Categories
ಸಿನಿ ಸುದ್ದಿ

ಪದವಿಪೂರ್ವ ಶೂಟಿಂಗ್‌ ಸೆಟ್‌ಗೆ ಜಗ್ಗೇಶ್‌ ಭೇಟಿ – ಉತ್ಸಾಹದಲ್ಲಿ ಚಿತ್ರತಂಡ

ಕಲಾವಿದರಿಗೆ ಪ್ರಮುಖ ಸಲಹೆ ನೀಡಿದ ನವರಸನಾಯಕ

ಕನ್ನಡ ಸಿನಿಮಾಗಳ ಚಿತ್ರೀಕರಣ ಸಂದರ್ಭದಲ್ಲಿ ಒಂದಷ್ಟು ಸ್ಟಾರ್‌ ನಟರು ಆಕಸ್ಮಿಕ ಭೇಟಿ ನೀಡಿ, ಆ ಚಿತ್ರತಂಡಕ್ಕೆ ಅಚ್ಚರಿ ನೀಡುವುದು ಹೊಸದೇನಲ್ಲ. ದರ್ಶನ್‌, ಸುದೀಪ್‌, ಪುನೀತ್‌ ಸೇರಿದಂತೆ ಒಂದಷ್ಟು ನಟರು ತಮ್ಮ ಪ್ರೀತಿಗೆ ಪಾತ್ರರಾದ ಸಿನಿಮಾ ನಿರ್ಮಾಪಕರು, ನಿರ್ದೇಶಕರ ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದುಂಟು. ಈಗ ನಟ ಜಗ್ಗೇಶ್ ಕೂಡ ಹೊಸಬರ ಚಿತ್ರದ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಭೇಟಿ ನೀಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.


ಹೌದು, ಜಗ್ಗೇಶ್‌ ಹಾಗೆ ಭೇಟಿ ನೀಡಿದ್ದು, “ಪದವಿಪೂರ್ವ” ಚಿತ್ರದ ಸೆಟ್‌ಗೆ. ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ಈ ಚಿತ್ರ, ಯೋಗರಾಜ್ ಭಟ್ ಹಾಗು ರವಿ ಶಾಮನೂರ್ ನಿರ್ಮಿಸುತ್ತಿರುವ “ಪದವಿಪೂರ್ವ” ಚಿತ್ರದ ಶೂಟಿಂಗ್ ಜೋರಾಗಿಯೇ ನಡೆಯುತ್ತಿದೆ. ಈ ಚಿತ್ರದ ಸೆಟ್‌ಗೆ ಸರ್ಪ್ರೈಸ್ ಭೇಟಿ ನೀಡಿದ ಜಗ್ಗೇಶ್‌ ಅವರು, ಕೆಲ ಕಾಲ ಅವರೊಂದಿಗೆ ಚರ್ಚಿಸಿ, ಅಲ್ಲಿಯೇ ಇದ್ದು, ಕೆಲ ಸೀನ್‌ಗಳನ್ನೂ ವೀಕ್ಷಿಸಿ, ಸಂತಸಪಟ್ಟಿದ್ದಾರೆ.

ನಿರ್ದೇಶಕ ಹರಿಪ್ರಸಾದ್ ಜಯಣ್ಣ ಹಾಗು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಅವರ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಜಗ್ಗೇಶ್‌ ಅವರು, ಸೆಟ್‌ನಲ್ಲಿದ್ದ ಕೆಲವು ಕಲಾವಿದರೊಂದಿಗೂ ಮಾತನಾಡಿ, ಅವರಿಗೆ ಸಲಹೆಗಳನ್ನೂ ನೀಡಿದ್ದಾರೆ. ಸಹಜವಾಗಿಯೇ ಚಿತ್ರತಂಡಕ್ಕೆ ಜಗ್ಗೇಶ್‌ ಅವರ ಈ ಭೇಟಿ ಖುಷಿ ಕೊಟ್ಟಿದ್ದಲ್ಲದೆ, ಮತ್ತಷ್ಟು ಉತ್ಸಾಹ ತುಂಬಿದೆ. ಕಳೆದ ವಾರವಷ್ಟೇ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಬೆಂಗಳೂರಿನ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಣ ನಡೆಯುತ್ತಿದ. ಚಿತ್ರಕ್ಕೆ ಪೃಥ್ವಿ ಶಾಮನೂರ್ ನಾಯಕಿ. ಅಂಜಲಿ ಅನೀಶ್‌ ಮತ್ತು ಯಶಾ ಶಿವಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

Categories
ಎಡಿಟೋರಿಯಲ್ ಸಿನಿ ಸುದ್ದಿ

ಫಿಲ್ಮ್‌ ಚೇಂಬರ್‌ ಚುನಾವಣಾಧಿಕಾರಿಯಾಗಿ ಥಾಮಸ್‌ ಡಿಸೋಜಾ ಆಯ್ಕೆ-ಮಂಡಳಿ ಚುನಾವಣೆಗೆ ಕ್ಷಣಗಣನೆ…

ಸಾ.ರಾ.ಗೋವಿಂದು, ಬಾ.ಮ.ಹರೀಶ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ

ಥಾಮಸ್‌ ಡಿಸೋಜ

ಕನ್ನಡ ಚಿತ್ರರಂಗಕ್ಕೆ ಸುಮಾರು ಎಂಟು ದಶಕಕ್ಕೂ ಹೆಚ್ಚು ಕಾಲ ಇತಿಹಾಸವಿದೆ. ಹಾಗೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಐದು ದಶಕಕ್ಕೂ ಹೆಚ್ಚು ಕಾಲದ ಇತಿಹಾಸವಿದೆ. ಕನ್ನಡ ಚಿತ್ರರಂಗಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೃದಯವಿದ್ದಂತೆ. ಈ ಫಿಲ್ಮ್‌ ಚೇಂಬರ್‌ ಕನ್ನಡ ಚಿತ್ರರಂಗದ ಪ್ರಗತಿಗೆ ಬೆನ್ನೆಲುಬು. ಈವರೆಗೆ ಈ ಫಿಲ್ಮ್‌ ಚೇಂಬರ್‌ನಲ್ಲಿ ಸಾಕಷ್ಟು ಹಿರಿಯರು ಚುಕ್ಕಾಣಿ ಹಿಡಿದು, ಕನ್ನಡ ಚಿತ್ರರಂಗದ ಏಳಿಗೆಗೆ ದುಡಿದಿದ್ದಾರೆ. ಇನ್ನೂ ಕೆಲವರು ದುಡಿಯುತ್ತಿದ್ದಾರೆ. ಇಷ್ಟಕ್ಕೂ ಈ ಫಿಲ್ಮ್‌ ಚೇಂಬರ್‌ ಕುರಿತ ಸುದ್ದಿ ಯಾಕೆಂದರೆ, ಪ್ರತಿ ವರ್ಷವೂ ಫಿಲ್ಮ್‌ ಚೇಂಬರ್‌ ಚುನಾವಣೆ ನಡೆಯುತ್ತದೆ. ಕೆಲವೊಮ್ಮೆ ಈ ಫಿಲ್ಮ್‌ ಚೇಂಬರ್‌ನಲ್ಲಿ ಅವಿರೋಧ ಆಯ್ಕೆಯಾಗಿರುವುದೂ ಉಂಟು. ಬಹುತೇಕ ಚುನಾವಣೆ ಮೂಲಕ ಚುಕ್ಕಾಣಿ ಹಿಡಿದವರೇ ಹೆಚ್ಚು. ಈಗ ಸದ್ಯಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದೆ. ಅದಕ್ಕೀಗ ಕ್ಷಣಗಣನೆ ಕೂಡ ಶುರುವಾಗಿದೆ. ಈಗಾಗಲೇ ಫಿಲ್ಮ್‌ ಚೇಂಬರ್‌ನಲ್ಲಿ ನಡೆದ ಸಭೆಯಲ್ಲಿ ಚೇಂಬರ್‌ನ ಮಾಜಿ ಅಧ್ಯಕ್ಷರಾದ ಥಾಮಸ್‌ ಡಿಸೋಜ ಅವರನ್ನು ಚುನಾವಣಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಥಾಮಸ್‌ ಡಿಸೋಜ ಅವರು, ಇಷ್ಟರಲ್ಲೇ ಸಭೆ ಕರೆದು, ಫಿಲ್ಮ್‌ ಚೇಂಬರ್‌ಗೆ ಯಾವಾಗ ಚುನಾವಣೆ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಷ್ಟೇ ಅಲ್ಲ, ದಿನಾಂಕವನ್ನೂ ನಿಗದಿಗೊಳಿಸಲಿದ್ದಾರೆ.

