Categories
ಸಿನಿ ಸುದ್ದಿ

ಡಿಎನ್‌ಎ ಗೆ ಹಾಡಿದ ಸತೀಶ್‌ ನೀನಾಸಂ : ವೈರಲ್‌ ಆಗುತ್ತಿದೆ ಟೈಟಲ್‌ ಸಾಂಗ್‌ !

ನಾವ್ಯಾರು ಎಲ್ಲಿಂದ ಬಂದಿದೀವಿ… ನಾವ್ಯಾಕೆ ಸ್ವಾಮಿ ಹೀಂಗ್‌ ಇದೀವಿ…ಅರೆ, ಹೀಗಂತ ಹೇಳ್ತಿರೋದು ನಾವಲ್ಲ, ಬದಲಿಗೆ ಹೀಗೆ ಇಲ್ಲಿ ಹೇಳ್ತೀರೋದು ನಟ ಸತೀಶ್ ನೀನಾಸಂ.ಸಿನಿಮಾಗಳಲ್ಲಿ ಸ್ಟಾರ್‌ಗಳು ನಟಿಸೋದು ಮಾಮೂಲು. ನಟನೆಯೇ ಅವರ ವೃತ್ತಿ ಬಿಡಿ. ಅದರ ಜತೆಗೆ ಕನ್ನಡದ ಹಲವು ನಟರು ಹಾಗೂ ನಟಿಯರು ನಟನೆ, ನಿರ್ದೇಶನ ಹಾಗೂ ನಿರ್ಮಾಣದಂತೆಯೇ ಗಾಯಕರಾಗಿಯೂ ಸುದ್ದಿ ಮಾಡುತ್ತಲೇ ಬಂದಿದ್ದಾರೆ. ಸದ್ಯಕ್ಕೆ ಅಂತಹದೊಂದು ಪ್ರಯತ್ನದಲ್ಲೀಗ ʼಡಿಎನ್‌ ಎʼ ಹೆಸರಿನ ಚಿತ್ರದ ಟೈಟಲ್‌ ಸಾಂಗ್‌ ಗೆ ನಟ ಸತೀಶ್‌ ನೀನಾಸಂ ಧ್ವನಿ ನೀಡಿದ್ದು, ಅದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವುದು ವಿಶೇಷ.

ಈ ಸಾಂಗ್‌ ತುಂಬಾ ಸ್ಪೆಷಲ್. ಮನುಷ್ಯನ ಮೂಲಗಳನ್ನು ಹುಡುಕಿ ಹೊರಡುವ ಈ ಹಾಡು ಕೇಳುವುದಕ್ಕೂ ಇಂಪಾಗಿದೆ. ಹಾಗೆಯೇ ವಿಶೇಷವಾದ ಸಾಹಿತ್ಯದ ಮೂಲಕವೂ ಗಮನ ಸೆಳೆಯುತ್ತದೆ. ಯೋಗರಾಜ್‌ ಭಟ್‌ ಸಾಹಿತ್ಯ ಅಂದ್ರೆ ಹೆಚ್ಚೇನು ಹೇಳಬೇಕಿಲ್ಲ. ಅದಕ್ಕಿಂತ ಮುಖ್ಯವಾಗಿ ಇಲ್ಲಿ ಸತೀಶ್‌ ನೀನಾಸಂಹಾಗೂ ನಿರ್ದೇಶಕ ಯೋಗರಾಜ್‌ ಭಟ್ಟರ ಜುಗಲ್‌ ಬಂಧಿಯೇ ಫುಲ್‌ ಡಿಫೆರೆಂಟ್.‌ ಡಿಎನ್‌ ಎ ಎನ್ನುವ ಚಿತ್ರದ ಶೀರ್ಷಿಕೆಯನ್ನು ಬಗೆ ಬಗೆಯಲ್ಲಿ ವಿವರಿಸುವ ಸಾಲುಗಳು ಇವು. ಡಿಎನ್‌ ಎ ಅನ್ನೋದು ಏನು ಅನ್ನೋದು ಈ ಹಾಡಿನ ತಿರುಳು. ಸಿನಿಮಾದ ಕಥಾ ಹಂದರವೂ ಅದೇ ಆಗಿದೆ.ಕಮರ್ಷಿಯಲ್‌ ಮಾದರಿ ಅಂತ ಚಿತ್ರರಂಗ ಸಂಬಂದವೇ ಇಲ್ಲದ ಸಂಗತಿಗಳನ್ನು ತೆರೆಗೆ ತರಲು ಹೊರಟರೆ, ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಅವರು ಮನುಷ್ಯ ಸಂಬಂಧಗಳ ಎಳೆಗಳನ್ನು ಹಿಡಿದು ಹೊರಟಿರುವುದೇ ಇಲ್ಲಿ ಹೈಲೈಟ್ಸ್.

ಬಂಜ ಅನ್ನೋದು ದೊಡ್ಡದು ಕನಾ… ಅನ್ನೋದು ಸಾಹಿತಿ ದೇವನೂರು ಮಹಾದೇವ ಅವರ ಮಾತು. ಅದನ್ನು ತಿರುಳಾಗಿ ಇಟ್ಟುಕೊಂಡು ನಿರ್ಮಾಣವಾದ ಸಿನಿಮಾ ಇದು. ಈ ಹಾಡು ಕೂಡ ಅದನ್ನೇ ಧ್ವನಿಸುತ್ತಾ ಸಾಗುತ್ತದೆ. ಚೇತನ್‌ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಚಿತ್ರತಂಡವು ನಟ ಸತೀಶ್‌ ನೀನಾಸಂ ಅವರನ್ನೇ ಆಯ್ಕೆ ಮಾಡಿಕೊಂಡಿದ್ದು ಕೂಡ ಸೊಗಸಾಗಿದೆ. ಪಂಚರಂಗಿ ಆಡಿಯೋ ಯೂಟೂಬ್‌ ಚಾನೆಲ್‌ ಮೂಲಕ ಸೋಮವಾರವಷ್ಟೇ ಈ ಹಾಡು ಅಧಿಕೃತವಾಗಿ ಹೊರ ಬಂದಿದೆ. ಹೆಸರಾಂತ ಸಂಗೀತ ನಿರ್ದೇಶಕ ವಿ. ಮನೋಹರ್‌ ಈ ಹಾಡು ಅನಾವರಣ ಮಾಡಿ ಶುಭ ಹಾರೈಸಿದರು. ಈಗಾಗಲೇ ನಿರ್ದೇಶಕರಾದ ನಾಗಾಭರಣ, ಜಗ್ಗೇಶ್‌, ದುನಿಯಾ ಸೂರಿ, ಶಶಾಂಕ್‌, ಜಯತೀರ್ಥ, ಸಂತೋಷ್‌ ಆನಂದ್‌ ರಾಮ್‌, ನಿರ್ಮಾಪಕ ಹಾಗೂ ನಟ ರಾಘವೇಂದ್ರ ರಾಜ್‌ ಕುಮಾರ್‌, ನಟ ಸೃಜನ್‌ ಲೋಕೇಶ್‌ ಸೇರಿದಂತೆ ದೊಡ್ಡ ತಂಡವೇ ಈ ಹಾಡು ಮೆಚ್ಚಿಕೊಂಡು ಮಾತನಾಡಿದೆ.ಇದೀಗ ಇದು ಸೋಷಲ್‌ ಮೀಡಿಯಾದಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ.

ಮನುಷ್ಯ ಸಂಬಂಧಗಳ ಎಳೆಯ ಕಥಾ ಹಂದರ ಹೊಂದಿರುವ ʼಡಿಎನ್‌ ಎʼಚಿತ್ರಕ್ಕೆ ಪ್ರಕಾಶ್‌ ರಾಜ್‌ ಮೇಹು ನಿರ್ದೇಶಕರು. ಇದು ಅವರ ಚೊಚ್ಚಲ ಚಿತ್ರ. ಹಲವಾರು ವರ್ಷಗಳ ಕಾಲದ ಸಿನಿಮಾ ಒಡನಾಟದ ಮೂಲಕ ತಾವೇ ಒಂದೊಳ್ಳೆಯ ಕಥೆ ಮಾಡಿಕೊಂಡು ಈ ಸಿನಿಮಾ ಮಾಡಿದ್ದಾರೆ. ಎಸ್ತರ್‌ ನರೋನ್ಹಾ, ಅಚ್ಯುತ್‌ ಕುಮಾರ್‌, ರೋಜರ್‌ ನಾರಾಯಣ್‌, ನಟಿ ಯಮುನಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ರವಿಕುಮಾರ ಸಾನಾ ಛಾಯಾಗ್ರಹಣ, ಶಿವರಾಜ್‌ ಮೇಹು ಸಂಕಲನ ಚಿತ್ರಕ್ಕಿದೆ. ಯೋಗರಾಜ್‌ ಭಟ್‌ ಹಾಗೂ ಡಾ. ಕೆ. ವೈ. ನಾರಾಯಣ ಸ್ವಾಮಿ ಸಾಹಿತ್ಯ ಚಿತ್ರಕ್ಕಿದೆ. ಎಲ್ಲಾ ಅಂದುಕೊಂಡಂತಾಗಿದ್ದರೆ ಈ ಚಿತ್ರ ಇದೇ ತಿಂಗಳು 20 ರಂದು ತೆರೆಗೆ ಬರಬೇಕಿತ್ತು. ಕೊರೋನಾ ಕಾರಣಕ್ಕೆ ರಿಲೀಸ್‌ ಡೇಟ್‌ ಮುಂದಕ್ಕೆ ಹೋಗಿದೆ. ಅಲ್ಲಿವರೆಗೂ ಚಿತ್ರದ ಪ್ರಮೋಷನ್‌ ಗೆ ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ಸದ್ಯಕ್ಕೆ ಪ್ರಮೋಷನ್‌ ಸಾಂಗ್‌ ಮೂಲಕ ಸದ್ದು ಮಾಡಿದೆ.

