Categories
ಸಿನಿ ಸುದ್ದಿ

10 ರುಪಾಯಿಗೆ ಸ್ವರ್ಗ ತೋರಿಸ್ತಾರಂತೆ ರಚಿತಾರಾಮ್!‌ ಇದು ಲಕಲಕ ಲ್ಯಾಂಬರ್ಗಿನಿ ಆಲ್ಬಂ ಸಾಂಗ್ ವಿಷಯ ಗುರು…

ಚಂದನ್‌ ಶೆಟ್ಟಿ ಹೊಸ ವರ್ಷಕ್ಕೆ ಹೊಸ ಸಾಂಗ್‌ ರಿಲೀಸ್‌ ಮಾಡೋದು ಎಲ್ಲರಿಗೂ ಗೊತ್ತೇ ಇದೆ. ಆ ಸಾಲಿಗೆ ಈ ವರ್ಷವೂ ಸಹ ಹೊಸದೊಂದು ವಿಡಿಯೋ ಆಲ್ಬಂ ರಿಲೀಸ್‌ ಮಾಡಿದ್ದಾರೆ. ಹೌದು ಬಿಂದ್ಯಾ ಮೂವೀಸ್ ಮೂಲಕ ಅವರು “ಲಕಲಕ ಲ್ಯಾಂಬರ್ಗಿನಿ” ಎಂಬ ವಿಡಿಯೋ ಆಲ್ಬಂ ರಿಲೀಸ್‌ ಮಾಡಿದ್ದಾರೆ. ವಿಶೇಷವೆಂದರೆ, ಈ ಆಲ್ಬಂ ಸಾಂಗ್‌ನಲ್ಲಿ ಚಂದನ್‌ ಶೆಟ್ಟಿ ಜೊತೆ ನಟಿ ರಚಿತಾರಾಮ್‌ ಕೂಡ ಹೆಜ್ಜೆ ಹಾಕಿದ್ದಾರೆ.

ಕನ್ನಡದಲ್ಲಿ ತಮ್ಮದೇ ಗಾಯನದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ನೀಡಿ, ಹಾಡಿ, ಅಭಿನಯಿಸಿರುವ “ಲಕ ಲಕ ಲ್ಯಾಂಬರ್ಗಿನಿ” ಹಾಡು ಬಿಡುಗಡೆಯಾಗಿದೆ.
ಬಿಂದ್ಯಾ ಮೂವೀಸ್ ಬ್ಯಾನರ್‌ನಲ್ಲಿ ಆರ್. ಕೇಶವ್ ಈ ಹಾಡಿನ ನಿರ್ಮಾಪಕರು. ನಂದಕಿಶೋರ್ ಇದರ ನಿರ್ದೇಶಕರು. ನಟಿ ರಚಿತಾರಾಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಕೆ.ಮಂಜು ಹಾಡು ಬಿಡುಗಡೆ ಮಾಡಿ ಶುಭ ಕೋರಿದರು.

ಹೊಸವರ್ಷದ ಆರಂಭದಲ್ಲಿ ಹೊಸ ಗೀತೆ ಬಿಡುಗಡೆ ಮಾಡುವುದು ವಾಡಿಕೆ. ಕಳೆದ ನಾಲ್ಕು ವರ್ಷಗಳಿಂದ ಹೊಸವರ್ಷಕ್ಕೆ ಟಕೀಲ, ಬ್ಯಾಡ್ ಬಾಯ್, ತ್ರಿ ಪೇಗ್ಈ ಈಗ “ಲಕಲಕ ಲ್ಯಾಂಬರ್ಗಿನಿ” ಎಂಬ ಆಲ್ಬಂ ಸಾಂಗ್‌ ರಿಲೀಸ್‌ ಮಾಡಲಾಗಿದೆ. ಮೂಲತಃ ರೈತರಾಗಿರುವ ಕೇಶವ್ ಅವರು ತಮ್ಮ ಪುತ್ರಿ ಬಿಂದ್ಯಾ ಹುಟ್ಟುಹಬ್ಬದ ನೆನಪಿಗಾಗಿ ಈ ಹಾಡನ್ನು ನಿರ್ಮಿಸಿದ್ದಾರೆ. ಹಾಗೆ ನೋಡಿದರೆ ಈ ಹಾಡು ಜುಲೈ ತಿಂಗಳಲ್ಲಿ ಆರಂಭವಾಗಬೇಕಿತ್ತು. ದುಬೈನಲ್ಲಿ ಚಿತ್ರೀಕರಣ ಮಾಡುವ ಯೋಚನೆ ತಂಡಕ್ಕಿತ್ತು. ಆದರೆ, ಕೊರೊನಾ ಅಡ್ಡಿಯಾಯಿತು. ಕಾಕತಾಳೀಯ ಎಂಬಂತೆ ಹೊಸವರ್ಷಕ್ಕೆ ಈ ಹಾಡು ಬಿಡುಗಡೆಯಾಗಿದೆ. ಹಾಡಿನಲ್ಲಿ ಅಭಿನಯಿಸಿರುವ ರಚಿತಾರಾಂ ಅವರಿಗೆ, ನಿರ್ದೇಶಕ ನಂದಕಿಶೋರ್ ಸೇರಿದಂತೆ ಇಡೀ ತಂತ್ರಜ್ಞರಿಗೆ, ಹೆಚ್ಚಾಗಿ ನಾನು ಇಲ್ಲಿಯವರೆಗೂ ಮಾಡಿರುವ ಸಾಂಗ್ ನಲ್ಲೇ ಅಪಾರ ವೆಚ್ಚದ ಈ ಹಾಡನ್ನು ನಿರ್ಮಿಸಿದ ನಿರ್ಮಾಪಕರಿಗೆ ನನ್ನ ಧನ್ಯವಾದ. ಹೆಚ್ಚಿನ ಸಂಖ್ಯೆಯಲ್ಲಿ ಈ ಹಾಡನ್ನು ನೋಡುವ ಮೂಲಕ ನಮಗೆ ಪ್ರೋತ್ಸಾಹ ನೀಡಿ ಎಂದರು ಚಂದನ್ ಶೆಟ್ಟಿ.

ನಿರ್ಮಾಪಕ ಕೇಶವ್‌ ಅವರಿಗೆ ಈ ಹಾಡು ಮಾಡಿದ್ದು ಖುಷಿ ಕೊಟ್ಟಿದೆಯಂತೆ. ನನ್ನ ಆಲೋಚನೆಯಲ್ಲಿ ಇದು ಇರಲ್ಲಿಲ್ಲ.
ನನ್ನ ಮಗಳು ಬಿಂದ್ಯಾಳನ್ನು ಹುಟ್ಟು ಹಬ್ಬಕ್ಕೆ ಏನು ಬೇಕು ಎಂದು ಕೇಳಿದಾಗ, ಚಂದನ್ ಶೆಟ್ಟಿ ಜೊತೆ ಡ್ಯಾನ್ಸ್ ಮಾಡಬೇಕು ಎಂದು ಆಸೆಪಟ್ಟಳು. ನಂತರ ಕೆ.ಮಂಜು ಅವರ ಮುಂದೆ ಹೇಳಿದೆ. ಅವರ ಮೂಲಕ ಎಲ್ಲರನ್ನು ಸಂಪರ್ಕಿಸಿ, ಈ ಹಾಡು ನಿರ್ಮಾಣವಾಗಿದೆ. ಇದಕ್ಕೆ ನನ್ನ ಮಗಳು ಬಿಂದ್ಯಾ ಕಾರಣ‌.
ಚಂದನ್ ಶೆಟ್ಟಿ , ರಚಿತಾರಾಂ ಜೊತೆ ನನ್ನ ಮಗಳು ಬಿಂದ್ಯಾ ಕೂಡ ಈ ಹಾಡಿನಲ್ಲಿ ಅಭಿನಯಿಸಿದ್ದಾಳೆ ಎಂದು ಸಂತಸ ಪಟ್ಟರು ನಿರ್ಮಾಪಕ ಕೇಶವ್.

