Categories
ಸಿನಿ ಸುದ್ದಿ

ಕಲರ್‌ಫುಲ್ ಲೋಕದಲ್ಲಿ ಪೇನ್‌ಫುಲ್‌ ಲೈಫ್ !

ಲಾಕ್ ಡೌನ್ ದಿನದ ಯಾತನೆ ಯಾರಿಗೂ ಬೇಡ….

-ಸಹಾಯಕ ನಿರ್ದೇಶಕರ ನೋವಿನ ಮಾತು

 

“ಆ ದಿನಗಳನ್ನು ನೆನಪಿಸಿಕೊಂಡರೆ ನಿಜಕ್ಕೂ ಅಂತಹ ಕಷ್ಟ ಯಾರಿಗೂ ಬರುವುದು ಬೇಡ. ತುಂಬಾನೇ ಇಷ್ಟಪಟ್ಟು ಈ ಸಿನಿಮಾರಂಗಕ್ಕೆ ಬಂದಿದ್ದೇವೆ. ಸಿನಿಮಾ ಅನ್ನೋ ಕಲರ್‌ಫುಲ್‌ ಲೋಕದ ಮೇಲೆ ನೂರಾರು ಕನಸು ಕಟ್ಟಿಕೊಂಡು ಬಂದ್ವಿ. ಆದರೆ ಇಲ್ಲಿಗೆ ಬಂದಮೇಲಷ್ಟೆ, ಅದರ ಅಗಲ, ಆಳ ಗೊತ್ತಾಗಿದ್ದು. ಆದೇನೆ ಇರಲಿ, ಕಷ್ಟಾನೋ, ಸುಖಾನೋ ಎಲ್ಲವನ್ನೂ ಇಲ್ಲೇ ಅನುಭವಿಸಬೇಕು. ನಾವಂದುಕೊಂಡ ಗುರಿ ತಲುಪಲೇಬೇಕು. ಅದಕ್ಕಾಗಿ ಸಂಕಷ್ಟದಲ್ಲೂ ಸಹಿಸಿಕೊಂಡೇ ಇನ್ನೂ ಆ ಅಸೆಯನ್ನು ಜೀವಂತವಾಗಿರಿಸಿಕೊಂಡಿದ್ದೇವೆ..”
– ಇದು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕೆಲವು ಸಹ ನಿರ್ದೇಶಕ, ಸಹಾಯಕ ನಿರ್ದೇಶಕರ ನೋವಿನ ಮಾತು. ಹೌದು, ಕೊರೊನಾ ಸಂದರ್ಭದಲ್ಲಿ ಎಲ್ಲರೂ ನೋವು ಅನುಭವಿಸಿದ್ದಾರೆ. ಕಷ್ಟ ಎದುರಿಸಿದ್ದಾರೆ. ಅಂಥ್ದದೊಂದು ಕಷ್ಟವನ್ನು ಕನ್ನಡ ಚಿತ್ರರಂಗದಲ್ಲಿ ಹಗಲಿರುಳು ದುಡಿಯುತ್ತಿರುವ ಅಸಿಸ್ಟಂಟ್‌ ಡೈರೆಕ್ಟರ್ಸ್‌, ಅಸೋಸಿಯೇಟ್ಸ್‌ ಡೈರೆಕ್ಟರ್ಸ್‌ ಕೂಡ ಅನುಭವಿಸಿದ್ದಾರೆ. ಕೊರೊನಾ ತಂದಿಟ್ಟ ಸಮಸ್ಯೆ ಎಂಥದ್ದು ಎಂಬುದನ್ನು “ಸಿನಿಲಹರಿ” ಜೊತೆ ಬಿಚ್ಚಿಟ್ಟಿದ್ದಾರೆ.

