಭರವಸೆ ಮೂಡಿಸಿದೆ. ಚಿತ್ರದ ಶೀರ್ಷಿಕೆಯೇ ಮೊದಲ ನಂಬಿಕೆ ಹೆಚ್ಚಿಸಿದೆ. ಆರಂಭದ ಪೋಸ್ಟರ್‌ ಇನ್ನಷ್ಟು ಕುತೂಹಲ ಮೂಡಿಸಿರುವುದಂತೂ ನಿಜ. ಈಗ “ಮದಗಜ”ನ ಹವಾ ಜೋರಾಗಿದೆ. ಈಗಾಗಲೇ ಎರಡನೇ ಹಂತದ ಚಿತ್ರೀಕರಣ ಮುಗಿಸಿರುವ “ಮದಗಜ” ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ.

ಬಿನ್ನಿಮಿಲ್‌ನಲ್ಲಿ ಭರ್ಜರಿ ಫೈಟ್‌ ಸೀನ್‌ಗಳಿಗಾಗಿಯೇ ದೊಡ್ಡ ಸೆಟ್‌ ಹಾಕಲಾಗುತ್ತಿದೆ. ಸುಮಾರು ಹದಿನೈದು ದಿನಗಳ ಕಾಲ ಸೆಟ್‌ ಹಾಕಲಾಗುತ್ತಿದ್ದು, ಅದು ಪೂರ್ಣಗೊಂಡ ನಂತರ ಫೈಟ್‌ ಸೀನ್‌ ಶೂಟಿಂಗ್‌ ನಡೆಯಲಿದೆ. ಆ ಭರ್ಜರಿ ಕಾಳಗದ ದೃಶ್ಯಗಳು “ಮದಗಜ” ಚಿತ್ರದ ವಿಶೇಷತೆಗಳಲ್ಲೊಂದು. ಈಗಾಗಲೇ ವಾರಣಾಸಿಯಲ್ಲಿ ಪ್ರಮುಖ ಭಾಗದ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ “ಮದಗಜ”, ಇತ್ತೀಚೆಗೆ ಮೈಸೂರು ಸುತ್ತಮುತ್ತಲ ಪ್ರದೇಶಗಳಲ್ಲೂ ಚಿತ್ರೀಕರಣ ಮುಗಿಸಿದೆ. ಈಗ ಮತ್ತೊಂದು ಹಂತದ ಚಿತ್ರೀಕರಣಕ್ಕೆ ರೆಡಿಯಾಗಿದ್ದು, ಇನ್ನೇನು ಇಷ್ಟರಲ್ಲೇ ಚಿತ್ರತಂಡ ಸೆಟ್‌ಗೆ ಹೊರಡಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ಗೆ “ಮದಗಜ” ಟೀಸರ್‌ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಟ್ವೆಂಟಿ- ಟ್ವೆಂಟಿನಲ್ಲಿ‌ ಶುಭ ಮಿಲನಾ!

ಲವ್ ಬರ್ಡ್ ಗೆ  ಸಿಕ್ಕಿತು ಲವ್ ಮಾಕ್ಟೆಲ್ ಎಂಬ ಸ್ವೀಟ್ ಕಾಕ್ಟೆಲ್

ಇಡೀ ಜಗತ್ತಿನ ಪಾಲಿಗೆ 2020  ಮರೆಯಲಾಗದ ವರ್ಷ.ಕೊರೋನಾ ಬಂದು‌ ಇಡೀ ವಿಶ್ವವೇ ಅಲ್ಲೋಲ ಕಲ್ಲೋಲ‌ ಆಯ್ತು‌. ಆದರೂ‌ ಕೆಲವರಿಗೆ ಇದು ವರವೂ ಆಯ್ತು.‌ ಮುಖೇಶ್ ಅಂಬಾನಿ‌ ಮನೆಯಲ್ಲೇ ಕುಳಿತು ದಿನಕ್ಕೆ 80 ಕೋಟಿ ದುಡಿದರೂ‌ ಅಂತ  ಸುದ್ದಿ ಬಂತು. ಇದೊಂಥರ ಲಕ್. ಈ ವರ್ಷದಲ್ಲಿ ಇಂತಹ ಅದೃಷ್ಟ ಕಂಡವರು ನಟಿ ಮಿಲನಾ ನಾಗಾರಾಜ್ ಕೂಡ ಒಬ್ಬರು.

ಅವಕಾಶಕ್ಕಾಗಿ ಕಾಯುತ್ತಿದ್ದರು !

‘ನಮ್  ದುನಿಯಾ ನಮ್ ಸ್ಟೈಲ್ ‘ ಮೂಲಕ ಚೆಂದನವನಕ್ಕೆ ಬಂದ ನಟಿ ಮಿಲನಾ ನಾಗರಾಜ್. ನಟಿಯಾಗುವ ಮೊದಲು ಅಥ್ಲಿಟ್ ಆಗಿ ಹೆಸರು ಮಾಡಿದವರು. ಕ್ರೀಡೆಯಿಂದ ಸಿನಿಮಾ‌ ಕಡೆ ಮುಖ‌ ಮಾಡಿದರು. ಆದರೆ ಸಿನಿಮಾ ಬದುಕು ಅವರಂದು ಕೊಂಡಷ್ಟು ಸುಲಭ ಇರಲಿಲ್ಲ. ಬದಲಿಗೆ ಅವಕಾಶಗಳಿಗೇ ಇಲ್ಲಿ ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ಎದುರಿಸಿದರು. ಅವಕಾಶ ಸಿಕ್ಕರೂ ಗಟ್ಟಿ ನೆಲೆ ಕಾಣಲು ಒಂದು ಸಕ್ಸಸ್‌ ಅನ್ನೋದು  ಸಿಗಲಿಲ್ಲ. ಗೆಲುವಿಗಾಗಿ ಐದಾರು ವರ್ಷ ಸೈಕಲ್ ಹೊಡೆದರು‌. ಆ್ಯಡ್ ಶೂಟ್ ಗಳಲ್ಲಿ ಕಾಣಿಸಿಕೊಂಡರು.ಸಾಲದೆಂಬಂತೆ ಪರಭಾಷೆಗಳಿಗೂ ಹೋಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ಫಲ‌ ಸಿಗಲಿಲ್ಲ.

ಇನ್ನೇನು ಮನೆಯಲ್ಲೇ ಕೂರಬೇಕೆನೋ ಎನ್ನುವ ಹೊತ್ತಿಗೆ ಪವಾಡವೇ ನಡೆದು ಹೋಯಿತು‌.  2020 ಕ್ಕೆ ದೊಡ್ಡ ಗೆಲುವು ಕಾಣುವ ಯೋಗವಿತ್ತೇನೋ‌ . ಈ ವರ್ಷ ದೊಡ್ಡ ಗೆಲುವು ಸಿಕ್ಕಿತು. ಅದು ಅವರ ಇದುವರೆಗಿನ ಪಯಣದ ನೋವು ಮರೆಸಿ, ನಟಿಯಾಗಿ ಮೆರೆಸಿದೆ.

ಲವ್ ಮಾಕ್ಟೆಲ್ ಬರಬೇಕಾಯಿತು !

