ಸುಧೀರ್‌ ಅತ್ತಾವರ್‌ ನಿರ್ದೇಶನದ ಮಡಿ ರಾಜಸ್ತಾನ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆ- ಮಲಿನ ಮನಸ್ಸುಗಳ ಕ್ರೌರ್ಯ ಬಿಂಬಿಸಿದ ಚಿತ್ರಕ್ಕೆ ಮೆಚ್ಚುಗೆ

“ಹಸಿವು ಮತ್ತು ದಾರಿದ್ರ್ಯ ಸಮಾಜಕ್ಕೊಂದು ಶಾಪ. ಅದರ‌ ಜೊತೆ ಜಾತಿ ಕೂಡ ಮನುಕುಲದ ದುರಂತ…”

– ಇದು ನಿರ್ದೇಶಕ ಹಾಗೂ ಖ್ಯಾತ ಗೀತ ಸಾಹಿತಿ ಸುಧೀರ್‌ ಅತ್ತಾವರ್‌ ನಿರ್ದೇಶನದ “ಮಡಿ” ಚಿತ್ರದೊಳಗಿರುವ ಸೂಕ್ಷ್ಮ ವಿಷಯಗಳ ಅರ್ಥಪೂರ್ಣ ಕಥಾನಕ. ಹೌದು, ಇಂಥದ್ದೊಂದು ಸೂಕ್ಷ್ಮ ಸಂವೇದನೆಗಳನ್ನು ಅಷ್ಟೇ ಮನಕಲಕುವ ರೀತಿ ಹಿಡಿದಿಟ್ಟು, ನೋಡುಗರ ಮನಸ್ಸನ್ನು ಕ್ಷಣಕಾಲ ಭಾವುಕತೆಗೂ ದೂಡುವಂತಹ ಚಿತ್ರ ಕಟ್ಟಿಕೊಟ್ಟಿರುವ ಸುಧೀರ್‌ ಅತ್ತಾವರ್‌ ಅವರ “ಮಡಿ” ಈಗಾಗಲೇ ಬಾಲಿವುಡ್‌ ಅಂಗಳದಲ್ಲಿ ಸದ್ದು ಮಾಡಿದೆ.