ಸಹಾಯಕ ನಿರ್ದೇಶಕ ನಾಗೇಶ್‌ ಹೆಬ್ಬೂರು

ನಮಗೆ ನಿರ್ದಿಷ್ಟ ಪೇಮೆಂಟ್‌ ಇಲ್ಲವೇ ಇಲ್ಲ

“ನಾನು ಈ ಸಿನಿಮಾ ಇಂಡಸ್ಟ್ರಿಗೆ ಬಂದು ಸರಿ ಸುಮಾರು ಒಂದು ದಶಕವೇ ಕಳೆದಿದೆ. ಇಷ್ಟು ವರ್ಷಗಳಲ್ಲಿ ನಾನು ಸುಮಾರು 14 ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಕೊರೊನಾ ತಂದಿಟ್ಟ ಅವಾಂತರ ಸಾಕಷ್ಟಿದೆ. ಹಾಗೆ ಹೇಳುವುದಾದರೆ, ಕಹಿ ಅನುಭವ ಅನ್ನೋದು ಕೊರೊನಾ ಸಮಯದಲ್ಲಿ ಮಾತ್ರವಲ್ಲ. ಈ ಫೀಲ್ಡ್‌ಗೆ ಎಂಟ್ರಿಯಾದಾಗಿನಿಂದಲೂ ಆಗಿರುವಂಥದ್ದೇ. ನನ್ನಂತಹ ಅದೆಷ್ಟೋ ಹುಡುಗರು ಕನಸು ಕಟ್ಟಿಕೊಂಡು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತಾನೊಬ್ಬ ನಿರ್ದೇಶಕ ಆಗಬೇಕು ಅಂದುಕೊಂಡೇ ಇಲ್ಲಿಗೆ ಬಂದವರು ಹೆಚ್ಚು. ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಸಮಸ್ಯೆ ತಪ್ಪಿದ್ದಲ್ಲ. ಕಷ್ಟ-ನಷ್ಟಗಳ ನಡುವೆಯೇ ಅವರು ಇಲ್ಲಿ ಬದುಕು ಸವೆಸುತ್ತಿದ್ದಾರೆ. ಇದಕ್ಕೆ ನಾನೂ ಹೊರತಲ್ಲ. ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಹುಡುಗರಿಗೆ ಕಹಿ ಅನುಭವ ಹೊಸದಲ್ಲ. ಲಾಕ್‌ಡೌನ್‌ ಕೂಡ ವಿಭಿನ್ನವಾಗಿರಲಿಲ್ಲ. ಸಾಮಾನ್ಯ ದಿನಗಳನ್ನು ಹೇಗೆಲ್ಲಾ ಎದುರಿಸುತ್ತಿದ್ದರೋ, ಅದಕ್ಕಿಂತ ಸ್ವಲ್ಪ ಜಾಸ್ತಿ ಸಮಸ್ಯೆಯನ್ನು ಈ ಲಾಕ್‌ಡೌನ್‌ ಸಂದರ್ಭದಲ್ಲಿ ಎದುರಿಸಬೇಕಾಗಿ ಬಂದಿದ್ದು ಸುಳ್ಳಲ್ಲ. ಸಹ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರಿಗೆ ಯಾವಾಗಲೂ ಹಣ ಸಿಗಲ್ಲ. ಸಿನಿಮಾ ಇದ್ದಾಗ ಮಾತ್ರ, ಆಯಾ ಪ್ರೊಡಕ್ಷನ್ಸ್‌ ಕೊಡುವ ಹಣವೇ ಆಧಾರ. ಹಾಗಂತ, ಅಲ್ಲಿ ಸಿಗುವ ಹಣ ಊಟಕ್ಕಷ್ಟೇ ಸೀಮಿತ. ಕೊರೊನಾ ಸಮಸ್ಯೆಯಲ್ಲಷ್ಟೇ ಅಲ್ಲ, ಪ್ರತಿ ದಿನವೂ ನಮ್ಮಂತಹ ಸಹ ನಿರ್ದೇಶಕ, ಸಹಾಯಕ ನಿರ್ದೇಶಕರ ಸಮಸ್ಯೆ ನಿರಂತರ. ಕನ್ನಡ ಚಿತ್ರರಂಗದಲ್ಲಿ ಒಬ್ಬ ಲೈಟ್ ಬಾಯ್‌ಗೆ 750 ರುಪಾಯಿ ವೇತನ ಫಿಕ್ಸ್‌ ಇದೆ. ಒಬ್ಬ ಕಸಗೂಡಿಸುವವನಿಗೂ ಇಲ್ಲಿ ಪೇಮೆಂಟ್‌ ಅನ್ನೋದು ಫಿಕ್ಸ್. ದುರಂತವೆಂದರೆ, ಎಂಬತ್ತು ವರ್ಷಗಳ ಇತಿಹಾಸ ಇರುವ ಕನ್ನಡ ಚಿತ್ರರಂಗದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ನಿರ್ದೇಶನ ವಿಭಾಗದ ಹುಡುಗರಿಗೆ ಒಂದು ಫಿಕ್ಸ್‌ ಅಮೌಂಟ್‌ ಅನ್ನುವುದೇ ಇಲ್ಲ. ನಿರ್ದೇಶನ ವಿಭಾಗ ಸಿನಿಮಾದಲ್ಲಿ ಕ್ರಿಯೇಟಿವ್‌ ವಿಭಾಗ ಅನ್ನೋದು ಹೆಸರಿಗಷ್ಟೇ. ಆದರೆ, ಪೇಮೆಂಟ್‌ ಬಗ್ಗೆ ಕೇಳುವಂತಿಲ್ಲ. ಅಂತಹ ಯಾವ ಮಾನದಂಡವೂ ಇಲ್ಲ” ಎಂಬುದು ದಶಕಗಳ ಕಾಲ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿಯುತ್ತಿರುವ ನಾಗೇಶ್‌ ಹೆಬ್ಬೂರು ಮಾತು.‌