ಸಾ.ರಾ.ಗೋವಿಂದು

ಇನ್ನು, ಈಗ ಹಾಲಿ ಜೈ ರಾಜ್‌ ಅವರು ಫಿಲ್ಮ್‌ ಚೇಂಬರ್‌ ಅಧ್ಯಕ್ಷರಾಗಿದ್ದಾರೆ. ಅವರ ಅವಧಿ ಜೂನ್‌ನಲ್ಲೇ ಪೂರ್ಣಗೊಂಡಿದೆ. ಆದರೆ, ಕೊರೊನೊ ಹಾವಳಿ ಇದ್ದುದರಿಂದ, ಸದ್ಯಕ್ಕೆ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದರು. ಈಗಷ್ಟೇ ಸಮಿತಿ ಸಭೆಯಲ್ಲಿ ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ. ನಂತರದ ದಿನಗಳಲ್ಲಿ ದಿನಾಂಕ ನಿಗಧಿಗೊಳಿಸಿ, ಚುನಾವಣೆ ನಡೆಸುವ ತಯಾರಿ ನಡೆಯಬೇಕಿದೆ.
ಅಂದಹಾಗೆ, ಈ ಬಾರಿ ಅ‍ಧ್ಯಕ್ಷ ಸ್ಥಾನ ಬಯಸಿದವರ ಸಂಖ್ಯೆ ಬಹಳಷ್ಟು ಇದೆಯಾದರೂ, ಬಾ.ಮ.ಹರೀಶ್‌ ಅವರು ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇನ್ನುಳಿದಂತೆ, ಮೂಲಗಳ ಪ್ರಕಾರ ಸಾ.ರಾ.ಗೋವಿಂದು ಅವರೂ ಕೂಡ ಮತ್ತೊಮ್ಮೆ ಅ‍ಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆಗಿಳಿಯಲಿದ್ದಾರೆ ಎನ್ನಲಾಗಿದೆ.

ಬಾ.ಮ.ಹರೀಶ್

ಹಾಗೆ ನೋಡಿದರೆ, ಫಿಲ್ಮ್‌ ಚೇಂಬರ್‌ನಲ್ಲಿ ಸಾ.ರಾ.ಗೋವಿಂದು ಮತ್ತು ಬಾ.ಮ.ಹರೀಶ್‌ ಅವರು ಅಧಿಕಾರ ನಡೆಸಿದವರು. ಮೂರು ಬಾರಿ ಸಾ.ರಾ.ಗೋವಿಂದು ಅವರು ಫಿಲ್ಮ್‌ ಚೇಂಬರ್‌ಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅಂತೆಯೇ, ಈ ಬಾರಿಯೂ ಸ್ಥಾನಕ್ಕೆ ಸ್ಪರ್ಧೆಗಳಿಯಲಿದ್ದಾರೆ ಎನ್ನಲಾಗಿದೆ. ಇನ್ನು, ಬಾ.ಮ.ಹರೀಶ್‌ ಅವರು ಕೂಡ ಈ ಹಿಂದೆ ತಲ್ಲಂ ನಂಜುಂಡಶೆಟ್ಟಿ ಅವರ ಅವಧಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿ ಕೆಲಸ ಮಾಡಿದ್ದರು. ಆ ನಂತರದ ದಿನಗಳಲ್ಲಿ ಥಾಮಸ್‌ ಡಿಸೋಜ ಅವರು ಅಧ್ಯಕ್ಷರಾದ ಸಂದರ್ಭದಲ್ಲೂ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಚಿನ್ನೇಗೌಡ ಅವರು ಅಧ್ಯಕ್ಷರಾಗಿದ್ದಾಗಲೂ ಬಾ.ಮ.ಹರೀಶ್‌ ಅವರು ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆ ನಡೆಸಿದ್ದರಾದರೂ, ಸಾ.ರಾ.ಗೋವಿಂದು ಅವರ ವಿರುದ್ಧ ಕಡಿಮೆ ಅಂತರದಲ್ಲೇ ಅವರು ಸೋಲು ಕಂಡಿದ್ದರು. ಈ ಸಲ ಗೆಲ್ಲುವ ವಿಶ್ವಾಸದೊಂದಿಗೆ ಸ್ಪರ್ಧೆಗಿಳಿಯುತ್ತಿರುವುದಾಗಿ ಹೇಳುತ್ತಾರೆ.

Categories
ಸಿನಿ ಸುದ್ದಿ

ಕಾಮಿನಿ ರಾವ್‌ ಅವರ ಮಾಸ್ಟರ್‌ ಕ್ಲಾಸ್‌ – ಸಿನ್ಮಾ ಕ್ಷೇತ್ರಕ್ಕೂ ಎಂಟ್ರಿ ಕೊಡಲಿರುವ ಖ್ಯಾತ ವೈದ್ಯೆ

ಇತರರಿಗೂ ಸ್ಫೂರ್ತಿ ತುಂಬುವ ಉದ್ದೇಶವೇ ನಮ್ಮ ಗುರಿ

ಈಗಾಗಲೇ ತಮ್ಮದೇ ಆದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ಸಾಧಕರು ಮನರಂಜನೆ ಕ್ಷೇತ್ರಕ್ಕೂ ಎಂಟ್ರಿಯಾಗಿದ್ದು ಗೊತ್ತೇ ಇದೆ. ಬಹಳಷ್ಟು ಮಂದಿ ಸಾಧಕರು ಮನರಂಜನಾ ಕ್ಷೇತ್ರದಲ್ಲೀ ಯಶಸ್ಸು ಕಂಡಿದ್ದಾರೆ ಕೂಡ. ಈಗ ಡಾ.ಕಾಮಿನಿ ರಾವ್‌ ಕೂಡ ಮನರಂಜನಾ ಕ್ಷೇತ್ರಕ್ಕೆ ಎಂಟ್ರಿಯಾಗುತ್ತಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ಪ್ರಸೂತಿ ಮತ್ತು ಸ್ತ್ರಿರೋಗ ತಜ್ಞೆಯಾಗಿ, ಅಸಿಸಡ್ ರಿಪ್ರೊಡಕ್ಷನ್ ಕ್ಷೇತ್ರ ಸೇರಿದಂತೆ ವೈದ್ಯಕೀಯ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪದ್ಮಶ್ರೀ ಪ್ರಶಸ್ತಿ ವಿಜೇತೆ ಡಾ.ಕಾಮಿನಿ ಎ.ರಾವ್‌ ಇದೀಗ ತಮ್ಮ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಈಗಾಗಲೇ ರಾಷ್ಟ್ರ. ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿರುವ ಅಪ್ಪಟ ಕನ್ನಡದ ಮಹಿಳೆ ಡಾ. ಕಾಮಿನಿ ಎ. ರಾವ್.‌ ವೈದ್ಯಲೋಕದಲ್ಲಿ ಸಾಕಷ್ಟು ಸಾಧನೆ ಮಾಡುವುದರ ಜೊತೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರೀಗ ಮನರಂಜನೆ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ ಎಂಬುದು ಅಚ್ಚರಿಯಾದರೂ ಸತ್ಯ.
ಈ ಕುರಿತಂತೆ ಅವರು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಪೂರ್ವಿ ಪ್ರೊಡಕ್ಷನ್ಸ್ ಹೆಸರಿನಲ್ಲಿ ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸುತ್ತಿರುವುದಾಗಿ ಹೇಳಿರುವ ಅವರು, ಅಧಿಕೃತವಾಗಿ ಈ ಸಂಸ್ಥೆ ತನ್ನ ಕಾರ್ಯಚಟುವಟಿಕೆ ಶುರುಮಾಡಲಿದೆ. ಮನರಂಜನಾ ಕ್ಷೇತ್ರದ ಮೂಲಕ ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ತಮ್ಮ ಸೊಸೆ ಪೂಜಾ ಸಿದ್ಧಾರ್ಥ್ ರಾವ್ ಕೂಡ ಹೊಸ ಯೋಜನೆ ಹಾಕಿಕೊಂಡಿದ್ದರಿಂದಲೇ ನಾನು ಈ ಹೊಸ ಸಾಹಸಕ್ಕೆ ಸಿದ್ಧಳಾಗಿದ್ದೇನೆ. ಈ ಕೆಲಸಕ್ಕೆ ನನ್ನ ಪತಿ ಡಾ. ಎ.ಎಸ್. ಅರವಿಂದ್ ಅವರ ಸಹಕಾರವೂ ಇದೆ. ಸಿನಿಮಾ ಮೂಲಕ ಸಾಮಾನ್ಯರಿಗೂ ಉಪಯೋಗವಾಗುವ ಉದ್ದೇಶದಿಂದ ಹೊಸ ಪ್ರಯೋಗಗಳನ್ನು ಈ ಸಂಸ್ಥೆ ಮೂಲಕ ಮಾಡುವ ಛಲದಲ್ಲಿರುವುದಾಗಿ ಹೇಳುತ್ತಾರೆ ಅವರು.