2020  ಕನ್ನಡ ಚಿತ್ರರಂಗವನ್ನು ಬಹುವಾಗಿ ಕಾಡಿಸಿದ ವರ್ಷ. ಚಿತ್ರರಂಗ ಎಂದೂ ಕಂಡರಿಯದ ಹಾಗೆ, ಚಿತ್ರೋದ್ಯಮ ಬಂದ್ ಆಯ್ತು. ಸಿನಿಮಾ ಟಾಕೀಸ್ ಗಳು ಬಾಗಿಲು ಮುಚ್ಚಿದವು. ಇಷ್ಟಾಗಿಯೂ ಚಿತ್ರರಂಗದ ಇತಿಹಾಸಕ್ಕೆ ದಾಖಲಾಗುವ ಹಾಗೆ ಎರಡು‌ ಚಿತ್ರಗಳು ಸಕ್ಸಸ್ ಕಂಡವು. ಆ ಎರಡರ ಪೈಕಿ ಲವ್ ಮಾಕ್ಟೆಲ್ ಚಿತ್ರವೂ ಒಂದು‌. ಈ ಮೂಲಕ ಸ್ಟಾರ್ ನಟಿ ಅಂತ ಗುರುತಿಸಿಕೊಂಡಿದ್ದು ನಟಿ‌ ಮಿಲನಾ ನಾಗರಾಜ್.

ಈ ಚಿತ್ರವುಚಿತ್ ಮಂದಿರಗಳಲ್ಲೇ ದೊಡ್ಡ ಹವಾ ಸೃಷ್ಟಿಸಿದ್ದು ಮಾತ್ರವಲ್ಲ, ಟಿವಿ ರೈಟ್ಸ್ ಜತೆಗೆ ಡಿಜಿಟಲ್ ಹಕ್ಕುಗಳು ಕೂಡ ಅತ್ಯಧಿಕ ಬೆಲೆ ಮಾರಾಟವಾದವು.‌ ನಿರ್ಮಾಣದ ಜತೆಗೆ ಚಿತ್ರದ ಕಲಾವಿದರಾದ ಮದರಂಗಿ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೇಬು ತುಂಬ ಕಾಂಚಣ ಕಂಡರು. ಸಕ್ಸಸ್ ಕಾಣದೆ ನೊಂದಿದ್ದ ಮಿಲನಾ ನಾಗರಾಜ್, ಭರ್ಜರಿ ಗೆಲವು ಕಂಡು ಸಂಭ್ರಮ‌ಪಟ್ಟರು. ಮತ್ತೊಂದೆಡೆ ನಿರ್ಮಾಪಕಿ ಆಗಿಯೂ ಭರ್ಜರಿ ಹಣ ಸಂಪಾದಿಸಿದ್ದು ತಮಾಷೆ ಅಲ್ಲ. ಡಬಲ್ ಧಮಾಕಾ ಅಂತಾರಲ್ಲ, ಹಾಗೆ.

ಮತ್ತೊಂದು ಲವ್ ಮಾಕ್ಟೆಲ್ ರೆಡಿ ಆಯ್ತು!

ಒಂದು ಚಿತ್ರದ ಸಕ್ಸಸ್  ಬಹಳಷ್ಟು ಜನರ ಹಣೆ ಬರಹ ಬರೆಯುತ್ತೆ. ಅದು ಚಿತ್ರರಂಗದ ಇತಿಹಾಸ. ಲವ್ ಮಾಕ್ಟೆಲ್ ಕೂಡ ಅಷ್ಟೇನೆ. ಮದರಂಗಿ‌ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ ಬಹು ದಿನಗಳಿಂದ ಗೆಲುವಿಗಾಗಿ ಕಾದಿದ್ದವರು. ಈಗ  ಲವ್ ಮಾಕ್ಟೆಲ್ ಚಿತ್ರದ ಗೆಲುವು ಇವರಿಬ್ಬರನ್ನು ಬಹು ಎತ್ತರಕ್ಕೇರಿಸಿದೆ. ಗೆದ್ದ ಖುಷಿಯಲ್ಲೇ ಈ ಜೋಡಿ ಲವ್ ಮಾಕ್ಟೆಲ್ ೨ ಶುರು ಮಾಡಿತು. ಅದರ ಜತೆಗೆ ಖಾಸಗಿ ಬದುಕಲ್ಲೂ ಜೋಡಿ ಆಗುತ್ತಿರುವ ಖುಷಿ ರಿವೀಲ್ ಮಾಡಿತು. ಅದರ ಜತೆಗೆಯೇ ಮದರಂಗಿ‌ಕೃಷ್ಣ ಬೇಡಿಕೆಯ ನಟರಾದರು. ಇದೆಲ್ಲ ಲವ್ ಮಾಕ್ಟೆಲ್ ಪ್ರಭಾವ. ಒಂದು ದೊಡ್ಡ ಗೆಲುವಿನೊಂದಿಗೆ ಭಾಗ 2 ಮೂಲಕ ತೆರೆ‌ಮೇಲೆ ಬರುವ ತವಕ ಮಿಲನಾ ನಾಗರಾಜ್ ಹಾಗೂ ಮದರಂಗಿ‌ಕೃಷ್ಣ ಅವರದು. ಇನ್ನು ಪ್ರೇಕ್ಷಕರಿಗೆ ಆ ಚಿತ್ರ ಹೇಗೆ ಬರುತ್ತೆ ಎನ್ನುವ ಕುತೂಹಲ. ಆಲ್ ದಿ ಬೆಸ್ಟ್ ಮಿಲನಾ ನಾಗಾರಾಜ್.

Categories
ಸಿನಿ ಸುದ್ದಿ

ಸ್ಯಾಂಡಲ್ ವುಡ್ ಕ್ವೀನ್ ಪಟ್ಟದ‌ ಮೇಲೆ‌ ಡಿಂಪಲ್ ಕ್ವೀನ್!

ಬುಲ್‌ ಬುಲ್ ಬೆಡಗಿಗೆ ಕೈ‌ತುಂಬಾ ಅವಕಾಶ, ರಚಿತಾ ಸಕ್ಸಸ್ ಗೆ ಕಾರಣ ಆದೊಂದು ವ್ಯಾನಿಟಿ ಬ್ಯಾಗ್ !?

ಸ್ಯಾಂಡಲ್ ವುಡ್ ನಲ್ಲೀಗ ಬಹುಬೇಡಿಕೆಯ  ನಟಿ ಯಾರು ?  ಕನ್ನಡ ಸಿನಿಮಾ ಪ್ರೇಮಿಗಳಿಗೆ ಹೀಗೊಂದು ಪ್ರಶ್ನೆ ಎದುರಾದರೆ ಥಟ್ಟಂತೆ ಬರುವ ಉತ್ತರ ಡ್ವಿಂಪಲ್ ಕ್ವೀನ್ ರಚಿತಾ ರಾಮ್. ಅದು ಉತ್ಪ್ರೇಕ್ಷೆಯೂ ಅಲ್ಲ.ರಚಿತಾ ರಾಮ್ ಅವರ ಕೈಯಲ್ಲಿರುವ ಸಿನಿಮಾಗಳು, ಜತೆಗೆ ಅವರಿಗೀಗ ಬರುತ್ತಿರುವ ಅವಕಾಶ ನೋಡಿದರೆ ಅದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು.

