ರಾಮು ಸರ್‌ ನಿಜಕ್ಕೂ ಧೈರ್ಯವಂತ ನಿರ್ಮಾಪಕ ; ಅಲ್ಲೇ ದುಡಿದು ಅಲ್ಲೇ ಹಣ ಹಾಕುತ್ತಿದ್ದ ಅಪರೂಪದ ಅನ್ನದಾತ

“ಅವರಿಗೆ ಸೋಲಿರಲಿ, ಗೆಲುವಿರಲಿ. ಅಲ್ಲೇ ದುಡಿದು ಅಲ್ಲಿಗೇ ಹಣ ಹಾಕುತ್ತಿದ್ದರು. ಛೇ ಹೀಗಾಗಬಾರದಿತ್ತು. ಅವರಿಲ್ಲ ಅನ್ನುವುದನ್ನು ನೆನಪಿಸಿಕೊಳ್ಳೋಕೂ ಆಗುತ್ತಿಲ್ಲ…

– ಹೀಗೆ ತುಂಬಾನೇ ಬೇಸರಿಸಿಕೊಂಡು ಹೇಳಿದ್ದು, ನಟ ಶ್ರೀಮುರಳಿ. ಹೌದು, ಅವರು ಹೀಗೆ ಹೇಳಿದ್ದು ನಿರ್ಮಾಪಕ ರಾಮು ಅವರ ಕುರಿತು. ಕೊರೊನಾದಿಂದ ಮೃತಪಟ್ಟ ರಾಮು ಅವರ ಬಗ್ಗೆ ಶ್ರೀಮುರಳಿ ಒಂದಷ್ಟು ಮಾತಾಡಿದ್ದಾರೆ. “ರಾಮು ಅವರಿಲ್ಲ ಅಂತ ನೆನಪಿಸಿಕೊಳ್ಳೋಕೂ ಆಗುತ್ತಿಲ್ಲ.

ಅವರು ಕಳೆದ ಮೂರು ವಾರದಿಂದ ವಾಟ್ಸಾಪ್‌ ಮೆಸೇಜ್‌ ಮಾಡಿದ್ದರು. ಅವರ ಸಿನಿಮಾ ಟ್ರೇಲರ್‌ ಕಳಿಸಿದ್ದರು. ಅಷ್ಟೇ ಅಲ್ಲ, ಅವರು ನಮ್ಮ ಮನೆಯ ಸಮೀಪವೇ ಇದ್ದರು. ಇತ್ತೀಚೆಗೆ ಆರೇಳು ತಿಂಗಳ ಹಿಂದಷ್ಟೇ ಅವರು ಬೇರೆಡೆ ಶಿಫ್ಟ್‌ ಆಗಿದ್ದರು. ಅವರಿಲ್ಲ ಅನ್ನೋದನ್ನು ಕೇಳಿ ನಿಜಕ್ಕೂ ಶಾಕ್‌ ಆಯ್ತು. ಸಿಕ್ಕಾಗೆಲ್ಲ ಅವರು ಇಂಡಸ್ಟ್ರಿ ಬಗ್ಗೆಯೇ ಮಾತಾಡೋರು. ನಾವೆಲ್ಲ ಸೇರಿ ಕನ್ನಡ ಇಂಡಸ್ಟ್ರಿಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಬೇಕು. ನೀವೆಲ್ಲ ಬಂದಿದ್ದೀರಿ ನಿಮ್ಮ ಸಹಕಾರ ಇರಲಿ. ತುಂಬಾನೇ ಸ್ಟ್ರಗಲ್‌ ಮಾಡಿ ಇಲ್ಲಿಗೆ ಬಂದಿದ್ದೀರಿ. ನಿಮಗೂ ಒಳ್ಳೆಯದಾಗಬೇಕು, ಇಂಡಸ್ಟ್ರಿಗೂ ಒಳ್ಳೆಯದಾಗಬೇಕು ಅಂತ ಹೇಳುತ್ತಿದ್ದರು. ರಾತ್ರಿ ಅರ್ಧ ಗಂಟೆವರೆಗೆ ವಾಕ್‌ ಮಾಡ್ತಾ ಇದ್ವಿ. ಆಗೆಲ್ಲಾ, ನಾವೆಲ್ಲರೂ ಒಗ್ಗಟ್ಟಾಗಿ ನಿಂತರೆ ಇಂಡಸ್ಟ್ರಿಗೆ ಒಳ್ಳೆಯದಾಗುತ್ತೆ ಅನ್ನೋರು. ನಿಜಕ್ಕೂ ನನಗೆ ನಂಬೋಕೆ ಆಗ್ತಾ ಇಲ್ಲ. ಅವರಿಲ್ಲ ಅನ್ನೋ ವಿಷಯ ಕೇಳಿದರೆ ಮನಸ್ಸು ಭಾರ ಆಗುತ್ತೆ. ನಮಗೆ ಗೊತ್ತಿರುವವರನ್ನೇ ಈಗ ಕಳೆದುಕೊಳ್ಳುತ್ತಿದ್ದೇವಲ್ಲ ಅಂತ ಬೇಸರವಾಗುತ್ತೆ. ರಾಮು ಸರ್‌ಗೆ ಹೀಗೆಲ್ಲಾ ಆಗುತ್ತೆ ಅಂತಾನೂ ಭಾವಿಸಿರಲಿಲ್ಲ.