ಡಾ.‌ ಕಾಮಿನಿ ರಾವ್

ಮಾಸ್ಟರ್ ಕ್ಲಾಸ್
ಡಾ. ಕಾಮಿನಿ ರಾವ್ಸ್ ಮಾಸ್ಟರ್ ಕ್ಲಾಸ್ ಕೇವಲ ಸಾಮಾನ್ಯ ಸಂಗತಿಗಳಿಂದ ಕೂಡಿರದೇ, ಸ್ಪೂರ್ತಿದಾಯಕ ಅಂಶಗಳ ಜತೆಗೆ, ಯಶಸ್ಸಿನ ಏಣಿ ಏರುವುದಕ್ಕೂ ಇದು ರಹದಾರಿಯಾಗಿದೆ. ಸಾಮಾನ್ಯನಿಂದ ಅಸಾಮಾನ್ಯನೆಡೆಗೆ ಡಾ. ಕಾಮಿನಿ ರಾವ್ಸ್ ಮಾಸ್ಟರ್ ಕ್ಲಾಸ್‌ನಲ್ಲಿ ಮಾಹಿತಿ ನೀಡಲಾಗುತ್ತದೆ. ಇದರ ಜತೆಗೆ “ಪೂರ್ವಿರಾಗ”, “ಹರಟೆ” ಎಂಬ ಸ್ಫೂರ್ತಿದಾಯಕ ಕಾರ್ಯಕ್ರಮವನ್ನೂ ಆಯೋಜಿಸುತ್ತಿದ್ದು, ಒಂದಷ್ಟು ಗಾಯಕರು ಮತ್ತು ಸಂಗೀತಗಾರರನ್ನ ಆಯ್ಕೆ ಮಾಡಿ ಕಾರ್ಯಕ್ರಮವನ್ನೂ ನಡೆಸಲಿದ್ದಾರೆ. ಇಲ್ಲಿ ಹಾಸ್ಯದೊಂದಿಗೆ ಹಾಡು ಹರಟೆ ಹೈಲೈಟ್‌ ಆಗಿರಲಿದೆ. ಇನ್ನು, ನಾನು ವೈದ್ಯಕೀಯ ಕ್ಷೇತ್ರದಲ್ಲಿರುವುದರಿಂದ ಇತರರಿಗೂ ಅನುಕೂಲ ಆಗಲಿ ಎಂಬ ಕಾರಣಕ್ಕೆ, ಆನ್ಲೈನ್ ತರಗತಿಗಳನ್ನೂ ಆಯೋಜಿಸುತ್ತಿದ್ದೇನೆ. ರಿಪ್ರೊಡಕ್ಟಿವ್ ಮೆಡಿಸಿನ್, ಆಬ್ಸ್ಟೆಟ್ರಿಕ್ಸ್ ಮತ್ತು ಗೆನೊಕೊಲಜಿ ಕುರಿತ ತರಗತಿಗಳನ್ನು ನಡೆಸಲಾಗುವುದು. ಇಲ್ಲಿ ಸಾಕಷ್ಟು ನುರಿತ ವೈದ್ಯರು ಈ ಬಗ್ಗೆ ಆನ್ಲೈನ್ನಲ್ಲಿಯೇ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ಹಾಗೇ ಕಲಿತ ಕೋರ್ಸ್‌ ಗೆ ಸರ್ಟಿಫೀಕೆಟ್ ಸಹ ನೀಡಲಾಗುವುದು. ಗ್ರಾಮೀಣ ಮತ್ತು ನಗರ ಪ್ರದೇಶದವರ ಜತೆಗೆ ವಿಶ್ವದಾದ್ಯಂತ ಎಲ್ಲೇ ಇದ್ದರೂ ಈ ಕೋರ್ಸ್ ಮಾಡಬಹುದು ಎಂಬುದು ಅವರ ಮಾತು.

ಪೂಜಾ ಸಿದ್ಧಾರ್ಥ್‌ ರಾವ್

ಪೂರ್ವಿ ಪ್ರೊಡಕ್ಷನ್ಸ್
ಇನ್ನು ಪೂರ್ವಿ ಪ್ರೊಡಕ್ಷನ್ಸ್‌ ಕುರಿತು ಮಾತನಾಡಿದ ಕಾಮಿನಿ ರಾವ್‌ ಅವರ ಸೊಸೆ, ಪೂಜಾ ಸಿದ್ಧಾರ್ಥ್‌ ರಾವ್‌, “ಸಾಮಾಜಿಕ ಕಳಕಳಿಯುಳ್ಳ ಮತ್ತು ಜನಸಾಮಾನ್ಯರಿಗೂ ಹತ್ತಿರವೆನಿಸುವ ಸಿನಿಮಾಗಳನ್ನು ನಿರ್ಮಾಣ ಮಾಡಿ ಸಮಾಜಕ್ಕೆ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಧನಾತ್ಮಕ ಅಂಶಗಳಿರುವ ಮತ್ತು ಎಲ್ಲರಿಗೂ ಅನ್ವಯವಾಗುವಂತಹ ಸಿನಿಮಾಗಳನ್ನು ನಿರ್ಮಿಸುವುದು ಸಂಸ್ಥೆಯ ಗುರಿ. ಈ ಪೂರ್ವಿ ಪ್ರೊಡಕ್ಷನ್ಸ್ ಸಂಸ್ಥೆಯನ್ನು ತೆರೆಯುತ್ತಿರುವ ಮುಖ್ಯ ಉದ್ದೇಶ, ಸಿನಿಮಾ ನಿರ್ಮಾಣ, ಡಾಕ್ಯುಮೆಂಟರಿಗಳು, ಹರಟೆ ರೀತಿಯ ಕಾರ್ಯಕ್ರಮಗಳನ್ನು ಮತ್ತು ಎಜುಕೇಷನಲ್ ಸಿನಿಮಾಗಳನ್ನು ನಿರ್ಮಾಣ ಮಾಡುವುದು. ಇಷ್ಟಕ್ಕೂ ಈ ಸಂಸ್ಥೆ ಶುರು ಮಾಡೋಕೆ ಕಾರಣ, ಕೊರೊನಾದಿಂದ ಆದಂತಹ ಅನುಭವ. ನಾನು ಮದುವೆಯಾಗಿ ಹತ್ತು ವರ್ಷಗಳಾದವು. ಇಷ್ಟು ದಿನದಲ್ಲಿ ನನ್ನ ಅತ್ತೆ ಸುಮ್ಮನೇ ಕುಳಿತಿದ್ದು ಯಾವತ್ತೂ ನೋಡಿಲ್ಲ. ಹೀಗಿರುವಾಗ ಕೊರೋನಾ ಕಾರಣಕ್ಕಾಗಿ ನಿರ್ಮಾಣಗೊಂಡ ಪರಿಸ್ಥಿತಿ ಎಂಥವರನ್ನೂ ಮನೆಯಲ್ಲಿ ಬಂಧಿಸಿತ್ತು. ಆನ್‌ ಲೈನ್‌, ಓಟಿಟಿಗಳನ್ನು ನೋಡಿ ಸಾಕಾಗಿತ್ತು. ಅದೊಂದು ದಿನ ʻಅಮ್ಮಾ ಸುಮ್ಮನೇ ಕೂತು ಬೇಸರವಾಗುತ್ತಿದೆʼ ಎಂದೆ. ಆ ದಿನ ಹತ್ತಾರು ನಿಮಿಷಗಳ ಕಾಲ ಅತ್ತೆ ಬದುಕಿನ ಬಗ್ಗೆ ಮಾತಾಡಿದರು. ಅವರ ಮಾತುಗಳು ತುಂಬಾ ಅಮೂಲ್ಯವೆನಿಸಿತು. ಅವರ ಈ ಹಿತ ನುಡಿಗಳು, ಮಾರ್ಗದರ್ಶನದ ಮಾತುಗಳು ನಮಗಷ್ಟೇ ದಕ್ಕಿದರೆ ಹೇಗೆ? ಜಗತ್ತಿಗೆ ಯಾಕೆ ಪರಿಚಯಿಸಬಾರದು? ಎಂಬ ಐಡಿಯಾ ಬಂದು. ಈ ಕಾರಣಕ್ಕೆ ಶುರುವಾದ ಹೊಸ ಕಲ್ಪನೆ ಪೂರ್ವಿ ಪ್ರೊಡಕ್ಷನ್ಸ್. ಈ ಮೂಲಕ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಈಗಾಗಲೇ ಕನ್ನಡ ರಾಜ್ಯೋತ್ಸವ ಕುರಿತು ಅಪರ್ಣ ಹಾಗೂ ಜೋಗಿ ಸುನಿತ ಜೊತೆ ಒಳ್ಳೆಯ ಕಾರ್ಯಕ್ರಮ ನಡೆದಿದೆ.‌ ನಮ್ಮ ಡಾ.ಕಾಮಿನಿ ರಾವ್ ಡಾಟ್‌ ಕಾಮ್‌ ಯುಟ್ಯೂಬ್ ಚ್ಯಾನೆಲ್‌ನಲ್ಲಿ ವೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣ ಮಾಡುವ ಉದ್ದೇಶವೂ ಇದೆ. ಸಾಮಾಜಿಕ ಕಳ ಕಳಿ ಇರುವ ವಿಷಯ ಆಯ್ಕೆ ಮಾಡಿಕೊಂಡು ಚಿತ್ರ ಮಾಡುವ ಯೋಚನೆ ಇದೆ ಎಂಬುದು ಪೂಜಾ ಸಿದ್ಧಾರ್ಥ್‌ ರಾವ್‌ ಅವರ ಮಾತು.‌

ಡಾ.ಅರವಿಂದ್

ಡಾ.ಕಾಮಿನಿ ರಾವ್‌ ಅವರ ಪತಿ ಡಾ.ಎ.ಎಸ್.‌ ಅರವಿಂದ್‌ ಅವರಿಗೆ, ವೈದ್ಯರಾಗಿದ್ದರೂ, ಸಿನಿಮಾರಂಗ ಹತ್ತಿರವಂತೆ. ಅವರು ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌, ಕಾಲೇಜಿನಲ್ಲಿ ಓದಿದವರು. ಹಾಗಾಗಿ, ಡಾ. ವಿಷ್ಣುವರ್ಧನ್‌ ಆಪ್ತರು. ಅಂಬರೀಶ್‌, ಡಾ. ರಾಜ್‌ ಕುಮಾರ್‌ ಕುಟುಂಬ ಸೇರಿದಂತೆ ಸಾಕಷ್ಟು ಕಲಾವಿದರ ಒಡನಾಟವೂ ಇವರಿಗೆ ಇದೆ. ಇಷ್ಟು ವರ್ಷ ಸಿನಿಮಾದವರ ಸಂಗಡ ಇದ್ದರೂ, ಸಿನಿಮಾರಂಗ ಪ್ರವೇಶಿಸಿರಲಿಲ್ಲ. ಈಗ ನೇರವಾಗಿ ಸ್ಪರ್ಶಿಸುವ ಕಾಲ ಬಂದಿದೆ ಎಂದರು ಡಾ. ಎ.ಎಸ್. ಅರವಿಂದ್.

