Categories
ಸಿನಿ ಸುದ್ದಿ

ನಾನು ಆಗ ಸತ್ತೇ ಹೋಗ್ತೀನಿ ಅಂದುಕೊಂಡಿದ್ದರು! ಬಿಗ್‌ಬಾಸ್‌ ಮನೆಯಲ್ಲಿ ಶುಭಾಪೂಂಜಾ ಹೇಳಿದ ಮಾತಲ್ಲಿ ಸತ್ಯವಿದೆಯಾ?

ಈ ಮಾತನ್ನು ಹೇಳಿದ್ದು ಸ್ವತಃ ಶುಭಾಪೂಂಜಾ. ಅವರು ಹೇಳಿಕೊಂಡಿದ್ದು ಬಿಗ್‌ಬಾಸ್-‌೮ರಲ್ಲಿ. ಹೌದು, ಶುಭಾಪೂಂಜಾ ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಹುಷಾರಿಲ್ಲದೆ, ಆಸ್ಪತ್ರೆ ಸೇರಿ, ಐಸಿಯುನಲ್ಲಿದ್ದು, ಸಾಯುವ ಪರಿಸ್ಥಿತಿಯಲ್ಲಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಶುಭಾಪೂಂಜಾ, ಹೇಳಿಕೊಂಡಿದ್ದು, ಮತ್ತೊಬ್ಬ ಸ್ಪರ್ಧಿ “ಬ್ರಹ್ಮಗಂಟು” ಖ್ಯಾತಿಯ ನಟಿ ಗೀತಾ ಜೊತೆ. ಅವರೊಂದಿಗೆ ಮಾತನಾಡುವಾಗ, ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ ಶುಭಾ.

ಈ ವೇಳೆ, ಅವರು ಹೇಳಿದ್ದಿಷ್ಟು. “ನಾನು ಚಿಕ್ಕವಳಿದ್ದಾಗಲೇ ತುಂಬಾ ಚೂಟಿಯಾಗಿದ್ದೆ. ನನ್ನ ಅಮ್ಮ ಆಗಾಗ ಬಡಿಯುತ್ತಿದ್ದರು. ನಾನು ನನ್ನ ಫ್ರೆಂಡ್ಸ್ ಜೊತೆ ಸದಾ ಗಲಾಟೆ ಮಾಡುತ್ತಿದ್ದೆ. ಆಗ ನನ್ನ ಅಮ್ಮ ಬಯ್ಯುತ್ತಿದ್ದರು. ಅದು ನನಗೆ ಸಿಕ್ಕಾಪಟ್ಟೆ ಕೋಪ ತರಿಸುತ್ತಿತ್ತು. ಒಮ್ಮೆ ನನಗೆ ಹುಷಾರಿಲ್ಲದೆ ಐಸಿಯುನಲ್ಲಿ ಅಡ್ಮಿಟ್ ಮಾಡಲಾಗಿತ್ತು. ಆಗ, ನನ್ನ ಸ್ಥಿತಿ ನೋಡಿದವರು ಇನ್ನೇನು ನಾನು ಸತ್ತೇ ಹೋಗುತ್ತೇನೆ ಅಂತಾನೇ ಅಂದುಕೊಂಡಿದ್ದರು. ಆ ವೇಳೆ ನನಗೆ ಪ್ರಜ್ಞೆಯೇ ಇರಲಿಲ್ಲವಂತೆ. ನನ್ನನ್ನು ನೋಡಿದ ಅಮ್ಮನ ಸ್ಥಿತಿಯೂ ಸಹ ಅಷ್ಟೇ ಚಿಂತಾಜನಕವಾಗಿತ್ತು. ನನ್ನ ಪರಿಸ್ಥಿತಿ ನೋಡಿದ ಅಮ್ಮ ದೇವರ ಮೊರೆ ಹೋದರು‌. ನಾವು ನಂಬುವ ದೇವರಿಗೆ ಮುಡಿ ಕೊಡುತ್ತೇವೆ ಅಂತ ಅಮ್ಮ ಹರಕೆ ಹೇಳಿದ್ದರು‌.‌ ಇದರಿಂದ ನಾನು ದಿನೇ ದಿನೇ ಚೇತರಿಸಿಕೊಂಡು ಬಂದೆ‌. ಆ ದೇವರ ದಯೆಯಿಂದ ನಾನು ಬದುಕುಳಿದೆ! ಇದಾದ ಬಳಿಕ ನನ್ನ ತಲೆಗೂದಲನ್ನು ದೇವರಿಗೆ ಅರ್ಪಿಸಲು ಹೋದೆವು. ನಂತರದ ದಿನಗಳಲ್ಲಿ ತಲೆಗೂದಲಿಲ್ಲದೆ ಸ್ಕೂಲ್‌ಗೆ ಹೋಗಲು ಮುಜುಗರವಾಗುತ್ತಿತ್ತು. ಮನೆಯಲ್ಲಿ ಅಮ್ಮನ ಬಟ್ಟೆಗಳನ್ನು ತಲೆಗೆ ಕವರ್ ಮಾಡಿಕೊಳ್ಳುತ್ತಿದ್ದೆ. ಸ್ಕೂಲ್‌ನಲ್ಲಂತೂ ಎಲ್ಲರೂ ನನ್ನ ನೋಡಿ ನಗೋರು..” ಅಂತ ಶುಭಾ ತನ್ನ ಬಾಲ್ಯದ ಜೀವನವನ್ನು ನೆನಪಿಸಿಕೊಂಡಿದ್ದಲ್ಲದೆ, ತನ್ನ ಜೊತೆ ಇದ್ದ ಸ್ಪರ್ಧಿಗಳನ್ನು ನಗೆಗಡಲಲ್ಲಿ ತೇಲಿಸಿದರು.

ಅದೇನೆ ಇರಲಿ, ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಎಲ್ಲವೂ ಜೋರಾಗಿಯೇ ನಡೆಯುತ್ತಿದೆ. ಅದರಲ್ಲೂ, ಕರಾವಳಿ ಬೆಡಗಿ ಶುಭಾಪೂಂಜಾ, ಎಲ್ಲರ ಜೊತೆ ಓಪನ್ ಆಗಿ ಮಾತನಾಡುತ್ತ, ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿರುವುದಂತೂ ನಿಜ. ಶುಭಾ ಅವರ ಮನೆಯೊಳಗಿನ ನಡವಳಿಕೆಗಳು, ಮಾತುಗಳು ಆ ಮನೆಯಲ್ಲಿರುವ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಪಟ ಪಟ ಅಂತ ಮಾತನಾಡಿ, ಹೇಳೋದನ್ನು ನೇರವಾಗಿ ಹೇಳಿ ಮೊದಲ ವಾರದಲ್ಲೇ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.

Categories
ಸಿನಿ ಸುದ್ದಿ

2018ರ ರಾಜ್ಯ ಸಿನಿಮಾ ಪ್ರಶಸ್ತಿ ವಿತರಿಸದಂತೆ ಹೈಕೋರ್ಟ್‌ ಆದೇಶ

ರಾಜ್ಯ ಸರ್ಕಾರದಿಂದ ಕೊಡಮಾಡುವ ಸಿನಿಮಾ ಪ್ರಶಸ್ತಿಯನ್ನು ವಿತರಿಸದಂತೆ ಇದೀಗ ನ್ಯಾಯಾಲಯ ಆದೇಶಿಸಿದೆ. ಆಯ್ಕೆ ಸಮಿತಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ 2018ರ ರಾಜ್ಯ ಪ್ರಶಸ್ತಿ ವಿತರಣೆ ಮಾಡದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ ನೀಡಿದೆ. ಸದ್ಯಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿರುವ ರಾಜ್ಯ ಹೈಕೋರ್ಟ್, ಮುಂದಿನ ಆದೇಶದವರೆಗೆ ಪ್ರಶಸ್ತಿ ವಿತರಣೆ ಮಾಡುವಂತಿಲ್ಲ ಎಂದು ಸರ್ಕಾರಕ್ಕೆ ಸೂಚಿಸಿದೆ. 2018 ರಲ್ಲಿ “ರಾಮನ ಸವಾರಿ”ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿತ್ತು. ಆದರೆ, ಈ ಸಿನಿಮಾ ಪ್ರಶಸ್ತಿಗೆ ಸ್ಪರ್ಧೆಯನ್ನೇ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ “ದೇವಕಿ” ಸಿನಿಮಾದ ಕುಮಾರ್‌ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದರು.

