ಕನಸೆಂಬ ಕುದುರೆಯನ್ನೇರಿದ ನಟ ವೈಜನಾಥ್‌ ಬಿರಾದರ್‌ಗೆ ಪದ್ಮಶ್ರೀ ಪ್ರಶಸ್ತಿ ಸಿಗಬಾರದೇಕೆ ?

ಹಿರಿಯ ಪತ್ರಕರ್ತ ಟೆಲೆಕ್ಸ್ ರವಿಕುಮಾರ್‌ ಪತ್ರಕರ್ತರು ಮಾತ್ರವಲ್ಲ, ಸೂಕ್ಷ್ಮ ಸಂವೇದನೆಯ ಲೇಖಕರು ಹೌದು. ಅವರು ಬರೆದ ʼ ನಂಜಿಲ್ಲದ ಪದಗಳುʼ ಕವನ ಸಂಕಲನದ ಕೃತಿಗೆ ಸಾಕಷ್ಟು ಪ್ರಶಸ್ತಿ ಬಂದಿವೆ. ಸಾಹಿತ್ಯದ ಜತೆಗೆ ಸಧಬಿರುಚಿಯ ಸಿನಿಮಾಗಳಂದ್ರೆ ಅವರಿಗೆ ಅತೀವ ಆಸಕ್ತಿ. ಕನ್ನಡದ ಜತೆಗೆ ಅನ್ಯ ಭಾಷೆಗಳಲ್ಲೂ ಬರುವ ಕಲಾತ್ಮಕ ಹಾಗೂ ಸಾಮಾಜಿಕ ಕಾಳಜಿಯ ಕಮರ್ಷಿಯಲ್‌ ಸಿನಿಮಾಗಳನ್ನು ನಿರಂತರವಾಗಿ ನೋಡುತ್ತಾ, ವಿಮರ್ಶಿಸುತ್ತಾ ಬರುತ್ತಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ಅಭಿಯಾನ ಶುರುವಾಗಿರುವ ಈ ಹೊತ್ತಲ್ಲಿ ಅವರು, ಹಿರಿಯ ನಟ ವೈಜನಾಥ್‌ ಬಿರಾದರ್‌ ಅವರನ್ನು ಶಿಫಾರಸ್ಸು ಮಾಡಿ ಬರೆದ ಬರಹ ಇಲ್ಲಿದೆ. ಪದ್ಮಶ್ರೀ ಪ್ರಶಸ್ತಿಗೆ ಬಿರಾದರ್‌ ಯಾಕೆ, ಹೇಗೆ ಅರ್ಹರು ಅನ್ನೋದಕ್ಕೆ ಅವರು ಕೊಟ್ಟ ಕಾರಣಗಳು ಇಲ್ಲಿವೆ . ಓವರ್‌ ಟು ರವಿಕುಮಾರ್..