Categories
ಸಿನಿ ಸುದ್ದಿ

ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರ ತಾಯಿ ಹಿರಿಯ ನಟಿ ಪ್ರತಿಮಾ ದೇವಿ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟಿ ಪ್ರತಿಮಾ ದೇವಿ (88) ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ ಸರಸ್ವತಿಪುರಂ ನಿವಾಸದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಕನ್ನಡದ ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್ ಬಾಬು, ನಟಿ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ತಾಯಿಯಾಗಿರುವ ಪ್ರತಿಮಾ ದೇವಿ ಅವರು, 1947ರಲ್ಲಿ “ಕೃಷ್ಣಲೀಲಾ” ಚಿತ್ರದಲ್ಲಿ ನಟಿಸುವ ಮೂಲಕ ವೃತ್ತಿ ಜೀವನ ಶುರುಮಾಡಿದರು. 1951ರಲ್ಲಿ ತೆರೆಕಂಡ ‘ಜಗನ್ಮೋಹಿನಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಜನಪ್ರಿಯಗೊಂಡರು. ಈ ಚಿತ್ರ ಕನ್ನಡದಲ್ಲಿ ಮೊದಲ ಶತದಿನ ಪೂರೈಸಿದ ಸಿನಿಮಾ ಎಂಬ ದಾಖಲೆ ಪಡೆದಿದೆ. ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳಲ್ಲಿ ನಟಿಸಿದ್ದರು.

“ಶ್ರೀ ಶ್ರೀನಿವಾಸ ಕಲ್ಯಾಣ”, “ಚಂಚಲ ಕುಮಾರಿ”, “ಮುಟ್ಟಿದ್ದೆಲ್ಲಾ ಚಿನ್ನ”, “ಶಿವಶರಣೇ ನಂಬಿಯಕ್ಕ”, “ಮಂಗಳ ಸೂತ್ರ”, “ಧರ್ಮಸ್ಥಳ ಮಹಾತ್ಮೆ”, “ಪಾತಳಾ ಮೋಹಿನಿ”, “ನಾಗರಹಾವು”, “ರಾಮ ಶಾಮಾ ಭಾಮಾ” ಸೇರಿದಂತೆ ಸುಮಾರು 60 ಚಿತ್ರಗಳಲ್ಲಿ ಪ್ರತಿಮಾ ದೇವಿ ನಟಿಸಿದ್ದಾರೆ. ಮಹಾತ್ಮೆ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕರಾದ ಶಂಕರ್ ಸಿಂಗ್ ಅವರನ್ನು ವಿವಾಹವಾಗಿದ್ದ ಪ್ರತಿಮಾ ದೇವಿ ಅವರಿಗೆ ಎಸ್.‌ವಿ. ರಾಜೇಂದ್ರ ಸಿಂಗ್ ಬಾಬು, ಸಂಗ್ರಾಮ್‌ ಸಿಂಗ್‌, ಜಯರಾಜ್‌ ಸಿಂಗ್‌, ವಿಜಯಲಕ್ಷ್ಮಿ ಸಿಂಗ್ ಮಕ್ಕಳು.
ಸಂತಾಪ: ಮೃತರ ಸುದ್ದಿ ತಿಳಿದು ನಟಿ, ಸಂಸದೆ, ಸುಮಲತಾ ಅಂಬರೀಶ್‌, ಪುನೀತ್‌ ರಾಜಕುಮಾರ್‌ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು, ನಿರ್ಮಾಪಕ, ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್‌ ಅವರು ಕೂಡ “ಕನ್ನಡ ಚಿತ್ರರಂಗಕ್ಕೆ ‌ಕಲಾವಿದೆಯಾಗಿ ತಮ್ಮದೇ ಆದ ಸೇವೆ ಸಲ್ಲಿಸಿದ್ದ, ಖ್ಯಾತ ನಟಿ ಪ್ರತಿಮಾದೇವಿ ಅವರ ಪತಿ ಶಂಕರ್ ಸಿಂಗ್ ಅವರ ಜನ್ಮ ಶತಮಾನೋತ್ಸವ ಆಚರಣೆಯ ವರ್ಷವಿದು. ಇದೇ ಸಮಯದಲ್ಲಿ ಅವರು ನಿಧನರಾಗಿದ್ದು, ದುಖದ ಸಂಗತಿ.‌ ಕನ್ನಡ ಚಿತ್ರರಂಗಕ್ಕೆ ಇವರ ಕುಟುಂಬ ನೀಡಿರುವ ಕೊಡುಗೆ ಅಪಾರ. ಕನ್ನಡ ‌ಚಿತ್ರರಂಗದ ಖ್ಯಾತ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ನಾಲ್ಕು ಮಕ್ಕಳನ್ನು ಪ್ರತಿಮಾ ದೇವಿ ಅವರು ಅಗಲಿದ್ದಾರೆ. ‌ಅವರ ನಿಧನದ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ‌ ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಹೇಳಿದ್ದಾರೆ.

Categories
ಸಿನಿ ಸುದ್ದಿ

ರಾಯಲ್‌ ಫ್ಯಾಮಿಲಿಯ ರಾಯಲ್‌ ಹುಡುಗಿ ಜ್ಯೋತಿ- ಬಿಲ್ಲು, ಬಾಣ ಹಿಡಿದು ತೆಲುಗು ಕಿರುತೆರೆಗೆ ಕಾಲಿಡುತ್ತಿದ್ದಾರೆ ನಟಿ ಮೇಘಾಶ್ರೀ

ಕನ್ನಡದ ಬಹಳಷ್ಟು ನಟಿಯರು ಅವಕಾಶಗಳನ್ನು ಅರಸಿ ಪರಭಾಷೆಗೆ ಕಾಲಿಟಿರುವುದೇನು ಹೊಸದಲ್ಲ. ಹಾಗೆಯೇ ಅವಕಾಶಗಳನ್ನು ಹುಡುಕುತ್ತಾ ಟಾಲಿವುಡ್‌, ಕಾಲಿವುಡ್‌ಗೂ ಕಾಲಿಟ್ಟಿದ್ದ ಅಪ್ಪಟ ಮಲೆನಾಡಿನ ಹುಡುಗಿ ಮೇಘಾಶ್ರೀ ಈಗ ಅವೆರೆಡು ಭಾಷೆಯ ಕಿರುತೆರೆಯಲ್ಲೂ ಮಿಂಚಲು ರೆಡಿಯಾಗಿದ್ದಾರೆ. ಅದಕ್ಕಂತಲೇ ಬಿಲ್ಲು, ಬಾಣ ಹಿಡಿದು ಭರ್ಜರಿಯಾಗಿ ನಿಂತಿದ್ದಾರೆ. ಅವರ ಹಾಗೊಂದು ಲುಕ್‌ ಈಗ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದು ʼ ಜ್ಯೋತಿ ʼ ಹೆಸರಿನ ಬಹುಭಾಷೆ ಸೀರಿಯಲ್‌ ಸಮಾಚಾರ. ರಾಜ್‌ ಕಪೂರ್‌ ಇದರ ನಿರ್ದೇಶಕ. ಹೆಸರಾಂತ ನಟಿ ಖುಷ್ಬೂ ಇದರ ನಿರ್ಮಾಪಕರಂತೆ.

ತೆಲುಗು, ತಮಿಳು ಹಾಗೂ ಕನ್ನಡ ಸೇರಿದಂತೆ ಇದು ಐದು ಭಾಷೆಗಳಲ್ಲಿ ಬರುತ್ತಿದೆ ಅನ್ನೋದು ಸುದ್ದಿಯಿತ್ತು. ಆದರೆ ಅದು ಮುಂದೇನಾಯಿತೋ ಗೊತ್ತಿಲ್ಲ, ಸದ್ಯಕ್ಕೀಗ ಇದು ತೆಲುಗಿನಲ್ಲಿ ಮೊದಲು ನಿರ್ಮಾಣಗೊಂಡು ತೆರೆಗೆ ಬರುತ್ತಿದೆ. ಅಲ್ಲಿನ ಜೆಮಿನಿ ವಾಹಿನಿಯಲ್ಲಿ ಪ್ರಸಾರಕ್ಕೆ ಸಿದ್ಧತೆ ನಡೆಸಿದೆ. ಏಪ್ರಿಲ್‌ ೧೨ ರಿಂದ ಪ್ರಸಾರವಾಗಲಿದೆ ಅಂತ ಸುದ್ದಿಯೂ ಇದೆ. ʼಜ್ಯೋತಿʼ ಸೂಪರ್‌ ನ್ಯಾಚುರಲ್‌ ಕಥಾ ಹಂದರದ ಧಾರಾವಾಹಿ. ಇದರ ಪ್ರಧಾನ ಪಾತ್ರಧಾರಿ ಕನ್ನಡದ ನಟಿ ಮೇಘಾಶ್ರೀ. ಈಗಾಗಲೇ ಕನ್ನಡದಲ್ಲಿ ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಸಾಕಷ್ಟು ಹೆಸರು ಮಾಡಿದ ನಟಿ. ಹಾಗೆಯೇ ತೆಲುಗಿನಲ್ಲೂ ಈಗಾಗಲೇ ಮೂರು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಈಗಷ್ಟೇ ತಮಿಳಿನಲ್ಲೂ ಒಂದು ಚಿತ್ರದಲ್ಲಿ ಅಭಿನಯಿಸುವ ಅವಕಾಶ ಅವರಿಗೀಗ ಸಿಕ್ಕಿದೆಯಂತೆ. ಸದ್ಯ ಅದರ ಚಿತ್ರೀಕರಣದಲ್ಲೂ ಬ್ಯುಸಿ ಇದ್ದಾರಂತೆ. ಈ ನಡುವೆಯೇ ಈಗ ತೆಲುಗು ಹಾಗೂ ತಮಿಳು ಕಿರುತೆರೆಯಲ್ಲೂ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ.

