Categories
ಸಿನಿ ಸುದ್ದಿ

ಬರಲಿದೆ ಬರ್ಕ್ಲಿ ಟೀಸರ್: ಇದು ವಿಭಿನ್ನ ಕಥಾಹಂದರದ ಚಿತ್ರ -ಬಾಲರಾಜ್ ಪುತ್ರನ ಸಿಗರೇಟ್ ಕಹಾನಿ ಅಲ್ಲವೇ ಅಲ್ಲ!

ನಿರ್ಮಾಪಕ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಈಗ ಬರ್ಕ್ಲಿ ಸಿಗರೇಟ್ ಬೇಕು ಅಂತಿದ್ದಾರೆ. ಅರೇ, ಸಿಗರೇಟ್ ವಿಷಯ ಇಲ್ಲೇಕೆ ಎಂಬ ಪ್ರಶ್ನೆ ಕಾಡಬಹುದು. ಇದು ಸಿನಿಮಾ ಸುದ್ದಿ. ಹೌದು “ಬರ್ಕ್ಲಿ” ಚಿತ್ರ ಈಗ ಸದ್ದು ಮಾಡಲು ಸಜ್ಜಾಗಿದೆ.. ಏಪ್ರಿಲ್ 30 ರ ಸಂಜೆ 5 ಗಂಟೆಗೆ ಝೇಂಕಾರ್ ಮ್ಯೂಸಿಕ್ ಮೂಲಕ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.


ಸಂತೋಷ್ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ಆನೇಕಲ್ ಬಾಲರಾಜ್ ಅವರು ನಿರ್ಮಿಸುತ್ತಿರುವ “ಬರ್ಕ್ಲಿ” ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದೆ. ಸದ್ಯದಲ್ಲೇ ಫಸದಟ್ ಕಾಪಿ ಸಿದ್ದವಾಗಲಿದೆ. ಈಗಾಗಲೇ “ಕರಿಯ”, “ಗಣಪ”, “ಕರಿಯ ೨” ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಅದ್ದೂರಿ ಚಿತ್ರವಿದು.
“ಬರ್ಕ್ಲಿ‌” ಒಂದು ಉತ್ತಮ‌ ಮನೋರಂಜನೆ ಸಿನಿಮಾ. ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ನಿರ್ದೇಶಕರು. ಚಿತ್ರಕ್ಕೆ ಸಂಗೀತ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಅವರದೇ.


” ಬರ್ಕ್ಲಿ” ಎಂದ ಕೂಡಲೇ ಎಲ್ಲರೂ ಸಿಗರೇಟ್ ಒಂದರ ಹೆಸರು ಅಂದುಕೊಳ್ಳುತ್ತಾರೆ. ಆದರೆ ನಮ್ಮ “ಬರ್ಕ್ಲಿ” ಚಿತ್ರಕ್ಕೂ ಸಿಗರೇಟ್ ಗೂ ಯಾವುದೇ ಸಂಬಂಧವಿಲ್ಲ. ನಮ್ಮ ಚಿತ್ರದ ಶೀರ್ಷಿಕೆಯ ಅರ್ಥವೇ ಬೇರೆ ಎನ್ನುತ್ತಾರೆ ನಿರ್ದೇಶಕ ಸುಮಂತ್ ಕ್ರಾಂತಿ.
“ಗಣಪ”, “ಕರಿಯ ೨” ಚಿತ್ರಗಳಲ್ಲಿ ನಟಿಸಿ
ಖ್ಯಾತಿಗಳಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಬಾಲ್ಯದಲ್ಲಿ ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಾಟೇಕರ್ ಈ ಚಿತ್ರದ ನಾಯಕಿ.


ಬಹುಭಾಷಾ ನಟ ಚರಣರಾಜ್, ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಮುಂತಾದವರು ಇದ್ದಾರೆ.
“ಬಹದ್ದೂರ್” ಚೇತನ್ ಕುಮಾರ್, ಅಭಿ ಕನಸಿನ ಕವನ‌ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಜ್ಯೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್, ಎನ್.ಎಂ.ಸೂರಿ ಛಾಯಾಗ್ರಹಣವಿದೆ. ಅಮಿತ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕೊರೋನಾದಿಂದ ಸೇಫ್ ಆಗಿ ಹೊರ ಬಂದ ನಟ ಕೋಮಲ್! ಭಾವುಕತೆಯ ಬರಹದ ಜೊತೆ ರಾಯರಿಗೆ ನಮಿಸಿದ ಜಗ್ಗೇಶ್

ದೇಶಾದ್ಯಂತ ಕೊರೊನಾ ಸೋಂಕು ವಿಪರೀತವಾಗಿ ಹಬ್ಬುತ್ತಿದ್ದು, ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಮಾರಣಾಂತಿಕ ಕಾಯಿಲೆ ದಿನದಿಂದ ದಿನಕ್ಕೆ ಸಾವಿರಾರು ಜನರನ್ನು ಬಲಿ ಪಡೆದುಕೊಳ್ಳುತ್ತಿದೆ. ಈ ಬಿಸಿ ಚಿತ್ರರಂಗಕ್ಕೂ ಬರ ಸಿಡಿಲು ಬಡಿದಂತಾಗಿದೆ. ಇನ್ನೇನು ಚಿತ್ರಗಳು ಬಿಡುಗಡೆಗೆ ಸಿದ್ಧ ಎನ್ನುವ ಹೊತ್ತಿಗೆ, ಚಿತ್ರಮಂದಿರಗಳು ಬಾಗಿಲು ಹಾಕಿದವು. ಇದು ಕೊರೊನಾ ತಂದ ಆಘಾತ. ಇಷ್ಟೇ ಅಲ್ಲ, ಸಿನಿಮಾ ಮಂದಿಯ ಬದುಕನ್ನೇ ಬೀದಿಗೆ ತಳ್ಳಿದೆ. ಅತ್ತ ಸ್ಟಾರ್ ನಟರು ಕೂಡ ಸೂಕ್ತ ಸ್ಥಳ ಅರಸಿ ರೆಸಾರ್ಟ್, ಫಾರ್ಮ್ ಹೌಸ್ ಇತರೆಡೆ ಹೋಗಿ ದಿನ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ದಿನ ಕಳೆದಂತೆ ಸಿನಿಮಾ ರಂಗದ ಒಬ್ಬೊಬ್ಭರೇ ಕೊರೊನಾ ಹೊಡೆತಕ್ಕೆ ಜೀವ ಬಿಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಿರ್ಮಾಪಕ ಕೋಟಿ ರಾಮು ಅವರಿಗೆ ಕೊರೋನಾ ತಗುಲಿ‌ ಮೃತಪಟ್ಟಿರುವುದು ಅಕ್ಷರಶಃ ಸ್ಯಾಂಡಲ್ ವುಡ್ ಅನ್ನು ಬೆಚ್ಚಿ ಬೀಳಿಸಿದೆ. ಇದರ ಬೆನ್ನಲ್ಲೇ ಇದೀಗ ನಟ ಕೋಮಲ್ ಅವರಿಗೆ ಕೊರೊನಾ ಪಾಸಿಟಿವ್ ಆಗಿ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ.

ಹೌದು, ಕೆಲ ದಿನಗಳ ಹಿಂದೆ ಕೋಮಲ್ ಅವರು ಕೊರೊನಾ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು‌‌. ವೈದ್ಯರ ಸತತ ಪರಿಶ್ರಮದಿಂದ ಕೋಮಲ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ‌. ಈ ಕುರಿತು ಕೋಮಲ್ ಸಹೋದರ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

“ನಾನು ಇಷ್ಟು ದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ
ಮಾತ್ರ ಗೊತ್ತು!ಭಕ್ತನ ಗುರುಗಳ ನಡುವೆ ನಡೆದಿತ್ತು ಭಾವನಾತ್ಮಕ ಭಕ್ತಿಯ ಬೇಡಿಕೆ! ಅದು ಒಂದೆ ರಾಯರೆ ನಾನು ಕಾಯವಾಚಮನ ಸತ್ಯವಾಗಿ ನಡೆದುಕೊಂಡಿದ್ದರೆ, ಹೃದಯದಿಂದ ಒಳ್ಳೆಯತನ ಅನುಸರಿಸಿದ್ದರೆ, ಮನುಷ್ಯ ಪಕ್ಷಿ ಪ್ರಾಣಿಯ ಆತ್ಮದಲ್ಲಿ ಸಮಾನವಾಗಿ ದೇವರಿದ್ದಾನೆ ಎಂದು ನಂಬಿದ್ದರೆ, ಯಾರಿಗೂ ಕೇಡು ಬಯಸದೆ ಮೋಸ ವಂಚನೆ ಅನ್ಯಾಯ ಮಾರ್ಗದಲ್ಲಿ ನಡೆದು ನೊಂದವರಿಗೆ ನಂಬಿದವರಿಗು ಭುಜಕೊಟ್ಟು ಬದುಕಿದ್ದರೆ, ನನ್ನ ತಂದೆ ತಾಯಿಯನ್ನು ನೋಯಿಸದೆ ಉತ್ತಮ ಮಗನಂತೆ ಸಂತೈಸಿದ್ದರೆ,
ಅನ್ನಕೊಟ್ಟ ಶಾರದೆ ಸೇವೆ ನಿಷ್ಟೆಯಿಂದ ಮಾಡಿದ್ದರೆ, ಕಾಯಕ ಮಾಡುವ ಎಲ್ಲಾಕ್ಷೇತ್ರದಲ್ಲು ಪ್ರಾಮಾಣಿಕನಾಗಿದ್ದರೆ, ರಾಯರು ನನ್ನ ಹೃದಯಲ್ಲಿದ್ದರೆ ಸಾವಿನಮನೆ ಕದ ತಟ್ಟುತ್ತಿರುವ ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ ಎಂದು! ರಾಯರು ನನ್ನ ಬೇಡಿಕೆಗೆ ಬೃಂದಾವನದಿಂದ ಎದ್ದುಬಂದು ಪಕ್ಕನಿಂತು ಅವನ ಉಳಿಸಿಬಿಟ್ಟರು! komal is safe.


ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು
ಸ್ವಂತ ವ್ಯವಹಾರವನ್ನು ಬೆಂಗಳೂರಿನ ಕಾರ್ಪೊರೇಷನ್ ನಲ್ಲಿ ಶುರುಮಾಡಿ ಯಶಸ್ವಿಯಾದ! ಆದರೆ, ಇತ್ತೀಚೆಗೆ ತನಗೆ ಬರಬೇಕಾದ ಬ bill ಗೆ ಅಲ್ಲಿನ ಕೆಲ ಲಂಚ ಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿ ಬಿಟ್ಟರು! ಅದ ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕೊರೊನಾ ಮಾರಿ ಮೈಸೇರಿ ತುಂಬ serious ಆಗಿಬಿಟ್ಟ!ದೇವರಿಗೆ ಗೊತ್ತು ನಾನು ಎಲ್ಲರಿಂದ ಮುಚ್ಚಿಟ್ಟು ಅಣ್ಣನಾಗಿ ಅವನ ಉಳಿಸಿಕೊಂಡ ಕಷ್ಟ!ಅವನಿಗೆ ಸಹಾಯ ಮಾಡಿದ ಡಾ: ಮಧುಮತಿ,ನಾದನಿ ಡಾ ಲಲಿತ ನರ್ಸ್ ಗಳ ಪಾದಕ್ಕೆ ನನ್ನ ನಮನ, ರಾಯರೆ ಎಂದು ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.

