Categories
ಸಿನಿ ಸುದ್ದಿ

ಮಾತಿನ ಮನೆಯಿಂದ ಸಂಗೀತದ ಮನೆಗೆ ಶಿಫ್ಟ್‌ ಆದ ರಂಗಸಮುದ್ರ !

ಬಹು ನಿರೀಕ್ಷಿತ ಸ್ಯಾಂಡ್ ವುಡ್ ನ ರೆಟ್ರೋ ಚಿತ್ರ ರಂಗಸಮುದ್ರ ಮಾತಿನ ಮನೆಯಿಂದ ಸಂಗೀತದ ಮನೆಗೆ ಶಿಫ್ಟ್ ಆಗಿದೆ. ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೊಣನೂರು ನಿರ್ಮಿಸುತ್ತಿರುವ ರಂಗಸಮುದ್ರ ಚಲನಚಿತ್ರದ ಡಬ್ಬಿಂಗ್ ಪೂರ್ಣಗೊಂಡಿದೆ.
ಚಿತ್ರದ ಪ್ರಮುಖ ಭೂಮಿಕೆಯಲ್ಲಿರುವ ರಂಗಾಯಣ ರಘು ಅವರು ಡಬ್ಬಿಂಗ್ ಕಾರ್ಯದಲ್ಲಿ ಭಾಗಿಯಾಗಿದ್ದರು. ಚಿತ್ರದ ಕಲಾವಿದರಾದ ಸಂಪತ್ ರಾಜ್, ಕಾರ್ತಿಕ್, ಉಗ್ರಂ ಮಂಜು ಮತ್ತು ನಾಯಕಿ ದಿವ್ಯ ಹಾಗೂ ಸಹ ಕಲಾವಿದರ ಭಾಗದ ಡಬ್ಬಿಂಗ್ ಈಗಾಗಲೇ ಪೂರ್ಣಗೊಂಡಿದೆ. ಎರಡ್ಮೂರು ದಶಕಗಳ ಹಿಂದಿನ ಮಾನವೀಯ ಸೆಲೆಯ ಗ್ರಾಮೀಣ ಕಥಾ ವಸ್ತುವನ್ನು ರಂಗಸಮುದ್ರ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. ಚಿತ್ರದ ನಿರ್ದೇಶಕರಾಗಿರುವ ರಾಜ್ ಕುಮಾರ್ ಅಸ್ಕಿ ಅವರೇ ಕಥೆ-ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.

ಕಲ್ಯಾಣ ಕರ್ನಾಟಕದ ಜವಾರಿ ಭಾಷೆ, ಕರಾವಳಿ, ಮೈಸೂರು ಕರ್ನಾಟಕ ಭಾಗದ ಸಂಭಾಷಣೆಯ ಸೊಗಸು ಚಿತ್ರದಲ್ಲಿದೆ. ಭಾಷಾ ವೈವಿದ್ಯತೆಯ ಜುಗಲ್ ಬಂಧಿ ಜೊತೆಗೆ ಭಾಂಧವ್ಯದ ಬೆಸುಗೆಯ ಕಥಾ ಹಂದರ ಚಿತ್ರದ ಹೈಲೈಟ್ ಆಗಿದೆ. ಚಿತ್ರದ ಚಿತ್ರೀಕರಣ ಕೂಡ ಮೈಸೂರ, ಬೆಂಗಳೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ವಿವಿಧ ಪ್ರದೇಶಗಳು ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ರಂಗಸಮುದ್ರ ಚಿತ್ರಕ್ಕೆ ಗೀತ ಸಾಹಿತ್ಯ ವಾಗೀಶ್ ಚನ್ನಗಿರಿ, ಸಂಗೀತ ದೇಸೀ ಮೋಹನ್, ಸಂಕಲನ ಶ್ರೀಕಾಂತ್ ಹಾಗೂ ಹಿರಿಯ ತಂತ್ರಜ್ಞ ಗಿರಿ ಛಾಯಾಗ್ರಹಣ ಇದೆ.

Categories
ಸಿನಿ ಸುದ್ದಿ

ನಟ ದರ್ಶನ್‌ ವಿರುದ್ಧ ದೂರು – ಚಿತ್ರರಂಗದಿಂದ ಐದು ವರ್ಷ ಬ್ಯಾನ್‌ ಮಾಡ್ಬೇಕಂತೆ,ಆದರೆ ಕೆಲವರ ವಿರೋಧಕ್ಕೆ ತಿರುಗೇಟು ಕೊಟ್ಟ ಹಾಗಿದೆ ದರ್ಶನ್‌ ಪರವಾದ ಅಭಿಯಾನ !

ನಟ ದರ್ಶನ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸೋಮವಾರವಷ್ಟೇ ದರ್ಶನ್‌ ಹಿಂಬಾಲಿಕರಿಂದ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಅಂತ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌, ಸೈಬರ್‌ ಕ್ರೈಂಗೆ ದೂರು ನೀಡಿದ್ದರ ಬೆನ್ನಲೇ ಮಾನವ ಹಕ್ಕುಗಳು ರಕ್ಷಣೆ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ, ನಟ ದರ್ಶನ್‌ ವಿರುದ್ಧ ಕರ್ನಾಟಕ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.

ದರ್ಶನ್‌ ಅವರು ಬಳಸುತ್ತಿರುವ ಪದ ಬಳಕೆ ಸರಿಯಿಲ್ಲ. ಮಾಧ್ಯಮಗಳಿಗೂ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ವಾಣಿಜ್ಯ ಮಂಡಳಿ ಎಚ್ಚರಿಕೆ ನೀಡಬೇಕು. ಒಬ್ಬ ನಟನಾಗಿ ಸಾರ್ವಜನಿಕ ಕ್ಷೇತ್ರದಲ್ಲಿದ್ದಾಗ ತುಂಬಾ ಎಚ್ಚರಿಕೆಯಿಂದ ಮಾತನಾಡಬೇಕು. ಆದರೆ ದರ್ಶನ್‌ ತುಂಬಾನೆ ಅಶ್ಲೀಲ ಪದ ಬಳಕೆ ಮಾಡಿ ಕೆಲವರನ್ನು ನಿಂದಿಸಿದ್ದಾರೆ. ಇದು ಚಿತ್ರರಂಗ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಚಿತ್ರರಂಗದಿಂದ ಐದು ವರ್ಷ ಬ್ಯಾನ್‌ ಮಾಡಬೇಕು ಎಂದು ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಒತ್ತಾಯಿಸಿದೆ. ಪದ ಬಳಕೆ ಮಾಡುವಾಗ ಎಚ್ಚರ ಇರಲಿ ಎಂದು ದರ್ಶನ್‌ ಅವರಿಗೆ ಕರ್ನಾಟಕ ವಾಣಿಜ್ಯ ಮಂಡಳಿ ವಾರ್ನಿಂಗ್‌ ಮಾಡಬೇಕು. ಈ ಕೆಲಸವನ್ನು ಮಂಡಳಿ ಮುಂದಿನ ನಾಲ್ಕುದಿನಗಳಲ್ಲಿ ಮಾಡಬೇಕು. ಹಾಗೆ ಮಾಡದಿದ್ದರೆ ಹೋರಾಟ ನಡೆಸುವುದಾಗಿ ಮಾನವ ಹಕ್ಕುಗಳು ರಕ್ಷಣೆ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ಅಧ್ಯಕ್ಷ ಮೋಹನ್‌ ಎಚ್ಚರಿಕೆ ನೀಡಿದ್ದಾರೆ.


