ಫಿಲ್ಮಾಹಾಲಿಕ್‌ ಫೌಂಡೇಶನ್‌ನ ಸಿನಿಮಾ ಅಂತರಂಗ ಚಿತ್ರೋತ್ಸವ ಯಶಸ್ವಿ; 11 ವಿಭಾಗದಲ್ಲಿ ಪ್ರಶಸ್ತಿ ವಿತರಣೆ

ಇದು ಫಿಲ್ಮಾಹಾಲಿಕ್ ಫೌಂಡೇಶನ್ ನಡೆಸುವ ಸಿನಿಮಾ ಅಂತರಂಗ ಚಲನಚಿತ್ರೋತ್ಸವ ಹಾಗೂ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ -2021

ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆ ಅಯೋಜಿಸಿದ್ದ ಸಿನಿಮಾ ಅಂತರಂಗ ಚಿತ್ರೋತ್ಸವ ಹಾಗೂ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. 50ಕ್ಕೂ ಹೆಚ್ಚು ಚಿತ್ರಗಳು ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದವು. ರಾಜ್ಯದಲ್ಲಿ ಮೊದಲ ಬಾರಿಗೆ ಇಂಡಿಪೆಂಡೆಂಟ್ ಚಲನಚಿತ್ರಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ವಿಶೇಷವಾಗಿತ್ತು. ಸಸಿಯೊಂದಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ನಂತರ ಚಿತ್ರೋತ್ಸವದಲ್ಲಿ ಮೂರು ಉತ್ತಮ ಚಿತ್ರಗಳು ಪ್ರದರ್ಶನಗೊಂಡವು. “ದನಗಳು”, “ಕೇರಳ ಪ್ಯಾರಡೈಸ್”‌ ಮತ್ತು “ದಾರಿ ಯಾವುದಯ್ಯ ವೈಕುಂಟಕ್ಕೆ” ಚಿತ್ರಗಳು ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡವು.


ಅದಕ್ಕೂ ಮುನ್ನ ಚಿತ್ರ ನಿರ್ಮಾಣ ಕಾರ್ಯಗಾರವನ್ನು ಅಂತಾರಾಷ್ಟ್ರೀಯ ಸಿನಿಮಾ ನಿರ್ಮಾಪಕ, ನಿರ್ದೇಶಕ ಡಾ.ರಾಜಾ ಬಾಲಕೃಷ್ಣ ಅವರು ನಡೆಸಿಕೊಟ್ಟರು. ಅವಿನಾಶ್ ಶೆಟ್ಟಿ, ಪ್ರಯಾಗ್, ನಂದಲಿಕೆ ನಿತ್ಯಾನಂದ ಪ್ರಭು, ಡಾ.ರಾಜಗೋಪಾಲನ್, ಕಲಾದೇಗುಲ ಶ್ರೀನಿವಾಸ್, ಮನೋಜ್ ಕುಮಾರ್, ಮುಕುಲ್ ಗೌಡ ಅವರು ಕರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಫಿಲ್ಮಾಹಾಲಿಕ್ ಫೌಂಡೇಶನ್ನ ಲಕ್ಷ್ಮೀಶ ರಾಜು ಹಾಗೂ ಪ್ರವೀಣಾ ಕುಲ್ಕರ್ಣಿ ಕೂಡ ಉಪಸ್ಥಿತರಿದ್ದರು.

ಸಂಜೆ ನಡೆದ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮಕ್ಕೆ ಪದ್ಮಶ್ರೀ ಡಾ.|ದೊಡ್ಡರಂಗೇಗೌಡ ಅವರು ಚಾಲನೆ ಕೊಟ್ಟರು. ಸಂಗೀತ ನಿರ್ದೇಶಕ ವಿ.ಮನೋಹರ್, ಬರಹಗಾರ್ತಿ ವಿಜಯಲಕ್ಷ್ಮಿ ಸತ್ಯಮೂರ್ತಿ, ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ದೇವಸ್ಥಾನದ ಮುಖ್ಯಸ್ಥ ಡಾ. ಅಂಬರೀಶ್, ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥಾಪಕ ಆದಿತ್ಯ. ಆರ್. ಎ, ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ದಿಲೀಪ್ ಕುಮಾರ್ ಹೆಚ್ ಆರ್, ಭಾರತ ಸಾರಥಿ ಪತ್ರಿಕೆಯ ಗಂಡಸಿ ಸದಾನಂದ ಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

