ರವಿಶಂಕರ್ ಈಗ ಡುಬಾಕ್ ಸೈಂಟಿಸ್ಟ್! ಮತ್ತೆ ಕಿರುತೆರೆಗೆ ರಂಜಿಸಲು ಬಂದ ಡಾ. ವಿಠಲ್ ರಾವ್

ಮಜಾ ಟಾಕೀಸ್ ನಲ್ಲಿ ಸೃಜನ್ ಜೊತೆ ಮಸ್ತ್ ಮಜ…

ಕನ್ನಡ ಕಿರುತೆರೆಯಲ್ಲಿ ‘ಸಿಲ್ಲಿ ಲಲ್ಲಿ’ ಧಾರಾವಾಹಿ ಅತ್ಯಂತ ‌ಜನಪ್ರಿಯ. ಇದು ಬಹುತೇಕ ಎಲ್ಲಾ ಕನ್ನಡಿಗರಿಗೂ ಗೊತ್ತು. ಈ ಧಾರಾವಾಹಿ ಮೂಲಕ ರವಿಶಂಕರ್ ಗೌಡ ಪರಿಚಯವಾಗಿದ್ದು ಇತಿಹಾಸ. ಹೌದು, ಡಾ.ವಿಠಲ್ ರಾವ್ ಪಾತ್ರದ ಮೂಲಕ ಕನ್ನಡಿಗರ ಪ್ರೀತಿ ಪಾತ್ರರಾದ ರವಿಶಂಕರ್ ಹದಿಮೂರು ವರ್ಷಗಳ ನಂತರ ಪುನಃ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಇಷ್ಟು ವರ್ಷಗಳ ಕಾಲ ಸಿನಿಮಾಗಳಲ್ಲಿ ಬಿಝಿಯಾಗಿದ್ದ ರವಿಶಂಕರ್ ಗೌಡ, ತಮ್ಮ ಸಿನಿಮಾಗಳ ಜೊತೆ ಜೊತೆಯಲ್ಲೇ ಅವರು, ಮತ್ತೆ ಕಿರುತೆರೆಗೆ ಕಾಲಿಡುತ್ತಿರುವುದು ಕಿರುತೆರೆ ಪ್ರೇಕ್ಷಕರಿಗೆ ಸಖತ್ ‘ಮಜ’ ಅನ್ನೋದು ಗ್ಯಾರಂಟಿ.

ಹಾಗಂತ ಅವರು ಹೊಸ ಧಾರಾವಾಹಿ ಒಪ್ಪಿಕೊಂಡರಾ ಎಂಬ ಪ್ರಶ್ನೆ ಸಹಜ. ಆದರೆ, ರವಿಶಂಕರ್ ಗೌಡ ಕಾಣಿಸಿಕೊಳ್ಳುತ್ತಿರೋದು, ಜನಪ್ರಿಯ ಶೋ ‘ಮಜಾ ಟಾಕೀಸ್’ ನಲ್ಲಿ. ನಟಿಸುತ್ತಿದ್ದಾರೆ.


ಡಾ.ವಿಠಲ್ ರಾವ್ ಪಾತ್ರದ ಮೂಲಕ ಗಮನ ಸೆಳೆದಿದ್ದ ರವಿಶಂಕರ್ ಗೌಡ, ಸಿಕ್ಕಾಪಟ್ಟೆ ಬಿಝಿ ಆಗಿದ್ದರು. 1020 ಎಪಿಸೋಡ್ ಪ್ರಸಾರಗೊಂಡ ‘ಸಿಲ್ಲಿ ಲಲ್ಲಿ’, ಯಶಸ್ವಿಯಾಗಿದ್ದೇ ತಡ, ರವಿಶಂಕರ್ ಅವರ ಬೇಡಿಕೆ ಹೆಚ್ಚಾಯ್ತು. ಸತತ ನಾಲ್ಕು ವರ್ಷಗಳ ಕಾಲ ಪ್ರಸಾರವಾದ ಬಳಿಕ ರವಿಶಂಕರ್ ಸಿನಿಮಾ ಕಡೆ ಮುಖ ಮಾಡಿದರು.

ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ರವಿಶಂಕರ್ ಅಲ್ಲೂ ಒಂದಷ್ಟು ಅಭಿಮಾನಿ ವರ್ಗವನ್ನು ಕಟ್ಟಿಕೊಂಡರು.‌ ಸಿನಿಮಾ ರಂಗದಲ್ಲಿ ದೊಡ್ಡ ಗೆಳೆಯರ ಬಳಗವನ್ನೇ ಸಂಪಾದಿಸಿದ ರವಿಶಂಕರ್ ಅವರನ್ನು ಸೃಜನ್ ಲೋಕೇಶ್ ಅವರು ತಮ್ಮ ‘ ಮಜಾ‌ ಟಾಕೀಸ್’ ನಲ್ಲಿ ಪಾಲ್ಗೊಳ್ಳುವಂತೆ ಹೇಳುತ್ತಿದ್ದರಾದರೂ, ರವಿಶಂಕರ್ ಬಿಡುವಿಲ್ಲದಂತೆ ಸಿನಿಮಾಗಳಲ್ಲಿ ನಟಿಸುವ‌ ಮೂಲಕ ಬಿಝಿಯಾಗಿದ್ದರು.

ಆದರೆ, ಈಗ ಸೃಜನ್ ಲೋಕೇಶ್, ಈ ಬಾರಿಯ ‘ ಮಜಾ ಟಾಕೀಸ್’ನಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದಹಾಗೆ, ರವಿಶಂಕರ್ ಮಜಾ ಟಾಕೀಸ್ ನಲ್ಲಿ ಡುಬಾಕ್ ಸೈಂಟಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಪಾತ್ರ ಕೆಲಸಕ್ಕೆ ಬಾರದ್ದನ್ನು ಕಂಡು ಹಿಡಿದು, ಅಲ್ಲಿ ಬರುವ ಅತಿಥಿಗಳನ್ನು ರಂಜಿಸುವ ಕೆಲಸಕ್ಕಿಳಿಯಲ್ಲಿದ್ದಾರೆ.

ಸದಾ ಮರೆಯುವ ಪಾತ್ರ ಅದಾಗಿರುವುದರಿಂದ ಪ್ರತಿ ವಾರ ಪ್ರೇಕ್ಷಕರಿಗೂ ಅದೊಂದು ನಗೆಯ ಹೂರಣ ಎಂಬುದು ರವಿಶಂಕರ್ ಮಾತು.
ಸದ್ಯ ಸಿನಿಮಾಗಳಲ್ಲೂ ಬಿಝಿ ಇರುವ ರವಿಶಂಕರ್ ಗೌಡ ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’ ಸಿನಿಮಾ ಸೇರಿದಂತೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಲಾಕ್ ಡೌನ್ ವೇಳೆ ತಮ್ಮ ಫೇಸ್ ಬುಕ್ ಮೂಲಕ ಸಾಕಷ್ಟು ಕನ್ನಡ ಗೀತೆಗಳನ್ನು ಹಾಡುವ ಮೂಲಕ ರಂಜನೆ ಕೊಟ್ಟು ಕನ್ನಡಿಗರ ಮನ ಗೆದ್ದೆದ್ದ ರವಿಶಂಕರ್ ಈಗ ಮತ್ತೆ ಕನ್ನಡಿಗರನ್ನು ನಗಿಸಲು ಬಂದಿದ್ದಾರೆ. ಇವರ ಎಂಟ್ರಿಯಿಂದ ಮಜಾ ಟಾಕೀಸ್ ಮತ್ತಷ್ಟು ರಂಗೇರಲಿದೆ ಎಂಬುದಂತೂ ದಿಟ.

Related Posts

error: Content is protected !!