ಈ ಮಧ್ಯೆಯೇ ಸೋಷಲ್‌ ಮೀಡಿಯಾದಲ್ಲಿ ನಟ ದರ್ಶನ್‌ ಪರವಾಗಿ ಅಭಿಯಾನ ಶುರುವಾಗಿದೆ. ʼಜಗತ್ತೇ ನಿಮ್ಮ ವಿರುದ್ಧ ನಿಂತರು ಆ ಜಗತ್ತಿನ ವಿರುದ್ಧ ನಾವು ನಿಲ್ಲುತ್ತೇವೆ. ‘we stand with d boss’ʼ ಎನ್ನುವ ಅಭಿಯಾನ ಈಗ ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆಗುತ್ತಿದೆ.ಸಂದೇಶ್‌ ಪ್ರಿನ್ಸ್‌ ಹೋಟೆಲ್‌ ಸಿಬ್ಬಂದಿ ಮೇಲೆ ದರ್ಶನ್‌ ಹಲ್ಲೆ ಮಾಡಿದ್ದಾರೆ, ಅವರ ಹಿಂಬಾಲಿಕರಿಂದ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಅಂತ ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಆರೋಪ ಮಾಡಿದ್ದಲ್ಲದೆ, ದರ್ಶನ್‌ ಹಿಂಬಾಲಕರ ವಿರುದ್ಧ ಈಗ ಸೈಬರ್‌ ಕ್ರೈಂಗೆ ದೂರು ನೀಡಿದ್ದರ ನಡುವೆಯೂ ದರ್ಶನ್‌ ಪರ ಅಭಿಯಾನಕ್ಕೆ ಸಾವಿರಾರು ಮಂದಿ ಪೋಸ್ಟ್‌ ಮಾಡಿದ್ದಾರೆ. ಸೆಲಿಬ್ರಿಟಿಗಳು ಜತೆಗೆ ರಾಜಕಾರಣಿಗಳು ಕೂಡ ದರ್ಶನ್‌ ಅವರಿಗೆ ಬೆಂಬಲ ಸೂಚಿಸಿ ಟ್ವಿಟ್‌ ಮಾಡಿದ್ದಾರೆ.ʼನಿಮ್ಮ ಸಂಕಷ್ಟದಲ್ಲಿ ನಾವಿದ್ದೇವೆ.ಯಾರು ನಿಮ್ಮ ಜೊತೆಗಿರುತ್ತಾರೋ ಇಲ್ಲವೋ ಗೊತ್ತಿಲ್ಲ.ನಾನಂತೂ ನಿಮ್ಮ ಜತೆಗಿರುತ್ತೇನೆ.ನಿಮ್ಮನ್ನು ನಾವು ಪ್ರತಿಸುತ್ತೇವೆ.ನಿಮಗೆ ನಮ್ಮ ಬೆಂಬಲ ಸದಾ ಇದೆʼ ಎಂದು ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಟ್ವಿಟ್‌ ಮಾಡಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಸಂಸದ ಪಿ.ಸಿ. ಮೋಹನ್‌ ಕೂಡ ದರ್ಶನ್‌ ಪರವಾಗಿ ಟ್ವೀಟ್‌ ಮಾಡಿದ್ದು, ‘ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕಲಾಸೇವೆ ಸಲ್ಲಿಸುತ್ತಿರುವ ದರ್ಶನ್ ತೂಗುದೀಪರವರು ನನಗೆ ಆತ್ಮೀಯರು. ಚಾಲೆಂಜಿಂಗ್ ಸ್ಟಾರ್ ಯಾರೇ ಕಷ್ಟ ಎಂದರೂ ಸಹಾಯಕ್ಕೆ ನಿಲ್ಲುತ್ತಾರೆ. ರೈತರ ಹೋರಾಟ, ರೈತರ-ಕಲಾವಿದರ ಕಷ್ಟ, ಪ್ರಾಣಿಗಳ ಸಂಕಷ್ಟ ಅಂತ ಬಂದಾಗ ಒಂದು ಹೆಜ್ಜೆ ಮುಂದೆ ಬರುವುದು ದರ್ಶನ್ ಎಂದು ಕರ್ನಾಟಕಕ್ಕೇ ತಿಳಿದಿದೆ. ಯಾವುದೇ ಆಧಾರವಿಲ್ಲದೆ ದರ್ಶನ್ ಅವರ ಮೇಲೆ ಅನಗತ್ಯ ಆರೋಪ ಮಾಡಿ, ಅವರ ತೇಜೋವಧೆಗೆ ಯತ್ನಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಶೋಭೆ ತರುವುದಿಲ್ಲ. ಚಿತ್ರರಂಗದ ಹಿರಿಯರು ಹಾಗೂ ವಾಣಿಜ್ಯಮಂಡಳಿ ಮಧ್ಯಪ್ರವೇಶಿಸಿ ಎಲ್ಲಾ ಗೊಂದಲಗಳನ್ನು ನಿವಾರಿಸಬೇಕಾಗಿ ನನ್ನ ವಿನಂತಿ’ ಎಂದು ಉಲ್ಲೇಖಿಸಿದ್ದಾರೆ. ಕೆಲವರ ವಿರೋಧದ ನಡುವೆಯೂ ದರ್ಶನ್‌ ಹಲವರಿಗೆ ಬೇಕಾಗಿರೋದಕ್ಕೆ ಇದು ಸಾಕ್ಷಿ.

Categories
ಸಿನಿ ಸುದ್ದಿ

ಮಾಧ್ಯಮ ಅಕಾಡೆಮಿಗೆ ಹಿರಿಯ ಸಿನಿಮಾ ಪತ್ರಕರ್ತ ಸದಾಶಿವ ಶೆಣೈ ?

ಬಹುದಿನಗಳಿಂದ ಖಾಲಿ ಇದ್ದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಈಗ ಅಧ್ಯಕ್ಷರನ್ನು ನೇಮಕ ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ ಹಿರಿಯ ಸಿನಿಮಾ ಪತ್ರಕರ್ತ ಹಾಗೂ ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಸದಾಶಿವ ಶೆಣೈ ಅವರನ್ನು ನೇಮಕ ಮಾಡಿದ್ದು, ಮಂಗಳವಾರ ಸಂಜೆ ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ʼಲಂಕೇಶ್‌ ಪತ್ರಿಕೆʼಯಲ್ಲಿ ಸಿನಿಮಾ ಬರಹಗಾರರಾಗಿದ್ದ ಸದಾಶಿವ ಶೆಣೈ ಅಲ್ಲಿಯೇ ಬಹುಕಾಲ ಸೇವೆ ಸಲ್ಲಿಸಿದ್ದಾರೆ. ಸಿನಿಮಾ ರಂಗದ ಜತೆಗೆ ತುಂಬಾ ಆತ್ಮೀಯ ಒಡನಾಟ ಹೊಂದಿದ್ದು ನಟರಾದ ಶಿವರಾಜ್‌ ಕುಮಾರ್‌ ಹಾಗೂ ಉಪೇಂದ್ರ ಅವರ ಕುರಿತು ಪುಸ್ತಕ ಹೊರ ತಂದಿದ್ದಾರೆ. ಲಂಕೇಶ್‌ ಪತ್ರಿಕೆಯ ನಂತರ ಇತ್ತೀಚೆಗೆ ಅವರು ಬಿ ಟಿವಿಯಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಹವ್ಯಾಸಿ ಬರಹಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರು ಪ್ರೆಸ್‌ ಕ್ಲಬ್‌ ಗೆ ಎರಡು ಅವದಿಗೆ ಅಧ್ಯಕ್ಷರಾದ ಹೆಗ್ಗಳಿಕೆ ಅವರದು. ಹಾಗೆಯೇ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಲಿ ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷರಾಗಿದ್ದಾರೆ. ಇದೀಗ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಅವರು ನೇಮಕ ಆಗುವ ಸಾಧ್ಯತೆಗಳಿವೆ ಎನ್ನುತ್ತಿವೆ ಮೂಲಗಳು.

Categories
ಸಿನಿ ಸುದ್ದಿ

ಕನಸೆಂಬ ಕುದುರೆಯನ್ನೇರಿದ ನಟ ವೈಜನಾಥ್‌ ಬಿರಾದರ್‌ಗೆ ಪದ್ಮಶ್ರೀ ಪ್ರಶಸ್ತಿ ಸಿಗಬಾರದೇಕೆ ?

ಹಿರಿಯ ಪತ್ರಕರ್ತ ಟೆಲೆಕ್ಸ್ ರವಿಕುಮಾರ್‌ ಪತ್ರಕರ್ತರು ಮಾತ್ರವಲ್ಲ, ಸೂಕ್ಷ್ಮ ಸಂವೇದನೆಯ ಲೇಖಕರು ಹೌದು. ಅವರು ಬರೆದ ʼ ನಂಜಿಲ್ಲದ ಪದಗಳುʼ ಕವನ ಸಂಕಲನದ ಕೃತಿಗೆ ಸಾಕಷ್ಟು ಪ್ರಶಸ್ತಿ ಬಂದಿವೆ. ಸಾಹಿತ್ಯದ ಜತೆಗೆ ಸಧಬಿರುಚಿಯ ಸಿನಿಮಾಗಳಂದ್ರೆ ಅವರಿಗೆ ಅತೀವ ಆಸಕ್ತಿ. ಕನ್ನಡದ ಜತೆಗೆ ಅನ್ಯ ಭಾಷೆಗಳಲ್ಲೂ ಬರುವ ಕಲಾತ್ಮಕ ಹಾಗೂ ಸಾಮಾಜಿಕ ಕಾಳಜಿಯ ಕಮರ್ಷಿಯಲ್‌ ಸಿನಿಮಾಗಳನ್ನು ನಿರಂತರವಾಗಿ ನೋಡುತ್ತಾ, ವಿಮರ್ಶಿಸುತ್ತಾ ಬರುತ್ತಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ಅಭಿಯಾನ ಶುರುವಾಗಿರುವ ಈ ಹೊತ್ತಲ್ಲಿ ಅವರು, ಹಿರಿಯ ನಟ ವೈಜನಾಥ್‌ ಬಿರಾದರ್‌ ಅವರನ್ನು ಶಿಫಾರಸ್ಸು ಮಾಡಿ ಬರೆದ ಬರಹ ಇಲ್ಲಿದೆ. ಪದ್ಮಶ್ರೀ ಪ್ರಶಸ್ತಿಗೆ ಬಿರಾದರ್‌ ಯಾಕೆ, ಹೇಗೆ ಅರ್ಹರು ಅನ್ನೋದಕ್ಕೆ ಅವರು ಕೊಟ್ಟ ಕಾರಣಗಳು ಇಲ್ಲಿವೆ . ಓವರ್‌ ಟು ರವಿಕುಮಾರ್..