 

  ಶರಣ್‌ ಗೆಣ್ಕಾಳ್

ಬ್ರದರ್‌ ಮನೆ ಇತ್ತು ಬಚಾವ್‌ ಆದೆ…

“ಸಿನಿಮಾ ನಂಬಿ ಬದುಕು ಕಟ್ಟಿಕೊಳ್ಳುವುದು ಸುಲಭವಲ್ಲ” ಎಂಬುದು ಮತ್ತೊಬ್ಬ ಸಹಾಯಕ ನಿರ್ದೇಶಕ ಶರಣ್‌ ಗೆಣ್ಕಲ್ ಅವರ ಮಾತು. ತಮ್ಮ ದಶಕದ ಅನುಭವ ಬಿಚ್ಚಿಡುವ ಅವರು, ಇಲ್ಲಿ ನಿರ್ದೇಶನ ಕನಸು ಕಟ್ಟಿಕೊಂಡು ಬಂದಿದ್ದೇನೆ. ನಿಜ ಹೇಳುವುದಾದರೆ, ಇಲ್ಲಿ ಪ್ರತಿಭೆ ಜೊತೆಗೆ ಅದೃಷ್ಟವೂ ಇರಬೇಕು. ಅದಿದ್ದರೆ ಮಾತ್ರ, ಪವಾಡ ಸಾಧ್ಯ. ಇಲ್ಲವಾದರೆ, ನಮ್ಮಂತಹ ಅದೆಷ್ಟೋ ಸಹ, ಸಹಾಯಕ ನಿರ್ದೇಶಕರು ನಿರ್ದೇಶಕರಾಗಲು ಹೆಣಗಾಡಲೇಬೇಕು. ಮೊದಲೇ ಇಂತಿಷ್ಟು ಅನ್ನೋ ಪೇಮೆಂಟ್‌ ಇರೋದಿಲ್ಲ. ಅದರಲ್ಲೂ ಈ ಕೊರೊನಾ ಎದುರಾಗಿ, ನಮ್ಮಂತಹ ಅನೇಕ ಸಹ ನಿರ್ದೇಶಕರು, ಸಹಾಯಕ ನಿರ್ದೇಶಕರನ್ನು ಹೈರಾಣಾಗಿಸಿದ್ದಂತೂ ಸುಳ್ಳಲ್ಲ. ಕೊರೊನಾ ಸಮಯದಲ್ಲಿ ಎಲ್ಲವೂ ಬಂದ್‌ ಆಗಿದ್ದರಿಂದ ನಮ್ಮಂಥವರ ಬದುಕು ನಿಜಕ್ಕೂ ಶೋಚನೀಯವಾಗಿತ್ತು. ಲಾಕ್‌ಡೌನ್‌ ಮುನ್ನ ಒಂದಷ್ಟು ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಆದರೆ, ಪೇಮೆಂಟ್‌ ಮಾತ್ರ ಕ್ಲಿಯರ್‌ ಆಗಿರಲಿಲ್ಲ. ಇದ್ದಕ್ಕಿದ್ದಂತೆ ಲಾಕ್‌ಡೌನ್‌ ಶುರುವಾದಾಗ, ಬದುಕು ಅತಂತ್ರವಾಯ್ತು. ಪೇಮೆಂಟ್‌ ಕೊಡಬೇಕಾದವರೂ ಫೋನ್‌ ಪಿಕ್‌ ಮಾಡದೇ ಹೋದರು. ನಿಜ ಹೇಳುವುದಾದರೆ, ಈ ವರ್ಷ ಒಂದೇ ಒಂದು ರುಪಾಯಿ ಕೂಡ ದುಡಿಮೆ ಇಲ್ಲ, ಆದರೂ ಹೇಗೋ ಬದುಕಿದ್ದೇನೆ. ನನ್ನ ಸಹೋದರ ಮನೆಯಲ್ಲೇ ಇದ್ದುದರಿಂದ ನಾನು ಬಚಾವ್‌ ಆಗಿದ್ದೇನೆ. ನನ್ನ ಅನೇಕ ಗೆಳೆಯರ ಸ್ಥಿತಿಯಂತೂ ಹೇಳತೀರದು” ಎನ್ನುತ್ತಾರೆ ಶರಣ್‌ ಗೆಣ್ಕಲ್.‌