“ರಾಮನ ಸವಾರಿ” ಸಿನಿಮಾವನ್ನು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ನೋಡಿಯೇ ಇಲ್ಲ, ಆದರೂ ಅದಕ್ಕೆ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ದಯಾಳ್ ಪದ್ಮನಾಭ್ ನಿರ್ದೇಶನದ ‘ಆ ಕರಾಳ ರಾತ್ರಿ’ ಸಿನಿಮಾ ರೀಮೇಕ್ ಆಗಿತ್ತು. ಆದರೂ, ಅದಕ್ಕೆ ಪ್ರಶಸ್ತಿ ನೀಡಲಾಗಿದೆ. ಆಯ್ಕೆ ಸಮಿತಿಯು ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ’ ಎಂದು ಕುಮಾರ್ ಆರೋಪಿಸಿದ್ದರು. ಪ್ರಶಸ್ತಿಗಾಗಿ “ಪ್ರೊಡಕ್ಷನ್ ಮ್ಯಾನೇಜರ್” ಹೆಸರಿನ ಹೊಸ ವಿಭಾಗವನ್ನೇ ಆಯ್ಕೆ ಸಮಿತಿ ಸೃಷ್ಟಿಸಿತ್ತು. ಸಮಿತಿಯ ಮುಖ್ಯಸ್ಥರ ಸ್ವಜನಪಕ್ಷಪಾತ ಪ್ರಶಸ್ತಿ ಆಯ್ಕೆಯಲ್ಲಿ ಸಾಕಷ್ಟು ಗೊಂದಲ ಇದೆ ಎಂದು ಆರೋಪಿಸಿದ್ದರು. 2018 ರಲ್ಲಿ ಜೋಸೈಮನ್ ಅವರ ನೇತೃತ್ವದ ಸಮಿತಿ‌ ಸಿನಿಮಾಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು.

ಪ್ರೊಡಕ್ಷನ್‌ ಮ್ಯಾನೇಜರ್‌ ಅವರ ಕೆಲಸವೇ ಬೇರೆ ರೀತಿ ಇರುತ್ತದೆ. ಅವರ ಕೆಲಸ ಸಿನಿಮಾದ “ಕಲೆ”ಗೆ ಸಂಬಂಧಿಸಿರುವುದಿಲ್ಲ. ನಟ, ತಂತ್ರಜ್ಞರ ಕೆಲಸಕ್ಕಿಂತಲೂ ಬಹಳ ಭಿನ್ನವಾದ ಕೆಲಸವದು. ಸಿನಿಮಾ ಕೃತಿಗೆ ಅವರ ಕೊಡುಗೆ ಇಲ್ಲದಿದ್ದರೂ ಅಂತಹ ವಿಭಾಗವನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ನಿರ್ಮಾಪಕ ಕೃಷ್ಣೇಗೌಡ ಕೂಡ ಹೇಳಿಕೆ ಕೊಟ್ಟಿದ್ದಾರೆ. 2018ರಲ್ಲಿ ದಯಾಳ್ ಪದ್ಮನಾಭ್ ನಿರ್ದೇಶಿಸಿದ್ದ “ಆ ಕರಾಳ ರಾತ್ರಿ” ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿದೆ. ಎರಡನೇ ಸ್ಥಾನ “ರಾಮನ ಸವಾರಿ”, ಮೂರನೇ ಸ್ಥಾನ “ಒಂದಲ್ಲ ಎರಡಲ್ಲ” ಸಿನಿಮಾಗೆ ನೀಡಲಾಗಿತ್ತು. ಅದೇ ವರ್ಷ ಅತ್ಯುತ್ತಮ ನಟ ಪ್ರಶಸ್ತಿಗೆ ‘ಅಮ್ಮನ ಮನೆ’ ಸಿನಿಮಾದಲ್ಲಿ ನಟಿಸಿದ್ದ ರಾಘವೇಂದ್ರ ರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅತ್ಯುತ್ತಮ ನಟಿ ಪ್ರಶಸ್ತಿಗೆ ‘ಇರುವುದೆಲ್ಲವು ಬಿಟ್ಟು’ ಸಿನಿಮಾದ ನಟನೆಗೆ ಮೇಘನಾ ರಾಜ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ನಟ ಶ್ರೀನಿವಾಸ ಮೂರ್ತಿ ಅವರಿಗೆ ರಾಜ್‌ಕುಮಾರ್ ಪ್ರಶಸ್ತಿ ಹಾಗು ಪಿ.ಶೇಷಾದ್ರಿ ಅವರಿಗೆ ಪುಟ್ಟಣ ಕಣಗಾಲ್ ಪ್ರಶಸ್ತಿ ಘೊಷಿಸಲಾಗಿತ್ತು.

Categories
ಸಿನಿ ಸುದ್ದಿ

ಹಾಟ್‌ ಬೆಡಗಿ ಶ್ರದ್ಧಾ! ಪಡ್ಡೆಗಳ ನಿದ್ದೆಗೆಡಿಸಿದ‌ ದಾಸ್

ಆಗಾಗ ಸುದ್ದಿಯಲ್ಲಿರೋ ನಟಿಮಣಿಗಳ ಪೈಕಿ ಶ್ರದ್ಧಾದಾಸ್‌ ಕೂಡ ಒಬ್ಬರು. ಹೌದು, ಶ್ರದ್ಧಾ ದಾಸ್‌, ಸದಾ ತಮ್ಮ ವಿಭಿನ್ನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಅವರ ಕಲರ್‌ಫುಲ್‌ ಡ್ರೆಸ್‌ ಹಾಕಿಕೊಂಡು ಫೋಸ್‌ ಕೊಡೋದು ಅಂದರೆ ಎಲ್ಲಿಲ್ಲದ ಪ್ರೀತಿ.

ಶ್ರದ್ಧಾ ದಾಸ್‌ ಸದಾ ಬೋಲ್ಡ್‌ ನಟಿ. ಅವರ ಹೆಸರು ಕೇಳಿದರೆ ಸಾಕು, ಪಡ್ಡೆ ಹುಡುಗರಂತೂ ಕೊಂಚ ಥ್ರಿಲ್‌ ಆಗೋದು ದಿಟ. ಅಂದಹಾಗೆ, ಶ್ರದ್ಧಾದಾಸ್‌ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಗೊತ್ತಾ? ಅವರು ಹಿಂದಿ, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಇಂಗ್ಲೀಷ್‌ ಭಾಷೆಯ ಶಾರ್ಟ್‌ ಸಿನಿಮಾದಲ್ಲೂ ನಟಿಸಿದ್ದಾರೆ. ಸದ್ಯ ಸುದೀಪ್‌ ಜೊತೆ “ಕೋಟಿಗೊಬ್ಬ ೩” ಚಿತ್ರದಲ್ಲಿ ನಟಿಸಿದ್ದು, ಅದೀಗ ಬಿಡುಗಡೆಗೆ ರೆಡಿಯಾಗಿದೆ.


ಸದಾ ಸಾಮಾಜಿಕ ಜಾಲ ತಾಣಗಳಲ್ಲಿ ಸದಾ ಬಿಝಿಯಾಗಿರುವ ಶ್ರದ್ಧಾ ದಾಸ್‌, ಆಗಾಗ ತಮ್ಮ ಬೋಲ್ಡ್ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲೇ ಇರುತ್ತಾರೆ. ಅದರಲ್ಲೂ ಪಡ್ಡೆಗಳು ಅವರ ಫೋಟೋಗಳಿಗೆ ಸಾಕಷ್ಟು ಕಾಮೆಂಟ್‌ ಕೂಡ ಮಾಡದೇ ಇರರು.

ಮುಂಬೈನಲ್ಲಿ ಹುಟ್ಟಿ ಬೆಳೆದ ಶ್ರದ್ಧಾ ದಾಸ್, ಸದ್ಯಕ್ಕೆ ಒಳ್ಳೆಯ ಸಿನಿಮಾಗಳನ್ನು ಎದುರು ನೋಡುತ್ತಿದ್ದಾರೆ. ಶ್ರದ್ಧಾಗೆ ಫ್ಯಾಷನ್ ಶೋ ಅಂದ್ರೆ ಎಲ್ಲಿಲ್ಲದ ಇಷ್ಟ. ಹಾಗಾಗಿ ಅವರು ಬಿಡುವು ಸಿಕ್ಕಾಗೆಲ್ಲ, ಬಣ್ಣ ಬಣ್ಣದ ಡ್ರೆಸ್‌ ಹಾಕ್ಕೊಂಡ್‌, ಹಾಗೊಂದು ಫೋಸ್‌ ಕೊಟ್ಟು ಪಡ್ಡೆಗಳ ನಿದ್ದೆಗೆಡಿಸುವಲ್ಲಿ ನಿರತರಾಗಿದ್ದಾರೆ!

ಅಂದಹಾಗೆ, ಶ್ರದ್ಧಾ ದಾಸ್‌ ಕೂಡ ಈ ಹಿಂದೆ ತೆಲುಗಿನ ಬಿಗ್‌ಬಾಸ್‌ ೪ ರಲ್ಲಿ ಸ್ಪರ್ಧಿಯಾಗಿದ್ದರು. ಸದ್ಯ ಹೊಸ ಬಗೆಯ ಪಾತ್ರ, ಕಥೆ ಎದುರು ನೋಡುತ್ತಿರುವ ಶ್ರದ್ಧಾ, ಕನ್ನಡದ “ಕೋಟಿಗೊಬ್ಬ ೩” ಸಿನಿಮಾ ಎದುರು ನೋಡುತ್ತಿದ್ದಾರೆ.

Categories
ಸಿನಿ ಸುದ್ದಿ

ಸಲಗ ಕ್ರಿಕೆಟ್ ಕಪ್ ಹವಾ – ದುನಿಯಾ ವಿಜಯ್‌ ಅಭಿಮಾನಿಗಳು ಶುರು ಮಾಡಿದ ಕ್ರಿಕೆಟ್‌ ಅಭಿಯಾನ

ಕನ್ನಡ ಚಿತ್ರರಂಗದಲ್ಲೀಗ ಕ್ರಿಕೆಟ್‌ ಹವಾ…!

