ಮೇಕಿಂಗ್ ಆಫ್ ಬಂಗಾರದ ಮನುಷ್ಯ ಕೃತಿ ಬಿಡುಗಡೆ- ರಾಜ್ ಹುಟ್ಟು ಹಬ್ಬದಂದು ರಂಗನಾಥ್ ಲೋಕಾರ್ಪಣೆ; ಶಿವರಾಜ್‍ ಕುಮಾರ್ ಶುಭ ಹಾರೈಕೆ

ಇದು ಹಿರಿಯ ಸಿನಿಮಾ ಪತ್ರಕರ್ತ ಮಹೇಶ್ ದೇವಶೆಟ್ಟಿ ಕೃತಿ

ಈಗಾಗಲೇ ವರನಟ ಡಾ.ರಾಜಕುಮಾರ್ ಅವರ ಕುರಿತಂತೆ ಹಲವು ಲೇಖಕರು ಪುಸ್ತಕ ಬರೆದಿದ್ದಾರೆ. ಅ ಸಾಲಿಗೆ ಈಗ ಹಿರಿಯ ಸಿನಿಮಾ ಪತ್ರಕರ್ತ ಮಹೇಶ್ ದೇವಶೆಟ್ಟಿ ಅವರೂ ಸೇರಿದ್ದಾರೆ. ಹೌದು,
“ಮೇಕಿಂಗ್ ಆಫ್ ಬಂಗಾರದ ಮನುಷ್ಯ” ಪುಸ್ತಕ ಬರೆದಿರುವ ಅವರು, ಏಪ್ರಿಲ್ 24ರ ರಾಜ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ಅಂದಹಾಗೆ, ಎಚ್.ಆರ್. ರಂಗನಾಥ್ ಅವರು ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಶಿವರಾಜ ಕುಮಾರ್ ಶುಭ ಹಾರೈಸಿದ್ದಾರೆ.


ತಮ್ಮ ಬಹುದಿನಗಳ ಕನಸು ಅಂದೇ ಹೇಳಿಕೊಂಡಿದ್ದ ಮಹೇಶ್ ದೇವಶೆಟ್ಟಿ, ಪುಸ್ತಕ ಕುರಿತಂತೆ ಹಾಗೂ ಆ ಪುಸ್ತಕ ಬರೆಯಲು ಏನೆಲ್ಲಾ ಪ್ರೇರಣೆ ಎಂಬುದನ್ನು ಹಂಚಿಕೊಂಡಿದ್ದಾರೆ. ಅದು ಅವರದೇ ಮಾತುಗಳಲ್ಲಿ ಕೇಳಿ.

