ಈಗ ಸಿನಿಮಾ ಪ್ರಚಾರದ ಪರ್ವ. ಹೌದು, ಲಾಕ್ಡೌನ್ ಬಳಿಕ ಚಿತ್ರರಂಗ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಸಿನಿಮಾ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಶೇ.100ರಷ್ಟು ಭರ್ತಿಗೆ ಅವಕಾಶ ಸಿಗುವ ನಿರೀಕ್ಷೆಯಲ್ಲಿ ಚಿತ್ರರಂಗವಿದೆ. ಹಾಗಾಗಿ, ಸದ್ಯ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳು ಈಗಿನಿಂದಲೇ ಬಿಡುಗಡೆಯ ಕೆಲಸವನ್ನು ಶುರುವಿಟ್ಟುಕೊಂಡಿವೆ. ಎರಡನೇ ಅಲೆ ನಂತರದಲ್ಲಿ ಸಿನಿಮಾಗಳು ಪ್ರಚಾರಕ್ಕೆ ಇಳಿದಿವೆ. ಆ ಸಾಲಿಗೆ ಈಗ “ಶಂಭೋ ಶಂಕರ” ಸಿನಿಮಾ ಕೂಡ ಸೇರಿದೆ.
ಅಘನ್ಯ ಪಿಕ್ಚರ್ಸ್ ಬ್ಯಾನರ್ನಲ್ಲಿ ವರ್ತೂರ್ ಮಂಜು ನಿರ್ಮಿಸುತ್ತಿರುವ ‘ಶಂಭೋ ಶಿವ ಶಂಕರ’ ಚಿತ್ರದ ನಾಯಕರಲೊಬ್ಬರಾದ ಅಭಯ್ ಪುನೀತ್ ಅವರ ಹುಟ್ಟುಹಬ್ಬದಂದು ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಆನಂದ್ ಆಡಿಯೋ ಮೂಲಕ ಹೊರಬಂದಿರುವ ಟೀಸರ್ಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಆಗಸ್ಟ್ 3 ರಿಂದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಶಂಕರ್ ಕೋನಮಾನಹಳ್ಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಗೌಸ್ಫೀರ್ ಸಾಹಿತ್ಯವಿದೆ.
ಹಿತನ್ ಹಾಸನ್ ಸಂಗೀತ ನೀಡುತ್ತಿದ್ದಾರೆ. ನಟರಾಜ್ ಮುದ್ದಾಲ ಛಾಯಾಗ್ರಹಣ ಮಾಡಿದರೆ, ಕಲೈ ನೃತ್ಯ ನಿರ್ದೇಶನವಿದೆ. ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ವೆಂಕಟೇಶ್ ಯುಡಿವಿ ಅವರ ಸಂಕಲನ ಚಿತ್ರಕ್ಕಿದೆ. ‘ಶಂಭೋ ಶಿವ ಶಂಕರ’ ಮೂವರು ಹೀರೋಗಳ ಹೆಸರು. ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ. ಸುಪ್ರಿಂ ಹೀರೋ ಶಶಿಕುಮಾರ್, ಸೋನಾಲ್ ಮಾಂಟೆರೊ, ಜೊಗಿ ನಾಗರಾಜ್, ಪ್ರದೀಪ್ ತಿಪಟೂರು, ಆಶಾ ಸುಜಯ್, ಪ್ರೇಮ, ರೋಹಿಣಿ, ಸಂಗಮೇಶ್’, ಡಿ.ಸಿ.ತಮ್ಮಣ್ಣ ನಟಿಸಿದ್ದಾರೆ.
ಸಾರಿಗೆ ಕ್ಷೇತ್ರ, ಪತ್ರಿಕೋದ್ಯಮ, ಮಾಧ್ಯಮ ಹಾಗು ಹಲವು ವಿಭಾಗಗಳಲ್ಲಿ ಖ್ಯಾತಿ ಪಡೆದಿರುವ ಪ್ರತಿಷ್ಠಿತ ವಿ.ಆರ್.ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗು ಪ್ರೊಮೋಟರ್ ಡಾ. ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ಅವರು ಇದೀಗ ವಿ.ಆರ್.ಎಲ್. ಮೀಡಿಯಾ ಸಂಸ್ಥೆ ಅಡಿಯಲ್ಲಿ “ವಿಆರ್ ಎಲ್” ಫಿಲಂ ಪ್ರೊಡಕ್ಷನ್ಸ್” ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಕನ್ನಡ ಸಿನಿಮಾ ಪದ್ಮಶ್ರೀ ಡಾ.ವಿಜಯ ಸಂಕೇಶ್ವರರ ಜೀವನಾಧಾರಿತ ಚಿತ್ರವಾಗುತ್ತಿದೆ. 1976ರಲ್ಲಿ ಒಂದು ಟ್ರಕ್ನಿಂದ ಶುರುವಾಗಿ, ಇಂದು ಭಾರತದ ಅತಿದೊಡ್ಡ ಫ್ಲೀಟ್ ಮಾಲೀಕರಾಗಿ, ಪತ್ರಿಕೆ ಹಾಗು ಮಾಧ್ಯಮ ರಂಗದಲ್ಲಿ ಸಾಧನೆ ಮಾಡಿರುವ ಡಾ.ವಿಜಯ ಸಂಕೇಶ್ವರ ಅವರ ರೋಚಕ ಕಥೆ ಇರುವಂತಹ ಬಯೋಪಿಕ್ ಈಗ ಶುರುವಾಗುತ್ತಿದೆ.
ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಆನಂದ ಸಂಕೇಶ್ವರ ಅವರು ನಿರ್ಮಿಸುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡಿದ್ದು, ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಈ ಚಿತ್ರಕ್ಕೆ “ವಿಜಯಾನಂದ” ಎಂಬ ಶೀರ್ಷಿಕೆ ಇಡಲಾಗಿದ್ದು, ರಿಷಿಕಾ ಶರ್ಮಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಸತತವಾಗಿ ೮ ವರ್ಷಗಳಿಂದ ಸಹಾಯಕ ನಿರ್ದೇಶಕಿಯಾಗಿ, ಸಿನೆಮಾ ಹಾಗು ಸೀರಿಯಲ್ ನಟನೆ, ಕಲಾ ವಿನ್ಯಾಸ, ವಸ್ತ್ರ ವಿನ್ಯಾಸ ಹೀಗೆ ಹಲವಾರು ವಿಭಾಗಗಳಲ್ಲಿ ಅನುಭವ ಹೊಂದಿರುವ ರಿಷಿಕಾ ಕನ್ನಡ ಚಿತ್ರ ರಂಗದ ಭೀಷ್ಮ ಎಂದೇ ಹೆಸರಾದ ಜೆ. ವಿ. ಅಯ್ಯರ್ ಅವರ ಸಂಬಂಧಿ.
ಈ ಹಿಂದೆ “ಟ್ರಂಕ್” ಎಂಬ ಕನ್ನಡದ ಹಾರರ್ ಚಿತ್ರ ನಿರ್ದೇಶಿಸಿದ್ದರು ರಿಷಿಕಾ ಶರ್ಮ. ಆ ಸಿನಿಮಾದಲ್ಲಿ ನಟಿಸಿದ್ದ ಹೀರೋ ನಿಹಾಲ್ ಕೂಡ “ವಿಜಾಯಾನಂದ” ಚಿತ್ರದ ಹೈಲೈಟ್. ಇಲ್ಲಿ ಅವರು, ಡಾ.ವಿಜಯ ಸಂಕೇಶ್ವರ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ. ನಿಹಾಲ್ ರಂಗಭೂಮಿ ಹಿನ್ನಲೆಯಿಂದ ಬಂದವರು. ಭಾರತಿ ಮತ್ತು ಗಂಗಾ ಧಾರಾವಾಹಿಗಳಲ್ಲೂ ನಟಿಸಿದ್ದ ಅವರು, “ಚೌಕ” ಮತ್ತು “ಟ್ರಂಕ್” ಚಿತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್ 2ರಂದು ಡಾ.ವಿಜಯ ಸಂಕೇಶ್ವರ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ, “ವಿಜಯಾನಂದ” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.