ಹೌದು, ಸದ್ಯಕ್ಕೆ ಸಿನಿಮಾಗಳ ಬಿಡುಗಡೆಯ ಪರ್ವ ಶುರುವಾಗಿದೆ. ಇದಕ್ಕೂ ಮೊದಲೇ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳು ಜೋರು ಸುದ್ದಿ ಮಾಡುತ್ತಿವೆ. ಇನ್ನು, ಕ್ರಿಕೆಟ್‌ ವಿಚಾರಕ್ಕೆ ಬಂದರೆ, ಸಿನಿಮಾರಂಗಕ್ಕೂ ಕ್ರಿಕೆಟ್‌ ಪಂದ್ಯಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಸಿನಿಮಾ ನಟರು ಕೂಡ ಕ್ರಿಕೆಟ್‌ ಮೇಲೆ ಹೆಚ್ಚು ಪ್ರೀತಿ ತೋರುವ ಹಿನ್ನೆಲೆಯಲ್ಲಿ, ಅಭಿಮಾನಿಗಳು ಕೂಡ ಕ್ರಿಕೆಟ್‌ ಆಡೋಕೆ ಬ್ಯಾಟು-ಬಾಲು ಹಿಡಿಯುತ್ತಿರುವುದು ಹೊಸ ಬೆಳವಣಿಗೆಯೇನಲ್ಲ.

ಇತ್ತೀಚೆಗಷ್ಟೇ, ಶಿವರಾಜಕುಮಾರ್‌ ಅವರು ತಮ್ಮ ಸಿನಿಮಾ ಜರ್ನಿಯಲ್ಲಿ 35 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಫ್ಯಾನ್ಸ್‌ ಸೇರಿ ಕ್ರಿಕೆಟ್‌ ಲೀಗ್‌ ಆಯೋಜಿಸಿದ್ದರು. ಈಗ “ದುನಿಯಾ” ವಿಜಯ್‌ ಅಭಿಮಾನಿಗಳ ಸರದಿ.
ಹೌದು, ಸದ್ಯಕ್ಕೆ “ಸಲಗ” ಚಿತ್ರದ ಬಗ್ಗೆ ಎಲ್ಲೆಡೆ ಹವಾ ಇದೆ. ಹೀಗಾಗಿ ರಾಜ್ಯದಾದ್ಯಂತ ವಿಜಯ್ ಅಭಿಮಾನಿಗಳಿಂದ ‌ಕ್ರಿಕೆಟ್ ಅಭಿಯಾನ ಶುರುವಾಗಿದೆ. “ಸಲಗ” ಚಿತ್ರತಂಡ‌ ಕ್ರಿಕೆಟ್ ಮೂಲಕ ವಿಶಿಷ್ಟವಾಗಿ ಸಿನಿಮಾ ಪ್ರಚಾರ‌ ಮಾಡಲು ಹೊರಟಿದೆ. “ದುನಿಯಾ” ವಿಜಯ್ ಅಭಿಮಾನಿಗಳು ರಾಜ್ಯದಾದ್ಯಂತ “ಸಲಗ” ಕ್ರಿಕೆಟ್‌ ಕಪ್ ಸರಣಿಯನನು ಆಯೋಜಿಸಿದ್ದಾರೆ.

ಆ ಸರಣಿಗಳಲ್ಲಿ “ಸಲಗ” ಚಿತ್ರತಂಡವೂ ಒಂದು ತಂಡವಾಗಿ ಮೈದಾನಕ್ಕಿಳಿಯಲಿದೆ. ಇದರಿಂದಾಗಿ ಮಾರ್ಚ 7ರಂದು ಕೋಲಾರದ ಮಾಲೂರಿನಲ್ಲಿ “ಸಲಗ” ಕ್ರಿಕೆಟ್ ಕಪ್ ಸರಣಿ ನಡೆಯಲಿದೆ. ಇದೇ ಮಾದರಿಯಲ್ಲಿ ಚಿತ್ರದುರ್ಗ, ಹೊಸಪೇಟೆ ಹಾಗೂ ಮೈಸೂರು ಸೇರಿದಂತೆ ರಾಜ್ಯದ ನಾನಾ ಊರುಗಳಲ್ಲಿ “ಸಲಗ” ಕಪ್ ನಡೆಯಲಿದೆ. ಇತ್ತೀಚೆಗೆ ನಡೆದ ಶಿವರಾಜಕುಮಾರ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಸರಣಿಯಲ್ಲಿ “ಸಲಗ” ಚಿತ್ರತಂಡ ಭಾಗವಹಿಸಿತ್ತು. ಪ್ರದರ್ಶನ ಪಂದ್ಯ ಆಡಿದ “ಸಲಗ” ಟೀಮ್ ಭರ್ಜರಿಯಾಗಿ ಗೆಲುವು ದಾಖಲಿಸಿತ್ತು. ಈಗ ಅದರ ವಿಡಿಯೋ ಕೂಡ ರಿಲೀಸ್ ಆಗಿದೆ.

Categories
ಸಿನಿ ಸುದ್ದಿ

ಮೊದಲ ಸಲ ಅನಂತ್‌ನಾಗ್‌ ತುಳು ಭಾಷೆಯ ಇಂಗ್ಲೀಷ್‌ ಚಿತ್ರದಲ್ಲಿ ನಟನೆ -ಮಾರ್ಚ್‌ 26ರಂದು ವಿಶ್ವಾದ್ಯಂತ ಚಿತ್ರಬಿಡುಗಡೆ

ಬಿಡುಗಡೆಗೂ ಮುನ್ನ ಹಲವು ದಾಖಲೆ ಮಾಡಿದೆ. ತುಳು ಭಾಷೆಯ ಚಿತ್ರದಲ್ಲಿ ಮೊದಲ ಬಾರಿಗೆ ಅನಂತ್‌ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. 8K ಕ್ಯಾಮರಾ ಬಳಸಿದ ಮೊದಲ ಸಿನೆಮಾ ಎಂಬ ಹೆಗ್ಗಳಿಕೆ ಇದಕ್ಕಿದೆ. ದುಬೈನಲ್ಲಿ ಮಾರ್ಚ್‌ 13 ರಂದು ‘ವರ್ಲ್ಡ್ ಪ್ರೀಮಿಯರ್ ಶೋ’ ಕೂಡ ನಡೆದಿದೆ.

ಅನಂತ್‌ನಾಗ್‌ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಈಗಾಗಲೇ ಸಾಕಷ್ಟು ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅನಂತ್‌ನಾಗ್‌, ಇದೇ ಮೊದಲ ಬಾರಿಗೆ ತುಳು ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಹೌದು, ತುಳು ಭಾಷೆಯಲ್ಲಿ ತಯಾರಾಗಿರುವ “ಇಂಗ್ಲಿಷ್‌-ಎಂಕ್ಲೆಗ್‌ ಬರ್ಪುಜಿ ಬ್ರೋ” ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರದು ವಿಶೇಷ ಪಾತ್ರ. ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಈಗಾಗಲೇ ಚಿತ್ರೀಕರಣ ಪೂರೈಸಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಈ ಚಿತ್ರ, ಮಾರ್ಚ್‌ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂಬುದು ವಿಶೇಷತೆಗಳಲ್ಲೊಂದು.

ಹೌದು, ತುಳು ಚಿತ್ರರಂಗದಲ್ಲಿ ಬಹುನಿರೀಕ್ಷೆ ಇರುವ ಈ ಚಿತ್ರ ಮಂಗಳೂರು, ಉಡುಪಿ ಸೇರಿದಂತೆ ಗಲ್ಫ್‌ ಹಾಗು ವಿಶ್ವದ ನಾನಾ ಕಡೆ ಏಕಕಾಲದಲ್ಲಿ ರಿಲೀಸ್‌ ಆಗುತ್ತಿದೆ. ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಬ್ಯಾನರ್‌ನಲ್ಲಿ ದುಬೈನ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ ಇವರು “ಮಾರ್ಚ್ 22”, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ”, “ಯಾನ” ಚಿತ್ರ ನಿರ್ಮಿಸಿದ್ದಾರೆ. ಕೆ.ಸೂರಜ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ತುಳು ಚಿತ್ರರಂಗದ ಹಾಸ್ಯ ದಿಗ್ಗಜರ ದಂಡೇ ಇದೆ. ಚಿತ್ರದ ಬಗ್ಗೆ ಹೇಳುವುದಾದರೆ, ಬಿಡುಗಡೆಗೂ ಮುನ್ನ ಹಲವು ದಾಖಲೆ ಮಾಡಿದೆ. ತುಳು ಭಾಷೆಯ ಚಿತ್ರದಲ್ಲಿ ಮೊದಲ ಬಾರಿಗೆ ಅನಂತ್‌ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಅಷ್ಟೇ ಅಲ್ಲ, 8K ಕ್ಯಾಮರಾ ಬಳಸಿದ ಮೊದಲ ಸಿನೆಮಾ ಎಂಬ ಹೆಗ್ಗಳಿಕೆ ಇದಕ್ಕಿದೆ. ಬೆಂಗಳೂರಿನ ಪ್ಯಾಲೇಸಿನಲ್ಲಿ ಚಿತ್ರೀಕರಿಸಿದ ಹೆಮ್ಮೆಯೂ ಇದೆ. ದುಬೈನಲ್ಲಿ ಮಾರ್ಚ್‌ 13 ರಂದು ‘ವರ್ಲ್ಡ್ ಪ್ರೀಮಿಯರ್ ಶೋ’ ಕೂಡ ನಡೆದಿದೆ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ದುಬೈನಲ್ಲಿ ‘ವರ್ಲ್ಡ್ ಪ್ರೀಮಿಯರ್ ಶೋ’ ನಡೆದಿದ್ದು, ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬುದು ವಿಶೇಷ.