ಸದ್ಯಕ್ಕೆ‌ ರಚಿತಾ ರಾಮ್ ನಾಯಕಿಯಾಗಿರುವ ಸಿನಿಮಾಗಳನ್ನೇ ನೋಡಿ, ಏಕ್ ಲವ್ ಯಾ , ಏಪ್ರಿಲ್, ವೀರಂ, ಡಾಲಿ, ಲಿಲ್ಲಿ , ಮಾನಸೂನ್ ರಾಗಾ ಸೇರಿದಂತೆ ಇನ್ನು ಹೆಸರಿಡದ ಮೂರ್ನಾಲ್ಕು ಸಿನಿಮಾಗಳಿಗೂ ಅವರು ನಾಯಕಿ. ಹಾಗೆಯೇ ತೆಲುಗಿನ’ ಸೂಪರ್ ಮಿರ್ಚಿ’ ಹೆಸರಿನ ಚಿತ್ರಕ್ಕೂ ಅವರು ನಾಯಕಿ.‌ ಮೂಲಗಳ ಪ್ರಕಾರ ಇದು ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲೂ ಬರಲಿದೆ. ಅದೃಷ್ಟ ಅಂದ್ರೆ ಇದೇ ಅಲ್ವಾ? 2021 ರ ಜತೆಗೆ 2022 ಕ್ಕೂ ಅವರು ಫುಲ್ ಬ್ಯುಸಿ. ಆ ಮಟ್ಟಿಗೀಗ ರಚಿತಾ ರಾಮ್ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿ.

ಅಷ್ಟೇ ಯಾಕೆ,  ರಚಿತಾ ನಾಯಕಿಯಾಗಿರುವ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಆಗಿದೆ. ‘ಇನ್ಸ್ ಸ್ಪೆಕ್ಟರ್ ವಿಕ್ರಂ’ ಚಿತ್ರದ ನಿರ್ಮಾಪಕ ವಿಖ್ಯಾತ್ ನಿರ್ಮಾಣದ ಮತ್ತೊಂದು ಹೊಸ ಚಿತ್ರಕ್ಕೆ ರಚಿತಾ ನಾಯಕಿ ಆಗಿರುವ ಸುದ್ದಿ ಈಗ ಹೊರ ಬಿದ್ದಿದೆ. ಇತ್ತೀಚೆಗೆ ಅವರ ಹುಟ್ಟು ಹಬ್ಬಕ್ಕೆ ಚಿತ್ರ ತಂಡ ಪೋಸ್ಟರ್ ಲಾಂಚ್ ಮಾಡುವ ಮೂಲಕ ಈ ಸುದ್ದಿ ಬಹಿರಂಗ ಪಡಿಸಿದೆ.ಈಗಾಗಲೇ ಅದರ ಶೂಟಿಂಗ್ ಕೂಡ ಮುಗಿದಿದೆ. ಇಷ್ಟರಲ್ಲಿಯೇ ಅದರ ಟೈಟಲ್ ಲಾಂಚ್ ಆಗಲಿದೆಯಂತೆ.

ಹಾಗೆಯೇ ‘ಅಯೋಗ್ಯ’ ಚಿತ್ರದ ಜೋಡಿ ಮತ್ತೊಮ್ಮೆ ಒಂದಾಗುತ್ತಿದೆ. ಸತೀಶ್ ನೀನಾಸಂ ಹಾಗೂ‌ ರಚಿತಾ ಜೋಡಿಯ ಚಿತ್ರ ‘ಮ್ಯಾಟ್ನಿ’ ಗೆ ಮುಹೂರ್ತ ಮುಗಿದಿದೆ.ಹೊಸ ಪ್ರತಿಭೆ ಮನೋಹರ್ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಅಲ್ಲಿಗೆ ಸಾಲು‌ಸಾಲು ಸಿನಿಮಾಗಳಿಗೆ ನಾಯಕಿಯಾಗಿರುವ ರಚಿತಾ ರಾಮ್, ಕಿರುತೆರೆಯಲ್ಲೂ ಅಷ್ಟೇ ಬ್ಯುಸಿ ಎನ್ನುವುದು ನಿಮಗೂ‌ ಗೊತ್ತು. ಹಾಗಂತ ಕಿರುತೆರೆ ಅವರಿಗೇನು ಹೊಸದಲ್ಲ. ಬಿಂದಿಯಾ ರಾಮ್ ಎನ್ನುವ ಗುಳಿಕೆನ್ನೆ ಚೆಲುವೆ ಕಿರುತೆರೆ ಲೋಕದಿಂದಲೇ ಸಿನಿಮಾ‌ ಪ್ರಪಂಚಕ್ಕೆ ಬಂದು‌ ರಚಿತಾ ರಾಮ್ ಆಗಿದ್ದು. ಕಿರುತೆರೆ ಲೋಕದ ಜನಪ್ರಿಯತೆಯಿಂದಲೇ ಸಿನಿ ದುನಿಯಾಕ್ಕೆ ಬಂದು ಬುಲ್ ಬುಲ್ ಬೆಡಗಿ ಅಂತಲೇ ಮನೆ‌ಮಾತಾಗಿದ್ದು ರಚಿತಾ ಅವರ ಹೆಗ್ಗಳಿಕೆ. ಹಾಗೆಯೇ ರಚಿತಾ ಪಾಲಿಗೆ ಇದ್ದ ಅದೃಷ್ಟ ಸ್ಟಾರ್ ನಟರ ಸಿನಿಮಾಗಳಿಗೇ ಒಂದಷ್ಟು ಸಮಯ ನಾಯಕಿಯಾಗಿ ಮೆರೆದಿದ್ದು. ಇಂತಹ ಅದೃಷ್ಟ ಯಾರಿಗುಂಟು ಯಾರಿಗಿಲ್ಲ! ಹಾಗಿದ್ದು ರಚಿತಾ ರಾಮ್ ಒಂದಷ್ಟು ಸಮಯ‌ ಅವಕಾಶಕ್ಕೆ ಎದುರು ನೋಡುವಂತಾಗಿದ್ದರ ಕಾರಣ ಇನ್ನು ನಿಗೂಢ. ಅದು ಕೂಡ ಹೆಚ್ಚೇನು ದಿನ ಅಲ್ಲ. ಮತ್ತೆ ಫಿನಿಕ್ಸ್ ನಂತೆ ಮತ್ತೆ ಎದ್ದು ಕುಳಿತರು. ಸಣ್ಣ ಗ್ಯಾಪ್ ಅವರ ಅನುಪಸ್ಥಿತಿಯನ್ನೇ ಮರೆಸಿ‌ಬಿಟ್ಟಿತು. ಅಯೋಗ್ಯ ಸೂಪರ್ ಹಿಟ್ ಆಯಿತು. ಕೈ ತುಂಬಾ ಅವಕಾಶ ಸಿಕ್ಕವು. ಅತ್ತ ಕಿರುತೆರೆ ಯಲ್ಲೂ‌ಬ್ಯುಸಿಯಾದರು. ಈಗ ಏನಿಲ್ಲ ಅಂದ್ರು ಹತ್ತು ಸಿನಿಮಾಗಳಿಗೆ ಅವರು ನಾಯಕಿ.‌ ಎರಡು ವರ್ಷ ಫುಲ್ ಬ್ಯುಸಿ.