ಚಿತ್ರತಂಡ ಎರಡು ವರ್ಷಗಳಿಂದ ಸತತವಾಗಿ ಈ ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ತೆಲುಗು ಮತ್ತು ಮಲಯಾಳಂ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ “ವಿಜಯಾನಂದ” ಚಿತ್ರಕ್ಕೆ ಹಿನ್ನಲೆ ಸಂಗೀತ ಮತ್ತು ಸಂಗೀತ ನಿರ್ದೇಶಕರಾಗಿ ಕೈ ಜೋಡಿಸಿದ್ದಾರೆ. ಈ ಚಿತ್ರ ತಂಡಕ್ಕೆ ಬಹಳಷ್ಟು ದೊಡ್ಡ ನಟ, ನಟಿಯರು ಹಾಗು ತಂತ್ರಜ್ಞರು ಕಾಣಿಸಿಕೊಳ್ಳಲಿದ್ದಾರೆ. ಅವರ ಆಯ್ಕೆ ಇಷ್ಟರಲ್ಲೇ ನಡೆಯಲಿದ್ದು, ಶೀಘ್ರವೇ ಶೂಟಿಂಗ್ ಕುರಿತಂತೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.
ಸೊಂಟ ಸೂಪರ್ ಆದರೆ ಬಾರಿ ಡೇಂಜರ್ರು ಅಂತ ಗೊತ್ತು ಆದರೆ ಕಣ್ಣುಗಳು ಮಾತು ಕೇಳಲ್ಲ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಅಂತ ಗೊತ್ತು ಆದರೆ ಸಣ್ಣಕರುಳು ಮಾತು ಕೇಳಲ್ಲ. ಹೀಗಿರುವಾಗ ಜಿರೋ ಸೈಜ್ ಸೊಂಟ ಕುಣಿಸಿಕೊಂಡು, ಕಣ್ಣುಕುಕ್ಕೋ ಹೊಕ್ಕಳ ತೋರಿಸಿಕೊಂಡು ಕೈಯಲ್ಲಿ ರಾಮರಸ ಹಾಗೂ ಚಿಲ್ಡ್ ಬಿಯರ್ ಇಡ್ಕೊಂಡು ಗಡಂಗ್ ರಕ್ಕಮ್ಮ ಗ್ರ್ಯಾಂಡ್ ಎಂಟ್ರಿಕೊಟ್ಟರೆ ಏನ್ಗಾಬೇಡ ನೀವೇ ಹೇಳಿ.
ಗಡಂಗ್ ರಕ್ಕಮ್ಮ ಗಂಧದಗುಡಿಗೆ ಮೊದಲ ಬಾರಿಗೆ ಬಲಗಾಲಿಟ್ಟು ಬಂದಿರುವ ಬಿಟೌನ್ ಬಾಲೆ. ಹೆಸರು ಜಾಕ್ವೆಲಿನ್ ಫರ್ನಾಂಡೀಸ್, ಮೂಲತಃ ಶ್ರೀಲಂಕಾದ ಸುಂದರಿ. ಅಲ್ಲಿಂದ ಮುಂಬೈಗೆ ಜಿಗಿದು ಬಾಲಿವುಡ್ ಅಂಗಳದಲ್ಲಿ ಸ್ಟಾರ್ ನಟರ ಜೊತೆ ಡ್ಯುಯೆಟ್ ಹಾಡಿಕೊಂಡು ಮೆರೆಯುತ್ತಿದ್ದಾರೆ. ಫಾರ್ ದಿ ಫಸ್ಟ್ ಟೈಮ್ ಚಂದನವನಕ್ಕೆ ಕಾಲಿಟ್ಟಿದ್ದು ಗಡಂಗ್ ರಕ್ಕಮ್ಮನಾಗಿ ವಿಕ್ರಾಂತ್ ರೋಣ ಅಲಿಯಾಸ್ ಕಿಚ್ಚನ ಜೊತೆ ಕಿಕ್ಕೇರಿಸುತ್ತಿದ್ದಾರೆ.
ಬಿಟೌನ್ ಹಾಟ್ ಬ್ಯೂಟಿ ಜಾಕ್ವೆಲಿನ್ ತಮ್ಮ ಮೊದಲ ನೋಟದಲ್ಲೇ ನೋಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ. ನಿರ್ದೇಶಕ ಅನುಪ್ ಭಂಡಾರಿಯವರ ಪತ್ನಿ ಡಿಸೈನ್ ಮಾಡಿದ ಕಾಸ್ಟ್ಯೂಮ್ ತೊಟ್ಟುಕೊಂಡು ವಿಕ್ರಾಂತ್ ರೋಣನ ಅಖಾಡಕ್ಕೆ ಎಂಟ್ರಿಕೊಟ್ಟ ಜಾಕ್ವೆಲಿನ್, ಕೈಯಲ್ಲಿ ರಾಮರಸ ಹಾಗೂ ಚಿಲ್ಡ್ ಬಿಯರ್ ಹಿಡ್ಕೊಂಡು ಬಾದ್ ಷಾ ಜೊತೆ ಬೊಂಬಾಟ್ ಫೋಸ್ ಕೊಟ್ಟಿದ್ದಾರೆ. ಅದೇ ಅವತಾರವನ್ನ ಚಿತ್ರತಂಡ ಇಂದು ಮುಂಬೈನ ಚಿತ್ರಕೂಟ ಗ್ರೌಂಡ್ಸ್ ನಲ್ಲಿ ರಿಲೀಸ್ ಮಾಡಿದೆ.
ಜಾಕ್ವೆಲಿನ್ ಫಸ್ಟ್ ಲುಕ್ ಲಾಂಚ್ ಗೆ 20 ಕೋಟಿ ಸುರಿದರಲ್ಲ ಗುರು !
ಅಚ್ಚರಿ ಅಂದರೆ ನಿರ್ಮಾಪಕ ಜಾಕ್ ಮಂಜು ಭರ್ತಿ 20 ಲಕ್ಷ ಖರ್ಚು ಮಾಡಿ ಗಡಂಗ್ ರಕ್ಕಮ್ಮನ ಫಸ್ಟ್ ಲುಕ್ ಹಾಗೂ ಪಾತ್ರ ಪರಿಚಯ ಮಾಡಿಕೊಟ್ಟಿದ್ದಾರೆ. ಜಾಕ್ ಮಂಜು ಅವರ ಸಿನಿಮಾ ಪ್ರೀತಿಯನ್ನ ಹಾಗೂ ಮನೆಮಗಳಂತೆ ನೋಡಿಕೊಂಡ ರೀತಿಯನ್ನು ಕಂಡ ಬೆರಗಾಗಿರುವ ಜಾಕ್ವೆಲಿನ್, ನಿಮ್ಮ ಬ್ಯಾನರ್ ನಲ್ಲಿ ಕೆಲಸ ಮಾಡೋದಕ್ಕೆ ಸದಾ ಸಿದ್ದ ಎನ್ನುವ ಮಾತುಗಳನ್ನಾಡಿದ್ದಾರಂತೆ. ಈಖುಷಿಯನ್ನು ನಿರ್ಮಾಪಕ ಜಾಕ್ ಮಂಜು ಅವರು ಸಿನಿಲಹರಿ ಜೊತೆ ಹಂಚಿಕೊಂಡಿದ್ದಾರೆ.
ಗಡಂಗ್ ರಕ್ಕಮ್ಮನ ಹಾಡಿಗೆ 6 ಕೋಟಿ ಖರ್ಚು !