ಕನ್ನಡದ ಉತ್ತರಕರ್ನಾಟಕದ ಜವ್ಹಾರಿ ನಟ ವೈಜನಾಥ್ ಬಿರಾದರ್ ಕನ್ನಡ ಚಿತ್ರರಂಗದಲ್ಲಿ ನಟನೆಯ ಗೀಳಿಗೆ ಬಿದ್ದು ಬೀದರ್‌ನಿಂದ ಬೆಂಗಳೂರಿಗೆ ಬಂದು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಡ ಕೃಷಿಕುಟುಂಬ ಬಿರಾದಾರ್ ತಾಯಿಯಿಂದ‌ ಪಡೆದ ಹಾಡು,ನಟನೆಯೆ ಚಿತ್ರರಂಗದ ಗೀಳು ಹಚ್ಚಿತು ಎನ್ನಬಹುದು. ಕೇವಲ ಮೂರನೆ ಕ್ಲಾಸ್ ಓದಿದ ಬಿರಾದಾರ್ ಗೆ ನಾಲ್ಕನೆ ಕ್ಲಾಸ್ ಓದಿ ಮೇರು ನಟರಾದ ಡಾ.ರಾಜಕುಮಾರ ಅವರು ಆದರ್ಶವಾಗಿ ಕಂಡರು.ಬೆಂಗಳೂರೆಂಬ ಮಾಯಾನಗರಿಯಲ್ಲಿ ವರ್ಷಾನುಗಟ್ಟಲೆ ಅನ್ನ ನೀರು ನೆರಳಿಲ್ಲದೆ ಪಡಬಾರದ ಕಷ್ಟ ಪಟ್ಟ ಬಿರಾದರ್ ನ್ನು ಗುರುತಿಸಿ ಚಿತ್ರದಲ್ಲಿ ಅವಕಾಶ ಕೊಟ್ಟವರು ಅನುಭವ ಕಾಶಿನಾಥ್.ಬಿರಾದಾರ್ ಕನ್ನಡ ಸಿನಿಮಾಗಳಲ್ಲಿ ಭಿಕ್ಷುಕನ ಪಾತ್ರಕ್ಕೆ ಬ್ರಾಂಡ್ ಆಗಿಬಿಟ್ಟರು. ಭಿಕ್ಷುಕ,ಕುಡುಕ ಪಾತ್ರಗಳೆ ಅವರಿಗೆ ಖಾಯಂ ಆಗಿ ಚಿತ್ರರಂಗದಲ್ಲಿ ನೆಲೆಯೂರಿದರು.ಭಿಕ್ಷುಕ ಪಾತ್ರಗಳಿಗೆ ಸೀಮಿತರಾದ ಬಿರಾದಾರ್ ಎಂದಿಗೂ ನೊಂದುಕೊಳ್ಳಲಿಲ್ಲ. ‘ ಭಿಕ್ಷುಕ ಪಾತ್ರವೆ ನನ್ನ ಜೀವನದ ಅಕ್ಷಯ ಪಾತ್ರೆ’ ಎಂದು ಸಂತೃಪ್ತರಾಗಿದ್ದರು. 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ನೈಜ ಅಭಿನಯದಿಂದ ತಮ್ಮದೆ ಅಭಿಮಾನ ವಲಯ ವನ್ನು ಹೊಂದಿರುವ ಬಿರಾದಾರ್ ಅವರ ಅಪ್ರತಿಮ ಪ್ರತಿಭೆಗೆ ಕನ್ನಡಿ ಯಂತೆ ” ಕನಸೆಂಬ ಕುದುರೆಯನ್ನೇರಿ” ಚಿತ್ರವನ್ನು ನೋಡಬೇಕು.

2010 ರಲ್ಲಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಈ ಚಿತ್ರ ಸ್ಪೇನ್ ನಲ್ಲಿ ನಡೆದ ಅಂತರರಾಷ್ಟ್ರೀಯ India image ಸ್ಪರ್ಧೆಯಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಪಡೆದು ಕನ್ನಡ ಚಿತ್ರರಂಗದ ಹಿರಿಮೆಗೆ ಗರಿ ಮೂಡಿಸಿದರು.
ಬಿರಾದಾರ್ ಕನ್ನಡದ ಮತ್ತೋರ್ವ ಖ್ಯಾತ ನಟ ಅನಂತನಾಗ್ ರಷ್ಟು ಸ್ಫುರದ್ರೂಪಿಯಲ್ಲ. ಅನಂತನಾಗ್ ಅವರಿಗಿರಬಹುದಾದ ಸಾಮಾಜಿಕ‌ ಹಿನ್ನಲೆಯಾಗಲಿ, ಸಾಂಸ್ಕೃತಿಕ ಪ್ರಭಾವಳಿಯಾಗಲಿ , ರಾಜಕೀಯ ಸಿದ್ಧಾಂತದ ಬಲವಾಗಲಿ ಬಿರಾದರ್ ಗೆ ಇಲ್ಲ. ಆದರೆ ಬಿರಾದಾರ್ ತನಗೊಹಿಸುವ ಪಾತ್ರದಲ್ಲಿ ಯಾರಿಗೂ ಕಮ್ಮಿಯಿಲ್ಲದಂತೆ ಪ್ರತಿಭೆ ಯನ್ನು ಮೆರೆಯುತ್ತಾರೆ. ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು. ಒಬ್ಬ ಸಾಮಾನ್ಯ ನಟ ಕಾಮಿಡಿಯನ್ ಆಗಿ, ಪೋಷಕ ಪಾತ್ರಗಳಲ್ಲಿ ಐದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವುದು ,ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆವುದು ಸಾಧನೆಯಲ್ಲವೆ?

ನಿಮಗೆ ಗೊತ್ತಿರಲಿ, ಬಿರಾದಾರ್ ಅವರಿಗೆ ಚಲನಚಿತ್ರವೊಂದರಲ್ಲಿ ಮೊಟ್ಟಮೊದಲಿಗೆ ಚಿಕ್ಕದೊಂದು ಪಾತ್ರ ಕೊಡಿಸಿದವರು ಅನಂತನಾಗ್ . ಖ್ಯಾತ ನಿರ್ದೇಶಕ ಎಂ.ಎಸ್ ಸತ್ಯು ಅವರ ನಿರ್ದೇಶನದ ‘ಬರ’ ಚಿತ್ರದ ಚಿತ್ರೀಕರಣ ಬೀದರ್ ನಲ್ಲಿ ಆಸಕ್ತಿಯಿಂದ ಚಿತ್ರೀಕರಣ ನೋಡಲು ಹೋದ ಬಿರಾದಾರ್ ನಟ ಅನಂತನಾಗ್ ಅವರಿಗೆ ಊಟಕ್ಕೆ ಮೊಸರು ಅಗತ್ಯವಿದೆ ಎಂದು ತಿಳಿದು ತಮ್ಮ ಮನೆಯಿಂದ ಅನಂತ್ ನಾಗ್ ಅವರಿಗೆ ಮೊಸರು ತಂದುಕೊಡುತ್ತಾರೆ. ಈ ಸಂದರ್ಭದಲ್ಲಿ ಬಿರಾದಾರ್ ರಂಗಭೂಮಿ ನಟನೆಂಬ ಸುದ್ದಿ ತಿಳಿದ ಅನಂತ್ ನಾಗ್ ನಿರ್ದೇಶಕರಿಗೇಳಿ ಬಿರಾದಾರ್ ಅವರಿಗೆ ‘ಬರ’ ಚಿತ್ರದಲ್ಲಿ ಸಣ್ಣಪಾತ್ರವೊಂದನ್ನು ಕೊಡಿಸು ತ್ತಾರೆ. ಅನಂತ್ ನಾಗ್ ಮತ್ತು ಬಿರಾದಾರ್ ಅವರನ್ನು ಪರಸ್ಪರ ಹೋಲಿಕೆ ಮಾಡಲಾಗದು ನಿಜ, ಆದರೆ ನೈಜ ಪ್ರತಿಭೆ ಬಿರಾದಾರ್ ಒಕ್ಕೂಟ ಸರ್ಕಾರದ ‘ ಪದ್ಮಶ್ರೀ’ ಪ್ರಶಸ್ತಿಗೆ ಎಲ್ಲಾ ಬಗೆಯಲ್ಲೂ ಅರ್ಹರಿ ದ್ದಾರೆ ಎಂಬುದನ್ನು ಅಲ್ಲೆಗೆಳೆಯುವಂತಿಲ್ಲ. ಬಿರಾದಾರ್ ಅವರಿಗೆ ಪದ್ಮಶ್ರೀ ಸಿಗಲಿ.