Categories
ಸಿನಿ ಸುದ್ದಿ

13 ನೇ ಚಿತ್ರೋತ್ಸವ ಅನುಮತಿಗೆ ಮನವಿ ಅಕಾಡೆಮಿ ಸದಸ್ಯರ ನಿಯೋಗದಿಂದ ಸಿಎಂ ಭೇಟಿ

2021 ರ ಫೆಬ್ರವರಿಯಲ್ಲಿ ಚಿತ್ರೋತ್ಸವ ಸಾಧ್ಯತೆ- ಮುಖ್ಯಮಂತ್ರಿ ಸಕಾರಾತ್ಮಕ ಸ್ಪಂದನೆ

ಈ ಬಾರಿ 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜನೆಗೆ ಅನುಮತಿ ಕೋರಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ತಮ್ಮ ಅಕಾಡೆಮಿಯ ಸದಸ್ಯರೊಂದಿಗೆ ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಕೊರೊನಾ ಹಾವಳಿಯಿಂದ ಚಿತ್ರರಂಗ ಸಂಪೂರ್ಣ ಸೊರಗಿದೆ. ಈಗಷ್ಟೇ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಚಿತ್ರರಂಗ ಇನ್ನಷ್ಟು ವೇಗವಾಗಲು, ಪ್ರೇಕ್ಷಕರನ್ನು ಪುನಃ ಚಿತ್ರಮಂದಿರಗಳತ್ತ ಸೆಳೆಯಲು 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅನುಮತಿ ಕೊಟ್ಟು, ಅದಕ್ಕೆ ಬೇಕಾದ ಪೂರಕ ವಾತಾವರಣ ಕಲ್ಪಿಸಲು ಮುಂದಾಗಬೇಕು ಎಂದು ಮನವಿ ನೀಡಲಾಗಿದೆ. ೨೦೨೧ರ ಫೆಬ್ರವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ ಚಿತ್ರೋತ್ಸವ ಆಯೋಜನೆಗೆ ಅನುಮತಿ ನೀಡುವಂತೆ ಅಕಾಡಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಅವರ ನೇತೃತ್ವದ ನಿಯೋಗ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಕಾರಾತ್ಮಕವಾಗಿಯೂ ಸ್ಪಂದಿಸಿದ್ದಾರೆ ಎನ್ನಲಾಗಿದೆ.


ಕಳೆದ 12  ವರ್ಷಗಳಿಂದಲೂ ನಡೆದು ಬಂದಿರುವ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಯಶಸ್ವಿ ಕಂಡಿದೆ. ಜಗತ್ತಿನಾದ್ಯಂತ ಸುಮಾರು 5000 ಸ್ಥಳಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತವೆ. ಆ ಪೈಕಿ ಕೇವಲ 45 ಚಿತ್ರೋತ್ಸವಗಳಿಗೆ ಮಾತ್ರ ಅಂತಾರಾಷ್ಟ್ರೀಯ ಮನ್ನಣೆ ಸಿಕಿದೆ. ನಮಗೂ ಈ ಮನ್ನಣೆ ಸಿಗಬೇಕಾದರೆ, ಚಿತ್ರೋತ್ಸವ ಆಯೋಜಿಸಬೇಕಿದೆ. ಈಗ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆ ಮಾನ್ಯತೆ ದೊರೆಯುವ ಸಾಧ್ಯತೆಯೂ ಇದೆ. ಹಾಗೊಂದು ವೇಳೆ ಈ ಮಾನ್ಯತೆ ಏನಾದರೂ ಸಿಕ್ಕರೆ, ವಿಶ್ವದಲ್ಲಿ 46ನೇ ಮಾನ್ಯತೆ ಪಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಎಂಬ ಹೆಗ್ಗಳಿಕೆ ನಮ್ಮದಾಗುತ್ತದೆ. ಹಾಗಾಗಿ 13 ನೇಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜನೆಗೆ ಅನುಮತಿ ನೀಡುವುದರ ಜೊತೆಯಲ್ಲಿ ಆ ಚಿತ್ರೋತ್ಸವಕ್ಕೆ ಬೇಕಾಗುವ ಅಗತ್ಯ ಅನುದಾನ ಕಲ್ಪಿಸಿಕೊಡಬೇಕು ಎಂದು ನಿಯೋಗ ಮನವಿ ಮಾಡಿದೆ.


ಭಾರತದಲ್ಲಿ ಕೇವಲ ನಾಲ್ಕು ಸ್ಥಳಗಳಲ್ಲಿ ಮಾತ್ರ ಚಿತ್ರೋತ್ಸವ ನಡೆಯಲಿದೆ. ಗೋವಾದಲ್ಲಿ ಭಾರತ ಸರ್ಕಾರ ಚಲನಚಿತ್ರೋತ್ಸವವನ್ನು ಆಯೋಜಿಸಿದರೆ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಆಯಾ ಸರ್ಕಾರಗಳು ಚಿತ್ರೋತ್ಸವಗಳನ್ನು ಆಯೋಜಿಸುತ್ತಿವೆ ಎಂಬ ವಿಷಯವನ್ನು ಈ ವೇಳೆ ಸಿಎಂ ಬಳಿ ಚರ್ಚಿಸಲಾಗಿದೆ.
ಅಂದಹಾಗೆ, ಈ ನಿಯೋಗದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಎನ್. ವಿದ್ಯಾಶಂಕರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ, ನಟಿ ಶ್ರುತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ, ಅಕಾಡೆಮಿ ರಿಜಿಸ್ಟ್ರಾರ್ ಜಿ.ಹಿಮಂತರಾಜು ಇದ್ದರು. ಅವರು ಈ ನಿಯೋಗದಲ್ಲಿದ್ದರು.

Categories
ಆಡಿಯೋ ಕಾರ್ನರ್

ಕಾಶ್ಮೀರದಲ್ಲಿ ಜೋಗಿ ಪ್ರೇಮ್ – ಏಕ್‌ ಲವ್‌ ಯಾ ಚಿತ್ರದ ಹಾಡಲ್ಲಿ ಬಿಝಿ

ಟ್ವೀಟ್‌ ಮಾಡಿ ಖುಷಿ ಹಂಚಿಕೊಂಡ ನಿರ್ದೇಶಕ

“ಜೋಗಿ” ಖ್ಯಾತಿಯ ನಿರ್ದೇಶಕ ಪ್ರೇಮ್‌ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಸಿನಿಮಾ ಅನೌನ್ಸ್‌ ಮಾಡುವುದರಿಂದ ಹಿಡಿದು, ಅವರು ತಮ್ಮ ಚಿತ್ರಕ್ಕೆ ಇಡುವ ಹೆಸರು, ಹೊರ ಬಿಡುವ ಪೋಸ್ಟರ್‌,‌ ಟೀಸರ್‌, ಟ್ರೇಲರ್ ಹೀಗೆ ಆಯಾ ಸಿನಿಮಾ ಮೂಲಕ ಸುದ್ದಿಯಾಗುತ್ತಾರೆ ಮತ್ತು ಆ ಚಿತ್ರವನ್ನೂ ಸದಾ ಸುದ್ದಿಯಲ್ಲಿಡುತ್ತಾರೆ. ಎಲ್ಲರಿಗೂ ಗೊತ್ತಿರುವಂತೆ ಪ್ರೇಮ್‌ ಇದೀಗ “ಏಕ್‌ ಲವ್‌ ಯಾ” ಸಿನಿಮಾ ಜಪ ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರೇಮ್‌ ಕೊರೊನಾ ಬಳಿಕ ಈ ಚಿತ್ರದ ಚಿತ್ರೀಕರಣಕ್ಕೆ ಹೊರಟಿದ್ದಾರೆ.

