ಡಿ ಬಾಸ್‌ ದರ್ಶನ್‌ಗೆ ಆಕ್ಷನ್‌ ಕಟ್‌ ಹೇಳ್ತಾರಾ ʼಆ ಕರಾಳ ರಾತ್ರಿʼಯ ನಿರ್ದೇಶಕ ?

ಕೊರೋನಾ ಮಹಾಮಾರಿಯ ನಡುವೆಯೂ ಈ ವರ್ಷ ʼರಾಬರ್ಟ್‌ʼ ಭರ್ಜರಿ ಆಗಿಯೇ ಆಬ್ಬರಿಸಿದ ನಂತರ ಚಂದನವನದಲ್ಲಿ ನಟ ದರ್ಶನ್‌ ನಟನೆಯ ಮುಂಬರುವ ಸಿನಿಮಾಗಳ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಇದೆ. ಸದ್ಯಕ್ಕೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ʼರಾಜಾವೀರ ಮದಕರಿ ನಾಯಕʼ ದಲ್ಲಿ ದರ್ಶನ್ ಬ್ಯುಸಿ ಆಗಿದ್ದಾರೆ.‌ ಹಾಗೆಯೇ ʼಯಜಮಾನʼ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್‌ ಅವರಿಗೆ ದರ್ಶನ್‌ ಮತ್ತೊಂದು ಕಾಲ್‌ಶೀಟ್ ನೀಡಿದ್ದಾರೆ. ಇಷ್ಟರಲ್ಲಿಯೇ ಆ ಸಿನಿಮಾ ಚಿತ್ರೀಕರಣ ಶುರುವಾಗಲಿದೆ ಅನ್ನೋ ಸುದ್ದಿಗಳಿವೆ. ಸದ್ಯಕ್ಕೆ ಇವೆರೆಡು ಸಿನಿಮಾಗಳ ಅಧಿಕೃತ ಮಾಹಿತಿ ಹೊರಬಿದ್ದಿದೆ. ಅದಾದ ನಂತರ ದರ್ಶನ್‌ ಅವರ ಮುಂದಿನ ಸಿನಿಮಾ ಯಾವುದು, ಯಾರ ಜತೆಗೆ ಎನ್ನುವ ಕುತೂಹಲದ ನಡುವೆಯೇ ನಟ ದರ್ಶನ್‌ ಅವರನ್ನು ನಿರ್ದೇಶಕ ದಯಾಳ್‌ ಪದ್ಮನಾಭನ್‌ ಭೇಟಿ ಮಾಡಿ, ಕೇಕ್‌ ತಿನ್ನಿಸಿದ್ದಾರೆ. ಸಹಜವಾಗಿಯೇ ಇವರ ಭೇಟಿ ಭಾರೀ ಕುತೂಹಲ ಮೂಡಿಸಿದೆ.‌

ಕನ್ನಡದ ಮಟ್ಟಿಗೆ ಸಕ್ಸಸ್‌ ನಿರ್ದೇಶಕರೇ ಅಗಿರುವ ದಯಾಳ್‌ ಪದ್ಮನಾಭನ್‌ ಇತ್ತೀಚೆಗೆ ದೊಡ್ಡ ಸ್ಟಾರ್‌ ಜತೆಗೆ ಸಿನಿಮಾ ಮಾಡಿಲ್ಲ ಅಂತಂದರೂ ಕೂಡ ಕಂಟೆಂಟ್‌ ಆಧರಿತ ಸಿನಿಮಾಗಳ ಮೂಲಕ ಸಖತ್‌ ಸೌಂಡ್‌ ಮಾಡುತ್ತಲೇ ಬರುತ್ತಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ ತಾವೇ ನಿರ್ಮಾಪಕರಾಗುವುದರ ಜತೆಗೆ ನಿರ್ದೇಶಕರೂ ಆಗಿ, ಒಂದು ಸಿನಿಮಾಕ್ಕೆ ಹಾಕಿದ ಬಂಡವಾಳ ಲಾಸ್‌ ಮಾಡಿಕೊಂಡಿದ್ದೇ ಇಲ್ಲ.