Categories
ಸಿನಿ ಸುದ್ದಿ

ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ನಿಧನ; ನೃತ್ಯ ಕಲಾವಿದರಾಗಿ ಬದುಕು ಕಟ್ಟಿಕೊಂಡಿದ್ದ ರಾಮು ಕಣಗಾಲ್ ಜೀವ ಪಡೆದ ಕೊರೊನಾ

ಈ ಕೊರೊನಾ ಯಾರನ್ನೂ ಬಿಡುತ್ತಿಲ್ಲ. ಬದುಕನ್ನಷ್ಟೇ ಚೆಲ್ಲಾಪಿಲ್ಲಿಯಾಗಿಸಿದ್ದ ಕೊರೊನೊ ಹೆಮ್ಮಾರಿ, ಲೆಕ್ಕವಿಲ್ಲದ್ದಷ್ಟು ಜೀವಗಳನ್ನೇ ಬಲಿ ತೆಗೆದುಕೊಂಡಿದೆ.
ಇಲ್ಲಿ ದಿನ ಕಳೆದಂತೆ ಹಲವು ಸಿನಿಮಾರಂಗದ ಜನರೂ ಪ್ರಾಣ‌ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಕೋಟಿ ನಿರ್ಮಾಪಕ ರಾಮು ಜೀವ ಕಳೆದುಕೊಂಡಿದ್ದರು. ಈಗ ಕನ್ನಡ‌ ಚಿತ್ರರಂಗದ ಖ್ಯಾತ ನಿರ್ದೇಶಕ ಪುಟ್ಟಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್ ಕೊರೊನಾ ಮಾರಿಗೆ ಪ್ರಾಣ ಬಿಟ್ಟಿದ್ದಾರೆ.

ಹೌದು, ರಾಮು ಕಣಗಾಲ್
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಕೊನೆಯ ಕುಡಿ. ಪುಟ್ಟಣ್ಣ ಕಣಗಾಲ್ ಅವರ ಐದನೇ ಪುತ್ರ. ಪುಟ್ಟಣ್ಣ ಅವರಿಗೆ ಸರ್ವೋತ್ತಮ, ಭುವನೇಶ್ವರಿ, ರಾಜರಾಜೇಶ್ವರಿ,
ತ್ರಿವೇಣಿ, ರಾಮು ಮಕ್ಕಳು. ಈ ಪೈಕಿ ರಾಮು , ಭರತನಾಟ್ಯ ಪ್ರವೀಣರು ತಂದೆಯ (ಕಣಗಾಲ್ ನೃತ್ಯಾಲಯ) ಹೆಸರಲ್ಲಿ ಬೆಂಗಳೂರಿನ ಬನಶಂಕರಿಯಲ್ಲಿ ನೃತ್ಯಶಾಲೆ ಶುರುಮಾಡಿದ್ದ ರಾಮು ಅವರು ಸಾಕಷ್ಟು ವಿದ್ಯಾರ್ಥಿಗಳಿಗೆ ನೃತ್ಯ ಗುರುವಾಗಿದ್ದರು. ಅಷ್ಟೇ ಅಲ್ಲ, ತಂದೆಯಂತೆಯೇ ಅವರು ಸಾಂಸ್ಕೃತಿಕ ಸೇವೆಯಲ್ಲಿ ನಿರತರಾಗಿದ್ದರು.

ಕನ್ನಡ ಚಿತ್ರರಂಗಕ್ಕೆ ಅನೇಕ ಪ್ರತಿಭೆಗಳನ್ನು ಪರಿಚಯಿಸಿದ ಹಲವು‌ನಟ,ನಟಿಯರನ್ನು ಕನ್ನಡ ಸಿನಿಮಾ ಲೋಕಕ್ಕೆ ಕರೆತಂದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಮಕ್ಕಳು ಮಾತ್ರ ಸಿನಿಮಾ ರಂಗಕ್ಕೆ ಬರಲಿಲ್ಲ. ಈ ಪ್ರಶ್ನೆ‌ಗೆ ಇಂದಿಗೂ ಉತ್ತರ ‌ಸಿಕ್ಕಿಲ್ಲ.
ಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲ್ ಮಕ್ಕಳು ಬರಲಿಲ್ಲ ಎಂಬ ಬಗ್ಗೆ ಪ್ರಶ್ನೆ ಎದ್ದ ಹಿನ್ನೆಲೆಯಲ್ಲಿ ಈ ಹಿಂದೆಯೇ ರಾಮು ಅವರು ಹೇಳಿಕೊಂಡಿದ್ದರು. ನನಗೆ ಚಿತ್ರರಂಗಕ್ಕೆ ಬರಬೇಕೆಂಬ ಆಸೆ ಇತ್ತು. ಆದರೆ, ತಂದೆಗೆ ತಾವು ಚೆನ್ನಾಗಿ ಓದಬೇಕು. ಆ ನಂತರವಷ್ಟೇ ಉಳಿದದ್ದು ಎಂದಿದ್ದರು. ಆದರೆ, ನಾನು 17 ವರ್ಷ ಹುಡುಗನಿದ್ದಾಗಲೇ ತಂದೆ ನಮ್ಮನ್ನು ಬಿಟ್ಟು ಹೋದರು ಎಂದಿದ್ದರು.
ಪುಟ್ಟಣ್ಷ ಕಣಗಾಲ್ ಅವರ ಕುಟುಂಬ ಮದರಾಸಿನಲ್ಲೇ ವಾಸವಾಗಿತ್ತು. ಪುಟ್ಟಣ್ಣ ಅವರು ನಿಧನವಾಗುವ ಮೂರು ತಿಂಗಳ ಹಿಂದಷ್ಟೇ, ಕುಟುಂಬ ಬೆಂಗಳೂರಿಗೆ ಬಂದಿತ್ತು. ಆದರೆ, ಚಿತ್ರರಂಗದವರ ಪರಿಚಯ ನಮಗಿರಲಿಲ್ಲ ಎಂದು ಹೇಳಿಕೊಂಡಿದ್ದ ರಾಮು, ಆ ಸಂದರ್ಭದಲ್ಲಿ ಯಾರೊಬ್ಬರೂ ಸಹಾಯ ಮಾಡಲಿಲ್ಲ. ನಮ್ಮ ತಂದೆ ಇದ್ದಿದ್ದರೆ ಸಿನಿಮಾ ಸಿನಿಮಾ ರಂಗಕ್ಕೆ ಬರುತ್ತಿದ್ದೆವೋ ಏನೋ ಎಂದು ಹಿಂದೆ ಪತ್ರಿಕೆಯೊಂದರ‌ ಸಂದರ್ಶನದಲ್ಲಿ ಹೇಳಿದ್ದರು ರಾಮು.


ಮದರಾಸಿನಲ್ಲಿ ಚಿಕ್ಕಂದಿನಲ್ಲೇ ನೃತ್ಯಾಭ್ಯಾಸ ಶುರುಮಾಡಿದ್ದ ರಾಮು, ಅದರಲ್ಲೇ ಬದುಕು ಕಟ್ಟಿಕೊಂಡಿದ್ದರು.
ಅದೇನೆ ಇರಲಿ, ಸಿನಿಮಾ ರಂಗದಲ್ಲಿ ಜನಪ್ರಿಯ ನಿರ್ದೇಶಕ ಎಂದೆನಿಸಿಕೊಂಡ ಪುಟ್ಟಣ್ಣ ಕಣಗಾಲ್ ಕುಟುಂಬ ಸಿನಿಮಾ ಲೋಕಕ್ಕೆ ಬಾರದೆ, ಬದುಕು ಕಟ್ಟಿಕೊಂಡು ತನ್ನ ಪಾಡಿಗಿತ್ತು. ನೃತ್ಯಶಾಲೆ ಮೂಲಕ ಹೆಸರು ಮಾಡಿದ್ದ ರಾಮು ಕಣಗಾಲ್ ಈಗ ಇಲ್ಲ. ಆದರೆ, ಅವರ ಅನೇಕ ನೃತ್ಯ ಕಾರ್ಯಕ್ರಮಗಳ ಮೂಲಕ ಜೀವಂತವಾಗಿದ್ದಾರೆ.
ಸಂತಾಪ: ನಟರಾದ ಶ್ರೀನಾಥ್,
ಶಿವರಾಮ್, ರಾಮಕೃಷ್ಣ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Categories
ಸಿನಿ ಸುದ್ದಿ

ಸಂತಸದ ಸುದ್ದಿ ಕೊಟ್ಟ ಲವ್ ಮಾಕ್ಟೇಲ್ ಜೋಡಿ! ಕೃಷ್ಣ-ಮಿಲನಾ ಕೊಟ್ಟ ಆ ಖುಷಿಯ ಸುದ್ದಿ ಇದೇ ನೋಡಿ…

ಅಂತೂ ಇಂತೂ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.
ಅರೇ, ಫೆಬ್ರವರಿ 14ರಂದು ವಿವಾಹವಾಗಿದ್ದ ಜೋಡಿ ಇಷ್ಟು ಬೇಗ ಸಂತಸದ ಸುದ್ದಿ ಕೊಡ್ತಾ? ಹೀಗೊಂದು ಪ್ರಶ್ನೆ ಹುಟ್ಟುವುದು ಸಹಜ. ಸಂತಸದ ಸುದ್ದಿಯಂತೂ ನಿಜ. ಹಾಗಂತ, ಈ ಜೋಡಿ ಈಗ ಮಮ್ಮಿ-ಡ್ಯಾಡಿ ಆಗ್ತಾ ಇಲ್ಲ!

ಹಾಗಾದರೆ ಆ ಸಂತಸದ ಸುದ್ದಿ ಏನು?
ಇತ್ತೀಚಿಗಷ್ಟೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕೊರೊನಾ ಸೋಂಕು ತಗುಲಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ನಂತರದ ದಿನಗಳಲ್ಲಿ
ಇಬ್ಬರು ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿ ವೈದ್ಯರು ಹೇಳಿದಂತೆ, ಚಿಕಿತ್ಸೆ ಪಡೆದಿದ್ದರು. ಈಗ ಇಬ್ಬರೂ ಕೊರೊನೊ ಸೋಂಕಿನಿಂದ ಹೊರ ಬಂದಿದ್ದಾರೆ. ಹೌದು, ಕೊರೊನಾ ಫಲಿತಾಂಶ ನೆಗೆಟಿವ್ ಬಂದಿದೆ. ಆ ಸಂತಸದ ಸುದ್ದಿಯನ್ನು ಇಬ್ಬರೂ ಈಗ ಹಂಚಿಕೊಂಡಿದ್ದಾರೆ. ಏಪ್ರಿಲ್ 14ರಂದು ಕೊರೊನಾ ಪಾಸಿಟಿವ್ ಆಗಿದೆ ಎಂದು ಹೇಳಿಕೊಂಡಿದ್ದರು.


