ಟ್ವೀಟ್ ಮಾಡಿ ಖುಷಿ ಹಂಚಿಕೊಂಡ ನಿರ್ದೇಶಕ
“ಜೋಗಿ” ಖ್ಯಾತಿಯ ನಿರ್ದೇಶಕ ಪ್ರೇಮ್ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಸಿನಿಮಾ ಅನೌನ್ಸ್ ಮಾಡುವುದರಿಂದ ಹಿಡಿದು, ಅವರು ತಮ್ಮ ಚಿತ್ರಕ್ಕೆ ಇಡುವ ಹೆಸರು, ಹೊರ ಬಿಡುವ ಪೋಸ್ಟರ್, ಟೀಸರ್, ಟ್ರೇಲರ್ ಹೀಗೆ ಆಯಾ ಸಿನಿಮಾ ಮೂಲಕ ಸುದ್ದಿಯಾಗುತ್ತಾರೆ ಮತ್ತು ಆ ಚಿತ್ರವನ್ನೂ ಸದಾ ಸುದ್ದಿಯಲ್ಲಿಡುತ್ತಾರೆ. ಎಲ್ಲರಿಗೂ ಗೊತ್ತಿರುವಂತೆ ಪ್ರೇಮ್ ಇದೀಗ “ಏಕ್ ಲವ್ ಯಾ” ಸಿನಿಮಾ ಜಪ ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರೇಮ್ ಕೊರೊನಾ ಬಳಿಕ ಈ ಚಿತ್ರದ ಚಿತ್ರೀಕರಣಕ್ಕೆ ಹೊರಟಿದ್ದಾರೆ.
ಲಾಕ್‌ಡೌನ್ ಬಳಿಕ ಪ್ರೇಮ್ ಅವರು ಊಟಿ ಸುತ್ತಮುತ್ತ ಸುಂದರ ತಾಣಗಳಲ್ಲಿ ಹಾಡೊಂದರ ಚಿತ್ರೀಕರಣ ನಡೆಸಿದ್ದರು. ಅಲ್ಲಿಂದ ಸ್ವಲ್ಪ ದಿನಗಳ ಕಾಲ ಬ್ರೇಕ್ ಕೊಟ್ಟಿದ್ದ ಪ್ರೇಮ್, ನಂತರದ ದಿನಗಳಲ್ಲಿ ಮತ್ತೊಂದು ಹಾಡಿಗೆ ಒಳ್ಳೆಯ ತಾಣಗಳನ್ನು ಗುರುತಿಸುವ ಸಲುವಾಗಿಯೇ ಅವರು, ಕಾಶ್ಮೀರ, ಲಡಾಕ್, ಗುಜರಾತ್, ರಾಜಸ್ಥಾನಕಕೆ ಹೋಗಿ ಬಂದಿದ್ದರು. ಅಂತಿಮವಾಗಿ ಅವರೀಗ ಕಾಶ್ಮೀರದಲ್ಲಿ ತಮ್ಮ ಚಿತ್ರದ ಹಾಡನ್ನು ಚಿತ್ರೀಕರಿಸುತ್ತಿದ್ದಾರೆ. ಈ ಕುರಿತು, ಸ್ವತಃ ಪ್ರೇಮ್ ಅವರೇ ತಮ್ಮ ಟ್ವಿಟ್ಟರ್‌ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
” ನಾವು ಈ ಹಾಡನ್ನು ವಿದೇಶದಲ್ಲಿ ಶೂಟ್ ಮಾಡಲು ಪ್ಲಾನ್ ಮಾಡಿದ್ವಿ. ಆದರೆ, ನಮ್ಮ ಕಾಶ್ಮೀರದ ಮುಂದೆ ಬೇರೆ ಯಾವುದು ಇಲ್ಲ ಅನಿಸಿದೆ. ಇಲ್ಲಿನ ಜನರ ಸಹಾಯದಿಂದ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಿದ್ದೇವೆ” ಎಂದು ಬರೆದುಕೊಳ್ಳುವ ಮೂಲಕ ತಮ್ಮ ಖುಷಿ ಹೊರಹಾಕಿದ್ದಾರೆ. ಈ ವೇಳೆ ಜಮ್ಮು ಕಾಶ್ಮೀರದ ಪೊಲೀಸರಿಗೆ, ಸೈನಿಕರಿಗೆ ವಿಶೇಷವಾದ ಧನ್ಯವಾದ ತಿಳಿಸಿರುವ ಪ್ರೇಮ್, ಕಾಶ್ಮೀರದಿಂದ ಮುಂದಕ್ಕೆ ಲೆಹ್ ಲಡಾಕ್, ಗುಜರಾತ್ ಮತ್ತು ರಾಜಸ್ಥಾನಕ್ಕೆ ತೆರಳಿದ್ದಾಗಿಯೂ ವಿವರ ಹಂಚಿಕೊಂಡಿದ್ದಾರೆ ಪ್ರೇಮ್. ಈ ವೇಳೆ ಹೀರೋ ರಾಣಾ, ನಾಯಕಿ ರೇಶ್ಮಾ ಜೊತೆಗೆ ಚಿತ್ರತಂಡ ಜೊತೆಗಿದೆ.
ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಈ ಚಿತ್ರದ ಹೀರೋ. ಹಾಗಾಗಿ ಸ್ವತಃ ರಕ್ಷಿತಾ ಪ್ರೇಮ್ ಅವರೇ, ಸಾಕಷ್ಟು ಆಸಕ್ತಿ ವಹಿಸಿ, ಅದ್ಧೂರಿಯಾಗಿಯೇ ಈ ಚಿತ್ರ ಮೂಡಿಬರಲು ಕಾಳಜಿ ವಹಿಸಿದ್ದಾರೆ. ಮೆಹನ್ ಸಿಂಹ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ಅರ್ಜುನ್ ಜನ್ಯ ಅವರ ಸಂಗೀತವಿದೆ.