Categories
ಸಿನಿ ಸುದ್ದಿ

ಚಿತ್ರೀಕರಣ ಮುಗಿಸಿದ ಶ್ರೀಕೃಷ್ಣ @ಜಿಮೇಲ್‌. ಕಾಮ್‌ , ನಸು ನಕ್ಕ ಡಾರ್ಲಿಂಗ್‌ ಕೃಷ್ಣ

ಸಿನಿ ದುನಿಯಾದಲ್ಲೀಗ ಟೈಟಲ್ಗೊಂದು ಅರ್ಥ ಇರಬೇಕು ಅಂತೇನು ಇಲ್ಲ. ಜನಪ್ರಿಯತೆ ಪಡೆದ ಪದ ಹೇಗಿದ್ದರೂ ಸರಿ, ಆ ಹೆಸರಲ್ಲೊಂದು ಸಿನಿಮಾ ಮಾಡುವ, ಅದಕ್ಕೂ ಒಂದು ಕಾರಣ ನೀಡುವ ಅಭ್ಯಾಸ ಮಾಮೂಲು. ಹೆಸರಾಂತ ನಿರ್ಮಾಪಕ, ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ಅವರ ಸಂದೇಶ್‌ ಪ್ರೊಡಕ್ಷನ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ʼ ಶ್ರೀಕೃಷ್ಣ @ಜಿಮೇಲ್‌. ಕಾಮ್‌ʼ ಚಿತ್ರಕ್ಕೀಗ ಚಿತ್ರೀಕರಣ ಮುಗಿದಿದೆ.

ಕಳೆದ ಎಂಟು ದಿನಗಳಿಂದ ಮೇಲುಕೋಟೆ ಸೇರಿದಂತೆ ಮೈಸೂರು ಸುತ್ತಮುತ್ತ ಹಾಡಿನ ಚಿತ್ರೀಕರಣ ‌ನಡೆದಿದೆ. ಹಾಗೆಯೇ ಮೈಸೂರಿನ ಸಂದೇಶ್ ಹೋಟೆಲ್‌ ನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆದಿದೆ. ಒಟ್ಟು 90 ದಿನಗಳ ಕಾಲ ಈ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ.ನಾಗಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ ಚಿತ್ರ ಇದು. ಲವ್‌ ಮಾಕ್ಟೆಲ್‌ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಇದರ ನಾಯಕ ನಟ.

ಭಾವನಾ ಈ ಚಿತ್ರದ ನಾಯಕಿ. ಅವರೊಂದಿಗೆ ಚಂದನ್‌ ಗೌಡ ಚಿತ್ರದ ಎರಡನೇಯ ನಾಯಕ. ವಿಶೇಷ ಅಂದ್ರೆ ನಟ , ನಿರ್ದೇಶಕ ರಿಷಭ್‌ ಶೆಟ್ಟಿ ಈ ಚಿತ್ರದಲ್ಲೊಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅವರೊಂದಿಗೆ ದತ್ತಣ್ಣ, ಸಾಧುಕೋಕಿಲ, ಚಿಕ್ಕಣ್ಣ, ಸಾತ್ವಿಕ್(ಕಾರ್ಪೊರೇಟರ್), ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮುಂತಾದ ಅದ್ದೂರಿ ತಾರಾಬಳಗ ಈ ಚಿತ್ರದಲ್ಲಿದೆ.

ಸಂದೇಶ್ ಪ್ರೊಡಕ್ಷನ್ಸ್ ಮೂಲಕ ಈ ಹಿಂದೆ “ಅಮರ್” ಚಿತ್ರವನ್ನೂ ನಿರ್ದೇಶಿಸಿ ತೆರೆಗೆ ತಂದಿದ್ದ ನಾಗಶೇಖರ್‌, ಈಗ ʼಶ್ರೀಕೃಷ್ಣ @ಜಿಮೇಲ್‌. ಕಾಮ್‌ʼ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ. ಕವಿರಾಜ್ ಗೀತರಚನೆ ಮಾಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಟೈಟಲ್‌ ನಲ್ಲಿಯೇ ಡಿಫೆರೆಂಟ್‌ ಎನಿಸುವ ಸಿನಿಮಾ ಇದು. ಹಾಗೆಯೇ ತುಂಬಾ ಸೊಗಸಾದ ಕಥೆ ಈ ಚಿತ್ರದಲ್ಲಿದೆ ಎನ್ನುವ ಭರವಸೆಯ ಮಾತು ನಾಗಶೇಖರ್‌ ಅವರದ್ದು.

Categories
ಸಿನಿ ಸುದ್ದಿ

ʼಫ್ಯಾಮಿಲಿ ಪ್ಯಾಕ್” ಗೆ ಶೂಟಿಂಗ್‌ ಕಂಪ್ಲೀಟ್‌- ಸೆಟ್‌ ಗೆ ಹೋಗಿ ಚಿತ್ರ ತಂಡಕ್ಕೆ ಶುಭ ಕೋರಿದ ಪವರ್‌ ಸ್ಟಾರ್‌

ನಟ ಪುನೀತ್‌ ರಾಜ್‌ ಕುಮಾರ್‌ ಅವರ ಹೋಮ್‌ ಬ್ಯಾನರ್‌ ಪಿಆರ್‌ ಕೆ ಪ್ರೊಡಕ್ಷನ್‌ ನಿರ್ಮಾಣದ ಬಹು ನಿರೀಕ್ಷಿತ ಚಿತ್ರ ಫ್ಯಾಮಿಲಿ ಫ್ಯಾಕ್‌ ಶೂಟಿಂಗ್‌ ಮುಗಿದಿದೆ. ಒಟ್ಟು ಮೂವತ್ತಕ್ಕೂ ಹೆಚ್ಚು ದಿನಗಳ ಕಾಲ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರ ತಂಡ ಚಿತ್ರೀಕರಣ ನಡೆಸಿದೆ. ಚಿತ್ರೀಕರಣದ ಕೊನೆಯ ದಿನ ಚಿತ್ರದ ನಿರ್ಮಾಪಕರು ಆದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ದಂಪತಿ ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿ, ಚಿತ್ರೀಕರಣ ವೀಕ್ಷಿಸಿದರು. ಹಾಗೆಯೇ ಚಿತ್ರ ತಂಡದ ಪ್ರತಿಯೊಬ್ಬರ ಕೆಲಸವನ್ನು ಮೆಚ್ಚಿಕೊಂತು ತಂಡಕ್ಕೆ ಶುಭ ಕೋರಿದ್ದಾಗಿ ನಿರ್ದೇಶಕ ಅರ್ಜುನ್‌ ಕುಮಾರ್‌ ಹೇಳುತ್ತಾರೆ.