ಇನ್ನು ಈ ಹಾಡಿಗೆ ನಂದಕಿಶೋರ್‌ ನಿರ್ದೇಶಕರು. “ನಾನು ಎಷ್ಟೋ ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ನಿರ್ದೇಶಕನಾಗಿ ಕೆಲಸ ಮಾಡಿದ್ದೀನಿ. ಆಲ್ಬಂ ಸಾಂಗ್ ಇದೇ ಮೊದಲು ನಿರ್ದೇಶನ ಮಾಡಿದ್ದೀನಿ.
ನಿಜಕ್ಕೂ ಮಕ್ಕಳು ಹುಟ್ಟುಹಬ್ಬಕ್ಕೆ ಚಾಕೊಲೇಟ್, ಬಿಸ್ಕೇಟ್ ‌ ಕೇಳುತ್ತಾರೆ. ಆದರೆ ಈ ಹುಡುಗಿ ಅವರ ಅಪ್ಪನ ಬಳಿ ಆಲ್ಬಂ ಸಾಂಗ್ ಮಾಡಲು ಕೇಳಿ, ನೂರಾರು ಜನಕ್ಕೆ ಅನ್ನ ನೀಡಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಇಂತಹ ಗುಣ ಇರುವುದು ನಿಜಕ್ಕೂ ಶ್ಲಾಘನೀಯ ಎಂದರು ನಿರ್ದೇಶಕ ನಂದ ಕಿಶೋರ್.

ಶೇಖರ್ ಚಂದ್ರ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ , ಮುರಳಿ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಹಾಡಿಗಿದೆ. ಈ ವೇಳೆ ನಿವೇದಿತಾ, ನಿರ್ಮಾಪಕ ಕೇಶವ್ ಅವರ ಪತ್ನಿ ಇಂದಿರಾ ಇದ್ದರು.

Categories
ಸಿನಿ ಸುದ್ದಿ

ರಾಜಮೌಳಿ ಸಿನಿಮಾ ಮುಂದೆ ಹೋಗಲ್ಲ; ಅಂದುಕೊಂಡ ದಿನವೇ ಆರ್ ಆರ್ ಆರ್ ರಿಲೀಸ್

ಎಸ್.ಎಸ್.ರಾಜಮೌಳಿಯ ಆರ್ ಆರ್ ಆರ್ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಜನವರಿ 7ರಂದು ಸಿನಿಮಾ ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ. ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಯುತ್ತಿರುವ ಜಕ್ಕಣ್ಣಗಾರು ಟೀಂ, ಕೇರಳದಲ್ಲಿ ಅದ್ಧೂರಿ ಇವೆಂಟ್ ಗೆ ಪ್ಲಾನ್ ಮಾಡಿಕೊಂಡಿದೆ. ಈ ನಡುವೆ ದೇಶದಲ್ಲಿ ಕೊರೋನಾ ಕೇಸ್ ಗಳು ಹೆಚ್ಚುತ್ತಿರುವುದರಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತದೆಯೇ ಅನ್ನೋ ಟಾಕ್ ಸಿನಿ ಜಗತ್ತಿನಲ್ಲಿ ಓಡಾಡ್ತಿದೆ.

ದೇಶದಲ್ಲಿ ಕೊರೋನಾ ರೂಪಾಂತರಿ ಪ್ರಕರಣಗಳು ಹೆಚ್ಚಾಗ್ತಿವೆ. ಜನವರಿಯಲ್ಲಿ ಕೋವಿಡ್ ಪ್ರಕರಣ ಮತ್ತಷ್ಟು ಹೆಚ್ಚಾಗಲಿವೆ ಎನ್ನಲಾಗ್ತಿದೆ. ಹೀಗಾಗಿ, ದೇಶದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಕೆಲವು ಕಡೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ದೆಹಲಿಯಲ್ಲಿ ಥಿಯೇಟರ್ ಬಂದ್ ಮಾಡಲಾಗಿದೆ. ಇದರಿಂದ ಶಾಹಿದ್ ಕಪೂರ್ ಅಭಿನಯದ ಸಿನಿಮಾ ‘ಜೆರ್ಸಿ’ ರಿಲೀಸ್ ದಿನಾಂಕವನ್ನು ಪೋಸ್ಟ್ ಪೋನ್ ಮಾಡಿದೆ. ಡಿಸೆಂಬರ್ 31ರಂದು ತೆರೆಗೆ ಬರಬೇಕಿದ್ದ ಜೆರ್ಸಿ ತನ್ನ ಮಾರ್ಗ ಬದಲಾಯಿಸಿದೆ. ಹೀಗಾಗಿ ಆರ್ ಆರ್ ಆರ್ ತಂಡ ಕೂಡ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದ್ರೆ ಆರ್ ಆರ್ ಆರ್ ಸಿನಿಮಾ ಮುಂದಕ್ಕೆ ಹೋಗುವ ಚಾನ್ಸ್ ಇಲ್ಲ. ಯಾಕಂದ್ರೆ ಈಗಾಗ್ಲೇ ಸೆನ್ಸಾರ್ ಮುಗಿಸಿ ಥಿಯೇಟರ್ ಗೆ ಬರೋದಿಕ್ಕೆ ಸಕಲ ರೀತಿಯಿಂದಲೂ ಸಿನಿಮಾ ತಂಡ ತಯಾರಾಗಿದೆ. ಇದು ಸುಳ್ಳು ಸುದ್ದಿ ಅಂತ ಚಿತ್ರತಂಡ ಸ್ಪಷ್ಟಪಡಿಸಿದೆ.

ಜನವರಿ 7ರಂದೇ ಸಿನಿಮಾ ಥಿಯೇಟರ್ ಗೆ ಬರುತ್ತೇ ಅನ್ನೋ ಒಂದಷ್ಟು ಟ್ರೆಂಡ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಯಾವುದೇ ಕಾರಣಕ್ಕೂ ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡೋದಿಲ್ಲ. ಅಂದುಕೊಂಡ ದಿನವೇ ಬರುತ್ತೇವೆ ಅಂತಾ ರಾಜಮೌಳಿ ಭರವಸೆ ನೀಡಿದ್ದಾರೆ. ಜ.7ರಂದು ವಿಶ್ವಾದ್ಯಂತ ತೆರೆಗಪ್ಪಳಿಸಲಿರುವ ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಸೌತ್ ಸಿನಿ ದುನಿಯಾದ ಇಬ್ಬರು ಘಟಾನುಘಟಿ ನಾಯಕರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿಆರ್ ನಟಿಸಿದ್ದು, ಬಾಲಿವುಡ್ ನ ಅಜಯ್ ದೇವಗನ್, ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ.