ಇಷ್ಟು ಬ್ಯುಸಿ ಇರುವ ಕನ್ನಡದ ನಟಿ‌ಮತ್ತೊಬ್ಬರಿಲ್ಲ. ಹಾಗಾದ್ರೆ ರಚಿತಾ ಅವರ ಸಕ್ಸಸ್ ಫುಲ್ ಜರ್ನಿಯ ರಹಸ್ಯವೇನು? ಸಿನಿಮಾಗಳ ಆಯ್ಕೆ. ಅನಗತ್ಯ ವಿವಾದಗಳಿಗೆ ಸಿಲುಕದಿರುವುದು. ಹಾಗೆ ನೋಡಿದರೆ ರಚಿತಾ ರಾಮ್ ತುಂಬಾ ಟ್ಯಾಲೆಂಟೆಡ್ ನಟಿ. ಯಾವುದು ಹೇಗೆ ವರ್ಕ್ ಆಗುತ್ತೆ, ಯಾವ ಪಾತ್ರ ಜನ‌ಮೆಚ್ಚುಗೆ ಪಡೆಯುತ್ತೆ, ಯಾವ ಸ್ಟಾರ್ ಜತೆಗೆ ನಟಿಸಿದರೆ ಇಮೇಜ್ ಹೆಚ್ಚಾಗುತ್ತೆ ಎನ್ನುವ ಲೆಕ್ಕಾಚಾರ ಹಾಕಿಕೊಂಡೆ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಜತೆಗೆ ಯಾವ ವಿಷಯಕ್ಕೆ ಎಷ್ಟು ತಲೆ‌ಕಡಿಸಿಕೊಳ್ಳಬೇಕು ಎನ್ನುವ ಬುದ್ದಿಮತ್ತೆ ಕೂಡ ಅವರಿಗಿದೆ. ಹಾಗಾಗಿಯೇ ರಚಿತಾ ರಾಮ್ ಎಂಬ ಗುಳಿಕೆನ್ನೆ ಚೆಲುವೆ ಈಗ ನಟನೆ ಎಂಬ ಕಲಾ‌ ಕ್ರೀಡಾಂಗಣದಲ್ಲಿ ನಾಗಲೋಟದಲ್ಲಿದ್ದಾರೆ. ಅದಿರಲಿ, ಕನ್ನಡದ ನಂಬರ್ ಪಟ್ಟದ ಮೇಲೆ ಡಿಂಪಲ್ ಕ್ವೀನ್  ಪವಡಿಸಿರುವುದರ ಹಿಂದಿನ ಇನ್ನೊಂದು ಸತ್ಯ ಈಗ ಅವರಿಂದಲೇ ರಿವೀಲ್ ಆಗಿದೆ.

 “ನನ್ನ ಬಳಿಯೊಂದು ವೈಟ್ ವ್ಯಾನಿಟಿ ಬ್ಯಾಗ್‌ಇದೆ. ಅದನ್ನು ನನ್ನ ಬಳಿ ಬಂದ‌ ಮೇಲೆ ನಿಜಕ್ಕೂ ಒಳ್ಳೆಯದೆ ಆಗಿದೆ. ಸಾಕಷ್ಟು ಅವಕಾಶಗಳು ಬಂದಿವೆ. ಒಂದಷ್ಟು ಸಂಪಾದನೆಯೂ ಆಗಿದೆ. ಲಕ್ ಅಂತಾರಲ್ಲ ಹಾಗೆ ನನ್ನ ಪಾಲಿಗೆ ಆ ವ್ಯಾನಿಟಿ ಬ್ಯಾಗ್”

ಎನ್ನುವ ಮೂಲಕ‌‌ ತಮ್ಮ ಸಕ್ಸಸ್ ಫುಲ್ ಜರ್ನಿಯ ಹಿಂದಿನ ರಹಸ್ಯ ವನ್ನು ಕಲರ್ಸ್ ಕನ್ನಡದ ಮಜಾ‌ಭಾರತ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದಾರೆ ರಚಿತಾ ರಾಮ್. ಅವರಿಗೆ ಮತ್ತಷ್ಟು ಅವಕಾಶ ಸಿಗಲಿ. ಡಿಂಪಲ್ ಕ್ವೀನ್ ಎಂಬ ಖ್ಯಾತಿಯ ಜತೆಗೆ ಸ್ಯಾಂಡಲ್ ವುಡ್ ಕ್ವೀನ್ ಎನ್ನುವ ಪಟ್ಟವೂ ಸಿಗಲಿ ಎನ್ನುವುದು  ‘ಸಿನಿ‌ಲಹರಿ‌’  ಹಾರೈಕೆ.

Categories
ಸಿನಿ ಸುದ್ದಿ

ಲವ್‌ ಹಾಸ್ಟೆಲ್‌ನಲ್ಲಿ ನಿಂತ ಶಾರುಖ್!

ಹೊಸ ಸಿನ್ಮಾ ನಿರ್ಮಾಣಕ್ಕೆ ಕೈ ಹಾಕಿದ ಬಾಲಿವುಡ್‌ ಬಾದ್‌ಶಾ

ಶಾರುಖ್‌ಖಾನ್‌ ಸದ್ಯಕ್ಕೆ ಐಪಿಎಲ್‌ ಪಂದ್ಯಾವಳಿಯಲ್ಲೇ ಬಿಝಿಯಾಗಿದ್ದಾರೆ. ಅಷ್ಟಕ್ಕೂ ಅವರ ಮುಂದಿನ ಸಿನಿಮಾ ಯಾವುದು ಅನ್ನುವುದಕ್ಕೆ ಇದುವರೆಗೆ ಉತ್ತರವಿರಲಿಲ್ಲ. ಇದೀಗ ಅವರೇ ಸ್ವತಃ ಹೊಸ ಚಿತ್ರ ಮಾಡುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಹೌದು, ಬಾಲಿವುಡ್‌ ನಟ ಶಾರುಖ್‌ ಖಾನ್‌ ಕಳೆದ ಎರಡು ವರ್ಷಗಳಿಂದಲೂ ಯಾವುದೇ ಸಿನಿಮಾ ಘೋಷಣೆ ಮಾಡಿರಲಿಲ್ಲ. ತಮ್ಮ ಬಹು ಕನಸಿನ “ಜೀರೋ” ಸಿನಿಮಾ ನಂತರ ಹೊಸದೊಂದು ಮ್ಯಾಜಿಕ್‌ ಆಗುತ್ತೆ ಅಂದುಕೊಂಡಿದ್ದರು. ಆದರೆ, ಅವರು ಅಂದುಕೊಂಡಂತಹ ದೊಡ್ಡ ಮ್ಯಾಜಿಕ್‌ ನಡೆಯಲೇ ಇಲ್ಲ. “ಜೀರೋ” ಕೂಡ ಪ್ರೇಕ್ಷಕ ಪ್ರಭುವಿನ ಮನಸ್ಸನ್ನು ತಟ್ಟಲಿಲ್ಲ. ಹಾಗಾಗಿ ಅವರು ಈಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಹಾಗಂತ ಶಾರುಖ್‌ ಖಾನ್‌ ಅವರು ನಟಿಸುತ್ತಿದ್ದಾರಾ? ಈ ಪ್ರಶ್ನೆಗೆ ಉತ್ತರ, ಖಂಡಿತ ಇಲ್ಲ. ಅವರು ತಮ್ಮ ರೆಡ್‌ ಚಿಲ್ಲಿಸ್‌ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಡಿ ಹೊಸದೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ ಎಂಬುದು ಸುದ್ದಿ.