ಇನ್ನು ಚಿತ್ರದಲ್ಲಿ ಹಾಸ್ಯವೇ ಹೈಲೈಟ್‌ ಆಗಿದೆ. ಪಂಚಿಗ್ ಡೈಲಾಗ್‌ಗಳಿಗೆ ಹೆಚ್ಚು ಆದ್ಯತೆ ಇದೆ. ಚಿತ್ರದಲ್ಲಿ ತುಳು ರಂಗಭೂಮಿ ಹಾಸ್ಯ ನಟರಾದ ಅರವಿಂದ್ ಬೋಳಾರ್, ನವೀನ ಡಿ’ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ ಇದ್ದಾರೆ. ಹೀರೋ ಆಗಿ “ದಿಯಾ” ಖ್ಯಾತಿಯ ಪೃಥ್ವಿ ಅಂಬರ್ ಮತ್ತು ಅವರಿಗೆ ನಾಯಕಿಯಾಗಿ ನವ್ಯಾ ಪೂಜಾರಿ ನಟಿಸಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ನಿರ್ದೇಶಕ ಸೂರಜ್‌ ಶೆಟ್ಟಿ ವಹಿಸಿಕೊಂಡರೆ, ಕದ್ರಿ ಮಣಿಕಾಂತ್‌ ಸಂಗೀತ ನೀಡಿದ್ದಾರೆ. ಕೃಷ್ಣ ಸಾರಥಿ ಹಾಗೂ ಅಭಿಲಾಷ್ ಕಲಾತಿ ಛಾಯಾಗ್ರಹಣವಿದೆ. ಮನು ಶೆಡ್ಗರ್ ಸಂಕಲನ ಮಾಡಿದ್ದಾರೆ. ಮಹೇಶ್‌ ಎನ್ಮೂರಿ ಅವರ ಕಲಾ ನಿರ್ದೇಶನವಿದೆ. ಅರ್ಜುನ್ ಲೆವಿಸ್, ಲೋಕು ಕುಡ್ಲ ಸಾಹಿತ್ಯವಿದೆ. “ಭಜರಂಗಿ” ಮೋಹನ್ ಅವರ ನೃತ್ಯ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಸುಧೀರ್‌ ಅತ್ತಾವರ್‌ ನಿರ್ದೇಶನದ ಮಡಿ ರಾಜಸ್ತಾನ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆ- ಮಲಿನ ಮನಸ್ಸುಗಳ ಕ್ರೌರ್ಯ ಬಿಂಬಿಸಿದ ಚಿತ್ರಕ್ಕೆ ಮೆಚ್ಚುಗೆ

“ಹಸಿವು ಮತ್ತು ದಾರಿದ್ರ್ಯ ಸಮಾಜಕ್ಕೊಂದು ಶಾಪ. ಅದರ‌ ಜೊತೆ ಜಾತಿ ಕೂಡ ಮನುಕುಲದ ದುರಂತ…”

– ಇದು ನಿರ್ದೇಶಕ ಹಾಗೂ ಖ್ಯಾತ ಗೀತ ಸಾಹಿತಿ ಸುಧೀರ್‌ ಅತ್ತಾವರ್‌ ನಿರ್ದೇಶನದ “ಮಡಿ” ಚಿತ್ರದೊಳಗಿರುವ ಸೂಕ್ಷ್ಮ ವಿಷಯಗಳ ಅರ್ಥಪೂರ್ಣ ಕಥಾನಕ. ಹೌದು, ಇಂಥದ್ದೊಂದು ಸೂಕ್ಷ್ಮ ಸಂವೇದನೆಗಳನ್ನು ಅಷ್ಟೇ ಮನಕಲಕುವ ರೀತಿ ಹಿಡಿದಿಟ್ಟು, ನೋಡುಗರ ಮನಸ್ಸನ್ನು ಕ್ಷಣಕಾಲ ಭಾವುಕತೆಗೂ ದೂಡುವಂತಹ ಚಿತ್ರ ಕಟ್ಟಿಕೊಟ್ಟಿರುವ ಸುಧೀರ್‌ ಅತ್ತಾವರ್‌ ಅವರ “ಮಡಿ” ಈಗಾಗಲೇ ಬಾಲಿವುಡ್‌ ಅಂಗಳದಲ್ಲಿ ಸದ್ದು ಮಾಡಿದೆ.

ಅಷ್ಟೇ ಅಲ್ಲ, ಬಾಲಿವುಡ್‌ ಜಗತ್ತಿನ ಅನೇಕ ಗಣ್ಯರು “ಮಡಿ” ಕುರಿತು ಮಾತಾಡಿದ್ದಾರೆ, ಹೊಗಳಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಈ “ಮಡಿ” ಇನ್ನೊಂದು ಹೊಸ ಸುದ್ದಿ ಹೊತ್ತು ಬಂದಿದೆ.
“ಮಡಿ” ಏಳನೇ ರಾಜಸ್ಥಾನ ಇಂಟರ್ನ್ಯಾಷನಲ್ ಫಿಲಂ ಫ಼ೆಸ್ಟಿವಲ್ (ರಿಫ಼್) ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ಇಂದಿಗೂ ಅಸ್ಪೃಶ್ಯತೆ ಜೀವಂತ ಎಂಬುದಕ್ಕೆ ಕಣ್ಣೆದುರಿಗಿನ‌ ಸಾಕ್ಷಿಯಂತಿರುವ “ಮಡಿ” ಚಿತ್ರ ಮಾರ್ಚ್ 20 ರಿಂದ 24ರವರೆಗೆ ನಡೆಯಲಿರುವ ರಾಜಸ್ತಾನ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ಸ್ಫರ್ಧಾ ವಿಭಾಗದಲ್ಲಿ ಆಯ್ಕೆಯಾಗಿದೆ. ಈ ಚಿತ್ರಕ್ಕೆ “ಮಲಿನ ಮನಸ್ಸುಗಳ ಕ್ರೌರ್ಯ” ಎಂಬ ಅರ್ಥವೆನಿಸುವ ಅಡಿಬರಹವೂ ಇದೆ. ಯಾವುದೇ ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಆಯ್ಕೆಯಾಗುವ ಚಿತ್ರದೊಳಗಿರುವ ಕಥೆ ಗಟ್ಟಿಯಾಗಿರಬೇಕು. ಅಷ್ಟೇ ಸೂಕ್ಷ್ಮತೆಯಿಂದಲೂ ಕೂಡಿರಬೇಕು. “ಮಡಿ” ಆ ಎಲ್ಲಾ ತನವನ್ನು ಹೊಂದಿದ್ದರಿಂದಲೇ ಆಯ್ಕೆಯಾಗಿದೆ. ಅಂದಹಾಗೆ, ಇದೊಂದು ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ಹಸಿವು, ದಾರಿದ್ರ್ಯ ಸಮಾಜಕ್ಕೊಂದು ಶಾಪ. ಅದರ‌ ಜೊತೆ ಜಾತಿ ಕೂಡ ಮನುಕುಲದ ದುರಂತವೇ. “ಮಡಿ” ಚಿತ್ರದೊಳಗಿನ ಪ್ರತಿ ಪಾತ್ರಗಳಲ್ಲೂ ವಿಶೇಷತೆ ಇದೆ ಎಂಬುದನ್ನೂ ಇಲ್ಲಿ ಪರಿಗಣಿಸಲಾಗಿದೆ. ಅದರ ಜೊತೆಯಲ್ಲಿ ಕಥಾಹಂದರದಲ್ಲಿರುವ ಗಟ್ಟಿತನ. ಅಲ್ಲಿನ ಕೀಳರಿಮೆ, ಕಿತ್ತು ತಿನ್ನೋ ಬಡತನ, ಏನೂ ಅರಿಯದ ಹುಡುಗನೊಬ್ಬನ ಹಸಿವು, ಪ್ರಮುಖವಾಗಿ ಗಮನ ಸೆಳೆಯುವ ನಾಯಕಿ. ಆಕೆಯಲ್ಲಿರುವ ಭಯ, ಪುಷ್ಕರಣಿಯಲ್ಲಿ ಜೀವವೊಂದು ಬದುಕಲು‌ ಹೆಣಗಾಡುತ್ತಿದ್ದರೆ, ಅತ್ತ, ಪುರೋಹಿತ ಶಾಹಿಗಳಿಗೆ ಮಡಿಯೇ ಮುಖ್ಯ ಎಂಬ ಧ್ಯೇಯ… ಇವೆಲ್ಲವೂ ವಾಸ್ತವತೆಯನ್ನು ‌ಬಿಂಬಿಸುವಂತಿವೆ.

