Categories
ಸಿನಿ ಸುದ್ದಿ

ಕನ್ನಡಕ್ಕೊಂದು ಹೆಮ್ಮೆ…ಆಕ್ಟ್ 1978 !

ಕನ್ನಡದ ಮಹಿಳಾ‌ ನಿರ್ದೇಶಕರಲ್ಲಿ ಹೆಚ್ಚು ಕ್ರಿಯಾಶೀಲ ಆಗಿರುವವರು ‘ಟ್ರಂಕ್’ ಚಿತ್ರದ ಖ್ಯಾತಿಯ ನಿರ್ದೇಶಕಿ ರಿಷಿಕಾ ಶರ್ಮಾ.ಇವರು ಕನ್ನಡ ಚಿತ್ರ ರಂಗದ ಭೀಷ್ಮ ಜಿ.ವಿ. ಅಯ್ಯರ್ ಮೊಮ್ಮಗಳು. ನಟಿಯಾಗಿ ಬಂದವರು ಈಗ ನಿರ್ದೇಶನದಲ್ಲೆ ಹೆಚ್ಚು ತೊಡಗಿಸಿಕೊಂಡಿದ್ದಾರೆ. ‘ಟ್ರ‌ಂಕ್’ ನಂತರ ಅವರೀಗ ಬಿಗ್ ಬಜೆಟ್ ನ ಕಮರ್ಷಿಯಲ್ ಚಿತ್ರವೊಂದರ ನಿರ್ದೇಶನದ ಸಿದ್ದತೆಯಲ್ಲಿದ್ದಾರೆ. ಇಷ್ಟರಲ್ಲೇ ಅದರ ವಿವರ ರಿವೀಲ್ ಆಗಲಿದೆ.ಈ ನಡುವೆ ಅವರು ಇತ್ತೀಚೆಗೆ ‘ಆಕ್ಟ್ 1978 ‘ಚಿತ್ರ ನೋಡಿದ್ದರು. ಅದೊಂದು ಸದಭಿರುಚಿಯ ಚಿತ್ರವಾಗಿದ್ದರಿಂದ ಅದು ಹೆಚ್ಚೆಚ್ಚು ಜನರಿಗೆ ತಲುಪಬೇಕು, ಜನರು ಚಿತ್ರ ಮಂದಿರಕ್ಕೆ ಬಂದು ಸಿನಿಮಾ ನೋಡಬೇಕೆನ್ನುವ ಕಾಳಜಿಯೊಂದಿಗೆ ಆ ಸಿನಿಮಾದ ಕುರಿತು ಸಿನಿ‌ಲಹರಿ ಜತೆಗೆ ಒಂದಷ್ಟು ಅನಿಸಿಕೆ ಹಂಚಿಕೊಂಡಿದ್ದು, ಅದರ ಪೂರ್ಣ ವಿವರ ಇಲ್ಲಿದೆ‌.

…………

ನಿರ್ದೇಶಕಿ ರಿಷಿಕಾ‌ ಶರ್ಮಾ‌ ಬರೀತಾರೆ……

 

ಕನ್ನಡಕ್ಕೆ ಒಂದು ಹೆಮ್ಮೆ ಹಾಗೆ ಒಂದು ಅದ್ಭುತ ಸಿನಿಮಾ Act – 1978. ಚಿತ್ರಕ್ಕೆ ಚಿತ್ರದ ಕಥಾ ವಸ್ತು ಬೆನ್ನೆಲುಬು ಆಗಿದ್ದರೆ, ಇದರ ಪಾತ್ರಧಾರಿಗಳು, ಛಾಯಾಗ್ರಹಣ, ಕಲರ್ ಟೋನ್, ಹಿನ್ನೆಲೆ ಸಂಗೀತ ಇವೆಲ್ಲವೂ ಚಿತ್ರದ ಉಸಿರಾಗಿದೆ.

ಬೇರೊಂದು ಜಗತ್ತಿಗೆ ಕರೆದು ಕೊಂಡು ಹೋಗುವ screenplay, ಕಥೆ ಸಾಗಿದಷ್ಟು ಆಳಕ್ಕೆ ಪರಿಚಯಿಸುವ ಪಾತ್ರಗಳು ಹಾಗೂ ಅದರ ದೃಷ್ಟಿ ಕೋನಗಳು, ಇದಿಷ್ಟು ವಿಷಯಗಳು ನಮ್ಮನ್ನು ಅಂದರೆ ಪ್ರೇಕ್ಷಕರನ್ನು ಚಿತ್ರದ heroin ಗೀತಾ ಪಾತ್ರದ ಸ್ವತಃ ಮುಂದೆಯೇ ನಿಂತು, ಆ ಒಂದು ದಿನ – ಬೆಳಗ್ಗೆ ನಿಂದ ಸಂಜೆಯವರೆಗೂ ಅವಳ ಜೀವನದಲ್ಲಿ ಏನು ನಡೀತು ಅನ್ನೋದನ್ನ 2 ಗಂಟೆಗಳ ಒಳಗೆ ಬಹಳ ನೈಜ್ಯವಾಗಿ ಹಾಗೆ ಅದ್ಭುತವಾಗಿ ಸೆರೆ ಹಿಡಿಯುವುದರಲ್ಲಿ ಚಿತ್ರ ತಂಡ ಯಶಸ್ವಿಯಾಗಿದೆ.

ಒಬ್ಬ ಸಾಮಾನ್ಯ ಗರ್ಭಿಣಿ ಮಹಿಳೆ ಹಾಗೂ ಕುಟುಂಬಸ್ಥ ಅವರಿಗೆ ಸರ್ಕಾರಿ ನೌಕರರಿಂದ ಅನ್ಯಾಯ ಆದಾಗ, ಆ ನೌಕರರಿಗೆ ಗೀತಾ ಅವಳ ಪರಿಸ್ಥಿತಿ ಅರ್ಥ ಮಾಡಿಸೋಕೆ, ಅವರಿಗೆ ಒಂದು ಪಾಠ ಕಲಿಸುವುದಕ್ಕೆ ಕೃಷಿ ಇಲಾಖೆ ಕಚೇರಿಯನ್ನು ಈಕೆ ಹ್ಯೂಮನ್ ಬಾಂಬ್ ಹಾಕಿಕೊಂಡು ಸೆರೆ ಹಿಡಿಯುತ್ತಾಳೆ. ಹೇಗೆ ಸೆರೆ ಹಿಡಿದ್ರು? ಮುಂದೆ ಆಕೆಗೆ ನ್ಯಾಯ ಸಿಗತ್ತಾ? ಅನ್ನೋದು ಚಿತ್ರದ ಕಥೆ.

ಕಥೆಯ ಪಾತ್ರಧಾರಿ ಗೀತಾ ಪಾತ್ರದಲ್ಲಿ ಯಜ್ಞಾ ಶೆಟ್ಟಿ, ಕುಟುಂಬಸ್ಥರ ಪಾತ್ರದಲ್ಲಿ ಬಿ. ಸುರೇಶ್, ಪೊಲೀಸ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ನೌಕರರ ಪಾತ್ರದಲ್ಲಿ ನಂದ ಗೋಪಾಲ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನುಳಿದ ಪಾತ್ರಗಳು ಕೂಡಾ ಮನ ಸೆಳೆಯುವಂತೆ ಅಭಿನಯಿಸಿದ್ದಾರೆ.

ಇಂತಹ ಪ್ರಯತ್ನವನ್ನ ಕನ್ನಡಕ್ಕೆ ಚಿತ್ರೀಕರಿಸಿ ಕೊಟ್ಟ ಚಿತ್ರದ ಕ್ಯಾಪ್ಟನ್ ನಿರ್ದೇಶಕ ಮಂಸೋರೆ ಅವರಿಗೆ ಹಾಟ್ಸ್ ಆಫ್. ಕನ್ನಡದಲ್ಲಿ ಇಂತಹದ್ದು ಒಂದು ಸಿನಿಮಾ ಅಚ್ಚುಕಟ್ಟಾಗಿ ಮಾಡಬಹುದು ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಚಿತ್ರದಲ್ಲಿ emotions with entertainment ಒಂದಕ್ಕೊಂದು ಸಾಥ್ ಕೊಡೋದ್ರಲ್ಲಿ ಯಶಸ್ವಿಯಾಗಿದೆ.

ಕನ್ನಡ ಪ್ರೇಕ್ಷಕರೆ ನಿಮ್ಮಲ್ಲಿ ಒಂದು ವಿನಂತಿ 🙏 (Movie Lovers) with all safety measures to avoid #COVID19 spread, request you all to please do support #kannadafilms by watching this classic in theatre. ನಿಮ್ಮ ಪ್ರೋತ್ಸಾಹ ಇರಲಿ 🙏

Categories
ಸಿನಿ ಸುದ್ದಿ

ದಿಗಂತ್‌ ಮಾರಿಗೋಲ್ಡ್‌ ಪೂರ್ಣ – ಮಾಸ್‌ ಕ್ರೇಜ್‌ ಸೃಷ್ಟಿಸಿರುವ ಚಿತ್ರ

ಹಾಡಿನ ಮೂಲಕ ಸಿನಿಮಾಗೆ ಕುಂಬಳಕಾಯಿ

ಗುಳಿಕೆನ್ನೆ ಹುಡುಗ ದಿಗಂತ್‌ ಅಭಿನಯದ “ಮಾರಿಗೋಲ್ಡ್” ಚಿತ್ರ ಪೂರ್ಣಗೊಂಡಿದೆ. ಇತ್ತೀಚೆಗೆ ಹಾಡೊಂದನ್ನು ಚಿತ್ರೀಕರಿಸುವ ಮೂಲಕ ಚಿತ್ರತಂಡ ಕುಂಬಳಕಾಯಿ ಒಡೆಯುವ ಮೂಲಕ ಶೂಟಿಂಗ್‌ ಮುಗಿಸಿದೆ. ಈಗಾಗಲೇ ಫಸ್ಟ್‌ಲುಕ್‌ ಪೋಸ್ಟರ್‌ ಕೂಡ ಬಿಡುಗಡೆಯಾಗಿ, ಸಾಕಷ್ಟು ಕುತೂಹಲ ಮೂಡಿಸಿದೆ.

