ಎಸ್.ಎಸ್.ರಾಜಮೌಳಿಯ ಆರ್ ಆರ್ ಆರ್ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಜನವರಿ 7ರಂದು ಸಿನಿಮಾ ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ. ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಯುತ್ತಿರುವ ಜಕ್ಕಣ್ಣಗಾರು ಟೀಂ, ಕೇರಳದಲ್ಲಿ ಅದ್ಧೂರಿ ಇವೆಂಟ್ ಗೆ ಪ್ಲಾನ್ ಮಾಡಿಕೊಂಡಿದೆ. ಈ ನಡುವೆ ದೇಶದಲ್ಲಿ ಕೊರೋನಾ ಕೇಸ್ ಗಳು ಹೆಚ್ಚುತ್ತಿರುವುದರಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತದೆಯೇ ಅನ್ನೋ ಟಾಕ್ ಸಿನಿ ಜಗತ್ತಿನಲ್ಲಿ ಓಡಾಡ್ತಿದೆ.
ದೇಶದಲ್ಲಿ ಕೊರೋನಾ ರೂಪಾಂತರಿ ಪ್ರಕರಣಗಳು ಹೆಚ್ಚಾಗ್ತಿವೆ. ಜನವರಿಯಲ್ಲಿ ಕೋವಿಡ್ ಪ್ರಕರಣ ಮತ್ತಷ್ಟು ಹೆಚ್ಚಾಗಲಿವೆ ಎನ್ನಲಾಗ್ತಿದೆ. ಹೀಗಾಗಿ, ದೇಶದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಕೆಲವು ಕಡೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ದೆಹಲಿಯಲ್ಲಿ ಥಿಯೇಟರ್ ಬಂದ್ ಮಾಡಲಾಗಿದೆ. ಇದರಿಂದ ಶಾಹಿದ್ ಕಪೂರ್ ಅಭಿನಯದ ಸಿನಿಮಾ ‘ಜೆರ್ಸಿ’ ರಿಲೀಸ್ ದಿನಾಂಕವನ್ನು ಪೋಸ್ಟ್ ಪೋನ್ ಮಾಡಿದೆ. ಡಿಸೆಂಬರ್ 31ರಂದು ತೆರೆಗೆ ಬರಬೇಕಿದ್ದ ಜೆರ್ಸಿ ತನ್ನ ಮಾರ್ಗ ಬದಲಾಯಿಸಿದೆ. ಹೀಗಾಗಿ ಆರ್ ಆರ್ ಆರ್ ತಂಡ ಕೂಡ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದ್ರೆ ಆರ್ ಆರ್ ಆರ್ ಸಿನಿಮಾ ಮುಂದಕ್ಕೆ ಹೋಗುವ ಚಾನ್ಸ್ ಇಲ್ಲ. ಯಾಕಂದ್ರೆ ಈಗಾಗ್ಲೇ ಸೆನ್ಸಾರ್ ಮುಗಿಸಿ ಥಿಯೇಟರ್ ಗೆ ಬರೋದಿಕ್ಕೆ ಸಕಲ ರೀತಿಯಿಂದಲೂ ಸಿನಿಮಾ ತಂಡ ತಯಾರಾಗಿದೆ. ಇದು ಸುಳ್ಳು ಸುದ್ದಿ ಅಂತ ಚಿತ್ರತಂಡ ಸ್ಪಷ್ಟಪಡಿಸಿದೆ.
ಜನವರಿ 7ರಂದೇ ಸಿನಿಮಾ ಥಿಯೇಟರ್ ಗೆ ಬರುತ್ತೇ ಅನ್ನೋ ಒಂದಷ್ಟು ಟ್ರೆಂಡ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಯಾವುದೇ ಕಾರಣಕ್ಕೂ ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡೋದಿಲ್ಲ. ಅಂದುಕೊಂಡ ದಿನವೇ ಬರುತ್ತೇವೆ ಅಂತಾ ರಾಜಮೌಳಿ ಭರವಸೆ ನೀಡಿದ್ದಾರೆ. ಜ.7ರಂದು ವಿಶ್ವಾದ್ಯಂತ ತೆರೆಗಪ್ಪಳಿಸಲಿರುವ ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಸೌತ್ ಸಿನಿ ದುನಿಯಾದ ಇಬ್ಬರು ಘಟಾನುಘಟಿ ನಾಯಕರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿಆರ್ ನಟಿಸಿದ್ದು, ಬಾಲಿವುಡ್ ನ ಅಜಯ್ ದೇವಗನ್, ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ.
ಟ್ರೇಲರ್ ಹಾಗೂ ಹಾಡುಗಳ ಮೂಲಕ ಕಿಚ್ಚು ಹಚ್ಚಿರುವ ರಾಜಮೌಳಿ ಸಿನಿಮಾ ಪಂಚ ಭಾಷೆಯಲ್ಲಿ ತೆರೆಗೆ ಬರ್ತಿದೆ. ಕನ್ನಡದಲ್ಲಿ ಈ ಸಿನಿಮಾವನ್ನು, ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ರಾಜ್ಯಾದ್ಯಂತ ತೆರೆಗೆ ತರುವ ಜವಾಬ್ದಾರಿ ಹೊತ್ತುಕೊಂಡಿದೆ. ಈಗಾಗ್ಲೇ ಹಲವು ಸ್ಟಾರ್ ನಟರಿಗೆ ಸಿನಿಮಾ ಮಾಡ್ತಿರುವ ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ಕನ್ನಡದಲ್ಲಿ ತರುತ್ತಿದ್ದು, ಇದೇ ಜನವರಿ 7ಕ್ಕೆ ವರ್ಲ್ಡ್ ವೈಡ್ ರೌದ್ರ ರಣ ರುಧೀರನ ಆರ್ಭಟ ಶುರುವಾಗಲಿದೆ.