ಈಗ ನೆಗೆಟಿವ್ ಬಂದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಕೋವಿಡ್ ವರದಿ ಈಗ ಬಂದಿದೆ. ನಮಗೆ ನೆಗೆಟಿವ್ ಬಂದಿದೆ. ನಮಗೆ 3 ದಿನಗಳು ಜ್ವರ ಮತ್ತು ಬಾಡಿ ನೋವು ಇತ್ತು. ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದೇವೆ. ನಿಮ್ಮ ಪ್ರೀತಿ ಪಾತ್ರರನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳುವುದು ಮತ್ತು ಸಕರಾತ್ಮಕವಾಗಿರುವುದು ಉತ್ತಮ ಔಷಧಿ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ಬರೆದುಕೊಂಡಿದ್ದಾರೆ.

Categories
ಸಿನಿ ಸುದ್ದಿ

ಉಡಾಫೆ ಬೇಡ, ಮನೆಯಲ್ಲಿದ್ದರೆ ಜಗತ್ತು ಬೀಳಲ್ಲ; ಜೀವ ಇದ್ದರೆ ಜೀವನ ಇದ್ದೇ ಇರುತ್ತೆ -ಕೋವಿಡ್‌ ನಿರ್ಲಕ್ಷ್ಯ ಮಾಡೋರ ಬಗ್ಗೆ ಶ್ರೀಮುರಳಿ ಎಚ್ಚರಿಕೆ ಮಾತು

ಕೊರೊನಾ ಹಾವಳಿಯಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಇದಕ್ಕೆ ಸಿನಿಮಾರಂಗವೂ ಹೊರತಲ್ಲ. ಕಳೆದ ವರ್ಷ ವಕ್ಕರಿಸಿ ಬಂದ ಕೊರೊನಾ ಸಾಕಷ್ಟು ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ವರ್ಷ ಎಲ್ಲವೂ ಸರಿಹೋಗುತ್ತೆ ಅಂದುಕೊಂಡರೆ ಮತ್ತೆ ಕೊರೊನಾ ಹಾವಳಿ ಹೆಚ್ಚಾಗಿ ಎಲ್ಲರ ಬದುಕನ್ನು ಹಾಳುಗೆಡವಿದೆ. ಸರ್ಕಾರ ಬಿಗಿ ಕ್ರಮ ಕೈಗೊಂಡರೂ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಬರುತ್ತಿಲ್ಲ. ಇದಕ್ಕೆ ಕಡಿವಾಣ ಬೀಳಬೇಕಾದರೆ, ಎಲ್ಲರೂ ಮನೆಯಲ್ಲಿದ್ದು, ಅಂತರ ಕಾಪಾಡಿಕೊಂಡು ಕೊರೊನೊ ವಿರುದ್ಧ ಹೋರಾಡುವ ಅಗತ್ಯತೆ ಇದೆ. ಹಾಗಾಗಿ ನಟ ಶ್ರೀಮುರಳಿ ಕೂಡ ಜನರು ಬೀದಿಗಿಳಿಯದಂತೆ, ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಹಾವಳಿಯಿಂದ ತಪ್ಪಿಸಿಕೊಳ್ಳಬೇಕು ಎಂದು ಹೇಳಿರುವ ಶ್ರೀಮುರಳಿ, ಒಂದಷ್ಟು ಸಲಹೆ ಕೊಟ್ಟಿದ್ದಾರೆ.


“ಈಗ ಟೈಮ್‌ ಸರಿಯಿಲ್ಲ. ಒಳ್ಳೇಯ ಟೈಮ್‌ ಬಂದೇ ಬರುತ್ತೆ. ದೃಢವಾಗಿ ನಿಲ್ಲಿ. ಎಲ್ಲದ್ದಕ್ಕೂ ಒಳ್ಳೆಯ ಕಾಲ ಬಂದೇ ಬರುತ್ತೆ. ನಾವು ಸ್ಟ್ರಾಂಗ್‌ ಇದ್ದರೆ ಮಾತ್ರ, ಆಚೆ ಬರೋಕೆ ಆಗೋದು. ಮೆಂಟಲಿ ಒಳ್ಳೆಯ ವಾತಾವರಣ ಸೃಷ್ಟಿಸಿಕೊಳ್ಳಿ. ಮುಖ್ಯವಾಗಿ ಸರ್ಕಾರದ ನಿಯಮ ಪಾಲಿಸಿ. ಇಲ್ಲಿ ಯಾರದು ತಪ್ಪು, ಸರಿ ಎಂಬ ಪ್ರಶ್ನೆ ಬಿಡಿ. ಮೊದಲು ಪ್ರಶ್ನಿಸುವುದನ್ನು ಬಿಡಬೇಕು. ಕೊರೊನಾ ಬಗ್ಗೆ ಉಡಾಫೆ ಮಾತುಗಳು ಬೇಡ. ಆ ಹುಡುಗಾಟಿಕೆಯೂ ಸರಿಯಲ್ಲ. ನಾವು ಮೊದಲು ಕೊರೊನಾ ವಿರುದ್ಧ ಹೋರಾಡಬೇಕಾದರೆ, ಮನೆಯಲ್ಲೇ ಇದ್ದು, ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು, ನಮ್ಮನ್ನು ನಂಬಿದವರಿಗೋಸ್ಕರ ಸರಿಯಾದ ಕ್ರಮಗಳನ್ನು ಅನುಸರಿಸಬೇಕು. ಮೇಜರ್‌ ಆಗಿ, ಪಾಸಿಟಿವ್‌ ಥಿಂಕ್‌ ಮಾಡಬೇಕು. ಮನೆಯಲ್ಲೇ ಇದ್ದು, ಬಿಸಿ ನೀರು ತುಳಸಿ, ಕಷಾಯ ಕುಡಿಯಬೇಕು, ಸ್ಯಾನಿಟೈಸ್‌, ಮಾಸ್ಕ್‌ ಬಳಸಬೇಕು. ಕೇರಫುಲ್‌ ಆಗಿರಬೇಕು. ಒಬ್ಬೊಬ್ಬರನ್ನೂ ಕೇರ್‌ ಮಾಡ್ಬೇಕು. ಕೋವಿಡ್‌ ಇದ್ದರೆ, ಭಯಪಡಬೇಡಿ. ಕ್ವಾರಂಟೈನ್‌ ಆಗಿ ಧೈರ್ಯವಾಗಿರಿ.

ಇಲ್ಲಿ ಎಲ್ಲರೂ ಈ ವಿರುದ್ಧ ಹೋರಾಡಬೇಕೆ ಹೊರತು, ಒಬ್ಬೊಬ್ಬರೇ ಏನೂ ಮಾಡೋಕ್ಕಾಗಲ್ಲ.‌ ಸದ್ಯಕ್ಕೆ ಇರುವ ಈ ಕೆಟ್ಟ ದಿನಗಳಿಂದ ತಪ್ಪಿಸಿಕೊಳ್ಳಿ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎಂಬಂತೆ ಕೊರೊನಾ ಹಾವಳಿಯಿಂದ ತಪ್ಪಿಸಿಕೊಳ್ಳಬೇಕಿದೆ. ನಾವು ಈ ವರ್ಷವೇ ರೆಡಿಯಾಗಬೇಕಿತ್ತು. ಆದರೆ, ಅದರ ಹಾವಳಿ ಇನ್ನೂ ಇದೆ. ಇದು ಎಲ್ಲರಿಗೂ ಹೊಸದು. ಇದು ಹೀಗೆ ಮುಂದುವರೆದರೆ, ಎಲ್ಲಿ ಹೋಗೋದು? ಇದನ್ನು ಕಟ್‌ ಮಾಡಬೇಕಾದರೆ, ಗುಂಪು ಕಟ್ಟಿಕೊಳ್ಳಬಾರದು. ಚೈನ್‌ ಬ್ರೇಕ್‌ ಮಾಡಲೇಬೇಕಿದೆ. ಎಚ್ಚೆತ್ತುಕೊಳ್ಳದೇ ಹೋದರೆ, ಸಮಸ್ಯೆ ಹೆಚ್ಚಾಗುತ್ತೆ. ನಿಮ್ಮ ಪಾಡಿಗೆ ನೀವು ಸ್ವಲ್ಪ ದಿನ ಮನೆಯಲ್ಲಿದ್ದು ಬಿಡಿ, ಜಗತ್ತು ಬೀಳುತ್ತಾ? ನಿತ್ಯ ಯೋಗ ಮಾಡಿ, ವಾಕ್‌ ಮಾಡಿ. ಆರೋಗ್ಯ ಇದ್ದರೆ,‌ ಮುಂದೆ ದುಡಿಮೆ ಮಾಡೋದು ಇದ್ದೇ ಇರುತ್ತೆ. ಆರೋಗ್ಯವೇ ಇಲ್ಲವೆಂದರೆ, ಬದುಕೋದು ಹೇಗೆ? ಕೊನೇ ಪಕ್ಷ ನಮಗೆ, ನಮ್ಮವರಿಗೋಸ್ಕರನಾದರೂ ಸ್ಟ್ರಾಂಗ್‌ ಆಗಿರೋಣ” ಎನ್ನುತ್ತಾರೆ ಶ್ರೀಮುರಳಿ.

Categories
ಸಿನಿ ಸುದ್ದಿ

ರಾಮು ಸರ್‌ ನಿಜಕ್ಕೂ ಧೈರ್ಯವಂತ ನಿರ್ಮಾಪಕ ; ಅಲ್ಲೇ ದುಡಿದು ಅಲ್ಲೇ ಹಣ ಹಾಕುತ್ತಿದ್ದ ಅಪರೂಪದ ಅನ್ನದಾತ

“ಅವರಿಗೆ ಸೋಲಿರಲಿ, ಗೆಲುವಿರಲಿ. ಅಲ್ಲೇ ದುಡಿದು ಅಲ್ಲಿಗೇ ಹಣ ಹಾಕುತ್ತಿದ್ದರು. ಛೇ ಹೀಗಾಗಬಾರದಿತ್ತು. ಅವರಿಲ್ಲ ಅನ್ನುವುದನ್ನು ನೆನಪಿಸಿಕೊಳ್ಳೋಕೂ ಆಗುತ್ತಿಲ್ಲ…

– ಹೀಗೆ ತುಂಬಾನೇ ಬೇಸರಿಸಿಕೊಂಡು ಹೇಳಿದ್ದು, ನಟ ಶ್ರೀಮುರಳಿ. ಹೌದು, ಅವರು ಹೀಗೆ ಹೇಳಿದ್ದು ನಿರ್ಮಾಪಕ ರಾಮು ಅವರ ಕುರಿತು. ಕೊರೊನಾದಿಂದ ಮೃತಪಟ್ಟ ರಾಮು ಅವರ ಬಗ್ಗೆ ಶ್ರೀಮುರಳಿ ಒಂದಷ್ಟು ಮಾತಾಡಿದ್ದಾರೆ. “ರಾಮು ಅವರಿಲ್ಲ ಅಂತ ನೆನಪಿಸಿಕೊಳ್ಳೋಕೂ ಆಗುತ್ತಿಲ್ಲ.

