ಶಂಭೋ ಶಿವ ಶಂಕರ ಜೊತೆ ಶಶಿಕುಮಾರ್‌ – ಖಡಕ್‌ ಪೊಲೀಸ್‌ ಲುಕ್‌ನಲ್ಲಿ ಸುಪ್ರೀಂ ಹೀರೋ

ಹೊಸಬರ ಜೊತೆ ಎವರ್‌ಗ್ರೀನ್‌ ಸ್ಟಾರ್‌

ಸುಪ್ರೀಂ ಹೀರೋ ಶಶಿಕುಮಾರ್‌, ಕನ್ನಡ ಚಿತ್ರರಂಗ ಕಂಡ ಸ್ಪುರದ್ರೂಪಿ ನಟ. ತೊಂಬತ್ತರ ದಶಕದಲ್ಲಿ ಶಶಿಕುಮಾರ್‌ ಅವರ ಡೇಟ್‌ ಸುಲಭವಾಗಿ ಸಿಗುತ್ತಿರಲಿಲ್ಲ. ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನ ಗೆದ್ದಿರುವ ಶಶಿಕುಮಾರ್‌, ಹಲವು ಹೊಸಬರ ಚಿತ್ರಗಳಲ್ಲಿ ಅತಿಥಿ ನಟರಾಗಿ ಕಾಣಿಸಿಕೊಂಡಿರುವುದುಂಟು. ಕೆಲವೊಮ್ಮೆ ಕಥೆ, ಪಾತ್ರ ಕೇಳಿ ಪ್ರೀತಿಯಿಂದಲೇ ನಟಿಸುವ ಉತ್ಸಾಹ ತೋರಿಸುವ ಅಪರೂಪದ ನಟ ಶಶಿಕುಮಾರ್.‌ ಅಷ್ಟೇ ಅಲ್ಲ, ಗೆಳೆತನಕ್ಕಾಗಿಯೂ ಅವರು ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವುದುಂಟು. ಚಿತ್ರದಲ್ಲಿ ಒಂದೊಳ್ಳೆಯ ವಿಶೇಷ ಪಾತ್ರವಿದೆ ಅಂದಾಕ್ಷಣ, ಬಹುತೇಕ ನಿರ್ದೇಶಕರಿಗೆ ಈ ಶಶಿಕುಮಾರ್‌ ಅವರು ನೆನಪಾಗುತ್ತಾರೆ. ಈಗ ಶಶಿಕುಮಾರ್‌, “ಶಂಭೋ ಶಿವ ಶಂಕರ” ಎಂಬ ಹೊಸಬರ ಚಿತ್ರದಲ್ಲಿ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.


ಹೌದು, ತುಂಬಾ ದಿನಗಳ ಬಳಿಕ ಶಶಿಕುಮಾರ್‌ ಅವರು “ಶಂಭೋ ಶಿವ ಶಂಕರ” ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಅಂದಹಾಗೆ, ಶಶಿಕುಮಾರ್‌ ಅವರ ಪಾಲಿಗೆ ಈ ಬಾರಿ ಒಲಿದು ಬಂದಿರುವ ಪಾತ್ರ, ಖಡಕ್‌ ಪೊಲೀಸ್‌ ಅಧಿಕಾರಿ. ಈಗಾಗಲೇ ಹಲವು ಚಿತ್ರಗಳಲ್ಲಿ ಶಶಿಕುಮಾರ್‌, ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವುದುಂಟು. ಈಗ ಮತ್ತೊಮ್ಮೆ ಪೊಲೀಸ್‌ ಅಧಿಕಾರಿಯಾಗಿ ರಾರಾಜಿಸಲಿದ್ದಾರೆ. ಅಂದಹಾಗೆ, ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಡಿಸೆಂಬರ್ 9 ರಿಂದ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಂತದ ಚಿತ್ರೀಕರಣದಲ್ಲಿ ಶಶಿಕುಮಾರ್ ಸೇರಿದಂತೆ ಇತರೆ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ, ಅಘನ್ಯ ಪಿಕ್ಚರ್ಸ್ ಬ್ಯಾನರ್ ಮೂಲಕ ವರ್ತೂರ್ ಮಂಜು ಅವರು ಚಿತ್ರವನ್ನು ನಿರ್ಮಿಸುತ್ತಿದ್ದು, ಶಂಕರ್ ಕೋನಮಾನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್ ಕೋನಮಾನಹಳ್ಳಿ ಅವರಿಗೆ ಇದು ಮೊದಲ ಚಿತ್ರ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ಒಪ್ಪಿಕೊಂಡಿದ್ದಾರೆ. ಇನ್ನು, ಗೌಸ್ ಪೀರ್‌, ಹಿತನ್ ಹಾಸನ್ ಹಾಡುಗಳನ್ನು ಬರೆದಿದ್ದು, ಹಿತನ್ ಹಾಸನ್ ಸಂಗೀತವಿದೆ. ನಟರಾಜ್ ಮುದ್ದಾಲ ಛಾಯಾಗ್ರಹಣ ಮಾಡಿದರೆ, ಕಲೈ ನೃತ್ಯ ನಿರ್ದೇಶನವಿದೆ. ವೆಂಕಟೇಶ್ ಯುಡಿವಿ ಸಂಕಲನವಿದೆ. ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಮಾಡಿದ್ದಾರೆ.
ಇನ್ನು, “ಶಂಭೋ ಶಿವ ಶಂಕರ” ಅನ್ನೋದು ಮೂವರು ಹೀರೋಗಳ ಹೆಸರು. ಆ ಒಂದೊಂದು ಹೆಸರಲ್ಲಿ ಅಭಯ್ ಪುನೀತ್, ರೋಹಿತ್ ಮತ್ತು ರಕ್ಷಕ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸೋನಾಲ್ ಮಾಂತೆರೊ ಈ ಚಿತ್ರದ ನಾಯಕಿ.

Related Posts

error: Content is protected !!