ಕನ್ನಡದ ಉತ್ತರಕರ್ನಾಟಕದ ಜವ್ಹಾರಿ ನಟ ವೈಜನಾಥ್ ಬಿರಾದರ್ ಕನ್ನಡ ಚಿತ್ರರಂಗದಲ್ಲಿ ನಟನೆಯ ಗೀಳಿಗೆ ಬಿದ್ದು ಬೀದರ್‌ನಿಂದ ಬೆಂಗಳೂರಿಗೆ ಬಂದು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಡ ಕೃಷಿಕುಟುಂಬ ಬಿರಾದಾರ್ ತಾಯಿಯಿಂದ‌ ಪಡೆದ ಹಾಡು,ನಟನೆಯೆ ಚಿತ್ರರಂಗದ ಗೀಳು ಹಚ್ಚಿತು ಎನ್ನಬಹುದು. ಕೇವಲ ಮೂರನೆ ಕ್ಲಾಸ್ ಓದಿದ ಬಿರಾದಾರ್ ಗೆ ನಾಲ್ಕನೆ ಕ್ಲಾಸ್ ಓದಿ ಮೇರು ನಟರಾದ ಡಾ.ರಾಜಕುಮಾರ ಅವರು ಆದರ್ಶವಾಗಿ ಕಂಡರು.ಬೆಂಗಳೂರೆಂಬ ಮಾಯಾನಗರಿಯಲ್ಲಿ ವರ್ಷಾನುಗಟ್ಟಲೆ ಅನ್ನ ನೀರು ನೆರಳಿಲ್ಲದೆ ಪಡಬಾರದ ಕಷ್ಟ ಪಟ್ಟ ಬಿರಾದರ್ ನ್ನು ಗುರುತಿಸಿ ಚಿತ್ರದಲ್ಲಿ ಅವಕಾಶ ಕೊಟ್ಟವರು ಅನುಭವ ಕಾಶಿನಾಥ್.ಬಿರಾದಾರ್ ಕನ್ನಡ ಸಿನಿಮಾಗಳಲ್ಲಿ ಭಿಕ್ಷುಕನ ಪಾತ್ರಕ್ಕೆ ಬ್ರಾಂಡ್ ಆಗಿಬಿಟ್ಟರು. ಭಿಕ್ಷುಕ,ಕುಡುಕ ಪಾತ್ರಗಳೆ ಅವರಿಗೆ ಖಾಯಂ ಆಗಿ ಚಿತ್ರರಂಗದಲ್ಲಿ ನೆಲೆಯೂರಿದರು.ಭಿಕ್ಷುಕ ಪಾತ್ರಗಳಿಗೆ ಸೀಮಿತರಾದ ಬಿರಾದಾರ್ ಎಂದಿಗೂ ನೊಂದುಕೊಳ್ಳಲಿಲ್ಲ. ‘ ಭಿಕ್ಷುಕ ಪಾತ್ರವೆ ನನ್ನ ಜೀವನದ ಅಕ್ಷಯ ಪಾತ್ರೆ’ ಎಂದು ಸಂತೃಪ್ತರಾಗಿದ್ದರು. 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ನೈಜ ಅಭಿನಯದಿಂದ ತಮ್ಮದೆ ಅಭಿಮಾನ ವಲಯ ವನ್ನು ಹೊಂದಿರುವ ಬಿರಾದಾರ್ ಅವರ ಅಪ್ರತಿಮ ಪ್ರತಿಭೆಗೆ ಕನ್ನಡಿ ಯಂತೆ ” ಕನಸೆಂಬ ಕುದುರೆಯನ್ನೇರಿ” ಚಿತ್ರವನ್ನು ನೋಡಬೇಕು.

2010 ರಲ್ಲಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಈ ಚಿತ್ರ ಸ್ಪೇನ್ ನಲ್ಲಿ ನಡೆದ ಅಂತರರಾಷ್ಟ್ರೀಯ India image ಸ್ಪರ್ಧೆಯಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಪಡೆದು ಕನ್ನಡ ಚಿತ್ರರಂಗದ ಹಿರಿಮೆಗೆ ಗರಿ ಮೂಡಿಸಿದರು.
ಬಿರಾದಾರ್ ಕನ್ನಡದ ಮತ್ತೋರ್ವ ಖ್ಯಾತ ನಟ ಅನಂತನಾಗ್ ರಷ್ಟು ಸ್ಫುರದ್ರೂಪಿಯಲ್ಲ. ಅನಂತನಾಗ್ ಅವರಿಗಿರಬಹುದಾದ ಸಾಮಾಜಿಕ‌ ಹಿನ್ನಲೆಯಾಗಲಿ, ಸಾಂಸ್ಕೃತಿಕ ಪ್ರಭಾವಳಿಯಾಗಲಿ , ರಾಜಕೀಯ ಸಿದ್ಧಾಂತದ ಬಲವಾಗಲಿ ಬಿರಾದರ್ ಗೆ ಇಲ್ಲ. ಆದರೆ ಬಿರಾದಾರ್ ತನಗೊಹಿಸುವ ಪಾತ್ರದಲ್ಲಿ ಯಾರಿಗೂ ಕಮ್ಮಿಯಿಲ್ಲದಂತೆ ಪ್ರತಿಭೆ ಯನ್ನು ಮೆರೆಯುತ್ತಾರೆ. ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು. ಒಬ್ಬ ಸಾಮಾನ್ಯ ನಟ ಕಾಮಿಡಿಯನ್ ಆಗಿ, ಪೋಷಕ ಪಾತ್ರಗಳಲ್ಲಿ ಐದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವುದು ,ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆವುದು ಸಾಧನೆಯಲ್ಲವೆ?