ಅವರು ಕಳೆದ ಮೂರು ವಾರದಿಂದ ವಾಟ್ಸಾಪ್‌ ಮೆಸೇಜ್‌ ಮಾಡಿದ್ದರು. ಅವರ ಸಿನಿಮಾ ಟ್ರೇಲರ್‌ ಕಳಿಸಿದ್ದರು. ಅಷ್ಟೇ ಅಲ್ಲ, ಅವರು ನಮ್ಮ ಮನೆಯ ಸಮೀಪವೇ ಇದ್ದರು. ಇತ್ತೀಚೆಗೆ ಆರೇಳು ತಿಂಗಳ ಹಿಂದಷ್ಟೇ ಅವರು ಬೇರೆಡೆ ಶಿಫ್ಟ್‌ ಆಗಿದ್ದರು. ಅವರಿಲ್ಲ ಅನ್ನೋದನ್ನು ಕೇಳಿ ನಿಜಕ್ಕೂ ಶಾಕ್‌ ಆಯ್ತು. ಸಿಕ್ಕಾಗೆಲ್ಲ ಅವರು ಇಂಡಸ್ಟ್ರಿ ಬಗ್ಗೆಯೇ ಮಾತಾಡೋರು. ನಾವೆಲ್ಲ ಸೇರಿ ಕನ್ನಡ ಇಂಡಸ್ಟ್ರಿಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಬೇಕು. ನೀವೆಲ್ಲ ಬಂದಿದ್ದೀರಿ ನಿಮ್ಮ ಸಹಕಾರ ಇರಲಿ. ತುಂಬಾನೇ ಸ್ಟ್ರಗಲ್‌ ಮಾಡಿ ಇಲ್ಲಿಗೆ ಬಂದಿದ್ದೀರಿ. ನಿಮಗೂ ಒಳ್ಳೆಯದಾಗಬೇಕು, ಇಂಡಸ್ಟ್ರಿಗೂ ಒಳ್ಳೆಯದಾಗಬೇಕು ಅಂತ ಹೇಳುತ್ತಿದ್ದರು. ರಾತ್ರಿ ಅರ್ಧ ಗಂಟೆವರೆಗೆ ವಾಕ್‌ ಮಾಡ್ತಾ ಇದ್ವಿ. ಆಗೆಲ್ಲಾ, ನಾವೆಲ್ಲರೂ ಒಗ್ಗಟ್ಟಾಗಿ ನಿಂತರೆ ಇಂಡಸ್ಟ್ರಿಗೆ ಒಳ್ಳೆಯದಾಗುತ್ತೆ ಅನ್ನೋರು. ನಿಜಕ್ಕೂ ನನಗೆ ನಂಬೋಕೆ ಆಗ್ತಾ ಇಲ್ಲ. ಅವರಿಲ್ಲ ಅನ್ನೋ ವಿಷಯ ಕೇಳಿದರೆ ಮನಸ್ಸು ಭಾರ ಆಗುತ್ತೆ. ನಮಗೆ ಗೊತ್ತಿರುವವರನ್ನೇ ಈಗ ಕಳೆದುಕೊಳ್ಳುತ್ತಿದ್ದೇವಲ್ಲ ಅಂತ ಬೇಸರವಾಗುತ್ತೆ. ರಾಮು ಸರ್‌ಗೆ ಹೀಗೆಲ್ಲಾ ಆಗುತ್ತೆ ಅಂತಾನೂ ಭಾವಿಸಿರಲಿಲ್ಲ.

ಅವರು ತುಂಬಾ ಮೃದು ಸ್ವಭಾವದ ವ್ಯಕ್ತಿ. ಸಿನಿಮಾ ವಿಚಾರಕ್ಕೆ ಬಂದರೆ, ಯಾವುದಕ್ಕೂ ಕಮ್ಮಿ ಇಲ್ಲದಂತೆ ಸಿನಿಮಾ ಮಾಡುತ್ತಿದ್ದರು. ಸಿನಿಮಾ ಮೇಲೆ ಸಿನಿಮಾ ಮಾಡುತ್ತಲೇ ಇದ್ದರು. ನಾನು ಅವರ “ರಾಜ್‌ ವಿಷ್ಣು” ಚಿತ್ರದಲ್ಲಿ ಗೆಸ್ಟ್‌ ಎಪಿಯರೆನ್ಸ್‌ ಆಗಿ ಮಾಡಿದ್ದೆ. ಆಗ ಅವರು “ನಿಮಗೆ ಬರೀ ಕಡಗ ಮಾತ್ರ ಕೊಟ್ಟೆ. ಏನೂ ಕೊಡೋಕೆ ಆಗಲಿಲ್ಲ. ಅಂತ ಸಿಕ್ಕಾಗೆಲ್ಲಾ ಹೇಳ್ತಾನೇ ಇದ್ದರು. ಆಗ ನಾನು ಸರ್‌, ಆ ಮಾತೆಲ್ಲ ಯಾಕೆ, ಬನ್ನಿ ಕೆಲಸ ಮಾಡೋಣ ಅನ್ನುತ್ತಿದ್ದೆ. “ಉಗ್ರಂ” ಬಳಿಕ ಅವರು ಜೊತೆಗೆ ಒಂದ ಸಿನಿಮಾ ಮಾಡೋಣ ಅಂದಿದ್ದರು. ಸರಿ ಸರ್‌ ಅಂದಿದ್ದೆ. ಒಂದಷ್ಟು ಸಿನಿಮಾಗಳಿವೆ ಮುಗಿಸಿಕೊಂಡು ಬರ್ತೀನಿ ಅಂದಿದ್ದರು. ಅವರ ಮಗನ ಬಗ್ಗೆ ಮಾತಾಡಿ, ರೆಡಿಯಾಗುತ್ತಿದ್ದಾನೆ. ಆಸಕ್ತಿ ಬರಬೇಕು ಬಂದ ಮೇಲೆ ಸಿನಿಮಾಗೆ ಕರೆತರುವ ಬಗ್ಗೆ ನೋಡೋಣ ಅಂತಾನು ಹೇಳಿದ್ದರು. ಒಳ್ಳೆಯ ವ್ಯಕ್ತಿಗಳನ್ನೇ ನಾವು ಕಳೆದುಕೊಳ್ಳುತ್ತಿದ್ದೇವೆ. ಇಂತಹ ಸಮಯದಲ್ಲಿ ನಾನು ಹೋಗಲೇಬೇಕಿತ್ತು. ಆದರೆ, ಕಾಲು ಸರಿ ಇರದ ಕಾರಣ ಸಾಧ್ಯವಾಗಲಿಲ್ಲ. ಅದೊಂದು ಬೇಸರವಾಗುತ್ತಿದೆ. ಸಿನಿಮಾ ಗೆಲ್ಲಲಿ, ಸೋಲಲಿ, ದುಡಿದ ಹಣವನ್ನು ಪುನಃ ಸಿನಿಮಾಗೇ ಹಾಕುತ್ತಿದ್ದರು. ನಿಜಕ್ಕೂ ಅವರ ನಿಧನ ಚಿತ್ರರಂಗಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ” ಎಂದಿದ್ದಾರೆ ಶ್ರೀಮುರಳಿ.

Categories
ಸಿನಿ ಸುದ್ದಿ

ಕೋಟಿ ನಮನ… ನಿರ್ಮಾಪಕ ರಾಮು ಇನ್ನಿಲ್ಲ: ಅನ್ನದಾತನ ಕಳಕೊಂಡ ಕನ್ನಡ ಚಿತ್ರರಂಗ

ಕನ್ನಡ‌ ಚಿತ್ರರಂಗದಲ್ಲಿ ರಾಮು ಅಂದ್ರೆ ವಿಭಿನ್ನವಾದ ಹೆಸರು. ನಿರ್ಮಾಪಕ‌ ಎನ್ನುವವನು ಸಿನಿಮಾ‌‌ ನಿರ್ಮಾಣಕ್ಕೆ ಬಂಡವಾಳ ಹೂಡಿ ಸೈಲೆಂಟ್ ಅಗಿರುವವರು ಎನ್ನುವಂತಿದ್ದ ಕಾಲದಲ್ಲಿ ನಿರ್ಮಾಪಕನಿಗೂ‌ ಸ್ಟಾರ್ ಪಟ್ಟ ತಂದುಕೊಟ್ಟಿದ್ದ ಖ್ಯಾತಿ ನಿರ್ಮಾಪಕ‌ ರಾಮು‌ ಅವರದ್ದು.‌ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲಿ‌ ಮೊಟ್ಟ ಮೊದಲು ಕೋಟಿಯಷ್ಟು ಬಂಡವಾಳ ಸುರಿದು ಸಿನಿಮಾ‌ ನಿರ್ಮಾಣ ಮಾಡುವ ಮೂಲಕ ಕೋಟಿ‌ ರಾಮು ಅಂತಲೇ ಫೇಮಸ್ ಆಗಿದ್ದವರು.‌ಅದರ ಜತೆಗೆ ಹೆಸರಾಂತ ನಟಿ‌ ಮಾಲಾಶ್ರೀ ಪತಿ‌ ಎನ್ನುವ ಜನಪ್ರಿಯತೆ ಕೂಡ ಅವರಿಗಿತ್ತು. ರಾಮು ಅವರ ಕುರಿತು ಇಷ್ಟೆಲ್ಲ ಹೇಳುವುದಕ್ಕೆ ಕಾರಣ, ಇದೆಲ್ಲವೂ ಈಗ ಇತಿಹಾಸ ಸೇರಿಬಿಟ್ಟಿತಲ್ಲ ಎನ್ನುವ ವಿಷಾದದಕ್ಕಾಗಿ.

ಹೌದು ಕೋಟಿ ರಾಮು‌ ಇನ್ನಿಲ್ಲ. ಲಾಕಪ್ ಡೆತ್, ಕಲಾಸಿಪಾಳ್ಯ ,ಚಾಮುಂಡಿ, ದುರ್ಗಿ ಸೇರಿದಂತೆ ಹಲವು ಚಿತ್ರಗಳನ್ನು‌ ನಿರ್ಮಿಸಿದ್ದ‌ ನಿರ್ಮಾಪಕ‌ ಕೋಟಿರಾಮು ವಿಧಿವಶರಾಗಿದ್ದಾರೆ. ಕೊರೋನಾ‌ ಎಂಬ‌ ಮಹಾಮಾರಿ ಒಬ್ಬ ಸೌಮ್ಯ ಸ್ವಭಾವದ ನಿರ್ಮಾಪಕನನ್ನು ಸದ್ದಿಲ್ಲದೆ ಬಲಿ‌ ಪಡೆದಿದೆ‌. ಇಡೀ ಕನ್ನಡ ಚಿತ್ರರಂಗಕ್ಕೆ ಈ ಸುದ್ದಿ ಶಾಕ್ ನೀಡಿದೆ. ಇಷ್ಟು‌ ಚಿಕ್ಕ ವಯಸ್ಸಿನಲ್ಲಿ ರಾಮು ಅವರನ್ನು ಕಳೆದುಕೊಂಡ ಕನ್ನಡ ಚಿತ್ರ ರಂಗ ನಿಜಕ್ಕೂ ಬಡವಾಗಿದೆ.