ಸದ್ಯ ಅದರ ತೆಲುಗು ವರ್ಷನ್‌ ಪ್ರೋಮೋ ಹೊರ ಬಂದಿದೆ. ಅಲ್ಲಿ ನಟಿ ಮೇಘಾ ಶ್ರೀ ಅವರ ಲುಕ್‌ ಭರ್ಜರಿ ಆಗಿದೆ. ಒನಕೆ ಒಬವ್ವ ನಂತೆ ಅಲ್ಲಿ ಉಡುಗೆ ತೊಟ್ಟಿರುವ ಮೇಘಾಶ್ರೀ, ಜಿಂಕೆ ಭೇಟೆಗೆ ಬಿಲ್ಲು ಹೂಡುತ್ತಾರೆ. ಆದರೆ ಅದು ಬಂಗಾರದ ಮಾಯಾ ಜಿಂಕೆ ಅನ್ನೋದು ಗೊತ್ತಾಗಿ ಶಾಕ್‌ ಆಗುತ್ತಾರೆ. ಮುಂದೇನು ಅನ್ನೋದು ಧಾರಾವಾಹಿಯ ಕುತೂಹಲ. ಫಸ್ಟ್‌ ಟೈಮ್‌ ಇಂತಹದೊಂದು ವಿಭಿನ್ನ ಹಾಗೂ ವಿಶಿಷ್ಟ ಕಥೆಯ ಧಾರಾವಾಹಿಯ ಮೂಲಕ ತೆಲುಗು ಕಿರುತೆರೆ ವೀಕ್ಷಕರ ಮನೆ -ಮನ ಮುಟ್ಟಲು ಹೊರಟಿರುವ ನಟಿ ಮೇಘಾಶ್ರೀ, ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.” ಕತ್ತಿ, ವರಸೆ ಬಗ್ಗೆ ತಿಳಿದುಕೊಂಡು, ತರಬೇತಿ ಪಡೆದುಕೊಂಡಿದ್ದೇನೆ, ಬಿಲ್ಲುಗಾರಿಕೆಯ ಬಗ್ಗೆ ನನಗೆ ಒಂದಿಷ್ಟು ಗೊತ್ತಿರಲಿಲ್ಲ. ನಾನು ಶ್ರಮ ಪಟ್ಟು ತರಬೇತಿಗಳನ್ನು ಮಾಡಿದ್ದೇನೆʼ ಎನ್ನುತ್ತಾರೆ ಮೇಘಾಶ್ರೀ.

Categories
ಸಿನಿ ಸುದ್ದಿ

ಸಂಬಂಜ ದೊಡ್ಡದು ಕನಾ ಎನ್ನುವ ಡಿಎನ್‌ಎ- ಸಂಬಂಧಗಳ ಎಳೆ ಹುಡುಕುತ್ತಾ ನಿರ್ದೇಶಕನಾದ ಪ್ರಕಾಶ್‌ರಾಜ್ ಮೇಹು !

ಪ್ರಕಾಶ್‌ರಾಜ್‌ ಮೇಹು ನಿರ್ದೇಶನದ ʼಡಿ ಎನ್‌ ಎʼ ಚಿತ್ರದ ರಿಲೀಸ್‌ ಗೆ ರೆಡಿ ಆಗಿದೆ. ಸದ್ಯಕ್ಕೆ ಅದರ ರಿಲೀಸ್‌ ಡೇಟ್‌ ಇನ್ನು ಯಾವಾಗ ಎನ್ನುವುದು ಫಿಕ್ಸ್‌ ಆಗಿಲ್ಲ. ಆದರೆ ಎಲ್ಲಾ ಹಂತದಲ್ಲೂ ರಿಲೀಸ್‌ಗೆ ರೆಡಿಯಾಗಿರುವ ಚಿತ್ರ ತಂಡ, ಈಗ ಚಿತ್ರದ ಪ್ರಚಾರಕ್ಕೆ ನಾಂದಿ ಹಾಡಿದೆ. ಅದರ ಮೊದಲ ಹಂತದಲ್ಲೀಗ ಚಿತ್ರ ತಂಡ ಸೋಮವಾರ, ಪ್ರಮೋಷನಲ್‌ ಸಾಂಗ್‌ ಲಾಂಚ್‌ ಮಾಡಿತು.

ಮಾತೃಶ್ರೀ ಎಂಟರ್​ ಪ್ರೈಸಸ್​ ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ಮಾಪಕ ಎಂ. ಮೈಲಾರಿ ಬಂಡವಾಳ ಹಾಕಿದ್ದು, ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಎಸ್ಟರ್ ನರೋನ್ಹಾ, ಯುಮನಾ, ಮಾಸ್ಟರ್ ಆನಂದ್ ಪುತ್ರ ಮಾಸ್ಟರ್​ ಕೃಷ್ಣ ಚೈತನ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದ್ರೀತಿ ಇದು ಮಲ್ಟಿಸ್ಟಾರ್‌ ಸಿನಿಮಾ. ಅನೇಕ ಅನುಭವಿ ಕಲಾವಿದರ ಸಮಾಗಮ ಇಲ್ಲಿದೆ. ಹಾಗೆಯೇ ಇದು ಬಿಗ್‌ ಬಜೆಟ್‌ ಸಿನಿಮಾವೂ ಹೌದು. ಕಥೆಗೆ ತಕ್ಕಂತೆ ನಿರ್ಮಾಪಕರು ಅದ್ದೂರಿ ವೆಚ್ಚದಲ್ಲಿಯೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಅದರ ಛಾಯೆ ಚಿತ್ರದ ಪ್ರಮೋಷನಲ್‌ ಹಾಡಿನಲ್ಲಿ ಅನಾವರಣ ಗೊಂಡಿದೆ.ತಾರಾಗಣ, ನಿರ್ಮಾಣದ ವೈಶಿಷ್ಟ್ಯತೆಗಳ ಜತೆಗೆ ಈ ಸಿನಿಮಾದ ಹೈಲೈಟ್ಸ್‌ ಅಂದ್ರೆ ಕಥೆ. ಇದೊಂದು ವಿಶೇಷವಾದ ಕಥಾ ಹಂದರದ ಚಿತ್ರ. ಅದರ ಮೇಲೆಯೇ ನಿರ್ದೇಶಕ ಪ್ರಕಾಶ್‌ ಮೇಹು ಅವರಿಗೆ ಅತೀವ ವಿಶ್ವಾಸವಿದೆ. “ಇದು ನನ್ನ ಮೊದಲ ಸಿನಿಮಾ. ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದರಿಂದ ನನ್ನ ಸಿನಿಮಾ ಒಂದೇ ವರ್ಗಕ್ಕಷ್ಟೇ ಸೀಮಿತ ಆಗಬಾರದು ಎಂಬ ನಿಟ್ಟಿನಲ್ಲಿ ಆರ್ಟ್‌ ಅಥವಾ ಕಮರ್ಷಿಯಲ್‌ ಎನ್ನುವ ಯಾವುದೇ ಫಾರ್ಮೆಟ್‌ ಗೆ ಸಿಲುಕಿಸದೆ ಅವುಗಳ ಬ್ರಿಡ್ಜ್‌ ಮೂವೀ ಆಗಿ ತೆರೆಗೆ ತಂದಿದ್ದೇನೆ ಎನ್ನುವುದು ಅವರ ಮೊದಲ ಮಾತು.

