ಕಾಮಿನಿ ರಾವ್‌ ಅವರ ಮಾಸ್ಟರ್‌ ಕ್ಲಾಸ್‌ – ಸಿನ್ಮಾ ಕ್ಷೇತ್ರಕ್ಕೂ ಎಂಟ್ರಿ ಕೊಡಲಿರುವ ಖ್ಯಾತ ವೈದ್ಯೆ

ಇತರರಿಗೂ ಸ್ಫೂರ್ತಿ ತುಂಬುವ ಉದ್ದೇಶವೇ ನಮ್ಮ ಗುರಿ

ಈಗಾಗಲೇ ತಮ್ಮದೇ ಆದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ಸಾಧಕರು ಮನರಂಜನೆ ಕ್ಷೇತ್ರಕ್ಕೂ ಎಂಟ್ರಿಯಾಗಿದ್ದು ಗೊತ್ತೇ ಇದೆ. ಬಹಳಷ್ಟು ಮಂದಿ ಸಾಧಕರು ಮನರಂಜನಾ ಕ್ಷೇತ್ರದಲ್ಲೀ ಯಶಸ್ಸು ಕಂಡಿದ್ದಾರೆ ಕೂಡ. ಈಗ ಡಾ.ಕಾಮಿನಿ ರಾವ್‌ ಕೂಡ ಮನರಂಜನಾ ಕ್ಷೇತ್ರಕ್ಕೆ ಎಂಟ್ರಿಯಾಗುತ್ತಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ಪ್ರಸೂತಿ ಮತ್ತು ಸ್ತ್ರಿರೋಗ ತಜ್ಞೆಯಾಗಿ, ಅಸಿಸಡ್ ರಿಪ್ರೊಡಕ್ಷನ್ ಕ್ಷೇತ್ರ ಸೇರಿದಂತೆ ವೈದ್ಯಕೀಯ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪದ್ಮಶ್ರೀ ಪ್ರಶಸ್ತಿ ವಿಜೇತೆ ಡಾ.ಕಾಮಿನಿ ಎ.ರಾವ್‌ ಇದೀಗ ತಮ್ಮ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಈಗಾಗಲೇ ರಾಷ್ಟ್ರ. ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿರುವ ಅಪ್ಪಟ ಕನ್ನಡದ ಮಹಿಳೆ ಡಾ. ಕಾಮಿನಿ ಎ. ರಾವ್.‌ ವೈದ್ಯಲೋಕದಲ್ಲಿ ಸಾಕಷ್ಟು ಸಾಧನೆ ಮಾಡುವುದರ ಜೊತೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರೀಗ ಮನರಂಜನೆ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ ಎಂಬುದು ಅಚ್ಚರಿಯಾದರೂ ಸತ್ಯ.
ಈ ಕುರಿತಂತೆ ಅವರು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಪೂರ್ವಿ ಪ್ರೊಡಕ್ಷನ್ಸ್ ಹೆಸರಿನಲ್ಲಿ ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸುತ್ತಿರುವುದಾಗಿ ಹೇಳಿರುವ ಅವರು, ಅಧಿಕೃತವಾಗಿ ಈ ಸಂಸ್ಥೆ ತನ್ನ ಕಾರ್ಯಚಟುವಟಿಕೆ ಶುರುಮಾಡಲಿದೆ. ಮನರಂಜನಾ ಕ್ಷೇತ್ರದ ಮೂಲಕ ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ತಮ್ಮ ಸೊಸೆ ಪೂಜಾ ಸಿದ್ಧಾರ್ಥ್ ರಾವ್ ಕೂಡ ಹೊಸ ಯೋಜನೆ ಹಾಕಿಕೊಂಡಿದ್ದರಿಂದಲೇ ನಾನು ಈ ಹೊಸ ಸಾಹಸಕ್ಕೆ ಸಿದ್ಧಳಾಗಿದ್ದೇನೆ. ಈ ಕೆಲಸಕ್ಕೆ ನನ್ನ ಪತಿ ಡಾ. ಎ.ಎಸ್. ಅರವಿಂದ್ ಅವರ ಸಹಕಾರವೂ ಇದೆ. ಸಿನಿಮಾ ಮೂಲಕ ಸಾಮಾನ್ಯರಿಗೂ ಉಪಯೋಗವಾಗುವ ಉದ್ದೇಶದಿಂದ ಹೊಸ ಪ್ರಯೋಗಗಳನ್ನು ಈ ಸಂಸ್ಥೆ ಮೂಲಕ ಮಾಡುವ ಛಲದಲ್ಲಿರುವುದಾಗಿ ಹೇಳುತ್ತಾರೆ ಅವರು.