ಲಾಕ್‌ಡೌನ್‌ ಬಳಿಕ ಪ್ರೇಮ್‌ ಅವರು ಊಟಿ ಸುತ್ತಮುತ್ತ ಸುಂದರ ತಾಣಗಳಲ್ಲಿ ಹಾಡೊಂದರ ಚಿತ್ರೀಕರಣ ನಡೆಸಿದ್ದರು. ಅಲ್ಲಿಂದ ಸ್ವಲ್ಪ ದಿನಗಳ ಕಾಲ ಬ್ರೇಕ್‌ ಕೊಟ್ಟಿದ್ದ ಪ್ರೇಮ್‌, ನಂತರದ ದಿನಗಳಲ್ಲಿ ಮತ್ತೊಂದು ಹಾಡಿಗೆ ಒಳ್ಳೆಯ ತಾಣಗಳನ್ನು ಗುರುತಿಸುವ ಸಲುವಾಗಿಯೇ ಅವರು, ಕಾಶ್ಮೀರ, ಲಡಾಕ್‌, ಗುಜರಾತ್‌, ರಾಜಸ್ಥಾನಕಕೆ ಹೋಗಿ ಬಂದಿದ್ದರು. ಅಂತಿಮವಾಗಿ ಅವರೀಗ ಕಾಶ್ಮೀರದಲ್ಲಿ ತಮ್ಮ ಚಿತ್ರದ ಹಾಡನ್ನು ಚಿತ್ರೀಕರಿಸುತ್ತಿದ್ದಾರೆ. ಈ ಕುರಿತು, ಸ್ವತಃ ಪ್ರೇಮ್‌ ಅವರೇ ತಮ್ಮ ಟ್ವಿಟ್ಟರ್‌ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.


” ನಾವು ಈ ಹಾಡನ್ನು ವಿದೇಶದಲ್ಲಿ ಶೂಟ್ ಮಾಡಲು ಪ್ಲಾನ್ ಮಾಡಿದ್ವಿ. ಆದರೆ, ನಮ್ಮ ಕಾಶ್ಮೀರದ ಮುಂದೆ ಬೇರೆ ಯಾವುದು ಇಲ್ಲ ಅನಿಸಿದೆ. ಇಲ್ಲಿನ ಜನರ ಸಹಾಯದಿಂದ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಿದ್ದೇವೆ” ಎಂದು ಬರೆದುಕೊಳ್ಳುವ ಮೂಲಕ ತಮ್ಮ ಖುಷಿ ಹೊರಹಾಕಿದ್ದಾರೆ. ಈ ವೇಳೆ ಜಮ್ಮು ಕಾಶ್ಮೀರದ ಪೊಲೀಸರಿಗೆ, ಸೈನಿಕರಿಗೆ ವಿಶೇಷವಾದ ಧನ್ಯವಾದ ತಿಳಿಸಿರುವ ಪ್ರೇಮ್‌, ಕಾಶ್ಮೀರದಿಂದ ಮುಂದಕ್ಕೆ ಲೆಹ್ ಲಡಾಕ್, ಗುಜರಾತ್ ಮತ್ತು ರಾಜಸ್ಥಾನಕ್ಕೆ ತೆರಳಿದ್ದಾಗಿಯೂ ವಿವರ ಹಂಚಿಕೊಂಡಿದ್ದಾರೆ ಪ್ರೇಮ್.‌ ಈ ವೇಳೆ ಹೀರೋ ರಾಣಾ, ನಾಯಕಿ ರೇಶ್ಮಾ ಜೊತೆಗೆ ಚಿತ್ರತಂಡ ಜೊತೆಗಿದೆ.


ಈ ಚಿತ್ರದಲ್ಲಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಕ್ಷಿತಾ ಪ್ರೇಮ್‌ ಅವರ ಸಹೋದರ ರಾಣಾ ಈ ಚಿತ್ರದ ಹೀರೋ. ಹಾಗಾಗಿ ಸ್ವತಃ ರಕ್ಷಿತಾ ಪ್ರೇಮ್‌ ಅವರೇ, ಸಾಕಷ್ಟು ಆಸಕ್ತಿ ವಹಿಸಿ, ಅದ್ಧೂರಿಯಾಗಿಯೇ ಈ ಚಿತ್ರ ಮೂಡಿಬರಲು ಕಾಳಜಿ ವಹಿಸಿದ್ದಾರೆ. ಮೆಹನ್ ಸಿಂಹ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ಅರ್ಜುನ್ ಜನ್ಯ ಅವರ ಸಂಗೀತವಿದೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ಮತ್ತೊಂದು ಓಟಿಟಿ – ಹೊಸ ವೇದಿಕೆಗೆ ಶಿವರಾಜಕುಮಾರ್‌ ಚಾಲನೆ

ಸಿನಿಮಾ ನೋಡಿ ಎಂಜಾಯ್‌ ಮಾಡಿ

ಈಗಂತೂ ಎಲ್ಲವೂ ಡಿಜಿಟಲ್‌ಮಯ. ಇದು ಚಿತ್ರರಂಗಕ್ಕೂ ಅನ್ವಯ. ಹಾಗಂತ, ಈ ಡಿಜಿಟಲ್‌ ಸ್ಪರ್ಶ ಕನ್ನಡ ಚಿತ್ರರಂಗಕ್ಕೆ ಹೊಸದಲ್ಲ. ಕಾಲ ಬದಲಾದಂತೆ ನೋಡುಗನ ನೋಟವೂ ಬದಲಾಗುತ್ತಾ ಹೋಗುತ್ತಿದೆ. ವಿಶೇಷವೆಂದರೆ, ಈಗಾಗಲೇ ಅಮೆಜಾನ್‌, ನೆಟ್‌ಫ್ಲಿಕ್ಸ್‌ ಸೇರಿದಂತೆ ಅನೇಕ ಓಟಿಟಿ ಫ್ಲಾಟ್‌ಫಾರಂ ಇದೆ. ಆ ಮೂಲಕ ಒಂದಷ್ಟು ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಈಗ ಕನ್ನಡದವರೇ ಅಂಥದ್ದೊಂದು ಹೊಸ ವೇದಿಕೆ ಕಲ್ಪಿಸುವ ಮೂಲಕ ಕನ್ನಡ ನಿರ್ಮಾಪಕರ ನೋವು ಆಲಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹೌದು, ಕೊರೊನಾ ಹಾವಳಿಯಿಂದ ಚಿತ್ರರಂಗವಂತೂ ಸಂಪೂರ್ಣ ಸೊರಗಿದ್ದು ಎಲ್ಲರಿಗೂ ಗೊತ್ತೇ ಇದೆ. ಚಿತ್ರರಂಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಚಿತ್ರಮಂದಿರಗಳು ಬಾಗಿಲು ತೆರೆದರೂ, ಜನರು ಮಾತ್ರ ಚಿತ್ರಮಂದಿರದತ್ತೆ ಮುಖ ಮಾಡೋಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ನಿರ್ಮಾಪಕರು ಒಂದಷ್ಟು ಗೊಂದಲದಲ್ಲಿರುವುದಂತೂ ನಿಜ. ಹಾಗಂತ, ಸಿನಿಮಾ ಮಾಡುವ ಉತ್ಸಾಹ ಕುಂದಿಲ್ಲ. ಜನರೂ ಕೂಡ ಹೊಸತನದ ಸಿನಿಮಾ ಬಂದರೆ, ಖಂಡಿತ ನೋಡುತ್ತಾರೆ ಎಂಬ ಭರವಸೆ ನಿರ್ಮಾಪಕರಿಗಿದೆ. ಅದು ಚಿತ್ರಮಂದಿರವೇ ಇರಲಿ, ಓಟಿಟಿ ಫ್ಲಾಟ್‌ಫಾರಂ ಇರಲಿ, ಅಲ್ಲಿ ಜನ ತಮ್ಮ ಇಷ್ಟದ ಸಿನಿಮಾವನ್ನು ಹುಡುಕಿ ನೋಡುತ್ತಾರೆ.

ಅದೇ ನಂಬಿಕೆಯಲ್ಲೇ ಈಗ ಕನ್ನಡಿಗರೇ ಸೇರಿಕೊಂಡು “ಸಿನಿಮಾ ನೋಡಿ ಡಾಟ್ ಇನ್” ಹೆಸರಿನೊಂದಿಗೆ ಒಂದೊಳ್ಳೆಯ ಉತ್ಸಾಹಿ ಯುವಕರ ತಂಡವನ್ನು ಕಟ್ಟಿಕೊಂಡಿದ್ದಾರೆ. ಈ ತಂಡದಲ್ಲಿ ಡೆವಲಪರ್ ಮತ್ತು ಸಿನಿಪ್ರಿಯರು ಸೇರಿಕೊಂಡಿರುವುದ ವಿಶೇಷ. ಅವರ ಈ “ಸಿನಿಮಾ ನೋಡಿ ಡಾಟ್‌ ಇನ್”‌ ಫ್ಲಾಟ್‌ ಫಾರಂ ಇತರೆ ಓಟಿಟಿ ಫ್ಲಾಟ್‌ಫಾರಂಗಿಂತಲೂ ಭಿನ್ನ ಎಂಬುದು ಅವರ ಹೇಳಿಕೆ.
ಅವರ ಈ ಹೊಸ ವೇದಿಕೆಯಲ್ಲಿ ಆಧುನಿಕ ತಾಂತ್ರಿಕತೆಯ ಸ್ಪರ್ಶವಿದೆ. ಇಲ್ಲಿ ವೀಕ್ಷಕರು ಚಂದಾದಾರರಾಗಬೇಕಿಲ್ಲ. ಜಾಹಿರಾತು ಕೂಡ ಮುಕ್ತವಾಗಿದೆ. ವೀಕ್ಷಕರು ಇಷ್ಟದ ಸಿನಿಮಾ ನೋಡುವ ವೇದಿಕೆ ಇದಾಗಿರಲಿದೆ. ಆಧುನಿಕ ತಂತ್ರಜ್ಞಾನದ ಸವಲತ್ತುಗಳೊಂದಿಗೆ ವೇದಿಕೆ ರೂಪುಗೊಂಡಿದೆ. ವೆಬ್, ಪ್ಲೇ ಸ್ಟೋರ್, ಆಪ್‌ಸ್ಟೋರ್, ಫೈರ್‌ಟಿವಿ ಮತ್ತು ರೋಕು ಈ ಐದು ವೇದಿಕೆಗಳಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಸದ್ಯಕ್ಕೆ “cinemanod.in” ಲಭ್ಯವಿದ್ದು ಮುಂದಿನ ಒಂದು ವಾರದಲ್ಲಿ ಆಪ್ ಪ್ಲೇಸ್ಟೋರ್ ಆಪ್ ಸ್ಟೋರ್ ಫೈರ್ ಟಿವಿ ಮತ್ತು ರೋಕುನಲ್ಲೂ ಲಭ್ಯವಾಗಲಿದೆ.