ಇನ್ನು ಚಿತ್ರದ ಕಥಾ ಹಂದರದ ಕುರಿತು ಮಾತಿಗಿಳಿದ ಅವರು, ಶೀರ್ಷಿಕೆಯೇ ಹೇಳುವಂತೆ ಇದೊಂದು ಗುರುತಿನ ಕಣದ ಸಿನಿಮಾ. ಸಂಪೂರ್ಣ ಸಂದೇಶದೊಂದಿಗೆ ತಯಾರಾಗಿದೆ ಎಂದರು. ಬಹುಭಾಷೆ ನಟಿ ಎಸ್ಟರ್‌ ನರೋನ್ಹಾ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು. “ನಾನೂ ಕನ್ನಡದಲ್ಲಿ ಸಿನಿಮಾ ಬೇಕು ಅಂತ ತುಂಬಾ ದಿನಗಳಿಂದ ಕಾಯುತ್ತಿದ್ದೆ. ಅದೀಗ ಈ ಚಿತ್ರದ ಮೂಲಕ ಈಡೇರಿದೆ. ಒಂದು ಗಟ್ಟಿ ಕಥೆ ಇಲ್ಲಿದೆ. ಸಂಬಂಧಗಳ ಬಗ್ಗೆ ಸಿನಿಮಾ ಮಾತನಾಡಲಿದೆ. ನಮ್ಮ ನಡುವೆಯೇ ನಡೆಯುವ ಕಥೆ ಆಗಿದೆ ಅಂದರು.

” ನಾನು ಮತ್ತು ನಿರ್ದೇಶಕರು ಒಂದೇ ಶಾಲೆಯಲ್ಲಿ ಓದಿದವರು. ಆದರೆ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಈ ಸಿನಿಮಾ ಮೂಲಕ ಅದು ಸಾಕಾರವಾಗಿದೆ. ಇದು ಸಂಬಂಧಗಳ ಕುರಿತು ಮಾಡಿದ ಸಿನಿಮಾ. ತಂಡಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು ನಟ ಅಚ್ಯುತ್ ಕುಮಾರ್. ಹಾಗೆಯೇ ಈ ಚಿತ್ರದ ಪ್ರಮೋಷನಲ್ ಸಾಂಗ್‌ ಲಾಂಚ್‌ ಮಾಡಿ ಮಾತನಾಡಿದ ಹಿರಿಯ ಸಂಗೀತ ನಿರ್ದೇಶಕ ವಿ ಮನೋಹರ್, ಸಿನಿಮಾ ಮಾಡುವುದು ಈಗಿನ ಕಾಲದಲ್ಲಿ ಕಷ್ಟದ ಕೆಲಸ. ಅದನ್ನು ಡಿಎನ್ಎ ತಂಡ ಮಾಡಿದೆ. ಇಡೀ ತಂಡಕ್ಕೆ ಶುಭವಾಗಲಿ ಎಂದರು.

ಚೇತನ್ ಕೃಷ್ಣ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ನಾಲ್ಕು ಹಾಡು, ಎರಡು ಬಿಟ್ ಚಿತ್ರದಲ್ಲಿವೆ. ರಾಜೇಶ್ ಕೃಷ್ಙ, ಅನುರಾಧಾ ಭಟ್, ಪುಟಾಣಿ ಕೃತಿ ಹಾಡಿದ್ದಾರೆ. ಮತ್ತೊಂದು ಹಾಡನ್ನು ಸಂಗೀತ ನಿರ್ದೇಶಕ ಚೇತನ್‌ ಕೃಷ್ಣ ಅವರೇ ಹಾಡಿದ್ದಾರಂತೆ. ನಿರ್ಮಾಪಕ ಎಂ ಮೈಲಾರಿ ಮಾತನಾಡಿ, ಸಂಪೂರ್ಣ ಕುಟುಂಬ ಕುಳಿತು ನೋಡುವ ಸಿನಿಮಾ ಇದು. ಈಗಾಗಲೇ ಸೆನ್ಸಾರ್ ಮಂಡಳಿಯೂ ಚಿತ್ರವನ್ನು ಮೆಚ್ಚಿ “ಯುʼ ಸರ್ಟಿಫಿಕೇಟ್ ನೀಡಿದೆ. ಇದೇ ತಿಂಗಳ 16ಕ್ಕೆ ಅಥವಾ 30ಕ್ಕೆ ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಿದ್ದೇವು. ಕೊವೀಡ್‌ ಕಾರಣಕ್ಕೆ ಮುಂದಕ್ಕೆ ಹೋಗಲು ಚಿಂತಿಸಿದ್ದೇವೆ ಅಂದ್ರು. ಚಿತ್ರಕ್ಕೆ ಶಿವರಾಜ್‌ ಮೇಹು ಸಂಕಲನ, ರವಿಕುಮಾರ್ ಛಾಯಾಗ್ರಹಣ, ಯೋಹರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

Categories
ಸಿನಿ ಸುದ್ದಿ

ಬಿಗ್‌ಬಾಸ್‌ನಲ್ಲಿ ಗೆಲುವಿನ “ನಿಧಿ” ಹುಡುಕಲು ಹೊರಟ ಚಂದ್ರಚೂಡ್‌; ಆ ಮನೇಲಿ ಇವರಿಗೆ ಸ್ವಾಗತಕ್ಕಿಂತ ವಿರೋಧವೇ ಹೆಚ್ಚಿತ್ತು… !

ಪತ್ರಕರ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರ ಬಂಡವಾಳ ಬಯಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಈಗ ಕಿರುತೆರೆ ವೀಕ್ಷಕರ ಪಾಲಿಗೆ ಚಂದ್ರಚೂಡ್ ಪ್ರಮುಖ ಆಕರ್ಷಣೆ ಆಗಿದ್ದಾರೆ. ಅವರ ಆಟದಿಂದಲೇ ಬಿಗ್ ಬಾಸ್ ಈಗ ಇಂಟರೆಸ್ಟಿಂಗ್ ಆಗಿದೆ. ಕಳೆದ ಎರಡು ದಿನಗಳಿಂದ ಬದಲಾದ ಅವರ ಹೊಸ ವರಸೆ ಕಂಡು ವೀಕ್ಷಕರೇ ಗಾಬರಿ ಆಗಿದ್ದಾರೆ. ಚಂದ್ರ ಚೂಡ್‌ ಅಂದ್ರೆ ಹೀಗೂ ಇದ್ದಾರೆಯೇ? ಹಾಗೊಂದು ಪ್ರಶ್ನೆ ಕಿರಿತೆರೆ ವೀಕ್ಷಕರ ತಲೆಯಲ್ಲಿ ಗಿರಕಿ ಹಾಕುತ್ತಿದೆ. ಅಷ್ಟೇ ಯಾಕೆ, ಬಿಗ್‌ ಬಾಸ್‌ ಕ್ಯಾಮೆರಾಗಳ ಫೋಕಸ್‌ ಕೂಡ ಈಗ ಚಂದ್ರಚೂಡ್‌ ಮೇಲೆಯೇ ಇದೆ. ಇದೆಲ್ಲ ಹೇಗೆ ಸಾಧ್ಯವಾಯಿತು? ಅದೊಂಥರ ಥ್ರಿಲ್‌, ಇನ್ನೊಂದೆಡೆ ಅನುಮಾನ !

ಹೌದು ಮತ್ತೆ, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಬಿಗ್ ಬಾಸ್ ಮನೆಗೆ ಎಂಟ್ರಿ ಆಗುತ್ತಿದ್ದಾರೆಂದಾಗ ಕೇಳಿಬಂದ ಮಾತುಗಳೇ ಬೇರೆ. ಓಹೋ, ಪ್ರಶಾಂತ್‌ ಸಂಬರಗಿ ಅವರಿಗೆ ಇದೇನು ಕೌಂಟರ್‌ ಇರಬಹುದಾ ಅಂತ ಒಂದಷ್ಟು ಮಂದಿ ಸೋಷಲ್‌ ಮೀಡಿಯಾದಲ್ಲಿ ಕೊಂಕು ಕಾಮೆಂಟ್‌ ಹಾಕಿದ್ದರು. ಇನ್ನು ಕೆಲವರು ಕಲರ್ಸ್‌ ಕನ್ನಡದವರಿಗೆ ಬೇರಾರು ಸಿಗಲಿಲ್ಲವೇ ಅಂತ ಹೊಟ್ಟೆ ಉರಿ ತೋಡಿಕೊಂಡಿದ್ದರು. ಹಾಗೆಯೇ ಒಂದಷ್ಟು ಮಂದಿ, ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಆಟ ಇನ್ಮೇಲೆ ಶುರುವಾಗುತ್ತೆ ಅಂತ ಭವಿಷ್ಯ ನುಡಿದಿದ್ದರು. ಅದೇನೋ ಗೊತ್ತಿಲ್ಲ. ಚಂದ್ರ ಚೂಡ್‌ ಈಗ ತಮ್ಮ ವಿರೋಧಿಗಳಿಗೆ ಶಾಕ್‌ ಕೊಟ್ಟಿದ್ದಾರೆ. ಅಸಲಿ ಆಟ ಇನ್ಮೇಲೆ ಶುರುವಾಗುತ್ತೆ ನೋಡಿ ಅಂದವರಿಗೆ ಖುಷಿ ಕೊಟ್ಟಿದ್ದಾರೆನ್ನುವುದು ಸದ್ಯದ ಸುದ್ದಿ.

