ಕನ್ನಡ ಚಿತ್ರರಂಗದಲ್ಲಿ ರಾಮು ಅಂದ್ರೆ ವಿಭಿನ್ನವಾದ ಹೆಸರು. ನಿರ್ಮಾಪಕ ಎನ್ನುವವನು ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡಿ ಸೈಲೆಂಟ್ ಅಗಿರುವವರು ಎನ್ನುವಂತಿದ್ದ ಕಾಲದಲ್ಲಿ ನಿರ್ಮಾಪಕನಿಗೂ ಸ್ಟಾರ್ ಪಟ್ಟ ತಂದುಕೊಟ್ಟಿದ್ದ ಖ್ಯಾತಿ ನಿರ್ಮಾಪಕ ರಾಮು ಅವರದ್ದು.ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲು ಕೋಟಿಯಷ್ಟು ಬಂಡವಾಳ ಸುರಿದು ಸಿನಿಮಾ ನಿರ್ಮಾಣ ಮಾಡುವ ಮೂಲಕ ಕೋಟಿ ರಾಮು ಅಂತಲೇ ಫೇಮಸ್ ಆಗಿದ್ದವರು.ಅದರ ಜತೆಗೆ ಹೆಸರಾಂತ ನಟಿ ಮಾಲಾಶ್ರೀ ಪತಿ ಎನ್ನುವ ಜನಪ್ರಿಯತೆ ಕೂಡ ಅವರಿಗಿತ್ತು. ರಾಮು ಅವರ ಕುರಿತು ಇಷ್ಟೆಲ್ಲ ಹೇಳುವುದಕ್ಕೆ ಕಾರಣ, ಇದೆಲ್ಲವೂ ಈಗ ಇತಿಹಾಸ ಸೇರಿಬಿಟ್ಟಿತಲ್ಲ ಎನ್ನುವ ವಿಷಾದದಕ್ಕಾಗಿ.
ಹೌದು ಕೋಟಿ ರಾಮು ಇನ್ನಿಲ್ಲ. ಲಾಕಪ್ ಡೆತ್, ಕಲಾಸಿಪಾಳ್ಯ ,ಚಾಮುಂಡಿ, ದುರ್ಗಿ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕ ಕೋಟಿರಾಮು ವಿಧಿವಶರಾಗಿದ್ದಾರೆ. ಕೊರೋನಾ ಎಂಬ ಮಹಾಮಾರಿ ಒಬ್ಬ ಸೌಮ್ಯ ಸ್ವಭಾವದ ನಿರ್ಮಾಪಕನನ್ನು ಸದ್ದಿಲ್ಲದೆ ಬಲಿ ಪಡೆದಿದೆ. ಇಡೀ ಕನ್ನಡ ಚಿತ್ರರಂಗಕ್ಕೆ ಈ ಸುದ್ದಿ ಶಾಕ್ ನೀಡಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ರಾಮು ಅವರನ್ನು ಕಳೆದುಕೊಂಡ ಕನ್ನಡ ಚಿತ್ರ ರಂಗ ನಿಜಕ್ಕೂ ಬಡವಾಗಿದೆ.
ಕುಟುಂಬದ ಯಜಮಾನ, ಅಧಾರ ಸ್ಥಂಭ, ಮಾಲಾಶ್ರೀ ಅವರ ಪತಿ, ಎರಡು ಮಕ್ಕಳ ತಂದೆ, ಅದೆಷ್ಟೋ ಜನರಿಗೆ ಬೇಕಾದ ಜನಾನುರಾಗಿ, ನೂರಾರು ಸಿನಿಮಾಗಳ ವಿತರಕ ರಾಮು ಇನ್ನಿಲ್ಲ ಎನ್ನವುದು ಅತೀವ ನೋವಿನ ಸಂಗತಿ. ಹುಟ್ಟು ಆಕಸ್ಮಿಕದಂತೆಯೇ ಸಾವು ಖಚಿತವೇ ಆಗಿದ್ದರೂ, ವಿಧಿ ಇಷ್ಟು ಕ್ರೂರಿಯಾಗ ಬಾರದಿತ್ತು. ಅವರ ಕುಟುಂಬದ ಆಕ್ರಂದನವನ್ನು ಅದೇಗೆ ಸಮಾಧಾನಸುತ್ತೀಯಾ ನೀನು? ಎಲ್ಲವೂ ವಿಧಿಯಾಟ.