ಕೇಂದ್ರ ಸೆನ್ಸಾರ್ ಬೋರ್ಡ್‌ನ ನಿವೃತ್ತ ಅಧಿಕಾರಿ ನಾಗೇಂದ್ರ ಸ್ವಾಮಿ, ಶಾಂತಾಕುಮಾರಿ ಹಾಗೂ ಇತರರ ಸಾರಥ್ಯದಲ್ಲಿ ಈ ಫ್ಲಾಟ್‌ ಫಾರಂ ಸಿದ್ಧಗೊಂಡಿದೆ. ಈಗಾಗಲೇ ಹಳೆಯ ಮತ್ತು ಹೊಸ ನೂರು ಚಿತ್ರಗಳು, ೨೦೦ ಹಾಡುಗಳು ಸ್ಟೋರ್ ವೇದಿಕೆಯಲ್ಲಿದೆ. ನಿರ್ಮಾಪಕರು ಹಾಗೂ ಕಂಟೆಂಟ್ ಮಾಲೀಕರು ತಮ್ಮ ಚಿತ್ರಗಳ ಕುರಿತಂತೆ ಸಂಪರ್ಕಿಸಿದಲ್ಲಿ, ಅವರಿಗೆ ಆರ್ಥಿಕವಾಗಿ ನೆರವಾಗುವುದರ ಜೊತೆಗೆ ವೀಕ್ಷಕರಿಗೆ ಹೊರೆಯಾಗದ ದರದಲ್ಲಿ ಸಿನಿಮಾ ನೋಡುವ ಅವಕಾಶ ಕಲ್ಪಿಸುವ ಭರವಸೆಯನ್ನು ತಂಡ ನೀಡುತ್ತಿದೆ. ದರವು ಕನಿಷ್ಟ ರೂ.30 ರಿಂದ 100ರವರೆಗೆ ಇರಲಿದೆ.
ಅಂದಹಾಗೆ, ಈ ಹೊಸ ಡಿಜಿಟಲ್‌ ಫ್ಲಾಟ್‌ಫಾರಂಗೆ ನಟ ಶಿವರಾಜ್‌ಕುಮಾರ್ ಚಾಲನೆ ನೀಡಿದ್ದಾರೆ. ಕಲರ್‌ ನಲ್ಲಿ ಮೂಡಿ ಬಂದಿರುವ “ಕಸ್ತೂರಿ ನಿವಾಸ” ಚಿತ್ರವನ್ನು ಬಿಡುಗಡೆ ಮಾಡುವುದರ ಮೂಲಕ ಹೊಸ ವೇದಿಕೆಗೆ ಚಾಲನೆ ನೀಡಿದ್ದಾರೆ. “ಕನ್ನಡದವರೇ ಸೇರಿಕೊಂಡು ಮಾಡಿರುವ ಈ ಡಿಜಿಟಲ್‌ ಹೊಸ ಪ್ಲಾಟ್‌ಫಾರ್ಮ್, ಇತರೆ ವೇದಿಕೆಗಳಿಗಿಂತಲೂ ಭಿನ್ನ ಎನಿಸಿದೆ ಎಂಬುದು ಗೊತ್ತಾಗಿದೆ. ಈ ಮೂಲಕವಾದರೂ ಕನ್ನಡ ಚಿತ್ರರಂಗ ಇನ್ನಷ್ಟು ಬೆಳೆಯಲಿ. ನಮ್ಮ ಕನ್ನಡ ನಿರ್ಮಾಪಕರುಗಳಿಗೆ ಹೆಚ್ಚು ಅನುಕೂಲವಾಗಲಿ ಎಂದು ಶುಭ ಹಾರೈಸಿದ್ದಾರೆ.

Categories
ಸಿನಿ ಸುದ್ದಿ

ಶಂಭೋ ಶಿವ ಶಂಕರ ಜೊತೆ ಶಶಿಕುಮಾರ್‌ – ಖಡಕ್‌ ಪೊಲೀಸ್‌ ಲುಕ್‌ನಲ್ಲಿ ಸುಪ್ರೀಂ ಹೀರೋ

ಹೊಸಬರ ಜೊತೆ ಎವರ್‌ಗ್ರೀನ್‌ ಸ್ಟಾರ್‌

ಸುಪ್ರೀಂ ಹೀರೋ ಶಶಿಕುಮಾರ್‌, ಕನ್ನಡ ಚಿತ್ರರಂಗ ಕಂಡ ಸ್ಪುರದ್ರೂಪಿ ನಟ. ತೊಂಬತ್ತರ ದಶಕದಲ್ಲಿ ಶಶಿಕುಮಾರ್‌ ಅವರ ಡೇಟ್‌ ಸುಲಭವಾಗಿ ಸಿಗುತ್ತಿರಲಿಲ್ಲ. ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನ ಗೆದ್ದಿರುವ ಶಶಿಕುಮಾರ್‌, ಹಲವು ಹೊಸಬರ ಚಿತ್ರಗಳಲ್ಲಿ ಅತಿಥಿ ನಟರಾಗಿ ಕಾಣಿಸಿಕೊಂಡಿರುವುದುಂಟು. ಕೆಲವೊಮ್ಮೆ ಕಥೆ, ಪಾತ್ರ ಕೇಳಿ ಪ್ರೀತಿಯಿಂದಲೇ ನಟಿಸುವ ಉತ್ಸಾಹ ತೋರಿಸುವ ಅಪರೂಪದ ನಟ ಶಶಿಕುಮಾರ್.‌ ಅಷ್ಟೇ ಅಲ್ಲ, ಗೆಳೆತನಕ್ಕಾಗಿಯೂ ಅವರು ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವುದುಂಟು. ಚಿತ್ರದಲ್ಲಿ ಒಂದೊಳ್ಳೆಯ ವಿಶೇಷ ಪಾತ್ರವಿದೆ ಅಂದಾಕ್ಷಣ, ಬಹುತೇಕ ನಿರ್ದೇಶಕರಿಗೆ ಈ ಶಶಿಕುಮಾರ್‌ ಅವರು ನೆನಪಾಗುತ್ತಾರೆ. ಈಗ ಶಶಿಕುಮಾರ್‌, “ಶಂಭೋ ಶಿವ ಶಂಕರ” ಎಂಬ ಹೊಸಬರ ಚಿತ್ರದಲ್ಲಿ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.


ಹೌದು, ತುಂಬಾ ದಿನಗಳ ಬಳಿಕ ಶಶಿಕುಮಾರ್‌ ಅವರು “ಶಂಭೋ ಶಿವ ಶಂಕರ” ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಅಂದಹಾಗೆ, ಶಶಿಕುಮಾರ್‌ ಅವರ ಪಾಲಿಗೆ ಈ ಬಾರಿ ಒಲಿದು ಬಂದಿರುವ ಪಾತ್ರ, ಖಡಕ್‌ ಪೊಲೀಸ್‌ ಅಧಿಕಾರಿ. ಈಗಾಗಲೇ ಹಲವು ಚಿತ್ರಗಳಲ್ಲಿ ಶಶಿಕುಮಾರ್‌, ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವುದುಂಟು. ಈಗ ಮತ್ತೊಮ್ಮೆ ಪೊಲೀಸ್‌ ಅಧಿಕಾರಿಯಾಗಿ ರಾರಾಜಿಸಲಿದ್ದಾರೆ. ಅಂದಹಾಗೆ, ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಡಿಸೆಂಬರ್ 9 ರಿಂದ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಂತದ ಚಿತ್ರೀಕರಣದಲ್ಲಿ ಶಶಿಕುಮಾರ್ ಸೇರಿದಂತೆ ಇತರೆ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ, ಅಘನ್ಯ ಪಿಕ್ಚರ್ಸ್ ಬ್ಯಾನರ್ ಮೂಲಕ ವರ್ತೂರ್ ಮಂಜು ಅವರು ಚಿತ್ರವನ್ನು ನಿರ್ಮಿಸುತ್ತಿದ್ದು, ಶಂಕರ್ ಕೋನಮಾನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್ ಕೋನಮಾನಹಳ್ಳಿ ಅವರಿಗೆ ಇದು ಮೊದಲ ಚಿತ್ರ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ಒಪ್ಪಿಕೊಂಡಿದ್ದಾರೆ. ಇನ್ನು, ಗೌಸ್ ಪೀರ್‌, ಹಿತನ್ ಹಾಸನ್ ಹಾಡುಗಳನ್ನು ಬರೆದಿದ್ದು, ಹಿತನ್ ಹಾಸನ್ ಸಂಗೀತವಿದೆ. ನಟರಾಜ್ ಮುದ್ದಾಲ ಛಾಯಾಗ್ರಹಣ ಮಾಡಿದರೆ, ಕಲೈ ನೃತ್ಯ ನಿರ್ದೇಶನವಿದೆ. ವೆಂಕಟೇಶ್ ಯುಡಿವಿ ಸಂಕಲನವಿದೆ. ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಮಾಡಿದ್ದಾರೆ.
ಇನ್ನು, “ಶಂಭೋ ಶಿವ ಶಂಕರ” ಅನ್ನೋದು ಮೂವರು ಹೀರೋಗಳ ಹೆಸರು. ಆ ಒಂದೊಂದು ಹೆಸರಲ್ಲಿ ಅಭಯ್ ಪುನೀತ್, ರೋಹಿತ್ ಮತ್ತು ರಕ್ಷಕ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸೋನಾಲ್ ಮಾಂತೆರೊ ಈ ಚಿತ್ರದ ನಾಯಕಿ.

