ಈ ಸ್ಟಾರ್ಸ್ ಒಂದಾಗಬೇಕೆಂಬ ಹಂಬಲ
ಅಭಿಮಾನಿಗಳ ಅಭಿಮಾನವೇ ಅಂಥದ್ದು. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳಿಗೆ ತಮ್ಮ ಹೀರೋಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಈ ಇಬ್ಬರೂ ಒಳ್ಳೆಯ ಗೆಳೆಯರಾಗಿದ್ದರು. ಆ ಬಳಿಕ ಇಬ್ಬರ ನಡುವೆ ಮುನಿಸು ಶುರುವಾಯಿತು. ಅದಾದ ಮೇಲೆ ಅವರವರ ಅಭಿಮಾನಿಗಳ ಮಧ್ಯೆಯೂ ಬಿರುಕು ಉಂಟಾಯಿತು. ಇದನ್ನು ಬಳಸಿಕೊಂಡ ಅನೇಕರು ವಿವಾದ ಹುಟ್ಟುಹಾಕುವ ಪ್ರಯತ್ನವನ್ನೂ ಮಾಡಿದರು. ಆ ನಂತರ ಅಭಿಮಾನಿಗಳ ಮಧ್ಯೆ ಆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಈ ಇಬ್ಬರು ನಟರು ಮುನಿಸು ಬಿಟ್ಟು, ಒಂದಾಗಬೇಕು ಅನ್ನೋದು ಹಲವರ ಬಯಕೆ. ಅದು ಚಿತ್ರರಂಗದ್ದೂ ಹೌದು, ಅಭಿಮಾನಿಗಳದ್ದೂ ಹೌದು. ಆದರೆ, ಅದೇನೋ ಗೊತ್ತಿಲ್ಲ. ಈ ಇಬ್ಬರು ನಟರು ಮೊದಲಿನಂತೆ ಇರಬೇಕೆಂಬ ಆಸೆ ಒಂದಷ್ಟು ಜನರಿಗಂತೂ ಇದೆ.
ಈ ನಿಟ್ಟಿನಲ್ಲಿ ಕಲಾವಿದ ಕರಣ್ ಆಚಾರ್ಯ ಅವರು ರಾಮ ಲಕ್ಷ್ಮಣರಂತೆ ಹೋಲುವ ಕಲಾಕೃತಿ ರಚಿಸಿದ್ದಾರೆ. ಅದೀಗ “ಚಾಲೆಂಜಿಂಗ್ ಸ್ಟಾರ್ ದರ್ಶನ್-ಅಭಿನಯ ಚಕ್ರವರ್ತಿ ಕಿಚ್ಚ” ಫ್ಯಾನ್ಸ್ ಗ್ರೂಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕರಣ್ ಆಚಾರ್ಯ ಅವರ ಕಲಾಕೃತಿಯನ್ನು ಶೇರ್ ಮಾಡಿದ್ದಾರೆ. “ಈ ಅದ್ಭುತ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಕರಣ್ ಆಚಾರ್ಯ ಬ್ರದರ್, ನಮ್ಮ ದಚ್ಚು ಬಾಸ್, ಕಿಚ್ಚ ಬಾಸ್ ಇಬ್ಬರೂ ರಾಮ ಲಕ್ಷ್ಮಣ, ಸೂರ್ಯ, ಚಂದ್ರ ಇದ್ದ ಹಾಗೆ. ನಮ್ಮಂತಹ ಅಭಿಮಾನಿಗಳಿಗೆ ದೇವರುಗಳು” ಎಂದು ಬರೆದುಕೊಳ್ಳುವ ಮೂಲಕ ಅಭಿಮಾನದ ಪ್ರೀತಿ ತೋರಿದ್ದಾರೆ.
ಅದೇನೆ ಇರಲಿ, ಅಭಿಮಾನಿಗಳಿಗೆ ತಮ್ಮ ಸ್ಟಾರ್‌ಗಳು ಜೊತೆಯಾಗಬೇಕೆಂಬ ಬಯಕೆ ಇದೆ. ಇನ್ನೇನಿದ್ದರೂ ಈ ಸ್ಟಾರ್‌ಗಳು ಒಂದಾಗುವ ಮೂಲಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ಉತ್ಸಾಹ ಮೂಡಿಸಬೇಕಿದೆ. ಕೊರೊನೊ ಸಮಸ್ಯೆ ಬಳಿಕ ಚಿತ್ರರಂಗ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸ್ಟಾರ್‌ಗಳು ಕೂಡ ಒಂದಾಗುವ ಮೂಲಕ ತಮ್ಮ ಸಿನಿಮಾಗಳನ್ನು ಬೇಗನೇ ಬಿಡುಗಡೆ ಮಾಡಿಸುವ ಮೂಲಕವಾದರೂ, ಚೈತನ್ಯ ತುಂಬುವ ಕೆಲಸ ಮಾಡಬೇಕಿದೆ.