ಸಿನಿಮಾ ಆಗಲಿದೆ ಸಾಧಕನ ಜೀವನ ಚರಿತ್ರೆ! ಡಾ.ವಿಜಯ ಸಂಕೇಶ್ವರ ಅವರ ಬಯೋಪಿಕ್‌ಗೆ ವಿಜಯಾನಂದ ಟೈಟಲ್!!

ಸಾರಿಗೆ ಕ್ಷೇತ್ರ, ಪತ್ರಿಕೋದ್ಯಮ, ಮಾಧ್ಯಮ ಹಾಗು ಹಲವು ವಿಭಾಗಗಳಲ್ಲಿ ಖ್ಯಾತಿ ಪಡೆದಿರುವ ಪ್ರತಿಷ್ಠಿತ ವಿ.ಆರ್.ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗು ಪ್ರೊಮೋಟರ್ ಡಾ. ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ಅವರು ಇದೀಗ ವಿ.ಆರ್.ಎಲ್. ಮೀಡಿಯಾ ಸಂಸ್ಥೆ ಅಡಿಯಲ್ಲಿ “ವಿಆರ್ ಎಲ್” ಫಿಲಂ ಪ್ರೊಡಕ್ಷನ್ಸ್” ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಕನ್ನಡ ಸಿನಿಮಾ ಪದ್ಮಶ್ರೀ ಡಾ.ವಿಜಯ ಸಂಕೇಶ್ವರರ ಜೀವನಾಧಾರಿತ ಚಿತ್ರವಾಗುತ್ತಿದೆ. 1976ರಲ್ಲಿ ಒಂದು ಟ್ರಕ್‌ನಿಂದ ಶುರುವಾಗಿ, ಇಂದು ಭಾರತದ ಅತಿದೊಡ್ಡ ಫ್ಲೀಟ್ ಮಾಲೀಕರಾಗಿ, ಪತ್ರಿಕೆ ಹಾಗು ಮಾಧ್ಯಮ ರಂಗದಲ್ಲಿ ಸಾಧನೆ ಮಾಡಿರುವ ಡಾ.ವಿಜಯ ಸಂಕೇಶ್ವರ ಅವರ ರೋಚಕ ಕಥೆ ಇರುವಂತಹ ಬಯೋಪಿಕ್‌ ಈಗ ಶುರುವಾಗುತ್ತಿದೆ.‌

ವಿಆರ್‌ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಆನಂದ ಸಂಕೇಶ್ವರ ಅವರು ನಿರ್ಮಿಸುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡಿದ್ದು, ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಈ ಚಿತ್ರಕ್ಕೆ “ವಿಜಯಾನಂದ” ಎಂಬ ಶೀರ್ಷಿಕೆ ಇಡಲಾಗಿದ್ದು, ರಿಷಿಕಾ ಶರ್ಮಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಸತತವಾಗಿ ೮ ವರ್ಷಗಳಿಂದ ಸಹಾಯಕ ನಿರ್ದೇಶಕಿಯಾಗಿ, ಸಿನೆಮಾ ಹಾಗು ಸೀರಿಯಲ್ ನಟನೆ, ಕಲಾ ವಿನ್ಯಾಸ, ವಸ್ತ್ರ ವಿನ್ಯಾಸ ಹೀಗೆ ಹಲವಾರು ವಿಭಾಗಗಳಲ್ಲಿ ಅನುಭವ ಹೊಂದಿರುವ ರಿಷಿಕಾ ಕನ್ನಡ ಚಿತ್ರ ರಂಗದ ಭೀಷ್ಮ ಎಂದೇ ಹೆಸರಾದ ಜೆ. ವಿ. ಅಯ್ಯರ್ ಅವರ ಸಂಬಂಧಿ.

ಈ ಹಿಂದೆ “ಟ್ರಂಕ್” ಎಂಬ ಕನ್ನಡದ ಹಾರರ್ ಚಿತ್ರ ನಿರ್ದೇಶಿಸಿದ್ದರು ರಿಷಿಕಾ ಶರ್ಮ. ಆ ಸಿನಿಮಾದಲ್ಲಿ ನಟಿಸಿದ್ದ ಹೀರೋ ನಿಹಾಲ್ ಕೂಡ “ವಿಜಾಯಾನಂದ” ಚಿತ್ರದ ಹೈಲೈಟ್.‌ ಇಲ್ಲಿ ಅವರು, ಡಾ.ವಿಜಯ ಸಂಕೇಶ್ವರ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ. ನಿಹಾಲ್‌ ರಂಗಭೂಮಿ ಹಿನ್ನಲೆಯಿಂದ ಬಂದವರು. ಭಾರತಿ ಮತ್ತು ಗಂಗಾ ಧಾರಾವಾಹಿಗಳಲ್ಲೂ ನಟಿಸಿದ್ದ ಅವರು, “ಚೌಕ” ಮತ್ತು “ಟ್ರಂಕ್” ಚಿತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್ 2ರಂದು ಡಾ.ವಿಜಯ ಸಂಕೇಶ್ವರ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ, “ವಿಜಯಾನಂದ” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.


ಚಿತ್ರತಂಡ ಎರಡು ವರ್ಷಗಳಿಂದ ಸತತವಾಗಿ ಈ ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ತೆಲುಗು ಮತ್ತು ಮಲಯಾಳಂ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ “ವಿಜಯಾನಂದ” ಚಿತ್ರಕ್ಕೆ ಹಿನ್ನಲೆ ಸಂಗೀತ ಮತ್ತು ಸಂಗೀತ ನಿರ್ದೇಶಕರಾಗಿ ಕೈ ಜೋಡಿಸಿದ್ದಾರೆ. ಈ ಚಿತ್ರ ತಂಡಕ್ಕೆ ಬಹಳಷ್ಟು ದೊಡ್ಡ ನಟ, ನಟಿಯರು ಹಾಗು ತಂತ್ರಜ್ಞರು ಕಾಣಿಸಿಕೊಳ್ಳಲಿದ್ದಾರೆ. ಅವರ ಆಯ್ಕೆ ಇಷ್ಟರಲ್ಲೇ ನಡೆಯಲಿದ್ದು, ಶೀಘ್ರವೇ ಶೂಟಿಂಗ್‌ ಕುರಿತಂತೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

Related Posts

error: Content is protected !!