ವ್ಯೂಹ ಕಾದಂಬರಿ ಬಿಡುಗಡೆ…

ಅಪ್ಪು ಅಜರಾಮರ ಕಾರ್ಯಕ್ರಮದಲ್ಲಿ ಅಪ್ಪು ಅವರ ಚಿತ್ರವನ್ನು ರಬಿಕ್ ಕ್ಯೂಬ್ಸ್ ನಲ್ಲಿ ಹರಿಹಂತ ಜೈನ್ ಅವರು ಚಿತ್ರಿಸಿದರು. ಅಪ್ಪು ಅವರ ಸವಿನೆನಪಿನಲ್ಲಿ ಅನೇಕ ಪ್ರತಿಭಾವಂತರು ಕಳಿಸಿದ್ದ ಹಾಡುಗಳನ್ನು, ನೃತ್ಯ ಹಾಗೂ ಮೋನೋ ಆಕ್ಟಿಂಗ್ ವಿಡಿಯೋ ಪ್ರದರ್ಶಿಸಲಾಯಿತು. ವಿಜಯಲಕ್ಷ್ಮಿ ಸತ್ಯಮೂರ್ತಿ ಬರೆದ “ವ್ಯೂಹ” ಕಾದಂಬರಿ ಕೂಡ ಇದೇ ವೇಳೆ ಬಿಡುಗಡೆಯಾಯಿತು. ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಬಿಡುಗಡೆ ಮಾಡಿ ಶುಭ ಕೋರಿದರು.

“ವ್ಯೂಹ” ಕಾದಂಬರಿಯನ್ನು ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯು ಕಿಶೋರ್ ಎಂಟರ್‌ಟೈನರ್ಸ್‌ ಮೂಲಕ ಚಿತ್ರ ನಿರ್ಮಾಣ ಮಾಡಲಿದೆ. ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ನಿರ್ಮಿಸಿದ್ದ “ಅಪ್ಪು ನೆನಪು” ಹಾಡನ್ನು ಇದೇ ವೇಳೆ “ಮ್ಯೂಸಿಕ್ ಬಾಕ್ಸ್” ಆಡಿಯೋ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯು ಇದೇ ಸಮಯದಲ್ಲಿ ಫಿಲ್ಮಾಹಾಲಿಕ್ ಕ್ಲಬ್ ಉದ್ಘಾಟಿಸಿತು. ಫಿಲ್ಮಾಹಾಲಿಕ್ ಕ್ಲಬ್ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ, ಸಾಂಸ್ಕೃತಿಕ, ಸಾಹಿತ್ಯ, ಸಾಮಾಜಿಕ, ಕ್ರೀಡೆ ಹಾಗೂ ಇನ್ನೂ ಅನೇಕ ಕಾರ್ಯಗಳನ್ನು ಮಾಡುವ ಉದ್ದೇಶವನ್ನು ಹೊಂದಿದೆ.