 

ಸಹಾಯಕ ನಿರ್ದೇಶಕ ಅಂಜನ್

ನಮ್ಮಂಥವರ ಪರಿಸ್ಥಿತಿ ಭೀಕರ

“ಸಿನಿಮಾದಲ್ಲೇ ಏನಾದರೊಂದು ಸಾಧನೆ ಮಾಡಬೇಕು ಅಂತ ಬಂದವರು ಸಹಾಯಕ ನಿರ್ದೇಶಕ ಅಂಜನ್.‌ ಇಲ್ಲಿಗೆ ಬಂದು ಸುಮಾರು 7 ವರ್ಷಗಳೇ ಕಳೆದಿವೆ. ಸಿನಿಮಾ ಜೊತೆಗೆ ಧಾರಾವಾಹಿಗಳಲ್ಲೂ ಕೆಲಸ ಮಾಡಿದ್ದಾರೆ. ನಿರ್ದೇಶಕ ಆಗಬೇಕು ಎಂಬ ಕಾರಣಕ್ಕೆ ಹಣದ ಬಗ್ಗೆ ತಲೆಕೆಡಿಸಿಕೊಳ್ಳದೆ, ಸಹನಿರ್ದೇಶಕನಾಗಿ ಕೆಲಸ ಮಾಡಿದ್ದುಂಟು. ಆದರೆ, ನಮ್ಮದೂ ಅಂತ ಹೊಟ್ಟೆ ಪಾಡು ಇದ್ದೇ ಇರುತ್ತಲ್ಲವೇ. ಏನೋ ಕೊಟ್ಟಷ್ಟು ಇಟ್ಟುಕೊಂಡು ಬದುಕು ಸವೆಸಿದ್ದೇನೆ. ಕೊರೊನಾ ಬಂದ ಸಮಯದಲ್ಲಂತೂ ನಮ್ಮನ್ನು ಕೇಳುವವರೇ ಇರಲಿಲ್ಲ. ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೆ. ಆದರೆ, ಯಾರೊಬ್ಬರೂ ಆ ವೇಳೆ ಸಹಾಯಕ್ಕೆ ಬರಲಿಲ್ಲ. ಆಗ ಎನಿಸಿದ್ದೊಂದೇ, ಇನ್ನೂ ಇಲ್ಲಿರಬೇಕಾ ಅಂತ. ಆದರೂ, ಕನಸು ಇಟ್ಟುಕೊಂಡಿದ್ದೇನೆ. ನಿರ್ದೇಶಕನಾಗಬೇಕು ಅಂತ ಹೊರಟಿದ್ದೇನೆ. ಆರಂಭದ ದಿನಗಳಲ್ಲಿ ಅದೆಷ್ಟೋ ಉಪವಾಸ ದಿನಗಳನ್ನೂ ನೋಡಿದ್ದುಂಟು. ಸಿನಿಮಾ ಫೀಲ್ಡ್‌ನಲ್ಲಿದ್ದೇನೆ ಅನ್ನೋದಷ್ಟೇ ಖುಷಿ. ಅದರ ಹೊರತಾಗಿ ಕಷ್ಟಗಳ ಸರಮಾಲೆಯೇ ದೊಡ್ಡದಿದೆ. ಆದರೂ, ಮುಂದೊಂದು ದಿನ ನಿರ್ದೇಶಕನಾಗ್ತೀನಿ ಎಂಬ ಭರವಸೆಯಿಂದಲೇ ಬಂದಿದ್ದನ್ನು ಸಹಿಸಿಕೊಂಡಿದ್ದೇನೆ” ಎನ್ನುತ್ತಾರೆ ಅಂಜನ್.‌