ಕುಟುಂಬದ ಯಜಮಾನ, ಅಧಾರ ಸ್ಥಂಭ, ಮಾಲಾಶ್ರೀ‌ ಅವರ ಪತಿ, ಎರಡು ಮಕ್ಕಳ ತಂದೆ, ಅದೆಷ್ಟೋ ಜನರಿಗೆ ಬೇಕಾದ ಜನಾನುರಾಗಿ, ನೂರಾರು ಸಿನಿಮಾಗಳ ವಿತರಕ ರಾಮು ಇನ್ನಿಲ್ಲ ಎನ್ನವುದು ಅತೀವ ನೋವಿನ ಸಂಗತಿ. ಹುಟ್ಟು ಆಕಸ್ಮಿಕದಂತೆಯೇ ಸಾವು ಖಚಿತವೇ ಆಗಿದ್ದರೂ, ವಿಧಿ ಇಷ್ಟು ಕ್ರೂರಿಯಾಗ ಬಾರದಿತ್ತು‌. ಅವರ ಕುಟುಂಬದ ಆಕ್ರಂದನವನ್ನು ಅದೇಗೆ ಸಮಾಧಾನಸುತ್ತೀಯಾ ನೀನು? ಎಲ್ಲವೂ ವಿಧಿಯಾಟ.

ಸ್ಟಾರ್ ಇಮೇಜ್ ನಿರ್ಮಾಪಕ

ಕನ್ನಡ ಚಿತ್ರರಂಗದಲ್ಲಿ ರಾಮು ಅಂದಾಕ್ಷಣ ನೆನಪಾಗುವ ಹೆಸರೇ ಕೋಟಿ ರಾಮು‌ . ನಿರ್ಮಾಪಕನಾಗಿ ಸ್ಟಾರ್ ಇಮೇಜ್ ಹೊಂದಿದ್ದ ರಾಮು, ಒಂಥರ ಅದೃಷ್ಟವಂತರು. ಇನ್ನೊಂದು‌ ಬಗೆಯಲ್ಲಿ ದುರಾದೃಷ್ಟರು. ಕಾರಣ ಅವರು ಸಕ್ಸಸ್ ಪಡೆದಷ್ಟೇ ಸೋಲು ಕಂಡವರು.ಅದು ಸಿನಿಮಾ ಜತೆಗೆ ನಿಜ ಜೀವನದಲ್ಲೂ ಕೂಡ. ಒಂದು ಕಾಲಕ್ಕೆ ಕೋಟಿ ರಾಮು ಎಂದೆನಿಸಿಕೊಂಡವರು, ಇತ್ತೀಚಿನ ಕೆಲ ವರ್ಷಗಳಲ್ಲಿ ತೀವ್ರ ಹಣಕಾಸಿನ ಸಮಸ್ಯೆಗೂ ಸಿಲುಕಿದ್ದರು ಎನ್ನುವುದು ಚಿತ್ರರಂಗಕ್ಕೂ ಗೊತ್ತು. ಆ ಕಷ್ಟದ ದಿನಗಳಲ್ಲೆ ಪತ್ನಿ ಮಾಲಾಶ್ರೀ ಅವರಿಗಾಗಿಯೇ ಚಾಮುಂಡಿ, ದುರ್ಗಿ ಸಿನಿಮಾಗಳನ್ನು ನಿರ್ಮಿಸಿ, ಮತ್ತೆ ಗೆಲ್ಲುವ ಸಾಹಸ ಮಾಡಿದರು.ಆದರೂ ಅದೃಷ್ಟ ಅವರ ಕೈ ಹಿಡಿಯಲಿಲ್ಲ ಎನ್ನುವುದು ಸಾಕಷ್ಟು ಚರ್ಚೆ ಆಯಿತು.

ಸಿನಿಮಾ ರಂಗ ಅವರನ್ನು ಕೈ ಬಿಟ್ಟಿತು.‌ಆದರೆ ರಾಮು ಮಾತ್ರ ಸಿನಿಮಾ ರಂಗವನ್ನು ಕೈ ಬಿಡಲಿಲ್ಲ. ಪಡೆದಿದ್ದು‌ ಇಲ್ಲಿಯೇ, ಕಳೆದುಕೊಂಡಿದ್ಷು ಇಲ್ಲಿಯೇ, ಏನೇ ಆದರೂ ಇಲ್ಲಿಯೇ ಇರಬೇಕೆಂದು ಸಿನಿಮಾ ನಿರ್ಮಾಣದ ಸಾಹಸ ಮಾಡುತ್ತಲೇ ಬಂದರು. ಸಿನಿಮಾ‌ರಂಗವೇ ಹಾಗೆ. ಒಮ್ಮೆ‌ಇಲ್ಲಿಗೆ ಬಂದವರನ್ನು ಅದು ಅಷ್ಟು ಸುಲಭವಾಗಿ ಹೊರ ದೂಡುವುದಿಲ್ಲ. ಬಿಟ್ಟರೂ ಬಿಡದೀಮಾಯೆ ಎನ್ನು ಹಾಗೆ ಅದೊಂದು ಸೆಳೆತ. ರಾಮು ಅದೇ ಕಾರಣಕ್ಕೆ‌ ಕಷ್ಟದ ದಿನಗಳಲ್ಲೂ‌ ಇಲ್ಲಿಯೇ ಇದ್ದರು. ಇತ್ತೀಚೆಗೆ ಸಾಲು ಸಾಲು ಸಿನಿಮಾಗಳಲ್ಲಿ ಸೋತರೂ, ಮತ್ತೆ ಗೆಲ್ಲುವ ಹುಚ್ಚಿನಲ್ಲಿ‌ ಪ್ರಜ್ವಲ್ ದೇವರಾಜ್ ಅಭಿನಯದಲ್ಲಿ ಅರ್ಜುನ್ ಗೌಡ ಚಿತ್ರ ನಿರ್ಮಾಣ ಮಾಡಿದ್ದರು.‌ ಸದ್ಯಕ್ಕೆ ಅದೇ ಚಿತ್ರದ ರಿಲೀಸ್ ಒತ್ತಡದಲ್ಲಿದ್ದರು. ಕೊರೋನಾ ಹೆಚ್ಚಳ ಆಗದಿದ್ದರೆ ಅರ್ಜುನ್ ಗೌಡ ಇಷ್ಟರಲ್ಲಿಯೇ ತೆರೆಗೆ ಬರಬೇಕಿತ್ತು. ದುರಂತ ಅಂದ್ರೆ ಅದು ತೆರೆ ಕಾಣುವ‌ ಮುನ್ನವೇ ನಿರ್ಮಾಪಕ‌ ಕೋಟಿ ರಾಮು‌ ಕಣ್ಮರೆ ಆಗಿಬಿಟ್ಟರು. ಕ್ರೂರ ವಿಧಿ ಅವರನ್ನು ಬಲಿ‌ ಪಡೆಯಿತು ಅನ್ನೋದು ಅತ್ಯಂತ ನೋವಿನ‌ ಸಂಗತಿ.

ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ನಿರ್ಮಾಪಕರೆಂದೇ ರಾಮು ಗುರುತಿಸಿಕೊಂಡಿದ್ದರು.
ಸಿನಿಮಾನೇ ನನ್ನುಸಿರು ಎಂದು ಬದುಕಿದ್ದ ರಾಮು ಅವರು, ಸಿನಿಮಾ ನಿರ್ಮಾಣ ವಿಷಯದಲ್ಲಿ ಎಂದಿಗೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಭರ್ಜರಿಯಾಗಿಯೇ ಸಿನಿಮಾ ನಿರ್ಮಾಣ ಮಾಡುವ ಮೂಲಕ ಕನ್ನಡಿಗರಿಗೆ ಭರಪೂರ ಸಿನಿಮಾ ಕಟ್ಟಿಕೊಟ್ಟಿದ್ದರು.‌ ಸಿನಿಮಾ ಅಂದರೆ ಪ್ಯಾಷನ್‌ ಅಂದುಕೊಂಡಿದ್ದ ಅವರು, ರಿಸ್ಕ್‌ ಇದ್ದರೂ ಕೂಡ ತಮ್ಮ ಬ್ಯಾನರ್‌ನಲ್ಲಿ ಸುಮಾರು 30 ಸಿನಿಮಾ ನಿರ್ಮಿಸಿದ್ದು ನಿಜಕ್ಕೂ ಹೆಗ್ಗಳಿಕೆಯೇ ಸರಿ.

ಆ ಕಾಲದಲ್ಲೇ ಕೋಟಿ ಹಣ ಸುರಿದು ಸಿನಿಮಾ ನಿರ್ಮಿಸಿದ ಕೀರ್ತಿ ಅವರದು. ಲಾಕಪ್‌ ಡೆತ್‌ ಕನ್ನಡದಲ್ಲಿ ಅಚ್ಚಳಿಯದ ಸಿನಿಮಾ. ಎಕೆ 47 ಚಿತ್ರ ಮರೆಯದ ಚಿತ್ರವಾಗಿಯೇ ಉಳಿದಿದೆ. ಅನೇಕ ಹೊಸ ನಿರ್ದೇಶಕರನ್ನು ಕನ್ನಡಕ್ಕೆ ಪರಿಚಯಿಸಿದ್ದಲ್ಲದೆ, ಕಮರ್ಷಿಯಲ್‌ ಸಿನಿಮಾಗಳೆಂದರೆ ರಾಮು ಅವರು ನೆನಪಾಗುತ್ತಿದ್ದರು. ಯಾವುದೇ ಸಿನಿಮಾ ಮಾಡಿದರೂ, ಎಲ್ಲೂ ತೊಂದರೆ ಇಲ್ಲದೆ, ಯಾವುದಕ್ಕೂ ಕೊರತೆ ಇಲ್ಲದಂತೆ ನಿರ್ಮಾಣ ಮಾಡಿ, ತೆರೆ ಮೇಲೆ ಅದ್ಧೂರಿಯಾಗಿಯೇ ತಂದಂತಹ ಕನಸುಗಾರ. ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದ ಸೇವೆ ಸಲ್ಲಿಸಿದ್ದ ರಾಮು, ಇತ್ತೀಚೆಗೆ ಪ್ರಜ್ವಲ್‌ ದೇವರಾಜ್‌ ಅಭಿನಯದ ಅರ್ಜುನ್‌ ಗೌಡ ನಿರ್ಮಿಸಿದ್ದರು. ಅದರ ರಿಲೀಸ್‌ಗೆ ತಯಾರಿ ನಡೆಸಿದ್ದರು ರಾಮು.

ಮೃದು ವ್ಯಕ್ತಿತ್ವ

ರಾಮು ತುಂಬಾ ಮೃದು ಸ್ವಭಾವದ ವ್ಯಕ್ತಿ. ಮಾತು ಕೂಡ ಹಾಗಯೇ ಇತ್ತು. ಸಿನಿಮಾ ಬಿಟ್ಟು ಬೇರೇನೂ ಗೊತ್ತಿರದ ರಾಮು, ಸದಾ ಸಿನಿಮಾ ಜಪ ಮಾಡುತ್ತಿದ್ದರು. ಅವರು ಸಾಕಷ್ಟು ಮಂದಿಗೆ ಗೊತ್ತಾಗದಂತೆಯೇ ಹಣ ಕಾಸಿನ ಸಹಾಯ ಮಾಡಿದವರು. ಪುನೀತ್‌ ಅಭಿನಯದ ರಾಜಕುಮಾರ ಚಿತ್ರದ ಟೈಟಲ್‌ ಇವರ ಬ್ಯಾನರ್‌ನಲ್ಲಿತ್ತು. ಅಪ್ಪು ಸಿನಿಮಾ ಮಾಡ್ತಾರೆ ಅಂದಾಕ್ಷಣ ಆ ರಾಜಕುಮಾರ ಟೈಟಲ್‌ ಬಿಟ್ಟುಕೊಟ್ಟು ಉದಾರತೆ ಮೆರೆದಿದ್ದರು.