ಅವರು ತುಂಬಾ ಮೃದು ಸ್ವಭಾವದ ವ್ಯಕ್ತಿ. ಸಿನಿಮಾ ವಿಚಾರಕ್ಕೆ ಬಂದರೆ, ಯಾವುದಕ್ಕೂ ಕಮ್ಮಿ ಇಲ್ಲದಂತೆ ಸಿನಿಮಾ ಮಾಡುತ್ತಿದ್ದರು. ಸಿನಿಮಾ ಮೇಲೆ ಸಿನಿಮಾ ಮಾಡುತ್ತಲೇ ಇದ್ದರು. ನಾನು ಅವರ “ರಾಜ್‌ ವಿಷ್ಣು” ಚಿತ್ರದಲ್ಲಿ ಗೆಸ್ಟ್‌ ಎಪಿಯರೆನ್ಸ್‌ ಆಗಿ ಮಾಡಿದ್ದೆ. ಆಗ ಅವರು “ನಿಮಗೆ ಬರೀ ಕಡಗ ಮಾತ್ರ ಕೊಟ್ಟೆ. ಏನೂ ಕೊಡೋಕೆ ಆಗಲಿಲ್ಲ. ಅಂತ ಸಿಕ್ಕಾಗೆಲ್ಲಾ ಹೇಳ್ತಾನೇ ಇದ್ದರು. ಆಗ ನಾನು ಸರ್‌, ಆ ಮಾತೆಲ್ಲ ಯಾಕೆ, ಬನ್ನಿ ಕೆಲಸ ಮಾಡೋಣ ಅನ್ನುತ್ತಿದ್ದೆ. “ಉಗ್ರಂ” ಬಳಿಕ ಅವರು ಜೊತೆಗೆ ಒಂದ ಸಿನಿಮಾ ಮಾಡೋಣ ಅಂದಿದ್ದರು. ಸರಿ ಸರ್‌ ಅಂದಿದ್ದೆ. ಒಂದಷ್ಟು ಸಿನಿಮಾಗಳಿವೆ ಮುಗಿಸಿಕೊಂಡು ಬರ್ತೀನಿ ಅಂದಿದ್ದರು. ಅವರ ಮಗನ ಬಗ್ಗೆ ಮಾತಾಡಿ, ರೆಡಿಯಾಗುತ್ತಿದ್ದಾನೆ. ಆಸಕ್ತಿ ಬರಬೇಕು ಬಂದ ಮೇಲೆ ಸಿನಿಮಾಗೆ ಕರೆತರುವ ಬಗ್ಗೆ ನೋಡೋಣ ಅಂತಾನು ಹೇಳಿದ್ದರು. ಒಳ್ಳೆಯ ವ್ಯಕ್ತಿಗಳನ್ನೇ ನಾವು ಕಳೆದುಕೊಳ್ಳುತ್ತಿದ್ದೇವೆ. ಇಂತಹ ಸಮಯದಲ್ಲಿ ನಾನು ಹೋಗಲೇಬೇಕಿತ್ತು. ಆದರೆ, ಕಾಲು ಸರಿ ಇರದ ಕಾರಣ ಸಾಧ್ಯವಾಗಲಿಲ್ಲ. ಅದೊಂದು ಬೇಸರವಾಗುತ್ತಿದೆ. ಸಿನಿಮಾ ಗೆಲ್ಲಲಿ, ಸೋಲಲಿ, ದುಡಿದ ಹಣವನ್ನು ಪುನಃ ಸಿನಿಮಾಗೇ ಹಾಕುತ್ತಿದ್ದರು. ನಿಜಕ್ಕೂ ಅವರ ನಿಧನ ಚಿತ್ರರಂಗಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ” ಎಂದಿದ್ದಾರೆ ಶ್ರೀಮುರಳಿ.

Related Posts

error: Content is protected !!