 

ಆ ಸಿನಿಮಾಗೆ “ಲವ್‌ ಹಾಸ್ಟೆಲ್‌” ಎಂಬ ಹೆಸರನ್ನಿಡಲಾಗಿದೆ. ಅಂದಹಾಗೆ, “ಲವ್‌ ಹಾಸ್ಟೆಲ್‌” ಕ್ರೈಂ ಥ್ರಿಲ್ಲರ್‌ ಕಥೆ ಹೊಂದಿದೆ. ಈ ಚಿತ್ರಕ್ಕೆ ಶಂಕರ್‌ ರಾಮನ್‌ ನಿರ್ದೇಶನವಿದೆ. ಗೌರಿ ಖಾನ್‌ ಮತ್ತು ಮನೀಶ್‌ ಮುಂದ್ರ, ಗೌರವ್‌ ವರ್ಮಾ ಅವರು ಜೊತೆಗೂಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಹೊಸ ಚಿತ್ರದಲ್ಲಿ ಸನ್ಯ ಮಲ್ಹೋತ್ರ, ವಿಕ್ರಾಂತ್ ಮಸ್ಸಿ, ಮತ್ತು ಬಾಬಿ ಸೇರಿದಂತೆ ಇತರರು ನಟಿಸುತ್ತಿದ್ದಾರೆ. ಮುಂದಿನ ವರ್ಷ ಶುರುವಾಗಲಿದ್ದು, ವರ್ಷದ ಅಂತ್ಯದಲ್ಲಿ ಬಿಡುಗಡೆ ಕಾಣುವ ಸಾಧ್ಯತೆ ಇದೆ.
ಹಾಗಾದರೆ, ಶಾರುಖ್‌ಖಾನ್‌ ನಟಿಸೋದು ಯಾವಾಗ? ಅವರ ಮುಂದಿನ ಚಿತ್ರ ಯಾವುದು? ಇದಕ್ಕಿನ್ನೂ ಉತ್ತರವಿಲ್ಲ. ಆದರೆ, ತಮಿಳು ನಿರ್ದೇಶಕ ಅಟ್ಲಿ ಹಾಗೂ ರಾಜ್‌ಕುಮಾರ್‌ ಹಿರಾನಿ ಮತ್ತು ಸಿದ್ಧಾರ್ಥ್‌ ಆನಂದ ನಿರ್ದೇಶಕರ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕಿನ್ನೂ ಸ್ಪಷ್ಟತೆ ಇಲ್ಲ.

Categories
ಸಿನಿ ಸುದ್ದಿ

ಎಲ್ಲರೂ ಪ್ರೀತಿಸುತ್ತ ಬಾಳೋಣ ಜಗ್ಗೇಶ್‌ ನುಡಿಮುತ್ತು

ಇರೋ ತನಕ ಸಂಬ‍ಂಧ, ಹೋದ ಮೇಲೆ ನೆನಪು ಮಾತ್ರ!

ಜಗ್ಗೇಶ್‌ ಸದಾ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಅವರು ಹಾಕುವ ಒಂದೊಂದು ಸ್ಟೇಟಸ್‌ನಲ್ಲೂ ಸಾಕಷ್ಟು ಸಂದೇಶ ಅಡಗಿರುತ್ತೆ. ಅವರು ಆಗಾಗ ತಮ್ಮ ಟ್ವಿಟರ್‌ ಖಾತೆಯಲ್ಲಿ, ಫೇಸ್‌ಬುಕ್‌ ಖಾತೆಯಲ್ಲಿ ಒಂದಷ್ಟು ಫೋಟೋ ಜೊತೆ ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಜಗ್ಗೇಶ್‌ ಬರೆದುಕೊಂಡಿದ್ದೇನು ಗೊತ್ತಾ?

ಅವರೇ ಬರೆದುಕೊಂಡ ಬರಹವಿದು…
“ಇರುವವರೆಗೂ ಸಂಬಂಧಗಳು, ಹೋದ ಮೇಲೆ ನೆನಪು ಮಾತ್ರ…” ಹೀಗೆ ಬರೆದುಕೊಂಡು ಅದರೊಂದಿಗೆ ತಮ್ಮ ಪತ್ನಿ ಪರಿಮಳ, ಮಕ್ಕಳಾದ ಗುರುರಾಜ್‌, ಯತಿ ಜಗ್ಗೇಶ್‌ ಹಾಗು ಸೊಸೆ, ಮೊಮ್ಮಗನೊಂದಿಗಿನ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಾಕಿದ್ದಾರೆ. ಅಷ್ಟಕ್ಕೂ ಈ ಫೋಟೋ ಹಾಕಿಕೊಂಡು ಬರೆದಿಕೊಂಡಿರುವ ಜಗ್ಗೇಶ್‌, ಪರಿಮಳ ಜಗ್ಗೇಶ್‌ ಅವರ ಹುಟ್ಟುಹಬ್ಬದ ವೇಳೆ. ಇತ್ತೀಚೆಗೆ ಪರಿಮಳ ಜಗ್ಗೇಶ್‌ ಅವರ ಹುಟ್ಟುಹಬ್ಬವನ್ನು ಕುಟುಂಬದವರೆ ಸೇರಿ ಆಚರಿಸಿಕೊಂಡಿದ್ದಾರೆ. “ಮಡದಿ ಪರಿಮಳನಿಗೆ ಸಣ್ಣ ಸಂತೋಷ ನೀಡಿದ ಪುಟ್ಟ ಸಂಸಾರದ ಸದಸ್ಯರು. ಭೂಮಿಯಲ್ಲಿ ಇರುವಷ್ಟು ದಿನ ಮಾತ್ರ ಸಂತೋಷ ಸಂಬಂಧ, ನಂತರ ನೆನಪು ಮಾತ್ರದ ನಶ್ವರ ಜಗತ್ತು. ಸಾಧ್ಯವಾದಷ್ಟು ಸಂತೋಷ ಪಡೆದು ಹಂಚಿ ಬಾಳಿಬಿಡಬೇಕು. ಇರುವವರೆಗು ಸಂಬಂಧಗಳು ಹೋದಮೇಲೆ ನೆನಪು ಮಾತ್ರ. ಬದುಕಿನ ಚಿತ್ರಕಥೆ ದೇವರಿಂದ ಬರೆಯಲ್ಪಟ್ಟ ಕಥಾಸಂಗಮ. ನಾವೆಲ್ಲಾ ಪಾತ್ರದಾರಿಗಳು ಮಾತ್ರ. ನಮ್ಮ ಬದುಕಿನ ಅದ್ಭುತ ಚಿತ್ರಕಥೆ ಬರೆದು ಅದರಲ್ಲಿ ಕೋಟ್ಯಂತರ ಪ್ರೀತಿಸುವ ನಿಮ್ಮ ಆತ್ಮಗಳನ್ನು ನಮ್ಮ ಬದುಕಿಗೆ ಸೇರಿಸಿದ ದೇವರಿಗೆ ಧನ್ಯವಾದ. ಪ್ರೀತಿಸುತ್ತ ಬಾಳುವ. ಪ್ರೀತಿ ದೇವರ ಇನ್ನೊಂದು ರೂಪ” ಎಂದು ಅರ್ಥಪೂರ್ಣವಾಗಿ ಬರೆದುಕೊಂಡಿದ್ದಾರೆ.