ಟ್ರೇಲರ್ ಹಾಗೂ ಹಾಡುಗಳ ಮೂಲಕ ಕಿಚ್ಚು ಹಚ್ಚಿರುವ ರಾಜಮೌಳಿ ಸಿನಿಮಾ ಪಂಚ ಭಾಷೆಯಲ್ಲಿ ತೆರೆಗೆ ಬರ್ತಿದೆ. ಕನ್ನಡದಲ್ಲಿ ಈ ಸಿನಿಮಾವನ್ನು, ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ರಾಜ್ಯಾದ್ಯಂತ ತೆರೆಗೆ ತರುವ ಜವಾಬ್ದಾರಿ ಹೊತ್ತುಕೊಂಡಿದೆ. ಈಗಾಗ್ಲೇ ಹಲವು ಸ್ಟಾರ್ ನಟರಿಗೆ ಸಿನಿಮಾ ಮಾಡ್ತಿರುವ ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ಕನ್ನಡದಲ್ಲಿ ತರುತ್ತಿದ್ದು, ಇದೇ ಜನವರಿ 7ಕ್ಕೆ ವರ್ಲ್ಡ್ ವೈಡ್ ರೌದ್ರ ರಣ ರುಧೀರನ ಆರ್ಭಟ ಶುರುವಾಗಲಿದೆ.

Categories
ಸಿನಿ ಸುದ್ದಿ

ಶಕುನಿ ನಿಂತಿದ್ದು ಯಾಕೆ, ಮಲ್ಲ ಶುರುವಾಗಿದ್ದು ಹೇಗೆ? ಇದು ರವಿಚಂದ್ರನ್‌ ಹೇಳಿದ ಕಥೆ…

ನಿರ್ಮಾಪಕ ರಾಮು ಅವರು ರವಿಚಂದ್ರನ್‌ ಅವರಿಗೆ “ಮಲ್ಲ” ಸಿನಿಮಾ ಮಾಡಿದ್ದು ಯಾಕೆ ಗೊತ್ತಾ? ಆ ಸಿನಿಮಾ ಆಗೋಕೆ ಕಾರಣ ಯಾರು? ಈ ಪ್ರಶ್ನೆಗೆ ರವಿಚಂದ್ರನ್‌ ಉತ್ತರ ಕೊಟ್ಟಿದ್ದಾರೆ. ಹೌದು, “ಮಲ್ಲ” ಸಿನಿಮಾ ಆಗೋಕೆ ಕಾರಣವನ್ನು ಸ್ವತಃ ರವಿಚಂದ್ರನ್‌ ಬಿಡಿಸಿ ಹೇಳಿದ್ದಾರೆ.

ವಿಷಯ ಏನೆಂದರೆ, ಈ ಹಿಂದೆ ರವಿಚಂದ್ರನ್‌ ಅವರಿಗೆ “ಶಕುನಿ” ಸಿನಿಮಾ ಶುರುಮಾಡಿದ್ದರು ರಾಮು. ಆ ಸಿನಿಮಾ ಅದಾಗಲೇ ಶೇ.೪೦ರಷ್ಟು ಚಿತ್ರೀಕರಣ ಕೂಡ ನಡೆದಿತ್ತು. ಒಂದು ಇದ್ದಕ್ಕಿದ್ದಂತೆಯೇ ಏನಾಯ್ತೋ ಏನೋ ರಾಮು ಅವರು ರವಿಚಂದ್ರನ್‌ ಮನೆಗೆ ಹೋಗಿ, ಶಕುನಿ ಗೆಟಪ್‌ ಇಷ್ಟವಿಲ್ಲ ಅಂದಿದ್ದಾರೆ. ಅರೆ, ಈಗಾಗಲೇ ಶೇ.೪೦ರಷ್ಟು ಚಿತ್ರೀಕರಣವಾಗಿದೆ. ಈಗ ನೋಡಿದರೆ, ಗೆಟಪ್‌ ಚೆನ್ನಾಗಿಲ್ಲ ಅಂದರೆ ಹೇಗೆ? ಅಂದಿದ್ದಾರೆ ರವಿಚಂದ್ರನ್.‌

ಆಗ ರಾಮು ಅವರು, ನೀವು ಹೀಗೆ ಉದ್ದ ಕೂದಲು ಬಿಟ್ಟುಕೊಂಡಿರುವುದು ಇಷ್ಟ ಕಾಣುತ್ತಿಲ್ಲ ಅಂದಿದ್ದಾರೆ ರಾಮು. ಸರಿ, ಶಕುನಿನ ಪಕ್ಕಕ್ಕಿಟ್ಟು, ನಾನೊಂದು ಸಿನಿಮಾ ಮಾಡಿಕೊಡ್ತೀನಿ. ನನ್ನ ಇಷ್ಟಕ್ಕೆ ಬಿಟ್ಟು ಬಿಡು ಅಂತ ಹೇಳಿದರಂತೆ ರವಿಚಂದ್ರನ್.‌ ಆಗ ಶುರುವಾಗಿದ್ದೇ, “ಮಲ್ಲ” ಸಿನಿಮಾವಂತೆ. ಶಕುನಿ ನಿಂತು ಹೋಗಿದ್ದಕ್ಕೆ ಕಾರಣ ಕೊಡುತ್ತಲೇ, ಮಲ್ಲ ಶುರುವಾದ ಬಗೆಯನ್ನೂ ರವಿಚಂದ್ರನ್‌ ಹೇಳಿಕೊಂಡಿದ್ದಾರೆ. ಅಂದಹಾಗೆ, ರವಿಚಂದ್ರನ್‌ ಈ ವಿಷಯ ಹಂಚಿಕೊಂಡಿದ್ದು, “ಅರ್ಜುನ್‌ ಗೌಡ” ಸಿನಿಮಾದ ಪ್ರೀ‌ ರಿಲೀಸ್ ಇವೆಂಟ್‌ನಲ್ಲಿ.

Categories
ಸಿನಿ ಸುದ್ದಿ

ಅಪ್ಪು ಇಲ್ಲದ ಎರಡು ತಿಂಗಳು; ಸಮಾಧಿಗೆ ಕುಟುಂಬ ಪೂಜೆ

ಪುನೀತ್‌ ರಾಜಕುಮಾರ್‌ ಇಲ್ಲದೆ ಇಂದಿಗೆ ಎರಡು ತಿಂಗಳು ಕಳೆದಿವೆ. ಅಪ್ಪು ಅಗಲಿ ಎರಡು ತಿಂಗಳು ಕಳೆದಿದ್ದರಿಂದ ಅವರ ಕುಟುಂಬ ವರ್ಗ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ರಾಘವೇಂದ್ರ ರಾಜ್‌ಕುಮಾರ್ ಮತ್ತು ಅವರ ಕುಟುಂಬ ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿತು. ಪೂಜೆ ನಂತರ ರಾಘವೇಂದ್ರ ರಾಜ್‌ಕುಮಾರ್ ಮತ್ತು ನಾರಾಯಣ ನೇತ್ರಾಲಯದ ಹಿರಿಯ ನೇತ್ರತಜ್ಞ ಭುಜಂಗ ಶೆಟ್ಟಿ ಅವರು ಈ ವೇಳೆ ನೇತ್ರದಾನದ ಸಹಾಯವಾಣಿ ಲೋಕಾರ್ಪಣೆ ಮಾಡಿದರು.


