ಕರುನಾಡ ಚಕ್ರವರ್ತಿಗೆ ಅಭಿನಯ ಚಕ್ರವರ್ತಿ ಫಸ್ಟ್‌ ಕ್ಲಾಪ್;‌ ಶಿವಣ್ಣ ಹೊಸ ಚಿತ್ರ ಶುರು…

ಒಬ್ಬರು ಕರುನಾಡ ಚಕ್ರವರ್ತಿ ಇನ್ನೊಬ್ಬರು ಅಭಿನಯ ಚಕ್ರವರ್ತಿ. ಗಂಧದಗುಡಿಯ ಈ ಇಬ್ಬರು ಚಕ್ರವರ್ತಿಗಳು ಮಂಗಳವಾರ ಬೆಳಗ್ಗೆ ೮ ಗಂಟೆ ಸುಮಾರಿಗೆ ಐಷರಾಮಿ ಹೋಟೆಲ್‌ನಲ್ಲಿ ಕ್ಯಾಮೆರಾಗೆ ಸೆರೆ ಸಿಕ್ಕರು. ಇಬ್ಬರು ಚಕ್ರವರ್ತಿಗಳನ್ನು ಒಂದೇ ಫ್ರೇಮ್‌ನಲ್ಲಿ ನೋಡಿ ಅವರಿಬ್ಬರ ಫ್ಯಾನ್ಸ್ ಮಾತ್ರವಲ್ಲ ಕ್ಯಾಮೆರಾ ಕೂಡ ಖುಷಿಪಡ್ತು. ಈ ಖುಷಿ ಹಾಗೂ ಸಂಭ್ರಮಕ್ಕೆ ಕಾರಣವಾಗಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ `ನೀ ಸಿಗೋವರೆಗೂ’ ಸಿನಿಮಾ.

ಸೆಂಚುರಿಸ್ಟಾರ್ ಅಭಿನಯದ ೧೨೪ನೇ ಚಿತ್ರವಾದ `ನೀ ಸಿಗೋವರೆಗೂ’ ಸಿನಿಮಾ ಮುಹೂರ್ತ ನೆರವೇರಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಫಸ್ಟ್ ಕ್ಲ್ಯಾಪ್ ಮಾಡಿ ಶಿವಣ್ಣನ ನಯಾ ಚಿತ್ರಕ್ಕೆ ಸುದೀಪ್ ಶುಭ ಕೋರಿದರು 124 ಸಿನಿಮಾ ಮಾಡೋದು ತಮಾಷೆಯ ಮಾತಲ್ಲ ಇಂಡಸ್ಟ್ರಿಗೆ ಬಂದು 35 ವರ್ಷದಲ್ಲಿ 124 ಸಿನಿಮಾ ಮಾಡಿ ಮುನ್ನುಗುತ್ತಿದ್ದಾರೆ ಅಂದರೆ, ಸಿನಿಮಾ ಮೇಲೆ ಅವರಿಗಿರುವ ಪ್ರೀತಿ-ಭಕ್ತಿ ಹಾಗೂ ಶ್ರದ್ದೆಯನ್ನು ತೋರಿಸುತ್ತೆ ಎಂದರು. ತಮ್ಮ ಕರಿಯರ್ ಆರಂಭದ ದಿನಗಳನ್ನು ಮೆಲುಕು ಹಾಕಿದ ಕಿಚ್ಚ, ನನ್ನ ಬಹುತೇಕ ಸಿನಿಮಾಗಳಿಗೆ ಶಿವಣ್ಣ ಫಸ್ಟ್ ಕ್ಲಾಪ್ ಮಾಡಿ ತುಂಬು ಹೃದಯದಿಂದ ಹಾರೈಸಿದ್ದಾರೆ ಹೀಗಾಗಿ ನನ್ನ ಸಿನಿ ಜರ್ನಿಯಲ್ಲಿ ಕರುನಾಡ ಚಕ್ರವರ್ತಿಯ ಪಾತ್ರ ಬಹಳಷ್ಟಿದೆ ಎಂದರು. ಶಿವಣ್ಣನಿಗೋಸ್ಕರ ಡೈರೆಕ್ಟರ್ಸ್ ಈಗಲೂ ಲವ್‌ಸ್ಟೋರಿ ಕಥೆಗಳನ್ನು ರಚಿಸುತ್ತಾರೆ ಆದರೆ ನಮಗ್ಯಾಕೆ ಲವ್‌ಸ್ಟೋರಿ ಕಾನ್ಸೆಪ್ಟ್ ಗಳನ್ನು ನಿರ್ದೇಶಕರು ಮಾಡ್ತಿಲ್ಲವೋ ಏನೋ? ನನಗೆ ಈ ವಿಚಾರದಲ್ಲಿ ಬೇಸರ ಇದೆ ಅಂತ ಮೀಸೆ ಮರೆಯಲ್ಲಿ ನಗುತ್ತಾ ಕಿಚ್ಚ ಹಾಸ್ಯ ಚಟಾಕಿ ಹಾರಿಸಿದರು.