ಗಡಂಗ್ ರಕ್ಕಮ್ಮನ ಹಾಡಿಗೆ ನಿರ್ಮಾಪಕ ಜಾಕ್ ಮಂಜು ಒಂದಲ್ಲ ಎರಡಲ್ಲ ಭರ್ತಿ ಆರು ಕೋಟಿ ಸುರಿದಿದ್ದಾರೆ. ಮೋಹನ್ ಬಿ ಕೆರೆಯಲ್ಲಿ ಅದ್ದೂರಿ ಸೆಟ್ ಹಾಕಿಸಿ ಬಿಟೌನ್ ಬಾಲೆಗೆ ರೆಡ್ ಕಾರ್ಪೆಟ್ ಹಾಕಿದರು. ವಿಕ್ರಾಂತ್ ರೋಣನ ಜೊತೆಗೆ ಲೆಗ್ ಶೇಕ್ ಮಾಡೋದಕ್ಕೆ ಅಂತ ಫ್ಲೈಟ್ ಏರಿ ಬಂದ ಜಾಕ್ವೆಲಿನ್, ಕಿಚ್ಚನ ಜೊತೆಯಾಗಿ ವಿಶೇಷ ಪಾತ್ರ ಕೂಡ ಮಾಡಿದ್ದಾರೆ. ಗೌರಿ ಗಣೇಶ ಹಬ್ಬದ ನಂತರ ಜಾಕ್ವೆಲಿನ್ ಮತ್ತೆ ಬೆಂಗಳೂರಿಗೆ ಬಂದು ಡಬ್ಬಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಊರಲ್ಲೆಲ್ಲಾ ಒಂದು ಹೆಸರು ಕೇಳಿಬರ್ತಿದೆ ಅದುವೇ ವಿಕ್ರಾಂತ್ ರೋಣ ಅಂತ ಜಾಕ್ವೆಲಿನ್ ಭವಿಷ್ಯ ನುಡಿದಿದ್ದರು. ಕೊನೆಗೂ ಶ್ರೀಲಂಕಾ ಸುಂದರಿಯ ಭವಿಷ್ಯ ನಿಜವಾಗಿದೆ. ವಿಕ್ರಾಂತ್ ರೋಣನಿಗಾಗಿ ಇಂಡಿಯನ್ ಸಿನಿಮಾ ಇಂಡಸ್ಟ್ರಿಯೇ ಎದುರುನೋಡ್ತಿದೆ. ಗಡಂಗ್ ರಕ್ಕಮ್ಮ ಹಾಗೂ ವಿಕ್ರಾಂತ್ ರೋಣನ ಕೆಮಿಸ್ಟ್ರಿ ನೋಡಿದ್ಮೇಲೆ ಕಾತುರತೆ ಹೆಚ್ಚಾಗ್ತಿದೆ. ಅನುಪ್ ನಿರ್ದೇಶನ ಚಿತ್ರಕ್ಕಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗ್ತಿದೆ. ಗುಮ್ಮ ಬಂದ ಗುಮ್ಮ ಗುಮ್ಮ ಎಂತಿದ್ದವರು ಈಗ ಗಡಂಗ್ ರಕ್ಕಮ್ಮ ಬಂದ್ಳು ಗಡಂಗ್ ರಕ್ಕಮ್ಮ ಬಂದ್ಳು ಅಂತ ಕುಣಿದಾಡುತ್ತಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಕುಟುಂಬದೊಂದಿಗೆ ತಮಿಳುನಾಡಿನ ಗಾಜನೂರಿಗೆ ಭೇಟಿ ನೀಡಿ ರಿಲ್ಯಾಕ್ಸ್ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆಯೇ ಶಿವಣ್ಣ ಹಾಗೂ ಅಪ್ಪು ಗಾಜನೂರಿನ ಮನೆಗೆ ಭೇಟಿ ಮಾಡಿ, ಅಣ್ಣಾವ್ರು ಧ್ಯಾನ ಮಾಡುತ್ತಿದ್ದ ಸ್ಥಳ, ತೋಟದಲ್ಲಿ ಸುತ್ತಾಡಿದ್ದಾರೆ.
ಅಣ್ಣಾವ್ರು ಅಕ್ಕರೆಯಿಂದ ಕಟ್ಟಿಸಿದ ಮನೆಯಲ್ಲಿ ಇಡೀ ಕುಟುಂಬದೊಂದಿಗೆ ಕುಳಿತು ಬಾಡೂಟ ಸೇವಿಸಿದ್ದು ಬಳಿಕ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ನೆಚ್ಚಿನ ಚಿತ್ರನಟರು ಬಂದಿರುವ ವಿಚಾರ ತಿಳಿದ ಅಭಿಮಾನಿಗಳು ಅಣ್ಣಾವ್ರ ಮನೆಗೆ ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿ ಕೊಂಡು ಸಂಭ್ರಮಿಸಿದ್ದಾರೆ.
ಎ. ಹರ್ಷ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವಜ್ರಕಾಯ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟವರು ನಟಿ ನಭಾ ನಟೇಶ್. ಪಟಾಕಾ ಪಾರ್ವತಿ ಪಾತ್ರದಲ್ಲಿ ಬಿಂದಾಸ್ ಆಗಿ ನಟಿಸಿ ತಮ್ಮ ಮೊದಲ ಚಿತ್ರದಲ್ಲೇ ಕಮಾಲ್ ಮಾಡಿದ್ದವರು ನಭಾ. ವಜ್ರಕಾಯ ಚಿತ್ರದ ಗೆಲುವಿನ ನಂತರಲೀ’ ಚಿತ್ರದಲ್ಲಿ ನಾಯಕಿಯಾಗಿ, ಸಾಹೇಬ’ದಲ್ಲಿ ಅತಿಥಿ ಪಾತ್ರದಲ್ಲಿ ಈಕೆ ಕಾಣಿಸಿಕೊಂಡಿದ್ದರು.ನನ್ನು ದೋಚುಕುಂಡುವಟೆ’ ಚಿತ್ರದ ಮೂಲಕ ತೆಲುಗು ಚಿತ್ರಜಗತ್ತಿಗೆ ಎಂಟ್ರಿ ಕೊಟ್ಟಿದ್ದ ನಭಾ ಅಧುಗೋ, ಇಸ್ಮಾರ್ಟ್ ಶಂಕರ್, ಡಿಸ್ಕೋ ರಾಜ, ಅಲ್ಲುಡು ಅಧುರ್ಸ್ ಸೇರಿದಂತೆ ಒಂದರ ಹಿಂದೊಂದು ತೆಲುಗು ಚಿತ್ರಗಳಲ್ಲಿ ನಟಿಸುತ್ತಲೇ ಇದ್ದಾರೆ. ಮೆಘಾ ಸ್ಟಾರ್ ಚಿರಂಜೀವಿ ಅವರ ಸೋದರಳಿಯ ಸಾಯಿ ಧರಂ ತೇಜ್ ನಟನೆಯ ಸೋಲೋ ಬ್ರಾತುಕೆ ಸೋ ಬೆಟರ್ ಎನ್ನುವ ಸೂಪರ್ ಹಿಟ್ ಸಿನಿಮಾದಲ್ಲೂ ನಭಾ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ತೆಲುಗು ಚಿತ್ರರಂಗದ ಟಾಪ್ ನಟಿಯರಲ್ಲಿ ನಮ್ಮ ಕನ್ನಡದ ನಭಾ ನಟೇಶ್ ಕೂಡಾ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ನಭಾ ನಾಯಕಿಯಾಗಿ ನಟಿಸಿದ್ದ ಇಸ್ಮಾರ್ಟ್ ಶಂಕರ್ ಹತ್ತಿರತ್ತಿರ ನೂರು ಕೋಟಿ ಕಲೆಕ್ಷನ್ ಮಾಡಿತ್ತು. ಕೇವಲ ಎರಡೂವರೆ ವರ್ಷಗಳಲ್ಲಿ ನಭಾ ನಟೇಶ್ ನಟಿಸಿದ ತೆಲುಗು ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಬರೋಬ್ಬರಿ ಇನ್ನೂರ ಐವತ್ತು ಕೋಟಿಗೂ ಅಧಿಕ.