ಅವರ ಮನಸ್ಸಲ್ಲಿ ಕಲ್ಮಷ ಇರಲಿಲ್ಲ. ಸಿನಿಮಾ ಸೋತರೂ, ಅದೇ ಮುಗಳ್ನಗುತ್ತಿದ್ದರು. ಕೆಲ ಸಂದರ್ಭದಲ್ಲಿ ಹಣದ ಮುಗ್ಗಟ್ಟು ಎದುರಿಸಿದ್ದರೂ, ಮತ್ತೆಲ್ಲಿಂದಲೋ ಹಣ ಹಾಕಿ ದೊಡ್ಡ ಮಟ್ಟದಲ್ಲೇ ಸಿನಿಮಾ ನಿರ್ಮಿಸಿದ್ದವರು ರಾಮು. ವಿಶೇಷವಾಗಿ, ಮಹಿಳಾ ಪ್ರಧಾನ ಸಿನಿಮಾ ಮಾಡಿದರೂ, ಅವುಗಳಿಗೆ ಕಮರ್ಷಿಯಲ್‌ ಟಚ್‌ ಕೊಟ್ಟ ಮೊದಲ ನಿರ್ಮಾಪಕರೆಂಬುದು ವಿಶೇಷ. ಆ ಮೂಲಕ ಇಂಡಸ್ಟ್ರಿಯ ದಿಕ್ಕು ಬದಲಿಸಿದ ಮಾತಿಗೂ ರಾಮು ಕಾರಣರಾದರು.

ರಾಮು ಕೊಟ್ಟ ಮರೆಯದ ಸಿನಿಮಾಗಳು

ಗೋಲಿಬಾರ್‌ ಸಿನಿಮಾದಿಂದ ಹಿಡಿದು ಈಗ ಬಿಡುಗಡೆಗೆ ಸಜ್ಜಾಗಿರುವ ಅರ್ಜುನ್‌ ಗೌಡ ಚಿತ್ರದವರೆಗೂ ರಾಮು ಸಿನಿಮಾಗಳಿಗೆ ಎಲ್ಲೂ ಕೊರತೆ ಕಾಣದಂತೆ ನಿಭಾಯಿಸುತ್ತಿದ್ದರು. ಮಾನಸಿಕವಾಗಿ ಗಟ್ಟಿಯಾಗಿಯೇ ಇದ್ದ ರಾಮು, ಸದಾ ಕೋಟಿ ಹಣ ಖರ್ಚು ಮಾಡಿಯೇ ಸಿನಿಮಾ ನಿರ್ಮಿಸಿ, ಚಿತ್ರರಸಿಕರಿಗೆ ಮನರಂಜನೆಯನ್ನುಉಣಬಡಿಸುತ್ತಿದ್ದರು. ಲಾಕಪ್‌ ಡೆತ್‌, ಎ.ಕೆ-47 , ಮಲ್ಲ, ಗೂಳಿ ಶಕ್ತಿ, ಗುಲಾಮ, ತವರಿನ ಸಿರಿ, ಆಟೋ ಶಂಕರ್‌, ಸಿಂಹದ ಮರಿ, ರಾಕ್ಷಸ, ಕಲಾಸಿಪಾಳ್ಯ, ಸಿಬಿಐ ದುರ್ಗಾ, ನಂಜುಂಡಿ, ದುರ್ಗಿ, 99, ಸೇರಿದಂತೆ ಹಲವು ಕಮರ್ಷಿಯಲ್‌ ಸಿನಿಮಾ ಕೊಟ್ಟಿದ್ದಾರೆ. ಇನ್ನೂ ಹಲವು ಸಿನಿಮಾ ಕೊಡುವ ಉತ್ಸಾಹದಲ್ಲಿದ್ದ ರಾಮು ಈಗ ಇನ್ನಿಲ್ಲವೆಂಬುದೇ ಚಿತ್ರರಂಗದ ನೋವು.

Categories
ಸಿನಿ ಸುದ್ದಿ

ಆಸ್ಕರ್ ಪ್ರಶಸ್ತಿಯಲ್ಲಿ ಹೊಸ ಇತಿಹಾಸ : ಏಷಿಯಾದಲ್ಲೆ ಇದೇ ಮೊದಲು ಆಸ್ಕರ್ ಪ್ರಶಸ್ತಿಗೆ ಪಾತ್ರವಾದ ಮಹಿಳಾ ನಿರ್ದೇಶಕಿ ಕ್ಲೋಯಿ ಜೋವ್

ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಯ ಪಟ್ಟಿಯಲ್ಲಿ ಈ ಬಾರಿ ಹೊಸ ಇತಿಹಾಸ ದಾಖಲಾಗಿದೆ. 2021ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು , ಅತ್ಯುತ್ತಮ ನಿರ್ದೇಶಕಿಯಾಗಿ ಚೀನಾ ಮೂಲದ ಕ್ಲೋಯಿ ಜೋವ್ ಆಸ್ಕರ್ ಪ್ರಶಸ್ತಿಗೆ ಪಾತ್ರವಾಗಿದ್ದಾರೆ.ಈ ಮೂಲಕ ಆಸ್ಕರ್ ಗೆ ಮುತ್ತಿಟ್ಟ ಏಷಿಯಾ ಮೊದಲ ಮಹಿಳಾ ನಿರ್ದೇಶಕಿ ಎನ್ನುವ ಖ್ಯಾತಿಗೆ ಚೀನಾದ ಕೋಯ್ಲಿ ಜಾವ್ ಭಾಜನರಾಗಿದ್ದಾರೆ.

2021 ಆಸ್ಕರ್ ಪ್ರಶಸ್ತಿ ಆಯ್ಕೆ ಲಾಸ್ ಏಂಜಲೀಸ್ ನಲ್ಲಿ ನಡೆಯುತ್ತಿದೆ. ಯೂನಿಯನ್ ಸ್ಟೇಷನ್ ಮತ್ತು ಡಾಲ್ಬಿ ಥಿಯೇಟರ್ ಎರಡು ಕಡೆ ನಡೆಯುತ್ತಿದೆ. ‘ನೋಮಡ್ ಲ್ಯಾಂಡ್’ ಚಿತ್ರದ ಅತ್ಯುತ್ತಮ ನಿರ್ದೇಶನಕ್ಕೆ ಕ್ಲೋಯಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 93 ವರ್ಷದ ಅಕಾಡೆಮಿ ಅವಾರ್ಡ್ ಇತಿಹಾಸದಲ್ಲಿ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಎರಡನೇ ಮಹಿಳೆ ಕ್ಲೋಯಿ ಜೋವ್ ಆಗಿದ್ದಾರೆ.

ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ‘ಮಿನಾರಿ’ ಚಿತ್ರದ ನಟನೆಗೆ ಯೂನ್ ಯುಹ್ ಜಂಗ್ ಪಡೆದುಕೊಂ ಡಿದ್ದಾರೆ. ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಡೇನಿಯಲ್ ಕಲುಯಾ ಪಾಲಾಗಿದೆ.

Categories
ಸಿನಿ ಸುದ್ದಿ

ರಮ್ಯಾ ಮೇಡಂ ನೀವು ರಕ್ಷಿತ್‌ ಶೆಟ್ಟಿ ಅವರನ್ನ ಮದ್ವೆ ಆಗಿ! ಫ್ಯಾನ್ಸ್‌ ಪ್ರಶ್ನೆಗೆ ರಮ್ಯಾ ಕೊಟ್ಟ ಉತ್ತರವೇನು ಗೊತ್ತಾ?

ರಮ್ಯಾ ಸದಾ ಸುದ್ದಿಯಲ್ಲಿರುವ ನಟಿ. ಅವರು ಸಿನಿಮಾದಲ್ಲಿದ್ದರೂ, ಇಲ್ಲದಿದ್ದರೂ, ರಾಜಕೀಯದಲ್ಲಿದ್ದರೂ, ಅದರಾಚೆ ಸುಮ್ಮನಿದ್ದರೂ, ಸುದ್ದಿಯಾಗುತ್ತಲೇ ಇರುವ ಏಕೈಕ ನಟಿ ಅಂದರೆ ತಪ್ಪಿಲ್ಲ. ಈಗ ಅವರದ್ದೊಂದು ದೊಡ್ಡ ಸುದ್ದಿಯೇ ಬಂದಿದೆ. ಹಾಗಂತ, ಯಾವುದಾದರೂ ಸಿನಿಮಾ ಒಪ್ಪಿಕೊಂಡಿದ್ದಾರಾ? ಆಥವಾ ರಾಜಕೀಯದಲ್ಲಿ ಹೊಸ ಹುದ್ದೆ ಏನಾದರೂ ಅಲಂಕರಿಸಿದ್ದಾರಾ ಎಂಬ ಪ್ರಶ್ನೆ ಎದುರಾಗೋದು ಸಹಜ. ಆದರೆ, ಇಲ್ಲಿ ಸುದ್ದಿಯಾಗಿರೋದು ಮದುವೆ ವಿಷಯಕ್ಕೆ. ಹೌದು, ರಮ್ಯಾ ಸದ್ಯ ಸಿನಿಮಾದಿಂದ ದೂರ ಉಳಿದಿದ್ದಾರೆ. ಸಕ್ರಿಯ ರಾಜಕಾರಣದಿಂದಲೂ ಸೈಲೆಂಟ್‌ ಆಗಿದ್ದಾರೆ.

ಹಾಗಾದರೆ, ರಮ್ಯಾ ಏನ್ಮಾಡ್ತಾರೆ, ಅವರ ಮದ್ವೆ ಆಗೋದಿಲ್ವಾ? ಎಂಬ ಪ್ರಶ್ನೆಗಳು ಅಭಿಮಾನಿಗಳ ಕಡೆಯಿಂದ ಬಂದಿವೆ. ಆಗಾಗ ತಮ್ಮ ಟ್ವಿಟ್ಟರ್‌, ಇನ್ಸ್‌ಸ್ಟಾಗ್ರಾಂನಲ್ಲಿ ಫ್ಯಾನ್ಸ್‌ ಜೊತೆ ಮಾತನಾಡುವ ರಮ್ಯಾ, ಈ ಬಾರಿ ಕೂಡ ಮಾತಾಡಿದ್ದಾರೆ. ಅದರಲ್ಲಿ ಮದ್ವೆ ವಿಷಯವೂ ಸೇರಿದೆ.
ಹೌದು, ತಮ್ಮ ಇನ್ಸ್‌ಸ್ಟಾಗ್ರಾಂನಲ್ಲಿ ರಮ್ಯಾ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮದುವೆ ಕುರಿತಂತೆ ಒಂದಷ್ಟು ಮಾತನಾಡಿದ್ದಾರೆ. ಅದರಲ್ಲೂ ಒಬ್ಬ ಅಭಿಮಾನಿ, “ನೀವು ರಕ್ಷಿತ್ ಶೆಟ್ಟಿ ಅವರನಾ ಮದುವೆ ಆಗಿ” ಎಂದು ಕೇಳಿದ್ದಾನೆ. ಅಭಿಮಾನಿಯ ಈ ಪ್ರಶ್ನೆಗೆ ಉತ್ತರಿಸಿರುವ ರಮ್ಯಾ, ರಕ್ಷಿತ್ ಶೆಟ್ಟಿ ಅವರ ಇನ್ಸ್‌ಸ್ಟಾ ಖಾತೆಗೆ ಟ್ವೀಟ್ ಮಾಡಿ ನಗುವ ಎಮೋಜಿ ಹಾಕಿದ್ದಾರೆ.