ಓವರ್ ಟು ದೇವಶೆಟ್ಟಿ ಮಹೇಶ್…

ಕೈ ನಡುಗುತ್ತಿದ್ದವು…ದೇಹ ಹೈರಾಣಾಗಿತ್ತು…ಮನಸು ಕಸುವು ಕಳಕೊಂಡಿತ್ತು…ಒಂದೇ ಒಂದು ಸಾಲು ಬರೆಯಲು ಒಂದಿಡಿ ದಿನ ತೂಕಡಿಸುತ್ತಿತ್ತು. ಏನಾಗಿ ಹೋಗಿತ್ತು ? ಯಾಕೆಲ್ಲ ಹೀಗಾಯಿತು ? ಪುಟಗಟ್ಟಲೆ ಸಾಲುಗಳನ್ನು ಹಿಂಗನ್ನುವಷ್ಟರಲ್ಲಿ ಬರೆದು ಮುಗಿಸಿ, “ರಾಕ್ಷಸರು ನೀವು” ಎಂದು ಹೇಳಿಸಿಕೊಳ್ಳುತ್ತಿದ್ದ ಈ ಬೆರಳುಗಳಿಗೆ ಗ್ರಹಣ ಹಿಡಿದಿತ್ತು. ಮುಗಿದೇ ಹೋಯಿತು ಇವನ ಗತಿ…ಹೀಗಂತ ಕಾಳಜಿ ತೋರಿಸಿದವರೂ ಇದ್ದರು. ಮಟ ಮಟ ಮಧ್ಯಾಹ್ನ ಶೆರೆ ಕುಡಿದು ಹೊಟ್ಟೆ ತಂಪು ಮಾಡಿಕೊಂಡವರೂ ಸಿಕ್ಕರು. ಉಳಿದವರನ್ನು ಬಿಡಿ, ನನಗೇ ಅನ್ನಿಸಿಬಿಟ್ಟಿತ್ತು. ‘ಮುಗಿತು ಬಿಡಪಾ ನನ್ ಕತಿ…’
ಇಲ್ಲ…ಬದುಕು ಇನ್ನೂ ನನ್ನಲ್ಲಿ ಜೀವ ಉಳಿಸಿತ್ತು. ಇದ್ದಷ್ಟು ದಿನ ಇದ್ದಷ್ಟು ಹೊತ್ತು ಬರೆಯುತ್ತಿರು ಎಂದು ಹೇಳಿತ್ತು. ಎಂಟು ವರ್ಷಗಳ ಹಿಂದೆ ಹೀಗಿತ್ತು ಈ ಹೃದಯ. ಆ ಸಮಯದಲ್ಲಿಯೇ ಸಿಕ್ಕಿತು “ಬಂಗಾರದ ಮನುಷ್ಯ”. ಇದ್ದರೂ ಇಲ್ಲದಂತಿದ್ದ ದೇಹ ಹೊತ್ತು ಅಲೆದಾಡಿದೆ. ಆ ಸಿನಿಮಾಕ್ಕೆ ಸಂಬಂಧ ಪಟ್ಟವರನ್ನು ಮಾತಾಡಿಸಿದೆ. ಭರ್ತಿ ಮೂರು ತಿಂಗಳು ‘ಬಂಗಾರದ ಮನುಷ್ಯ’ನ ಬೆನ್ನು ಬಿದ್ದೆ. ಎಲ್ಲರೂ ಮಾಹಿತಿ ಕೊಟ್ಟು ಉಪಕರಿಸಿದರು. ಈಗ ಅದೆಲ್ಲವನ್ನೂ ಒಂದುಗೂಡಿಸಿ ನಿಮ್ಮ ಮುಂದೆ ಇಡುತ್ತಿದ್ದೇನೆ.


1972 .ಇದು “ಬಂಗಾರದ ಮನುಷ್ಯ” ತೆರೆ ಕಂಡ ವರ್ಷ. ಮಜಾ ಅಂದರೆ ಅದೇ ವರ್ಷ ನಾನು ಹುಟ್ಟಿದ್ದೆ. ನಾನು ಈ ಲೋಕಕ್ಕೆ ಕಾಲಿಟ್ಟ ವರ್ಷ ರಾಜ್ಯಾದ್ಯಂತ ಬಿಡುಗಡೆಯಾಗಿ ಎರಡು ವರ್ಷ ಓಡಿದ ಸಿನಿಮಾ ಕುರಿತು ಇಷ್ಟು ವರ್ಷಗಳ ನಂತರ ನಾನೇ ಬರೆಯುತ್ತೇನೆಂದು ನನಗೇ ಗೊತ್ತಿರಲಿಲ್ಲ. ಅದೆಲ್ಲಾ ಮಾಯಾಲೋಕದ ಮಹಿಮೆ. ನನ್ನ ಅಕ್ಷರಗಳ ಹಡೆದವ್ವ ಜಗನ್ಮಾತೆಯ ಆಶೀರ್ವಾದ.
ನನಗೆ ಇಬ್ಬರು ಅವ್ವಂದಿರು. ಒಬ್ಬಾಕೆ ಈ ಭೂಮಿಗೆ ತಂದ ತಾಯಿ. ಇನ್ನೊಬ್ಬಾಕೆ ಅಕ್ಷರಗಳಿಂದ ಅನ್ನ ತಿನ್ನಿಸುತ್ತಿರುವ ಜಗನ್ಮಾತೆ. ಇವರಿಬ್ಬರೂ ನನ್ನನ್ನು ಕಾಪಾಡುತ್ತಿದ್ದಾರೆ. ಎಲ್ಲ ವ್ಯಸನ, ನೋವು, ಆತಂಕದಿಂದ ಬಚಾವು ಮಾಡುತ್ತಿದ್ದಾರೆ. ಹೆತ್ತವ್ವ ಈಗಿಲ್ಲ. ಜಗನ್ಮಾತೆ ನನ್ನನ್ನು ಕಾಯುತ್ತಿದ್ದಾಳೆ ಹಗಲಿರುಳೆಲ್ಲ. ಇವರು ಇರುವತನಕ ನಾನು. ಮುಂದಿನದ್ದು ದೇವರ ಕಣ್ಣು.
ನಾನು ಸಣ್ಣಾವಿದ್ದಾಗ ಸಿಡಸಿಡಸಿಡುಕಿ ಸೆಟಗೊಂಡು ಕುಂತಾಗಲೆಲ್ಲಾ ಅವ್ವ ‘ರಾಜ್ ಕುಮಾರ್ ಪಿಚ್ಚರ್ ತೋರಿಸ್ತೀನಿ ಬಾ’ ಅಂದ್ರ ಸಾಕು…ಗಲ್ಲ ಉಬ್ಬುತ್ತಿದ್ದವು. ಕಣ್ಣು ಊರಗಲ. ಆಗಿದ್ದ ನನ್ನೆಲ್ಲಾ ಹಳವಂಡ, ದಿಕ್ಕೇಡಿತನ, ತಲ್ಲಣ, ಒಂಟಿತನ, ಪ್ರಕ್ಷುಬ್ಧತೆಯನ್ನು ಹೊಸಕಿ ಹಾಕಿ, ತಿಕ್ಕಿ ತಿಕ್ಕಿ ಸಾಂತ್ವನ ಭಿಕ್ಷಿಸಿದ್ದು ರಾಜ್ಕುಮಾರ್ ಸಿನಿಮಾ. ಆ ಜೀವದ ಒಂದೊಂದು ಚಿತ್ರ ಕರುಳನ್ನು ಕಂಪು-ತಂಪಾಗಿಸುವ ಸುಖಕ್ಕೆ ಈ ಗಳಿಗೆಗೂ ನನ್ನ ಹೃದಯ ಬಡಿದುಕೊಳ್ಳುತ್ತಿದೆ….ಜಗನ್ಮಾತೆಯಾಣೆ ಸುಳ್ಳಲ್ಲ. ಆದರೀಗ ಆ ನನ್ನ ರಾಜ ಕುಮಾರ್ ಇಲ್ಲ. ಅಂಥ ಬಂಗಾರದ ಮನುಷ್ಯನ ಪಾದಕ್ಕೆ ಅಕ್ಷರದ ಕೇದಿಗೆ ಮಾಲೆ ಅರ್ಪಿಸದಿರಲು ಸಾಧ್ಯವೆ ?
2021.ಏಪ್ರಿಲ್ 24…ಅಣ್ಣಾವ್ರ 92ನೇ ಹುಟ್ಟುಹಬ್ಬ. ಆ ದಿನವೇ ಮುತ್ತುರಾಜನ ಮೊದಲ ಮುತ್ತು ಡಾ.ಶಿವರಾಜ್‌ಕುಮಾರ್ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿ ಬಿಡುಗಡೆಯಾಗಿದೆ.