Categories
ಸಿನಿ ಸುದ್ದಿ

ರವಿಶಂಕರ್ ಈಗ ಡುಬಾಕ್ ಸೈಂಟಿಸ್ಟ್! ಮತ್ತೆ ಕಿರುತೆರೆಗೆ ರಂಜಿಸಲು ಬಂದ ಡಾ. ವಿಠಲ್ ರಾವ್

ಮಜಾ ಟಾಕೀಸ್ ನಲ್ಲಿ ಸೃಜನ್ ಜೊತೆ ಮಸ್ತ್ ಮಜ…

ಕನ್ನಡ ಕಿರುತೆರೆಯಲ್ಲಿ ‘ಸಿಲ್ಲಿ ಲಲ್ಲಿ’ ಧಾರಾವಾಹಿ ಅತ್ಯಂತ ‌ಜನಪ್ರಿಯ. ಇದು ಬಹುತೇಕ ಎಲ್ಲಾ ಕನ್ನಡಿಗರಿಗೂ ಗೊತ್ತು. ಈ ಧಾರಾವಾಹಿ ಮೂಲಕ ರವಿಶಂಕರ್ ಗೌಡ ಪರಿಚಯವಾಗಿದ್ದು ಇತಿಹಾಸ. ಹೌದು, ಡಾ.ವಿಠಲ್ ರಾವ್ ಪಾತ್ರದ ಮೂಲಕ ಕನ್ನಡಿಗರ ಪ್ರೀತಿ ಪಾತ್ರರಾದ ರವಿಶಂಕರ್ ಹದಿಮೂರು ವರ್ಷಗಳ ನಂತರ ಪುನಃ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಇಷ್ಟು ವರ್ಷಗಳ ಕಾಲ ಸಿನಿಮಾಗಳಲ್ಲಿ ಬಿಝಿಯಾಗಿದ್ದ ರವಿಶಂಕರ್ ಗೌಡ, ತಮ್ಮ ಸಿನಿಮಾಗಳ ಜೊತೆ ಜೊತೆಯಲ್ಲೇ ಅವರು, ಮತ್ತೆ ಕಿರುತೆರೆಗೆ ಕಾಲಿಡುತ್ತಿರುವುದು ಕಿರುತೆರೆ ಪ್ರೇಕ್ಷಕರಿಗೆ ಸಖತ್ ‘ಮಜ’ ಅನ್ನೋದು ಗ್ಯಾರಂಟಿ.

ಹಾಗಂತ ಅವರು ಹೊಸ ಧಾರಾವಾಹಿ ಒಪ್ಪಿಕೊಂಡರಾ ಎಂಬ ಪ್ರಶ್ನೆ ಸಹಜ. ಆದರೆ, ರವಿಶಂಕರ್ ಗೌಡ ಕಾಣಿಸಿಕೊಳ್ಳುತ್ತಿರೋದು, ಜನಪ್ರಿಯ ಶೋ ‘ಮಜಾ ಟಾಕೀಸ್’ ನಲ್ಲಿ. ನಟಿಸುತ್ತಿದ್ದಾರೆ.


ಡಾ.ವಿಠಲ್ ರಾವ್ ಪಾತ್ರದ ಮೂಲಕ ಗಮನ ಸೆಳೆದಿದ್ದ ರವಿಶಂಕರ್ ಗೌಡ, ಸಿಕ್ಕಾಪಟ್ಟೆ ಬಿಝಿ ಆಗಿದ್ದರು. 1020 ಎಪಿಸೋಡ್ ಪ್ರಸಾರಗೊಂಡ ‘ಸಿಲ್ಲಿ ಲಲ್ಲಿ’, ಯಶಸ್ವಿಯಾಗಿದ್ದೇ ತಡ, ರವಿಶಂಕರ್ ಅವರ ಬೇಡಿಕೆ ಹೆಚ್ಚಾಯ್ತು. ಸತತ ನಾಲ್ಕು ವರ್ಷಗಳ ಕಾಲ ಪ್ರಸಾರವಾದ ಬಳಿಕ ರವಿಶಂಕರ್ ಸಿನಿಮಾ ಕಡೆ ಮುಖ ಮಾಡಿದರು.

ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ರವಿಶಂಕರ್ ಅಲ್ಲೂ ಒಂದಷ್ಟು ಅಭಿಮಾನಿ ವರ್ಗವನ್ನು ಕಟ್ಟಿಕೊಂಡರು.‌ ಸಿನಿಮಾ ರಂಗದಲ್ಲಿ ದೊಡ್ಡ ಗೆಳೆಯರ ಬಳಗವನ್ನೇ ಸಂಪಾದಿಸಿದ ರವಿಶಂಕರ್ ಅವರನ್ನು ಸೃಜನ್ ಲೋಕೇಶ್ ಅವರು ತಮ್ಮ ‘ ಮಜಾ‌ ಟಾಕೀಸ್’ ನಲ್ಲಿ ಪಾಲ್ಗೊಳ್ಳುವಂತೆ ಹೇಳುತ್ತಿದ್ದರಾದರೂ, ರವಿಶಂಕರ್ ಬಿಡುವಿಲ್ಲದಂತೆ ಸಿನಿಮಾಗಳಲ್ಲಿ ನಟಿಸುವ‌ ಮೂಲಕ ಬಿಝಿಯಾಗಿದ್ದರು.

ಆದರೆ, ಈಗ ಸೃಜನ್ ಲೋಕೇಶ್, ಈ ಬಾರಿಯ ‘ ಮಜಾ ಟಾಕೀಸ್’ನಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದಹಾಗೆ, ರವಿಶಂಕರ್ ಮಜಾ ಟಾಕೀಸ್ ನಲ್ಲಿ ಡುಬಾಕ್ ಸೈಂಟಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಪಾತ್ರ ಕೆಲಸಕ್ಕೆ ಬಾರದ್ದನ್ನು ಕಂಡು ಹಿಡಿದು, ಅಲ್ಲಿ ಬರುವ ಅತಿಥಿಗಳನ್ನು ರಂಜಿಸುವ ಕೆಲಸಕ್ಕಿಳಿಯಲ್ಲಿದ್ದಾರೆ.

ಸದಾ ಮರೆಯುವ ಪಾತ್ರ ಅದಾಗಿರುವುದರಿಂದ ಪ್ರತಿ ವಾರ ಪ್ರೇಕ್ಷಕರಿಗೂ ಅದೊಂದು ನಗೆಯ ಹೂರಣ ಎಂಬುದು ರವಿಶಂಕರ್ ಮಾತು.
ಸದ್ಯ ಸಿನಿಮಾಗಳಲ್ಲೂ ಬಿಝಿ ಇರುವ ರವಿಶಂಕರ್ ಗೌಡ ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’ ಸಿನಿಮಾ ಸೇರಿದಂತೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಲಾಕ್ ಡೌನ್ ವೇಳೆ ತಮ್ಮ ಫೇಸ್ ಬುಕ್ ಮೂಲಕ ಸಾಕಷ್ಟು ಕನ್ನಡ ಗೀತೆಗಳನ್ನು ಹಾಡುವ ಮೂಲಕ ರಂಜನೆ ಕೊಟ್ಟು ಕನ್ನಡಿಗರ ಮನ ಗೆದ್ದೆದ್ದ ರವಿಶಂಕರ್ ಈಗ ಮತ್ತೆ ಕನ್ನಡಿಗರನ್ನು ನಗಿಸಲು ಬಂದಿದ್ದಾರೆ. ಇವರ ಎಂಟ್ರಿಯಿಂದ ಮಜಾ ಟಾಕೀಸ್ ಮತ್ತಷ್ಟು ರಂಗೇರಲಿದೆ ಎಂಬುದಂತೂ ದಿಟ.