ಅಲ್ಲೇ ಇದ್ದ ಮಾಧ್ಯಮ ಜೊತೆ ಮಾತಿಗಿಳಿದ ರಾಘವೇಂದ್ರ ರಾಜ್‌ಕುಮಾರ್, “ಇಂದು ಅಪ್ಪು ಬಿಟ್ಟು ಹೋದ ಎರಡು ಕಣ್ಣುಗಳಿಂದ ನಾಲ್ಕು ಜನ ಪ್ರಪಂಚ ನೋಡುತ್ತಿದ್ದಾರೆ. ಇದು ನಿಜಕ್ಕೂ ಸಂತೋಷದ ವಿಷಯ. ಹಾಗೆಯೇ ಅಪ್ಪು ಹಾಕಿಕೊಟ್ಟಿರುವ ಈ ಹಾದಿಯಲ್ಲಿ ನಾವು ಸಾಗಬೇಕು ಜಗತ್ತಿನಿಂದ ಅಂಧತ್ವ ನಿವಾರಣೆ ಮಾಡಬೇಕು” ಎಂದರು.
‘ಅಪ್ಪು ನಿಧನದ ಬಳಿಕ ಕಣ್ಣು ದಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲ ಕಣ್ಣು ದಾನ ಮಾಡಿದವರು ತೀರಿ ಹೋದಾಗ ಕರೆ ಮಾಡಿ ಕಣ್ಣು ಸಂಗ್ರಹಿಸಲು ಹೇಳುವಷ್ಟು ಜಾಗೃತಿ ಮೂಡಿದೆ.

ಈ ರೀತಿಯ ನೇತ್ರದಾನದ ಕ್ರಾಂತಿ ಎಲ್ಲೂ ಆಗಿಲ್ಲ. ನಾವು ಅಂಧತ್ವ ತೊಲಗಿಸಬೇಕು. ಇನ್ನು, ” 8884018800 ಸಂಖ್ಯೆಗೆ ಸ್ ಕಾಲ್ ಕೊಟ್ಟರೆ ನೇತ್ರದಾನ ಮಾಡುವ ಫಾರಂ ಸಿಗುತ್ತದೆ ಅದನ್ನು ಅಲ್ಲಿಯೇ ತುಂಬಿ ಸಲ್ಲಿಸಬಹುದು. ನೇತ್ರದಾನ ಮಾಡಿದ್ದಕ್ಕೆ ನಿಮಗೆ ಸರ್ಟಿಫಿಕೇಟ್ ಸಹ ಸಿಗುತ್ತದೆ. ಕೇವಲ ನೇತ್ರದಾನ ಮಾಡಿ ಸುಮ್ಮನಾಗುವಂತಿಲ್ಲ. ಕಾಲವಾದಾಗ ಕಣ್ಣು ದಾನ ಕಡ್ಡಾಯವಾಗಿ ಮಾಡುವಂತೆ ಸುತ್ತಲಿನವರಿಗೆ ಹೇಳಿಟ್ಟಿರಬೇಕು. ನಾನು ನನ್ನ ನೇತ್ರದಾನದ ಸರ್ಟಿಫಿಕೇಟ್ ಅನ್ನು ಫ್ರೇಮ್ ಹಾಕಿಸಿ ಮನೆಯಲ್ಲಿಟ್ಟಿದ್ದೀನಿ. ನಮ್ಮವರಿಗೆ ಸದಾ ಗೊತ್ತಾಗುತ್ತಿರಬೇಕು ‘ಆ ದಿನ’ ಬಂದಾಗ ನೇತ್ರದಾನದ ಪ್ರಕ್ರಿಯೆ ಪೂರ್ಣ ಮಾಡಬೇಕು. ಅಪ್ಪಾಜಿ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ಮತ್ತು ನನ್ನ ಅಣ್ಣ ದೇಹದಾನ ಮಾಡಿದ್ದೇವೆ” ಎಂದರು ರಾಘವೇಂದ್ರ ರಾಜಕುಮಾರ್.


”ಇಂತಹ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ನಾವು ಹೆಸರು ಮಾಡಿಕೊಂಡು ಬಿಡುತ್ತೇವೆ. ಆದರೆ ಇದರ ಹಿಂದೆ ನಿಜವಾಗಿಯೂ ಇರುವುದು ವೈದ್ಯರು. ಈ ನೇತ್ರದಾನದ ಕೆಲಸ ಅವರದ್ದು, ಕೊರೊನಾ ಸಮಯದಲ್ಲಿ ಎಲ್ಲರೂ ಆಸ್ಪತ್ರೆಗಳಿಗೆ ಬಂದು, ಕೇಂದ್ರಗಳಿಗೆ ಬಂದು ನೇತ್ರದಾನ ಮಾಡಲು ಆಗುವುದಿಲ್ಲ. ಹಾಗಾಗಿ ಕುಳಿತ ಜಾಗದಿಂದಲೇ ನೇತ್ರದಾನ ಮಾಡಲು ಅನುಕೂಲ ಆಗಲೆಂದು ವೈದ್ಯರ ತಂಡ ಹೀಗೊಂದು ಪ್ರಯತ್ನ ಮಾಡಿದೆ. ಇದರ ಉಪಯೋಗ ಪಡೆದುಕೊಳ್ಳಬೇಕು ಎಂದಿದ್ದಾರೆ.

Categories
ಸಿನಿ ಸುದ್ದಿ

ಜೈಹೋ ಕನ್ನಡಿಗ ; ಅಪ್ಪು ನೆನಪಲ್ಲಿ ಹಾಡೊಂದು ಹೊರಬಂತು…

ಪುನೀತ್‌ ರಾಜಕುಮಾರ್‌ ಅವರಿಲ್ಲ. ಆದರೆ, ಅವರು ತಮ್ಮ ಸದಭಿರುಚಿಯ ಸಿನಿಮಾಗಳ ಮೂಲಕ ಇಂದಿಗೂ ಜೀವಂತ. ಅವರ ನೆನಪಲ್ಲಿ ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ಆ ಸಾಲಿಗೆ ʼಜೈ ಹೋ ಕನ್ನಡಿಗʼ ಎಂಬ ಹಾಡು ಕೂಡ ಹೊರಬಂದಿದೆ. ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾದರೆ, ಜೆ.ಆರ್.ಶಿವ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ…

ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ “ಒರಟ ಐ ಲವ್ ಯು” ಚಿತ್ರಕ್ಕೆ ಜಿ.ಆರ್.ಶಂಕರ್ ಅವರೊಡನೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ, ಶಿವ ನಂತರ “ಈ ಸಂಜೆ” ಚಿತ್ರದಲ್ಲೂ ಕೆಲಸ ಮಾಡಿದ್ದರು.
ಕೆಲವು ವರ್ಷಗಳ ಬಳಿಕ ಅವರೀಗ “ಜೈಹೋ ಕನ್ನಡಿಗ” ಎಂಬ ಹಾಡು ಬರೆದು ಸಂಗೀತ ನೀಡಿದ್ದಾರೆ. ಈ ಹಾಡನ್ನು ಪುನೀತ್ ರಾಜ್‍ಕುಮಾರ್ ಅವರಿಗೆ ಅರ್ಪಣೆ ಮಾಡಿದ್ದಾರೆ. ಈ ಹಾಡಲ್ಲಿ ಜೆ.ಆರ್. ಶಿವ, ಹಂಸಲೇಖ, ವಿ.ಮನೋಹರ್, ಸಿ.ಆರ್.ಮನೋಹರ್, ವಿ.ನಾಗೇಂದ್ರ ಪ್ರಸಾದ್, ದೊಡ್ಡರಂಗೇಗೌಡ, ಸಾಲುಮರದ ತಿಮ್ಮಕ್ಕ, ಕೆ.ಮಂಜು, ಅನಿರುದ್ಧ್, ಶ್ರೀಧರ್ ವಿ ಸಂಭ್ರಮ್, ಮಾಸ್ಟರ್ ಆನಂದ್, ಧರ್ಮ ಕೀರ್ತಿರಾಜ್, ಧರ್ಮ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರಿದ್ದಾರೆ.