ರಿಯಲ್‌ ಲೈಫ್‌ ನಲ್ಲಿ ಚಂದ್ರಚೂಡ್‌ ಅಂದ್ರೆ ಒಂದು ವಿಶಿಷ್ಟ ವ್ಯಕ್ತಿತ್ವದ ಮನುಷ್ಯಾಕೃತಿಅನ್ನೋದು ಎಲ್ಲರಿಗೂ ಗೊತ್ತು . ವೃತ್ತಿಯಲ್ಲಿ ಪತ್ರಕರ್ತ ಅಂತ ಗುರುತಿಸಿಕೊಂಡರೂ, ಅವರು ಮಾಡದ ಕೆಲಸ ಇಲ್ಲ. ಎಲ್ಲರಿಗೂ ಗೊತ್ತಿರುವಂತೆ ಅವರೀಗ ಸಿನಿಮಾ ನಿರ್ದೇಶಕ, ಲೇಖಕ, ಬರಹಗಾರರೂ ಹೌದು. ಆದರಾಚೆ ಅವರೊಬ್ಬ ಹೋರಾಟಗಾರ. ನೊಂದ ಜೀವಗಳ ಪರ ಮಿಡಿಯುವ ಮನುಷ್ಯ. ಇದೇ ಕಾರಣಕ್ಕೆ ಅವರು ವಿರೋಧಿಗಳನ್ನು ಸಂಪಾದಿಸಿಕೊಂಡಷ್ಟೇ ಸ್ನೇಹಿತರ ಬಳಗವನ್ನು ಹೊಂದಿದ್ದಾರೆನ್ನುವುದು ವಿಶೇಷ. ಇಷ್ಟಾಗಿಯೂ ಮೇಲ್ನೋಟಕ್ಕೆ ಚಂದ್ರಚೂಡ್‌ ಕೆಲವು ವಿವಾದಗಳಿಂದ ದೊಡ್ಡ ಸುದ್ದಿ ಆಗಿದ್ದು ಎಲ್ಲರಿಗೂ ಗೊತ್ತು. ಹಾಗಾಗಿಯೇ ಚಂದ್ರಚೂಡ್‌ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಗೆ ಎಂಟ್ರಿ ಆಗುತ್ತಿದ್ದಾರೆಂದಾಗ ಅವರನ್ನು ಸ್ವಾಗತಿಸಿದವರಿಗಿಂತ ವಿರೋಧಿಸಿದವರ ಸಂಖ್ಯೆಯೇ ಹೆಚ್ಚಿತ್ತು.

ಪ್ರಶಾಂತ್‌ ಸಂಬರಗಿ ಅವರಿಗೆ ಕೌಂಟರ್‌ ಆಗಿ ಚಂದ್ರಚೂಡ್‌ ಅವರನ್ನು ಕಳುಹಿಸಲಾಗುತ್ತಿದೆ. ಆದರೆ ಸಂಬರಗಿ ಅವರ ವಿರುದ್ಧ ಚಂದ್ರಚೂಡ್‌ ಆಟ ನಡೆಯೋದಿಲ್ಲ. ಅವರು ಎಂಟ್ರಿ ಅದಷ್ಟೇ ವೇಗದಲ್ಲಿ ವಾಪಾಸ್‌ ಬರುವುದು ಗ್ಯಾರಂಟಿ ಅಂತ ಕೆಲವರು ಸೋಷಲ್‌ ಮೀಡಿಯಾದಲ್ಲಿ ಕಾಮೆಂಟ್‌ ಹಾಕಿದ್ದರು. ಮತ್ತೆ ಕೆಲವರು ಮೊದಲ ವಾರವೇ ಚಂದ್ರಚೂಡ್‌ ಔಟ್‌ ಅಂತಲೂ ಭವಿಷ್ಯ ನುಡಿದ್ದರು. ಇವೆಲ್ಲವನ್ನು ಅವರು ಯಾವ ಲೆಕ್ಕಚಾರದಲ್ಲಿ ಹೇಳಿದ್ದರು ಅಂತ ವಿವರಿಸಬೇಕಿಲ್ಲ. ಇದೆಲ್ಲ ಚಂದ್ರಚೂಡ್‌ ವಿರೋಧಿಸುವವರ ಮನಸ್ಥಿತಿ ಆಗಿತ್ತು. ಅದರಾಚೆ ಬಿಗ್‌ ಬಾಸ್‌ ಲೆಕ್ಕಚಾರಗಳೇ ಬೇರೆ ಇರುತ್ತೆ, ಅದು ನಮ್ಮೆಲ್ಲರ ನಿಯಂತ್ರಣದಲ್ಲಿ ಇರೋದಿಲ್ಲ ಅನ್ನುವ ಸತ್ಯ ಅವರಿಗೆ ಬೇಕಾಗಿರಲಿಲ್ಲ. ಬದಲಿಗೆ ಒಂದಷ್ಟು ವಿರೋಧಿಸಬೇಕಿತ್ತು, ವಿರೋಧಿಸಿದರು ಅಷ್ಟೆ. ಅದರಾಚೆ ಇವತ್ತು ಬಿಗ್‌ ಬಾಸ್‌ ಮನೆಯಲ್ಲಿ ಆಗಿದ್ದೇನು ಗೊತ್ತಾ?

ಪ್ರಶಾಂತ್‌ ಹಾಗೂ ಚಂದ್ರಚೂಡ್‌ ಕಾರಣಕ್ಕೆ ಬಿಗ್‌ ಬಾಸ್‌ ಇಂಟರೆಸ್ಟಿಂಗ್‌ ಆಗಿದೆ. ನೋಡೋದಿಕ್ಕೂ ಒಂದಷ್ಟು ಥ್ರಿಲ್‌ ಇದೆ. ಹಾಗಂತ ಈ ಮಾತುಗಳನ್ನು ನಾವು ಹೇಳ್ತಿಲ್ಲ. ಕಲರ್ಸ್‌ ಕನ್ನಡ ಫೇಜ್‌ ನಲ್ಲಿ ವೀಕ್ಷಕರು ಕಾಮೆಂಟ್‌ ಹಾಕಿದ್ದಾರೆ. ಒಂದಲ್ಲ ಎರಡಲ್ಲ ಇಂತಹ ಸಾವಿರಾರು ಕಾಮೆಂಟ್‌ ಇವೆ. ಹಾಗಾದ್ರೆ ಚಂದ್ರಚೂಡ್‌ ವಿರೋಧಿಸಿದವರೆಲ್ಲ ಯಾರು? ಆ ಕತೆ ಬಿಡಿ, ಚಂದ್ರಚೂಡ್‌ ನಿಜಕ್ಕೂ ಗ್ಲಾಮ್‌ ಪ್ಲಾನ್‌ ಮಾಡುತ್ತಿದ್ದಾರೆ. ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾದ ಒಂದೆರೆಡು ದಿನಗಳಲ್ಲಿ ಅವರು ಎಲ್ಲರನ್ನು ಅನುಮಾನಿಸಿಯೇ ನೋಡಿದ್ದರು. ಅಲ್ಲಿದ್ದವರಿಗೂ ಹಾಗೆಯೇ ಇತ್ತೇನೋ, ಅವರು ತಂಟೆಗೆ ಬಹಳಷ್ಟು ಬರಲೇ ಇಲ್ಲ. ಆದರೆ ಈಗ ಫುಲ್‌ ಚೇಂಜ್.‌ ಚಂದ್ರಚೂಡ್‌ ಅವರ ಕಂದ, ಚಿನ್ನ, ರನ್ನ ಎನ್ನುವ ಮಾತುಗಳು ಅಲ್ಲಿ ಸಖತ್‌ ವರ್ಕೌಟ್‌ ಆಗಿವೆ. ಬಹುತೇಕರು ಅವರು ಹೇಳಿದಂತೆ ಕೇಳುತ್ತಿದ್ದಾರೆ. ತಾನೇ ಕಿಂಗ್‌ ಎನ್ನುತ್ತಿದ್ದ ಪಾವಗಡ ಮಂಜು ಕೂಡ ಡರ್‌ ಆಗಿದ್ದಾರೆ. ಪ್ರಶಾಂತ್‌ ಸಂಬರಗಿ ಬಾಲ ಮುದುಡಿಕೊಂಡಿದ್ದಾರೆ. ಅಷ್ಟೊಂದು ಹವಾ ಎಬ್ಬಿಸಿರುವ ಚಂದ್ರಚೂಡ್‌ ಸಾಮಾನ್ಯರೇನಲ್ಲ, ಬಿಗ್‌ ಬಾಸ್‌ ಮನೆಯ ಆಳಕ್ಕೆ ಇಳಿದು ʼನಿಧಿʼ ಹುಡುಕುವ ಕಿರಾತಕ ಅವರು. ಅಂತಹದೊಂದು ಆಟ ಈಗ ಬಿಗ್‌ ಬಾಸ್‌ ನಲ್ಲಿ ಶುರುವಾಗಿದೆ. ನೋಡ್ಬೇಕು ಇದು ಎಷ್ಟು ದಿನ ಅಂತ. ಒಟ್ಟಿನಲ್ಲೀಗ ಚಂದ್ರಚೂಡ್‌ ಬಿಗ್‌ ಬಾಸ್‌ ಮನೆಯ ಪ್ರಮುಖ ಆಕರ್ಷಣೆಯ ಆಟಗಾರ ಅನ್ನೋದೇ ವಿಶೇಷ.

