ನಟ ದರ್ಶನ್‌ ವಿರುದ್ಧ ದೂರು – ಚಿತ್ರರಂಗದಿಂದ ಐದು ವರ್ಷ ಬ್ಯಾನ್‌ ಮಾಡ್ಬೇಕಂತೆ,ಆದರೆ ಕೆಲವರ ವಿರೋಧಕ್ಕೆ ತಿರುಗೇಟು ಕೊಟ್ಟ ಹಾಗಿದೆ ದರ್ಶನ್‌ ಪರವಾದ ಅಭಿಯಾನ !

ನಟ ದರ್ಶನ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸೋಮವಾರವಷ್ಟೇ ದರ್ಶನ್‌ ಹಿಂಬಾಲಿಕರಿಂದ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಅಂತ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌, ಸೈಬರ್‌ ಕ್ರೈಂಗೆ ದೂರು ನೀಡಿದ್ದರ ಬೆನ್ನಲೇ ಮಾನವ ಹಕ್ಕುಗಳು ರಕ್ಷಣೆ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ, ನಟ ದರ್ಶನ್‌ ವಿರುದ್ಧ ಕರ್ನಾಟಕ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.

ದರ್ಶನ್‌ ಅವರು ಬಳಸುತ್ತಿರುವ ಪದ ಬಳಕೆ ಸರಿಯಿಲ್ಲ. ಮಾಧ್ಯಮಗಳಿಗೂ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ವಾಣಿಜ್ಯ ಮಂಡಳಿ ಎಚ್ಚರಿಕೆ ನೀಡಬೇಕು. ಒಬ್ಬ ನಟನಾಗಿ ಸಾರ್ವಜನಿಕ ಕ್ಷೇತ್ರದಲ್ಲಿದ್ದಾಗ ತುಂಬಾ ಎಚ್ಚರಿಕೆಯಿಂದ ಮಾತನಾಡಬೇಕು. ಆದರೆ ದರ್ಶನ್‌ ತುಂಬಾನೆ ಅಶ್ಲೀಲ ಪದ ಬಳಕೆ ಮಾಡಿ ಕೆಲವರನ್ನು ನಿಂದಿಸಿದ್ದಾರೆ. ಇದು ಚಿತ್ರರಂಗ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಚಿತ್ರರಂಗದಿಂದ ಐದು ವರ್ಷ ಬ್ಯಾನ್‌ ಮಾಡಬೇಕು ಎಂದು ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಒತ್ತಾಯಿಸಿದೆ. ಪದ ಬಳಕೆ ಮಾಡುವಾಗ ಎಚ್ಚರ ಇರಲಿ ಎಂದು ದರ್ಶನ್‌ ಅವರಿಗೆ ಕರ್ನಾಟಕ ವಾಣಿಜ್ಯ ಮಂಡಳಿ ವಾರ್ನಿಂಗ್‌ ಮಾಡಬೇಕು. ಈ ಕೆಲಸವನ್ನು ಮಂಡಳಿ ಮುಂದಿನ ನಾಲ್ಕುದಿನಗಳಲ್ಲಿ ಮಾಡಬೇಕು. ಹಾಗೆ ಮಾಡದಿದ್ದರೆ ಹೋರಾಟ ನಡೆಸುವುದಾಗಿ ಮಾನವ ಹಕ್ಕುಗಳು ರಕ್ಷಣೆ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ಅಧ್ಯಕ್ಷ ಮೋಹನ್‌ ಎಚ್ಚರಿಕೆ ನೀಡಿದ್ದಾರೆ.