ಅದ್ದೂರಿಯಾಗಿ ಮೂಡಿಬಂದಿರುವ ಈ ಗೀತೆಯನ್ನು ಪದ್ಮಶ್ರೀ ದೊಡ್ಡರಂಗೇಗೌಡ, ಸಿ.ಆರ್.ಮನೋಹರ್, ಗಂಡಸಿ ಸದಾನಂದ ಸ್ವಾಮಿ, ಪಿ.ಆರ್.ಓ ಸುಧೀಂದ್ರ ವೆಂಕಟೇಶ್, ನಟಿ ಲಲಿತಮ್ಮ, ಮಹಾಲಕ್ಷ್ಮಿ ಸ್ವೀಟ್ಸ್ ನ ಹರಣ್ ರಾಜ್ , ಅರುಣ್ ಸೇರಿದಂತೆ ಮುಂತಾದ ಗಣ್ಯರು ಬಿಡುಗಡೆ ಮಾಡಿದರು.

ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಶಿವ, ಈ ಹಾಡಿನ ಮೂಲಕ ಏಳುಕೋಟಿ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದಾರೆ. ಎಷ್ಟೋ ಅನುಭವವಿರುವವರು ಸಾಹಿತಿ ಬರೆದ ಹಾಗಿದೆ ಈ ಹಾಡು. ಶಿವ ಅವರಿಗೆ ಒಳಿತಾಗಲಿ ಎಂದು ಹಾರೈಸಿದರು ಹಿರಿಯ ಸಾಹಿತಿ ದೊಡ್ಡರಂಗೇಗೌಡ.

ನಾನು “ಒರಟ ಐ ಲವ್ ಯು “ಚಿತ್ರ ಮಾಡಿದಾಗಿನಿಂದಲೂ ಶಿವ ನನಗೆ ಪರಿಚಯ. ಕನ್ನಡದ ಹಿರಿಮೆ ಸಾರುವ ಈ ಹಾಡು ತುಂಬಾ ಚೆನ್ನಾಗಿದೆ. ಇಂತಹ ಇನ್ನೂ ಸಾಕಷ್ಟು ಹಾಡುಗಳು ಶಿವ ಅವರು ರಚಿಸಲಿ. ಅವರಿಗೆ ಬೇಕಾದ ಸಹಕಾರ ನೀಡಿತ್ತೇ‌ನೆ ಅನ್ನೋದು ನಿರ್ಮಾಪಕ ಸಿ.ಆರ್.ಮನೋಹರ್ ಮಾತು.

ಇದು ನನ್ನೊಬ್ಬನಿಂದ ಆಗಿಲ್ಲ. ನನ್ನ ಹಿಂದೆ ಸಾಕಷ್ಟು ಜನರಿದ್ದಾರೆ. ಹಾಡಿನಲ್ಲಿ ಕಾಣಿಸಿಕೊಂಡಿರುವ ಹಾಗೂ ಹಾಡನ್ನು ಬಿಡುಗಡೆ ಮಾಡಲು ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದ. ವಿಜಯ್ ಪ್ರಕಾಶ್ ಹಾಡಿರುವ ಈ ಹಾಡನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡುತ್ತಿದ್ದೇನೆ. ನನ್ನ ಜೀವನದಲ್ಲಿ ಮೂರು ಜ‌ನ ಗಾಡ್ ಫಾದರ್ . ಒಬ್ಬರು ನನ್ನ ತಂದೆ. ಇನ್ನೊಬ್ಬರು ಅಪ್ಪು ಹಾಗೂ ಮತ್ತೊಬ್ಬರು ಸಿ.ಆರ್.ಮನೋಹರ್.
ಸಿ.ಆರ್.ಮನೋಹರ್ ಅವರು ಏಕೆಂದರೆ, ಖಾಯಿಲೆಯಿಂದ ಚಿಕ್ಕ ವಯಸ್ಸಿಗೆ ನನ್ನ ಗೆಳೆಯ ಅಸುನೀಗಿದ. ನಂತರ ಆ ಕುಟುಂಬಕ್ಕೆ ಸಿ.ಆರ್.ಮನೋಹರ್ ಮಾಡಿರುವ ಉಪಕಾರ ಮರೆಯುವಂತಿಲ್ಲ. ಹಾಗಾಗಿ ಅವರು ನನಗೆ ಗಾಡ್ ಫಾದರ್ ಎಂದು ಶಿವ ಭಾವುಕರಾದರು.

Categories
ಸಿನಿ ಸುದ್ದಿ

ಸೀತಮ್ಮನ ಮಗ ಶೂಟಿಂಗ್ ನಲ್ಲಿ ನಡೆದೇ ಹೋಯ್ತು ನಟ ಯತಿರಾಜ್ ಮದ್ವೆ!

ನಟ ಕಮ್ ನಿರ್ದೇಶಕ ಯತಿರಾಜ್ ಮದ್ವೆಯಾಗಿದ್ದಾರೆ. ಈಗಾಗಲೇ ಕನ್ನಡದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿರುವ ಯತಿರಾಜು, ದಿಢೀರ್ ಮದ್ವೆ ಆಗಿದ್ದಾರೆ! ಅದೂ ಸೀತಮ್ಮನ ಮಗ ಚಿತ್ರದ ಶೂಟಿಂಗ್ ವೇಳೆ…

ಸೋನು ಫಿಲಂಸ್ ಬ್ಯಾನರ್ ನಲ್ಲಿ ಕೆ‌.ಮಂಜುನಾಥ್ ನಾಯಕ್ ನಿರ್ಮಾಣದ, ಯತಿರಾಜ್ ನಿರ್ದೇಶಿಸುತ್ತಿರುವ “ಸೀತಮ್ಮನ ಮಗ” ಚಿತ್ರಕ್ಕೆ ಚಿತ್ರದುರ್ಗದ ಪಂಡರಹಳ್ಳಿಯಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.


ಕಳೆದ ಹದಿನೈದು ದಿನಗಳಿಂದ ಅಲ್ಲಿನ ಮನೆ, ಶಾಲೆ ಹಾಗೂ ಸುಂದರ ಪರಿಸರದಲ್ಲಿ ಅನೇಕ ಕಲಾವಿದರ ಪಾಲ್ಗೊಳ್ಳುವಿಕೆಯಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.