ಒಟ್ಟಾರೆ ಈ ಸಮಾಜದ ವ್ಯವಸ್ಥೆಯ ಅವ್ಯವಸ್ಥೆಯನ್ನು ಮನತಟ್ಟುವಂತೆ ಸೆರೆಹಿಡಿದಿದ್ದರಿಂದಲೇ ಈ ಚಿತ್ರ ಕೂಡ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ.
ಇನ್ನು, ನಿರ್ದೇಶಕ ಸುಧೀರ್ ಅತ್ತಾವರ್ ಅವರು, “ಮಡಿ” ಮೂಲಕ ಸಮಾಜದಲ್ಲಿರುವ ಹುಳುಕನ್ನ‌ ಎತ್ತಿ ಹಿಡಿಯುವ ಪ್ರಯತ್ನ ಮಾಡಿರುವುದರಿಂದ, ಅವರ ಪರಿಶ್ರಮಕ್ಕೊಂದು ವೇದಿಕೆ ಸಿಕ್ಕಂತಾಗಿದೆ. ಜೈಪುರ ಮತ್ತು ಜೋದ್‌ಪುರದಲ್ಲಿ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಜಗತ್ತಿನಾದ್ಯಂತ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ವರ್ಲ್ಡ್ ಸ್ಪರ್ಧಾ ವಿಭಾಗದಲ್ಲಿ ಸುಮಾರು 15 ಸಿನಿಮಾಗಳೊಂದಿಗೆ “ಮಡಿ” ಪ್ರತಿಷ್ಠಿತ ಪ್ರಶಸ್ತಿಗೆ ಸೆಣಸಾಡಲಿದೆ. ಮಾರ್ಚ್ 24ರಂದು ಜೈಪುರದ ಮಿರಾಜ್ ಸಿನಿಮಾಸ್ ಮತ್ತು ಜೋದ್‌ಪುರದ ಮಿರಾಜ್ ಬಯೋಸ್ಕೋಪ್ ಸಿನಿಮಾಹಾಲ್‌ನಲ್ಲಿ “ಮಡಿ” ಪ್ರದರ್ಶನವಾಗಲಿದೆ.
ವಿದ್ಯಾಧರ್ ಶೆಟ್ಟಿ ಮತ್ತು ಸೂರಜ್ ಚಾರ್ಲ್ಸ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮುಂಬೈನ ಸಕ್ಸಸ್ ಫಿಲಂಸ್ ಮತ್ತು ಸೂರಜ್ ವಿಷುವಲ್ಸ್ ಸಂಸ್ಥೆಗಳ ಬ್ಯಾನರ್ ಅಡಿ ಚಿತ್ರ ತಯಾರಾಗಿದೆ.

ಈಗಾಗಲೇ ಮೊದಲ ಬಾರಿಗೆ ಆನ್‌ಲೈನ್‌ ಪ್ರೀಮಿಯರ್ ಮಾಡಿಕೊಂಡಿರುವ “ಮಡಿ” ಸಿನಿಮಾವನ್ನು ಅಂತಾರಾಷ್ಟ್ರೀಯ ಕಲಾವಿದೆ ಶರೋನ್ ಪ್ರಭಾಕರ್, ಫೆಮಿನಾ ಮಿಸ್ ಇಂಡಿಯಾದ ಸ್ಮೈಲ್ ಡಿಸೈನರ್ ಡಾ.ಸಂದೇಶ್ ಮಯೇಕರ್ ಮೊದಲಾದ ಸೆಲೆಬ್ರಿಟಿಗಳ ಸೇರಿದಂತೆ, ಹಲವು ಸಿನಿ ಪ್ರಿಯರು “ಮಡಿ” ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ವೀಕ್ಷಿಸಿರುವ ಅನೇಕರು ಯುಟ್ಯೂಬ್‌ನಲ್ಲಿ ಸಾಕಷ್ಟು ಕಾಮೆಂಟ್‌ ಕೂಡ ಮಾಡಿದ್ದಾರೆ.
ಇನ್ನು, ಎಂ.ಡಿ. ಪಲ್ಲವಿ, ರಂಗಭೂಮಿ ಕಲಾವಿದ ರಾಮಚಂದ್ರ ದೇವಾಡಿಗ, ಮಾಸ್ಟರ್ ಸಂತೋಷ್, ವೆಂಕಟ್ ರಾವ್, ವಿದ್ಯಾಧರ್ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು “ಮಡಿ” ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಬಿ.ಎಸ್. ಶಾಸ್ತ್ರಿ ಕ್ಯಾಮೆರಾ ಹಿಡಿದರೆ, ವಿದ್ಯಾಧರ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಆಕಾಶ್ ಪತುಲೆ ಸಂಗೀತವಿದೆ. ಸುಧೀರ್‌ ಅತ್ತಾವರ್‌ ಅವರು “ಮಡಿ” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ನಿರ್ದೇಶನ ಮಾಡಿದ್ದಷ್ಟೇ ಅಲ್ಲ, ಅವರಿಲ್ಲಿ ಕಲಾ ನಿರ್ದೇಶನ, ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ.

Categories
ಸಿನಿ ಸುದ್ದಿ

ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್‌ ಶಿಷ್ಯನ ಪಾರಿವಾಳ! ಒನ್‌ ಶಾಟ್‌ ಸಾಂಗ್‌ಗೆ ಭರಪೂರ ಮೆಚ್ಚುಗೆ

ಈಗಾಗಲೇ ಸಿಂಗಲ್‌ ಶಾಟ್‌ ಸಿನಿಮಾಗಳು ಬಂದಿವೆ. ಹಾಗೆಯೇ ಕೆಲವು ಸಿನಿಮಾಗಳ ಸಿಂಗಲ್‌ ಶಾಟ್‌ ದೃಶ್ಯಗಳೂ ಸುದ್ದಿಯಾಗಿವೆ. ಈ ಸಿಂಗಲ್‌ ಶಾಟ್‌ ಸಂಸ್ಕೃತಿ ಈಗಿನದಲ್ಲ. ಮೊದಲಿನಿಂದಲೂ ಸಿಂಗಲ್‌ ಶಾಟ್‌ ಕುರಿತ ಅನೇಕ ವಿಷಯಗಳು ಸುದ್ದಿಯಾಗಿವೆ. ಈಗ ಆ ಸಾಲಿಗೆ ಆಲ್ಬಂ ಸಾಂಗ್‌ವೊಂದು ಸುದ್ದಿಯಾಗುತ್ತಿದೆ ಎಂಬುದು ಈ ಹೊತ್ತಿನ ವಿಶೇಷ. ಹೌದು, ಆ ಆಲ್ಬಂ ಸಾಂಗ್‌ಗೆ “ಪಾರಿವಾಳ” ಎಂದು ಹೆಸರಿಡಲಾಗಿದೆ. ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಅವರ ಸಹಾಯಕ ರಾಮ್ ಕಿರಣ್ ಅಂಥದ್ದೊಂದು ಸಾಹಸ ಮಾಡಿದ್ದಾರೆ.

ಸದ್ಯ “ಪಾರಿವಾಳ” ವಿಡಿಯೋ ಆಲ್ಬಂ ಸಾಂಗ್‌ ರಿಲೀಸ್‌ ಆಗಿದೆ. ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ಈ ವಿಡಿಯೋ ಆಲ್ಬಂ ಸಾಂಗ್‌ಗೆ ಅಗಸ್ತ್ಯ ಸಂತೋಷ್‌ ಅವರ ಸಾಹಿತ್ಯ ಮತ್ತು ಸಂಗೀತವಿದೆ. ಇನ್ನು, ಈ ಹಾಡಲ್ಲಿ ೫೦ ಮಂದಿ ನೃತ್ಯ ಕಲಾವಿದರು ನಟಿಸಿದ್ದಾರೆ. “ಪಾರಿವಾಳ” ಅಂದಾಕ್ಷಣ, ಅದೊಂದು ಫೀಲ್‌ ಸಾಂಗ್‌ ಅನ್ನೋದು ಗೊತ್ತಾಗುತ್ತೆ. ಆ ಫೀಲ್‌ ಸಾಂಗ್‌ ಅನ್ನು ತುಂಬಾ ವಿಭಿನ್ನವಾಗಿಯೇ ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ರಾಮ್‌ಕಿರಣ್‌, ಸಿಂಗಲ್‌ ಶಾಟ್‌ನಲ್ಲೇ ಸಾಂಗ್‌ ಚಿತ್ರೀಕರಿಸಬೇಕು ಎಂದು ನಿರ್ಧರಿಸಿ, ಕೊನೆಗೆ ತಾವು ಅಂದುಕೊಂಡಂತೆಯೇ ಸಾಂಗ್‌ ಮಾಡಿದ್ದಾರೆ.