ಸ್ಯಾಂಡಲ್‌ವುಡ್‌ನ ಚಿರ ಯುವಕ ಶಿವಣ್ಣ ೫೯ರಲ್ಲೂ ಯಂಗ್ ಅಂಡ್ ಎನರ್ಜಿಟಿಕ್. ಇವತ್ತಿನ ಹೀರೋಗಳಿಗೆ ಸೆಡ್ಡು ಹೊಡೆಯುವ ಹ್ಯಾಟ್ರಿಕ್ ಹೀರೋ ಮತ್ತೆ ಲವ್ವರ್ ಬಾಯ್ ಆಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. 124ನೇ ಚಿತ್ರ `ನೀ ಸಿಗೋವರೆಗೂ’ ಮೂವೀಯಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಮೆರೆಯಲಿದ್ದು ಟಿಟೌನ್ ಬ್ಯೂಟಿ ಮೆಹ್ರೀನ್ ಫಿರ್ಜಾದಾ ಸೆಂಚುರಿ ಸ್ಟಾರ್‌ಗೆ ಜೋಡಿಯಾಗ್ತಿದ್ದಾರೆ. ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಡ್ಬೇಕು, ಕನ್ನಡದಲ್ಲೊಂದು ಸಿನಿಮಾ ಮಾಡ್ಬೇಕು ಅಂತ ಕನಸು ಕಂಡಿದ್ದ ಮೆಹ್ರೀನ್‌ಗೆ, ದೊಡ್ಮನೆ ಸೂಪರ್‌ಸ್ಟಾರ್ ಜೊತೆ ಅಭಿನಯಿಸೋ ಚಾನ್ಸ್ ಸಿಕ್ಕಿದೆ. ಹೀಗಾಗಿ ಮೆಹ್ರೀನ್ ಫುಲ್ ಎಕ್ಸೈಟ್ ಆಗಿದ್ದಾರೆ. ಡೆಬ್ಯೂ ಚಿತ್ರದ ಬಗ್ಗೆ ನೂರೆಂಟು ಕನಸು ಕಂಡಿದ್ದಾರೆ.