ಸಿನ್ಮಾಗೆ ಹೋಗಿ ಮಗ ಕೆಟ್ನಾ ಎಂಬ ಆತಂಕ
ತನ್ನ ಹೆಸರು ಹೇಳಲಿಚ್ಛಿಸದ ಸಹಾಯಕ ನಿರ್ದೇಶಕರೊಬ್ಬರ ಅಳಲಿನ ಮಾತಿದು. “ನಾನು ಮೂಲತಃ ಉತ್ತರ ಕರ್ನಾಟಕದಿಂದ ಬಂದವನು. ನನ್ನಂತೆಯೇ ರಾಜ್ಯಾದ್ಯಂತ ಸಾಕಷ್ಟು ಹುಡುಗರು ಕನಸು ಕಟ್ಟಿಕೊಂಡು ಸಿನಿಮಾ ಫೀಲ್ಡ್‌ಗೆ ಬಂದಿದ್ದಾರೆ. ಕೆಲವರು ಅದೃಷ್ಟದ ಮೇಲೆ ನಿರ್ದೇಶಕರಾಗಿದ್ದಾರೆ. ನಮ್ಮಂತವರು ಇನ್ನೂ ಸೈಕಲ್‌ ತುಳೀತಾನೇ ಇದೀವಿ. ನಾನು ಒಂದು ದಶಕದಿಂದಲೂ ಈ ಫೀಲ್ಡ್‌ನಲ್ಲಿದ್ದೇನೆ. ಈವರೆಗೆ ಸುಮಾರು ಹದಿನೈದು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಅಲ್ಲಿ ಸಹಾಯಕ ನಿರ್ದೇಶಕ ಎನ್ನುವುದಷ್ಟೇ ತೃಪ್ತಿ. ಬಿಟ್ಟರೆ, ಹಣದ ವಿಷಯದಲ್ಲಿ ಸೊನ್ನೆ. ಕೆಲಸ ಕೊಟ್ಟರೆ ಆದೇ ಹೆಚ್ಚಿರುವಾಗ, ಹಣದ ಮಾತೆಲ್ಲಿ? ಏನಾದರೂ, ನಿರ್ಮಾಪಕರ ಬಳಿ ಇಂತಿಷ್ಟು ಹಣ ಕೊಡಿ ಸರ್‌ ಅಂತ ಡಿಮ್ಯಾಂಡ್‌ ಇಟ್ಟರೆ, “ನೀವೆಲ್ಲಾ ಮುಂದೆ ಡೈರೆಕ್ಟರ್‌ ಆಗ್ತೀರಿ. ದೊಡ್ಡ ಆಫರ್‌ ಸಿಗುತ್ತವೆ. ನಾವೆಲ್ಲ ಹಿಂದೆ ಬಹಳ ಕಷ್ಟಪಟ್ಟು ಬಂದಿದ್ದೇವೆ. ಇದು ನಿಮ್ಮ ಮೊದಲ ಸಿನಿಮಾ ಅಂದುಕೊಂಡು ಕೆಲಸ ಮಾಡಿ ಅನ್ನುತ್ತಲೇ ಖರ್ಚಿಗೆ ಅಷ್ಟೋ ಇಷ್ಟೋ ಕಾಸು ಕೊಟ್ಟು ಸುಮ್ಮನಾಗುತ್ತಾರೆ. ಹೊಟ್ಟೆಪಾಡು ನೋಡಿಕೊಳ್ಳೋದೆ ಕಷ್ಟ ಎನಿಸಿದ ಸಂದರ್ಭದಲ್ಲಿ ಕೊರೊನಾ ಎರಗಿ ಬದುಕನ್ನು ಇನ್ನಷ್ಟು ಕಠಿಣವಾಗಿಸಿತು. ಇಲ್ಲಿಗೆ ಬಂದಾಗಲಷ್ಟೇ ಸಿನಿಮಾದ ಉದ್ದ, ಅಗಲ, ಆಳ ಗೊತ್ತಾಗಿದ್ದು. ಊರ್‌ ಕಡೆ ಹೋದರೆ, ನಿಮ್‌ ಸಿನಿಮಾ ಹತ್ತು ಕೋಟಿ ಗಳಿಸಿತ್ತಂತಲ್ಲಾ, ನಿಮಗೆಷ್ಟು ಕೊಟ್ರು ಅಂತ ಗೇಲಿ ಮಾಡಿದ್ದೂ ಆಯ್ತು. ಇನ್ನು ಮನೆಯವರು ಸಿನಿಮಾಗೆ ಹೋಗಿ ನಮ್‌ ಹುಡುಗ ಕೆಟ್ನಾ, ಅವರು ಕೆಟ್ಟ ದಾರಿ ಹಿಡಿದ್ನಾ ಎಂಬ ಪ್ರಶ್ನೆ ಹಾಕಿಕೊಂಡಿದ್ದೂ ಹೌದು. ಮದುವೆ ಮಾಡ್ಕೊಂಡು ಸೆಟ್ಲ್‌ ಆಗೋ ಅನ್ನೋ ಮನೆಯವರಿಗೆ, ನಾಳೆಯ ಮೇಲಿನ ನಂಬಿಕೆಯಿಂದಲೇ ನಾನು ನಿರ್ದೇಶಕನಾಗಿ ತೋರಿಸ್ತೀನಿ. ಆಮೆಲೆ ನಿಮ್ಮ ಮಾತು ಕೇಳ್ತೀನಿ ಅನ್ನುತ್ತಲೇ ವರ್ಷಗಳನ್ನು ಕಳೆದಿದ್ದೇನೆ. ಇಲ್ಲಿ ಉಪವಾಸ, ವನವಾಸ ಮಾಡಿಕೊಂಡೇ ಇಷ್ಟು ವರ್ಷ ಲೈಫು ತಳ್ಳಿದ್ದೇನೆ. ಒಂದೊಳ್ಳೆಯ ನಾಳೆಗೋಸ್ಕರ ಕಾಯುತ್ತಿದ್ದೇನೆ ಎನ್ನುತ್ತಲೇ ಭಾವುಕರಾಗುತ್ತಾರೆ ಆ ಸಹಾಯಕ ನಿರ್ದೇಶಕ.