ಮೋಹನ್‌ ಬಿ.ಕೆರೆ ಸ್ಟುಡಿಯೋದಲ್ಲಿ ಇಡೀ ಸಾಂಗ್‌ ಚಿತ್ರೀಕರಿಸಲಾಗಿದೆ. ಈ ಒನ್ ಶಾಟ್ ಸಾಂಗ್‌ನಲ್ಲಿ ರಾಮ್ ಕಿರಣ್ ಜೊತೆ ತೇಜಸ್ವಿನಿ ಶರ್ಮ ನಟಿಸಿದ್ದಾರೆ. “ಆರಂಭದಿಂದಲೂ ನಾಯಕ ತನ್ನ ಪ್ರೀತಿಯನ್ನು ಕಳೆದುಕೊಂಡು ತುಂಬಾನೇ ವ್ಯಥೆಯಲ್ಲೇ ತನ್ನ ಕಥೆ ಜೊತೆ ಪ್ರಿಯತಮೆ ಕುರಿತು ಹೇಳುವುದನ್ನು ಅರ್ಥಪೂರ್ಣವಾಗಿಯೇ ಸೆರೆಹಿಡಿಯಲಾಗಿದೆ.” ಈ ಹಾಡಲ್ಲಿ ನಾಯಕಿ ಕೂಡ ಪಾರಿವಾಳದಂತೆ ಬಂದು ಹೋಗುವುದು ವಿಶೇಷ. ಈ ಹಾಡಿನ ಇನ್ನೊಂದು ವಿಶೇಷ ಅಂದರೆ, ಕನ್ನಡ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿದೆ. ಇದೂಂದು ರೀತಿ ಪ್ಯಾನ್‌ ಇಂಡಿಯಾ ಸಾಂಗ್.‌
ಈ “ಪಾರಿವಾಳ” ಹಾಡನ್ನು ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್‌ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

“ನಾನು “ಯುವರತ್ನ” ಚಿತ್ರದ ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ರಾಮ್ ಕಿರಣ್ ಬಂದು ನನಗೆ ಈ ಸಾಂಗ್ ಕೇಳಿಸಿದಾಗ, ನನಗೆ ಶಾಕ್ ಆಯಿತು. ಹಾಡು ತುಂಬಾ ಚೆನ್ನಾಗಿದೆ ಅಂದೆ. ನೀವು ಸಾಂಗ್‌ ಮಾಡಿಕೊಡಬೇಕು ಅಂದಾಗ, ಡೇಟ್‌ ಸಮಸ್ಯೆ ಅಂದೆ. ಕೊನೆಗೆ ರಾಮ್‌ ಕಿರಣ್‌, ಒಂದು ದಿನ ಕಾಲ್‌ ಮಾಡಿ, ನಾನು ವಿಡಿಯೊ ಆಲ್ಬಂ ಸಾಂಗ್‌ ಮಾಡುತ್ತಿದ್ದೇನೆ. ಅದು ಒನ್ ಶಾಟ್ ನಲ್ಲಿ ಅಂದರು. ನನಗೆ ಇನ್ನೂ ಗಾಬರಿಯಾಯಿತು. ಹೇಗೆ ಮಾಡುತ್ತಿರಿ? ಅದು ತುಂಬಾ ಕಷ್ಟ ಎಂದೆ. ಆದರೆ, ನನ್ನನ್ನು ಚೆನ್ನಾಗಿಯೇ ಅರ್ಥಮಾಡಿಕೊಂಡಿರುವ ರಾಮ್‌ ಕಿರಣ್‌, ಒಂದೊಂದು ವಿಷಯವನ್ನು ವಿವರಿಸಿದರು. ಆಗ ನನಗೆ ಅನಿಸಿದ್ದು, ಓಹೋ, ಈ ತರಹನೂ ಮಾಡಬಹುದಾ ಅಂತ. ನನ್ನ ಅಸಿಸ್ಟೆಂಟ್ ನಂಬರ್ ಒನ್ ಆಗಬೇಕು, ನಂಬರ್ ೨ ಆಗೋದು ಬೇಡ ಅನ್ನೋದೇ ನನ್ನ ಆಸೆ. ಈ ಹಾಡು ಸಖತ್‌ ಆಗಿದೆ ಎಂದು ಶಿಷ್ಯನ ಬೆನ್ನು ತಟ್ಟಿದರು ಚಿನ್ನಿ ಪ್ರಕಾಶ್.
ನಟ ರಾಮ್ ಕಿರಣ್‌ ಅವರು ತುಂಬಾನೇ ನರ್ವಸ್‌ ಆಗಿದ್ದರು. ಭಾವುಕರಾಗಿದ್ದ ಅವರು, “ಏನಾದರೂ ಡಿಫರೆಂಟ್ ಮಾಡು ಅಂತ ಮಾಸ್ಟರ್ ಹೇಳಿದ ಮಾತುಗಳು ನನಗೆ ಮಾದರಿಯಾಯಿತು. ಒಂದು ವರ್ಷದಿಂದ ತಯಾರು ಮಾಡುತ್ತಿದ್ದೆ. ಅವರ ಹೆಸರು ಉಳಿಸಬೇಕು. ಅದಕ್ಕೆ ಹೊಸದೇನಾದರೂ ಮಾಡಬೇಕು ಅಂತ ಒನ್‌ ಶಾಟ್‌ನಲ್ಲಿ ಈ ಹಾಡು ಮಾಡುವ ಬಗ್ಗೆ ಯೋಚಿಸಿದೆ. ಅಂದುಕೊಂಡಂತೆ ಮಾಡಿದ್ದೇನೆ. ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ. ಇನ್ನು, ನನ್ನ ಈ ಹಾಡಿಗೆ ಸಾಥ್‌ ಕೊಟ್ಟಿದ್ದು ಡಾನ್ಸರ್ಸ್. ರಾತ್ರಿಯಿಂದ ಮುಂಜಾನೆಯವರೆಗೂ ಎನರ್ಜಿಯಲ್ಲಿದ್ದು, ಸಹಕಾರ ನೀಡಿದರು.

ಈ ಹಾಡನ್ನು ಕನ್ನಡ ಮಾತ್ರವಲ್ಲಿ ಬೇರೆ ಭಾಷೆಯಲ್ಲೂ ಮಾಡಬೇಕು ಅಂದುಕೊಂಡೆ. ಹಾಗಾಗಿ ಐದು ಭಾಷೆಯಲ್ಲಿ ತಯಾರು ಮಾಡಿದ್ದೇನೆ” ಎಂದು ವಿವರ ಕೊಟ್ಟರು ರಾಮ್‌ ಕಿರಣ್.
ನಟಿ ತೇಜಸ್ವಿನಿ ಶರ್ಮಾ ಅವರಿಗೆ ಇದೊಂದು ಹೊಸ ಅನುಭವವಂತೆ. “ರಾಮ್‌ ಕಿರಣ್‌ ಅವರು ವಿಡಿಯೋ ಆಲ್ಬಂ ಬಗ್ಗೆ ಹೇಳಿದಾಗ, ಸ್ವಲ್ಪ ಕಷ್ಟ ಎನಿಸಿದರೂ ಓಕೆ ಅಂದೆ, ಕಷ್ಟ ಅಂದುಕೊಂಡಿದ್ದನ್ನು ಸುಲಭವಾಗಿ ಮಾಡಿದೆವು. ಚಿನ್ನಿ ಮಾಸ್ಟರ್ ಅವರ ಪ್ರೋತ್ಸಾಹ, ಡಾನ್ಸರ್ ಗಳ ಶ್ರಮ ಮೆಚ್ಚಲೇಬೇಕು ಎಂಬುದು ತೇಜಸ್ವಿನಿ ಶರ್ಮಾ ಮಾತು. ಇನ್ನು, ಶಶಾಂಕ್ ಶೇಷಗಿರಿ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ವಿಶೇಷವೆಂದರೆ, ಅವರು ಈ ಐದು ಭಾಷೆಯಲ್ಲೂ ಹಾಡಿದ್ದಾರೆ ಅನ್ನೋದೇ ವಿಶೇಷ.

Categories
ಸಿನಿ ಸುದ್ದಿ

ನಟಿ ರಾಗಿಣಿ ಜತೆಗೆ ನಾಗೇಂದ್ರ ಪ್ರಸಾದ್‌ ಹೊಸ ಸಿನಿಮಾ, ಕಂಬಿ ಹಿಂದಿನ ಕತೆಗಳು ಅನ್ನೋ ಟೈಟಲ್‌ ಕೂಡ ಫಿಕ್ಸ್‌ !

ರಾಗಿಣಿ ಮತ್ತೆ ನಟನೆಯಲ್ಲಿ ಬ್ಯುಸಿ ಆಗುತ್ತಿದ್ದಾರೆ. ಹಾಗೆಯೇ ಸಭೆ ಸಮಾರಂಭ ಅಂತಲೂ ತಿರುಗಾಡುತ್ತಿದ್ದಾರೆ. ಈಗಾಗಲೇ ಮೂರ್ನಾಲ್ಕು ಸಿನಿಮಾಗಳಿಗೆ ರಾಗಿಣಿ ಬುಕ್‌ ಆಗಿದ್ದಾರೆ ಅಂತಲೂ ಸುದ್ದಿ ಇದೆ. ಈ ನಡುವೆಯೇ ಚಿತ್ರ ಸಾಹಿತಿ ಹಾಗೂ ನಿರ್ದೇಶಕ ನಾಗೇಂದ್ರ ಪ್ರಸಾದ್‌ ನಿರ್ದೇಶನದ ಹೊಸ ಸಿನಿಮಾದಲ್ಲೂ ರಾಗಿಣಿ ಅಭಿನಯಿಸುತ್ತಿದ್ದಾರೆಂಬ ಸುದ್ದಿ ಅಧಿಕೃತವಾಗಿಯೇ ರಿವೀಲ್ ಆಯಿತು.