ನಿಮಗೆ ಗೊತ್ತಿರಲಿ, ಬಿರಾದಾರ್ ಅವರಿಗೆ ಚಲನಚಿತ್ರವೊಂದರಲ್ಲಿ ಮೊಟ್ಟಮೊದಲಿಗೆ ಚಿಕ್ಕದೊಂದು ಪಾತ್ರ ಕೊಡಿಸಿದವರು ಅನಂತನಾಗ್ . ಖ್ಯಾತ ನಿರ್ದೇಶಕ ಎಂ.ಎಸ್ ಸತ್ಯು ಅವರ ನಿರ್ದೇಶನದ ‘ಬರ’ ಚಿತ್ರದ ಚಿತ್ರೀಕರಣ ಬೀದರ್ ನಲ್ಲಿ ಆಸಕ್ತಿಯಿಂದ ಚಿತ್ರೀಕರಣ ನೋಡಲು ಹೋದ ಬಿರಾದಾರ್ ನಟ ಅನಂತನಾಗ್ ಅವರಿಗೆ ಊಟಕ್ಕೆ ಮೊಸರು ಅಗತ್ಯವಿದೆ ಎಂದು ತಿಳಿದು ತಮ್ಮ ಮನೆಯಿಂದ ಅನಂತ್ ನಾಗ್ ಅವರಿಗೆ ಮೊಸರು ತಂದುಕೊಡುತ್ತಾರೆ. ಈ ಸಂದರ್ಭದಲ್ಲಿ ಬಿರಾದಾರ್ ರಂಗಭೂಮಿ ನಟನೆಂಬ ಸುದ್ದಿ ತಿಳಿದ ಅನಂತ್ ನಾಗ್ ನಿರ್ದೇಶಕರಿಗೇಳಿ ಬಿರಾದಾರ್ ಅವರಿಗೆ ‘ಬರ’ ಚಿತ್ರದಲ್ಲಿ ಸಣ್ಣಪಾತ್ರವೊಂದನ್ನು ಕೊಡಿಸು ತ್ತಾರೆ. ಅನಂತ್ ನಾಗ್ ಮತ್ತು ಬಿರಾದಾರ್ ಅವರನ್ನು ಪರಸ್ಪರ ಹೋಲಿಕೆ ಮಾಡಲಾಗದು ನಿಜ, ಆದರೆ ನೈಜ ಪ್ರತಿಭೆ ಬಿರಾದಾರ್ ಒಕ್ಕೂಟ ಸರ್ಕಾರದ ‘ ಪದ್ಮಶ್ರೀ’ ಪ್ರಶಸ್ತಿಗೆ ಎಲ್ಲಾ ಬಗೆಯಲ್ಲೂ ಅರ್ಹರಿ ದ್ದಾರೆ ಎಂಬುದನ್ನು ಅಲ್ಲೆಗೆಳೆಯುವಂತಿಲ್ಲ. ಬಿರಾದಾರ್ ಅವರಿಗೆ ಪದ್ಮಶ್ರೀ ಸಿಗಲಿ.

Related Posts

error: Content is protected !!