ಕನ್ನಡ ಚಿತ್ರರಂಗರದಲ್ಲಿನ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದೇ ಶುರುವಾಗಿರುವ ಪುನೀತ್‌ ರಾಜ್‌ ಕುಮಾರ್‌ ಹಾಗೂ ಅಶ್ವಿನಿದಂಪತಿಗಳ ಪಿಆರ್‌ ಕೆ ಪ್ರೋಡಕ್ಷನ್‌ ಸಂಸ್ಥೆ ಈಗಾಗಲೇ ಮೂರ್ನಾಲ್ಕು ಚಿತ್ರಗಳನ್ನು ನಿರ್ಮಿಸಿ ತೆರೆಗೆ ತಂದಿದೆ. ಅಷ್ಟು ಚಿತ್ರಗಳೂ ಸದಭಿರುಚಿಯೇ ಚಿತ್ರಗಳೆ. ಆ ಸಾಲಿಗೆ ಸೇರುವ ಮತ್ತೊಂದು ಚಿತ್ರವೇ ಫ್ಯಾಮಿಲಿ ಪ್ಯಾಕ್.‌

ಆದಿನ ಚಿತ್ರೀಕರಣದ ಸೆಟ್‌ ನಲ್ಲಿ ಚಿತ್ರದ ನಾಯಕ ಲಿಖಿತ್‌ ಶೆಟ್ಟಿ, ನಾಯಕಿ ಅಮೃತ ಅಯ್ಯಂಗಾರ್, ರಂಗಾಯಣ ರಘು, ಅಚ್ಯುತಕುಮಾರ್, ಪದ್ಮಜಾರಾವ್, ಶರ್ಮಿತಾ ಗೌಡ, ಸಿಹಿಕಹಿ ಚಂದ್ರು ಮುಂದಿನ ಕಲಾವಿದರು ಅಂದಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಮನೋರಂಜನೆ ಪ್ರಧಾನವಾಗಿರುವ ಈ ಚಿತ್ರದ ನಿರ್ಮಾಪಕರು ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ . ಈ ಹಿಂದೆ ಸಂಕಷ್ಟ ಕರ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದ‌ ಅರ್ಜುನ್ ಕುಮಾರ್ “ಫ್ಯಾಮಿಲಿ ಪ್ಯಾಕ್” ನ ನಿರ್ದೇಶಕ.ನಿರ್ಮಾಪಕ ಲಿಖಿತ್ ಶೆಟ್ಟಿ ಅವರು ಈ ಚಿತ್ರದ ನಾಯಕ ಕೂಡ. ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಉದಯಲೀಲ ಹಾಗೂ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನವಿದೆ.ಮಾಸ್ತಿ ಫ್ಯಾಮಿಲಿ ಪ್ಯಾಕ್ ಗೆ ಸಂಭಾಷಣೆ ಬರೆದಿದ್ದಾರೆ.

Categories
ಸಿನಿ ಸುದ್ದಿ

ನಟಿ ಶ್ರುತಿಗೆ‌‌ ಕೋಕ್ ಕೊಟ್ಟಾಗ ಕಿಸಿಕಿಸಿ ನಕ್ಕವರು ಒಮ್ಮೆ ಇಲ್ನೋಡಿ‌!?

ಯಾವುದೇ ಕ್ಷೇತ್ರವಿರಲಿ ಕುರ್ಚಿಯಿಂದ ಕೆಳಗಿಳಿದಾಗ ಹಾಗೂ ಕೆಳಗಿಳಿಸಿದಾಗ ಕೇಕೆ ಹಾಕುವವರು ಜೊತೆಗೆ ಕಿಸಿಕಿಸಿ ಅಂತ ಮರೆಯಲ್ಲಿ ನಗುವವರು ಅವಿತುಕೊಂಡಿರ್ತಾರೆ. ಹಾಗೆಯೇ, ನಟಿ ಶ್ರುತಿ ಅವರನ್ನ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷೆ ಸ್ಥಾನದಿಂದ ರಾಜ್ಯ ಸರ್ಕಾರ ಏಕಾಏಕಿ ಕೆಳಗಿಳಿಸಿದಾಗ ಕೆಲವರು ಕಿಸಿಕಿಸಿ ಅಂತ ನಕ್ಕರು. ಅಧಿಕಾರ ಸ್ವೀಕರಿಸಿ ಆರು ತಿಂಗಳು ಆಗಿಲ್ಲ ಆಗಲೇ ಗೇಟ್ ಪಾಸ್ ತಗೊಂಡ್ರಲ್ಲ ಗುರು ಅಂತ ಆಡಿಕೊಂಡರು. ಇದಾಗಿ ಕೇವಲ ಎರಡು ದಿನ ಕಳೆದಿದೆ ಅಷ್ಟೇ ನಟಿ ಶ್ರುತಿಗೆ
ಮತ್ತೊಂದು ಅಧಿಕಾರ ಸಿಕ್ಕಿದೆ. ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ಶ್ರುತಿ ನೇಮಕಗೊಂಡಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ‌ಆದೇಶ ಹೊರಡಿಸಿದ್ದು, ನಟಿ ಶ್ರುತಿ ಹೊಸ ಜವಬ್ದಾರಿ ಸಿಕ್ಕ ಸಂಭ್ರಮದಲ್ಲಿದ್ದಾರೆ. ರಾಜ್ಯ ಸರ್ಕಾರ ಕೋಕ್ ಕೊಟ್ಟಾಗ ನಕ್ಕವರಿಗೆ ಹೊಸ ಹುದ್ದೆಯನ್ನ ಗಿಟ್ಟಿಸಿಕೊಳ್ಳುವ ಮೂಲಕ ಉತ್ತರ ಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ದರ್ಶನ್ ಫ್ಯಾನ್ಸ್ ಮಹತ್ವದ ನಿರ್ಧಾರ; ಈ ಕಾರಣಕ್ಕಾಗಿ ಶಪಥಗೈದರಲ್ಲ ದಾಸನ ಭಕ್ತರು !?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಸೋಷಿಯಲ್ ಲೋಕದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸೋದ್ರ ಮೂಲಕ ಮುಂದಿನ ತಮ್ಮ ನಿಲುವೇನು ತಮ್ಮ ನಡೆಯೇನು ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ. ದಾಸನ ಭಕ್ತವಲಯ ಮಾಡಿರುವ ತೀರ್ಮಾನ ಇದ್ಯೆಯಲ್ಲ ಅದು ಅಂತಿಮ ಅಲ್ಲ. ಆದರೆ, ಚಕ್ರವರ್ತಿಯ ಹೆಸರಿಗೆ ಮಸಿಬಳಿಯುವ ಹಾಗೂ ತೇಜೋವಧೆ ಮಾಡುತ್ತಿರುವ ಈ ಹೊತ್ತಲ್ಲಿ ಅಭಿಮಾನಿ ದೇವರುಗಳು ಕೈಗೊಂಡಿರುವ ನಿರ್ಧಾರ ಇದೆಯಲ್ಲ ಅದು ಮೆಚ್ಚುವಂತಹದ್ದು. ಹಾಗಾದ್ರೆ, ದಚ್ಚು ಫ್ಯಾನ್ಸ್ ಅದ್ಯಾವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ? ಯಾಕಾಗಿ ದೃಡಸಂಕಲ್ಪ ಮಾಡಿದ್ದಾರೆ? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ನಿಮಗಾಗಿ

ಸ್ಯಾಂಡಲ್‌ವುಡ್ ಯಜಮಾನ ದಾಸದರ್ಶನ್‌ಗೆ ಕೋಟ್ಯಾಂತರ ಭಕ್ತರಿದ್ದಾರೆ ಈ ಸತ್ಯ ನಮಗೆ ನಿಮಗೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಗೊತ್ತು. ಆ ಕೋಟ್ಯಾಂತರ ಅಭಿಮಾನಿ ಬಳಗದ ರಕ್ತ ಕುದಿಯುತ್ತಿದೆ. ಯಾರಿಗೂ ಕೇಡು ಬಯಸದ, ಒಳಗೊಳಗೆ ಕತ್ತಿಮಸೆಯದ, ಹಿಂದೆ ಒಂದು ಮುಂದೆ ಒಂದು ಮಾತನಾಡದ ನಮ್ಮ ಆರಾಧ್ಯದೈವನ ಮೇಲೆ ಇದೆಂತಾ ಆರೋಪ, ಇದೆಂತಾ ಕೀಳುಮಟ್ಟದ ರಾಜಕೀಯ ಛೀ.. ಥೂ.. ಅಂತ ಉಗುಳುತ್ತಾ.. ಹಲ್ಲಲ್ಲು ಕಡಿಯುತ್ತಾ ಕಣ್ಣಲ್ಲೇ ಕೆಂಡ ಉಗುಳ್ತಿದ್ದಾರೆ. ಯಾರು ಎಷ್ಟೇ ಕೇಡು ಬಯಸಿದ್ರೂ, ಯಾರು ಎಷ್ಟೇ ಕಿತಾಪತಿ ಮಾಡಿದ್ರೂ, ಯಾರು ಎಷ್ಟೇ ಟಾರ್ಗೆಟ್ ಮಾಡಿ ಕುಗ್ಗಿಸೋಕೆ ಪ್ರಯತ್ನಿಸಿದ್ರೂ, ನೇರ ಹಾಗೂ ನಿಷ್ಠುರವಾದಿಯಾಗಿರುವ, ಪರರಿಗೆ ಸದಾ ಒಳ್ಳೆಯದನ್ನೇ ಬಯಸುವ, ಬೆವರು ಸುರಿಸಿ ಸಂಪಾದಿಸಿದ ಹಣದಲ್ಲಿ ಕೋಟಿಗಟ್ಟಲೇ ದುಡ್ಡನ್ನು ಬಡಬಗ್ಗರಿಗೆ ದಾನ ಮಾಡುವ ಶತಸೋದರಾಗ್ರಜಶರವೀರ ದರ್ಶನ್‌ಗೆ ಕೆಡುಕಾಗಲ್ಲ ಅಂತ ಎದೆಮುಟ್ಟಿಕೊಂಡು ಹೇಳಿಕೊಳ್ಳುತ್ತಿದ್ದಾರೆ.