Categories
ಸಿನಿ ಸುದ್ದಿ

ರಾಜಕೀಯದ ಜತೆಗೆ ಚಿತ್ರರಂಗಕ್ಕೂ ಕಾಲಿಟ್ಟ ಕರ್ನಾಟಕದ ಸಿಂಗಂ!

( exclusive cinilahari)

ಅರಬ್ಬಿ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ‌ ಐಪಿಎಸ್ ಅಧಿಕಾರಿ ಅಣ್ಣಾಮಲೈ , ಮೊನ್ನೆ ಮೊನ್ನೆಯಷ್ಠೇ ರಾಜಕೀಯ ಅಖಾಡಕ್ಕೆ ಪ್ರವೇಶಿಸಿದರು‌. ಪ್ರಧಾನಿ‌ ಮೋದಿ ಅವರ ಕಾರ್ಯವೈಖರಿಗೆ ಪ್ರಭಾವಿತರಾಗಿದ್ದ ಅವರು, ಬಿಜೆಪಿಗೆ ಅಧಿಕೃತ ವಾಗಿ ಸೇರ್ಪಡೆಗೊಂಡಿದ್ದು ನಿಮಗೂ ಗೊತ್ತು. ಇದೀಗ ಅವರ ಮತ್ತೊಂದು ಸಂಗತಿ ರಿವೀಲ್ ಆಗಿದೆ. ರಾಜಕೀಯ ರಂಗ ಪ್ರವೇಶಿಸಿದ ಬೆನ್ನಲೇ ನಟರಾಗಿ ಈಗ ಸಿನಿಮಾ ರಂಗಕ್ಕೂ ಎಂಟ್ರಿಯಾಗುತ್ತಿದ್ದಾರೆ. ರಾಜಕೀಯಕ್ಕೆ ತಮ್ನ ಸ್ವಂತ ಊರು ತಮಿಳುನಾಡನ್ನೇ ಕರ್ಮಭೂಮಿಯನ್ನಾಗಿ ಸ್ವೀಕರಿಸಿರುವ ಅವರು, ಬಣ್ಣದ ಬದುಕನ್ನು ಕರ್ನಾಟಕದಿಂದ ಆರಂಭಿಸುತ್ತಿದ್ದಾರೆ‌. ರಾಜು ಪಾವಗಡ ನಿರ್ದೇಶನದ’ ಅರಬ್ಬಿ’ ಹೆಸರಿನ ಚಿತ್ರಕ್ಕಾಗಿ ಅವರು ಇದೇ ಮೊದಲು ನಟರಾಗಿ ಬಣ್ಣ ಹಚ್ಚಿದ್ದಾರೆ‌.

ಅಷ್ಟೇ ಅಲ್ಲ, ಎರಡು ದಿನಗಳ ಕಾಲ ಬೆಂಗಳೂರು ಹಾಗೂ ರಾಮನಗರ ಸಮೀಪದ ಜಾನಪದ ಲೋಕದಲ್ಲಿ ನಡೆದ ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ. ಇದನ್ನು ಚಿತ್ರ ತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ‌. ಸದ್ಯಕ್ಕೆ ಭಾರೀ ಸುದ್ದಿಯಲ್ಲಿರುವ ಅಣ್ಣಾಮಲೈ ಅವರನ್ನು ‘ಅರಬ್ಬಿ ಚಿತ್ರ ತಂಡ’ ಇದೇ ಮೊದಲು, ಸಿನಿಮಾಕ್ಕೆ ಕರೆ ತಂದಿರು ವುದೇ ಕುತೂಹಲ ಕಾರಿಯಾದ ಸಂಗತಿ. ಅ ಬಗ್ಗೆ ಅತೀವ ಸಂತಸದಲ್ಲಿರುವ ನಿರ್ದೇಶಕ ರಾಜು ಪಾವಗಡ, ಕರ್ನಾಟಕದ ಸಿಂಗಂ ಅಣ್ಣಾಮಲೈ ಅವರನ್ನು ಚಿತ್ರಕ್ಕೆ ಕರೆತಂದಿದ್ದು ಹೇಗೆ, ಯಾವ ರೀತಿಯ ಪಾತ್ರಕ್ಕೆ ಅಣ್ಣಾಮಲೈ ಅವರು ಬಣ್ಣ ಹಚ್ಚಿದ್ದಾರೆ, ಅವರನ್ನೇ ಯಾಕೆ ಚಿತ್ರ ತಂಡ ಆಯ್ಕೆ ಮಾಡಿಕೊಂಡಿತು ಎನ್ನುವ ಬಗ್ಗೆ ಚಿತ್ರದ ನಿರ್ದೇಶಕ ರಾಜು ಪಾವಗಡ ಉತ್ತರಿಸಿದ್ದಾರೆ.

‘ ನಮ್ಮ ಪಾಲಿಗೆ ಇದೊಂದು ಹೆಮ್ಮೆಯ ಸಂಗತಿ. ಅವರು ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಯಾದ ನಂತರ ಸಿನಿಮಾ‌, ಗಿನಿಮಾ ಅಂತ ಬರುತ್ತಾರೋ ಇಲ್ಲವೋ ಅಂತ ಅನುಮಾನ ಇತ್ತು‌. ಆದರೆ ಅವರನ್ನು ಸಂಪರ್ಕಿಸಿ, ನಮ್ಮ ಚಿತ್ರದಲ್ಲಿನ ವಿಶೇಷ ಪಾತ್ರದಲ್ಲಿ ಅಭಿನಯಿಸಬೇಕು ಅಂತ ಕೇಳಿಕೊಂಡಾಗ ಆಯ್ತು ನೋಡೋಣ ಅಂದಿದ್ದರು. ಆದರೂ ಅನುಮಾನ ಇತ್ತು. ಕೊನೆಗೂ ಅವರು ನಮ್ಮ ಮನವಿಗೆ ಮನ್ನಣೆ ನೀಡಿ,
ಚಿತ್ರೀಕರಣಕ್ಕೆ ಬಂದರು‌. ಎರಡು ದಿವಸ ಚಿತ್ರೀಕರಣದಲ್ಲಿ ಭಾಗವಹಿಸಿದರು. ಬೆಂಗಳೂರು ಹಾಗೂ ರಾಮನಗರದ ಜಾನಪದ ಲೋಕದಲ್ಲಿ‌ಚಿತ್ರೀಕರಣ ನಡೆಯಿತು‌.‌ ಚಿತ್ರೀಕರಣಕ್ಕೆ ಅವರು‌ ತುಂಬಾ ಸಪೋರ್ಟ್ ಮಾಡಿದರು’ ಎನ್ನುತ್ತಾರೆ ನಿರ್ದೇಶಕ ರಾಜು ಪಾವಗಡ. ಇನ್ನು‌ ಕುತೂಹಲ ಇರೋದು ಅಣ್ಣಾಮಲೈ ಅವರ ಪಾತ್ರ.


ಅಂತಾರಾಷ್ಟ್ರೀಯ ಈಜು ಪಟು ವಿಶ್ವಾಸ್ ಅವರ ಜೀವನ ಕುರಿತ ಚಿತ್ರವೇ ‘ಅರಬ್ಬಿ’.ಈ‌ ಚಿತ್ರದಲ್ಲಿ ವಿಶ್ವಾಸ್ ಕೋಚ್ ಆಗಿ ಅಣ್ಣಾಮಲೈ ಕಾಣಿಸಿಕೊಳ್ಳುತ್ತಿದ್ದಾರೆ‌. ಚಿತ್ರೀಕರಣದ ಸಮಯದಲ್ಲಿ ಅವರೊಂದಿಗೆ ತಮಿಳು ಚಿತ್ರ ನಿರ್ದೇಶಕ ಡೆಸಿಂಗ್ ಪೆರಿಯ ಸ್ವಾಮಿ ಭಾಗವಹಿಸಿದ್ದರು.

