ಆರ್ಮುಗಂ ರವಿಶಂಕರ್ ಹೀಗೆಂದು ಖಡಕ್ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?
“ನಾನು ಕನ್ನಡಿಗರಿಗೆ ಚಿರಋಣಿ. ಇಲ್ಲಿನ ನೆಲ, ಜಲ, ಭಾಷೆ ನನ್ನ ಬದುಕನ್ನು ಹಸನಾಗಿಸಿದೆ. ನನಗೆ ಜೀವನ ಕೊಟ್ಟ ಕರ್ನಾಟಕವನ್ನು ಎಂದಿಗೂ ಮರೆಯೋದಿಲ್ಲ…”
_ ಇದು “ಆರ್ಮುಗಂ” ಖ್ಯಾತಿಯ ರವಿಶಂಕರ್ ಸದಾ ಪ್ರೀತಿಯಿಂದಲೇ ಹೇಳುವ ಮಾತು.
ಇಷ್ಟಕ್ಕೂ ಖಳನಟ ರವಿಶಂಕರ್ ಅವರ ಬಗ್ಗೆ ಇಲ್ಲೇಕೆ ಪ್ರಸ್ತಾಪ ಎಂಬ ಪ್ರಶ್ನೆಗೆ, ರವಿಶಂಕರ್ ಬುಧವಾರ “ಸಿನಿಲಹರಿ” ಕಚೇರಿಗೆ ಆಗಮಿಸಿದ್ದರು. ಈ ವೇಳೆ ತಮ್ಮ ಸಿನಿ ಜರ್ನಿ ಕುರಿತು ಹೇಳಿಕೊಳ್ಳುತ್ತಿರುವಾಗ, ಒಂದು ಮರೆಯದ ಘಟನೆಯನ್ನೂ ನೆನಪಿಸಿಕೊಂಡರು. ಆ ಘಟನೆ ಕುರಿತಂತೆ ಸ್ವತಃ ರವಿಶಂಕರ್ ವಿವರಿಸಿದ್ದು ಹೀಗೆ.
ಓವರ್ ಟು ರವಿಶಂಕರ್…
ತೆಲುಗಿನ ಜನಪ್ರಿಯ ವಾಹಿನಿಯೊಂದರಲ್ಲಿ “ಆಲಿ ತೊ ಸರದಾಗ” ಎಂಬ ಸಕ್ಸಸ್‌ಫುಲ್ ಕಾರ್ಯಕ್ರಮವಿದೆ. ಆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ಅಲ್ಲಿ ತೆಲುಗಿನ ಖ್ಯಾತ ನಟ ಆಲಿ ಅವರು ಆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತು. ಮಧ್ಯೆ ಮಾತನಾಡುವಾಗ, ಒಂದು ಚಿತ್ರದ ಡೈಲಾಗ್ ಹೇಳಬೇಕು ಎಂಬ ಬೇಡಿಕೆ ಬಂತು.
ಆ ಬೇಡಿಕೆಯನ್ನು ಸ್ವೀಕರಿಸಿದ ನಾನು, ಡೈಲಾಗ್ ಹೇಳೋಕೆ ಅಣಿಯಾದೆ. ಆದರೆ, ಎಲ್ಲರಿಗೂ ನಾನು ತೆಲುಗಿನ “ಅರುಧಂತಿ” ಸಿನಿಮಾದ “ವದಲಾ ಬೊಮ್ಮಾಲಿ..” ಡೈಲಾಗ್ ಹೇಳಬಹುದು ಎಂದೇ ನಿರೀಕ್ಷಿಸಿದ್ದರು. ಆದರೆ, ನಾನು ಮಾತ್ರ ಹೇಳಿದ್ದು, “ಕೆಂಪೇಗೌಡ” ಚಿತ್ರದ “ಶಾಕ್ ಆಯ್ತಾ… ಶಾಕ್ ಆಗಲೇಬೇಕು ಅಂತ ತಾನೇ ನಾನಿಲ್ಲಿ ಮಾಗಡಿ ರೋಡ್‌ಗೆ ಪೋಸ್ಟಿಂಗ್ ಹಾಕಿಸಿದ್ದು…” ಎಂಬ ಡೈಲಾಗ್ ಹರಿಬಿಟ್ಟೆ. ಅಲ್ಲಿ ಕುಳಿತ ಆಡಿಯನ್ಸ್ ಎಲ್ಲರೂ ಚಪ್ಪಾಳೆ, ಶಿಳ್ಳೆಗಳ ಸುರಿಮಳೆಗೈದರು. ಕೊನೆಯಲ್ಲಿ ಎಲ್ಲರಿಗೂ ನಮಸ್ಕರಿಸುತ್ತಲೇ, ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎಂದು ಹೇಳಿದೆ.