ಡಾ.‌ ಕಾಮಿನಿ ರಾವ್

ಮಾಸ್ಟರ್ ಕ್ಲಾಸ್
ಡಾ. ಕಾಮಿನಿ ರಾವ್ಸ್ ಮಾಸ್ಟರ್ ಕ್ಲಾಸ್ ಕೇವಲ ಸಾಮಾನ್ಯ ಸಂಗತಿಗಳಿಂದ ಕೂಡಿರದೇ, ಸ್ಪೂರ್ತಿದಾಯಕ ಅಂಶಗಳ ಜತೆಗೆ, ಯಶಸ್ಸಿನ ಏಣಿ ಏರುವುದಕ್ಕೂ ಇದು ರಹದಾರಿಯಾಗಿದೆ. ಸಾಮಾನ್ಯನಿಂದ ಅಸಾಮಾನ್ಯನೆಡೆಗೆ ಡಾ. ಕಾಮಿನಿ ರಾವ್ಸ್ ಮಾಸ್ಟರ್ ಕ್ಲಾಸ್‌ನಲ್ಲಿ ಮಾಹಿತಿ ನೀಡಲಾಗುತ್ತದೆ. ಇದರ ಜತೆಗೆ “ಪೂರ್ವಿರಾಗ”, “ಹರಟೆ” ಎಂಬ ಸ್ಫೂರ್ತಿದಾಯಕ ಕಾರ್ಯಕ್ರಮವನ್ನೂ ಆಯೋಜಿಸುತ್ತಿದ್ದು, ಒಂದಷ್ಟು ಗಾಯಕರು ಮತ್ತು ಸಂಗೀತಗಾರರನ್ನ ಆಯ್ಕೆ ಮಾಡಿ ಕಾರ್ಯಕ್ರಮವನ್ನೂ ನಡೆಸಲಿದ್ದಾರೆ. ಇಲ್ಲಿ ಹಾಸ್ಯದೊಂದಿಗೆ ಹಾಡು ಹರಟೆ ಹೈಲೈಟ್‌ ಆಗಿರಲಿದೆ. ಇನ್ನು, ನಾನು ವೈದ್ಯಕೀಯ ಕ್ಷೇತ್ರದಲ್ಲಿರುವುದರಿಂದ ಇತರರಿಗೂ ಅನುಕೂಲ ಆಗಲಿ ಎಂಬ ಕಾರಣಕ್ಕೆ, ಆನ್ಲೈನ್ ತರಗತಿಗಳನ್ನೂ ಆಯೋಜಿಸುತ್ತಿದ್ದೇನೆ. ರಿಪ್ರೊಡಕ್ಟಿವ್ ಮೆಡಿಸಿನ್, ಆಬ್ಸ್ಟೆಟ್ರಿಕ್ಸ್ ಮತ್ತು ಗೆನೊಕೊಲಜಿ ಕುರಿತ ತರಗತಿಗಳನ್ನು ನಡೆಸಲಾಗುವುದು. ಇಲ್ಲಿ ಸಾಕಷ್ಟು ನುರಿತ ವೈದ್ಯರು ಈ ಬಗ್ಗೆ ಆನ್ಲೈನ್ನಲ್ಲಿಯೇ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ಹಾಗೇ ಕಲಿತ ಕೋರ್ಸ್‌ ಗೆ ಸರ್ಟಿಫೀಕೆಟ್ ಸಹ ನೀಡಲಾಗುವುದು. ಗ್ರಾಮೀಣ ಮತ್ತು ನಗರ ಪ್ರದೇಶದವರ ಜತೆಗೆ ವಿಶ್ವದಾದ್ಯಂತ ಎಲ್ಲೇ ಇದ್ದರೂ ಈ ಕೋರ್ಸ್ ಮಾಡಬಹುದು ಎಂಬುದು ಅವರ ಮಾತು.