ಇಷ್ಟು ಕಡಿಮೆ ಅವಧಿಯೊಳಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಭಾ ಈಗ ವೆಬ್ ಸಿರೀಸ್ ಒಂದರಲ್ಲಿ ನಟಿಸುವುದರೊಂದಿಗೆ ಬಾಲಿವುಡ್ನಲ್ಲೂ ಖಾತೆ ತೆರೆಯುವ ಹಂತದಲ್ಲಿದ್ದಾರೆ. ಅದೂ ಹಿಂದಿ ಚಿತ್ರರಂಗದ ಖ್ಯಾತ ನಾಯಕನಟ ಹೃತಿಕ್ ರೋಷನ್ ಜೊತೆಗೆ. ಈಗ ಬಾಲಿವುಡ್ನ ಸ್ಟಾರ್ ನಟರು ವೆಬ್ ಸಿರೀಸ್ ಗಳಲ್ಲಿ ನಟಿಸುವ ಮೂಲಕ ಅಚ್ಛರಿ ಹುಟ್ಟುಹಾಕಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಸೈಫ್ ಅಲಿ ಖಾನ್ ಮುಂತಾದ ಜನಪ್ರಿಯ ನಟರ ವೆಬ್ ಸರಣಿಗಳು ತಯಾರಾಗಿವೆ. ಸದ್ಯ ಹೃತಿಕ್ ಕೂಡಾ ಅದೇ ಹಾದಿಯಲ್ಲಿದ್ದಾರೆ. ಜಗತ್ತಿನಾದ್ಯಂತ ಹೆಸರು ಮಾಡಿರುವ `ದಿ ನೈಟ್ ಮ್ಯಾನೇಜರ್’ ವೆಬ್ ಸರಣಿಯ ಹಿಂದಿ ಅವತರಣಿಕೆಯಲ್ಲಿ ಹೃತಿಕ್ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದು, ಅದರಲ್ಲಿ ನಭಾ ಹೃತಿಕ್ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.
ಪೂಜಾ ಹೆಗಡೆ, ರಕುಲ್ ಪ್ರೀತ್ ಸಿಂಗ್, ಪ್ರಗ್ಯಾ ಜೈಸ್ವಾಲ್, ಶಾಲಿನಿ ಪಾಂಡೆ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಸಾಕಷ್ಟು ಜನ ನಟಿಯರು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿ, ನಂತರ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ನಭಾ ನಟೇಶ್ ಕೂಡಾ ಕನ್ನಡದಿಂದ ತೆಲುಗಿಗೆ ಹೋಗಿ, ಈಗ ಅಲ್ಲಿಂದ ಹಿಂದಿ ಚಿತ್ರರಂಗಕ್ಕೆ ಅಡಿಯಿರಿಸುತ್ತಿದ್ದಾರೆ. ಅಂದ, ಚೆಂದದ ಜೊತೆಗೆ ಅಭಿನಯದಲ್ಲೂ ಪಳಗಿರುವ ನಭಾ ಹಿಂದಿ ಚಿತ್ರರಂಗದಲ್ಲಿ ಭದ್ರವಾದ ನೆಲೆ ಕಂಡುಕೊಳ್ಳುತ್ತಾರೆ ಎನ್ನುವ ಅಭಿಪ್ರಾಯ ಎಲ್ಲೆಡೆ ಮೂಡಿಬರುತ್ತಿದೆ.
ಎಣ್ಣೆ-ಹೆಣ್ಣು ಅಂದಾಕ್ಷಣ ಕಿವಿ ನೆಟ್ಟಗಾಗದಿದ್ದರೂ ಕೂಡ ರಚಿತಾ-ರಕ್ಷಿತಾ ಹೆಸರನ್ನು ಒಟ್ಟಿಗೆ ಕೇಳಿದಾಕ್ಷಣ ಕಿವಿಗಳು ಅರಳುತ್ತವೆ…ಕಣ್ಣು ಊರಗಲವಾಗುತ್ತವೆ. ಯಸ್, ಗಂಧದಗುಡಿಯ ಕ್ರೇಜಿಕ್ವೀನ್ ಹಾಗೂ ಡಿಂಪಲ್ಕ್ವೀನ್ ಹೆಸರನ್ನು ಪ್ರಸ್ತಾಪಿಸಿ ಮಾತನಾಡಿದರೆ ಸಹಜವಾಗಿ ಕೂತೂಹಲ ಹೆಚ್ಚಾಗುತ್ತೆ. ಅಂತದ್ರಲ್ಲಿ, ಎಣ್ಣೆಗೂ-ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಅಂತ ಇವರಿಬ್ಬರು ಕೇಳ್ತಿದ್ದಾರೆ ಅಂದರೆ ಕ್ಯೂರಿಯಾಸಿಟಿ ಅನ್ನೋದು ಶ್ಯಾಂಪೇನ್ ಥರ ಗಗನಕ್ಕೆ ಹಾರುತ್ತೆ ಅಪ್ಕೋರ್ಸ್ ಹಾರಲೆಬೇಕು. ಹಾರಬೇಕು ಅಂತಾನೇ ಜೋಗಿ ಪ್ರೇಮ್ ಅವರು ಪ್ಲ್ಯಾನ್ ಮಾಡಿದ್ದು ಫಿಕ್ಸ್ ಮಾಡಿದ್ದು.
ಅಷ್ಟಕ್ಕೂ, ಪ್ರೇಮ್ ಅವರು ಮಾಡಿದ ಪ್ಲ್ಯಾನ್ ಏನು? ಏನು ಫಿಕ್ಸ್ ಮಾಡಿದರು? ಎಣ್ಣೆಗೂ-ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳು ಗುರು ಅಂತ ರಕ್ಷಿತಾ ಹಾಗೂ ರಚಿತಾ ಯಾರ ಬಳಿ ಕೇಳ್ತಿದ್ದಾರೆ? ಈ ಎಲ್ಲಾ ಪ್ರಶ್ನೆಗೆ ಉತ್ತರ ನೀಡಬೇಕು ಅಂದರೆ ಏಕ್ ಲವ್ ಯಾ' ಬಗ್ಗೆ ಹೇಳಲೆಬೇಕು.ಏಕ್ ಲವ್ ಯಾ’ ಹೆಸರು ಕೇಳಿದಾಕ್ಷಣ ಹಂಡ್ರೆಂಡ್ ಪರ್ಸೆಂಟ್ ನಿರ್ದೇಶಕ ಪ್ರೇಮ್ ಕಣ್ಮುಂದೆ ಬಂದಿರುತ್ತಾರೆ. ಅಟ್ ದಿ ಸೇಮ್ ಟೈಮ್ ಬಿಯರ್ ಬಾಟಲಿ ಹಿಡಿದು ಕಿಕ್ಕೇರಿಸಿದ ರಕ್ಷಿತಾ-ರಚಿತಾರ ಪೋಟೋ ಕೂಡ ಕಣ್ಮುಂದೆ ಬಂದುಬಿಡುತ್ತೆ. ಅಸಲಿ ಕಹಾನಿ ನಾವು ಬಿಚ್ಚಿಡುವ ಮೊದಲೇ ನಿಮ್ಗೆ ಎಲ್ಲಾ ಅರ್ಥವಾಗಿರುತ್ತೆ ಎನಿವೇ ಆದರೂ ಹೇಳ್ತೀವಿ ಕೇಳಿ
ಮಧುಲೋಕಕ್ಕೂ ಹಾಗೂ ಗುಂಡಾಕೋ ಗಂಡೈಕ್ಳಿಗೂ ಅವಿನಾಭಾವ ಸಂಬಂಧವಿದೆ. ಈ ಸಂಬಂಧವನ್ನ ಕಡಿದುಹಾಕುವುದಕ್ಕೆ ಖಾಲಿಕ್ವಾಟ್ರಿಂದಲೂ ಸಾಧ್ಯವಿಲ್ಲ ಬಿಡಿ. ಹೆಣ್ಣುಮಕ್ಕಳು ತವರು ಮನೆಗೆ ಹೋಗೋದು ಬಿಡ್ಬೋದು ಆದರೆ ಸುರಪಾನಪ್ರಿಯರು ಮಾತ್ರ ತವರುಮನೆಯಂತಿರುವ ಬಾರ್ಗೆ ಹೋಗೋದನ್ನು ಮಾತ್ರ ತಡೆಯೋದಕ್ಕೆ ಆಗಲ್ಲ.