ಯತಿರಾಜ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ‌ ಮತ್ತು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಚೈತ್ರಾ ಶ್ರೀನಿವಾಸ್, ಚರಣ್ ಕಾಸಲ, ಸೋನು ಸಾಗರ, ಬುಲೆಟ್ ರಾಜು, ಬಸವರಾಜ್, ಜೀವನ್ ರಾಜ್, ಮಂಜುನಾಥ್ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿನು ಮನಸು ಸಂಗೀತ ‌ನಿರ್ದೇಶನವಿರುವ ಈ ಚಿತ್ರಕ್ಕೆ ಜೀವನ್ ರಾಜ್ ಛಾಯಾಗ್ರಹಣ ಹಾಗೂ ಶಶಿಕುಮಾರ್ ಅವರ ಸಹ ನಿರ್ದೇಶನವಿದೆ. ಅಂದಹಾಗೆ, ನಟ ಕಮ್ ನಿರ್ದೇಶಕ ಯತಿರಾಜ್ ಅವರು ಮದ್ವೆ ಆಗಿರೋದು ನಿಜ. ಹಾಗಂತ ಅದು ರಿಯಲ್ ಮದ್ವೆ ಅಲ್ಲ,

ರೀಲ್ ಮದ್ವೆ. ಸೀತಮ್ಮನ ಮಗ ಚಿತ್ರದ ಚಿತ್ರೀಕರಣದ ದೃಶ್ಯ ಒಂದರಲ್ಲಿ ಯತಿರಾಜ್ ಮದುವೆ ನಡೆದಿದೆ. ಅದು ಯಾಕೆ ಅನ್ನೋ ಕುತೂಹಲಕ್ಕೆ ಸಿನಿಮಾ ಬರೋವರೆಗೆ ಕಾಯಬೇಕು.

Categories
ಸಿನಿ ಸುದ್ದಿ

ದಿವ್ಯ ಆಚಾರ್ ಮೌನ!‌ಮಾಡೆಲಿಂಗ್‌ ಹುಡುಗಿಯ ಆಲ್ಬಂ ಸಾಂಗ್


ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ದಿವ್ಯ ಆಚಾರ್ ಕನ್ನಡ ಚಿತ್ರರಂಗದಲ್ಲಿ ಒಬ್ಬ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕು ಎಂಬ ಆಶಯ ಹೊಂದಿದ್ದಾರೆ. ಬಾಲ್ಯದಿಂದಲೂ ನಟನೆ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಬಂದಿದ್ದ ದಿವ್ಯ ಆಚಾರ್ ತನ್ನ ಶಾಲಾ-ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಹಲವಾರು ನಾಟಕಗಳಲ್ಲಿ ಪ್ರಮುಖ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. ಎರಡು ಚಿತ್ರಗ ಳ ಲ್ಲಿ ಪ್ರಮುಖ ಪಾತ್ರ ನಟಿಸಿದ್ದಾರೆ.

“ನಾನು ಪೂರ್ಣಪ್ರಮಾಣದ ನಾಯಕಿ ಆಗಬೇಕು ಎಂಬ ಆಸೆ ಈಡೇರಿದೆ ಹೌದು ಒಂದು ಕಥೆ ಕೇಳಿದ್ದು ತುಂಬಾ ಇಷ್ಟವಾಗಿದೆ ಅತಿ ಶೀಘ್ರದಲ್ಲೇ ಸೆಟ್ಟೇರಲಿದ್ದು ತುಂಬಾ ಖುಷಿಯಾಗುತ್ತಿದೆ ಮುಂದಿನ ದಿನದಲ್ಲಿ ಈ ಚಿತ್ರದ ಬಗ್ಗೆ ತಿಳಿಯಲಿದೆ.
“ಮೌನ” ಎಂಬ ಟೈಟಲ್ ನ ಒಂದು ಆಲ್ಬಮ್ ಸಾಂಗ್ ಇಷ್ಟವಾಗಿದ್ದು ಇದರಲ್ಲಿ ನಟಿಸುತ್ತಿದ್ದೇನೆ ತುಂಬಾ ಖುಷಿಯಾಗುತ್ತಿದೆ ಸಾಂಗ್ ತುಂಬಾ ಚೆನ್ನಾಗಿ ಬಂದಿದೆ ಇದರ ಪೋಸ್ಟರ್ ಹೊಸವರ್ಷದ
ದಿನದೊಂದು ಬಿಡುಗಡೆಯಾಗಲಿದೆ.

ಮದರ್ ಹಾರ್ಟ್ ಪ್ರೊಡಕ್ಷನ್ ನಲ್ಲಿ
ಮೂಡಿಬರಲಿದ್ದು ಈ ಹಾಡಿಗೆ ಸಾಹಿತ್ಯ ನಿರ್ದೇಶನ ದೇವ್ ಸಂಗೀತ ಮಂಜುಕವಿ ನೃತ್ಯ ಮಧುಮಿತ ಮಾಡಿದ್ದಾರೆ.

Categories
ಸಿನಿ ಸುದ್ದಿ

ಭಯಂಕರ ನಟನ ಟ್ರೇಲರ್‌ ರೆಡಿ; ಪ್ರಥಮ್‌ ನಟನೆಯ ನಟ ಭಯಂಕರ ಥ್ರಿಲ್ಲಿಂಗ್ ಸಿನಿಮಾ!

ಪ್ರಥಮ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ” ನಟ ಭಯಂಕರ” ಚಿತ್ರದ ಥ್ರಿಲ್ಲಿಂಗ್ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹಾರರ್, ಕಾಮಿಡಿ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ‌ ಚಿತ್ರ ಜನವರಿ ಅಥವಾ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ಹೆಚ್. ಪಿ. ನಿತೇಶ್ ಈ ಚಿತ್ರದ ಸಹ ನಿರ್ಮಾಪಕರು.

ಉದಯ್ ಮೆಹ್ತಾ ಅವರು ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಪ್ರಥಮ್ ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಪ್ರದ್ಯೋತನ್ ಸಂಗೀತ ನೀಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಒಂದು ಹಾಡನ್ನು ಹಾಡಿದ್ದಾರೆ. ಧ್ರುವ ಸರ್ಜಾರ ಧ್ವನಿ ಚಿತ್ರದುದ್ದಕ್ಕೂ ಕೇಳಿಸಲಿದೆ.


ವಿ.ನಾಗೇಂದ್ರ ಪ್ರಸಾದ್, ನಾಗತಿಹಳ್ಳಿ ಚಂದ್ರಶೇಖರ್, ಬಹದ್ದೂರ್ ಚೇತನ್ ಹಾಗೂ ಅರಸು ಅಂತಾರೆ ಹಾಡುಗಳನ್ನು ರಚಿಸಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ನಡೆದಿದೆ. ಈಗ ಡಿಐ ನಡೆಯುತ್ತಿದೆ.‌

ಪ್ರಥಮ್ ಅವರೊಂದಿಗೆ ಹಿರಿಯ ನಟ ಸಾಯಿಕುಮಾರ್ ಸಹ ನಟಿಸಿದ್ದಾರೆ. ಡಕೋಟ ಎಕ್ಸ್‌ಪ್ರೆಸ್ ನ ನಂತರ ಓಂಪ್ರಕಾಶ್ ರಾವ್ ನಟಿಸಿರುವ ಕಾಮಿಡಿ ಚಿತ್ರವಿದು. ನಿಹಾರಿಕಾ ಶೆಣೈ, ಸುಶ್ಮಿತ ಜೋಶಿ, ಶೋಭ್ ರಾಜ್, ಕುರಿ ಪ್ರತಾಪ್, ಚಂದನ ರಾಘವೇಂದ್ರ, ಶಂಕರ್ ಅಶ್ವತ್ಥ್, ಮೋಹನ್ ಜುನೇಜ, ರಮ, ಬಿರಾದಾರ್, ಎಂ.ಎಸ್ ಉಮೇಶ್ ಇದ್ದಾರೆ.