ಸ್ಟಾರ್ ಇಮೇಜ್ ನಿರ್ಮಾಪಕ
ಕನ್ನಡ ಚಿತ್ರರಂಗದಲ್ಲಿ ರಾಮು ಅಂದಾಕ್ಷಣ ನೆನಪಾಗುವ ಹೆಸರೇ ಕೋಟಿ ರಾಮು . ನಿರ್ಮಾಪಕನಾಗಿ ಸ್ಟಾರ್ ಇಮೇಜ್ ಹೊಂದಿದ್ದ ರಾಮು, ಒಂಥರ ಅದೃಷ್ಟವಂತರು. ಇನ್ನೊಂದು ಬಗೆಯಲ್ಲಿ ದುರಾದೃಷ್ಟರು. ಕಾರಣ ಅವರು ಸಕ್ಸಸ್ ಪಡೆದಷ್ಟೇ ಸೋಲು ಕಂಡವರು.ಅದು ಸಿನಿಮಾ ಜತೆಗೆ ನಿಜ ಜೀವನದಲ್ಲೂ ಕೂಡ. ಒಂದು ಕಾಲಕ್ಕೆ ಕೋಟಿ ರಾಮು ಎಂದೆನಿಸಿಕೊಂಡವರು, ಇತ್ತೀಚಿನ ಕೆಲ ವರ್ಷಗಳಲ್ಲಿ ತೀವ್ರ ಹಣಕಾಸಿನ ಸಮಸ್ಯೆಗೂ ಸಿಲುಕಿದ್ದರು ಎನ್ನುವುದು ಚಿತ್ರರಂಗಕ್ಕೂ ಗೊತ್ತು. ಆ ಕಷ್ಟದ ದಿನಗಳಲ್ಲೆ ಪತ್ನಿ ಮಾಲಾಶ್ರೀ ಅವರಿಗಾಗಿಯೇ ಚಾಮುಂಡಿ, ದುರ್ಗಿ ಸಿನಿಮಾಗಳನ್ನು ನಿರ್ಮಿಸಿ, ಮತ್ತೆ ಗೆಲ್ಲುವ ಸಾಹಸ ಮಾಡಿದರು.ಆದರೂ ಅದೃಷ್ಟ ಅವರ ಕೈ ಹಿಡಿಯಲಿಲ್ಲ ಎನ್ನುವುದು ಸಾಕಷ್ಟು ಚರ್ಚೆ ಆಯಿತು.
ಸಿನಿಮಾ ರಂಗ ಅವರನ್ನು ಕೈ ಬಿಟ್ಟಿತು.ಆದರೆ ರಾಮು ಮಾತ್ರ ಸಿನಿಮಾ ರಂಗವನ್ನು ಕೈ ಬಿಡಲಿಲ್ಲ. ಪಡೆದಿದ್ದು ಇಲ್ಲಿಯೇ, ಕಳೆದುಕೊಂಡಿದ್ಷು ಇಲ್ಲಿಯೇ, ಏನೇ ಆದರೂ ಇಲ್ಲಿಯೇ ಇರಬೇಕೆಂದು ಸಿನಿಮಾ ನಿರ್ಮಾಣದ ಸಾಹಸ ಮಾಡುತ್ತಲೇ ಬಂದರು. ಸಿನಿಮಾರಂಗವೇ ಹಾಗೆ. ಒಮ್ಮೆಇಲ್ಲಿಗೆ ಬಂದವರನ್ನು ಅದು ಅಷ್ಟು ಸುಲಭವಾಗಿ ಹೊರ ದೂಡುವುದಿಲ್ಲ. ಬಿಟ್ಟರೂ ಬಿಡದೀಮಾಯೆ ಎನ್ನು ಹಾಗೆ ಅದೊಂದು ಸೆಳೆತ. ರಾಮು ಅದೇ ಕಾರಣಕ್ಕೆ ಕಷ್ಟದ ದಿನಗಳಲ್ಲೂ ಇಲ್ಲಿಯೇ ಇದ್ದರು. ಇತ್ತೀಚೆಗೆ ಸಾಲು ಸಾಲು ಸಿನಿಮಾಗಳಲ್ಲಿ ಸೋತರೂ, ಮತ್ತೆ ಗೆಲ್ಲುವ ಹುಚ್ಚಿನಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದಲ್ಲಿ ಅರ್ಜುನ್ ಗೌಡ ಚಿತ್ರ ನಿರ್ಮಾಣ ಮಾಡಿದ್ದರು. ಸದ್ಯಕ್ಕೆ ಅದೇ ಚಿತ್ರದ ರಿಲೀಸ್ ಒತ್ತಡದಲ್ಲಿದ್ದರು. ಕೊರೋನಾ ಹೆಚ್ಚಳ ಆಗದಿದ್ದರೆ ಅರ್ಜುನ್ ಗೌಡ ಇಷ್ಟರಲ್ಲಿಯೇ ತೆರೆಗೆ ಬರಬೇಕಿತ್ತು. ದುರಂತ ಅಂದ್ರೆ ಅದು ತೆರೆ ಕಾಣುವ ಮುನ್ನವೇ ನಿರ್ಮಾಪಕ ಕೋಟಿ ರಾಮು ಕಣ್ಮರೆ ಆಗಿಬಿಟ್ಟರು. ಕ್ರೂರ ವಿಧಿ ಅವರನ್ನು ಬಲಿ ಪಡೆಯಿತು ಅನ್ನೋದು ಅತ್ಯಂತ ನೋವಿನ ಸಂಗತಿ.
ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ನಿರ್ಮಾಪಕರೆಂದೇ ರಾಮು ಗುರುತಿಸಿಕೊಂಡಿದ್ದರು.
ಸಿನಿಮಾನೇ ನನ್ನುಸಿರು ಎಂದು ಬದುಕಿದ್ದ ರಾಮು ಅವರು, ಸಿನಿಮಾ ನಿರ್ಮಾಣ ವಿಷಯದಲ್ಲಿ ಎಂದಿಗೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಭರ್ಜರಿಯಾಗಿಯೇ ಸಿನಿಮಾ ನಿರ್ಮಾಣ ಮಾಡುವ ಮೂಲಕ ಕನ್ನಡಿಗರಿಗೆ ಭರಪೂರ ಸಿನಿಮಾ ಕಟ್ಟಿಕೊಟ್ಟಿದ್ದರು. ಸಿನಿಮಾ ಅಂದರೆ ಪ್ಯಾಷನ್ ಅಂದುಕೊಂಡಿದ್ದ ಅವರು, ರಿಸ್ಕ್ ಇದ್ದರೂ ಕೂಡ ತಮ್ಮ ಬ್ಯಾನರ್‌ನಲ್ಲಿ ಸುಮಾರು 30 ಸಿನಿಮಾ ನಿರ್ಮಿಸಿದ್ದು ನಿಜಕ್ಕೂ ಹೆಗ್ಗಳಿಕೆಯೇ ಸರಿ.
ಆ ಕಾಲದಲ್ಲೇ ಕೋಟಿ ಹಣ ಸುರಿದು ಸಿನಿಮಾ ನಿರ್ಮಿಸಿದ ಕೀರ್ತಿ ಅವರದು. ಲಾಕಪ್ ಡೆತ್ ಕನ್ನಡದಲ್ಲಿ ಅಚ್ಚಳಿಯದ ಸಿನಿಮಾ. ಎಕೆ 47 ಚಿತ್ರ ಮರೆಯದ ಚಿತ್ರವಾಗಿಯೇ ಉಳಿದಿದೆ. ಅನೇಕ ಹೊಸ ನಿರ್ದೇಶಕರನ್ನು ಕನ್ನಡಕ್ಕೆ ಪರಿಚಯಿಸಿದ್ದಲ್ಲದೆ, ಕಮರ್ಷಿಯಲ್ ಸಿನಿಮಾಗಳೆಂದರೆ ರಾಮು ಅವರು ನೆನಪಾಗುತ್ತಿದ್ದರು. ಯಾವುದೇ ಸಿನಿಮಾ ಮಾಡಿದರೂ, ಎಲ್ಲೂ ತೊಂದರೆ ಇಲ್ಲದೆ, ಯಾವುದಕ್ಕೂ ಕೊರತೆ ಇಲ್ಲದಂತೆ ನಿರ್ಮಾಣ ಮಾಡಿ, ತೆರೆ ಮೇಲೆ ಅದ್ಧೂರಿಯಾಗಿಯೇ ತಂದಂತಹ ಕನಸುಗಾರ. ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದ ಸೇವೆ ಸಲ್ಲಿಸಿದ್ದ ರಾಮು, ಇತ್ತೀಚೆಗೆ ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ನಿರ್ಮಿಸಿದ್ದರು. ಅದರ ರಿಲೀಸ್‌ಗೆ ತಯಾರಿ ನಡೆಸಿದ್ದರು ರಾಮು.