ಇನ್ನು, ಚಿತ್ರತಂಡ “ಮಾರಿಗೋಲ್ಡ್‌” ಚಿತ್ರದ ಡಬ್ಬಿಂಗ್‌ ಕಾರ್ಯವನ್ನೂ ಬಹುತೇಕ ಮುಗಿಸಿದ್ದು, ನಾಯಕ ದಿಗಂತ್‌ ಭಾಗವಷ್ಟೇ ಬಾಕಿ ಉಳಿದಿದೆ. “ಮಾರಿಗೋಲ್ಡ್‌” ಕುತೂಹಲ ಹುಟ್ಟಿಸಿರುವುದಕ್ಕೆ ಕಾರಣ, ಶೀರ್ಷಿಕೆ ಮತ್ತು ಚಿತ್ರತಂಡ ಬಿಡುಗಡೆ ಮಾಡಿರುವ ಶೀರ್ಷಿಕೆ ಫಸ್ಟ್‌ಲುಕ್‌. ಶೀರ್ಷಿಕೆ ಕೇಳಿದವರಿಗೆ ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಅದು ಅಂಡರ್‌ವರ್ಲ್ಡ್‌ ಸಿನಿಮಾನಾ ಅಥವಾ ರೌಡಿಸಂ ಕುರಿತಾದ ಕಥೆಯೇ ಎಂಬುದಕ್ಕೆ ಸಿನಿಮಾ ಬರುವ ತನಕ ಕಾಯಬೇಕು.


ಇನ್ನು, ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌ ನಿರ್ದೇಶನ ಮಾಡಿದ್ದಾರೆ. ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಹಾಗಂತ, ಅವರಿಗೆ ಅನುಭವ ಇಲ್ಲವೆಂದಲ್ಲ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕೆಲಸ ಮಾಡಿದ ಅನುಭವದ ಮೇಲೆ ಈಗ “ಮಾರಿಗೋಲ್ಡ್‌” ಹಿಂದೆ ನಿಂತಿದ್ದಾರೆ. ಇನ್ನು, ಚಿತ್ರವನ್ನು ರಘುವರ್ಧನ್‌ನಿರ್ಮಾಣ ಮಾಡಿದ್ದಾರೆ. ಇನ್ನು, ರಘುವರ್ಧನ್‌ಅವರು ಮೂಲತಃ ನಿರ್ದೇಶಕರಾಗಿದ್ದರೂ, ಅವರು ಹೊಸ ಪ್ರತಿಭಾವಂತ ಯುವ ನಿರ್ದೇಶಕ ರಾಘವೇಂದ್ರ ಎಂ.ನಾಯಕ್‌ಅವರಿಗೆ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕೆ ಕಾರಣ, ರಾಘವೇಂದ್ರ ಎಂ.ನಾಯಕ್‌ಅವರು ಮಾಡಿಕೊಂಡಿದ್ದ ಕಥೆ. ಕಥೆ ಚೆನ್ನಾಗಿದ್ದರಿಂದ, ಆ ಕಥೆಯನ್ನು ರಾಘವೇಂದ್ರ ನಾಯಕ್‌ಅವರೇ ನಿರ್ದೇಶಿಸಲಿ ಎಂಬ ಮನೋಭಾವದಿಂದಾಗಿ ರಘುವರ್ಧನ್‌, ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಿಸಿ, ಈಗ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ.


ಸದ್ಯಕ್ಕೆ “ಮಾರಿಗೋಲ್ಡ್‌” ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದಕ್ಕೆ ಕಾರಣ, ಎಲ್ಲೆಡೆ “ಮಾರಿಗೋಲ್ಡ್‌” ಕುರಿತು ಸಿಗುತ್ತಿರುವ ಮೆಚ್ಚುಗೆ. ಈ ಚಿತ್ರದ ಹೀರೋ ದಿಗಂತ್‌ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್‌ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ .ಇನ್ನು, ಬೆಂಗಳೂರು, ಸಕಲೇಶಪುರ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಇದೊಂದು ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಸಿನಿಮಾ ಆಗಿದ್ದು, ಸಂಗೀತಾ ಶೃಂಗೇರಿ ಚಿತ್ರದ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಸಂಪತ್‌ಕುಮಾರ್‌, ಕಾಕ್ರೋಚ್‌ ಸುಧಿ, ಯಶ್‌ಶೆಟ್ಟಿ, ರಾಜ್‌ ಬಲವಾಡಿ, ಗಣೇಶ್‌ರಾವ್‌ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕೆ.ಎಸ್.‌ಚಂದ್ರಶೇಖರ್‌ ಕ್ಯಾಮೆರಾ ಹಿಡಿದರೆ, ವೀರ್‌ ಸಮರ್ಥ್‌ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ. ರಘು ನಿಡುವಳ್ಳಿ ಅವರ ಸಂಭಾಷಣೆ ಬರೆದಿದಾರೆ. ಯೋಗರಾಜ್‌ಭಟ್‌, ವಿಜಯ್‌ ಭರಮಸಾಗರ ಸಾಹಿತ್ಯವಿದೆ.‌ ಸದ್ಯಕ್ಕೆ ಬಿಡುಗಡೆ ತಯಾರಿಯಲ್ಲಿ ಚಿತ್ರವಿದೆ. “ಮಾರಿಗೋಲ್ಡ್”‌ ಒಂದು ರೀತಿಯ ಮಾಸ್‌ ಕ್ರೇಜ್‌ ಹುಟ್ಟುಹಾಕಲು ಕಾರಣ, ಈ ಚಿತ್ರದ ಶೀರ್ಷಿಕೆ ಪೋಸ್ಟರ್.‌ ಇನ್ನು, ಈ ಶೀರ್ಷಿಕೆಯಡಿ ದಿಗಂತ್‌ ನಡೆಸುತ್ತಿರುವುದರಿಂದ ಅವರನ್ನಿಲ್ಲಿ ಬೇರೆ ರೀತಿಯಲ್ಲೇ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂಬುದು ನಿರ್ದೇಶಕರ ಮಾತು. ಒಟ್ಟಾರೆ, “ಮಾರಿಗೋಲ್ಡ್‌” ಪಕ್ಕಾ ಸಿನಿಪ್ರೇಮಿಗಳಿಗಂತೂ ಒಂದೊಳ್ಳೆಯ ಮನರಂಜನಾತ್ಮಕ ಸಿನಿಮಾ ಆಗಿ ಹೊರಬರಲಿದೆ ಎಂಬ ಗ್ಯಾರಂಟಿ ಕೊಡುತ್ತಾರೆ ನಿರ್ಮಾಪಕ ರಘುವರ್ಧನ್.

Categories
ಸಿನಿ ಸುದ್ದಿ

ಐವರಲ್ಲಿ ಟ್ರೋಪಿ ಗೆಲ್ಲುವವರು ಯಾರು ಗೊತ್ತಾ?

ಅಂತಿಮ ಹಂತಕ್ಕೆ ಸರಿಗಮಪ ರಿಯಾಲಿಟಿ ಶೋ ಸೀಸನ್‌ 17

ಫೈನಲ್ ಸ್ಪರ್ಧಿಗಳ ಜತೆಗೆ ನಿರೂಪಕಿ ಅನುಶ್ರೀ

ಜೀ ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ ” ಸರಿ ಗಮಪ ಸೀಸನ್‌ 17 ” ಕುತೂಹಲಕಾರಿ ಘಟ್ಟಕ್ಕೆ ಕಾಲಿಟ್ಟಿದೆ. ಭಾನುವಾರವಷ್ಟೇ ಸೆಮಿ ಫೈನಲ್‌ ಮುಗಿದಿದ್ದು, ಮುಂದಿನದು ಗ್ರ್ಯಾಂಡ್‌ ಫಿನಾಲೆ. ಅಲ್ಲಿಗೆ ಈಗ ಐದು ಸ್ಪರ್ಧೆಗಳು ಅಂತಿಮವಾಗಿ ಸರಿಗಮಪ ಸೀಸನ್‌ 17 ಕ್ಕೆ ಅಯ್ಕೆ ಆಗಿದ್ದಾರೆ. ನಿರೀಕ್ಷೆಯಂತೆ ಶ್ರೀ ನಿಧಿ ಶಾಸ್ತೀ ನೇರವಾಗಿಯೇ ಗ್ರ್ಯಾಂಡ್‌ ಫಿನಾಲೆಗೆ ಆಯ್ಕೆ ಆಗಿದ್ದರು.

ಶ್ರೀನಿಧಿ ಶಾಸ್ತ್ರಿ

ಇದೀಗ ಸೆಮಿ ಫೈನಲ್‌ ಹಣಾ ಹಣಿಯಲ್ಲಿ ಕಂಬದ ರಂಗಯ್ಯ, ಶರಧಿ ಪಾಟೀಲ್‌, ಅಶ್ವಿನ್‌ ಶರ್ಮಾ ಹಾಗೂ ಕಿರಣ್‌ ಪಾಟೀಲ್‌ ಆಯ್ಕೆಯಾಗುವ ಮೂಲಕ ಕನ್ನಡ ಕಿರುತೆರೆಯ ಬಹು ಜನಪ್ರಿಯ ಶೋ ಸರಿಗಮಪ ಸೀಸನ್‌ 17 ಇನ್ನೊಂದು ಹಂತಕ್ಕೆ ಕಾಲಿಟ್ಟಿದೆ.