ಅಜಯ್‌ ಕುಮಾರ್‌ ಸರ್ಕಲ್‌ನ 12 ಸಿನಿಮಾಗಳ ಪೋಸ್ಟರ್‌ ಲಾಂಚ್‌ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನಾಗೇಂದ್ರ ಪ್ರಸಾದ್‌ ಅವರೇ ಈ ವಿಚಾರ ಬಹಿರಂಗ ಪಡಿಸಿದರು. ಕಂಬಿ ಹಿಂದಿನ ಕತೆಗಳು ಎನ್ನುವ ಟೈಟಲ್‌ ನಲ್ಲಿ ರಾಗಿಣಿ ಅವರ ಜತೆಗೊಂದು ಸಿನಿಮಾ ಮಾಡುತ್ತಿದ್ದೇನೆ. ಅದಕ್ಕೆ ನಾನು ನಿರ್ದೇಶಕ , ರಾಗಿಣಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆಂದು ನಾಗೇಂದ್ರ ಪ್ರಸಾದ್‌ ಹೇಳಿದರು. ಅವರ ಹೀಗೆ ಹೇಳುವಾಗ ಅವರೊಂದಿಗೆ ವೇದಿಕೆ ಮೇಲೆಯೇ ನಟಿ ರಾಗಿಣಿ ಇದ್ದರು.

ಕಾರ್ಯಕ್ರಮದ ನಂತರ ಮಾಧ್ಯಮದವರ ಜತೆಗೆ ಮಾತಿಗಿಳಿದ ನಟಿ ರಾಗಿಣಿ, ನಿರ್ದೇಶಕ ನಾಗೇಂದ್ರ ಪ್ರಸಾದ್‌ ಸಿನಿಮಾ ಮಾಡುವ ವಿಚಾರ ನಂಗೆ ಗೊತ್ತಿಲ್ಲ. ಅಂತಹ ಯಾವುದೇ ಮಾತುಕತೆ ಕೂಡ ನಡೆದಿಲ್ಲ ಎಂದರು. ಹಾಗಾದ್ರೆ ನಾಗೇಂದ್ರ ಪ್ರಸಾದ್‌ ಹೇಳಿದ್ದು ಸುಳ್ಳಾ ಅಂತ ಕೇಳಿದ ಪ್ರಶ್ನೆಗೆ , ನೀವು ಅವರನ್ನೇ ಕೇಳಿ ಎಂದರು ರಾಗಿಣಿ. ಹಾಗೆಯೇ ರಾಗಿಣಿ ಬಯೋಪಿಕ್‌ ಸಿನಿಮಾ ಆಗುತ್ತಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಗಿಣಿ, ಇದೆಲ್ಲ ತುಂಬಾ ಬೇಗ ಆಯಿತು. ಬಯೋಪಿಕ್‌ ಮಾಡುವಷ್ಟು ನಂಗೆ ವಯಸ್ಸು ಆಗಿಲ್ಲ. ಸಾಮಾನ್ಯವಾಗಿ ೭೫ ವರ್ಷಕ್ಕೆ ಹಾಗೆಲ್ಲ ಮಾಡ್ತಾರೆ. ಇದು ನಂಗೆ ಗೊತ್ತಿಲ್ಲ ಅಂದರು. ನಿರ್ಮಾಪಕ ಕೆ. ಮಂಜು ಅವರೊಂದಿಗೆ ಎರಡು ಸಿನಿಮಾ ಮಾಡುತ್ತಿದ್ದೇನೆ. ಹಾಗೆಯೇ ಕೃಷ್ಣ ಎಂಬುವರ ಜತೆಗೂ ಒಂದು ಸಿನಿಮಾ ಮಾಡುತ್ತಿದ್ದೇನೆ. ಒಟ್ಟಿನಲ್ಲಿ ಈ ವರ್ಷಕ್ಕೆ ಮೂರು ಸಿನಿಮಾ ಬರಲಿವೆ ಎಂದರು ರಾಗಿಣಿ.

Categories
ಸಿನಿ ಸುದ್ದಿ

ಬಿಗ್‌ಬಾಸ್‌ನಲ್ಲಿ ಸಂಬರಗಿ ಸಂಭ್ರಮ, ಅತೀಬುದ್ಧಿವಂತಿಕೆಯ ಆಟ ಬಲು ಜೋರು !

ಪ್ರಶಾಂತ್‌ ಸಂಬರಗಿ ರಾಜಕಾರಣಿನಾ ? ಗೊತ್ತಿಲ್ಲ. ಅವರು ಯಾವ ಆಂಗಲ್‌ ನಲ್ಲಿ ರಾಜಕಾರಣಿಯೋ. ಆದ್ರೆ, ಅವರು ರಾಜಕಾರಣಿ ಎನ್ನುವ ಕೆಟಗರಿಯಲ್ಲಿಯೇ ಕಲರ್ಸ್‌ ಕನ್ನಡ ” ಬಿಗ್‌ ಬಾಸ್‌ ಸೀಸನ್‌ 8ʼ ಕ್ಕೆ ಸೆಲೆಕ್ಟ್‌ ಮಾಡಿಕೊಂಡಿದೆ. ಅದು ಶುರುವಾಗಿ ಈಗಾಗಲೇ ಮೂರು ದಿನಗಳೂ ಕಳೆದು ಹೋಗಿವೆ. ಬಿಗ್‌ ಬಾಸ್‌ ಮನೆಯಲ್ಲೀಗ ಪ್ರಶಾಂತ್‌ ಸಂಬರಗಿ ಆಟ ಜೋರಾಗಿದೆ. ತಣ್ಣಗೆ ಸಂಬರಗಿ ಬಿಗ್‌ ಬಾಸ್‌ ಮನೆಯನ್ನೇ ಆವರಿಸಿಕೊಳ್ಳುತ್ತಿದ್ದಾರೆ. ತಾವೇ ಅತೀ ಬುದ್ಧಿವಂತರೂ ಎನ್ನುವ ಹಾಗೆ ಫೋಸು ನೀಡುತ್ತಿದ್ದಾರೆ. ಟಾಸ್ಕ್‌ ಗಳಲ್ಲಿ ಗೆದ್ದ ಪರಿಯನ್ನು ಸಂಭ್ರಮಿಸುವ ರೀತಿಯಂತೂ ಹೇಳತೀರದು. ಯುದ್ಧ ಗೆದ್ದ ಸಂಭ್ರಮ ಅವರ ಮುಖದಲ್ಲಿರುತ್ತದೆ.

ಮೊದಲ ದಿನವೇ ಬಿಗ್‌ ಬಾಸ್‌ ಮನೆಯಲ್ಲಿ ಸಂಬರಗಿ, ನಟಿ ದಿವ್ಯಾ ಉರುಡುಗ ಅವರೊಂದಿಗೆ ನಡೆದುಕೊಂಡ ರೀತಿಯೇ ವಿಚಿತ್ರವಾಗಿತ್ತು. ಟಾಸ್ಕ್‌ ವೊಂದರಲ್ಲಿ ಗೆದ್ದ ವೇಳೆ, ದಿವ್ಯಾ ಅವರನ್ನು ಎತ್ತಿಕೊಂಡು ಬಿಟ್ಟರು. ಅದೆಷ್ಟು ಸಲುಗೆಯೋ ಎನ್ನುವಂತೆ ಇದು ಕಂಡಿದ್ದು ಹೌದು. ಹಾಗೆಯೇ ಚರ್ಚೆಗಳ ವೇಳೆ, ಟಾಸ್ಕ ಸಂದರ್ಭದಲ್ಲಿ ಎಲ್ಲರನ್ನೂ ಅವರು ಡಾಮಿನೇಟ್‌ ಮಾಡುವ ಪರಿಯಂತೂ ಬಿಗ್‌ ಬಾಸ್‌ ಮನೆಯಲ್ಲಿ ತಣ್ಣಗೆ ಆಕ್ರೋಶದ ಭುಗಿಲೇಳುವಂತೆ ಮಾಡಿದೆ. ಇಷ್ಟರಲ್ಲಿಯೇ ಅದು ಸ್ಪೋಟಗೊಳ್ಳುವುದು ಗ್ಯಾರಂಟಿ ಆಗಿದೆ. ಮಂಗಳವಾರದ ಎಪಿಸೋಡ್‌ ನಲ್ಲಿ ಪ್ರಶಾಂತ್‌ ಸಂಬರಗಿ, ಬೆಂಗಳೂರಿನಲ್ಲಿನ ನಾಯಿ ಸಾಕುವವರ ಮೇಲೆ ತಮ್ಮ ಸಿಟ್ಟು ಹೊರ ಹಾಕಿದರು.