ಪೂಜಾ ಸಿದ್ಧಾರ್ಥ್‌ ರಾವ್

ಪೂರ್ವಿ ಪ್ರೊಡಕ್ಷನ್ಸ್
ಇನ್ನು ಪೂರ್ವಿ ಪ್ರೊಡಕ್ಷನ್ಸ್‌ ಕುರಿತು ಮಾತನಾಡಿದ ಕಾಮಿನಿ ರಾವ್‌ ಅವರ ಸೊಸೆ, ಪೂಜಾ ಸಿದ್ಧಾರ್ಥ್‌ ರಾವ್‌, “ಸಾಮಾಜಿಕ ಕಳಕಳಿಯುಳ್ಳ ಮತ್ತು ಜನಸಾಮಾನ್ಯರಿಗೂ ಹತ್ತಿರವೆನಿಸುವ ಸಿನಿಮಾಗಳನ್ನು ನಿರ್ಮಾಣ ಮಾಡಿ ಸಮಾಜಕ್ಕೆ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಧನಾತ್ಮಕ ಅಂಶಗಳಿರುವ ಮತ್ತು ಎಲ್ಲರಿಗೂ ಅನ್ವಯವಾಗುವಂತಹ ಸಿನಿಮಾಗಳನ್ನು ನಿರ್ಮಿಸುವುದು ಸಂಸ್ಥೆಯ ಗುರಿ. ಈ ಪೂರ್ವಿ ಪ್ರೊಡಕ್ಷನ್ಸ್ ಸಂಸ್ಥೆಯನ್ನು ತೆರೆಯುತ್ತಿರುವ ಮುಖ್ಯ ಉದ್ದೇಶ, ಸಿನಿಮಾ ನಿರ್ಮಾಣ, ಡಾಕ್ಯುಮೆಂಟರಿಗಳು, ಹರಟೆ ರೀತಿಯ ಕಾರ್ಯಕ್ರಮಗಳನ್ನು ಮತ್ತು ಎಜುಕೇಷನಲ್ ಸಿನಿಮಾಗಳನ್ನು ನಿರ್ಮಾಣ ಮಾಡುವುದು. ಇಷ್ಟಕ್ಕೂ ಈ ಸಂಸ್ಥೆ ಶುರು ಮಾಡೋಕೆ ಕಾರಣ, ಕೊರೊನಾದಿಂದ ಆದಂತಹ ಅನುಭವ. ನಾನು ಮದುವೆಯಾಗಿ ಹತ್ತು ವರ್ಷಗಳಾದವು. ಇಷ್ಟು ದಿನದಲ್ಲಿ ನನ್ನ ಅತ್ತೆ ಸುಮ್ಮನೇ ಕುಳಿತಿದ್ದು ಯಾವತ್ತೂ ನೋಡಿಲ್ಲ. ಹೀಗಿರುವಾಗ ಕೊರೋನಾ ಕಾರಣಕ್ಕಾಗಿ ನಿರ್ಮಾಣಗೊಂಡ ಪರಿಸ್ಥಿತಿ ಎಂಥವರನ್ನೂ ಮನೆಯಲ್ಲಿ ಬಂಧಿಸಿತ್ತು. ಆನ್‌ ಲೈನ್‌, ಓಟಿಟಿಗಳನ್ನು ನೋಡಿ ಸಾಕಾಗಿತ್ತು. ಅದೊಂದು ದಿನ ʻಅಮ್ಮಾ ಸುಮ್ಮನೇ ಕೂತು ಬೇಸರವಾಗುತ್ತಿದೆʼ ಎಂದೆ. ಆ ದಿನ ಹತ್ತಾರು ನಿಮಿಷಗಳ ಕಾಲ ಅತ್ತೆ ಬದುಕಿನ ಬಗ್ಗೆ ಮಾತಾಡಿದರು. ಅವರ ಮಾತುಗಳು ತುಂಬಾ ಅಮೂಲ್ಯವೆನಿಸಿತು. ಅವರ ಈ ಹಿತ ನುಡಿಗಳು, ಮಾರ್ಗದರ್ಶನದ ಮಾತುಗಳು ನಮಗಷ್ಟೇ ದಕ್ಕಿದರೆ ಹೇಗೆ? ಜಗತ್ತಿಗೆ ಯಾಕೆ ಪರಿಚಯಿಸಬಾರದು? ಎಂಬ ಐಡಿಯಾ ಬಂದು. ಈ ಕಾರಣಕ್ಕೆ ಶುರುವಾದ ಹೊಸ ಕಲ್ಪನೆ ಪೂರ್ವಿ ಪ್ರೊಡಕ್ಷನ್ಸ್. ಈ ಮೂಲಕ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಈಗಾಗಲೇ ಕನ್ನಡ ರಾಜ್ಯೋತ್ಸವ ಕುರಿತು ಅಪರ್ಣ ಹಾಗೂ ಜೋಗಿ ಸುನಿತ ಜೊತೆ ಒಳ್ಳೆಯ ಕಾರ್ಯಕ್ರಮ ನಡೆದಿದೆ.‌ ನಮ್ಮ ಡಾ.ಕಾಮಿನಿ ರಾವ್ ಡಾಟ್‌ ಕಾಮ್‌ ಯುಟ್ಯೂಬ್ ಚ್ಯಾನೆಲ್‌ನಲ್ಲಿ ವೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣ ಮಾಡುವ ಉದ್ದೇಶವೂ ಇದೆ. ಸಾಮಾಜಿಕ ಕಳ ಕಳಿ ಇರುವ ವಿಷಯ ಆಯ್ಕೆ ಮಾಡಿಕೊಂಡು ಚಿತ್ರ ಮಾಡುವ ಯೋಚನೆ ಇದೆ ಎಂಬುದು ಪೂಜಾ ಸಿದ್ಧಾರ್ಥ್‌ ರಾವ್‌ ಅವರ ಮಾತು.‌