ಗ್ರ್ಯಾಂಡ್‌ ಫಿನಾಲೆಗೆ

1 ಶ್ರೀನಿಧಿ ಶಾಸ್ತಿ
2 ಕಂಬದ ರಂಗಯ್ಯ
3 ಶರಧಿ ಪಾಟೀಲ್‌
4 ಅಶ್ವಿನ್‌ ಶರ್ಮಾ
5 ಕಿರಣ್‌ ಪಾಟೀಲ್‌

ಕಂಬದ ರಂಗಯ್ಯ
ಶರಧಿ ಪಾಟೀಲ್
ಕಿರಣ್ ಪಾಟೀಲ್
ಅಶ್ವಿನ್ ಶರ್ಮಾ

ಸೆಮಿ ಫೈನಲ್‌ ಹಂತದಲ್ಲಿ, 12 ಸ್ಪರ್ಧೆಗಳು ಅಂತಿಮವಾಗಿ ಉಳಿದುಕೊಂಡಿದ್ದರಲ್ಲದೆ, ಅಷ್ಟು ಸ್ಪರ್ಧಿಗಳ ನಡುವೆ ಭಾರೀ ಸ್ಪರ್ಧೆಯೇ ಏರ್ಪಟ್ಟಿತ್ತು. ಯಾರಿಗೆ ಯಾರಉ ಕಮ್ಮಿ ಇಲ್ಲ ಎನ್ನುವಂತೆ ಪ್ರತಿಯೊಬ್ಬರು ತಮ್ಮದೇ ಟ್ಯಾಲೆಂಟ್‌ ಮೂಲಕ ತೀರ್ಪುಗಾರರ ಗಮನ ಸೆಳೆದಿದ್ದರು. ವಿಶೇಷವಾಗಿ ನೇಹಾ ಶಾಸ್ತ್ರೀ, ಆಶಾ ಭಟ್‌ , ಪ್ರಿಯಾ ಕೆ.ವಿ , ವಿಶ್ವತಾ ಭಟ್‌ ಸೇರಿದಂತೆ ಮತ್ತಿತರರ ನಡುವೆ ಭಾರೀ ಸ್ಪರ್ಧೆ ಇತ್ತು. ಕೊನೆಗೂ ಅಂತಿಮವಾಗಿಐದು ಸ್ಪರ್ಧೆಗಳುಆಯ್ಕೆಯಾದರು. ಡಿಸೆಂಬರ್‌ ೨೬ಕ್ಕೆ ಗ್ರ್ಯಾಂಡ್‌ ಫಿನಾಲೆ ಫಿಕ್ಸ್‌ ಆಗಿದೆ. ಅಲ್ಲಿ ತೀರ್ಪುಗಾರರ ಗಮನ ಸೆಳೆದು ಅಂತಿಮವಾಗಿ ಯಾರು ಸೀಸನ್‌ 17 ರ ಟ್ರೋಪಿ ಗೆಲ್ಲುತ್ತಾರೆನ್ನುವುದನ್ನು ಕರುನಾಡಿನ ಸಂಗೀತ ಪ್ರಿಯರು ಎದುರು ನೋಡುತ್ತಿದ್ದಾರೆ.

ಸೀಸನ್‌ 17 ಗುಣಮಟ್ಟದ ಸ್ಪರ್ಧಿಗಳ ಜತೆಗೆ ತೀರ್ಪುಗಾರರ ಸ್ಥಾನದಲ್ಲಿದ್ದ ಮಹಾಗುರು ಹಂಸಲೇಖ, ಗಾಯಕರಾದ ವಿಜಯ್‌ ಪ್ರಕಾಶ್‌, ರಾಜೇಶ್‌ ಕೃಷ್ಣನ್‌, ಅರ್ಜುನ್‌ ಜನ್ಯಾ ಕೂಡ ಸರಿಗಮಪ ಸೀಸನ್‌ ೧೭ ಕಳೆ ಗಟ್ಟುವಂತೆ ಮಾಡಿದೆ. ಅದರಲ್ಲೂ ನಾದ ಬ್ರಹ್ಮ ಹಂಸಲೇಖ ಅವರು ಸರಿಗಮಪ ಶೋ ನ ಪ್ರಮುಖ ಆಕರ್ಷಣೆ ಆಗಿದ್ದಾರೆ.

Categories
ಸಿನಿ ಸುದ್ದಿ

ಹುಡುಗಿಯ ಅಪಹರಣದ ಹಿಂದೆ ರೋಚಕತೆ! ಹಾಫ್‌ ಮೊದಲ ಹಂತದ ಚಿತ್ರೀಕರಣ ಪೂರ್ಣ

ಹೊಸ ಕಥಾಹಂದರದ ಮೇಲೆ ಭವ್ಯ ಭರವಸೆ

 

ಕೆಲವು ಸಿನಿಮಾಗಳೇ ಹಾಗೆ. ಒಮ್ಮೆ ಶುರುವಾದರೆ, ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ಚಿತ್ರೀಕರಣಗೊಳ್ಳುತ್ತವೆ. ಆ ಸಾಲಿಗೆ “ಹಾಫ್”‌ ಚಿತ್ರವೂ ಸೇರಿದೆ. ಹೌದು, ಈ ಹಿಂದೆ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಸಿನಿಮಾ ಮೂಲಕ ಸುದ್ದಿಯಾಗಿದ್ದ ನಿರ್ದೇಶಕ ಕಮ್‌ ಹೀರೋ ಲೋಕೇಂದ್ರ ಸೂರ್ಯ ಈಗ “ಹಾಫ್‌” ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ.

ಹೌದು, ಈಗಾಗಲೇ ಅದ್ಧೂರಿ ಫೋಟೋ ಶೂಟ್ ನಂತರ ಶೂಟಿಂಗ್ ನಡೆಸಿದ್ದ “ಹಾಫ್” ತಂಡ, ಈಗ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಈ ಹಂತದ ಚಿತ್ರೀಕರಣದಲ್ಲಿ ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆಯಲ್ಲಿ ಒಂದು ಫೈಟ್ ಕೂಡಾ ಚಿತ್ರೀಕರಣಗೊಂಡಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಹದಿನೈದು ದಿನಗಳ ಚಿತ್ರೀಕರಣದಲ್ಲಿ ಹಲವಾರು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಶೂಟಿಂಗ್‌ ವೇಳೆ ಹೀರೋ ಜೊತೆಗಿದ್ದ ಬೇಗಂ ಎಂಬ ಹುಡುಗಿಯನ್ನು ಅಪಹರಿಸಿದಾಗ, ನಂತರ ನಡೆಯುವ ಚೇಸಿಂಗ್‌ ದೃಶ್ಯವನ್ನು ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಅವರು, ಚಿತ್ರೀಕರಿಸಿದ್ದಾರೆ. ಅಂದಹಾಗೆ, ಈ ದೃಶ್ಯದಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು.


ಆ ಸಾಹಸ ದೃಶ್ಯ ಕುರಿತು ಮಾತನಾಡುವ ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು, “ಇದುವರೆಗೆ ಹೊಸಬರ ನೂರಾರು ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ್ದೇನೆ. ಆದರೆ ಲೋಕೇಂದ್ರ ಅವರ ತಂಡವನ್ನು ನೋಡಿದರೆ ನಿಜಕ್ಕೂ ಇವರೆಲ್ಲಾ ಹೊಸಬರಾ ಎನ್ನುವ ಅನುಮಾನ ಮೂಡುತ್ತದೆ. ಸಾಹಸದ ದೃಶ್ಯಗಳನ್ನು ಚಿತ್ರೀಕರಿಸುವುದು ಕಷ್ಟದ ಕೆಲಸ. ಅನುಭವಿಗಳಿದ್ದರೆ ಮಾತ್ರ ಸರಾಗವಾಗಿ ಮತ್ತು ಅಂದುಕೊಂಡಂತೆ ಶಾಟ್ಸ್ ಕಂಪೋಸ್ ಮಾಡಲು ಸಾಧ್ಯ. ಹೊಸಬರು ಅಂದ ಕೂಡಲೇ ಅವರಿಗೆ ಎಲ್ಲವನ್ನೂ ಹೇಳಿಕೊಟ್ಟು, ಸಮಯ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಲೋಕೇಂದ್ರ ಮತ್ತವರ ತಂಡದ ಕಾರ್ಯ ವೈಖರಿ ಕಂಡು ಇವರೆಲ್ಲ ಹತ್ತಾರು ಸಿನಿಮಾಗಳಲ್ಲಿ ಕೆಲಸ ಮಾಡಿ ಬಂದಿದ್ದಾರೇನೋ ಅನ್ನಿಸಿಬಿಟ್ಟಿತು. ಒಂದು ದಿನಕ್ಕೆ ಐವತ್ತೆರಡು ಓಕೆ ಟೇಕ್‌ ಶೂಟ್ ಮಾಡಿದ್ದೇನೆ. ಹೊಸದಾಗಿ ಚಿತ್ರರಂಗಕ್ಕೆ ಬಂದಿರುವವರಿಂದ ಈ ಮಟ್ಟಿಗಿನ ಕೆಲಸ ತೆಗೆಸಿಕೊಳ್ಳುವುದು ನಿಜಕ್ಕೂ ದಾಖಲೆʼ ಎಂಬುದು ಥ್ರಿಲ್ಲರ್ ಮಂಜು ಮಾತು.


ವರ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ʻರೆಡ್ ಅಂಡ್ ವೈಟ್ ಮ್ಯಾನ್ʼ ಎಂದು ದಾಖಲೆ ನಿರ್ಮಿಸಿರುವ ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಮೂಲಕ ಡಾ. ಪವಿತ್ರ ಆರ್. ಪ್ರಭಾಕರ್ ರೆಡ್ಡಿ ನಿರ್ಮಿಸುತ್ತಿರುವ ʻಹಾಫ್ʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕನಟನಾಗಿ ನಟಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಬಿ.ಆರ್. ಕ್ಯಾಮೆರಾ ಹಿಡಿದರೆ, ಯುಡಿವಿ ವೆಂಕಿ ಸಂಕಲನವಿದೆ. ರಾಕಿ ಸೋನು ಸಂಗೀತ, ಹಿನ್ನೆಲೆ ಸಂಗೀತ, ಡಾ. ಥ್ರಿಲ್ಲರ್ ಮಂಜು ಸಾಹಸ, ಋತು ಚೈತ್ರ ಅವರ ವಸ್ತ್ರಾಲಂಕಾರ ಹಾಫ್ ಚಿತ್ರಕ್ಕಿದೆ. ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಪವಿತ್ರಾ ಆರ್. ಪ್ರಭಾಕರ್ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್, ಮೋಹನ್ ನೆನಪಿರಲಿ ಇತರರು ನಟಿಸಿದ್ದಾರೆ. ಕೃಷ್ಣ ಸಹ ನಿರ್ದೇಶನ, ಶ್ರೀವತ್ಸ, ಭರತ್, ಧೃವಿನ್, ಶಂಕರ್, ನವೀನ್ ಚಲ, ಮನೋಜ್ ಆರ್, ಪುನೀತ್ ಎಲ್, ವಿಜಯ್ ಚಂದ್ರ ಸಹಾಯಕ ನಿರ್ದೇಶನವಿದೆ. ಶಿವಕಾಂತ್ ಕಲಾ ನಿರ್ದೇಶನವಿದೆ. ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಇತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.

Categories
ಸಿನಿ ಸುದ್ದಿ

ಖ್ಯಾತ ಛಾಯಾಗ್ರಾಹಕ ಮಹೇನ್ ಸಿಂಹ ಬರೀತಾರೆ…..