ಈ ಮಧ್ಯೆಯೇ ಸೋಷಲ್‌ ಮೀಡಿಯಾದಲ್ಲಿ ನಟ ದರ್ಶನ್‌ ಪರವಾಗಿ ಅಭಿಯಾನ ಶುರುವಾಗಿದೆ. ʼಜಗತ್ತೇ ನಿಮ್ಮ ವಿರುದ್ಧ ನಿಂತರು ಆ ಜಗತ್ತಿನ ವಿರುದ್ಧ ನಾವು ನಿಲ್ಲುತ್ತೇವೆ. ‘we stand with d boss’ʼ ಎನ್ನುವ ಅಭಿಯಾನ ಈಗ ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆಗುತ್ತಿದೆ.ಸಂದೇಶ್‌ ಪ್ರಿನ್ಸ್‌ ಹೋಟೆಲ್‌ ಸಿಬ್ಬಂದಿ ಮೇಲೆ ದರ್ಶನ್‌ ಹಲ್ಲೆ ಮಾಡಿದ್ದಾರೆ, ಅವರ ಹಿಂಬಾಲಿಕರಿಂದ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಅಂತ ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಆರೋಪ ಮಾಡಿದ್ದಲ್ಲದೆ, ದರ್ಶನ್‌ ಹಿಂಬಾಲಕರ ವಿರುದ್ಧ ಈಗ ಸೈಬರ್‌ ಕ್ರೈಂಗೆ ದೂರು ನೀಡಿದ್ದರ ನಡುವೆಯೂ ದರ್ಶನ್‌ ಪರ ಅಭಿಯಾನಕ್ಕೆ ಸಾವಿರಾರು ಮಂದಿ ಪೋಸ್ಟ್‌ ಮಾಡಿದ್ದಾರೆ. ಸೆಲಿಬ್ರಿಟಿಗಳು ಜತೆಗೆ ರಾಜಕಾರಣಿಗಳು ಕೂಡ ದರ್ಶನ್‌ ಅವರಿಗೆ ಬೆಂಬಲ ಸೂಚಿಸಿ ಟ್ವಿಟ್‌ ಮಾಡಿದ್ದಾರೆ.ʼನಿಮ್ಮ ಸಂಕಷ್ಟದಲ್ಲಿ ನಾವಿದ್ದೇವೆ.ಯಾರು ನಿಮ್ಮ ಜೊತೆಗಿರುತ್ತಾರೋ ಇಲ್ಲವೋ ಗೊತ್ತಿಲ್ಲ.ನಾನಂತೂ ನಿಮ್ಮ ಜತೆಗಿರುತ್ತೇನೆ.ನಿಮ್ಮನ್ನು ನಾವು ಪ್ರತಿಸುತ್ತೇವೆ.ನಿಮಗೆ ನಮ್ಮ ಬೆಂಬಲ ಸದಾ ಇದೆʼ ಎಂದು ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಟ್ವಿಟ್‌ ಮಾಡಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಸಂಸದ ಪಿ.ಸಿ. ಮೋಹನ್‌ ಕೂಡ ದರ್ಶನ್‌ ಪರವಾಗಿ ಟ್ವೀಟ್‌ ಮಾಡಿದ್ದು, ‘ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕಲಾಸೇವೆ ಸಲ್ಲಿಸುತ್ತಿರುವ ದರ್ಶನ್ ತೂಗುದೀಪರವರು ನನಗೆ ಆತ್ಮೀಯರು. ಚಾಲೆಂಜಿಂಗ್ ಸ್ಟಾರ್ ಯಾರೇ ಕಷ್ಟ ಎಂದರೂ ಸಹಾಯಕ್ಕೆ ನಿಲ್ಲುತ್ತಾರೆ. ರೈತರ ಹೋರಾಟ, ರೈತರ-ಕಲಾವಿದರ ಕಷ್ಟ, ಪ್ರಾಣಿಗಳ ಸಂಕಷ್ಟ ಅಂತ ಬಂದಾಗ ಒಂದು ಹೆಜ್ಜೆ ಮುಂದೆ ಬರುವುದು ದರ್ಶನ್ ಎಂದು ಕರ್ನಾಟಕಕ್ಕೇ ತಿಳಿದಿದೆ. ಯಾವುದೇ ಆಧಾರವಿಲ್ಲದೆ ದರ್ಶನ್ ಅವರ ಮೇಲೆ ಅನಗತ್ಯ ಆರೋಪ ಮಾಡಿ, ಅವರ ತೇಜೋವಧೆಗೆ ಯತ್ನಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಶೋಭೆ ತರುವುದಿಲ್ಲ. ಚಿತ್ರರಂಗದ ಹಿರಿಯರು ಹಾಗೂ ವಾಣಿಜ್ಯಮಂಡಳಿ ಮಧ್ಯಪ್ರವೇಶಿಸಿ ಎಲ್ಲಾ ಗೊಂದಲಗಳನ್ನು ನಿವಾರಿಸಬೇಕಾಗಿ ನನ್ನ ವಿನಂತಿ’ ಎಂದು ಉಲ್ಲೇಖಿಸಿದ್ದಾರೆ. ಕೆಲವರ ವಿರೋಧದ ನಡುವೆಯೂ ದರ್ಶನ್‌ ಹಲವರಿಗೆ ಬೇಕಾಗಿರೋದಕ್ಕೆ ಇದು ಸಾಕ್ಷಿ.

Related Posts

error: Content is protected !!