ಮೇಲ್ನೋಟಕ್ಕೆ ನಮ್ಮ ಬಾಸ್ ಒರಟನಾಗಿ ಕಾಣುತ್ತಾರೆ, ಫಿಲ್ಟರ್ ಇಲ್ಲದೇ ಮಾತನಾಡ್ತಾರೆ ನೀವು ಅದನ್ನೇ ರಫ್ ಹಾಗೂ ರಾಂಗು ಅಂದ್ಕೊಂಡ್ರೆ ಯಾರು ಏನು ಮಾಡೋದಕ್ಕೆ ಆಗಲ್ಲ. ಕೊಲ್ಲೊಕೆ ಒಬ್ಬ ಇದ್ದರೆ ಕಾಯೋಕೆ ಅಂತ ಒಬ್ಬ ರ‍್ತಾನೆ ಎನ್ನುವ ಮಾತಿದೆ ಅದರಂತೇ ನೀವು ಏನೇ ಮಾಡಿದರೂ ನಮ್ಮ ಬಾಸ್‌ನ ಕಾಯೋದಕ್ಕೆ ಚಾಮುಂಡೇಶ್ವರಿ ತಾಯಿ ಇದ್ದಾಳೆ ಎನ್ನುವ ದಾಸನ ಭಕ್ತರು ಒಂದು ದೃಡ ಸಂಕಲ್ಪ ಮಾಡಿದ್ದಾರೆ. ದರ್ಶನ್ ಏನು-ಎಂತ-ಹೇಗೆ ಅಂತ ಗೊತ್ತಿದ್ದವರು, ದರ್ಶನ್‌ರನ್ನ ಹತ್ತಿರದಿಂದ ಕಂಡವರು, ಅವರ ವ್ಯಕ್ತಿತ್ವ ಎಂತಹದ್ದೆಂದು ಬಲ್ಲವರು ಸೈಲೆಂಟಾಗಿರುವುದನ್ನ ಕಂಡು ದಚ್ಚು ಫ್ಯಾನ್ಸ್ ಬೇಸರಗೊಂಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ದಾಸನಿಂದ ಸಹಾಯ ಪಡೆದು ತುಟಿಪಿಟಿಕ್ ಎನ್ನದ ಮಂದಿ ಮೇಲೆ ಸಾರಥಿ ಸೈನಿಕರು ಆಕ್ರೋಶಗೊಂಡಿದ್ದಾರೆ. ಇನ್ಯಾವತ್ತೂ ಕೂಡ ಅವರನ್ನು ಪ್ರೋತ್ಸಾಹಿಸಕೂಡದು ಎಂಬ ದೃಡನಿರ್ಧಾರಕ್ಕೆ ಬಂದಿದ್ದಾರೆ.

ಒಡೆಯ ದರ್ಶನ್ ಅವರಿಂದ ಸಹಾಯ ಪಡೆದವರು ಒಬ್ಬರಾ-ಇಬ್ಬರಾ ಲೆಕ್ಕಕ್ಕೇ ಇಲ್ಲ. ದೇಹಿ ಎನ್ನುವ ಮುಂಚೆನೇ ದಾನ ನೀಡುವ ಕರ್ಣ ಅಂದರೆ ಒನ್ ಅಂಡ್ ಓನ್ಲೀ ಡಿಬಾಸ್.
ಜನಸಾಮಾನ್ಯರಿಗೆ ಮಾತ್ರವಲ್ಲ ಕಲಾವಿದರಿಗೂ ಕೂಡ ದಾಸನ ಮನ ಮಿಡಿಯುತ್ತೆ. ಗಾಡ್‌ಫಾದರ್‌ಗಳಿಲ್ಲದೇ ಗಂಧದಗುಡಿಗೆ ಯಾರೇ ಬರಲಿ ಅವರಲ್ಲಿ ಪ್ರತಿಭೆಯಿದ್ದರೆ ಅಂತಹವರನ್ನ ದರ್ಶನ್ ಪ್ರೋತ್ಸಾಹಿಸ್ತಾರೆ. ಪೋಸ್ಟರ್ ಲಾಂಚ್‌ನಿಂದ ಹಿಡಿದು ಸಿನಿಮಾ ಬಿಡುಗಡೆವರೆಗೂ ಹೊಸತಂಡದ ಜೊತೆಗೆ ಬೆಂಬಲವಾಗಿ ನಿಲ್ತಾರೆ. ಆರಾಧ್ಯದೈವನ ನಿಲುವನ್ನ ಸ್ವಾಗತಿಸುವ ಅಭಿಮಾನಿಗಳು ಹೊಸತಂಡ ಚಿತ್ರವನ್ನ ಸಾರಥಿ ಸಿನಿಮಾದಂತೆಯೇ ನೋಡ್ತಾರೆ ಜೊತೆಗೆ ಆ ಸಿನಿಮಾವನ್ನು ಪ್ರಮೋಷನ್ ಮಾಡಿಕೊಡ್ತಾರೆ. ಇಷ್ಟೆಲ್ಲಾ ಮಾಡಿಕೊಟ್ಟರೂ ಕೂಡ ಯಾರೊಬ್ಬರು ನಮ್ಮ ಬಾಸ್ ಪರವಾಗಿ ಧ್ವನಿಎತ್ತಲಿಲ್ಲ ಎಂಬುದು ದಚ್ಚು ಭಕ್ತರ ಅಳಲು ಹಾಗೂ ಏಕೈಕ ಪ್ರಶ್ನೆ

ಆರಾಧ್ಯದೈವ ದರ್ಶನ್ ಹೆಸರಿಗೆ ಮಸಿ ಬಳಿಯುವಂತಹ ಹಾಗೂ ತೇಜೋವಧೆ ಮಾಡುವಂತಹ ಕೆಲಸ ಆಗ್ತಿದೆ. ಈ ಹೊತ್ತಲ್ಲಾದರೂ ದಾಸನಿಂದ ಸಹಾಯ ಪಡೆದವರು ಧ್ವನಿ ಎತ್ತಬಹುದು ಆದರೆ ಯಾರೊಬ್ಬರು ಕೂಡ ದಚ್ಚು ಪರವಾಗಿ ಬ್ಯಾಟಿಂಗ್ ಮಾಡೋದಕ್ಕೆ ಫೀಲ್ಡಿಗಿಳಿಯುತ್ತಿಲ್ಲ. ಹೀಗಾಗಿ, ಬೇಸರಗೊಂಡಿರುವ ಚಕ್ರವರ್ತಿಯ ಸೈನಿಕರು ಇಲ್ಲಿ ಎಲ್ಲಾ ಅವಕಾಶವಾಧಿಗಳೇ ಕೆಲಸ ಆಗೋತನಕ ಮಾತ್ರ ಆ ಮೇಲೆ ತಮ್ಮ ಬುದ್ದಿ ಏನು ಅಂತ ತೋರಿಸಿಬಿಡ್ತಾರೆ. ಇನ್ಮುಂದೆ, ಯಾವುದೇ ಕಾರಣಕ್ಕೂ ಸಿನಿಮಾ ಇರಲಿ ಅಥವಾ ಬೇರೆ ಯಾವುದೇ ವಿಷ್ಯವಿರಲಿ ಯಾರನ್ನೂ ಪ್ರೋತ್ಸಾಹಿಸೋದು ಬೇಡ. ನಮ್ಮ ಡಿಬಾಸ್ ಪರವಾಗಿ ಯಾರೂ ಮಾತನಾಡೋದು ಬೇಡ ಅಭಿಮಾನಿಗಳಾಗಿ ನಾವೇ ಕೋಟ್ಯಾಂತರ ಮಂದಿಯಿದ್ದೇವೆ ಹೀಗಂತ ಬರೆದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ದಾರೆ. ದಾಸನ ಭಕ್ತರ ನಿಲುವನ್ನ ಈ ಕ್ಷಣಕ್ಕೆ ಮೆಚ್ಚುವಂತಹದ್ದೇ ಬಿಡಿ. ಅದಕ್ಕೆ ಡಿಬಾಸ್ ಹೇಳೋದು ಈ ಜನ್ಮ ಅಲ್ಲ ನೂರು ಜನ್ಮ ಹುಟ್ಟಿಬಂದರೂ ಫ್ಯಾನ್ಸ್ ಋಣ ತರ‍್ಸೋದಕ್ಕೆ ಆಗಲ್ಲ ಅಂತ.