ಮಹೇನ್ ಸಿಂಹ, ಕನ್ನಡದ ಚಿತ್ರರಂಗಕ್ಕೆ‌ಚಿರ ಪರಿಚಿತ ಹೆಸರು.‌ಕನ್ನಡಕ್ಕೆ ಮಾತ್ರವಲ್ಲ, ಬಾಲಿವುಡ್ ನಲ್ಲಿ‌ ಮಿಂಚುತ್ತಿರುವ ಹಲವು ಸ್ಟಾರ್ ಗಳು ಮೊದಲು ಫೋಟೋ ಶೂಟ್ ಮಾಡಿಸಿಕೊಂಡಿದ್ದೇ ಮಹೇನ್ ಸಿಂಹ ಅವರ ಕ್ಯಾಮೆರಾ ಕಣ್ಣಲ್ಲಿ. ಒಂದು ಕಾಲಕ್ಕೆ ಸ್ಟಿಲ್ ಫೋಟೋ ಶೂಟ್ ನಲ್ಲಿಯೇ ಹೆಸರು ಮಾಡಿದವರು. ಈಗ ಸಿನಿಮಾ‌ ಛಾಯಾಗ್ರಹಣದಲ್ಲೂ ಸೈ ಎನಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಸೂರಿ ನಿರ್ದೇಶನ ದ ‘ಟಗರು ‘ಚಿತ್ರ. ಅಲ್ಲಿಂದೀಗ ಸಿನಿಮಾ ಛಾಯಾಗ್ರಹಣ ದಲ್ಲೇ ಹೆಚ್ಚು ಗಮನ ಹರಿಸಿರುವ ಮಹೇನ್, ಸದ್ಯಕ್ಕೆ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಅದರ ಶೂಟಿಂಗ್ ಸೆಟ್ ನ ಕೆಲವು ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕೆಳಗಿನದು ಅವರದೇ ಬರಹ‌. ಸಿನಿ ಲಹರಿ ಪ್ರಕಟಿಸಲು ಅಧಿಕೃತ ಒಪ್ಪಿಗೆ ‌ನೀಡಿದ್ದಾರೆ. ಗೆಳೆತನದೊಂದಿಗೆ ಇನ್ನು ಮುಂದೆ ಇಂತಹ ಸಂಗತಿಗಳನ್ನು ಮೊದಲು‌’ಸಿನಿ ಲಹರಿ’ ಯಲ್ಲಿ ಹಂಚಿಕೊಳ್ಳಲಿದ್ದಾರೆ. ಸಿನಿ ಲಹರಿ ಅವರಿಗೆ ಅಭಾರಿಯಾಗಿರಲಿದೆ.

…………………………………

ಪ್ರೇಮ್ ಎಂಬ ಬತ್ತದ ಉತ್ಸಾಹದ ಜತೆಗೆ….

“ಏ ತೆಗೀರಿ…ಇದನ್ನ ತೆಗ್ಯಾಕ್ಕೆ ಇಲ್ಲಿಗ್ ಬರ್ಬೇಕಿತ್ತಾ ನಾನು? ಬೇರೆ ಕೊಡಿ…ಇದು ಚೆನ್ನಾಗಿಲ್ಲ..ಆಗಲೇ ಕೊಟ್ಟಿದ್ರಲ್ಲಾ ಅಂತದ್ದು ಚೆನ್ನಾಗಿರೋ ಫ್ರೇಂ ಕೊಡಿ” ಅಂತ ಸಣ್ಣ ಹುಸಿ ಮುನಿಸು ತೋರಿಸಿಕೊಂಡು…”ಟೀ ಕೊಡ್ರೋ ಟೈಗರ್ಗೆ” ಅಂತ ಪಕ್ಕಕ್ಕೆ ಹೋಗೋರು ಪ್ರೇಂ.

ಯಾವುದೇ ಫ್ರೇಂ ಸಮಾಧಾನ ಆಗೋ ವರೆಗೆ ಒಪ್ಪೋ ಮಾತೇ ಇಲ್ಲ. ನಾವು ಶೂಟ್ ಮಾಡ್ತಿರೋ ಹಾಡಿನ ಪ್ರತಿ ಸೆಕೆಂಡ್ ಕೂಡ ಅವರ ಮನಸಲ್ಲಿ ಇರುತ್ತೆ.ಎಲ್ಲಿ ಎಷ್ಟು ಲಿರಿಕ್ಸ್ ಇದೆ…ಎಲ್ಲಿ ಎಷ್ಟು ಬೀಟ್ ಬರುತ್ತೆ…ಯಾವಾಗ ವೈಯೊಲಿನ್ ಬರುತ್ತೆ ಎಲ್ಲಾ ನೆನಪಿರುತ್ತೆ.

“ಹೆಂಗ್ ಓಪನ್ ಆಗ್ಬೇಕು ಗೊತ್ತಾ. ಎಲ್ ತಗೆದವನೋ ಬಡ್ಡಿ ಮಗಾ ಅಂತ ಜನ ಕೇಳ್ಬೇಕು..ಹಂಗಿರ್ಬೇಕು” ಅಂತ ಸುತ್ತಾ ಇರೋ ಬೆಟ್ಟಗಳನ್ನೋ…ರಾಜಾಸ್ಥಾನದ ಬಟಾ ಬಯಲನ್ನೋ ಒಂದು ಕಡೆ ಇಂದ ಇನ್ನೊಂದ್ ಕಡೆ ವರೆಗೂ ನೋಡಿ ಹೇಳೋರು. ಅಲ್ಲಿಗೆ ನಾನು…’ಬನ್ರೋ..” ಅಂತ ನಮ್ಮ ಹುಡುಗರನ್ನ ಕರ್ಕೊಂಡು..ಕ್ಯಾಮರಾನೂ ಎತ್ಕೊಂಡು..’ಇಷ್ಟು ದಿನ ಇಲ್ಲಿ ಎಷ್ಟು ಭಾಷೆಯವರು ಶೂಟ್ ಮಾಡಿರಬೇಕು…ಅದರಲ್ಲಿ..ಇನ್ನೇನ್ ಹೊಸದು ತೆಗೀ ಬಹುದು?” ಅಂತ ತಲೇ ಕೆರ್ಕೊಂಡು ಹೊರಡ್ತಿದ್ದೆ. ಕಡೇಗೆ ನನಗೆ ಕುಶೀ ಆದ ಒಂದು ಫ್ರೇಂ ಅವರಿಗೂ ಕುಶಿ ಆದರೆ…” ಆಹ..ಇದು ನೋಡಿ….ಶಾಟು…” ಅಂದು …”ಸೌಂಡ್….” ಅಂತ ಪಕ್ಕದಲ್ಲಿ ಬರ್ತಿದ್ರು.

ಪ್ರೇಂ ತಮ್ಮ ಸಿನ್ಮೇಮಾದಲ್ಲಿ ಹಾಡಿನಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳಲ್ಲ…ಅವರ ಹಾಡುಗಳು ಸೂಪರ್ ಇರುತ್ತೆ…ಅನ್ನೋ ಮಾತು ಆಗಾಗ ಕೇಳ್ತಾನೇ ಇದ್ದೆ. ಇನ್ ಫ್ಯಾಕ್ಟ್…ಬಾಂಬೇ ಜಯಶ್ರೀ ನನಗೆ ಪರಿಚಯ ಆಗಿದ್ದು..ಪ್ರೇಂ ಸಿನೇಮಾದ ’ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನೂ ಯಾರೋ” ಅನ್ನೋ ಸಾಂಗ್ ನಿಂದ. ಆ ಸಿನೇಮಾ ನೋಡದೇ ಇದ್ರೂ..ಇದ್ಯಾರು..ಕ್ಲಾಸಿಕಲ್ ಸಿಂಗರ್ …ಕಮರ್ಷಿಯಲ್ ಸಿನೇಮಾದಲ್ಲಿ ಇಷ್ಟೋಳ್ಳೇ ಹಾಡು ಹಾಡಿದ್ದಾರೆ ಅಂತ ಅವರ ಬಗ್ಗೆ ಹುಡುಕಿದ್ದೆ.

ಏಕ ಲವ್ ಯಾ ದಲ್ಲಿ ಕೆಲಸ ಮಾಡಲಿಕ್ಕೆ ಶುರುವಾದ ಮೇಲೆ ಹಾಡಿನ ಬಗ್ಗೆ ಅವರು ತಲೇ ಕೆಡಿಸಿಕೊಳ್ಳೋದು ದಿನವೂ ನೋಡಿದ್ದೆ. “ತೀರ ದೊಡ್ಡ ದೊಡ್ಡ ಪದ ಹಾಕಿದ್ರೆ…ಜನಕ್ಕೆ ಹಾಡು ಬಾಯಲ್ಲಿ ನಿಲ್ಲಲ್ಲ ಮಗನೇ..ಎಲ್ಲಾರೂ ಹಾಡೋ ಹಾಗಿರಬೇಕು” ಅಂತ ಅವರು ರೈಟರ್ ಗಳನ್ನ್ ಕೂರಿಸ್ಕೊಂಡು ಪಾಠ ಮಾಡೋದು ನೋಡಿದ್ದೆ.

ಒಂದು ಹಂತಕ್ಕೆ ಹಾಡು ರೂಪು ಗೊಂಡ ಮೇಲೆ ಜನ ಹೇಳೋದು ಸತ್ಯ ಅನ್ನಿಸಿತ್ತು. ತುಂಬಾ ಸರಳವಾದ..ಭಾವಕ್ಕೆ ಹತ್ತಿರವಾದ ಪದಗಳು ಅಷ್ಟೇ ಹಾಂಟಿಂಗ್ ಅನ್ನಿಸೋ ಮೆಲೋಡಿ ಇಷ್ಟರಲ್ಲಿ ಒಳ್ಳೋಳ್ಳೇ ಹಾಡು ಮಾಡಿದ್ರು. ಯಾರೇ ಯಾರೇ ಅನ್ನೋ ಟೈಟಲ್ ಸಾಂಗ್ ಆಗಲೇ ಫೇಮಸ್ ಕೂಡ ಆಗಿದೆ.

ಅದರ ಶೂಟಿಂಗ್ ಗಾಗಿ ನಾವು ಹೊರದೇಶಕ್ಕೆ ಹೋಗೋ ಪ್ಲಾನ್ ಇತ್ತು. “ಆ ಹಾಡು ಹೀಗೆ ಬರಬೇಕು ಹಾಗಿರಬೇಕು” ಅಂತ ಆಗಾಗ ಶೂಟಿಂಗ್ ಸಮಯದಲ್ಲಿ ಹೇಳ್ತಾನೇ ಇರೋರು. ಆದರೆ ಹೊರದೇಶಕ್ಕೆ ಹೋಗಲು ಆಗಲಿಲ್ಲ.