‘ಬರಿದಾದ ಮನೆ ಬೆಳಗೆ…ನೀ ಬರುವೆ ಎಂದು…?’ ಕನ್ನಡಿಗರ ಮನಸು ಮಣಮಣಿಸುತ್ತಿರುವ ಈ ದಿನದಂದೇ ಅಣ್ಣಾವ್ರ ಪಾದಕ್ಕೆ ನನ್ನಿಂದ ಅಕ್ಷರಗಳ ಬಿಲ್ಪತ್ರೆಯ ಅಭಿಷೇಕ…ನಿಮ್ಮ ಹಾರೈಕೆ…ಪ್ರೀತಿ ಈ ಪುಸ್ತಕದ ಮೇಲಿರಲಿ…
ನನ್ನ ಹತ್ತು ಬೆರಳು…ನಿಮ್ಮ ಕರುಳನ್ನು ಅಕ್ಷರಗಳಿಂದ ತಂಪಾಗಿಸುತ್ತಾ ಸಾಗಲಿ… ಎಂದು ಮಹೇಶ್ ದೇವಶೆಟ್ಟಿ ಹೇಳಿಕೊಡಿದ್ದಾರೆ.
49 ವರ್ಷಗಳ ಹಿಂದೆ…ಕೆಲಸಕ್ಕಾಗಿ ಪಟ್ಟಣ ಸೇರುವ ಎಷ್ಟೋ ಯುವಕರು ಒಂದೇ ಒಂದು ಸಿನಿಮಾದಿಂದ ಬದಲಾಗಿ ಕೃಷಿಗೆ ಆದ್ಯತೆ ಕೊಡಲಾರಂಭಿಸಿದ್ರು. ಅದಕ್ಕೆ ಕಾರಣವಾಗಿದ್ದು ಡಾ.ರಾಜ್‍ಕುಮಾರ್ ನಟಿಸಿದ “ಬಂಗಾರದ ಮನುಷ್ಯ” ಚಿತ್ರ. ಕನ್ನಡ ಚಿತ್ರರಂಗವನ್ನು ಮಾತ್ರ ಅಲ್ಲ, ಕನ್ನಡಿಗರಲ್ಲಿ ಹೊಸ ಕ್ರಾಂತಿ ಮೂಡಿಸಿದ ಈ ಸಿನಿಮಾ ಕುರಿತ ಮೇಕಿಂಗ್ ಆಫ್ ಬಂಗಾರದ ಮನುಷ್ಯ' ಕೃತಿ ಬರೆದಿರುವ ಮಹೇಶ್ ದೇವಶೆಟ್ಟಿ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕಿದೆ.