ಕರುಳು ಕೆರೆದರೆ, ತುಟಿ ಒಣಗಿದರೆ, ಪಿತ್ತ ನೆತ್ತಿಗೇರಿದರೆ, ಮನಸ್ಸು ಮಂಕಾದರೆ, ಹೃದಯಕ್ಕೆ ಗಾಯವಾದರೆ, ಲವ್ವರ್ ಕೈಕೊಟ್ಟರೆ, ವೈಫ್ ಕೂಗಾಡಿದರೆ, ಬಾಸ್ ಕಿರುಚಾಡಿದರೆ, ಬ್ಯುಸಿನೆಸ್ ಲಾಸ್ ಆದರೆ ಹೂಃ ಇದಿಷ್ಟೇ ಆದರೆ ಪರವಾಗಿಲ್ಲ ಗುರು ಹೊಸ ಲವ್ವರ್ ಸಿಕ್ಕರೆ, ಹಳೆಯ ಲವ್ವರ್ ಎದುರುಬಂದರೆ, ವೈಫ್ ತವರು ಮನೆಗೆ ಹೋದರೆ, ಮನಸ್ಸಿಗೆ ಖುಷಿಯಾಗುವ ಘಟನೆಗಳು ಘಟಿಸಿದರೆ ಮುಗೀತು `ಓಪನ್ ದಿ ಬಾಟೆಲ್’ ಅಂತ ಫೆಂಡ್ಸ್ ಜೊತೆ ಟೇಬಲ್ ಕುಟ್ಟಿಕೊಂಡು ಬೆಳಗ್ಗಿನ ಜಾವ ೩ ಗಂಟೆವರೆಗೆ ಕುಂತುಬಿಡ್ತಾರೆ. ಆದರೆ, ಹೆಣ್ಣುಮಕ್ಕಳಿಗೆ ಇದ್ಯಾವ ಸೌಭಾಗ್ಯವೂ ಇಲ್ಲ
ಮನಸ್ಸಿಗೆ ದುಃಖ ಆದಾಗ ಅಥವಾ ಖುಷಿ ಆದಾಗ ಸುರಪಾನಪ್ರಿಯರ ಥರ ನಾವು ಕೂಡ ಎಂಜಾಯ್ ಮಾಡ್ಬೇಕು ಅಂತ ಎಣ್ಣೆರುಚಿ ಹತ್ತಿರುವ ಕೆಲವು ಹೆಣ್ಣುಮಕ್ಕಳಿಗೆ ಅನಿಸುತ್ತೆ. ಹೀಗೆ ಅನಿಸಿದ್ದನ್ನ ನಾಲ್ಕು ಗೋಡೆಯ ಮಧ್ಯೆ ಮಾಡಿಬಿಡ್ತಾರೆ. ಇಷ್ಟದ ಬ್ರ್ಯಾಂಡ್ನ ಆರ್ಡರ್ ಮಾಡಿ ಚಿಪ್ಸೋ-ಉಪ್ಪಿನಕಾಯಿಯೋ ಅಥವಾ ಲೆಗ್ಪೀಸ್ ಜೊತೆಗೆ ಹೊಟ್ಟೆಗೆ ಸೇರಿಸಿಕೊಳ್ತಾರೆ. ಆದರೆ, ಗಂಡುಮಕ್ಕಳ ಥರ ಟೇಬಲ್ ಕುಟ್ಟಿಕೊಂಡು ಸಣ್ಣಕರುಳನ್ನ ತಂಪುಮಾಡಿಕೊಳ್ಳೋದಕ್ಕೆ ಆಗಲ್ಲ. ಅಷ್ಟಕ್ಕೂ, ಇವರ ಕಥೆಯನ್ನು ಕೇಳೋರು ಯಾರು ಇಲ್ಲ ಹೀಗಾಗಿಯೇ ರಚ್ಚು ಹಾಗೂ ರಕ್ಷಿತಾ ಮುಂದೆಬಂದಿದ್ದಾರೆ. `ಎಣ್ಣೆಗೆ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ’… ಬಾರಲ್ಲಿ ಹೆಣೈಕ್ಳು ಕುಡಿಯೋದು ತಪ್ಪಂತ ಯಾರಾನಾ ಬೋರ್ಡ್ ಹಾಕವ್ರಾ… ಅಯ್ಯೋ ನಮ್ಗೂನೂ ಲವ್ವಲ್ಲಿ ಬ್ರೇಕಪ್ ಆಗೈತೆ ಒಂದೊಳ್ಳೆ ಪೆಗ್ ಹಾಕ್ತೀರಾ.. ಈ ರೀತಿ ಪ್ರಶ್ನೆಮಾಡ್ತಿದ್ದಾರೆ
ರಚಿತಾ ಮತ್ತು ರಕ್ಷಿತಾ ಈ ರೀತಿ ಪ್ರಶ್ನೆ ಮಾಡ್ತಿರುವುದು ರಿಯಲ್ ನಲ್ಲಿ ಅಲ್ಲ ಬದಲಾಗಿ ರೀಲ್ ನಲ್ಲಿ . ಹೌದು, ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ಒಂದು ಎಣ್ಣೆ ಸಾಂಗ್ ಇಡಲಾಗಿದೆ. ರಕ್ಷಿತಾ- ರಚಿತಾ ಜೊತೆಗೆ ರಕ್ಷಿತಾ ಸಹೋದರ ರಾಣಾ ಕೂಡ ಬಾಟೆಲ್ ಕುಟ್ಟಿ ಕಿಕ್ಕೇರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಹಾಡು ಎಣ್ಣೆಹೊಡೆಯೋ ಹೆಣ್ಣುಮಕ್ಕಳ ಆಂಥಮ್ ಆಗಲಿದೆ.
ಕಣ್ಣೇ ಅದಿರಿಂದಿ ಅಂತ ಹಾಡಿ ಬಜಾರ್ ನಲ್ಲಿ ಸುನಾಮಿ ಎಬ್ಬಿಸಿರುವ ಸತ್ಯವತಿ ಮಂಗ್ಲಿ ಏಕ್ ಲವ್ ಯಾ ಎಣ್ಣೆ ಸಾಂಗ್ ಗೆ ಕಂಠಕುಣಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.ಇತ್ತೀಚೆಗಷ್ಟೇ ಈ ಹಾಡಿನ ಟ್ರ್ಯಾಕ್ನ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಏಕ್ ಲವ್ ಯಾ ಪ್ರೇಮ್ ನಿರ್ದೇಶನ ಮಗದೊಂದು ಪ್ರೇಮಕಥಾ ಚಿತ್ರವಾಗಿದ್ದು ಸಿನಿಪ್ರೇಕ್ಷಕರಲ್ಲಿ ಕೂತೂಹಲ ಗರಿಗೆದರಿದೆ.
ಅರವಿಂದ್-ದಿವ್ಯಾ ಇವರಿಬ್ಬರು ಕೇವಲ ಬಿಗ್ಬಾಸ್ ಸ್ಪರ್ಧಿಗಳಾಗಿ ಉಳಿದಿಲ್ಲ ಬದಲಾಗಿ ಕ್ಯೂಟ್ ಜೋಡಿಯಾಗಿ ಕರುನಾಡ ಅಂಗಳದಲ್ಲಿ ಮೆರೆಯುತ್ತಿದ್ದಾರೆ. ಲಕ್ಷಾಂತರ ಜನರು ಈ ಬೊಂಬಾಟ್ ಜೋಡಿಗೆ ಅಭಿಮಾನಿಗಳಾಗಿದ್ದಾರೆ. ರಿಯಾಲಿಟಿ ಸ್ಪರ್ಧೆಗೋಸ್ಕರ ಒಟ್ಟಾಗಿರುವ ಈ ಜೋಡಿ ರಿಯಲ್ ಲೈಫ್ನಲ್ಲೂ ಒಂದಾಗ್ಬೇಕು ಅಂತ ಇವರಿಬ್ಬರ ಫ್ಯಾನ್ಸ್ ಆಸೆಪಟ್ಟಿದ್ದಾರೆ. ಅರ್ವಿಯಾ ಅಂತ ನಾಮಕರಣ ಮಾಡಿ ಇವರಿಬ್ಬರನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಬಿಗ್ಬಾಸ್ ಫೈನಲ್ ಮುಗಿಸಿಕೊಂಡು ಹೊರಗಡೆ ಬಂದರೆ ಸಾಕು ಇವರಿಬ್ಬರಿಗೂ ಮುತ್ತಿನಹಾರ ಹಾಕಿ ಮೆರವಣಿಗೆ ಮಾಡ್ಬೇಕು ಅಂತ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಅರ್ವಿಯಾ ಲವ್ಲೈಫ್ ಸೀಕ್ರೇಟ್ ಫೋಟೋಸ್ ಬಟಾಬಯಲಾಗಿದ್ದು ಇವರಿಬ್ಬರ ಅಪ್ಪಟ ಅಭಿಮಾನಿಗಳು ಅಪ್ಸೆಟ್ ಆಗುವಂತೆ ಮಾಡಿದೆ.