ಕರುನಾಡ ಚಕ್ರವರ್ತಿಗೆ ಇದೇ ಮೊದಲ ಭಾರಿಗೆ ರವಿ ಧುಲಿಪುಡಿ ಆಕ್ಷನ್ ಕಟ್ ಹೇಳ್ತಿದ್ದಾರೆ. ರವಿ ಧುಲಿಪುಡಿ ತೆಲುಗು ಮೂಲದವರಾಗಿದ್ದು ಶಿವಣ್ಣನನ್ನ 124ನೇ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ತೋರ‍್ಸೋಕೆ ಮುಂದಾಗಿದ್ದಾರೆ. ನವೀರಾದ ಪ್ರೇಮಕಥೆ ಇದಾಗಿದ್ದು ಸ್ವತಃ ಸೆಂಚುರಿಸ್ಟಾರ್ ಕೂಡ ಕೊಂಚ ಎಕ್ಸೈಟ್ ಆಗಿದ್ದಾರೆ. ಆನಂದ್ ಸಿನಿಮಾ ನೋಡಿ ಫ್ಯಾನ್ ಆಗಿರುವ ನಾರಾಲ ಶ್ರೀನಿವಾಸ್ ರೆಡ್ಡಿ ಅವರು ಇದೀಗ `ನೀ ಸಿಗೋವರೆಗೂ’ ಚಿತ್ರಕ್ಕೆ ಬಂಡವಾಳ ಹೂಡ್ತಿದ್ದಾರೆ. ಇವರ ಜೊತೆಗೆ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ, ಕುಡುಪುಡಿ ವಿಜಯ್ ಕುಮಾರ್ ಕೈ ಜೋಡಿಸ್ತಿದ್ದಾರೆ. ಅದ್ದೂರಿಯಾಗಿಯೇ ಸಿನಿಮಾ ಮಾಡ್ಬೇಕು ಎನ್ನುವ ಕನಸೊತ್ತಿದ್ದಾರೆ. ಶಿವಣ್ಣ-ಮೆಹ್ರೀನ್ ಜೊತೆಗೆ ನಾಸರ್, ಸಂಪತ್, ಮಂಗ್ಲಿ, ಸಾಧುಕೋಕಿಲ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಮಹೇಂದ್ರ ಸಿಂಹ ಕ್ಯಾಮೆರಾ ಕೈಚಳಕ ಚಿತ್ರಕ್ಕಿರಲಿದ್ದು, ಚರಣ್ ರಾಜ್ ಮ್ಯೂಸಿಕ್ ಬಾರಿಸಲಿದ್ದಾರೆ.

ಸಂಡೇ ಹೊರತುಪಡಿಸಿ ವರ್ಷದ ೩೬೫ ದಿನವೂ ಬ್ಯುಸಿ ಇರಬೇಕು ಇದು ಹ್ಯಾಟ್ರಿಕ್ ಹೀರೋ ಶಿವಣ್ಣನ ಪಾಲಸಿ. ಅದರಂತೇ ಸದಾ ಸಿನಿಮಾ ಕೆಲಸದಲ್ಲೇ ತೊಡಗಿಸಿಕೊಳ್ತಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಳ್ತಾರೆ. ಸದ್ಯ, ಬಹುನಿರೀಕ್ಷಿತ ಭಜರಂಗಿ-೨ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಭೈರಾಗಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ಮಧ್ಯೆ ೧೨೪ನೇ ಚಿತ್ರ ಸೆಟ್ಟೇರಿದೆ. ೧೨೫, ೧೨೬, ೧೨೭, ೧೨೮, ೧೨೯ನೇ ಸಿನಿಮಾಗಳು ಶಿವಣ್ಣನ ಅಕೌಂಟ್‌ನಲ್ಲಿ ನಾನು ಫಸ್ಟ್.. ನಾನು ಫಸ್ಟ್.. ಅಂತ ಕುಣಿಯುತ್ತಿವೆ. ಯಾವಾಗ ಯಾವ ಸಿನಿಮಾ ಕೈಗೆತ್ತಿಕೊಳ್ತಾರೋ ಕಾದುನೋಡಬೇಕಿದೆ. ಒಟ್ನಲ್ಲಿ ಸೆಂಚುರಿಸ್ಟಾರ್ ಮೋಸ್ಟ್ ಬ್ಯುಸಿಯೆಸ್ಟ್ ಆಕ್ಟರ್ ಅನ್ನೋದಂತೂ ದಿಟ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!