ಅದೇನೆ ಇರಲಿ, ಇಲ್ಲಿ ತುಂಬಾನೇ ಸ್ಟ್ರಗಲಿಂಗ್‌ ಇದೆ. ಕೇವಲ ಸಹ ನಿರ್ದೇಶಕ, ಸಹಾಯಕ ನಿರ್ದೇಶಕರಿಗೆ ಈ ಮಾತು ಅನ್ವಯಿಸೋದಿಲ್ಲ. ಸಿನಿಮಾರಂಗವನ್ನು ಆಯ್ಕೆ ಮಾಡಿಕೊಂಡು ಬಂದ ಪ್ರತಿಯೊಬ್ಬರಿಗೂ ಈ ಮಾತು ಅನ್ವಯಿಸುತ್ತದೆ. ಕೆಲವರಿಗೆ ಸಿನಿಮಾ ಅನ್ನೋದು ಕಲರ್‌ಫುಲ್‌ ಜಗತ್ತು. ಆದರೆ, ಇಲ್ಲಿ ಮಾತ್ರ ಕಲರ್‌ ಕಲರ್‌ ಕಾಗೆ ಹಾರಿಸೋ ಮಂದಿ ಸಾಕಷ್ಟು ಇದ್ದಾರೆ. ಹಾಗಾಗಿ, ಪ್ರತಿಭಾವಂತರು ಕಷ್ಟದ ಮೆಟ್ಟಿಲುಗಳಲ್ಲೇ ಏರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಅದೆಷ್ಟೋ ಸಹ, ಸಹಾಯಕ ನಿರ್ದೇಶಕರು ಕೊರೊನಾ ಸಮಸ್ಯೆಗೆ ಸಿಲುಕಿ ತಮ್ಮ ಬಾಡಿಗೆ ಮನೆ, ರೂಮ್‌ ಖಾಲಿ ಮಾಡಿಕೊಂಡು ಊರು ಸೇರಿಕೊಂಡಿದ್ದುಂಟು. ಅನೇಕರು ತಮ್ಮ ಗೆಳೆಯರ ಜೊತೆ ಸೇರಿದ್ದುಂಟು, ಇನ್ನೂ ಕೆಲವರು ಈ ಫೀಲ್ಡ್‌ ಮೇಲೆ ನಂಬಿಕೆ ಇಟ್ಟು, ಕಷ್ಟಾನೋ, ಸುಖಾನೋ ಇಲ್ಲೇ ಇರ್ತೀವಿ ಅಂತ ಸಾಲ, ಸೂಲ ಮಾಡಿಕೊಂಡೇ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