ಅಷ್ಟೇ ಅಲ್ಲ, ಬಾಲಿವುಡ್‌ ಜಗತ್ತಿನ ಅನೇಕ ಗಣ್ಯರು “ಮಡಿ” ಕುರಿತು ಮಾತಾಡಿದ್ದಾರೆ, ಹೊಗಳಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಈ “ಮಡಿ” ಇನ್ನೊಂದು ಹೊಸ ಸುದ್ದಿ ಹೊತ್ತು ಬಂದಿದೆ.
“ಮಡಿ” ಏಳನೇ ರಾಜಸ್ಥಾನ ಇಂಟರ್ನ್ಯಾಷನಲ್ ಫಿಲಂ ಫ಼ೆಸ್ಟಿವಲ್ (ರಿಫ಼್) ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ಇಂದಿಗೂ ಅಸ್ಪೃಶ್ಯತೆ ಜೀವಂತ ಎಂಬುದಕ್ಕೆ ಕಣ್ಣೆದುರಿಗಿನ‌ ಸಾಕ್ಷಿಯಂತಿರುವ “ಮಡಿ” ಚಿತ್ರ ಮಾರ್ಚ್ 20 ರಿಂದ 24ರವರೆಗೆ ನಡೆಯಲಿರುವ ರಾಜಸ್ತಾನ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ಸ್ಫರ್ಧಾ ವಿಭಾಗದಲ್ಲಿ ಆಯ್ಕೆಯಾಗಿದೆ. ಈ ಚಿತ್ರಕ್ಕೆ “ಮಲಿನ ಮನಸ್ಸುಗಳ ಕ್ರೌರ್ಯ” ಎಂಬ ಅರ್ಥವೆನಿಸುವ ಅಡಿಬರಹವೂ ಇದೆ. ಯಾವುದೇ ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಆಯ್ಕೆಯಾಗುವ ಚಿತ್ರದೊಳಗಿರುವ ಕಥೆ ಗಟ್ಟಿಯಾಗಿರಬೇಕು. ಅಷ್ಟೇ ಸೂಕ್ಷ್ಮತೆಯಿಂದಲೂ ಕೂಡಿರಬೇಕು. “ಮಡಿ” ಆ ಎಲ್ಲಾ ತನವನ್ನು ಹೊಂದಿದ್ದರಿಂದಲೇ ಆಯ್ಕೆಯಾಗಿದೆ. ಅಂದಹಾಗೆ, ಇದೊಂದು ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ಹಸಿವು, ದಾರಿದ್ರ್ಯ ಸಮಾಜಕ್ಕೊಂದು ಶಾಪ. ಅದರ‌ ಜೊತೆ ಜಾತಿ ಕೂಡ ಮನುಕುಲದ ದುರಂತವೇ. “ಮಡಿ” ಚಿತ್ರದೊಳಗಿನ ಪ್ರತಿ ಪಾತ್ರಗಳಲ್ಲೂ ವಿಶೇಷತೆ ಇದೆ ಎಂಬುದನ್ನೂ ಇಲ್ಲಿ ಪರಿಗಣಿಸಲಾಗಿದೆ. ಅದರ ಜೊತೆಯಲ್ಲಿ ಕಥಾಹಂದರದಲ್ಲಿರುವ ಗಟ್ಟಿತನ. ಅಲ್ಲಿನ ಕೀಳರಿಮೆ, ಕಿತ್ತು ತಿನ್ನೋ ಬಡತನ, ಏನೂ ಅರಿಯದ ಹುಡುಗನೊಬ್ಬನ ಹಸಿವು, ಪ್ರಮುಖವಾಗಿ ಗಮನ ಸೆಳೆಯುವ ನಾಯಕಿ. ಆಕೆಯಲ್ಲಿರುವ ಭಯ, ಪುಷ್ಕರಣಿಯಲ್ಲಿ ಜೀವವೊಂದು ಬದುಕಲು‌ ಹೆಣಗಾಡುತ್ತಿದ್ದರೆ, ಅತ್ತ, ಪುರೋಹಿತ ಶಾಹಿಗಳಿಗೆ ಮಡಿಯೇ ಮುಖ್ಯ ಎಂಬ ಧ್ಯೇಯ… ಇವೆಲ್ಲವೂ ವಾಸ್ತವತೆಯನ್ನು ‌ಬಿಂಬಿಸುವಂತಿವೆ.