ಅದೇನದು ಅರ್ವಿಯಾ ಲವ್ಲೈಫ್ ಸೀಕ್ರೇಟ್ ಅಂತೀರಾ? ಆ ಇಂಟ್ರೆಸ್ಟಿಂಗ್ ವಿಷ್ಯವನ್ನು ತಿಳಿದುಕೊಳ್ಳೋದಕ್ಕೂ ಮುನ್ನ ಅರವಿಂದ್-ದಿವ್ಯಾ ಬಗ್ಗೆ ಶಾರ್ಟ್ ಅಂಡ್ ಸ್ವೀಟಾಗಿ ತಿಳಿದುಕೊಳ್ಳೋಣ. ನಟಿ ದಿವ್ಯಾ ಉರುಡುಗ ಹಾಗೂ ಬೈಕ್ ರೈಡರ್ ಅರವಿಂದ್ ಕೆ.ಪಿ ಕೇವಲ ಸ್ಪರ್ಧಿಗಳಾಗಿ ಬಿಗ್ಬಾಸ್ ಮನೆಯನ್ನ ಪ್ರವೇಶ ಮಾಡಿದ್ದರು. ದೊಡ್ಮನೆ ಅಂಗಳಕ್ಕೆ ಬಲಗಾಲಿಟ್ಟು ಬರುವಾಗ ಇವರಿಬ್ಬರು ಅಪರಿಚಿತರು. ಆದರೆ, ಅರಮನೆಯಂತಿರುವ ಸೆರೆಮನೆಯಲ್ಲಿ ದಿನಗಳು ಕಳೆದಂತೆ ಅರವಿಂದ್-ದಿವ್ಯಾ ಇಬ್ಬರು ಕ್ಲೋಸ್ ಆದರು. ಒಬ್ಬರಿಗೊಬ್ಬರು ಫೀಲಿಂಗ್ಸ್ ನ ಶೇರ್ ಮಾಡಿಕೊಂಡರು. ಇಷ್ಟಕ್ಕೆ ಸುಮ್ಮನಾಗದೇ ಒಟ್ಟೊಟ್ಟಿಗೆ ಕಾಲ ಕಳೆಯುವುದಕ್ಕೆ ಶುರು ಮಾಡಿದರು. ಕಣ್ಮಣಿ ಕಣ್ಣಿಗೆ ಬೀಳೋದಲ್ಲದೇ ಕರುನಾಡ ಮಂದಿಯ ಕಣ್ಣಿಗೂ ಬಿದ್ದರು.
ಅರವಿಂದ್-ದಿವ್ಯಾರನ್ನು ಒಟ್ಟಿಗೆ ನೋಡಿದ ಮಂದಿಗೆ ಇವರಿಬ್ಬರ ಮಧ್ಯೆ ಪ್ರೀತಿ ಶುರುವಾಗಿದೆ ಎಂದೆನಿಸಿದ್ದು ಮಾತ್ರ ಸತ್ಯ. ಆದರೆ, ಅರ್ವಿಯಾ ಜೋಡಿ ಮಾತ್ರ ಬಿಗ್ಬಾಸ್ ಮನೆಯಲ್ಲಾಗಲಿ ಅಥವಾ ಕೊರೊನಾ ಕಾರಣದಿಂದ ದೊಡ್ಮನೆ ತೊರೆದು ಬಂದಾಗಾಗಲೀ ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಹೀಗಾಗಿ, ಈ ಕ್ಷಣಕ್ಕೂ ಇವರಿಬ್ಬರ ನಡುವೆ ಇರುವುದು ಸ್ನೇಹಾನಾ ಅಥವಾ ಪ್ರೀತಿನಾ ಎನ್ನುವ ಸಂಶಯವಿದೆ. ಅದಾಗ್ಯೂ ಈ ಜೋಡಿ ಪ್ರಣಪಕ್ಷಿಗಳಂತೆ ದೊಡ್ಮನೆಯನ್ನು ರಂಗೇರಿಸುತ್ತಲೇ ಇದೆ. ಪ್ರತಿಸ್ಪರ್ಧಿಗಳಿಗೆ ಟಕ್ಕರ್ ಕೊಡುತ್ತಾ ಫೈನಲ್ಸ್ ತಲುಪೋದಕ್ಕೆ ಅರ್ವಿಯಾ ಕಾದಾಡುತ್ತಲೇ ಇದ್ದಾರೆ. ಈ ಮಧ್ಯೆ ಅರವಿಂದ್ ಹಾಗೂ ದಿವ್ಯಾ ಲವ್ಲೈಫ್ ಸೀಕ್ರೇಟ್ ಬಗ್ಗೆ ಹಿಂಟ್ ಕೊಡುವ ಕೆಲವೊಂದು ಖಾಸಗಿ ಫೋಟೋಗಳು ವೈರಲ್ ಆಗಿವೆ. ಇದರಿಂದ ಅರ್ವಿಯಾ ಫ್ಯಾನ್ಸ್ ಫುಲ್ ಅಪ್ಸೆಟ್ ಆಗಿದ್ದಾರೆ.
ಬಿಗ್ಬಾಸ್ ಅಂಗಳಕ್ಕೆ ಕಾಲಿಡುವಾಗ ದಿವ್ಯಾ `ಐ ಆ್ಯಮ್ ಸಿಂಗಲ್’ ಅಂತ ಕಿಚ್ಚನ ಮುಂದೆ ಹೇಳಿಕೊಂಡಿದ್ದರು. ಆದ್ರೀಗ, ಯಾವುದೇ ಹುಡುಗನಿಗೆ ಅಪ್ಪಿಕೊಂಡು ಪಪ್ಪಿ ಕೊಡುತ್ತಿರುವ ಫೋಟೋ ಸೇರಿದಂತೆ ಕೆಲವು ರೊಮ್ಯಾಂಟಿಕ್ ಫೋಟೋಗಳು ವೈರಲ್ ಆಗಿವೆ. ದಿವ್ಯಾ ಉರುಡುಗ ಅವರದ್ದು ಮಾತ್ರವಲ್ಲ ಅರವಿಂದ್ ಕೆ.ಪಿ ಕೂಡ ಯಾವುದೋ ಹುಡುಗಿಯ ಕೆನ್ನೆಗೆ ಮುತ್ತಿಡುತ್ತಿರುವ ಫೋಟೋ ಕೂಡ ಸೋಷಿಯಲ್ ಲೋಕಕ್ಕೆ ಬಂದಿದೆ. ಅಂದ್ಹಾಗೇ, ಈ ಫೋಟೋಗಳನ್ನು ನೋಡಿದ್ರೆ ಇವರಿಬ್ಬರು ಲವ್ಲೈಫ್ನ ಎಂಜಾಯ್ ಮಾಡಿದ್ದಾರೆ ಎನಿಸುತ್ತೆ. ಈಗಲೂ ಲವ್ಲೈಫ್ನಲ್ಲಿದ್ದಾರಾ ಈ ಪ್ರಶ್ನೆಗೆ ಇಬ್ಬರು ಬಿಗ್ಬಾಸ್ ಮನೆಯಿಂದ ಹೊರಬಂದ್ಮೇಲೆ ಉತ್ತರ ಕೊಡ್ಬೇಕು. ಆ ಉತ್ತರ ಹೇಗಿರಲಿದೆ ಎನ್ನುವುದೇ ಕೂತೂಹಲ.