Categories
ಸಿನಿ ಸುದ್ದಿ

ಫಿಲ್ಮಾಹಾಲಿಕ್‌ ಫೌಂಡೇಶನ್‌ನ ಸಿನಿಮಾ ಅಂತರಂಗ ಚಿತ್ರೋತ್ಸವ ಯಶಸ್ವಿ; 11 ವಿಭಾಗದಲ್ಲಿ ಪ್ರಶಸ್ತಿ ವಿತರಣೆ

ಇದು ಫಿಲ್ಮಾಹಾಲಿಕ್ ಫೌಂಡೇಶನ್ ನಡೆಸುವ ಸಿನಿಮಾ ಅಂತರಂಗ ಚಲನಚಿತ್ರೋತ್ಸವ ಹಾಗೂ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ -2021

ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆ ಅಯೋಜಿಸಿದ್ದ ಸಿನಿಮಾ ಅಂತರಂಗ ಚಿತ್ರೋತ್ಸವ ಹಾಗೂ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. 50ಕ್ಕೂ ಹೆಚ್ಚು ಚಿತ್ರಗಳು ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದವು. ರಾಜ್ಯದಲ್ಲಿ ಮೊದಲ ಬಾರಿಗೆ ಇಂಡಿಪೆಂಡೆಂಟ್ ಚಲನಚಿತ್ರಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ವಿಶೇಷವಾಗಿತ್ತು. ಸಸಿಯೊಂದಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ನಂತರ ಚಿತ್ರೋತ್ಸವದಲ್ಲಿ ಮೂರು ಉತ್ತಮ ಚಿತ್ರಗಳು ಪ್ರದರ್ಶನಗೊಂಡವು. “ದನಗಳು”, “ಕೇರಳ ಪ್ಯಾರಡೈಸ್”‌ ಮತ್ತು “ದಾರಿ ಯಾವುದಯ್ಯ ವೈಕುಂಟಕ್ಕೆ” ಚಿತ್ರಗಳು ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡವು.


ಅದಕ್ಕೂ ಮುನ್ನ ಚಿತ್ರ ನಿರ್ಮಾಣ ಕಾರ್ಯಗಾರವನ್ನು ಅಂತಾರಾಷ್ಟ್ರೀಯ ಸಿನಿಮಾ ನಿರ್ಮಾಪಕ, ನಿರ್ದೇಶಕ ಡಾ.ರಾಜಾ ಬಾಲಕೃಷ್ಣ ಅವರು ನಡೆಸಿಕೊಟ್ಟರು. ಅವಿನಾಶ್ ಶೆಟ್ಟಿ, ಪ್ರಯಾಗ್, ನಂದಲಿಕೆ ನಿತ್ಯಾನಂದ ಪ್ರಭು, ಡಾ.ರಾಜಗೋಪಾಲನ್, ಕಲಾದೇಗುಲ ಶ್ರೀನಿವಾಸ್, ಮನೋಜ್ ಕುಮಾರ್, ಮುಕುಲ್ ಗೌಡ ಅವರು ಕರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಫಿಲ್ಮಾಹಾಲಿಕ್ ಫೌಂಡೇಶನ್ನ ಲಕ್ಷ್ಮೀಶ ರಾಜು ಹಾಗೂ ಪ್ರವೀಣಾ ಕುಲ್ಕರ್ಣಿ ಕೂಡ ಉಪಸ್ಥಿತರಿದ್ದರು.

ಸಂಜೆ ನಡೆದ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮಕ್ಕೆ ಪದ್ಮಶ್ರೀ ಡಾ.|ದೊಡ್ಡರಂಗೇಗೌಡ ಅವರು ಚಾಲನೆ ಕೊಟ್ಟರು. ಸಂಗೀತ ನಿರ್ದೇಶಕ ವಿ.ಮನೋಹರ್, ಬರಹಗಾರ್ತಿ ವಿಜಯಲಕ್ಷ್ಮಿ ಸತ್ಯಮೂರ್ತಿ, ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ದೇವಸ್ಥಾನದ ಮುಖ್ಯಸ್ಥ ಡಾ. ಅಂಬರೀಶ್, ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥಾಪಕ ಆದಿತ್ಯ. ಆರ್. ಎ, ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ದಿಲೀಪ್ ಕುಮಾರ್ ಹೆಚ್ ಆರ್, ಭಾರತ ಸಾರಥಿ ಪತ್ರಿಕೆಯ ಗಂಡಸಿ ಸದಾನಂದ ಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

ವ್ಯೂಹ ಕಾದಂಬರಿ ಬಿಡುಗಡೆ…

ಅಪ್ಪು ಅಜರಾಮರ ಕಾರ್ಯಕ್ರಮದಲ್ಲಿ ಅಪ್ಪು ಅವರ ಚಿತ್ರವನ್ನು ರಬಿಕ್ ಕ್ಯೂಬ್ಸ್ ನಲ್ಲಿ ಹರಿಹಂತ ಜೈನ್ ಅವರು ಚಿತ್ರಿಸಿದರು. ಅಪ್ಪು ಅವರ ಸವಿನೆನಪಿನಲ್ಲಿ ಅನೇಕ ಪ್ರತಿಭಾವಂತರು ಕಳಿಸಿದ್ದ ಹಾಡುಗಳನ್ನು, ನೃತ್ಯ ಹಾಗೂ ಮೋನೋ ಆಕ್ಟಿಂಗ್ ವಿಡಿಯೋ ಪ್ರದರ್ಶಿಸಲಾಯಿತು. ವಿಜಯಲಕ್ಷ್ಮಿ ಸತ್ಯಮೂರ್ತಿ ಬರೆದ “ವ್ಯೂಹ” ಕಾದಂಬರಿ ಕೂಡ ಇದೇ ವೇಳೆ ಬಿಡುಗಡೆಯಾಯಿತು. ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಬಿಡುಗಡೆ ಮಾಡಿ ಶುಭ ಕೋರಿದರು.