Categories
ಸಿನಿ ಸುದ್ದಿ

ಪಲ್ಲಕ್ಕಿಯ ಮದಕರಿಪುರ ರೆಡಿ – ಡಿಸೆಂಬರ್‌ಗೆ ಕಿಚ್ಚ ಮಾತಾಡುವ ಸಿನಿಮಾ

ಕಾದಂಬರಿ ನಾಟಕ ಆಧಾರಿತ ಚಿತ್ರ

 

ಪಲ್ಲಕ್ಕಿ ರಾಧಾಕೃಷ್ಣ ನಿರ್ದೇಶಿಸಿ, ನಿರ್ಮಿಸಿರುವ “ಮದಕರಿಪುರ” ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗ ಈ ಸಿನಿಮಾಗೆ ಸೆನ್ಸಾರ್‌ ಮಂಡಳಿ ವೀಕ್ಷಿಸಿ, “ಯು/ಎ” ಪ್ರಮಾಣ ಪತ್ರ ನೀಡಿದೆ. ತಾತಾ ಪ್ರೊಡಕ್ಷನ್ಸ್‌ನಲ್ಲಿ ಪಲ್ಲಕ್ಕಿ ನಿರ್ಮಿಸಿರುವ ನಾಲ್ಕನೇ ಸಿನಿಮಾ ಇದು. ಅಂದಹಾಗೆ, ಈ ಸಿನಿಮಾದ ಶೀರ್ಷಿಕೆಗೆ “ಕಿಚ್ಚ ಮಾತಾಡ್ತಾನೆ” ಎಂಬ ಅಡಿಬರಹವಿದೆ.

ಸದ್ಯ ಚಿತ್ರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ನಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಹಾಡುಗಳನ್ನೂ ಬರೆದು ನಿರ್ದೇಶಿಸಿರುವ ಪಲ್ಲಕ್ಕಿ, “ಗಿಡ್ಡೋಬಾ ಮಾತಾಡ್ತಾನೆ” ಕಾದಂಬರಿ ನಾಟಕ ಆಧರಿಸಿ ಚಿತ್ರ ಮಾಡಿದ್ದಾರೆ. ಇದು ವಾಲ್ಮೀಕಿ ರಾಮಾಯಣದ ಎಳೆಯೊಂದನ್ನು ಆಧರಿಸಿ, ಕಾಮಿಡಿ, ಮರ್ಡರ್‌ ಮಿಸ್ಟ್ರಿ ಜೊತೆ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿದ ʼಗಿಡ್ಡೋಬಾ ಮಾತಾಡ್ತಾನೆ” ಕಾದಂಬರಿ ನಾಟಕ ಚಿತ್ರಕ್ಕೆ ರಾಜಾಶಿವಶಂಕರ್‌ ಅವರು ಛಾಯಾಗ್ರಹಣ ಮಾಡಿದರೆ, ಸ್ಯಾಮ್‌ ಸಂಗೀತವಿದೆ. ಗೌತಮ್‌ ಪಲ್ಲಕ್ಕಿ ಸಂಕಲನ ಮಾಡಿದ್ದಾರೆ.

ಡಿಫರೆಂಟ್‌ ಡ್ಯಾನಿ ಸಾಹಸವಿದೆ. ತ್ರಿಭುವನ್‌ ಅವರ ನೃತ್ಯ ನಿರ್ದೇಶನವಿದೆ. ಬಹುತೇಕ ಬೆಂಗಳೂರು, ಹಿರಿಯೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ನಂದಿಗ್ರಾಮ, ಕೈವಾರ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಡಾ.ರಾಧಾಕೃಷ್ಣ ಪಲ್ಲಕ್ಕಿ, ಪ್ರಕಾಶ್‌ ಅರಸ್‌, ಎಂ.ಕೆ.ಮಠ, ಶ್ರೀನಿವಾಸ ಗುರೂಜಿ, ನೈರುತ್ಯ, ಸೀನೂ ಮಾರ್ಕಾಳಿ, ವಿನಯ್‌ ಬಲರಾಮ್‌, ಅರ್ಗವಿ ರಾಯ್‌, ರೆಡ್ಡಿ ಹಿರಿಯೂರ್‌, ಸವಿತಾ ಚಿನ್ಮಯಿ, ವೆಂಕಟಾಚಲ ಸೇರಿದಂತೆ ಪಲ್ಲಕ್ಕಿ ಫಿಲಂ ಇನ್ಸ್‌ಟಿಟ್ಯೂಟ್‌ ವಿದ್ಯಾರ್ಥಿಗಳು ನಟಿಸಿದ್ದಾರೆ.

 

Categories
ಸಿನಿ ಸುದ್ದಿ

ಮತ್ತೊಂದು ಮೂಕಿ ಚಿತ್ರ ಪುಷ್ಕಕ್‌ ತೆರೆಗೆ ಬರಲು ಸಜ್ಜು

ಡಿಸೆಂಬರ್‌ 4 ರಂದು ಓಟಿಟಿಯಲ್ಲಿ ಬಿಡುಗಡೆ

ಹಲವು ದಶಕಗಳ ಹಿಂದೆ “ಪುಷ್ಪಕ ವಿಮಾನ” ಎಂಬ ಮೂಕಿ ಚಿತ್ರ ಬಂದಿದ್ದು ಬಹುತೇಕರಿಗೆ ಗೊತ್ತೇ ಇದೆ. ಆ ನಂತರವೂ ಕನ್ನಡದಲ್ಲಿ ಮೂಕಿ ಚಿತ್ರಗಳು ಬಂದಿವೆ. ಈಗ ಆ ಸಾಲಿಗೆ “ಪುಷ್ಪಕ್”‌ ಎಂಬ ಮತ್ತೊಂದು ಮೂಕಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, “ಪುಷ್ಪಕ್” ಸಿನಿಮಾವನ್ನು ಓಂ ಪ್ರಕಾಶ್‌ ನಾಯಕ್‌ ನಿರ್ದೇಶಿಸಿದ್ದಾರೆ. ಇಲ್ಲಿ ಬರೀ ಹಾವ-ಭಾವಗಳಲ್ಲೇ ಅರ್ಥವಾಗುವಂತಹ ದೃಶ್ಯಗಳನ್ನ ಸೆರೆಹಿಡಿದಿದ್ದಾರೆ ನಿರ್ದೇಶಕರು. ಕಥೆಯ ಬಗ್ಗೆ ಹೇಳುವುದಾದರೆ, ಚಿತ್ರದ ಹೀರೋ ಒಬ್ಬ ಫೋಟೋಗ್ರಾಫರ್, ಬೇರೆ ಊರಿನಿಂದ ಬಂದ ಒಬ್ಬ ಶ್ರೀಮಂತ ಯುವತಿಯನ್ನು ನೋಡಿದ ಮರುಕ್ಷಣ ತನ್ನ ಮನದಲ್ಲೇ ಪ್ರೀತಿಸಲು ತೊಡಗುತ್ತಾನೆ. ಆದರೆ ತನ್ನ ಪ್ರೀತಿಯನ್ನು ಅವಳಿಗೆ ಹೇಳಿಕೊಳ್ಳಲು ಹಿಂಜರಿದು, ತನಗೆ ಚಹಾ ಕೊಡಲು ಬರುವ ಹೋಟೆಲ್ ಹುಡುಗನ ಕೈಲಿ ಲವ್‍ಲೆಟರ್ ಬರೆದು ಕೊಟ್ಟು ಕಳುಹಿಸುತ್ತಾನೆ. ಹೋಟೆಲ್ ಹುಡುಗ ಅವರ ಪ್ರೀತಿಗೆ ರಾಯಭಾರಿಯಾಗುತ್ತಾನೆ. ಹಾಗೆಯೇ ಅವನೂ ಸಹ ನಾಯಕಿಯನ್ನು ಪ್ರೀತಿಸಲು ಮುಂದಾಗುತ್ತಾನೆ. ನಂತರ ದಿನಗಳಲ್ಲಿ ದಾರಿಗೆ ನಾಯಕ ಅಡ್ಡಿಯಾದಂತೆ ಭಾವಿಸಿ ನಾಯಕನನ್ನೇ ಕೊಲ್ಲಲು ಆತ ಸಂಚು ಹೂಡುತ್ತಾನೆ. ಮುಂದೇನಾಗುತ್ತೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು ಚಿತ್ರತಂಡದ ಹೇಳಿಕೆ.


ಇನ್ನು, ಈ ಚಿತ್ರ ಮಹದೇಶ್ವರ ಎಂಟರ್‌ಪ್ರೈಸಸ್‌ ಬ್ಯಾನರಡಿಯಲ್ಲಿ ನಿರ್ಮಾಣವಾಗಿದೆ. ಓಂಪ್ರಕಾಶ್‌ನಾಯಕ್ ಕಥೆ, ಚಿತ್ರಕಥೆ‌ ಬರೆದು, ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ನಾಯಕನಾಗಿಯೂ ನಟಿಸಿದ್ದಾರೆ. ವಿಶ್ವನಾಥ್ ಅವರ ಛಾಯಾಗ್ರಹಣವಿದೆ. ಶಂಕರ್ ಹಾಗೂ ರಾವಣ ಅವರ ಸಹ ನಿರ್ದೇಶನವಿದೆ. ಕುಮಾರ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಕೃತಿಕಾ, ಚಂದ್ರು, ಅವಿನಾಶ್ ಭಾರಧ್ವಜ್‌, ನಾಗೇಂದ್ರರಾವ್ ಆರ್.ಎಂ, ಸವಿತಾ ಇತರರು ನಟಿಸಿದ್ದಾರೆ. ಡಿಸೆಂಬರ್‌ 4 ರಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

error: Content is protected !!