Categories
ಸಿನಿ ಸುದ್ದಿ

ಸಸ್ಯಾಹಾರಿ ಅನುರಾಧ ಭಟ್‌, ಸೊಳ್ಳೆ ನುಂಗಿ ಮಾಂಸಹಾರಿಯಾದ್ರಾ – ʼ ಮರಳಿ ಮರೆಯಾಗಿ..ʼ ಬಂದ ಹಾಡಿನ ರೆಕಾರ್ಡಿಂಗ್‌ ವೇಳೆ ಅವರಿಗೆ ಆಗಿದ್ದೇನು ?

ಕನ್ನಡ ಸಿನಿ ದುನಿಯಾದಲ್ಲೀಗ ಹ್ಯಾಪನಿಂಗ್‌ ಸಿಂಗರ್‌ ಅಂತಲೇ ಖ್ಯಾತಿ ಪಡೆದ ಗಾಯಕಿ ಅನುರಾಧ ಭಟ್.‌ ʼಚೌಕʼ ಚಿತ್ರದ ಅಪ್ಪ…ಅಪ್ಪ ಹಾಡಿನ ಮೂಲಕ ಕನ್ನಡಿಗರ ಮನೆ ಮಾತಾದ ‌ಪ್ರತಿಭಾನ್ವಿತ ಹಿನ್ನೆಲೆ ಗಾಯಕಿ. ಮಧುರ ಕಂಠದ ಈ ಚೆಲುವೆ ಹಿನ್ನೆಲೆ ಗಾಯಕಿ ಆಗಿ ಚಿತ್ರರಂಗಕ್ಕೆ ಎಂಟ್ರಿಯಾದ ದಿನಗಳಲ್ಲಿ ರಘು ಮುಖರ್ಜಿ ಹಾಗೂ ಕಮಲಿನಿ ಮುಖರ್ಜಿ ಅಭಿನಯದ ʼಸವಾರಿʼ ಚಿತ್ರದ ʼಮರಳಿ ಮರೆಯಾಗಿ..ʼ ಹಾಡಿಗೆ ಟ್ರ್ಯಾಕ್‌ ಸಿಂಗರ್‌ ಆಗಿ ಧ್ವನಿ ನೀಡಿದ್ದರು ಎನ್ನುವುದು ಬಹುಶ: ನಿಮಗೆ ಗೊತ್ತಿರಲಿಕ್ಕಿಲ್ಲ. ಅದು ಆ ದಿನಗಳಲ್ಲಿ ಆಗಿತ್ತು. ಆ ಹಾಡಿನ ಲಿರಿಕಲ್‌ ವಿಡಿಯೋ ಭಾನುವಾರವಷ್ಟೇ ಸೋಷಲ್‌ ಮೀಡಿಯಾದಲ್ಲಿ ಲಾಂಚ್‌ ಆಗಿದೆ.

ಅದರ ರೆಕಾರ್ಡಿಂಗ್‌ ವೇಳೆ ಪಟ್ಟ ಕಷ್ಟದ ಕ್ಷಣಗಳನ್ನು ಗಾಯಕಿ ಅನುರಾಧ್‌ ಭಟ್‌ ಈಗ ನೆನಪಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಭಾನುವಾರವಷ್ಟೇ ಲಾಂಚ್‌ ಆದ ʼಸವಾರಿ‌ʼ ಚಿತ್ರದ ಮರಳಿ ಮರೆಯಾಗಿ ..ಹಾಡಿನ ಲಿರಿಕಲ್‌ ವಿಡಿಯೋ ಲಾಂಚ್. ಹಾಗಂತ ಅಲ್ಲೇನೋ ಕಿರಿಕ್‌ ಆಗಿತ್ತಾ ಅಂತಲ್ಲ. ಬದಲಿಗೆ ಅಲ್ಲಿ ಕೆಲವು ಸ್ವಾರಸ್ಯಕರ ಸಂಗತಿಯೊಂ ದಿದೆ. ಅದನ್ನೇ ಇಲ್ಲಿ ಅವರು ಹೇಳಿಕೊಂಡಿದ್ದಾರೆ.ʼ ಇದನ್ನು ನನ್ನ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ರೆಕಾರ್ಡ್‌ ಮಾಡಲಾಗಿತ್ತು. ರೆಕಾರ್ಡ್‌ ಮಾಡುವ ವೇಳೆ, ನಾನು ಗಂಟಲು ಕಿರಿ ಕಿರಿಯಿಂದ ಬಹಳ ಕಷ್ಟಪಟ್ಟಿದ್ದೆ. ಕಾರಣ ನಾನು ಸೊಳ್ಳೆಯೊಂದನ್ನು ನುಂಗಿದ್ದೆʼ ಅಂತ ಮರಳಿ ಮರೆಯಾಗಿ … ಹಾಡಿನ ಟ್ರ್ಯಾಕ್‌ ಧ್ವನಿ ಮುದ್ರಣದ ವೇಳೆ ಸೊಳ್ಳೆ ಕಾರಣಕ್ಕೆ ತಾವು ಕಷ್ಟಪಟ್ಟಿದ್ದನ್ನು ಬರೆದು ಪೇಸ್‌ ಬುಕ್‌ ನಲ್ಲಿ ಹಂಚಿಕೊಂಡಿದ್ದಾರೆ ಗಾಯಕಿ ಅನುರಾಧ ಭಟ್.‌ ಅವರ ಅನುಭವದ ಅನಿಸಿಕೆಗೆ ಅಭಿಮಾನಿಗಳು ಸಖತ್‌ ಫನ್ನಿ ಕಾಮೆಂಟ್ಸ್‌ ಹಾಕಿ ಖುಷಿ ಪಟ್ಟಿದ್ದಾರೆ. ಕಾಮೆಂಟ್ಸ್‌ಗಳೇ ಅಲ್ಲಿ ಮಜಾ ಆಗಿವೆ. ಸಸ್ಯಹಾರಿಯಾಗಿರುವ ಅನುರಾಧ ಭಟ್‌ ಸೊಳ್ಳೆ ನುಂಗಿ ಮಂಸಹಾರಿ ಆಗಿಬಿಟ್ರಾ ಅಂತ ಕೆಲವರು ತಮಾಷೆ ಮಾಡಿದ್ದಾರೆ.ಸೊಳ್ಳೆ ನುಂಗಿದ ಕಾರಣಕ್ಕೆ ಆ ಹಾಡು ಅಷ್ಟು ಮಧುರವಾಗಿ ಮೂಡಿ ಬಂದಿರಬೇಕು ಅಂತ ಕೆಲವರು ವರ್ಣಿಸಿದ್ದು ವಿಶೇಷ.

ಉಳಿದಂತೆ ಈ ಹಾಡಿನ ದೊಡ್ಡ ಜನಪ್ರಿಯತೆಗೆ ಹೆಸರಾಂತ ಗಾಯಕಿ ಸಾಧನಾ ಸರ್ಗಮ್‌ ಕೂಡ ಕಾರಣ. ಯಾಕಂದ್ರೆ ʼಸವಾರಿʼ ಚಿತ್ರದಲ್ಲಿ ಈ ಹಾಡು ಹಾಡಿದ್ದು ಬಾಲಿವುಡ್‌ ನ ಹೆಸರಾಂತ ಗಾಯಕಿ ಸಾಧನಾ ಸರ್ಗಮ್. ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿ ಅವರಿಂದ ಅದು ಸಾಧ್ಯವಾಗಿತ್ತು. ಆ ಮೂಲಕ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಮೊಳಗಿದ ಸಾಧನಾ ಸರ್ಗಮ್ ಅವರ ಕಂಠಸಿರಿಯ ಮೂಲಕ‌ ಮರಳಿ ಮರೆಯಾಗಿ…ಹಾಡು ಮನೆ ಮಾತಾಯಿತು.

ಆ ಮೂಲಕ ಕನ್ನಡಕ್ಕೆ ಸುಧೀರ್‌ ಅತ್ತಾವರ್‌ ಎನ್ನುವ ಕ್ರೀಯಾಶೀಲ ಬರಹಗಾರನೊಬ್ಬ ಸಿಕ್ಕರು ಅನ್ನೋದು ಎಲ್ಲರಿಗೂ ಗೊತ್ತು. ಈ ಹಾಡಿನ ಜನಪ್ರಿಯತೆಯ ಮೂಲಕವೇ ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿ ಸಾಕಷ್ಟು ಅವಕಾಶ ಹುಡುಕಿಕೊಂಡು ಬಂದವು. ಮತ್ತೊಂದೆಡೆ ಬರಹಗಾರರಾಗಿದ್ದ ಸುಧೀರ್‌ ಅತ್ತಾವರ್‌, ನಿರ್ದೇಶಕರಾಗಿ ಬಡ್ತಿ ಪಡೆದರು. ಸಾಕಷ್ಟು ಪ್ರಶಸ್ತಿಗಳು ಅವರಿಗೆ ಬಂದವು.