ದೊಡ್ಮನೆಯಲ್ಲಿ ಪ್ರಣಯಪಕ್ಷಿಗಳಂತೆ ಕಾಣುತ್ತಿರುವ ಅರ್ವಿಯಾ ಮಧ್ಯೆ ಪ್ರೀತಿ ಚಿಗುರಿದೆಯಾ ಗೊತ್ತಿಲ್ಲ. `ಐ ಲವ್ ಯೂ ಬಟ್ ಐ ಆ್ಯಮ್ ನಾಟ್ ಇನ್ ಲವ್ ವಿತ್ ಯೂ’ ಹೀಗಂತ ಅರ್ವಿಯಾ ಓಪನ್ನಾಗಿ ಹೇಳಿ ಬಿಡ್ತಾರಾ? ಹೀಗಂತ ಅಂತಿಮ ತೀರ್ಮಾನಕ್ಕೆ ಬರುವುದಕ್ಕೂ ಆಗ್ತಿಲ್ಲ. ಆದರೆ, ಅರವಿಂದ್ ಹಾಗೂ ದಿವ್ಯಾ ಬೇರೆ ಬೇರೆಯವರೊಟ್ಟಿಗೆ ಇರುವ ಖಾಸಗಿ ಫೋಟೋಗಳನ್ನು ನೋಡಿದ್ರೆ ಹಳೆಯ ಪ್ರೇಮಪುರಾಣ ಇರುವುದಂತೂ ಖಚಿತ. ಅದು ಈಗ್ಲೂ ಚಾಲ್ತಿಯಲ್ಲಿದೆಯಾ ಸಮ್ ರೀಸನ್ಸ್ ನಿಂದ ಬ್ರೇಕಪ್ ಆಗಿದೆಯಾ ಗೊತ್ತಿಲ್ಲ?
ಅದು ಏನೇ ಆಗಿರಲಿ ಅರ್ವಿಯಾ ಜೋಡಿ ರಿಯಾಲಿಟಿ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಲಿ, ಅಭಿಮಾನಿಗಳು ಒಟ್ಟಿರುವ ಪ್ರೀತಿ ನಂಬಿಕೆಯನ್ನ ಉಳಿಸಿಕೊಂಡು ಬೆಳೆಸಿಕೊಂಡು ಹೋಗಲಿ ಎನ್ನುವುದೇ ಸಿನಿಲಹರಿ ಆಶಯ.
ಸೋನು ಸೂದ್ ಈ ಹೆಸರು ಈಗ ಎಲ್ಲೆಡೆ ಪರಿಚಿತ. ಬರೀ ನಟರಾಗಿಯಷ್ಟೇ ಅಲ್ಲ, ಮಾನವೀಯ ಮೌಲ್ಯವಿರುವ ಒಬ್ಬ ಒಳ್ಳೆಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಅನ್ನೋದು ವಿಶೇಷ. ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. (ಜುಲೈ ೩೦) ಅವರಿಂದು 48ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವರ ಫ್ಯಾನ್ಸ್ ಸಿಕ್ಕಾಪಟ್ಟೆ ಫೋಟೋಸ್ ಶೇರ್ ಮಾಡಿ ಶುಭಾಶಯ ಹೇಳ್ತಾ ಇದ್ದಾರೆ.
ರೀಲ್ನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಸೋನು, ರಿಯಲ್ ಲೈಫ್ನಲ್ಲಿ ನಿಜಕ್ಕೂ ಅವರು ಹೀರೋನೇ. ಅದಾಗಲೇ ಸಾಬಿತಾಗಿದೆ ಕೂಡ. ತೆರೆ ಮೇಲೆ ಅಬ್ಬರಿಸುವ ವಿಲನ್ ಸೋನು ಅವರ ನಟನೆಯನ್ನು ಎಷ್ಟು ಇಷ್ಟಪಡ್ತಾರೋ, ಅವರ ನಿಜ ಜೀವನದ ವ್ಯಕ್ತಿತ್ವವನ್ನೂ ಜನರು ಅದಕ್ಕಿಂತಲೂ ಹೆಚ್ಚು ಇಷ್ಟಪಡ್ತಾರೆ. ಅದಕ್ಕೆ ಕಾರಣ, ಕಳೆದ ವರ್ಷ ಕೊರೊನಾ ಹಾವಳಿಯಿಂದ ತತ್ತರಿಸಿದ್ದ ಶ್ರಮಿಕರ ಪರ ನಿಂತು ಕೈಲಾದ ಸೇವೆ ಮಾಡಿದ್ದು.
ಕೊರೊನಾ ಹಿನ್ನೆಲೆಯಲ್ಲಿ ದಿಢೀರ್ ಲಾಕ್ ಡೌನ್ ಘೋಷಣೆ ಮಾಡುತ್ತಿದ್ದಂತೆ, ಎಲ್ಲೆಡೆ ಸಮಸ್ಯೆ ಹೆಚ್ಚಾಯ್ತು. ಅದೆಷ್ಟೋ ಜನರು ಇದ್ದ ಕೆಲಸ ಕಳೆದುಕೊಂಡು ಮೌನವಾಗಿದ್ದರು. ಇನ್ನು, ಸರಿಯಾಗಿ ಆಹಾರ ಸಿಗದೆ ಪರಿತಪಿಸುತ್ತಿದ್ದ ಜನರಿಗಂತೂ ಲೆಕ್ಕವೇ ಇಲ್ಲ. ಎಲ್ಲವೂ ಬಂದ್ ಆಗಿದ್ದರಿಂದ ತಮ್ಮ ತಮ್ಮ ಊರಿಗೂ ಹೋಗಲಾಗದೆ ಒದ್ದಾಡುತ್ತಿದ್ದ ಕಾರ್ಮಿಕರನ್ನು ಅವರವರ ರಾಜ್ಯ, ಊರುಗಳಿಗೆ ಕಳುಹಿಸಲು ಟೊಂಕ ಕಟ್ಟಿ ನಿಂತಿದ್ದು ಇದೇ ಸೋನು ಸೂದ್. ಆ ಮೂಲಕ ಅವರು ಮಾನವೀಯ ತೋರಿದರು.
ಅವರ ಆ ಕೆಲಸಕ್ಕೆ ಭರ್ಜರಿ ಮೆಚ್ಚುಗೆಯೂ ಸಿಕ್ತು. ಸಾವಿರಾರು ಕಾರ್ಮಿಕರನ್ನು ಸಿಕ್ಕ ಸಿಕ್ಕ ಬಸ್ಸು, ರೈಲುಗಳ ಮೂಲಕ ಮರಳಿ ಗೂಡಿಗೆ ಸೇರಿಸುವ ಮಹತ್ವದ ಕೆಲಸ ಮಾಡಿ ರಿಯಲ್ ಹೀರೋ ಆಗಿಬಿಟ್ಟ ಸೋನು, ಕೆಲವರನ್ನು ವಿಮಾನದ ಮೂಲಕವೂ ಅವರವರ ಊರು ತಲುಪಿಸುವ ಕೆಲಸ ಮಾಡಿದರು. ಕೊರೊನೊ ಸಮಯದಲ್ಲಿ ಮಾಡಿದ ಕೆಲಸ ಅವರಿಗೆ ತೃಪ್ತಿ ತಂದಿದ್ದೇ ತಡ, ಯಾವುದೇ ಮೂಲೆಯಲ್ಲಿ ಸಮಸ್ಯೆಗೆ ಸಿಲುಕಿದ ಜನ ಕಷ್ಟ ಅಂದಾಗ, ಅಲ್ಲಿ ಸೋನು ಹೃದಯ ಮಿಡಿಯುತ್ತಿತ್ತು. ಹಾಗಾಗಿ ಸೋನು ಸೂದ್ ತೆರೆ ಮೇಲೆ ಖಳನಟರಾಗಿದ್ದರೂ, ತೆರೆಯ ಹಿಂದೆ ನಿಜವಾದ ಹೀರೋನೇ ಅನಿಸಿಕೊಂಡರು.
ತೆಲುಗಿನ “ಅರುಂಧತಿ” ಚಿತ್ರ ಅವರಿಗೆ ದೊಡ್ಡ ಬ್ರೇಕ್ ಕೊಡ್ತು. ಆ ಬಳಿಕ ಸೋನು ಸೂದ್ ಅವರು ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸುತ್ತಲೇ ಸುದ್ದಿಯಾದರು. ಆ ಬಳಿಕ ಬಾಲಿವುಡ್, ಕಾಲಿವುಡ್, ಸ್ಯಾಂಡ್ಲ್ವುಡ್ನಲ್ಲೂ ಸೋನು ಹವಾ ಶುರುವಾಯಿತು. ಬಹುತೇಕ ಖಳನಟನ ಪಾತ್ರಗಳಲ್ಲೇ ಮಿಂಚಿದ ಸೋನು ಸೂದ್, 2011ರಲ್ಲಿ ಕನ್ನಡ ಸಿನಿರಂಗಕ್ಕೆ ಎಂಟ್ರಿಕೊಟ್ಟರು.