Categories
ಸಿನಿ ಸುದ್ದಿ

ವೀಲ್‌ ಚೇರ್‌ ರೋಮಿಯೋ ಮೋಷನ್‌ ಪೋಸ್ಟರ್‌ ಔಟ್-ನಾಡಿದ್ದು ಟ್ರೇಲರ್‌ ಲಾಂಚ್‌

ಜಿ.ನಟರಾಜ ನಿರ್ದೇಶನದ “ವೀಲ್‌ಚೇರ್‌ʼ ರೋಮಿಯೋ ಚಿತ್ರದ ಮೋಷನ್‌ ಪೋಸ್ಟರ್‌ ಲಾಂಚ್‌ ಆಗಿದೆ. ಚಿತ್ರದಲ್ಲಿರುವ ರಾಮ್‌ ಚೇತನ್‌, ರಂಗಾಯಣ ರಘು, ಸುಚೇಂದ್ರ ಪ್ರಸಾದ್‌, ದಪ್ಪ ಗಿರಿ, ಮಯೂರಿ ಪಾತ್ರಗಳ ಲುಕ್‌ ಅನ್ನು ಚಿತ್ರ ತಂಡ ಮೋಷನ್‌ ಪೋಸ್ಟರ್‌ ನಲ್ಲಿ ರಿವೀಲ್‌ ಮಾಡಿದೆ. ಹೆಸರೇ ಹೇಳುವ ಹಾಗೆ ಇದೊಂದು ಹಾಸ್ಯ ಪ್ರಧಾನ ಚಿತ್ರ. ಹಾಸ್ಯ ಜತೆಗೆ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ನೀಡುವ ಕಥಾ ಹಂದರ ಮೂಲಕ ಈ ಚಿತ್ರ ರೆಡಿಯಾಗಿ, ರಿಲೀಸ್‌ ಗೆ ಸಿದ್ಧತೆ ನಡೆಸಿದೆ. ನಿರ್ದೇಶಕ ನಟರಾಜ್‌ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಟಿ. ವೆಂಕಟಾಚಲಯ್ಯ ಹಾಗೂ ಭಾರತಿ ವೆಂಕಟೇಶ್‌ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದು, ಚಿತ್ರ ಅದ್ದೂರಿಯಾಗಿಯೇ ತೆರೆಗೆ ಬಂದಿದೆ.

ಈ ಚಿತ್ರದ ಬಗ್ಗೆ ಕುತೂಹಲ ಇರೋದು ಚಿತ್ರದ ನಿರ್ದೇಶಕ ಜಿ.ನಟರಾಜ್‌ ಅವರ ನಿರ್ದೇಶನದ ಮೇಲೆ. ಈಗಾಗಲೇ ನಟರಾಜ್‌ ಹಲವು ಸ್ಟಾರ್‌ ಚಿತ್ರಗಳಿಗೆವ ಸಂಭಾಷಣೆ ಬರೆದಿದ್ದಾರೆ. ಅವರ ಸಂಭಾಷಣೆಗೆ ಅಪಾರ ಮೆಚ್ಚಗೆಯೂ ಸಿಕ್ಕಿದೆ. ಅದೇ ಅನುಭವದಲ್ಲೀಗ ತಾವೇ ಒಂದು ಕಥೆ, ಚಿತ್ರಕಥೆ ಬರೆದು ಚಿತ್ರ ನಿರ್ದೇಶನ ಮಾಡಿರೋದು ವಿಶೇಷ. ಹಾಗೆಯೇ ಚಿತ್ರಕ್ಕೆ ಬಿ.ಜೆ. ಭರತ್‌ ಸಂಗೀತ ನೀಡಿದ್ದಾರೆ. ಸಂತೋಷ್‌ ಛಾಯಾಗ್ರಹಣವಿದೆ.ಕಿರಣ್‌ ಸಂಕಲನ ಮಾಡಿದ್ದಾರೆ. ಗುರುಪ್ರಸಾದ್‌ ಸಂಭಾಷಣೆ ಬರೆದಿದ್ದಾರೆ. ಮೋಷನ್‌ ಪೋಸ್ಟರ್‌ ಬೆನ್ನಲೇ ಚಿತ್ರ ತಂಡ ಚಿತ್ರದ ಟ್ರೇಲರ್‌ ಲಾಂಚ್‌ ಮಾಡಲು ತಯಾರಾಗಿದೆ.ಬಹುತೇಕ ಇದೇ ಗುರುವಾರ ಈ ಚಿತ್ರದ ಟ್ರೇಲರ್‌ ಲಾಂಚ್‌ ಆಗುವುದು ಗ್ಯಾರಂಟಿ ಆಗಿದೆ. ಟ್ರೇಲರ್‌ ಹೇಗಿರುತ್ತೆ ಅನ್ನೋದು ಈಗ ಕುತೂಹಲ.

Categories
ಸಿನಿ ಸುದ್ದಿ

ಸಂತೋಷ್‌ ಚಿತ್ರಮಂದಿರದಲ್ಲಿ ರಾಬರ್ಟ್‌ !


ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಸಂತೋಷ್‌ ಚಿತ್ರಮಂದಿರದಿಂದ “ರಾಬರ್ಟ್‌ʼ ಚಿತ್ರ ಎತ್ತಂಗಡಿ ಆಗುತ್ತೆ ಎನ್ನುವ ರೂಮರ್ಸ್‌ ಗೆ ನಿರ್ಮಾಪಕ ಉಮಾಪತಿ ಎಸ್‌ ಗೌಡ ಸ್ಪಷ್ಟನೆ ನೀಡಿದ್ದಾರೆ. ಇನ್ನಷ್ಟು ದಿನಗಳ ಕಾಲ ʼರಾಬರ್ಟ್ʼ‌ ಚಿತ್ರ ಸಂತೋಷ್‌ ಚಿತ್ರಮಂದಿರದಲ್ಲಿ ಇರಲಿದೆ ಅಂತ ಟ್ವೀಟ್‌ ಮಾಡಿದ್ದಾರೆ. ಇಷ್ಟಕ್ಕೂ ಅವರು ಈ ಹೇಳಿಕೆ ನೀಡುವುದಕ್ಕೆ ಕಾರಣ ಏನು ಗೊತ್ತಾ? ಈ ವಾರ ಪರಭಾಷೆಯ ಕೆಲವು ಸಿನಿಮಾಗಳು ತೆರೆ ಕಾಣುತ್ತಿವೆ. ಅದಕ್ಕಾಗಿ ಸಂತೋಷ್‌ ಚಿತ್ರಮಂದಿರದಿಂದ ರಾಬರ್ಟ್‌ ಚಿತ್ರವನ್ನು ಎತ್ತಲಾಗುತ್ತಿದೆ ಎನ್ನುವ ಸುದ್ದಿಗಳಿದ್ದವು. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಊಮಾಪತಿ ಗೌಡ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.

Categories
ಸಿನಿ ಸುದ್ದಿ

ಎರಡನೇ ಹಂತ ಯಶಸ್ವಿಯಾಗಿ ಮುಗಿಸಿದ ರೂಮ್‌ಬಾಯ್‌; ಬಿಡುಗಡೆ ಮುನ್ನವೇ ಬೇಡಿಕೆ ಹೆಚ್ಚಿಸಿಕೊಂಡ ಹೊಸಬರು!

ಕನ್ನಡದಲ್ಲಿ “ರೂಮ್‌ ಬಾಯ್”‌ ಸಿನಿಮಾ ಶುರುವಾಗಿದ್ದು ಗೊತ್ತೇ ಇದೆ. ಆ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆದು ಈಗ ಎರಡನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಇನ್ನೂ ಮೂರನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿರುವ ಚಿತ್ರತಂಡ, ಸಾಕಷ್ಟು ಉತ್ಸಾಹದಲ್ಲೇ ಕೆಲಸ ಮಾಡುತ್ತಿದೆ. ಅದಕ್ಕೆ ಕಾರಣ, ಸಿನಿಮಾ ಕಂಪ್ಲೀಟ್‌ ಆಗುವ ಮೊದಲೇ ಒಂದಷ್ಟು ಮಂದಿ ಪರಭಾಷೆ ಡಬ್ಬಿಂಗ್‌ ರೈಟ್ಸ್‌ ಕೇಳುತ್ತಿರುವುದು.

ಆ ಕುರಿತು ಮಾತುಕತೆ ನಡೆಸುತ್ತಿರುವ ಚಿತ್ರತಂಡ, ಕಂಪ್ಲೀಟ್‌ ಮಾಡಿದ ಬಳಿಕ ಆ ಬಗ್ಗೆ ಯೋಚಿಸುವ ಮಾತನಾಡುತ್ತಿದೆ. ಇನ್ನು, ಈಗಾಗಲೇ ಶೇ.೮೦ ರಷ್ಟು ಚಿತ್ರೀಕರಣ ಮುಗಿಸಿದೆ. ಲಿಖಿತ್‌ ಸೂರ್ಯ ಇಲ್ಲಿ ಹೀರೋ ಅಷ್ಟೇ ಅಲ್ಲ, ನಿರ್ಮಾಪಕರೂ ಹೌದು. ತಮ್ಮ “ಐ ಕ್ಯಾನ್”‌ ಪ್ರೊಡಕ್ಷನ್‌ನಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು ಈ ಚಿತ್ರವನ್ನು ರವಿ ನಾಗಡದಿನ್ನಿ ನಿರ್ದೇಶನ ಮಾಡುತ್ತಿದ್ದಾರೆ.