ಮೃದು ವ್ಯಕ್ತಿತ್ವ
ರಾಮು ತುಂಬಾ ಮೃದು ಸ್ವಭಾವದ ವ್ಯಕ್ತಿ. ಮಾತು ಕೂಡ ಹಾಗಯೇ ಇತ್ತು. ಸಿನಿಮಾ ಬಿಟ್ಟು ಬೇರೇನೂ ಗೊತ್ತಿರದ ರಾಮು, ಸದಾ ಸಿನಿಮಾ ಜಪ ಮಾಡುತ್ತಿದ್ದರು. ಅವರು ಸಾಕಷ್ಟು ಮಂದಿಗೆ ಗೊತ್ತಾಗದಂತೆಯೇ ಹಣ ಕಾಸಿನ ಸಹಾಯ ಮಾಡಿದವರು. ಪುನೀತ್ ಅಭಿನಯದ ರಾಜಕುಮಾರ ಚಿತ್ರದ ಟೈಟಲ್ ಇವರ ಬ್ಯಾನರ್‌ನಲ್ಲಿತ್ತು. ಅಪ್ಪು ಸಿನಿಮಾ ಮಾಡ್ತಾರೆ ಅಂದಾಕ್ಷಣ ಆ ರಾಜಕುಮಾರ ಟೈಟಲ್ ಬಿಟ್ಟುಕೊಟ್ಟು ಉದಾರತೆ ಮೆರೆದಿದ್ದರು.
ಅವರ ಮನಸ್ಸಲ್ಲಿ ಕಲ್ಮಷ ಇರಲಿಲ್ಲ. ಸಿನಿಮಾ ಸೋತರೂ, ಅದೇ ಮುಗಳ್ನಗುತ್ತಿದ್ದರು. ಕೆಲ ಸಂದರ್ಭದಲ್ಲಿ ಹಣದ ಮುಗ್ಗಟ್ಟು ಎದುರಿಸಿದ್ದರೂ, ಮತ್ತೆಲ್ಲಿಂದಲೋ ಹಣ ಹಾಕಿ ದೊಡ್ಡ ಮಟ್ಟದಲ್ಲೇ ಸಿನಿಮಾ ನಿರ್ಮಿಸಿದ್ದವರು ರಾಮು. ವಿಶೇಷವಾಗಿ, ಮಹಿಳಾ ಪ್ರಧಾನ ಸಿನಿಮಾ ಮಾಡಿದರೂ, ಅವುಗಳಿಗೆ ಕಮರ್ಷಿಯಲ್ ಟಚ್ ಕೊಟ್ಟ ಮೊದಲ ನಿರ್ಮಾಪಕರೆಂಬುದು ವಿಶೇಷ. ಆ ಮೂಲಕ ಇಂಡಸ್ಟ್ರಿಯ ದಿಕ್ಕು ಬದಲಿಸಿದ ಮಾತಿಗೂ ರಾಮು ಕಾರಣರಾದರು.
ರಾಮು ಕೊಟ್ಟ ಮರೆಯದ ಸಿನಿಮಾಗಳು
ಗೋಲಿಬಾರ್ ಸಿನಿಮಾದಿಂದ ಹಿಡಿದು ಈಗ ಬಿಡುಗಡೆಗೆ ಸಜ್ಜಾಗಿರುವ ಅರ್ಜುನ್ ಗೌಡ ಚಿತ್ರದವರೆಗೂ ರಾಮು ಸಿನಿಮಾಗಳಿಗೆ ಎಲ್ಲೂ ಕೊರತೆ ಕಾಣದಂತೆ ನಿಭಾಯಿಸುತ್ತಿದ್ದರು. ಮಾನಸಿಕವಾಗಿ ಗಟ್ಟಿಯಾಗಿಯೇ ಇದ್ದ ರಾಮು, ಸದಾ ಕೋಟಿ ಹಣ ಖರ್ಚು ಮಾಡಿಯೇ ಸಿನಿಮಾ ನಿರ್ಮಿಸಿ, ಚಿತ್ರರಸಿಕರಿಗೆ ಮನರಂಜನೆಯನ್ನುಉಣಬಡಿಸುತ್ತಿದ್ದರು. ಲಾಕಪ್ ಡೆತ್, ಎ.ಕೆ-47 , ಮಲ್ಲ, ಗೂಳಿ ಶಕ್ತಿ, ಗುಲಾಮ, ತವರಿನ ಸಿರಿ, ಆಟೋ ಶಂಕರ್, ಸಿಂಹದ ಮರಿ, ರಾಕ್ಷಸ, ಕಲಾಸಿಪಾಳ್ಯ, ಸಿಬಿಐ ದುರ್ಗಾ, ನಂಜುಂಡಿ, ದುರ್ಗಿ, 99, ಸೇರಿದಂತೆ ಹಲವು ಕಮರ್ಷಿಯಲ್ ಸಿನಿಮಾ ಕೊಟ್ಟಿದ್ದಾರೆ. ಇನ್ನೂ ಹಲವು ಸಿನಿಮಾ ಕೊಡುವ ಉತ್ಸಾಹದಲ್ಲಿದ್ದ ರಾಮು ಈಗ ಇನ್ನಿಲ್ಲವೆಂಬುದೇ ಚಿತ್ರರಂಗದ ನೋವು.