Categories
ಸಿನಿ ಸುದ್ದಿ

ಗುಡ್‌ ಗುಡ್ಡರ್‌ ಗುಡ್ಡೆಸ್ಟ್…!‌ ವಿನೂತನ ಚಿತ್ರ

ಹೊಸಬರ ಹೊಸ ಪ್ರಯತ್ನ, ಪ್ರಯೋಗ

ನಿರ್ದೇಶಕ ಸಂದೀಪ್‌ ಬಿ.ಹೆಚ್

ಕನ್ನಡ ಚಿತ್ರರಂಗ ಇದೀಗ ಗರಿಗೆದರಿದೆ. ಕಳೆದ ಏಳೆಂಟು ತಿಂಗಳಿನಿಂದಲೂ ಕೊರೊನಾ ಹೊಡೆತಕ್ಕೆ ಮೆತ್ತಗಾಗಿದ್ದ ಚಿತ್ರರಂಗ ಇದಿಗ ಪುನಃ ಪುಟಿದೇಳುತ್ತಿದೆ. ಹೌದು, ಕೊರೊನಾ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದ್ದ ಚಿತ್ರರಂಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಕಳೆದ ಅಕ್ಟೋಬರ್ ಎರಡನೇ ವಾರದಿಂದ‌ ಕೆಲವು ಚಿತ್ರಗಳು ಮರುಬಿಡುಗಡೆಯಾಗುವ ಮೂಲಕ ಚಿತ್ರಮಂದಿರಕ್ಕೆ ಬರಲು ನಾವ್‌ ರೆಡಿ ಎಂಬುದನ್ನು ಸಾಬೀತುಪಡಿಸಿವೆ. ಅದಕ್ಕೆ ತಕ್ಕಂತೆ ಸಿನಿಮಾ ಪ್ರೇಕ್ಷಕರು ಕೂಡ ಸಿನಿಮಾರಂಗದ ಬೆನ್ನುತಟ್ಟುವ ಕೆಲಸ ಮಾಡಿದ್ದಾರೆ. ಹಾಗೆ ನೋಡಿದರೆ, ಸ್ಟಾರ್‌ ನಟರ ಜೊತೆ ಸಾಕಷ್ಟು ಹೊಸಬರ ಚಿತ್ರಗಳು ಸೆಟ್ಟೇರಿವೆ ಎಂಬುದು ವಿಶೇಷ. ಇನ್ನೂ ಒಂದಷ್ಟು ಹೊಸಬರ ಚಿತ್ರಗಳು ಈ ವರ್ಷವೇ ಸೆಟ್ಟೇರಲು ಸಜ್ಜಾಗಿವೆ. ಕೆಲ ಚಿತ್ರಗಳು ಶೀರ್ಷಿಕೆ ಅನಾವರಣ ಮಾಡಲು ತಯಾರು ನಡೆಸಿವೆ. ಆ ಸಾಲಿಗೆ ಸಂದೀಪ್‌ ಬಿ.ಹೆಚ್.‌ ನಿರ್ದೇಶನದ ಹೊಸ ಸಿನಿಮಾವೂ ಒಂದು. ಅವರು ತಮ್ಮ ಚಿತ್ರಕ್ಕೆ ಹೊಸ ಬಗೆಯ ಶೀರ್ಷಿಕೆ ಇಟ್ಟಿದ್ದಾರೆ ಅನ್ನೋದೇ ವಿಶೇಷತೆಗಳಲ್ಲೊಂದು. ಇನ್ನೊಂದು ವಿಶೇಷವೆಂದರೆ, ನವೆಂಬರ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ, ಶುಭ ಹಾರೈಸಲಿದ್ದಾರೆ.

 

ನಿರ್ಮಾಪಕ ಸುರೇಶ್‌ ಬಿ.

ಗ್ರಾಮರ್‌ ಮತ್ತು ಗ್ಲಾಮರ್
ಅಷ್ಟಕ್ಕೂ ಸಂದೀಪ್‌ ತಮ್ಮ ನಿರ್ದೇಶನದ ಚಿತ್ರಕ್ಕೆ ಇಟ್ಟುಕೊಂಡಿರುವ ಹೆಸರೇನು ಗೊತ್ತಾ? “ಗುಡ್‌ ಗುಡ್ಡರ್‌ ಗುಡ್ಡೆಸ್ಟ್”.‌ ಈ ಶೀರ್ಷಿಕೆ ನೋಡಿದಾಕ್ಷಣ, ವಿಭಿನ್ನ ಎನಿಸದೇ ಇರದು. ಕಥೆಗೆ ಪೂರಕವಾಗಿಯೇ ಈ ಶೀರ್ಷಿಕೆ ಇಟ್ಟಿದ್ದಾರಂತೆ ಸಂದೀಪ್.‌ ತಮ್ಮ ಶೀರ್ಷಿಕೆ ಕುರಿತು ನಿರ್ದೇಶಕ ಸಂದೀಪ್‌ ಹೇಳುವುದಿಷ್ಟು. “ಗ್ರಾಮೀಣ ಭಾಗದಲ್ಲಿ ಗ್ರಾಮರ್‌ ಬರದಂತಹ ಹುಡುಗರು ಮಾಡುವ ಜೋಕ್‌ ಇಟ್ಟುಕೊಂಡೇ ಈ ಶೀರ್ಷಿಕೆ ಇಡಲಾಗಿದೆ. ಗುಡ್‌ ಅಂದರೆ ಉತ್ತಮ, ಗುಡ್ಡರ್‌ಗೆ ಅತ್ಯುತ್ತಮ, ಗುಡ್ಡೆಸ್ಟ್‌ಗೆ ಸರ್ವೋತ್ತಮ ಎಂಬ ಅರ್ಥ ಗ್ರಾಮೀಣ ಹುಡುಗರದು. ಕಥೆಯಲ್ಲಿ ಬರುವ ಹಂತಗಳಲ್ಲಿ ಈ ಗ್ರಾಮೀಣ ಗ್ರಾಮರ್‌ ಬಳಕೆಯಾಗಲಿದೆ. ಇಲ್ಲಿ ಬ್ಯಾಡ್‌ ಗ್ರಾಮರ್‌ ಇದ್ದರೂ, ಗ್ರಾಮೀಣದ ಕೆಲ ಹುಡುಗರಿಗೆ ಅದು ಒಂದು ರೀತಿ ಕರೆಕ್ಟ್‌ ಗ್ರಾಮರ್. ಅದನ್ನಿಟ್ಟುಕೊಂಡು ಶೀರ್ಷಿಕೆ ಇಡಲಾಗಿದೆ. ಸಿನಿಮಾ ನೋಡಿದವರಿಗೆ ಶೀರ್ಷಿಕೆ ಕೂಡ ಪೂರಕ ಅನ್ನೋದು ಗೊತ್ತಾಗುತ್ತೆ.‌ ಇನ್ನು, ಗ್ರಾಮರ್‌ ಕುರಿತ ವಿಷಯವಿದ್ದರೂ, ಗ್ಲಾಮರ್‌ಗೂ ಇಲ್ಲಿ ಕಮ್ಮಿ ಇಲ್ಲ. ಗ್ರಾಮರ್‌ ಜೊತೆಯಲ್ಲಿ ಗ್ಲಾಮರ್‌ಗೂ ಇಲ್ಲಿ ಜಾಗವಿದೆ. ಹಾಗಾಗಿ ಗ್ಲಾಮರ್‌ ಎಷ್ಟಿದೆ, ಗ್ರಾಮರ್‌ ಎಷ್ಟಿದೆ ಅನ್ನುವುದನ್ನೂ ಚಿತ್ರದಲ್ಲೇ ನೋಡಬೇಕು. ಅದೇನೆ ಇದ್ದರೂ, ಸಿನಿಮಾ ಗ್ರಾಮರ್‌ ಇಟ್ಟುಕೊಂಡೇ ಸಿನಿಮಾ ಮಾಡುತ್ತಿದ್ದರೂ, ಹೇಳುವ ವಿಷಯದಲ್ಲಿ ಮಾತ್ರ ಸ್ಪಷ್ಟತೆ ಇರಲಿದೆ. ಹೊಸ ಪ್ರಯತ್ನದ ಜೊತೆಯಲ್ಲಿ ಪ್ರಯೋಗವೂ ಇಲ್ಲಿರಲಿದೆ” ಎನ್ನುತ್ತಾರೆ ಸಂದೀಪ್.