ಕಡಿಮೆ ಬಜೆಟ್‌ ಸಿನಿಮಾ ಮಾಡಿ, ಹೆಚ್ಚು ಲಾಭ ಮಾಡುವ ನಿರ್ದೇಶಕ ಕಮ್‌ ನಿರ್ಮಾಪಕ ಯಾರು ಅಂತ ಹುಡುಕಿದರೆ ಮೊದಲು ಸಿಗುವ ಹೆಸರು ದಯಾಳ್‌ ಪದ್ಮನಾಭನ್.‌ ಅದ್ಯಾಕೋ ಅವರಿಗೆ ಈಗ ದರ್ಶನ್‌ ಅವರೊಂದಿಗೆ ಸಿನಿಮಾ ಮಾಡುವ ಆಸೆ ಚಿಗುರಿದೆ. ಅವರಿಬ್ಬರ ಭೇಟಿ ಈ ಫೋಟೋ ನೋಡಿದಾಗ ಹಾಗನಿಸಿದರೂ ಅಚ್ಚರಿ ಇಲ್ಲ. ಆದರೆ ಅವರ ಭೇಟಿಯ ಉದ್ದೇಶ ಬೇರೆಯದೇ ಇದೆ. ಅದು ಸಿನಿಮಾ ಮಾಡುವ ಕಾರಣಕ್ಕಾಗಿ ಅಲ್ಲ. ಹಾಗಾದ್ರೆ, ಯಾಕೆ ಈ ಭೇಟಿಯ ಉದ್ದೇಶ ? ಆ ಬಗ್ಗೆ ದಯಾಳ್‌ ಹೇಳ್ತಾರೆ ಕೇಳಿ.

ʼ ನಟ ದರ್ಶನ್‌ ಅವರು ಚಿತ್ರರಂಗಕ್ಕೆ ಬಂದು ಇಲ್ಲಿಗೆ ೨೪ ವರ್ಷ ಆಯಿತು. ಒಬ್ಬ ನಟನ ಪಾಲಿಗೆ ಇದು ಬಹುದೊಡ್ಡ ಸಾಧನೆ. ಅದೇ ಕಾರಣಕ್ಕೆ ಅವರಿಗೆ ವಿಶ್‌ ಮಾಡೋಣ ಅಂತ ಕಳೆದ ನಾಲ್ಕೈದು ದಿನಗಳಿಂದ ಅಂದುಕೊಂಡಿದ್ದೆ. ಅದ್ಯಾಕೋ ಸಮಯ ಕೂಡಿ ಬಂದಿರಲಿಲ್ಲ. ಜತೆಗೆ ಅವರು ಸಿಗ್ತಾರೋ ಇಲ್ಲವೋ ಎನ್ನುವ ಕಾರಣಕ್ಕೆ ಹಿಂದು ಮುಂದು ನೋಡುತ್ತಿದ್ದೆ. ಇದೇ ವೇಳೆ ಚೆನ್ನೈನಿಂದ ಪರಿಚಿತರೊಬ್ಬರು ನಟ ದರ್ಶನ್‌ ಅವರನ್ನು ಭೇಟಿ ಮಾಡುವುದಿದೇ ಅಂತ ಹೇಳಿದ್ದರು.ಒಂದು ಖಾಸಗಿ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಅವರು, ಚೆನ್ನೈನಿಂದ ದರ್ಶನ್‌ ಅವರನ್ನು ಭೇಟಿ ಮಾಡಲು ಬಂದಿದ್ದರು. ಅವರ ಕರೆದುಕೊಂಡು ಹೋಗುವ ನೆಪದಲ್ಲಿ ನಾನು ಬರುವುದಾಗಿ ಹೇಳಿದ್ದೆ. ಹಾಗೆಯೇ ಅವರ ಸಿನಿ ಜರ್ನಿಗೆ ಸ್ಪೆಷಲ್‌ ವಿಶ್‌ ಮಾಡೋಣ ಅಂತ ಒಂದು ಸಿನಿಮಾ ರೋಲ್‌ ನ ಸೆಲ್ಯುಲಾಯ್ಡ್‌ ಶೈಲಿಯ ಕೇಕ್‌ ತಯಾರಿಸಿ, ಅವರ ಮನೆಗೆ ತೆಗೆದುಕೊಂಡು ಹೋಗಿದ್ದೆ. ಅದನ್ನು ನೋಡಿ ದರ್ಶನ್‌ ತುಂಬಾ ಖುಷಿ ಪಟ್ಟರು. ಇದೇನೋ ತುಂಬಾ ಡಿಫೆರೆಂಟ್‌ ಆಗಿದೆ, ನಿಮ್ಗೆ ಮಾತ್ರ ಈ ಥರ ಪ್ಲಾನ್‌ ಹೊಳೆಯುತ್ತೆ ಅಂತೆಲ್ಲ ತಮಾಷೆ ಮಾಡಿ, ಖುಷಿ ಪಟ್ಟರುʼ ಅಂತ ದರ್ಶನ್‌ ಭೇಟಿಯ ಹಿಂದಿನ ಕಥೆಯನ್ನು ಬಿಚ್ಚಿಟ್ಟರು ನಿರ್ದೇಶಕ ದಯಾಳ್.

Related Posts

error: Content is protected !!