ಲಿಖಿತ್‌ ಸೂರ್ಯ ಅವರಿಗೆ “ರೂಮ್‌ ಬಾಯ್‌” ನಾಲ್ಕನೇ ಚಿತ್ರ. ಈ ಹಿಂದೆ “ಲೈಫ್‌ ಸೂಪರ್‌ʼ, ʼಆಪರೇಷನ್‌ ನಕ್ಷತ್ರʼ ಹಾಗೂ ತೆಲುಗಿನ “ರಾಮಾಪುರಂ” ಹೆಸರಿನ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ಅವರೀಗ “ರೂಮ್‌ ಬಾಯ್‌” ಎಂಬ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳೋಕೆ ರೆಡಿಯಾಗಿದ್ದಾರೆ ಎಂಬುದು ವಿಶೇಷ.

ತಾರಾಗಣದಲ್ಲಿ ಲಿಖಿತ್‌ ಅವರ ಜೊತೆಗೆ ಯಶ್‌ ಶೆಟ್ಟಿ, ವರ್ಧನ್‌ ತೀರ್ಥಹಳ್ಳಿ, ವಜ್ರಾಂಗ್ ಶೆಟ್ಟಿ ಹಾಗೂ ರೋಶನ್‌ ಕೊಡಗು ಸೇರಿದಂತೆ ನಾಯಕಿ ರಕ್ಷಾ, ಪದ್ಮಿನಿ, ಚಂದನಾ, ಪ್ರಗ್ಯಾ ಹಾಗೂ ಜನನಿ, ರಜನಿ, ಭಾನುಪ್ರಕಾಶ್ ಅಭಿನಯಿಸಿದ್ದಾರೆ. ವಿಶೇಷವಾಗಿ ಇಲ್ಲಿ ರಘುಶಿವಮೊಗ್ಗ ಅವರು ಕೂಡ ಸ್ಪೆಷಲ್‌ ಪಾತ್ರದ ಮೂಲಕ ಎಂಟ್ರಿಯಾಗಿದ್ದಾರೆ.

ಐವರು ನಾಯಕರು ಹಾಗೂ ಅಷ್ಟೇ ಸಂಖ್ಯೆಯ ನಾಯಕಿಯರ ಸುತ್ತ ನಡೆಯುವ ಒಂದೊಳ್ಳೆಯ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಇಲ್ಲಿದೆ. ಇನ್ನು, ಯುವ ಪ್ರತಿಭೆ ರವಿ ನಾಗಡದಿನ್ನಿ ನಿರ್ದೇಶಿಸುತ್ತಿದ್ದು, ಇವರಿಗೆ ಇದು ಮೊದಲ ಚಿತ್ರ. ಸಿನಿಮಾ ಮೇಲಿನ ಪ್ರೀತಿ ಮತ್ತು ಆಸಕ್ತಿಯಿಂದಾಗಿ ಎಂಜಿನಿಯರ್‌ ವೃತ್ತಿ ಬಿಟ್ಟು ಬಂದು ನಿರ್ದೇಶಕರಾಗಿದ್ದಾರೆ.

ಹಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದು, ನಿರ್ದೇಶನದ ಪಟ್ಟು ಕಲಿತುಕೊಂಡು ಈಗ ತಾವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ನಾಯಕ ನಟ ಲಿಖಿತ್‌ ಅವರಿಗೂ ಇಂತಹದೇ ವೃತ್ತಿ ಬದುಕಿನ ಹಿನ್ನೆಲೆ ಇದೆ. ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ವಿದೇಶಕ್ಕೆ ಹಾರಿ, ಕೈ ತುಂಬಾ ಸಂಪಾದನೆ ಮಾಡಿಕೊಂಡಿದ್ದ ಲಿಖಿತ್‌ ಈಗ ನಟ ಆಗಿದ್ದು ಕೂಡ ಸಿನಿಮಾದ ಮೇಲಿನ ಪ್ರೀತಿಗಾಗಿಯೇ. ಇವರಿಬ್ಬರು ಹಣ ಮಾಡುವುದಕ್ಕಾಗಿ ಸಿನಿಮಾ ಜಗತ್ತಿಗೆ ಬಂದವರಲ್ಲ ಎನ್ನುವುದನ್ನು ಅವರ ವೃತ್ತಿಯ ಹಿನ್ನೆಲೆಯೇ ಹೇಳುತ್ತೆ. ಒಟ್ಟಿನಲ್ಲಿ ಈ ಜೋಡಿ ಸಿನಿಮಾ ಮೇಲಿನ ಪ್ರೀತಿ, ಕಾಳಜಿ, ಮೋಹಕ್ಕಾಗಿಯೇ ಒಂದಾಗಿ ಈಗ “ರೂಮ್‌ ಬಾಯ್‌” ಚಿತ್ರ ಶುರು ಮಾಡಿ ಯಶಸ್ವಿಯಾಗಿ ಎರಡನೇ ಹಂತವನ್ನು ಮುಗಿಸಿದೆ.

ಇನ್ನು, “ರೂಮ್‌ ಬಾಯ್‌” ಚಿತ್ರಕ್ಕೆ ಕಿರಣ ಕುಮಾರ್‌ ಸಂಕಲನವಿದೆ. ಧನ್‌ ಪಾಲ್‌ ಅವರು ಕ್ಯಾಮೆರಾ ಹಿಡಿದಿದ್ದಾರೆ. ರೋಣದ ಬಕ್ಕೇಶ್‌ ಸಂಗೀತವಿದೆ. ಈಗಾಗಲೇ ನಂದಿಬೆಟ್ಟ ಬಳಿಯ ರೆಸಾರ್ಟ್‌ ಸೇರಿದಂತೆ ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಹಾಗೂ ವಿಶೇಷ ಮನೆಯಲ್ಲಿ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿದೆ. “ರೂಮ್‌ ಬಾಯ್‌” ಅಂದಾಕ್ಷಣ ಹಲವರಿಗೆ ಒಂದೊಂದು ನೆನಪಾಗುತ್ತೆ.

ಇಲ್ಲಿ ಟೈಟಲ್‌ ಎಷ್ಟು ವಿಭಿನ್ನ ಎನಿಸುತ್ತೋ, ಅಷ್ಟೇ ವಿಭಿನ್ನವಾಗಿಯೇ ಕಥೆ ಹೆಣೆದು ಸಿನಿಮಾ ಮಾಡಲು ಹೊರಟಿದೆ ಚಿತ್ರತಂಡ. ” ಇದೊಂದು ಸೈಕಾಲಜಿಕಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಸಾಮಾನ್ಯವಾಗಿ ರೂಮ್‌ ಬಾಯ್‌ ಅಂದ್ರೆ ಒಂದು ಹೊಟೇಲ್‌ ಅಥವಾ ರೆಸಾರ್ಟ್‌ ನಲ್ಲಿ ನಡೆಯುವ ಕತೆ ಎನ್ನುವುದು ಎಲ್ಲರಿಗೂ ಗೊತ್ತಾಗುವ ವಿಚಾರ. ಇಷ್ಟಾದರೂ ರೆಸಾರ್ಟ್‌ನಲ್ಲಿ ಒಂದು ಘಟನೆ ನಡೆಯುತ್ತೆ. ಅದೇನು ಅನ್ನೋದು ಸಸ್ಪೆನ್ಸ್.‌

Categories
ಸಿನಿ ಸುದ್ದಿ

ಹೊಸಬರ ಬ್ರೇಕ್‌ ಫೇಲ್ಯೂರ್‌;‌ ಮತ್ತೊಂದು ಹಾರರ್‌ ಸಿನಿಮಾ ರೆಡಿ

ಕನ್ನಡದಲ್ಲಿ ಹಾರರ್‌ ಸಿನಿಮಾಗಳಿಗೇನೂ ಕೊರತೆ ಇಲ್ಲ. ಅದರಲ್ಲೂ ಇಲ್ಲಿ ಹೊಸಬರೇ ಹಾರರ್‌ ಅಂಶಗಳೊಂದಿಗೆ ಬರುತ್ತಿದ್ದಾರೆ. ಅಂತಹವರ ಸಾಲಿಗೆ ಈಗ “ಬ್ರೇಕ್‌ ಫೇಲ್ಯೂರ್‌” ಸಿನಿಮಾ ಕೂಡ ಸೇರಿದೆ. ಹೌದು, ಇದು ಬಹುತೇಕ ಹೊಸಬರ ಚಿತ್ರ. ರಾಣಿಗಜ್ ಪ್ರೊಡಕ್ಷನ್ಸ್ ಮೂಲಕ ತಯಾರಾಗಿರುವ “ಬ್ರೇಕ್ ಫೇಲ್ಯೂರ್”‌ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡಿವೆ.

ಸಾಮಾನ್ಯವಾಗಿ ಹಾರರ್‌ ಚಿತ್ರಗಳಲ್ಲಿ ಒಂದು ಅಂಶ ಮಾಮೂಲಾಗಿರುತ್ತೆ. ಹುಡುಗರ ತಂಡವೊಂದು ಭಯಾನಕ ಕಾಡಿಗೆ ಹೋಗೋದು, ಅಲ್ಲಿ ಒಬ್ಬೊಬ್ಬರೇ ನಾಪತ್ತೆಯಾಗೋದು ಸಹಜ. ಅಲ್ಲಿ ಕಾಣದ ಕೈಯೊಂದು ಕೆಲಸ ಮಾಡುತ್ತೆ ಅನ್ನುವ ಸೂಚನೆ ಕೂಡ ಸಿಗುತ್ತಾ ಹೋಗುತ್ತೆ. ಇಂತಹ ಅಂಶವಿರುವ ಚಿತ್ರ “ಬ್ರೇಕ್‌ ಫೇಲ್ಯೂರ್‌”. ಬದುಕಿನ ದಾರಿಯಲ್ಲಿ ಭವಿಷ್ಯ ಎಂಬ ಬ್ರೇಕ್‌ ಫೇಲ್ಯೂರ್‌ ಆದಾಗ ಏನೆಲ್ಲಾ ಆಗಿಬಿಡುತ್ತೆ ಎಂಬ ಅಂಶಗಳೊಂದಿಗೆ ಚಿತ್ರ ಸಾಗುತ್ತದೆ.