 

ಕನಸಿನ ಸಿನಿಮಾ
ಇನ್ನು, ಈ ಚಿತ್ರದ ಮೂಲಕ ನಿರ್ದೇಶಕನ ಪಟ್ಟ ಅಲಂಕರಿಸುತ್ತಿರುವ ಸಂದೀಪ್‌ ಬಗ್ಗೆ ಹೇಳುವುದಾದರೆ, ಇದು ಇವೆ ಚೊಚ್ಚಲ ನಿರ್ದೇಶನದ ಸಿನಿಮಾ. ಪಕ್ಕಾ ಅನುಭವ ಪಡೆದುಕೊಂಡೇ ಅವರು ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಸರಿ ಸುಮಾರ 17 ವರ್ಷಗಳಿಂದಲೂ ಕನ್ನಡ ಚಿತ್ರರಂಗವನ್ನು ಬಲ್ಲವರು. ಇಷ್ಟು ವರ್ಷಗಳ ಕಾಲ ಪಕ್ವಗೊಂಡು ಈಗ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.
ತಮ್ಮ ಚೊಚ್ಚಲ ಪ್ರಯತ್ನದ ಕುರಿತು “ಸಿನಿ ಲಹರಿʼ ಜೊತೆ ಮಾತನಾಡುವ ನಿರ್ದೇಶಕ ಸಂದೀಪ್‌, “ಇದು ನನ್ನ ಕನಸಿನ ಚಿತ್ರ. ಇಷ್ಟು ವರ್ಷಗಳ ಅನುಭವಗಳನ್ನು ಈ ಸಿನಿಮಾಗೆ ಸುರಿಯುತ್ತಿದ್ದೇನೆ. ನನ್ನ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿರೋದು ನಿರ್ಮಾಪಕರಾದ ಸುರೇಶ ಬಿ. ಅವರಿಗೂ ಇದು ಮೊದಲ ಪ್ರಯತ್ನ. ಅವರಿಗೆ ಪ್ಯಾಷನ್‌ ಇರುವುದರಿಂದಲೇ ಹೊಸ ಬಗೆಯ ಕಥೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟು, ನಮ್ಮಂತಹ ಹೊಸಬರಿಗೆ ಬೆನ್ನು ತಟ್ಟುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಹೇಳುವುದಾದರೆ, ಇದೊಂದು ಡಾರ್ಕ್‌ ಹ್ಯೂಮರ್‌ ಸೆಟೈರ್‌ ಕಾಮಿಡಿ ಚಿತ್ರ. ಇದರೊಂದಿಗೆ ರೊಮ್ಯಾನ್ಸ್‌, ಥ್ರಿಲ್ಲರ್‌, ಡ್ರಾಮಾ, ಕ್ರೈಮ್‌, ಸ್ಟಂಟ್ಸ್‌ ಸೇರಿದಂತೆ ಇತ್ಯಾದಿ ಅಂಶಗಳೂ ಸೇರಿವೆ. ಇದು ಒಂದೇ ಜಾನರ್‌ಗೆ ಸೇರುವ ಸಿನಿಮಾವಲ್ಲ. ಹಲವು ಜಾನರ್‌ಗಳ ಸಮ್ಮಿಶ್ರಣವಿದೆ. ಹಾಗಾಗಿ ನನ್ನ ಪ್ರಕಾರ ಇದು ಕನ್ನಡಕ್ಕೆ ಹೊಸ ಪ್ರಯತ್ನ.

 

ಇಲ್ಲಿ ಎಲ್ಲವೂ ವಿಶೇಷ
ಇನ್ನು, ಚಿತ್ರಕಥೆಯೇ ಚಿತ್ರದ ಜೀವಾಳ. ಅದರಲ್ಲೂ ಅದು ವಿಭಿನ್ನವಾಗಿ ಮೂಡಿಬರಲಿದೆ. ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲೂ ಮೂರು ಆ್ಯಕ್ಟ್‌ ಸ್ಟ್ರಕ್ಚರ್ಸ್‌ ಇದ್ದರೆ, ಇಲ್ಲಿ ಆರು ಆ್ಯಕ್ಟ್‌ ಸ್ಟ್ರಕ್ಚರ್ಸ್‌ ಇರಲಿದೆ. ಹೇಗೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಪ್ರಮಖ ಪಾತ್ರಗಳೊಂದಿಗೆ 80 ಕ್ಕೂ ಹೆಚ್ಚು ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಆ ಎಲ್ಲಾ ಪಾತ್ರಗಳಿಗೂ ತನ್ನದೇ ಆದಂತಹ ವಿಶೇಷತೆಗಳಿವೆ. ಇನ್ನುಳಿದಂತೆ ರಂಗಶಂಕರ, ನೀನಾಸಂ, ಮಾಲ್ಗುಡಿ ಡೇಸ್‌ನಲ್ಲಿ ಕೆಲಸ ಮಾಡಿದ ಹಿರಿಯ ರಂಗಕಲಾವಿದರು ಇಲ್ಲಿರಲಿದ್ದಾರೆ. ಸುಮಾರು 45 ದಿನಗಳ ಕಾಲ ಬೆಂಗಳೂರಲ್ಲೇ ಚಿತ್ರೀಕರಣ ನಡೆಸುವ ಯೋಚನೆ ಇದೆ” ಎಂದು ವಿವರ ಕೊಡುತ್ತಾರೆ ಸಂದೀಪ್‌ ಬಿ.ಹೆಚ್.‌

ಚಿತ್ರಕ್ಕೆ ನಾಯಕ ಮತ್ತು ನಾಯಕಿಯ ಅಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ತಂತ್ರಜ್ವರ ಆಯ್ಕೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಎಲ್ಲವೂ ಪೂರ್ಣಗೊಂಡ ಬಳಿಕ ಸಿನಿಮಾಗೆ ಚಾಲನೆ ಸಿಗಲಿದೆ.

error: Content is protected !!