ಬೆಂಗಳೂರಿನಲ್ಲಿ ನಾಯಿ ಮಾಲೀಕರು ಫುಟ್‌ಬಾತ್‌ನಲ್ಲಿ ಅದರ ಮಲ ಮಾಡಿಸುತ್ತಾರೆ. ಇದರಿಂದ ಜನರು ಫುಟ್‌ಪಾತ್‌ನಲ್ಲಿ ಓಡಾಡಾಲು ಕಷ್ಟವಾಗುತ್ತದೆ. ನಾಯಿಯ ಮಲದಲ್ಲಿ ಸಿಕ್ಕಾಪಟ್ಟೆ ಬ್ಯಾಕ್ಟೀರಿಯ ಇರುತ್ತದೆ. ಹೀಗಾಗಿಯೇ ನಾನು ಇದರ ವಿರುದ್ಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೆ ಅಂತ ಹೀಗೆ ಹೇಳಿಕೊಳ್ಳುವಾಗ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ, ಒಂದಷ್ಟು ವಿವರ ಹೊರ ಹಾಕಿದರು. “ನಾನು ಹೇಳುವ ವಿಚಾರ ನಾಯಿ ಪ್ರಿಯರಿಗೆ ಬೇಸರ ತರಿಸಬಹುದು. ನಾನು ಒಂದು ವರ್ಷ ಸಿಂಗಾಪುರದಲ್ಲಿದ್ದೆ. ಅಲ್ಲಿ ನಾಯಿಗಳ ಮಲವನ್ನು ಸ್ವಚ್ಛವಾಗಿ ತೆಗೆಯುತ್ತಾರೆ. ಅಧ್ಯಯನವನ್ನು ಮಾಡಿದ್ದೇನೆ, ವಿಶ್ಲೇಷಣೆ ಮಾಡಿದ್ದೇನೆ. ನಾಯಿಗಳು ಮಾಡುವ ಮಲವನ್ನು ಅವರೇ ಎತ್ತಬೇಕು, ದಂಡ ಎತ್ತಬೇಕು ಅಂತ ಅರ್ಜಿ ಸಲ್ಲಿಸಿದ್ದೆ. ನಾನು ಹೊರಗಡೆ ನೋಡುವಾಗ ಯಾರಿಗಾದರೂ ಹೇಳಿದಾಗ ಕೂಡ ನಮ್ಮ ನಾಯಿ ಅಲ್ಲ ಅದು, ಬೇರೆಯವರ ನಾಯಿ ಅಂತಾರೆ. 5% ಜನರು ಮಾತ್ರ ಅದನ್ನು ಸ್ವಚ್ಛ ಮಾಡುತ್ತಾರೆ. ನಾಯಿ ಮಲದಿಂದ ಸಿಕ್ಕಾಪಟ್ಟೆ ರೋಗಗಳು ಬರುತ್ತವೆ” ಎಂದು ಬಿಗ್‌ ಬಾಸ್‌ ಮನೆಯಲ್ಲಿ ಹೇಳಿಕೊಂಡರು.

Categories
ಸಿನಿ ಸುದ್ದಿ

ಮಾರ್ಚ್‌ 19 ಕ್ಕೆ ತೆರೆಗೆ ಬರುತ್ತಿದೆ ” ಒಂದು ಗಂಟೆಯ ಕಥೆʼ

ನಿರ್ದೇಶಕ ರಾಘವ್‌ ದ್ವಾರ್ಕಿ ಮತ್ತೆ ಸುದ್ದಿಯಲ್ಲಿದ್ದಾರೆ. “ಮತ್ತೆ ಮುಂಗಾರುʼ ಚಿತ್ರದ ನಂತರ ಈಗವರು ಒಂದು ಗಂಟೆಯ ಕಥೆಯೊಂದನ್ನು ತೆರೆ ಮೇಲೆ ತೋರಿಸಲು ರೆಡಿಯಾಗಿದ್ದಾರೆ. ಅಂದ ಹಾಗೆ, ಒಂದು ಗಂಟೆಯ ಕಥೆ ಅನ್ನೋದು ರಾಘವ್‌ ದ್ವಾರ್ಕಿ ನಿರ್ದೇಶಸಿದ ಚಿತ್ರ. ದೇಶದಲ್ಲಿ ಇತ್ತೀಚೆಗೆ ಅತೀ ಹೆಚ್ಚು ಸುದ್ದಿಯಾದ ಅತ್ಯಾಚಾರದ ಪ್ರಕರಣಗಳ ಸುತ್ತ ಈ ಚಿತ್ರದ ಕತೆ ಹೆಣೆಯಲಾಗಿದೆಯಂತೆ. ರಿಯಲ್‌ ವೆಲ್ತ್‌ ವೆಂಚರ್‌ ಪ್ರೋಡಕ್ಷನ್‌ ಹೌಸ್‌ ಮೂಲಕ ರಾಘವ್‌ ದ್ವಾರ್ಕಿ, ಕಶ್ಯಪ್‌ ದಾಕೋಜು, ಕೆ.ಎಸ್.‌ ದುಶ್ಯಂತ್‌, ಶ್ವೇತಾ ದಾಕೋಜು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.
ಹೊಸ ಪ್ರತಿಭೆಗಳಾದ ಅಜಯ್‌ ರಾಜ್‌ ನಾಯಕರಾಗಿ ಅಭಿನಯಿಸಿದ್ದು, ಶನಾಯ ಕಟ್ಟೆ, ಸ್ವಾತಿ ಶರ್ಮಾ, ಪಾಪ ಪಾಂಡು ಚಿದಾನಂದ್‌, ಸಿಲ್ಲಿ ಲಲ್ಲಿ ಆನಂದ್‌, ಪ್ರಕಾಶ್‌ ತಮಿಳು ನಾಡು, ಯಶ್ವಂತ್‌ ಸರ್ದೇಶ್‌ ಪಾಂಡೆ, ಪ್ರಶಾಂತ್ ಸಿದ್ದಿ ಮತ್ತಿತರರು ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ದೇಶದಲ್ಲಿ ಇತ್ತೀಚೆಗೆ ಅತೀ ಹೆಚ್ಚು ಸುದ್ದಿಯಾದ ಅತ್ಯಾಚಾರದ ಪ್ರಕರಣಗಳನ್ನು ಆಧರಿಸಿ ಈ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕ ರಾಘವ್‌ ದ್ವಾರ್ಕಿ. ” ಇದು ಮಹಿಳಾ ಪ್ರದಾನ ಚಿತ್ರವಾದರೂ, ಮಹಿಳೆಯರ ಮೇಲಿನ ಶೋಷಣೆಯೇ ಈ ಚಿತ್ರದ ಪ್ರಮುಖ ಕಥಾ ವಸ್ತು. ಅತ್ಯಾಚಾರದ ಘಟನೆಗಳ ಸುತ್ತ ಮುತ್ತ ಈ ಕತೆ ಹೆಣೆಯಲಾಗಿದೆ. ಕರ್ನಾಟಕದಲ್ಲೇ ನಡೆದ ಒಂದು ಘಟನೆಯೇ ಇದಕ್ಕೆ ಸ್ಪೂರ್ತಿ. ಜಗತ್ತಿನಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗುವ ಶೋಷಣೆ ಸುತ್ತ ಈ ಕಥೆ ಸಾಗುತ್ತದೆʼ ಎನ್ನುತ್ತಾರೆ ನಿರ್ದೇಶಕ ರಾಘವ್‌ ದ್ವಾರ್ಕಿ.

ಹಾಗಂತ ಇದು ಪೂರ್ಣ ಪ್ರಮಾಣದಲ್ಲಿ ಗಂಭೀರವಾದ ಸಿನಿಮಾ ಅಲ್ಲ. ಹಾಸ್ಯವೂ ಸಿನಿಮಾದ ಪ್ರಮುಖ ಅಂಶ. ಮಾಮೂಲಿಗಿಂತ ವಿಭಿನ್ನವಾದ ಕಥಾಹಂದರವಿರಲಿದೆ ಎನ್ನುತ್ತೆ ಚಿತ್ರತಂಡ.” ಸಿನಿಮಾ ಫುಲ್‌ ಕಾಮಿಡಿ ಪ್ಯಾಕೇಜ್‌ನಿಂದ ಕೂಡಿದೆ. ಶೇ.೯೦ ರಷ್ಟು ಮನರಂಜನೆ ಹೊಂದಿದೆ. ಹೀರೋ, ಹೀರೋಯಿನ್‌ ಜೊತೆ ಟ್ರಾವೆಲ್‌ ಮಾಡುವುದು, ಪ್ರಪೋಸ್‌ ಮಾಡುವುದು ನನ್ನ ಸಿನಿಮಾ ಜರ್ನಿ ಅಲ್ಲ. ಕಥೆ ಯೂನಿವರ್ಸಲ್‌ ಆಗಿರಬೇಕು, ಅದು ಜನರಿಗೆ ಮುಟ್ಟಬೇಕು ಎನ್ನುವುದು ನಮ್ಮ ಉದ್ದೇಶʼ ಎನ್ನುತ್ತಾರೆ ನಿರ್ದೇಶಕರು. ಚಿತ್ರಕ್ಕೆ ಬೆಂಗಳೂರು, ಮೈಸೂರು, ಮೇಲುಕೋಟೆ, ಶಿವನ ಸಮುದ್ರ, ಮಡಿಕೇರಿ ಮುಂತಾದ ಕಡೆಗಳಲ್ಲಿ ಶೂಟಿಂಗ್‌ ನಡೆದಿದೆ. ಮಾ.19ರಂದು ಚಿತ್ರ ಬಿಡುಗಡೆ ಆಗುತ್ತಿದೆ.

error: Content is protected !!