ಕೆಲವೊಂದು ಸಿನಿಮಾಗಳೇ ಹಾಗೆ ಬಂಗಾರದ ಅಕ್ಷರದಲ್ಲಿ ಬರೆಯುವ ಕಥೆಗಳನ್ನು ಹೊಂದಿರುತ್ತವೆ. ಅದರಲ್ಲೂ ಡಾ ರಾಜ್‍ಕುಮಾರ್ ಚಿತ್ರಗಳ ಪಾಲು ಮೇಲ್ಪಂಕ್ತಿಯಲ್ಲಿರುತ್ತದೆ. ಆ ಸಾಲಿನಲ್ಲಿ ಹೊಳೆಯುವ ಧ್ರುವತಾರೆಯೇಬಂಗಾರದ ಮನುಷ್ಯ.’ ಆಗಿನ ಕಾಲದ ಯುವ ಸಮುದಾಯದಲ್ಲಿ ಹೊಸ ಕ್ರಾಂತಿಯನ್ನೇ ಮೂಡಿಸಿದ ಬಂಗಾರದ ಮನುಷ್ಯ ಚಿತ್ರದ ಪ್ರತಿಯೊಂದು ಘಟನೆಯೂ ವಿಸ್ಮಯ ಮೂಡಿಸುವಂಥದ್ದು.
ಹಿಂದೆಂದೂ ಕಂಡು ಕೇಳಿರದ ಮಾಹಿತಿ ಮೇಕಿಂಗ್ ಆಫ್ ಬಂಗಾರದ ಮನುಷ್ಯ' ಪುಸ್ತಕದಲ್ಲಿದೆ. ಪಬ್ಲಿಕ್ ಟಿವಿ ಮುಖ್ಯಸ್ಥರಾಗಿರುವ ಎಚ್.ಆರ್.ರಂಗನಾಥ್ ಬಿಡುಗಡೆ ಮಾಡಿ, ಕನ್ನಡ ಸಿನಿಮಾ ರಂಗದ ಪತ್ರಕರ್ತ ಮಹೇಶ್ ದೇವಶೆಟ್ಟಿ ಬರೆದಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಸಾಕಷ್ಟು ರೋಚಕ ಹಾಗೂ ವಿಶಿಷ್ಟ ಮಾಹಿತಿ ಒಳಗೊಂಡಿದೆ ಎಂದಿದ್ದಾರೆ.


ಪ್ರಸ್ತುತ ಮಹೇಶ್ ದೇವಶೆಟ್ಟಿ ಪಬ್ಲಿಕ್ ಟಿವಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 49 ವರ್ಷಗಳ ಹಿಂದೆ ತೆರೆ ಕಂಡು ಸತತ ಎರಡು ವರ್ಷ ಪ್ರದರ್ಶನ ಕಂಡ ಬಂಗಾರದ ಮನುಷ್ಯ ಚಿತ್ರದ ಕುರಿತ ಅಪರೂಪದ ಮಾಹಿತಿ ಹೆಕ್ಕಿ ತೆಗೆದು ಪುಸ್ತಕ ರೂಪದಲ್ಲಿ ಇಂದಿನ ಜನತೆಗೆ ನೀಡಿದ್ದಾರೆ.
ಅಂದ ಹಾಗೆ `ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಬೆನ್ನುಡಿ ಬರೆದು ಶುಭ ಕೋರಿದ್ದಾರೆ.
ಸಂಪಾದಕರಾದ ದಿವಾಕರ್ ಹಾಗೂ ಔಟ್‍ಪುಟ್ ಚೀಫ್ ಆನಂದ್ ಮತ್ತು ಲೇಖಕ ಮಹೇಶ್ ದೇವಶೆಟ್ಟಿ ಈ ವೇಳೆ ಇದ್ದರು.

Related Posts

error: Content is protected !!