ಆ ಕಾರ್ಯಕ್ರಮ ಮುಗಿದ ಬಳಿಕ, ಆ ಜನಪ್ರಿಯ ವಾಹಿನಿಯ ಸಂಪಾದಕರು ನನಗೆ ಫೋನ್ ಮಾಡಿ, ಎಲ್ಲಾ ಓಕೆ, ಆದರೆ, ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎನ್ನುವುದನ್ನು ಕಟ್ ಮಾಡ್ತೀನಿ. ಯಾಕೆಂದರೆ, ಇದು ತೆಲುಗು ವಾಹಿನಿ ಅಂದರು. ಆಗ ನಾನು, ಹಾಗೇನಾದರೂ ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಪದವನ್ನು ಕಟ್ ಮಾಡುವುದಾದರೆ, ಆ ಪ್ರೋಗ್ರಾಮ್ ಕ್ಯಾನ್ಸಲ್ ಮಾಡಿ. ನನಗೆ ಪಬ್ಲಿಸಿಟಿಯ ಅಗತ್ಯವೇ ಇಲ್ಲ ಅಂದುಬಿಟ್ಟೆ. ಹಾಗಾಗಿ, ಇವತ್ತಿಗೂ ಆ ಕಾರ್ಯಕ್ರಮದಲ್ಲಿ ನಾನು ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎಂದು ಹೇಳಿರುವುದಿದೆʼ ಎನ್ನುತ್ತಾರೆ ರವಿಶಂಕರ್.
ಅದೇನೆ ಇರಲಿ, ರವಿಶಂಕರ್ ಅವರು ಕನ್ನಡ ಚಿತ್ರರಂಗವನ್ನು ತುಂಬಾ ಗೌರವದಿಂದ ನೋಡುತ್ತಾರೆ. ಇಲ್ಲಿನ ಜನರನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ. ಕನ್ನಡ ಭಾಷೆ ಮೇಲೆ ಸದಾ ಪ್ರೀತಿ ತೋರುವ ಅವರು, ನನ್ನ ಅಣ್ಣ ಸಾಯಿಕುಮಾರ್ ಅವರಿಗೆ “ಪೊಲೀಸ್ ಸ್ಟೋರಿ” ದೊಡ್ಡ ಹೆಸರು ತಂದುಕೊಟ್ಟಿತು. ಕನ್ನಡದಲ್ಲೇ ಅಣ್ಣ ಕೂಡ ಸುದ್ದಿಯಾದವರು. ನನ್ನ ತಮ್ಮ ಅಯ್ಯಪ್ಪ ಶರ್ಮ ಕೂಡ ಇಲ್ಲಿ ಸದ್ದು ಮಾಡಿದವರೇ. ಇನ್ನು, ನನಗೆ, ತೆಲುಗು ಚಿತ್ರರಂಗದಲ್ಲಿ ಮೂರು ದಶಕ ಕೆಲಸ ಮಾಡಿದರೂ, ಹೇಳಿಕೊಳ್ಳುವ ಹೆಸರು ಸಿಗಲಿಲ್ಲ. ಆದರೆ, ಕನ್ನಡ ಚಿತ್ರರಂಗ ನನಗೆ ಹೆಸರು, ಗೌರವ ಎಲ್ಲವನ್ನೂ ಕೊಟ್ಟಿದೆ.
ಹೀಗಾಗಿ ನನಗೆ ಕನ್ನಡವೇ ನನ್ನ ಬದುಕಿನ ಭಾಷೆ, ಮಾತೃಭಾಷೆ ಎಲ್ಲವೂ ಇಲ್ಲೇ. ಇಂದು ನಾನು ಏನೆಲ್ಲಾ ಆಗಿದ್ದೇನೋ ಅದಕ್ಕೆಲ್ಲಾ ಕನ್ನಡಿಗರೇ ಕಾರಣ” ಮುಂದಿನ ದಿನಗಳಲ್ಲಿ ನನ್ನ ಮಗನನ್ನೂ ಕನ್ನಡ ಚಿತ್ರರಂಗದ ಮೂಲಕವೇ ಪರಿಚಯಿಸುತ್ತೇನೆ. ಅದಕ್ಕೆ ಈಗಾಗಲೇ ತಯಾರಿ ನಡೆದಿದೆ. ಈ ಹಿಂದೆಯೇ ಪರಿಚಯಿಸಬೇಕಿತ್ತು. ಆದರೆ, ಕೊರೊನಾ ಹಾವಳಿಯಿಂದ ಸ್ವಲ್ಪ ತಡವಾಗಿದೆ. ಬರುವ ಮೇ ತಿಂಗಳಲ್ಲಿ ಮಗನನ್ನು ಕನ್ನಡ ಸಿನಿಮಾ ಮೂಲಕ ಇಂಡಸ್ಟ್ರಿಗೆ ಪರಿಚಯಿಸುತ್ತಿದ್ದೇನೆ ಎನ್ನುತ್ತಾರೆ ಅವರು.
ಆಲ್ ದಿ ಬೆಸ್ಟ್ ಸಿನಿಲಹರಿ
ಕಚೇರಿಯಲ್ಲಿ ಕುಳಿತು ಇಷ್ಟೆಲ್ಲಾ ಮಾತನಾಡಿದ ಖಳನಟ ರವಿಶಂಕರ್ ಅವರು, ಕೊನೆಗೆ “ಸಿನಿಲಹರಿ” ಯಶಸ್ವಿಯಾಗಲಿ. ನಿಮ್ಮ ಬರವಣಿಗೆಯೇ ನಿಮಗೆ ಶಕ್ತಿ. ಕನ್ನಡ ಚಿತ್ರರಂಗದಲ್ಲಿ “ಸಿನಿಲಹರಿ” ಹೊಸ ಹೆಜ್ಜೆ ಮೂಡಿಸಲಿ. ಹೊಸ ಸುದ್ದಿಗಳ ಜೊತೆಗೆ ಕನ್ನಡ ಚಿತ್ರರಂಗದ ಪರ ಈ ಸಿನಿಲಹರಿ ಕೆಲಸ ಮಾಡಲಿ” ಎಂದು ಶುಭಹಾರೈಸಿದರು.