ಒಟ್ಟಾರೆ ಈ ಸಮಾಜದ ವ್ಯವಸ್ಥೆಯ ಅವ್ಯವಸ್ಥೆಯನ್ನು ಮನತಟ್ಟುವಂತೆ ಸೆರೆಹಿಡಿದಿದ್ದರಿಂದಲೇ ಈ ಚಿತ್ರ ಕೂಡ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ.
ಇನ್ನು, ನಿರ್ದೇಶಕ ಸುಧೀರ್ ಅತ್ತಾವರ್ ಅವರು, “ಮಡಿ” ಮೂಲಕ ಸಮಾಜದಲ್ಲಿರುವ ಹುಳುಕನ್ನ‌ ಎತ್ತಿ ಹಿಡಿಯುವ ಪ್ರಯತ್ನ ಮಾಡಿರುವುದರಿಂದ, ಅವರ ಪರಿಶ್ರಮಕ್ಕೊಂದು ವೇದಿಕೆ ಸಿಕ್ಕಂತಾಗಿದೆ. ಜೈಪುರ ಮತ್ತು ಜೋದ್‌ಪುರದಲ್ಲಿ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಜಗತ್ತಿನಾದ್ಯಂತ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ವರ್ಲ್ಡ್ ಸ್ಪರ್ಧಾ ವಿಭಾಗದಲ್ಲಿ ಸುಮಾರು 15 ಸಿನಿಮಾಗಳೊಂದಿಗೆ “ಮಡಿ” ಪ್ರತಿಷ್ಠಿತ ಪ್ರಶಸ್ತಿಗೆ ಸೆಣಸಾಡಲಿದೆ. ಮಾರ್ಚ್ 24ರಂದು ಜೈಪುರದ ಮಿರಾಜ್ ಸಿನಿಮಾಸ್ ಮತ್ತು ಜೋದ್‌ಪುರದ ಮಿರಾಜ್ ಬಯೋಸ್ಕೋಪ್ ಸಿನಿಮಾಹಾಲ್‌ನಲ್ಲಿ “ಮಡಿ” ಪ್ರದರ್ಶನವಾಗಲಿದೆ.
ವಿದ್ಯಾಧರ್ ಶೆಟ್ಟಿ ಮತ್ತು ಸೂರಜ್ ಚಾರ್ಲ್ಸ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮುಂಬೈನ ಸಕ್ಸಸ್ ಫಿಲಂಸ್ ಮತ್ತು ಸೂರಜ್ ವಿಷುವಲ್ಸ್ ಸಂಸ್ಥೆಗಳ ಬ್ಯಾನರ್ ಅಡಿ ಚಿತ್ರ ತಯಾರಾಗಿದೆ.

ಈಗಾಗಲೇ ಮೊದಲ ಬಾರಿಗೆ ಆನ್‌ಲೈನ್‌ ಪ್ರೀಮಿಯರ್ ಮಾಡಿಕೊಂಡಿರುವ “ಮಡಿ” ಸಿನಿಮಾವನ್ನು ಅಂತಾರಾಷ್ಟ್ರೀಯ ಕಲಾವಿದೆ ಶರೋನ್ ಪ್ರಭಾಕರ್, ಫೆಮಿನಾ ಮಿಸ್ ಇಂಡಿಯಾದ ಸ್ಮೈಲ್ ಡಿಸೈನರ್ ಡಾ.ಸಂದೇಶ್ ಮಯೇಕರ್ ಮೊದಲಾದ ಸೆಲೆಬ್ರಿಟಿಗಳ ಸೇರಿದಂತೆ, ಹಲವು ಸಿನಿ ಪ್ರಿಯರು “ಮಡಿ” ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ವೀಕ್ಷಿಸಿರುವ ಅನೇಕರು ಯುಟ್ಯೂಬ್‌ನಲ್ಲಿ ಸಾಕಷ್ಟು ಕಾಮೆಂಟ್‌ ಕೂಡ ಮಾಡಿದ್ದಾರೆ.
ಇನ್ನು, ಎಂ.ಡಿ. ಪಲ್ಲವಿ, ರಂಗಭೂಮಿ ಕಲಾವಿದ ರಾಮಚಂದ್ರ ದೇವಾಡಿಗ, ಮಾಸ್ಟರ್ ಸಂತೋಷ್, ವೆಂಕಟ್ ರಾವ್, ವಿದ್ಯಾಧರ್ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು “ಮಡಿ” ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಬಿ.ಎಸ್. ಶಾಸ್ತ್ರಿ ಕ್ಯಾಮೆರಾ ಹಿಡಿದರೆ, ವಿದ್ಯಾಧರ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಆಕಾಶ್ ಪತುಲೆ ಸಂಗೀತವಿದೆ. ಸುಧೀರ್‌ ಅತ್ತಾವರ್‌ ಅವರು “ಮಡಿ” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ನಿರ್ದೇಶನ ಮಾಡಿದ್ದಷ್ಟೇ ಅಲ್ಲ, ಅವರಿಲ್ಲಿ ಕಲಾ ನಿರ್ದೇಶನ, ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ.

Related Posts

error: Content is protected !!