ಆದರೆ ಅವರಿಗೆ ಸಾಮಾನ್ಯ ಲೋಕೇಶನ್ ಗಳು ಒಪ್ಪಿಗೆ ಇರಲಿಲ್ಲ. ಒಂದೊಂದು ಫ್ರೇಂ ಒಂದೊಂದು ಬಣ್ಣ ಇರಬೇಕು…ಅನ್ನೋದು ಅವರ ಆಸೆ. ಕಡೇಗೆ ಎಲ್ಲಾ ಕೂತು..ಕಾಶ್ಮೀರ..ಲೇಹ್ ರಾಜಸ್ತಾನ್..ಹೀಗೆ..ಮಂಜು ಮರಳು…ಉಪ್ಪಿನ ಕಡಲು..ಅಂತ ಒಂದಷ್ಟು ಜಾಗ ಗುಡ್ಡೇ ಹಾಕಿ ಹೊರಟ್ವಿ.

ಸುಮಾರು ಐವತ್ತು ಜನರ ತಂಡ…ಎಲ್ಲಾ ದೇಶದ ಗಡಿ ಭಾಗ..ಅಲ್ಲಿಯ ಪರ್ಮಿಶನ್ ಗಳ ಅಬ್ಬರ..ಇದೆಲ್ಲವನ್ನೂ ನಿಭಾಯಿಸಿ…ಶೂಟಿಂಗ್ ಅಲ್ಲೇ ಮಾಡಬೇಕು ಅಂತ ಹೊರಡಿಸಿದ್ರು ಪ್ರೇಂ.

ಪ್ರಕೃತಿ ಕೂಡ ಒಂದೊಂದು ಕಡೇ ಒಂದೊಂದು ರೀತಿ. ಕಾಶ್ಮೀರ…ಲೇಹ್ ನಲ್ಲಿ -14 ತನಕ ಇಳಿದಿದ್ರೆ…ರಾಜಸ್ಥಾನದಲ್ಲಿ..ನಮಗೇ ನೀರು ಕುಡಿಸೋ ಅಷ್ಟು.

ಹೀಗಿದ್ದರೂ..
ಬೆಳಿಗ್ಗೆ ನಾಲ್ಕಕ್ಕೇ ಎದ್ದು…ಹುಡುಗರನ್ನ ಹುರಿದುಂಬಿಸಿ…ಮೇಕಪ್ ಮಾಡಿಸಿ…ಕಾಸ್ಟ್ಯುಂ ಹೇರ್ಸ್ಟೈಲ್ ತಾವೇ ನೋಡಿ…ಅವರನ್ನ ಜೊತೆಗೇ ಕರಕೊಂಡು…..ಅರವತ್ತೋ ಎಪ್ಪತ್ತೋ ಕಿಲೋಮೀಟರ್ ದೂರದ ಲೊಕೇಶನ್ ಗೆ ಹೋದರೆ…ಇನ್ನೂ ಸೂರ್ಯನೂ ಇಣುಕಿರುತ್ತಿರಲಿಲ್ಲ. ಕೆಲಸದ ವಿಷಯದಲ್ಲಿ ಯಾವಾಗಲೂ ಫಸ್ಟ್.
“ಸಾರ್ ಬೇಗ ಆಗಲಿಲ್ವಾ” ಅಂತ ಚಳಿಯಲ್ಲಿ ನಡುಗಿಕೊಂಡು ನಾನು ಕೇಳಿದ್ರೆ…”ಏ ಇರಲಿ ಬಿಡಿ…ಇಲ್ಲಿ ಬಂದು ನಿಂತ್ಕೊಂಡು ಸೂರ್ಯ ಹುಟ್ಟೋದ್ ನೋಡೋಣ. ಬೆಳಕು ಬಂದಾಗ ಏನಾದ್ರು ಚೆನ್ನಾಗಿ ಕಂಡ್ರೆ ಶೂಟ್ ಮಾಡ್ ಬಹುದು. ಹೋಟ್ಲಲ್ಲಿ ಏನ್ ಮಾಡೋದು?” ಅಂದು..ಆ ಚಳಿಯಲ್ಲೂ..ನಿಂತ ಕಡೆ ನಿಲ್ಲದೇ..ಅದು ಬಂತ ಇದು ಬಂತಾ ಅಂತ ಮ್ಯಾನೇಜರ್ ನ ಕೇಳ್ಕೊಂಡು ಓಡಾಡಿ..ಸೂರ್ಯ ಇಣುಕಿದ ತಕ್ಷಣವೇ…”ಆಂ ರೆಡೀ ಟೈಗರ್ ಬರಲೀ ಕ್ಯಾಮರ…” ಅಂತ ಕರೆದು..ಎದುರಿಗೆ ನಿಲ್ತಾ ಇದ್ರು.

ಆ ಚಳಿಯಲ್ಲಿ ನಮ್ಮ ಹೊಸ ಹೀರೋ ಹೀರೋಯಿನ್ ಬಹಳ ಹುಮ್ಮಸ್ಸಿನಿಂದ ಡಾನ್ಸ್ ಮಾಡ್ತಿದ್ರು. ..ಸ್ಟೆಪ್ ಹಾಕೋರು…ನಾನಾಗಿದ್ರೆ…ಅದೆಂಗಿದ್ರೂ..ಓಕೆ ಅಂತಿದ್ನೇನೋ..ಆದರೆ ಪ್ರೇಂ….ಅದು ಸರಿ ಬರೋ ವರೆಗೂ..ಅವರಿಬ್ಬರಿಗೂ ರಮಿಸಿ…ಪೂಸಿ ಮಾಡಿ..ಅದು ಕೊಡಸ್ತೀನಿ..ಇದು ಕೊಡಸ್ತೀನಿ ಅಂದು…ಆ ಸ್ಟೇಪ್ಸ್ ಮತ್ತು ಅಂದು ಕೊಂಡ ಶಾಟ್ ಸರಿಯಾಗಿ ಬರೋ ವರೆಗೂ ಬಿಡ್ತಾ ಇರಲಿಲ್ಲ.

ಅಲ್ಲೇ ಎಡಿಟಿಂಗ್ ನಲ್ಲಿ ನೋಡಿ ಸಮಾಧಾನ ಆದ ಮೇಲೇ…”ಥ್ಯಾಂಕ್ಯು ವೆರಿ ಮಚ್ ಲವ್ ಯು ಆಲ್” ಅನ್ನೋ ಅವರ ಟ್ರೇಡ್ ಮಾರ್ಕ್ ಡೈಯಲಾಗ್ ಹೇಳಿ..ಮುಂದಕ್ಕೆ ಶಿಫ್ಟ್.

ನಾವು ಹೋಗಿದ್ದದ್ದು ಒಂದು ಒಂದು ಅಸಾಮಾನ್ಯ ಟ್ರಿಪ್ಪು. ಅದೆಷ್ಟು ಫ್ಲೈಟ್ ಹತ್ತಿ ಇಳೆದ್ವೋ…ಅದೆಷ್ಟು ಸೆಕ್ಯುರಿಟಿ ಚೆಕ್ ಆಯ್ತೋ..ಗೊತ್ತಿಲ್ಲ.ಆದರೆ..ಎಲ್ಲಿ ಯಾರಿಗೇ ತೊಂದರೆ ಆಗಲಿ..ತಕ್ಷಣ ಅಲ್ಲಿಗೆ ಬಂದು ಪರಿಸ್ಥಿತಿ ನಿಭಾಯಿಸಿ ಮುಂದಕ್ಕೆ ಹೊರಡಿಸಿದ್ದು ಪ್ರೇಂ
ಅದೆಲ್ಲೋ ಡೆಲ್ಲಿಯಲ್ಲೂ ಅವರ ಅಭಿಮಾನಿಗಳೇ..ಕಾಶ್ಮೀರ..ಲೇಹ್ ನಲ್ಲೂ ಕೂಡ.

ಅಂತೂ ಅಷ್ಟೂ ದಿನದ ಚಿತ್ರ ಯಾತ್ರೆ ಮುಗಿದು… ಬೆಂಗಳೂರು ತಲುಪಿದ್ವಿ. ಅಲ್ಲಿಗೆ ನಮ್ಮ ಸಿನೇಮಾದ ಕೊನೇ ಘಟ್ಟದ ಶೂಟಿಂಗ್ ಮುಗೀತು. ಸಧ್ಯದಲ್ಲೇ ಆಡಿಯೋ ಹೊರ ತರುವ ಕೆಲಸ ಶುರುವಾಗ ಬಹುದು. ಮನೇ ತಲುಪಿದ ಮೇಲೆ..ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಇತ್ತು. “ ಎಲ್ಲಾ ಚೆನ್ನಾಗಾಯ್ತು..ನಾನ್ ಅಂದು ಕೊಂಡದ್ದಕ್ಕಿಂತ ಚೆನ್ನಾಗಿ ಬಂತು ಸಾಂಗ್…ಕೆಲಸ ಚೆನ್ನಾಗಾಯ್ತು..ಎರಡು ದಿನ ಬಿಟ್ಟು ಸಿಕ್ಕೋಣ” ಅಂತ ಪ್ರೇಂ ಮೆಸೇಜ್ ಬಂದಿತ್ತು..ಅಂತೂ ಒಂದು ಒಳ್ಳೇ ಕೆಲಸ ಮಾಡಿ ಮುಗಿಸಿದ ಸಮಾಧಾನ.

ನಾಳೇ…ಆ ಹಾಡು ಮತ್ತು ಅದರ ಚಿತ್ರಣ ನಿಮಿಗೂ ಖುಷಿ ಕೊಟ್ರೆ…ಆ ನಿಮ್ಮ ಆನಂದವನ್ನ..ಪ್ರೇಂ ಅನ್ನೋ ಬತ್ತದ ಉತ್ಸಾಹಕ್ಕೆ ಅರ್ಪಿಸಿ ಬಿಡಿ. ☺️🙏

Categories
ಸಿನಿ ಸುದ್ದಿ

ಮದಗಜನ ಸದ್ದು ಜೋರು – ಫಸ್ಟ್ ಲುಕ್ ರಿಲೀಸ್ ಮಾಡ್ತಾರೆ ಪ್ರಶಾಂತ್ ನೀಲ್

ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್!

