ರಾಧೆ ಶ್ಯಾಮ್ ಟೀಸರ್ ಔಟ್ – ಅಭಿಮಾನಿಗಳಿಗೆ ಇದು ವ್ಯಾಲೆಂಟೇನ್ ಗಿಫ್ಟ್


ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ‘ರಾಧೆ ಶ್ಯಾಮ್’ ಟೀಸರ್ ಪ್ರೇಮಿಗಳ ದಿನವಾದ ಇಂದು ಬಿಡುಗಡೆಯಾಗಿದೆ. ರಾಧಾಕೃಷ್ಣ ಕುಮಾರ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ರೊಮ್ಯಾಂಟಿಕ್ ಸಿನಿಮಾ ತೆಲುಗು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ಕನ್ನಡ, ತಮಿಳು ಮತ್ತು ಮಲಯಾಳಂ ಡಬ್ಬಿಂಗ್ ಅವತರಣಿಕೆಗಳು ತೆರೆಕಾಣಲಿವೆ. ಸದ್ಯ ಈಗ ತೆಲುಗು ಟೀಸರ್ ಬಿಡುಗಡೆಯಾಗಿದ್ದು, ‘ಬಾಹುಬಲಿ’ಯ ಆಕ್ಷನ್ ಹೀರೋ ಪ್ರಭಾಸ್ ಇಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ.

ತಾಜಾ ಅನುಭೂತಿ ನೀಡುವ ಹಿನ್ನೆಲೆ, ವಿದೇಶದ ಆಕರ್ಷಕ ರೈಲ್ವೆ ನಿಲ್ದಾಣವೊಂದರ ಸನ್ನಿವೇಶ ಟೀಸರ್ ನಲ್ಲಿದೆ. ನಾಯಕ ತುಂಟುತನದಿಂದ ಕೂಗುತ್ತಾ ನಾಯಕಿಯನ್ನು ಒಲೈಸುವ ಈ ಪುಟ್ಟ ಸೀನ್ ಇದೊಂದು ರೊಮ್ಯಾಂಟಿಕ್ ಸಿನಿಮಾ ಎನ್ನುವುದಕ್ಕೆ ಸಾಕ್ಷ್ಯ ನುಡಿಯುತ್ತದೆ. “ನೀನು ರೋಮಿಯೋ ಎಂದುಕೊಂಡಿದ್ದೀಯಾ?” ಎನ್ನುವ ನಾಯಕಿಯ ಪ್ರಶ್ನೆಗೆ ನಾಯಕ,

“ನಾನು ಅವನಂತೆ ಅಲ್ಲ. ಅವನು ಪ್ರೀತಿಗಾಗಿ ಸಾಯುತ್ತಾನೆ. ಆದರೆ ನಾನು ಹಾಗಲ್ಲ!” ಎನ್ನುತ್ತಾನೆ.
‘ರಾಧೆ ಶ್ಯಾಮ್’ ಚಿತ್ರದ ಶೂಟಿಂಗ್ ಕೋವಿಡ್‌ನಿಂದಾಗಿ ಕಳೆದ ಮಾರ್ಚ್‌ನಲ್ಲಿ ಸ್ಥಗಿತಗೊಂಡಿತ್ತು. ಡಿಸೆಂಬರ್‌ನಲ್ಲಿ ಮತ್ತೆ ಚಿತ್ರೀಕರಣ ಆರಂಭವಾಗಿ ಇನ್ನೇನು ಮುಗಿಯುವ ಹಂತದಲ್ಲಿದೆ.

ಚಿತ್ರದ ಇತರೆ ತಾರಾಬಳಗದಲ್ಲಿ ಸತ್ಯರಾಜ್, ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಜಗಪತಿ ಬಾಬು, ಜಯರಾಂ ನಟಿಸುತ್ತಿದ್ದಾರೆ. ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ. ತೆಲುಗು ಅವತರಣಿಕೆಗೆ ಜಸ್ಟಿನ್ ಪ್ರಭಾಕರ್ ಸಂಗೀತ ಸಂಯೋಜಿಸಿದ್ದರೆ ಹಿಂದಿಗೆ ಮಿಥುನ್ ಮತ್ತು ಮನನ್ ಭಾರದ್ವಾಜ್ ಸಂಗೀತ ನೀಡಿದ್ದಾರೆ.

Related Posts

error: Content is protected !!