ಈಗಲೂ ಈ ಹಾಡಿನ ಸಂತಸದ ಕ್ಷಣಗಳನ್ನು ನೆನಪಿಸಿಕೊಳ್ಳುವ ಬರಹಗಾರ ಸುಧೀರ್‌ ಅತ್ತಾವರ್‌, ನಾನು ಈ ಹಾಡು ಬರೆದೆ ಎನ್ನುವುದಕ್ಕಿಂತ ಈ ಸಾಹಿತ್ಯಕ್ಕೆ ಗಾಯಕಿ ಸಾಧನಾ ಸರ್ಗಮ್‌ ಧ್ವನಿ ನೀಡಿದ ಕಾರಣಕ್ಕೆ ಇದು ಸಾಕಷ್ಟು ಜನಪ್ರಿಯತೆ ಪಡೆಯಿತು. ಆ ಮೂಲಕ ನಾನು ಕೂಡ ನಿರ್ದೇಶಕನಾಗುವ ಅವಕಾಶ ಬಂತು ಎನ್ನುತ್ತಾ ಆ ಹಾಡಿನ ಮೂಲಕ ತಮಗೆ ಸಿಕ್ಕ ಅವಕಾಶ ನೆನಪಿಸಿಕೊಳ್ಳುತ್ತಾರೆ. ಹಲವು ವರ್ಷಗಳ ನಂತರ ಹಾಡಿನ ಲಿರಿಕಲ್‌ ವಿಡಿಯೋ ಲಾಂಚ್‌ ಮೂಲಕ ಇಷ್ಟೇಲ್ಲ ನೆನಪಾದವು.

Categories
ಸಿನಿ ಸುದ್ದಿ

ಹಿರಿಯ ನಟಿ ಶ್ರುತಿ ಅವರ ಮೇಲೆ ಸಿಎಂ ಬಿಎಸ್‌ವೈ ಮುನಿಸು ಯಾಕೆ ?

ಹಿರಿಯ ನಟಿ ಶ್ರುತಿ ಅವರಿಗೆ ಸರ್ಕಾರ ಕೋಕ್‌ ಕೊಟ್ಟಿದೆ. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಅವರನ್ನು ಬದಲಾಯಿಸಿದೆ. ಅವರ ಜಾಗಕ್ಕೆ ಯಡಿಯೂರಪ್ಪ ಅವರ ಆಪ್ತ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ. ಇದು ರಾಜ್ಯ ಬಿಜೆಪಿಯಲ್ಲಿ ಚರ್ಚೆಗೆ ಕಾರಣವಾಗಿದೆ. ಹಾಗೆಯೇ ಚಿತ್ರೋದ್ಯಮದಲ್ಲೂ ಇದು ತೀವ್ರ ಚರ್ಚೆಗೆ ಏಡೆ ಮಾಡಿಕೊಟ್ಟಿದೆ. ಶ್ರುತಿ ಅವರನ್ನು ಏಕಾಏಕಿ ಸರ್ಕಾರ ಯಾಕೆ ಬದಲಾಯಿಸಿತು? ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅವರಿನ್ನು ಆರು ತಿಂಗಳು ಪೂರೈಸಿಲ್ಲ, ಆಗಲೇ ಅವರನ್ನು ಕಿತ್ತು ಹಾಕಿದ್ದು ಯಾಕೆ? ಹೀಗೆಲ್ಲ ಚರ್ಚೆಗಳು ನಡೆಯುತ್ತಿವೆ. ಹಾಗಾದ್ರೆ ಸರ್ಕಾರ ಯಾಕಾಗಿ ಈ ರೀತಿ ಮಾಡಿತು ಅನ್ನೋದು ಯಕ್ಷ ಪ್ರಶ್ನೆ ಆಗಿದೆ. ವಿಚಿತ್ರ ಅಂದ್ರೆ ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕುವ ಬಗ್ಗೆ ಒಂದೇ ಒಂದು ಮನ್ಸೂಚನೆ ಕೂಡ ಶ್ರುತಿ ಅವರಿಗೇ ಸಿಕ್ಕಿಲ್ವಂತೆ.

ಚಿತ್ರರಂಗದಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ತಾರೆಯರ ಪೈಕಿ ಇತ್ತೀಚೆಗೆ ನಟಿ ತಾರಾ ಹಾಗೂ ಶ್ರುತಿ ಅವರಿಗೆ ಸರ್ಕಾರ ನಿಗಮಗಳ ಆಧ್ಯಕ್ಷ ಸ್ಥಾನದ ಅವಕಾಶ ನೀಡಿತ್ತು. ತಾರಾ ಅವರು ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದರೆ, ಶ್ರುತಿ ಅವರು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರಾದರು. ಇವರಿಬ್ಬರಿಗೂ ಅವಕಾಶ ಸಿಕ್ಕಿದ್ದು ಕಂಡ ಚಿತ್ರರಂಗ ಖುಷಿ ಪಟ್ಟಿತು. ಆದರೆ ಈಗ ಪರಿಸ್ಥಿತಿಯೇ ಭಿನ್ನವಾಗಿದೆ.ಎಲ್ಲವೂ ಸರಿಯಾಗಿಯೇ ಇದಿದ್ದರೆ ಶ್ರುತಿ ಅವರು ಈಗಲೂ ಅಧ್ಯಕ್ಷಾಗಿಯೇ ಇರುತ್ತಿದ್ದರೋ ಏನೋ, ಕೊರೋನಾ ಕಾಲದಲ್ಲಿ ಅಷ್ಟಾಗಿ ಅವರು ನಿಗಮದ ಕಡೆ ಮುಖ ಹಾಕಿರಲಿಲ್ಲ ಎನ್ನುವ ಆರೋಪ ಇದೆ.

ಅದಕ್ಕಿಂತ ವಿಚಿತ್ರ ಅಂದ್ರೆ, ದೆಹಲಿ, ಹೈದ್ರಾಬಾದ್‌ ಅಂತಲೇ ಹೆಚ್ಚು ತಿರುಗಾಡುತ್ತಿದ್ದ ಸಚಿವ ಯೋಗೇಶ್ವರ್‌ ಅವರೊಂದಿಗೆ ನಟಿ ಶ್ರುತಿ ಕೂಡ ಇತ್ತೀಚೆಗೆ ದೇವಾಲಯಗಳಿಗೆ ಸುತ್ತಾಡಿದ್ದರು. ಇವರಿಬ್ಬರ ಟೆಂಪಲ್‌ ರನ್‌ ಮೇಲೆ ಸಿಎಂ ಕಣ್ಣು ಬಿದ್ದಿತ್ತು. ಅದೇ ವೇಳೆ ಪ್ರವಾಸೋದ್ಯಮ ಇಲಾಖೆ ತೀವ್ರ ನಷ್ಟದಲ್ಲಿತ್ತು. ಅದೇ ಕಾರಣಕ್ಕೆ ನಟಿ ಶ್ರುತಿ ಅವರನ್ನು ನಿಗಮದಿಂದ ಸರ್ಕಾರ ಬದಲಾಯಿಸಿದೆ ಎನ್ನುವ ಮಾತುಗಳು ಇವೆ. ರಾಜಕಾರಣವೇ ಹಾಗೆ, ಜನರಲ್ಲಿ ಮನೆ ಮಾತಾದ ಕಲಾವಿದರು ರಾಜಕಾರಣದಲ್ಲಿ ಕೆಲವೊಮ್ಮೆ ಹಿನ್ನೆಡೆ ಸಾಧಿಸಿದ್ದೂ ಇದೆ. ಅದಕ್ಕೆ ಇಲ್ಲಿ ಬೇಕಾದಷ್ಟು ಉದಾಹರಣೆಗಳು ಇವೆ. ಪಾಪಾ, ಶ್ರುತಿ ಅವರನ್ನು ಬಿಜೆಪಿ ಅದೇ ರೀತಿ ಮಾಡಿ ಬಿಟ್ಟಿತಾ ಗೊತ್ತಿಲ್ಲ. ವಾಸ್ತವ ಹಿರಿಯ ನಟಿ ಶ್ರುತಿ ಅವರಿಗೇ ಗೊತ್ತು.

error: Content is protected !!