 

ಶ್ರೀಮರಳಿ ಅಭಿನಯದ ‘ಮದಗಜ’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಡಿಸೆಂಬರ್17ರಂದು ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಹುಟ್ಟುಹಬ್ಬ. ಅಂದು ‘ಮದಗಜ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಆದರೆ ಫಸ್ಟ್ ಲುಕ್ ಟೀಸರ್ ರಿಲೀಸ್ ಯಾರು ಮಾಡಲಿದ್ದಾರೆ ಎಂಬುದು ಗೌಪ್ಯವಾಗಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ.

ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ ಎಂದೇ ಹೆಸರಾಗಿರುವ ‘ಉಗ್ರಂ’, ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಮದಗಜ’ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುವ ಮೂಲಕ ಶುಭ ಹಾರೈಸಲಿದ್ದಾರೆ.
ಈ ವಿಷಯವನ್ನು ಚಿತ್ರತಂಡ ಈಗಾಗಲೇ ಹಂಚಿಕೊಂಡಿದೆ. ಈ ವಿಷಯವನ್ನು ಸ್ವತಃ ನಟ ಶ್ರೀ ಮುರಳಿ ಅವರೇ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


‘ನನ್ನ ಗಾಡ್ ಫಾದರ್ ಪ್ರಶಾಂತ್ ನೀಲ್ ಅವರು ‘ಮದಗಜ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಟೀಸರ್ ಬಿಡುಗಡೆಗೆ ಬೆರೆಳೆಣಿಕೆ ದಿನಗಳು ಬಾಕಿ’ ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ಫಸ್ಟ್ ಲುಕ್ ಟೀಸರ್ ನ ವಿಡಿಯೊ ತುಣುಕು ರಿಲೀಸ್ ಆಗಿದ್ದು, ಎಲ್ಲೆಡೆ, ನಿರೀಕ್ಷೆ ಹುಟ್ಟಿಸಿದೆ.
ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ನಿರ್ಮಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಗಡ್ ಬಡ್ ನಲ್ಲಿ ಗಾನಾ !

ಬಬ್ರೂ’ ಚಿತ್ರದ ನಾಯಕಿಗೀಗ ಸಿಕ್ತು ವೆಬ್ ಸಿರೀಸ್ ನಲ್ಲಿ ಅಭಿನಯಿಸುವ ಅವಕಾಶ

ನಟಿ ಸುಮನ್ ನಗರ್ ನಿರ್ಮಾಣದ’ ಬಬ್ರೂ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಕಾಲಿಟ್ಟ ನಟಿ ಗಾನಾ ಭಟ್ ಈಗ ಹೊಸದೊಂದು ವೆಬ್ ಸಿರೀಸ್ ಮೂಲಕ ನಟನೆಗೆ ಮರಳಿದ್ದಾರೆ. ‘ಗಡ್ ಬಡ್’ ಹೆಸರಿನ ತುಳು ವೆಬ್ ಸಿರೀಸ್ ನಲ್ಲಿ ತಾವು ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.‌

 

ಸದ್ಯಕ್ಕೆ ಅದು ಯಾವಾಗ ಶುರುವಾಗುತ್ತೆ, ಅದು ರಿಲೀಸ್ ಹೇಗೆ ಎನ್ನುವ ಕುತೂಹಲದ ಮಾಹಿತಿಯೂ ಸೇರಿದಂತೆ ಅದರ ನಿರ್ಮಾಣ, ನಿರ್ದೇಶನ ಇತ್ಯಾದಿ ಸಂಗತಿಯನ್ನು ಇಷ್ಟರಲ್ಲಿಯೇ ರಿವೀಲ್ ಮಾಡುವುದಾಗಿ ತಿಳಿಸಿದ್ದಾರೆ.

ಮಂಗಳೂರು ಮೂಲದ ಗಾನಾ ಭಟ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದವರು. ಆದರೆ ಪ್ರವೃತ್ತಿಯಲ್ಲಿ ಗಾಯಕಿ ಹಾಗೂ ಭರತನಾಟ್ಯ ನೃತ್ಯಗಾರ್ತಿಯೂ ಹೌದು‌.‌ಜತೆಗೆ ನಟನೆಯೂ ಅವರ ಕೂಡ ಅವರ ಪ್ರಮುಖಕ ಆಸಕ್ತಿಯ ಕ್ಷೇತ್ರವಂತೆ. ಹೀಗಿದ್ದೂ, ಉದ್ಯೋಗ ಅರಸಿ ಅಮೆರಿಕಕ್ಕೆ ಹಾರಿ ಒಂದಷ್ಟು ವರ್ಷ ಅಲ್ಲಿಯೆ ಸೆಟ್ಲ್ ಆಗಿದ್ದರು.‌ಆದರೆ ಅಲ್ಲಿಯೇ ವೃತ್ತಿಯ ಜತೆಗೆ ನಟನೆಯತ್ತಲೂ ತೊಡಗಿಸಿಕೊಂಡಿದ್ದ ಅವರು, ಅಮೆರಿಕದಲ್ಲೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿದ್ದ ಕನ್ನಡದ ‘ಬಬ್ರೂ ‘ ಚಿತ್ರದ ಮೂಲಕ ಕಳೆದ ವರ್ಷವಷ್ಟೇ ನಟಿಯಾಗಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಕಾಣಿಸಿಕೊಂಡರು.

ಬಾಲ್ಯದಿಂದಲೂ ತಮಗಿದ್ದ ನಟನೆಯ ಹಸಿವು ಇಂಗಿಸಿಕೊಳ್ಳಬೇಕೆನ್ನುವ ಮಹಾದಾಸೆ ಹೊತ್ತು,’ ಬಬ್ರೂ’ ಮೂಲಕ ಅಮೆರಿಕ ಬಿಟ್ಟು ವಾಪಾಸ್ ಹುಟ್ಟೂರಿಗೆ ಬಂದವರು, ಈಗ ನಟನೆಯನ್ನೇ ವೃತ್ತಿಯಾಗಿಸಿ ಕೊಂಡಿದ್ದಾರೆ.

‘ಬಬ್ರೂ ‘ನಂತರ ಹೊಸ ಅವಕಾಶಗಳತ್ತ ಮುಖ ಮಾಡಿರುವ ಅವರು, ಒಳ್ಳೆಯ ಕತೆ ಮತ್ತು ಪಾತ್ರಗಳ ಹುಡುಕಾದಲ್ಲಿದ್ದಾರಂತೆ. ಹಾಗೆಯೇ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ಗಳಲ್ಲೂ ಬ್ಯುಸಿಯಾಗಿದ್ದಾರೆ. ಈ ನಡುವೆ ‘ಗಡ್ ಬಡ್’ ಹೆಸರಿನ ವೆಬ್ ಸಿರೀಸ್ ನಲ್ಲಿ ಅವರು ಅಭಿನಯಿಸುತ್ತಿರುವುದು ಅವರೇ ರಿವೀಲ್ ಮಾಡಿರುವ ಲೆಟೇಸ್ಟ್ ಸುದ್ದಿ.‌ಆಲ್ ದಿ ಬೆಸ್ಟ್ ಗಾನಾ.

Categories
ಸಿನಿ ಸುದ್ದಿ

ಡಿಯರ್ ಸತ್ಯಗೆ ಅಪ್ಪು ಅಪ್ಪಿಗೆ!

ಫೆಬ್ರವರಿಗೆ ರಿಲೀಸ್ ಗೆ ರೆಡಿಯಾದ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ

ಬಿಗ್ ಬಾಸ್ ಜತೆಗೆ ಕಿರುತೆರೆ ಹಲವು ರಿಯಾಲಿಟಿ ಶೋಗಳಲ್ಲಿ ಒಂದಷ್ಟು ಹೆಸರು ಮಾಡಿಕೊಂಡು ಬೆಳ್ಳಿತೆರೆಗೆ ಬಂದವರು ಯುವ ನಟ ಸಂತೋಷ್ ಆರ್ಯನ್.‌ಇದೀಗ ಅವರು ನಾಯಕರಾಗಿ ಕಾಣಿಸಿಕೊಂಡಿರುವ ‘ಡಿಯರ್ ಸತ್ಯ’ ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂತಾದರೆ ಈ ಚಿತ್ರ ಹೊಸ ವರ್ಷದ ಆರಂಭದಲ್ಲೆ ತೆರೆಗೆ ಬರುವುದು ಗ್ಯಾರಂಟಿ ಆಗಿದೆ. ಸದ್ಯಕ್ಕೆ ಅದೇ ಸಿದ್ಧತೆಯಲ್ಲಿ ಬ್ಯುಸಿಯಾಗಿರುವ ಚಿತ್ರ ತಂಡ, ಕೊರೋನಾ‌ಭೀತಿಯ ನಡುವೆಯೂ ಅದ್ದೂರಿಯಾಗಿ ಆಡಿಯೋ ಲಾಂಚ್ ಮಾಡುವ ಮೂಲಕ ರಿಲೀಸ್ ಪ್ರಚಾರ ಆರಂಭಿಸಿತು.

ಬೆಂಗಳೂರಿನ ರಾಜಾಜಿನಗರ ಒರಾಯನ್ ಮಾಲ್ ನ‌ ಪಿವಿಆರ್ ಚಿತ್ರ ಮಂದಿರದಲ್ಲಿ ಚಿತ್ರ ತಂಡವು ಆಡಿಯೋ ಲಾಂಚ್ ಕಾರ್ಯಕ್ರಮ‌ಆಯೋಜಿಸಿತ್ತು. ಲಾಕಡೌನ್ ನಂತರ ನಡೆದ ಮೊದಲ ಆಡಿಯೋ‌ಲಾಂಚ್ ಕಾರ್ಯಕ್ರಮ ಕೂಡ ಇದಾಗಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಟ ವಿಜಯ್ ರಾಘವೇಂದ್ರ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದರು. ಚಿತ್ರ ತಂಡವು ಆಡಿಯೋ ಲಾಂಚ್ ಜತೆಗೆ ಚಿತ್ರ ಟೀಸರ್ ಹಾಗೂ ಪಿಆರ್ ಇ ಮ್ಯೂಜಿಕ್ ಸಂಸ್ಥೆಯ ಉದ್ಘಾಟನೆ ಕಾರ್ಯಕ್ರಮ ಕೂಡ ಆಯೋಜಿಸಿತ್ತು‌. ಕೇಕ್ ಕತ್ತರಿಸುವ ಮೂಲಕ ಈ ಮೂರಕ್ಕೂ ನಟ ಪುನೀತ್ ರಾಜ್ ಕುಮಾರ್ ಚಾಲನೆ ನೀಡಿದರು.