Categories
ಸಿನಿ ಸುದ್ದಿ

ಇವರ ಕಥೆ ಕೇಳಿ ಬೈದಿದ್ದ ಸಿದ್ಧಲಿಂಗಯ್ಯ ಸಿನ್ಮಾ ಮಾಡಲು ಮುಂದಾಗಿದ್ದರು !

6ನೇ ಕ್ಲಾಸ್‌ ಓದಿದವರ ಸಿನ್ಮಾ ಪ್ರೀತಿ

ಈ ಬಣ್ಣದ ಲೋಕವೇ ಹಾಗೆ, ಇಲ್ಲಿ ಒಮ್ಮೆ ಒಳನುಗ್ಗಿದರೆ ಮುಗೀತು. ಅದು ಸೋಲಿರಲಿ, ಗೆಲುವಿರಲಿ ಮತ್ತೆ ಮತ್ತೆ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರಬೇಕು. ಇದು ಈಗಿನದ್ದಲ್ಲ. ಸಿನಿಮಾ ಹುಟ್ಟು ಯಾವಾಗ ಶುರುವಾಯ್ತೋ ಅಂದಿನಿಂದಲೂ ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಈಗಾಗಲೇ ಅಂತಹ ಅನೇಕ ಪ್ರತಿಭೆಗಳು ಸಿನಿಮಾರಂಗ ಸ್ಪರ್ಶಿಸಿದ್ದು, ಗೆಲುವು ಕಾಣುವ ಉತ್ಸಾಹದಲ್ಲೇ ಒಂದಷ್ಟು ಪ್ರಯತ್ನಗಳೊಂದಿಗೆ ಮರಳಿ ಯತ್ನ ಮಾಡುತ್ತಲೇ ಇದ್ದಾರೆ. ಅದೆಷ್ಟೋ ಮಂದಿ ಸಿನಿಮಾವನ್ನೇ ಬದುಕಾಗಿಸಿಕೊಂಡಿದ್ದಾರೆ. ಸದ್ದಿಲ್ಲದೆಯೇ ಈ ಕಲೆಯ ಕಾಯಕ ಮಾಡುತ್ತಲೇ ಬದುಕು ಸವೆಸುತ್ತಿದ್ದಾರೆ. ಅಂತಹವರ ಸಾಲಿಗೆ ಶ್ರೀಧರ್‌ ಶೆಟ್ಟಿ ಕೂಡ ಒಬ್ಬರು.
ಶ್ರೀಧರ್‌ ಶೆಟ್ಟಿ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಕಳೆದ ಎರಡುವರೆ ದಶಕಗಳಿಗೂ ಹೆಚ್ಚು ಕಾಲ ಇವರಿಗೆ ಸಿನಿಮಾರಂಗದ ಒಡನಾಟವಿದೆ. ಇಷ್ಟು ವರ್ಷಗಳ ಅನುಭವ ಇರುವ ಅವರು, ಹಲವು ಧಾರಾವಾಹಿಗಳಿಗೆ ಕಥೆ, ಸಂಭಾಷಣೆ, ಚಿತ್ರಕಥೆ ಬರೆದಿದ್ದಾರೆ. ಇದರೊಂದಿಗೆ ಈವರೆಗೆ ಮೂರು ಸಿನಿಮಾ ನಿರ್ದೇಶಿಸಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಮೂರು ಸಿನಿಮಾಗಳನ್ನು ನಿರ್ದೇಶಿಸಲು ತಯಾರಿ ನಡೆಸಿದ್ದಾರೆ. ಇಷ್ಟಕ್ಕೂ ಈ ಶ್ರೀಧರ್‌ ಶೆಟ್ಟಿ ಯಾರು ಎಂಬ ಪ್ರಶ್ನೆಗೆ ಈ ಕೆಳಗಿರುವ ಸುದ್ದಿ ನೋಡಿ.