“ವಿಷ್ಣುವರ್ಧನ” ಸಿನಿಮಾ ಮೂಲಕ ಅಬ್ಬರಿಸಿದರು. ಸದ್ಯ ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಬಿಝಿಯಾಗಿರುವ ಸೋನು ಸೂದ್, ಮಾನವೀಯ ಕೆಲಸಗಳನ್ನೂ ಮಾಡುತ್ತಿದ್ದಾರೆ. ಅವರ ಬರ್ತ್ಡೇ ಅಂಗವಾಗಿ ಅವರ ಫ್ಯಾನ್ಸ್ ಸಂಭ್ರಮಿಸುವ ಮೂಲಕ ಸೋನು ಅವರಿಗೆ ಜೈಕಾರ ಹಾಕುತ್ತಿದ್ದಾರೆ.
ಮುಂಬರುವ ವಿಧಾನಸಭೆ ಅಖಾಡಕ್ಕಿಳಿದರೂ ಅಚ್ಚರಿ ಇಲ್ಲ! ಪತಿ ಅಂಬರೀಶ್ ಅವರ ಹಾದಿಯನ್ನು ಪತ್ನಿ ಸುಮಲತಾ ಅಂಬರೀಶ್ ತುಳಿದಿದ್ದು ಗೊತ್ತೇ ಇದೆ. ಈಗ ಪುತ್ರ ಅಭಿಷೇಕ್ ಅಂಬರೀಶ್ ಅವರ ಸರದಿ. ಹೌದು, ಅಭಿಷೇಕ್ ಅಂಬರೀಶ್ ಅವರು ಕೂಡ ರಾಜಕೀಯದತ್ತ ಒಲವು ತೋರಿಸಿದ್ದಾರೆ. ಅರೇ, ಇದೇನಪ್ಪಾ, ಈ ಹಿಂದೆ ಅವರು, “ನನಗೆ ಸಿನಿಮಾ ಮೇಲೆ ಒಲವಿದೆ ಹೊರತು, ರಾಜಕೀಯದ ಮೇಲೆ ಆಸಕ್ತಿಯೇ ಇಲ್ಲ” ಅಂತ ಹೇಳಿದ್ದರು. ಈಗ ನೋಡಿದರೆ, ರಾಜಕೀಯದತ್ತ ಮುಖ ಮಾಡುವ ಸುದ್ದಿ ಬರುತ್ತಿದೆಯಲ್ಲಾ ಎಂಬ ಪ್ರಶ್ನೆ ಎದುರಾದರೂ, ಇದು ಸತ್ಯ. ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರು ರಾಜಕೀಯ ಪ್ರವೇಶಿಸುವ ಕುರಿತಂತೆ ಸುಳಿವು ನೀಡಿದ್ದಾರೆ.
ಹೀಗಾಗಿ ಇದು ಸದ್ಯ ಮಂಡ್ಯ ರಾಜಕಾರಣದಲ್ಲಿ ಒಂದಷ್ಟು ಕುತೂಹಲದ ವಿಷಯವಾಗಿದೆ. ಸದ್ಯ ಈಗ ವಿಧಾನ ಸಂಭೆ ಹತ್ತಿರವಾಗುತ್ತಿದೆ. ಮುಂದಿನ ವಿಧಾನ ಸಭೆ ಚುನಾವಣೆಗೆ ಅಭಿಷೇಕ್ ಧುಮುಕುತ್ತಾರಾ ಎಂಬ ಪ್ರಶ್ನೆ ಕೂಡ ಎಲ್ಲರಲ್ಲೂ ಇದೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಳುಗನ ಹಳ್ಳಿಗೆ ಭೇಟಿ ನೀಡಿದ್ದ ಅಭಿಷೇಕ್ ಅಂಬರೀಶ್, “ಜನರು ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಾನು ಸಿದ್ಧ” ಎಂದಿದ್ದಾರೆ. ಅವರ ಈ ಮಾತು ಒಂದಷ್ಟು ಸಂಚಲನ ಮೂಡಿಸಿದೆ. ಅಲ್ಲಿಗೆ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸಣ್ಣದ್ದೊಂದು ಸುಳಿವು ನೀಡಿದ್ದಾರೆ.
“ಭವಿಷ್ಯದಲ್ಲಿ ಏನೇನು ಬದಲಾವಣೆಗಳಾಗುತ್ತವೋ ಯಾರಿಗೆ ಗೊತ್ತು. ಕಳೆದ ವಾರ ಸಿಎಂ ಬದಲಾಗ್ತಾರೆ ಅಂತ ಯಾರಿಗಾದ್ರೂ ಗೊತ್ತಿತ್ತಾ? ಹಾಗಾಗಿ, ಭವಿಷ್ಯ ಏನು ಅಂತ ಈಗಲೇ ಹೇಳೋಕೆ ಸಾಧ್ಯನಾ? ಜನ ಬಯಸಿದರೆ ನಾನು ಬರ್ತೀನಿ. ಮಂಡ್ಯಗಾಗಲಿ ಮದ್ದೂರಿಗಾಗಲಿ ಏಳು ಕ್ಷೇತ್ರಗಳಿಗೂ ಒಳ್ಳೆಯ ಶಾಸಕರು ಸಿಗಬೇಕು. ಒಳ್ಳೆಯ ಪ್ರತಿನಿಧಿಗಳು ಸಿಗಬೇಕು” ಎನ್ನುವ ಮೂಲಕ ಅಭಿಷೇಕ್ ಅವರು ಸದ್ಯದ ಮಟ್ಟಿಗೆ ಕುತೂಹಲ ಹುಟ್ಟುಹಾಕಿದ್ದಾರೆ. ಅದೇನೆ ಇರಲಿ, ಮಂಡ್ಯದಲ್ಲಿ ನಡೆಯುವ ಚುನಾವಣೆಗಳಂತೂ ಪ್ರತಿಷ್ಠೆಯಾಗಿರುತ್ತವೆ. ಒಂದು ವೇಳೆ ಅಭಿಷೇಕ್ ಅಂಬರೀಶ್ ಅವರು ವಿಧಾನಸಭೆ ಅಖಾಡಕ್ಕಿಳಿದರೂ ಅಚ್ಚರಿ ಇಲ್ಲ ಬಿಡಿ.
ಪುನೀತ್ ರಾಜಕುಮಾರ್ ಅವರ ಪಿ ಆರ್ ಕೆ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಹಾಗೂ ಸತ್ಯ & ಮಯೂರ ಪಿಕ್ಚರ್ಸ್ ಜತೆಗೂಡಿ ತಯಾರಿಸುತ್ತಿರುವ “ಮ್ಯಾನ್ ಆಫ್ ದಿ ಮ್ಯಾಚ್” ಚಿತ್ರ ಶೂಟಿಂಗ್ ಮತ್ತು ಡಬ್ಬಿಂಗ್ ಮುಗಿಸಿದೆ.
ಡಿ ಸತ್ಯ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಕುತೂಹಲಕಾರಿ ಅಂಶವೊಂದು ಹೊರಬಿದ್ದಿದೆ. ಈ ಚಿತ್ರದಲ್ಲಿ ವಾಸುಕಿ ವೈಭವ್ ಅವರು ಸಂಗೀತ ನೀಡುವುದರ ಜೊತೆಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಹಾಡಿ, ಕುಣಿದಿದ್ದಾರೆ.
ನೃತ್ಯ ನಿರ್ದೇಶನವನ್ನು ಸ್ವತಃ ಡಿ ಸತ್ಯ ಪ್ರಕಾಶ್ ಅವರೇ ಮಾಡಿದ್ದಾರೆ. ಚಿತ್ರದ ಕಥೆ ತಿಳಿಸುವ ಈ ಹಾಡಿಗೆ, ಸೊಗಸಾದ ಸಾಹಿತ್ಯವನ್ನು ಯೋಗರಾಜ್ ಭಟ್ ಮತ್ತು ಡಿ ಸತ್ಯ ಪ್ರಕಾಶ್ ಜಂಟಿಯಾಗಿ ಬರೆದಿದ್ದಾರೆ.