‘ ಲಾಕ್ ಡೌನ್ ನಂತರ ಅಧಿಕೃತ ಕಾರ್ಯಕ್ರಮಕ್ಕೆ ಅಂತ ಒರಾಯನ್ ಮಾಲ್ ಗೆ ಬಂದಿದ್ದು ಇದೇ ಮೊದಲು. ಇದಕ್ಕೆ ಕಾರಣ ಗೆಳೆಯ ನಿರ್ಮಾಪಕ ಯತೀಶ್ ಕುಮಾರ್. ಅವರದೇ ಸಿನಿಮಾ ಇದು‌. ಒಂದೊಳ್ಳೆಯ ಸಿನಿಮಾ ಮಾಡಿರುವ ಖುಷಿ ಅವರಲ್ಲಿದೆ. ಅವರು‌ ಬಂದು ಕರೆದಾಗ ಬೇಡ ಎನ್ನಲಾಗಲಿಲ್ಲ. ಚಿತ್ರದ ಹಾಡುಗಳು ಚೆನ್ನಾಗಿವೆ. ನಾಯಕ‌ ನಟ ಸಂತೋಷ್ ಕೂಡ ನಂಗೆ ಗೊತ್ತು. ಅವರಿಗೂ ಒಳ್ಳೆಯದಾಗಲಿ. ಕೊರೋನಾ‌ಇಲ್ಲ ಅಂತ ಯಾರು‌ಕೂಡ ನಿರ್ಲಕ್ಷ್ಯ ಮಾಡಬೇಡಿ. ಎಚ್ಚರಿಕೆ ಇರಲಿ. ಹಾಗೆಯೇ ಒಳ್ಳೆಯ ದಿನಗಳು ಆದಷ್ಟು ಬೇಗ ಬರಲಿ’ ಅಂತ ಪುನೀತ್ ರಾಜ್ ಕುಮಾರ್ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ನಟ ವಿಜಯ್ ರಾಘವೇಂದ್ರ ಕೂಡ ಚಿತ್ರ ತಂಡಕ್ಕೆ‌ಶುಭ ಹರಿಸಿದರು.

ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣವಾದ ಚಿತ್ರವಿದು.’ಭಿನ್ನ’ ಚಿತ್ರದ ಗೆಲುವಿನ ನಂತರ ಯತೀಶ್ ವೆಂಕಟೇಶ್, ಬಿ.ಎಸ್. ಶ್ರೀನಿವಾಸ್, ಗಣೇಶ್ ಪಾಪಣ್ಣ ಮತ್ತು ಅಜಯ್ ಅಪ್ಪರೂಪ್ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದು, ಕತೆಗೆ ಪೂರಕವಾಗಿಯೇ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತಂದಿದ್ದಾರೆ‌.
‘ನೂರು ಜನ್ಮಕೂ’ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆಗಿದ್ದ ಸಂತೋಷ್ ಆರ್ಯನ್, ಈ ಚಿತ್ರದ ಮೂಲಕ ಹೀರೋ ಆಗಿ ಮತ್ತೊಮ್ಮೆ‌ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಶಿವಣ್ಣ ಚಿತ್ರದ ಟೀಸರ್ ಲಾಂಚ್ ಮಾಡಿದ್ದರು, ಈಗ ಅಪ್ಪು ಸರ್ ಆಡಿಯೋ‌ ಲಾಂಚ್ ಮಾಡಿದ್ದಾರೆ. ಇದು ನನ್ನ ಸೌಭಾಗ್ಯ ಅಂತ ಸಂತೋಷ್ ಹೇಳಿದರು‌.

ನಟಿ ಅರ್ಚನಾ ಕೊಟ್ಟಿಗೆ ಈ ಚಿತ್ರದ ನಾಯಕಿ. ಅವರಿಗಿದು ಮೊದಲ ಕಮರ್ಷಿಯಲ್ ಸಿನಿಮಾ. ದೊಡ್ಡ ಚಿತ್ರದಲ್ಲಿ ಅಭಿನಯಿಸಿದ ಖುಷಿ ಅವರಿಗಿದೆ. ಹಾಗಂತ ಖುಷಿ ಹಂಚಿಕೊಂಡರು.ಇನ್ನು ಆಡಿಯೋ ಬಿಡುಗಡೆ ಸಮಾರಂಭವಾಗಿದ್ದರಿಂದ ಕಾರ್ಯಕ್ರಮದ ಹೀರೋ ಶ್ರೀಧರ್ ವಿ ಸಂಭ್ರಮ್​, ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ‘ಕರೊನಾ ಸಮಯದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಆಗುತ್ತಿರುವುದೇ ಖುಷಿಯ ವಿಚಾರ. 2021ಕ್ಕೆ ಒಳ್ಳೇ ದಿನಗಳು ಕಾಯುತ್ತಿವೆ. ಈ ಚಿತ್ರದಲ್ಲಿ ಐದು ಹಾಡುಗಳಿವೆ. ಮುಂದಿನ ನಿಲ್ದಾಣ ಚಿತ್ರದ ಇನ್ನೂನು ಬೇಕಾಗಿದೆ ಹಾಡಿಗೆ ಸಾಹಿತ್ಯ ಬರೆದಿದ್ದ ಪ್ರಮೋದ್ ಮರವಂತೆ ಈ ಚಿತ್ರದಲ್ಲಿನ ಹಾಡಿಗೂ ಸಾಹಿತ್ಯ ಬರೆದಿದ್ದಾರೆ.

ಶಿವಗಣೇಶ್

ಅದೇ ರೀತಿ ಶ್ವೇತಾ, ಅನುರಾಧಾ ಭಟ್, ಅನಿರುದ್ಧ ಶಾಸ್ತ್ರಿ, ಹೇಮಂತ್, ವಿಹಾನ್ ಹಾಡುಗಳಿಗೆ ಧ್ವನಿ ನೀಡಿ ನನ್ನ ಬಳಗದಲ್ಲಿದ್ದಾರೆ’ ಎಂದು ತಂಡವನ್ನು ಪರಿಚಯಿಸಿದರು ಶ್ರೀಧರ್ ವಿ ಸಂಭ್ರಮ್. ಸಂತೋಷ್ ಆರ್ಯನ್,. ಅರ್ಚನಾ ಕೊಟ್ಟಿಗೆ, ಅರುಣಾ ಬಾಲರಾಜ್, ಅಶ್ವಿನ್ ರಾವ್​ ಪಲ್ಲಕ್ಕಿ. ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ್, ಆದರ್ಶ್​ ಚಂದ್ರಶೇಖರ್ ಇತರರು ಪಾತ್ರವರ್ಗದಲ್ಲಿದ್ದಾರೆ. ತಾಂತ್ರಿಕ ವರ್ಗದ ಬಗ್ಗೆ ಹೇಳುವುದಾದರೆ, ವಿನೋಧ ಭಾರತಿ ಛಾಯಾಗ್ರಹಣ, ಮೋಹನ್ ಮಾಸ್ಟರ್​ ಕೋರಿಯಾಗ್ರಾಫಿ, ಸುರೇಶ್​ ಆರ್ಮುಗಮ್ ಸಂಕಲನ, ಶ್ರೀಧರ್ ವಿ ಸಂಭ್ರಮ ಸಂಗೀತ, ಭಾರ್ಗವಿ ವಿಖ್ಯಾತಿ ಕಾಸ್ಟೂಮ್​ ವಿನ್ಯಾಸ ಮಾಡಿದ್ದಾರೆ.ಇನ್ನು ಚಿತ್ರದ ಕತೆಗೆ ಬಂದರೆ, ಬೆಂಗಳೂರೆಂಬ ಮಹಾನಗರದಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುವ, ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಯತ್ನಿಸುವ ಹುಡುಗನ ಕಥೆ ‘ಡಿಯರ್ ಸತ್ಯʼದಲ್ಲಿ ಜೀವ ಪಡೆದಿದೆ. ‘ಡಿಯರ್ ಸತ್ಯ’

Categories
ಸಿನಿ ಸುದ್ದಿ

ಸುದೀಪ್ ಫ್ಯಾನ್ಸ್ ಕ್ರಿಕೆಟ್ ಪಂದ್ಯಾವಳಿಗೆ ದಿನಗಣನೆ-

ಡಿಸೆಂಬರ್ 25 ರಿಂದ ಮೂರು ದಿನಗಳ ಹಬ್ಬ

ಸಿನಿಮಾ ಮಂದಿಗೂ ಮತ್ತು ಈ ಕ್ರಿಕೆಟ್ ಗೂ ಅವಿನಾಭಾವ ಸಂಬಂಧ. ಈಗಾಗಾಲೇ ಸೆಲಿಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಕೂಡ ನಡೆದಿದೆ. ಈಗಲೂ ನಡೆಯುತ್ತಿದೆ. ಈಗ ಮತ್ತೆ ಸಿನಿಮಾ ಮಂದಿ ಸೇರಿ ಕ್ರಿಕೆಟ್‌ ಹಬ್ಬ ಮಾಡಲು ತಯಾರಿ ನಡೆಸಿದ್ದಾರೆ.


ಹೌದು 2020ರ ಡಿಸೆಂಬರ್ 25,26 ಮತ್ತು 27ರಂದು ಕೆ.ಎಸ್.ಪಿ.ಎಲ್. ಸೀಸನ್ 2 ಶುರುವಾಗಲಿದೆ.
ಈ ಕ್ರಿಕೆಟ್ ಪಂದ್ಯಾವಳಿ ಅಭಿಮಾನಿಗಳಿಂದ ಅಭಿಮಾನಿಗಳಿಗೋಸ್ಕರ ನಡೆಯಲಿದೆ ಅನ್ನೋದು ವಿಶೇಷ.
ಮೂರು ದಿನಗಳ ಕಾಲ ನಡೆಯಲಿರುವ ಈ ಟೆನ್ನಿಸ್ ಬಾಲ್ ಟೂರ್ನಮೆಂಟ್ ಭಾರತ ಸರ್ಕಾರದ ಕೊವೀಡ್-19 ನಿಯಮಗಳ ಅಡಿಯಲ್ಲಿ ಆಯೋಜನೆ ಮಾಡಲಾಗಿದೆ ಎಂಬುದು ಗಮನಕ್ಕಿರಲಿ. ಐಪಿಎಲ್ ರೀತಿಯೇ ಅದ್ದೂರಿಯಾಗಿ ಈ ಪಂದ್ಯಾವಳಿ ನಡೆಯಲಿದೆ.