11 ವಿಭಾಗದಲ್ಲಿ ಪ್ರಶಸ್ತಿ

ಸಿನಿಮಾ ಅಂತರಂಗ ಚಿತ್ರೋತ್ಸವದಲ್ಲಿ 11 ವಿಭಾಗಗಳಲ್ಲಿ ಪ್ರಶಸ್ತಿ ವಿತರಿಸಲಾಯಿತು. ಕೇರಳ ಪ್ಯಾರಡೈಸ್‌ ಉತ್ತಮ ಚಿತ್ರವಾಗಿ ಹೊರಹೊಮ್ಮಿದರೆ, ದಾರಿ ಯಾವುದಯ್ಯ ವೈಕುಂಟಕೆ ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಅದೇ ಚಿತ್ರದ ನಟನೆಗೆ ಬಲರಾಜವಾಡಿ ಅವರಿಗೆ ಉತ್ತಮ ಸಹನಟ ಪ್ರಶಸ್ತಿ ಲಭಿಸಿತು. ಕಟಿಲ್‌ ಚಿತ್ರದ ಉತ್ತಮ ಚಿತ್ರಕಥೆ ಪ್ರಶಸ್ತಿಯನ್ನು ಬಿ. ಲೆನಿನ್ ಪಡೆದರೆ, ದ್ವಿಭಜಕ ಚಿತ್ರ ಉತ್ತಮ ಸಂಕಲನ ಪ್ರಶಸ್ತಿಯನ್ನು ರತೇಶ್ ಕೌಸಲ್ಯ ಪಡೆದರು. ಮಂತ್ರಿ ಹಾಂಡ್ಸ್‌ಮ್‌ ಸೋಲ್ಸ್‌ ಚಿತ್ರಕ್ಕೆ ರಾಜು ಉತ್ತಮ ಛಾಯಾಗ್ರಾಹ ಪ್ರಶಸ್ತಿ ಪಡೆದರು. ಕಟಿಲ್‌ ಚಿತ್ರದ ಉತ್ತಮ ನಟಿ ಪ್ರಶಸ್ತಿ ಸೃಷ್ಟಿ ದಂಗಿ, ಕವಡೆ ಕಾಸಿನ ಚಿತ್ರದ ಕರ್ಣ ಕುಮಾರ್‌ ಉತ್ತಮ ನಟ ಪ್ರಶಸ್ತಿ, ಮತ್ತು ಇದೇ ಚಿತ್ರದ ಉತ್ತಮ ಸಂಗೀತ ಪ್ರಶಸ್ತಿ ಜೀವರತ್ನಮ್ ಪಡೆದರು.


ವಿಶೇಷ ತೀರ್ಪುಗಾರರ ಪ್ರಶಸ್ತಿಗೆ “ದನಗಳು” ಚಿತ್ರ ಆಯ್ಕೆಯಾಯಿತು. ಇದೇ ವೇಳೆ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್‌ಗೆ ಸಮಾಜ ಸೇವೆ ಸಲ್ಲಿಸಿದ ಗಣ್ಯರು, ಸಾಹಿತ್ಯ, ರಂಗಭೂಮಿ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಈ ಚಿತ್ರೋತ್ಸವಕ್ಕೆ ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಮುಖ್ಯಸ್ಥ ಡಾ.ಅಂಬರೀಶ್ ಜಿ, ಕವಿತಾ ಕಲ್ಪತರು ಫೌಂಡೇಶನ್ ಮುಖ್ಯಸ್ಥೆ ಕವಿತಾ ಶ್ರೀನಾಥ್,

ಬರಹಗಾರ್ತಿ ವಿಜಯಲಕ್ಷ್ಮಿ ಸತ್ಯಮೂರ್ತಿ, ಎನ್ ಟಿ ಸುರೇಶ್, ಪ್ರಕೃತಿ ಪ್ರಸನ್ನ, ಸವಿತಾ ರಾಮು, ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ದಿಲೀಪ್ ಕುಮಾರ್, ಭಾರತ ಸಾರಥಿ ಪತ್ರಿಕೆಯ ಗಂಡಸಿ ಸದಾನಂದ ಸ್ವಾಮಿ ಸಹಪ್ರಾಯೋಜಕರಾಗಿದ್ದರು. ಈ ವೇಳೆ ಫಿಲ್ಮಾಹಾಲಿಕ್‌ ಫೌಂಡೇ಼ಶನ್‌ನ ಕಿಶೋರ್ ಸಾವಂತ್, ಗಣೇಶ್,ಚಂದ್ರಕಾಂತ್, ಉದಯ್ ಕುಮಾರ್, ಲಕ್ಷ್ಮೀಶ ರಾಜು, ಪ್ರಜ್ಞಾ ಬಿ, ಕಿರಣ್ ಬಿ ಎನ್, ಪ್ರವೀಣಾ ಕುಲ್ಕರ್ಣಿ, ಮುರಳಿ, ತೇಜಸ್ವಿನಿ ರಾವ್, ಜಯಪ್ರಕಾಶ್ ಇತರರು ಇದ್ದರು.

Related Posts

error: Content is protected !!