ಡಾ.ಅರವಿಂದ್

ಡಾ.ಕಾಮಿನಿ ರಾವ್‌ ಅವರ ಪತಿ ಡಾ.ಎ.ಎಸ್.‌ ಅರವಿಂದ್‌ ಅವರಿಗೆ, ವೈದ್ಯರಾಗಿದ್ದರೂ, ಸಿನಿಮಾರಂಗ ಹತ್ತಿರವಂತೆ. ಅವರು ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌, ಕಾಲೇಜಿನಲ್ಲಿ ಓದಿದವರು. ಹಾಗಾಗಿ, ಡಾ. ವಿಷ್ಣುವರ್ಧನ್‌ ಆಪ್ತರು. ಅಂಬರೀಶ್‌, ಡಾ. ರಾಜ್‌ ಕುಮಾರ್‌ ಕುಟುಂಬ ಸೇರಿದಂತೆ ಸಾಕಷ್ಟು ಕಲಾವಿದರ ಒಡನಾಟವೂ ಇವರಿಗೆ ಇದೆ. ಇಷ್ಟು ವರ್ಷ ಸಿನಿಮಾದವರ ಸಂಗಡ ಇದ್ದರೂ, ಸಿನಿಮಾರಂಗ ಪ್ರವೇಶಿಸಿರಲಿಲ್ಲ. ಈಗ ನೇರವಾಗಿ ಸ್ಪರ್ಶಿಸುವ ಕಾಲ ಬಂದಿದೆ ಎಂದರು ಡಾ. ಎ.ಎಸ್. ಅರವಿಂದ್.

Related Posts

error: Content is protected !!