ರಾಜ್ಯದ ಪ್ರತಿ ಜಿಲ್ಲೆಯಿಂದಲೂ ಒಂದೊಂದು ತಂಡ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ.
ಈ ಪಂದ್ಯಾವಳಿಯ ಇನ್ನೊಂದು ವಿಶೇಷ ಅಂದರೆ, ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮಾತ್ರ ಭಾಗವಹಿಸಲಿದ್ದಾರೆ.


ಇದರಲ್ಲಿ ಆಕರ್ಷಕ ಟ್ರೋಫಿಗಳು, ನಗದು ಬಹುಮಾನ ಮತ್ತು ಪ್ರೊತ್ಸಾಹದ ಬಹುಮಾನಗಳಿವೆ.
ಇದೆಲ್ಲಕ್ಕಿಂತಲೂ ಮತ್ತೊಂದು
ವಿಶೇಷ ಅಂದರೆ ಈ ಸಲದ ಪಂದ್ಯಾವಳಿಗೆ ಮಹಿಳಾ ಅಭಿಮಾನಿಗಳ ಎರಡು ತಂಡದ‌ ಮೂಲಕ ಚಾಲನೆ ಸಿಗಲಿದೆ.ಅಂತ್ಯದ ಪಂದ್ಯಾವಳಿ
ಆಯೋಜಕರು ಮತ್ತು ಸಿನಿಮಾ ಪತ್ರಕರ್ತರ ನಡುವೆ ನಡೆಯಲಿದೆ.


ಕನ್ನಡ ಚಿತ್ರರಂಗದ ಕಲಾವಿದರು ಕರ್ನಾಟಕದ ಪ್ರಮುಖ ಕ್ರಿಕೆಟ್ ಆಟಗಾರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಪಂದ್ಯಾವಳಿ ಕಿಚ್ಚ ಸುದೀಪ ಅವರ ಅಭಿಮಾನಿ ಅಪಘಾತದಲ್ಲಿ ಮೃತಪಟ್ಟ ನಂದೀಶ್ ಅವರ ಎರಡನೇ ವರ್ಷದ ಸ್ಮರಣಾರ್ಥ ನಡೆಯಲಿದೆ ಎಂಬುದು ವಿಶೇಷ. ಇನ್ನು ಈ ಪಂದ್ಯಾವಳಿಯು( ಕೆ.ಎಸ್.ಸಿ.ಎ) ಬಾದ್ ಷಾ ಕಿಚ್ಚ ಸುದೀಪ ರವರ ಸಂಸ್ಥೆ “ಕಿಚ್ಚ ಸುದೀಪ ಕ್ರಿಕೆಟ್ ಅಸೋಸಿಯೇಷನ್” ಮೂಲಕ ನಡೆಯಲಿದ್ದು,
ನೆಲಮಂಗಲದ ಆದಿತ್ಯ ಗ್ಲೋಬಲ್ ಕ್ರಿಕೆಟ್ ಮೈದಾನದಲ್ಲಿ ತಯಾರಿ ನಡೆಯಲಿದೆ.

Categories
ಸಿನಿ ಸುದ್ದಿ

ನಾಯಿ ಬೊಗಳಿದರೆ ದೇವಲೋಕ ಹಾಳಾಗದು- ನಟಿ ಸುಮಲತಾ ಕೆಂಡಾಮಂಡಲ

ಬಿಟ್ಟಿ ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡಬೇಡಿ ಎಂದು ರಂಗರಾಜುಗೆ ಖಡಕ್ ವಾರ್ನಿಂಗ್ ಕೊಟ್ಟ ಸಂಸದೆ

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ಹೇಳಿಕೆ ವಿರುದ್ಧ ಇಡೀ ಸ್ಯಾಂಡಲ್ ವುಡ್ ರೊಚ್ಚಿಗೆದ್ದಿದೆ. ವಿಜಯ್ ರಂಗರಾಜು ವಿರುದ್ಧ ಶನಿವಾರ ನಟ ಕಿಚ್ಚ ಸುದೀಪ್, ಪವರ್ ಸ್ಟಾರ್‌ ಪುನೀತ್ ರಾಜ್ ಕುಮಾರ್ ಕಿಡಿಕಾರಿ ,ಖಡಕ್ ವಾರ್ನಿಂಗ್ ನೀಡಿದ ಬೆನ್ನಲೇ ಭಾನುವಾರ ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಕೂಡ ಕಟುವಾದ ಮಾತುಗಳ ಮೂಲಕ ರಂಗರಾಜು ಅವರನ್ನು ತರಾಟಗೆ ತೆಗೆದುಕೊಂಡಿದ್ದಾರೆ.ಬಿಟ್ಟಿ ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಿ ಅಂತ ಎಚ್ಚರಿಸಿದ್ದಾರೆ‌. ‘ಸಿನಿ ಲಹರಿ’ ಗೆ ಲಭ್ಯವಾದ ಅವರ ಹೇಳಿಕೆಯ ಪೂರ್ಣ ವಿವರ ಇಲ್ಲಿದೆ.

” ಇತ್ತೀಚಿನ ದಿನಗಳಲ್ಲಿ ಜನಪ್ರಿಯ ವ್ಯಕ್ತಿಗಳ ಬಗ್ಗೆ ಇಲ್ಲ ಸಲ್ಲದ ವಿವಾದ್ಮಕ ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆಯುವುದೇ ಕೆಲವರಿಗೆ ಹವ್ಯಾಸವಾಗಿ ಹೋಗಿದೆ.
ಇಡೀ ದೇಶವೇ, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರ ರಸಿಕರಿಗೆ ನಮ್ಮ ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನೆತೆ ಏನೆಂಬುವುದು ಚೆನ್ನಾಗಿಯೇ ಗೊತ್ತು. ವಿಷ್ಣು ನಮ್ಮನ್ನು ದೈಹಿಕವಾಗಿ ದೂರವಾಗಿ ಹತ್ತು ವರುಷಗಳೇ ಕಳೆದರೂ ಅವರ ಮೇಲಿನ ಅಭಿಮಾನ ಎಳ್ಳಷ್ಟೂ ಕಡಿಮೆಯಾಗದಿರುವುದೆ ಅದಕ್ಕೆ ಸಾಕ್ಷಿ.

ಯಾರಿಗೂ ತಿಳಿಯದ, ಯಾರೋ ಒಬ್ಬ ಅವರ ಬಗ್ಗೆ ಮನಸ್ಸೋ ಇಚ್ಛೆ ಕೆಲವು ಕೆಟ್ಟ ಪದಗಳಿಂದ ನಿಂದಿಸಿದರೆ ಅದರಿಂದ ನಮ್ಮ ವಿಷ್ಣುವಿನ ಘನತೆಗೆ ಒಂದು ಸಾಸಿವೆ ಕಾಳಷ್ಟು ಧಕ್ಕೆಯಾಗದು!

ಅದು ಕೇವಲ ಅಂತಹ ಬಾಯಿಬಡುಕ ವ್ಯಕ್ತಿಯ ಕೆಟ್ಟ ಗುಣ ಹಾಗು ನೀಚ ಬುದ್ದಿಯ ಅನಾವರಣವಲ್ಲದೆ ಬೇರೇನಲ್ಲ. ಅದರಲ್ಲೂ ನಮ್ಮನ್ನು ಅಗಲಿದ ವ್ಯಕ್ತಿಯ ಬಗ್ಗೆ ಈ ರೀತಿಯ ತುಚ್ಛವಾಗಿ ಮಾತನಾಡುವುದು ಕ್ಷಮಿಸಲಾಗದ ದೊಡ್ಡ ಅಪರಾಧ.

ಸರಿಯಾದ ಮನಸ್ಥಿತಿ ಉಳ್ಳವನು, ಒಬ್ಬ ವ್ಯಕ್ತಿಯು ಬದುಕಿದ್ದಾಗಲೇ ಅವರ ಬಗ್ಗೆ ಮಾತನಾಡಿ ಅವರ ಪ್ರತಿಕ್ರಿಯೆ ನಿರೀಕ್ಷಿಸುವುದು ಸರಿಯೇ ಹೊರತು, ಅವರ ನಿಧನದ ನಂತರ ಅವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನ, ಕೇವಲ ಹೇಡಿತನದ ಪರಮಾವಧಿ ಅಲ್ಲದೆ ಮತ್ತೇನೂ ಅಲ್ಲ.

ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ವರ್ಚಸ್ಸು ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳಿಗೆ ಗೊತ್ತು.
ನಾಯಿ ಬೊಗಳಿದರೆ ದೇವಲೋಕ ಹಾಳಾಗದು ಎಂಬುದಕ್ಕೆ ಇದೊಂದು ಸರಿಯಾದ ಉದಾಹರಣೆ. ಇಂತಹ ‘ಚೀಪ್ ಪಬ್ಲಿಸಿಟಿ’ ಗಾಗಿ ಮನಬಂದಂತೆ ಬಾಯಿ ಹರಟುವ ವ್ಯಕ್ತಿಗಳು ಕ್ಷಮೆ ಕೇಳಲು ಅರ್ಹರಲ್ಲ. ಕ್ಷಮಿಸಲು ಆಗದು, ಕ್ಷಮಿಸಲು ಬಾರದು”
ಸುಮಲತಾ ಅಂಬರೀಶ್, ಸಂಸದೆ


ಈ ಹೇಳಿಕೆಯ ಮೂಲಕ ವಿಷ್ಣು ವರ್ಧನ್ ಅವರ ವ್ಯಕ್ತಿತ್ವ, ವರ್ಚಸ್ಸುನ್ನು ಸ್ಮರಿಸಿಕೊಂಡಿರುವ ಸುಮಲತಾ ಅಂಬರೀಶ್ ಅವರು, ನಿಧನದ ನಂತರ ಅವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಇಂತಹ ಪ್ರಯತ್ನ ಹೇಡಿತನದಿಂದ ಕೂಡಿದ್ದು ಅಂತ ರಂಗರಾಜು ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

error: Content is protected !!