ಇನ್ನು, ರಮ್ಯಾ ಅವರಿಗೆ ಒಂದಷ್ಟು ಫ್ಯಾನ್ಸ್‌ ಮದುವೆ ಬಗ್ಗೆಯೂ ಪ್ರಶ್ನಿಸಿದ್ದಾರೆ. ಮೇಡಂ ಬೇಗ ಮದುವೆ ಆಗಿ, ನೀವು ಮದುವೆ ಆಗ್ಬಿಟ್ಟಿದ್ದೀರಾ?, ಮೇಡಂ ನನ್ನನ್ನು ಮದುವೆ ಆಗಿ, ದಯವಿಟ್ಟು ಮದುವೆ ಆಗಿ” ಎಂದು ಕೇಳಿದವರೂ ಇದ್ದಾರೆ. ಇದಕ್ಕೆಲ್ಲಾ ಕೂಲ್ ಆಗಿ ರಮ್ಯಾ ಉತ್ತರಿಸಿದ್ದಾರೆ. ಡೇಟಿಂಗ್ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೂ ”ಇಲ್ಲ” ಎಂದು ಉತ್ತರಿಸಿದ್ದಾರೆ.
“ಮದುವೆ ಮದುವೆ” ಮಾಡುವುದಕ್ಕೆ ಇದೊಂದೇ ಕೆಲಸ ಇರುವುದು ಅನ್ನೋ ಹಾಗೆ. ಮದುವೆ ಆದ್ಮೇಲೆ ಖುಷಿಯಿಂದ ಇರುವುದಕ್ಕೆ ಆಗಲ್ಲ ಗೊತ್ತಾ?’ ಎಂದು ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯಿಸುವ ಮೂಲಕ ಮದುವೆ ಬಗ್ಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

ಅದೇನೆ ಇರಲಿ, ರಕ್ಷಿತ್ ಶೆಟ್ಟಿಗೆ ಮೊದಲ ಕ್ರಶ್ ರಮ್ಯಾ. ರಮ್ಯಾ ಅಂದರೆ ರಕ್ಷಿತ್ ಶೆಟ್ಟಿ ಅವರಿಗೆ ಬಹಳ ಇಷ್ಟ. ರಕ್ಷಿತ್ ಜೀವನದಲ್ಲಿ ಮೊದಲ ಸೆಲೆಬ್ರಿಟಿ ಕ್ರಶ್ ಹಾಗೂ ಕೊನೆಯ ಸೆಲೆಬ್ರಿಟಿ ಕ್ರಶ್ ರಮ್ಯಾ ಎಂದು ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಅವರ “ಅವನೇ ಶ್ರೀಮನ್ನಾರಾಯಣʼ ಚಿತ್ರದ ಟ್ರೇಲರ್‌ ವೀಕ್ಷಿಸಿದ್ದ ರಮ್ಯಾ ಕೂಡ ಆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗಾಗಿಯೇ ಇರಬೇಕು, ಈಗ ರಮ್ಯಾ ಅಭಿಮಾನಿ, ರಕ್ಷಿತ್ ಅವರನ್ನು ಮದುವೆ ಆಗಿ ಎಂದಿದ್ದಾನೆ. ಅದನ್ನು ರಮ್ಯಾ ಅವರು ರಕ್ಷಿತ್ ಶೆಟ್ಟಿ ಅವರ ಖಾತೆ ಟ್ಯಾಗ್ ಮಾಡಿದ್ದಾರೆ. ಸದ್ಯಕ್ಕೆ ಇಷ್ಟು ಮಾತ್ರ ನಡೆದಿದೆ. ಮುಂದೆ ಏನೆಲ್ಲಾ ಆಗುತ್ತೋ ಕಾದು ನೋಡಬೇಕು.

Categories
ಸಿನಿ ಸುದ್ದಿ

ಮೇಕಿಂಗ್ ಆಫ್ ಬಂಗಾರದ ಮನುಷ್ಯ ಕೃತಿ ಬಿಡುಗಡೆ- ರಾಜ್ ಹುಟ್ಟು ಹಬ್ಬದಂದು ರಂಗನಾಥ್ ಲೋಕಾರ್ಪಣೆ; ಶಿವರಾಜ್‍ ಕುಮಾರ್ ಶುಭ ಹಾರೈಕೆ

ಇದು ಹಿರಿಯ ಸಿನಿಮಾ ಪತ್ರಕರ್ತ ಮಹೇಶ್ ದೇವಶೆಟ್ಟಿ ಕೃತಿ

ಈಗಾಗಲೇ ವರನಟ ಡಾ.ರಾಜಕುಮಾರ್ ಅವರ ಕುರಿತಂತೆ ಹಲವು ಲೇಖಕರು ಪುಸ್ತಕ ಬರೆದಿದ್ದಾರೆ. ಅ ಸಾಲಿಗೆ ಈಗ ಹಿರಿಯ ಸಿನಿಮಾ ಪತ್ರಕರ್ತ ಮಹೇಶ್ ದೇವಶೆಟ್ಟಿ ಅವರೂ ಸೇರಿದ್ದಾರೆ. ಹೌದು,
“ಮೇಕಿಂಗ್ ಆಫ್ ಬಂಗಾರದ ಮನುಷ್ಯ” ಪುಸ್ತಕ ಬರೆದಿರುವ ಅವರು, ಏಪ್ರಿಲ್ 24ರ ರಾಜ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ಅಂದಹಾಗೆ, ಎಚ್.ಆರ್. ರಂಗನಾಥ್ ಅವರು ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಶಿವರಾಜ ಕುಮಾರ್ ಶುಭ ಹಾರೈಸಿದ್ದಾರೆ.


ತಮ್ಮ ಬಹುದಿನಗಳ ಕನಸು ಅಂದೇ ಹೇಳಿಕೊಂಡಿದ್ದ ಮಹೇಶ್ ದೇವಶೆಟ್ಟಿ, ಪುಸ್ತಕ ಕುರಿತಂತೆ ಹಾಗೂ ಆ ಪುಸ್ತಕ ಬರೆಯಲು ಏನೆಲ್ಲಾ ಪ್ರೇರಣೆ ಎಂಬುದನ್ನು ಹಂಚಿಕೊಂಡಿದ್ದಾರೆ. ಅದು ಅವರದೇ ಮಾತುಗಳಲ್ಲಿ ಕೇಳಿ.

ಓವರ್ ಟು ದೇವಶೆಟ್ಟಿ ಮಹೇಶ್…

ಕೈ ನಡುಗುತ್ತಿದ್ದವು…ದೇಹ ಹೈರಾಣಾಗಿತ್ತು…ಮನಸು ಕಸುವು ಕಳಕೊಂಡಿತ್ತು…ಒಂದೇ ಒಂದು ಸಾಲು ಬರೆಯಲು ಒಂದಿಡಿ ದಿನ ತೂಕಡಿಸುತ್ತಿತ್ತು. ಏನಾಗಿ ಹೋಗಿತ್ತು ? ಯಾಕೆಲ್ಲ ಹೀಗಾಯಿತು ? ಪುಟಗಟ್ಟಲೆ ಸಾಲುಗಳನ್ನು ಹಿಂಗನ್ನುವಷ್ಟರಲ್ಲಿ ಬರೆದು ಮುಗಿಸಿ, “ರಾಕ್ಷಸರು ನೀವು” ಎಂದು ಹೇಳಿಸಿಕೊಳ್ಳುತ್ತಿದ್ದ ಈ ಬೆರಳುಗಳಿಗೆ ಗ್ರಹಣ ಹಿಡಿದಿತ್ತು. ಮುಗಿದೇ ಹೋಯಿತು ಇವನ ಗತಿ…ಹೀಗಂತ ಕಾಳಜಿ ತೋರಿಸಿದವರೂ ಇದ್ದರು. ಮಟ ಮಟ ಮಧ್ಯಾಹ್ನ ಶೆರೆ ಕುಡಿದು ಹೊಟ್ಟೆ ತಂಪು ಮಾಡಿಕೊಂಡವರೂ ಸಿಕ್ಕರು. ಉಳಿದವರನ್ನು ಬಿಡಿ, ನನಗೇ ಅನ್ನಿಸಿಬಿಟ್ಟಿತ್ತು. ‘ಮುಗಿತು ಬಿಡಪಾ ನನ್ ಕತಿ…’
ಇಲ್ಲ…ಬದುಕು ಇನ್ನೂ ನನ್ನಲ್ಲಿ ಜೀವ ಉಳಿಸಿತ್ತು. ಇದ್ದಷ್ಟು ದಿನ ಇದ್ದಷ್ಟು ಹೊತ್ತು ಬರೆಯುತ್ತಿರು ಎಂದು ಹೇಳಿತ್ತು. ಎಂಟು ವರ್ಷಗಳ ಹಿಂದೆ ಹೀಗಿತ್ತು ಈ ಹೃದಯ. ಆ ಸಮಯದಲ್ಲಿಯೇ ಸಿಕ್ಕಿತು “ಬಂಗಾರದ ಮನುಷ್ಯ”. ಇದ್ದರೂ ಇಲ್ಲದಂತಿದ್ದ ದೇಹ ಹೊತ್ತು ಅಲೆದಾಡಿದೆ. ಆ ಸಿನಿಮಾಕ್ಕೆ ಸಂಬಂಧ ಪಟ್ಟವರನ್ನು ಮಾತಾಡಿಸಿದೆ. ಭರ್ತಿ ಮೂರು ತಿಂಗಳು ‘ಬಂಗಾರದ ಮನುಷ್ಯ’ನ ಬೆನ್ನು ಬಿದ್ದೆ. ಎಲ್ಲರೂ ಮಾಹಿತಿ ಕೊಟ್ಟು ಉಪಕರಿಸಿದರು. ಈಗ ಅದೆಲ್ಲವನ್ನೂ ಒಂದುಗೂಡಿಸಿ ನಿಮ್ಮ ಮುಂದೆ ಇಡುತ್ತಿದ್ದೇನೆ.