ಚಿತ್ರದುದ್ದಕ್ಕೂ ಕುತೂಹಲ ಸಾರವಿದೆ. ಪ್ರತಿ ದೃಶ್ಯದಲ್ಲೂ ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳಿವೆ. ಬೆಚ್ಚಿ ಬೀಳಿಸುವ ಮುಖಗಳೂ ಇಲ್ಲುಂಟು. ಮುಖ್ಯವಾಗಿ, ಕಾಡು ಮೇಡು ಅಲೆಯುವ ತಂಡದ ಶ್ರಮ ವೀಡಿಯೋ ಸಾಂಗ್‌ನಲ್ಲಿ ನೋಡಬಹುದು. ಅದಿತ್ ನವೀನ್ ನಿರ್ದೇಶಕರು. ಅವರು ನಿರ್ದೇಶನದ ಜೊತೆಯಲ್ಲಿ ತೆರೆ ಮೇಲೂ ನಟಿಸಿದ್ದಾರೆ. ಅಬ್ದುಲ್ ಗಣಿ ತಾಳಿಕೋಟೆ ಅವರು ನಿರ್ಮಾಪಕರು. ಅವರ ಪ್ರಕಾರ ಹಣ ಇದ್ದಾಕ್ಷಣ ಸಿನಿಮಾ ಆಗೋದಿಲ್ಲ. ಒಗ್ಗಟ್ಟು, ಪ್ರೀತಿ, ಶ್ರಮ ಇದ್ದರೆ ಮಾತ್ರ ಒಂದೊಳ್ಳೆಯ ಚಿತ್ರ ಆಗುತ್ತೆ. ಅದು ಇಲ್ಲಾಗಿದೆ. ಸಣ್ಣ ಬಜೆಟ್‌ನಲ್ಲೇ ಅಚ್ಚುಕಟ್ಟಾದ ಚಿತ್ರ ಮಾಡಿದ್ದಾಗಿ ಹೇಳುತ್ತಾರೆ ಅವರು.

ಇಡೀ ಚಿತ್ರತಂಡ ಕಾಡು ಮನುಷ್ಯರಂತೆ ಕಾಡು ಅಲೆದು ಶ್ರಮಿಸಿದ್ದಾರೆ. ಬಹುತೇಕ ದಾಂಡೇಲಿ ಸುತ್ತಮುತ್ತಲ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ‌. ಮುಖ್ಯವಾಗಿ ನೀರಿಲ್ಲದೆ ಅಂತಹ ಕಾಡಿನಲ್ಲಿ ಬದುಕೋದೆ ಕಷ್ಟ ಅನ್ನೋದನ್ನು ತಿಳಿದು ಕೊಂಡೆವು‌. ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಮಾಡುವ ಯೋಚನೆಯಿದೆ ಎನ್ನುತ್ತಾರೆ ಹೀರೋ ಅದಿತ್ ನವೀನ್. ಉಗ್ರಂ ರವಿ ಕೂಡ ಈ ವೇಳೆ ಮಾತನಾಡಿ, “ಕಾಡಲ್ಲಿ ಚಿತ್ರೀಕರಣ ಮಾಡುವ ಸಂದರ್ಭ ತುಂಬಾನೇ ಭಯವಾಗುತ್ತಿತ್ತು. ಕಾರಣ, ಕಾಡು ಪ್ರಾಣಿಗಳು ರಾತ್ರಿ ವೇಳೆ ನೀರು ಕುಡಿಯಲು ಬರುತ್ತಿದ್ದವು. ಅದನ್ನು ಕಂಡು ಭಯವಾಗಿದ್ದು ನಿಜ. ಒಟ್ಟಾರೆ ಒಳ್ಳೆಯ ಸಿನಿಮಾ ಮಾಡಿದ್ದೇವೆʼ ಎಂಬುದು ಉಗ್ರಂ ರವಿ ಮಾತು.

Categories
ಸಿನಿ ಸುದ್ದಿ

ತಮಿಳುನಾಡು ಚುನಾವಣಾ ಪ್ರಚಾರದಲ್ಲಿ ಲಹರಿ ವೇಲು !

ರಾಜಕೀಯಕ್ಕೂ ಸಿನಿಮಾಕ್ಕೂ ಅತೀವ ನಂಟು. ಕನ್ನಡಕ್ಕಿಂತ ತಮಿಳುನಾಡಿನಲ್ಲಿ ಇದು ಇನ್ನಷ್ಟು ಜಾಸ್ತಿ ಅನ್ನೋದನ್ನು ವಿವರಿಸಿ ಹೇಳಬೇಕಿಲ್ಲ. ಅಲ್ಲೀಗ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಕೂಡ ಚುನಾವಣಾ ಪ್ರಚಾರದ ಅಬ್ಬರ ಆರಂಭಿಸಿದ್ದಾರೆ. ಹೌದು, ಲಹರಿ ವೇಲು ಅವರೀಗ ತಮಿಳುನಾಡು ಚುನಾವಣಾ ಪ್ರಚಾರದಲ್ಲಿದ್ದಾರೆ. ಮಧುರೈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ವೇಲು ಅವರಿಗೆ ಉಸ್ತುವಾರಿಯ ಜವಾಬ್ದಾರಿ ನೀಡಿದೆ. ಅಲ್ಲಿನ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಅವರು ಪಣ ತೊಟ್ಟಿದ್ದಾರಂತೆ. ” ಚುನಾವಣೆ ಘೋಷಣೆಯಾದ ನಂತರದ ದಿನಗಳಲ್ಲಿ ಪಕ್ಷವು ನನಗೆ ಈ ಜವಾಬ್ದಾರಿ ನೀಡಿದೆ. ಪಕ್ಷದ ಉಸ್ತುವಾರಿ ಸಿ.ಟಿ. ರವಿ ಅವರು ನನ್ನನ್ನು ಗುರುತಿಸಿ ಈ ಕೆಲಸ ನೀಡಿದ್ದಾರೆ. ನಾನಂತೂ ಇದನ್ನು ತುಂಬಾ ಖುಷಿಯಿಂದಲೇ ವಹಿಸಿಕೊಂಡಿದ್ದೇನೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬಂದಾಗ ಅವರ ಬದ್ಧತೆಕಂಡು ಖುಷಿ ಆಯಿತುʼ ಅಂತ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಸಿನಿ ಲಹರಿಗೆ ಪ್ರತಿಕ್ರಿಯಿಸಿದರು.

ದೊಡ್ಡ ಜನಪ್ರಿಯತೆಯ ನಡುವೆಯೂ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಅವರು ರಾಜಕೀಯದಿಂದ ತುಂಬಾನೆ ದೂರ ಇದ್ದವರು. ಆದರೆ ಈಗ ಅವರಿಗೂ ರಾಜಕಾರಣ ಬೇಕಾಗಿದೆ. ಅದಕ್ಕಂತಲೇ ಕಳೆದ ವಿಧಾನ ಸಭಾ ಚುನಾವಣೆ ಹೊತ್ತಿಗೆ ತಮ್ಮ ಮೂಲ ನೆಲೆ ಬೆಂಗಳೂರಿನ ಚಾಲರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆನ್ನುವ ಸುದ್ದಿ ಜೋರಾಗಿತ್ತು. ಕೊನೆಗದು ಏನಾಯ್ತೋ ಗೊತ್ತಿಲ್ಲ, ವೇಲು ಅವರಿಗೆ ಟಿಕೆಟ್‌ ಕೈ ತಪ್ಪಿತು. ಆದರೂ ಅವರ ರಾಜಕೀಯದಿಂದ ಹೊರ ಬರಲಿಲ್ಲ. ಟಿಕೆಟ್‌ ಸಿಗಲಿಲ್ಲ ಅಂತ ಬೇಸರ ಪಡದೆ, ಬಿಜೆಪಿಯ ಕಾರ್ತಕರ್ತರಾಗಿಯೇ ಉಳಿದುಕೊಂಡಿದ್ದರು. ಈಗ ಅದಕ್ಕೆ ಫಲ ಸಿಕ್ಕಿದೆ. ತಮಿಳುನಾಡು ಚುನಾವಣೆಯಲ್ಲಿ ಲಹರಿ ವೇಲು ಸಕ್ರಿಯವಾಗಿ ಪಾಲ್ಗೊಂಡಿದ್ದು, ಚುನಾವಣೆ ಮುಗಿದ ನಂತರವೇ ಬೆಂಗಳೂರಿಗೆ ವಾಪಾಸ್‌ ಆಗುವುದು ಅಂತಿದ್ದಾರೆ ಲಹರಿ ವೇಲು.

error: Content is protected !!