“ವ್ಯೂಹ” ಕಾದಂಬರಿಯನ್ನು ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯು ಕಿಶೋರ್ ಎಂಟರ್‌ಟೈನರ್ಸ್‌ ಮೂಲಕ ಚಿತ್ರ ನಿರ್ಮಾಣ ಮಾಡಲಿದೆ. ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ನಿರ್ಮಿಸಿದ್ದ “ಅಪ್ಪು ನೆನಪು” ಹಾಡನ್ನು ಇದೇ ವೇಳೆ “ಮ್ಯೂಸಿಕ್ ಬಾಕ್ಸ್” ಆಡಿಯೋ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯು ಇದೇ ಸಮಯದಲ್ಲಿ ಫಿಲ್ಮಾಹಾಲಿಕ್ ಕ್ಲಬ್ ಉದ್ಘಾಟಿಸಿತು. ಫಿಲ್ಮಾಹಾಲಿಕ್ ಕ್ಲಬ್ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ, ಸಾಂಸ್ಕೃತಿಕ, ಸಾಹಿತ್ಯ, ಸಾಮಾಜಿಕ, ಕ್ರೀಡೆ ಹಾಗೂ ಇನ್ನೂ ಅನೇಕ ಕಾರ್ಯಗಳನ್ನು ಮಾಡುವ ಉದ್ದೇಶವನ್ನು ಹೊಂದಿದೆ.

11 ವಿಭಾಗದಲ್ಲಿ ಪ್ರಶಸ್ತಿ

ಸಿನಿಮಾ ಅಂತರಂಗ ಚಿತ್ರೋತ್ಸವದಲ್ಲಿ 11 ವಿಭಾಗಗಳಲ್ಲಿ ಪ್ರಶಸ್ತಿ ವಿತರಿಸಲಾಯಿತು. ಕೇರಳ ಪ್ಯಾರಡೈಸ್‌ ಉತ್ತಮ ಚಿತ್ರವಾಗಿ ಹೊರಹೊಮ್ಮಿದರೆ, ದಾರಿ ಯಾವುದಯ್ಯ ವೈಕುಂಟಕೆ ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಅದೇ ಚಿತ್ರದ ನಟನೆಗೆ ಬಲರಾಜವಾಡಿ ಅವರಿಗೆ ಉತ್ತಮ ಸಹನಟ ಪ್ರಶಸ್ತಿ ಲಭಿಸಿತು. ಕಟಿಲ್‌ ಚಿತ್ರದ ಉತ್ತಮ ಚಿತ್ರಕಥೆ ಪ್ರಶಸ್ತಿಯನ್ನು ಬಿ. ಲೆನಿನ್ ಪಡೆದರೆ, ದ್ವಿಭಜಕ ಚಿತ್ರ ಉತ್ತಮ ಸಂಕಲನ ಪ್ರಶಸ್ತಿಯನ್ನು ರತೇಶ್ ಕೌಸಲ್ಯ ಪಡೆದರು. ಮಂತ್ರಿ ಹಾಂಡ್ಸ್‌ಮ್‌ ಸೋಲ್ಸ್‌ ಚಿತ್ರಕ್ಕೆ ರಾಜು ಉತ್ತಮ ಛಾಯಾಗ್ರಾಹ ಪ್ರಶಸ್ತಿ ಪಡೆದರು. ಕಟಿಲ್‌ ಚಿತ್ರದ ಉತ್ತಮ ನಟಿ ಪ್ರಶಸ್ತಿ ಸೃಷ್ಟಿ ದಂಗಿ, ಕವಡೆ ಕಾಸಿನ ಚಿತ್ರದ ಕರ್ಣ ಕುಮಾರ್‌ ಉತ್ತಮ ನಟ ಪ್ರಶಸ್ತಿ, ಮತ್ತು ಇದೇ ಚಿತ್ರದ ಉತ್ತಮ ಸಂಗೀತ ಪ್ರಶಸ್ತಿ ಜೀವರತ್ನಮ್ ಪಡೆದರು.


ವಿಶೇಷ ತೀರ್ಪುಗಾರರ ಪ್ರಶಸ್ತಿಗೆ “ದನಗಳು” ಚಿತ್ರ ಆಯ್ಕೆಯಾಯಿತು. ಇದೇ ವೇಳೆ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್‌ಗೆ ಸಮಾಜ ಸೇವೆ ಸಲ್ಲಿಸಿದ ಗಣ್ಯರು, ಸಾಹಿತ್ಯ, ರಂಗಭೂಮಿ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಈ ಚಿತ್ರೋತ್ಸವಕ್ಕೆ ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಮುಖ್ಯಸ್ಥ ಡಾ.ಅಂಬರೀಶ್ ಜಿ, ಕವಿತಾ ಕಲ್ಪತರು ಫೌಂಡೇಶನ್ ಮುಖ್ಯಸ್ಥೆ ಕವಿತಾ ಶ್ರೀನಾಥ್,

ಬರಹಗಾರ್ತಿ ವಿಜಯಲಕ್ಷ್ಮಿ ಸತ್ಯಮೂರ್ತಿ, ಎನ್ ಟಿ ಸುರೇಶ್, ಪ್ರಕೃತಿ ಪ್ರಸನ್ನ, ಸವಿತಾ ರಾಮು, ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ದಿಲೀಪ್ ಕುಮಾರ್, ಭಾರತ ಸಾರಥಿ ಪತ್ರಿಕೆಯ ಗಂಡಸಿ ಸದಾನಂದ ಸ್ವಾಮಿ ಸಹಪ್ರಾಯೋಜಕರಾಗಿದ್ದರು. ಈ ವೇಳೆ ಫಿಲ್ಮಾಹಾಲಿಕ್‌ ಫೌಂಡೇ಼ಶನ್‌ನ ಕಿಶೋರ್ ಸಾವಂತ್, ಗಣೇಶ್,ಚಂದ್ರಕಾಂತ್, ಉದಯ್ ಕುಮಾರ್, ಲಕ್ಷ್ಮೀಶ ರಾಜು, ಪ್ರಜ್ಞಾ ಬಿ, ಕಿರಣ್ ಬಿ ಎನ್, ಪ್ರವೀಣಾ ಕುಲ್ಕರ್ಣಿ, ಮುರಳಿ, ತೇಜಸ್ವಿನಿ ರಾವ್, ಜಯಪ್ರಕಾಶ್ ಇತರರು ಇದ್ದರು.

Categories
ಸಿನಿ ಸುದ್ದಿ

ಪ್ರಜ್ವಲ್‌ ನಟನೆಯ ಅರ್ಜುನ್‌ ಗೌಡ ಡಿ.31ರಿಂದ ರಾಜ್ಯಾದ್ಯಂತ ಪ್ರಜ್ವಲಿಸಲಿದೆ

ರಾಮು ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ “ಅರ್ಜುನ್ ಗೌಡ” ಚಿತ್ರ ಡಿ.31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿರುವ ಈ ಚಿತ್ರದ ನಾಯಕನಾಗಿ ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ನಟಿಸಿದ್ದಾರೆ.

ಉಳಿದಂತೆ ಈ ಚಿತ್ರದಲ್ಲಿ ಬಾಲಿವುಡ್ ನ ರಾಹುಲ್ ದೇವ್, ಸ್ಪರ್ಶ ರೇಖ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಶಂಕರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ‌ ಮಾಡಿದ್ದಾರೆ. ಕವಿರಾಜ್, ರಾಘವೇಂದ್ರ ಕಾಮತ್, ಶಂಕರ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ , ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ಮೋಹನ್, ಕಂಬಿ‌ರಾಜು ಅವರ ನೃತ್ಯ ನಿರ್ದೇಶನ ಅರ್ಜುನ್ ಗೌಡ ಚಿತ್ರಕ್ಕಿದೆ.

error: Content is protected !!