1972 .ಇದು “ಬಂಗಾರದ ಮನುಷ್ಯ” ತೆರೆ ಕಂಡ ವರ್ಷ. ಮಜಾ ಅಂದರೆ ಅದೇ ವರ್ಷ ನಾನು ಹುಟ್ಟಿದ್ದೆ. ನಾನು ಈ ಲೋಕಕ್ಕೆ ಕಾಲಿಟ್ಟ ವರ್ಷ ರಾಜ್ಯಾದ್ಯಂತ ಬಿಡುಗಡೆಯಾಗಿ ಎರಡು ವರ್ಷ ಓಡಿದ ಸಿನಿಮಾ ಕುರಿತು ಇಷ್ಟು ವರ್ಷಗಳ ನಂತರ ನಾನೇ ಬರೆಯುತ್ತೇನೆಂದು ನನಗೇ ಗೊತ್ತಿರಲಿಲ್ಲ. ಅದೆಲ್ಲಾ ಮಾಯಾಲೋಕದ ಮಹಿಮೆ. ನನ್ನ ಅಕ್ಷರಗಳ ಹಡೆದವ್ವ ಜಗನ್ಮಾತೆಯ ಆಶೀರ್ವಾದ.
ನನಗೆ ಇಬ್ಬರು ಅವ್ವಂದಿರು. ಒಬ್ಬಾಕೆ ಈ ಭೂಮಿಗೆ ತಂದ ತಾಯಿ. ಇನ್ನೊಬ್ಬಾಕೆ ಅಕ್ಷರಗಳಿಂದ ಅನ್ನ ತಿನ್ನಿಸುತ್ತಿರುವ ಜಗನ್ಮಾತೆ. ಇವರಿಬ್ಬರೂ ನನ್ನನ್ನು ಕಾಪಾಡುತ್ತಿದ್ದಾರೆ. ಎಲ್ಲ ವ್ಯಸನ, ನೋವು, ಆತಂಕದಿಂದ ಬಚಾವು ಮಾಡುತ್ತಿದ್ದಾರೆ. ಹೆತ್ತವ್ವ ಈಗಿಲ್ಲ. ಜಗನ್ಮಾತೆ ನನ್ನನ್ನು ಕಾಯುತ್ತಿದ್ದಾಳೆ ಹಗಲಿರುಳೆಲ್ಲ. ಇವರು ಇರುವತನಕ ನಾನು. ಮುಂದಿನದ್ದು ದೇವರ ಕಣ್ಣು.
ನಾನು ಸಣ್ಣಾವಿದ್ದಾಗ ಸಿಡಸಿಡಸಿಡುಕಿ ಸೆಟಗೊಂಡು ಕುಂತಾಗಲೆಲ್ಲಾ ಅವ್ವ ‘ರಾಜ್ ಕುಮಾರ್ ಪಿಚ್ಚರ್ ತೋರಿಸ್ತೀನಿ ಬಾ’ ಅಂದ್ರ ಸಾಕು…ಗಲ್ಲ ಉಬ್ಬುತ್ತಿದ್ದವು. ಕಣ್ಣು ಊರಗಲ. ಆಗಿದ್ದ ನನ್ನೆಲ್ಲಾ ಹಳವಂಡ, ದಿಕ್ಕೇಡಿತನ, ತಲ್ಲಣ, ಒಂಟಿತನ, ಪ್ರಕ್ಷುಬ್ಧತೆಯನ್ನು ಹೊಸಕಿ ಹಾಕಿ, ತಿಕ್ಕಿ ತಿಕ್ಕಿ ಸಾಂತ್ವನ ಭಿಕ್ಷಿಸಿದ್ದು ರಾಜ್ಕುಮಾರ್ ಸಿನಿಮಾ. ಆ ಜೀವದ ಒಂದೊಂದು ಚಿತ್ರ ಕರುಳನ್ನು ಕಂಪು-ತಂಪಾಗಿಸುವ ಸುಖಕ್ಕೆ ಈ ಗಳಿಗೆಗೂ ನನ್ನ ಹೃದಯ ಬಡಿದುಕೊಳ್ಳುತ್ತಿದೆ….ಜಗನ್ಮಾತೆಯಾಣೆ ಸುಳ್ಳಲ್ಲ. ಆದರೀಗ ಆ ನನ್ನ ರಾಜ ಕುಮಾರ್ ಇಲ್ಲ. ಅಂಥ ಬಂಗಾರದ ಮನುಷ್ಯನ ಪಾದಕ್ಕೆ ಅಕ್ಷರದ ಕೇದಿಗೆ ಮಾಲೆ ಅರ್ಪಿಸದಿರಲು ಸಾಧ್ಯವೆ ?
2021.ಏಪ್ರಿಲ್ 24…ಅಣ್ಣಾವ್ರ 92ನೇ ಹುಟ್ಟುಹಬ್ಬ. ಆ ದಿನವೇ ಮುತ್ತುರಾಜನ ಮೊದಲ ಮುತ್ತು ಡಾ.ಶಿವರಾಜ್‌ಕುಮಾರ್ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿ ಬಿಡುಗಡೆಯಾಗಿದೆ.

‘ಬರಿದಾದ ಮನೆ ಬೆಳಗೆ…ನೀ ಬರುವೆ ಎಂದು…?’ ಕನ್ನಡಿಗರ ಮನಸು ಮಣಮಣಿಸುತ್ತಿರುವ ಈ ದಿನದಂದೇ ಅಣ್ಣಾವ್ರ ಪಾದಕ್ಕೆ ನನ್ನಿಂದ ಅಕ್ಷರಗಳ ಬಿಲ್ಪತ್ರೆಯ ಅಭಿಷೇಕ…ನಿಮ್ಮ ಹಾರೈಕೆ…ಪ್ರೀತಿ ಈ ಪುಸ್ತಕದ ಮೇಲಿರಲಿ…
ನನ್ನ ಹತ್ತು ಬೆರಳು…ನಿಮ್ಮ ಕರುಳನ್ನು ಅಕ್ಷರಗಳಿಂದ ತಂಪಾಗಿಸುತ್ತಾ ಸಾಗಲಿ… ಎಂದು ಮಹೇಶ್ ದೇವಶೆಟ್ಟಿ ಹೇಳಿಕೊಡಿದ್ದಾರೆ.
49 ವರ್ಷಗಳ ಹಿಂದೆ…ಕೆಲಸಕ್ಕಾಗಿ ಪಟ್ಟಣ ಸೇರುವ ಎಷ್ಟೋ ಯುವಕರು ಒಂದೇ ಒಂದು ಸಿನಿಮಾದಿಂದ ಬದಲಾಗಿ ಕೃಷಿಗೆ ಆದ್ಯತೆ ಕೊಡಲಾರಂಭಿಸಿದ್ರು. ಅದಕ್ಕೆ ಕಾರಣವಾಗಿದ್ದು ಡಾ.ರಾಜ್‍ಕುಮಾರ್ ನಟಿಸಿದ “ಬಂಗಾರದ ಮನುಷ್ಯ” ಚಿತ್ರ. ಕನ್ನಡ ಚಿತ್ರರಂಗವನ್ನು ಮಾತ್ರ ಅಲ್ಲ, ಕನ್ನಡಿಗರಲ್ಲಿ ಹೊಸ ಕ್ರಾಂತಿ ಮೂಡಿಸಿದ ಈ ಸಿನಿಮಾ ಕುರಿತ ಮೇಕಿಂಗ್ ಆಫ್ ಬಂಗಾರದ ಮನುಷ್ಯ' ಕೃತಿ ಬರೆದಿರುವ ಮಹೇಶ್ ದೇವಶೆಟ್ಟಿ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕಿದೆ.

ಕೆಲವೊಂದು ಸಿನಿಮಾಗಳೇ ಹಾಗೆ ಬಂಗಾರದ ಅಕ್ಷರದಲ್ಲಿ ಬರೆಯುವ ಕಥೆಗಳನ್ನು ಹೊಂದಿರುತ್ತವೆ. ಅದರಲ್ಲೂ ಡಾ ರಾಜ್‍ಕುಮಾರ್ ಚಿತ್ರಗಳ ಪಾಲು ಮೇಲ್ಪಂಕ್ತಿಯಲ್ಲಿರುತ್ತದೆ. ಆ ಸಾಲಿನಲ್ಲಿ ಹೊಳೆಯುವ ಧ್ರುವತಾರೆಯೇಬಂಗಾರದ ಮನುಷ್ಯ.’ ಆಗಿನ ಕಾಲದ ಯುವ ಸಮುದಾಯದಲ್ಲಿ ಹೊಸ ಕ್ರಾಂತಿಯನ್ನೇ ಮೂಡಿಸಿದ ಬಂಗಾರದ ಮನುಷ್ಯ ಚಿತ್ರದ ಪ್ರತಿಯೊಂದು ಘಟನೆಯೂ ವಿಸ್ಮಯ ಮೂಡಿಸುವಂಥದ್ದು.
ಹಿಂದೆಂದೂ ಕಂಡು ಕೇಳಿರದ ಮಾಹಿತಿ ಮೇಕಿಂಗ್ ಆಫ್ ಬಂಗಾರದ ಮನುಷ್ಯ' ಪುಸ್ತಕದಲ್ಲಿದೆ. ಪಬ್ಲಿಕ್ ಟಿವಿ ಮುಖ್ಯಸ್ಥರಾಗಿರುವ ಎಚ್.ಆರ್.ರಂಗನಾಥ್ ಬಿಡುಗಡೆ ಮಾಡಿ, ಕನ್ನಡ ಸಿನಿಮಾ ರಂಗದ ಪತ್ರಕರ್ತ ಮಹೇಶ್ ದೇವಶೆಟ್ಟಿ ಬರೆದಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಸಾಕಷ್ಟು ರೋಚಕ ಹಾಗೂ ವಿಶಿಷ್ಟ ಮಾಹಿತಿ ಒಳಗೊಂಡಿದೆ ಎಂದಿದ್ದಾರೆ.


ಪ್ರಸ್ತುತ ಮಹೇಶ್ ದೇವಶೆಟ್ಟಿ ಪಬ್ಲಿಕ್ ಟಿವಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 49 ವರ್ಷಗಳ ಹಿಂದೆ ತೆರೆ ಕಂಡು ಸತತ ಎರಡು ವರ್ಷ ಪ್ರದರ್ಶನ ಕಂಡ ಬಂಗಾರದ ಮನುಷ್ಯ ಚಿತ್ರದ ಕುರಿತ ಅಪರೂಪದ ಮಾಹಿತಿ ಹೆಕ್ಕಿ ತೆಗೆದು ಪುಸ್ತಕ ರೂಪದಲ್ಲಿ ಇಂದಿನ ಜನತೆಗೆ ನೀಡಿದ್ದಾರೆ.
ಅಂದ ಹಾಗೆ `ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಬೆನ್ನುಡಿ ಬರೆದು ಶುಭ ಕೋರಿದ್ದಾರೆ.
ಸಂಪಾದಕರಾದ ದಿವಾಕರ್ ಹಾಗೂ ಔಟ್‍ಪುಟ್ ಚೀಫ್ ಆನಂದ್ ಮತ್ತು ಲೇಖಕ ಮಹೇಶ್ ದೇವಶೆಟ್ಟಿ ಈ ವೇಳೆ ಇದ್ದರು.

error: Content is protected !!