ನಟಿ ರಾಗಿಣಿ ಜತೆಗೆ ನಾಗೇಂದ್ರ ಪ್ರಸಾದ್‌ ಹೊಸ ಸಿನಿಮಾ, ಕಂಬಿ ಹಿಂದಿನ ಕತೆಗಳು ಅನ್ನೋ ಟೈಟಲ್‌ ಕೂಡ ಫಿಕ್ಸ್‌ !

ರಾಗಿಣಿ ಮತ್ತೆ ನಟನೆಯಲ್ಲಿ ಬ್ಯುಸಿ ಆಗುತ್ತಿದ್ದಾರೆ. ಹಾಗೆಯೇ ಸಭೆ ಸಮಾರಂಭ ಅಂತಲೂ ತಿರುಗಾಡುತ್ತಿದ್ದಾರೆ. ಈಗಾಗಲೇ ಮೂರ್ನಾಲ್ಕು ಸಿನಿಮಾಗಳಿಗೆ ರಾಗಿಣಿ ಬುಕ್‌ ಆಗಿದ್ದಾರೆ ಅಂತಲೂ ಸುದ್ದಿ ಇದೆ. ಈ ನಡುವೆಯೇ ಚಿತ್ರ ಸಾಹಿತಿ ಹಾಗೂ ನಿರ್ದೇಶಕ ನಾಗೇಂದ್ರ ಪ್ರಸಾದ್‌ ನಿರ್ದೇಶನದ ಹೊಸ ಸಿನಿಮಾದಲ್ಲೂ ರಾಗಿಣಿ ಅಭಿನಯಿಸುತ್ತಿದ್ದಾರೆಂಬ ಸುದ್ದಿ ಅಧಿಕೃತವಾಗಿಯೇ ರಿವೀಲ್ ಆಯಿತು.

ಅಜಯ್‌ ಕುಮಾರ್‌ ಸರ್ಕಲ್‌ನ 12 ಸಿನಿಮಾಗಳ ಪೋಸ್ಟರ್‌ ಲಾಂಚ್‌ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನಾಗೇಂದ್ರ ಪ್ರಸಾದ್‌ ಅವರೇ ಈ ವಿಚಾರ ಬಹಿರಂಗ ಪಡಿಸಿದರು. ಕಂಬಿ ಹಿಂದಿನ ಕತೆಗಳು ಎನ್ನುವ ಟೈಟಲ್‌ ನಲ್ಲಿ ರಾಗಿಣಿ ಅವರ ಜತೆಗೊಂದು ಸಿನಿಮಾ ಮಾಡುತ್ತಿದ್ದೇನೆ. ಅದಕ್ಕೆ ನಾನು ನಿರ್ದೇಶಕ , ರಾಗಿಣಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆಂದು ನಾಗೇಂದ್ರ ಪ್ರಸಾದ್‌ ಹೇಳಿದರು. ಅವರ ಹೀಗೆ ಹೇಳುವಾಗ ಅವರೊಂದಿಗೆ ವೇದಿಕೆ ಮೇಲೆಯೇ ನಟಿ ರಾಗಿಣಿ ಇದ್ದರು.

ಕಾರ್ಯಕ್ರಮದ ನಂತರ ಮಾಧ್ಯಮದವರ ಜತೆಗೆ ಮಾತಿಗಿಳಿದ ನಟಿ ರಾಗಿಣಿ, ನಿರ್ದೇಶಕ ನಾಗೇಂದ್ರ ಪ್ರಸಾದ್‌ ಸಿನಿಮಾ ಮಾಡುವ ವಿಚಾರ ನಂಗೆ ಗೊತ್ತಿಲ್ಲ. ಅಂತಹ ಯಾವುದೇ ಮಾತುಕತೆ ಕೂಡ ನಡೆದಿಲ್ಲ ಎಂದರು. ಹಾಗಾದ್ರೆ ನಾಗೇಂದ್ರ ಪ್ರಸಾದ್‌ ಹೇಳಿದ್ದು ಸುಳ್ಳಾ ಅಂತ ಕೇಳಿದ ಪ್ರಶ್ನೆಗೆ , ನೀವು ಅವರನ್ನೇ ಕೇಳಿ ಎಂದರು ರಾಗಿಣಿ. ಹಾಗೆಯೇ ರಾಗಿಣಿ ಬಯೋಪಿಕ್‌ ಸಿನಿಮಾ ಆಗುತ್ತಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಗಿಣಿ, ಇದೆಲ್ಲ ತುಂಬಾ ಬೇಗ ಆಯಿತು. ಬಯೋಪಿಕ್‌ ಮಾಡುವಷ್ಟು ನಂಗೆ ವಯಸ್ಸು ಆಗಿಲ್ಲ. ಸಾಮಾನ್ಯವಾಗಿ ೭೫ ವರ್ಷಕ್ಕೆ ಹಾಗೆಲ್ಲ ಮಾಡ್ತಾರೆ. ಇದು ನಂಗೆ ಗೊತ್ತಿಲ್ಲ ಅಂದರು. ನಿರ್ಮಾಪಕ ಕೆ. ಮಂಜು ಅವರೊಂದಿಗೆ ಎರಡು ಸಿನಿಮಾ ಮಾಡುತ್ತಿದ್ದೇನೆ. ಹಾಗೆಯೇ ಕೃಷ್ಣ ಎಂಬುವರ ಜತೆಗೂ ಒಂದು ಸಿನಿಮಾ ಮಾಡುತ್ತಿದ್ದೇನೆ. ಒಟ್ಟಿನಲ್ಲಿ ಈ ವರ್ಷಕ್ಕೆ ಮೂರು ಸಿನಿಮಾ ಬರಲಿವೆ ಎಂದರು ರಾಗಿಣಿ.

Related Posts

error: Content is protected !!