“1993 ರಲ್ಲಿ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರನ್ನು ಭೇಟಿಯಾದ ಶ್ರೀಧರ್,‌ ತಾವು ಬರೆದ ಕಥೆ ಹೇಳಿದಾಗ, ಸಿದ್ಧಲಿಂಗಯ್ಯ ಅವರು “ಡಬ್ಬಾ ಥರಾ ಇದೆ ಎಂದು ಬೈದು ಕಳಿಸಿದ್ದರಂತೆ”

ಸಿನಿಮಾರಂಗ ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ. ಆದರೆ, ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೆ. ಇಲ್ಲಿ ಪ್ರತಿಭೆ ಮತ್ತು ಅದೃಷ್ಟ ಇದ್ದರೆ ಯಾವುದೇ ಡಿಗ್ರಿಯ ಅಗತ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಶ್ರೀಧರ್‌ ಶೆಟ್ಟಿ ಬಗ್ಗೆ ಹೇಳೋದಾದರೆ, ಈಗಾಗಲೇ ಬದುಕಿನ ಅರ್ಧಸೆಂಚುರಿ ಮುಗಿಸಿ ಮುನ್ನೆಡೆಯುತ್ತಿದ್ದಾರೆ. ಆದರೆ, ಅವರ ಸಿನಿಮಾ ಉತ್ಸಾಹ ಮಾತ್ರ ಕುಗ್ಗಿಲ್ಲ. ಇವರು ಓದಿದ್ದು ಕೇವಲ 6 ನೇ ತರಗತಿ. ಹಾಗಂತ, ಇವರು ಬದುಕು ಬಲುಕಷ್ಟ ಅಂದುಕೊಳ್ಳಲೂ ಇಲ್ಲ. ಓದುವ ಆಸಕ್ತಿ ಇಟ್ಟುಕೊಳ್ಳದ ಇವರು ಸಿನಿಮಾ ಆಸಕ್ತಿ ಬೆಳೆಸಿಕೊಂಡರು. ಓದುವ ದಿನಗಳಲ್ಲೇ ಹಾಡು ಹಾಡುವ ಗೀಳು ಇಟ್ಟುಕೊಂಡವರು. ಕಾಲಕ್ರಮೇಣ ಇವರು ಕಥೆ ಬರೆಯುವುದರ ಕಡೆ ವಾಲಿದರು. ಆ ಸಮಯದಲ್ಲಿ ನಾಲ್ಕು ಕಥೆ ಬರೆದಿಟ್ಟುಕೊಂಡಿದ್ದರು. ಆಗಿನ ಒಂದಷ್ಟು ತಿಂಗಳ ಹಾಗೂ ವಾರದ ಪತ್ರಿಕೆಗಳಲ್ಲಿ ಪ್ರಕಟಿಸಲು ಕಳುಹಿಸಿದರೂ, ಇವರ ಕಥೆ ರಿಜೆಕ್ಟ್‌ ಆಗಿತ್ತು. ಬೇಸರಿಸಿಕೊಳ್ಳದ ಅವರು ಸಂಪಂಗಿರಾಮ ನಗರದ ದೇವರಾಜು ಎಂಬುವವರು ಗಣೇಶ ಹಬ್ಬದಲ್ಲಿ ಮಾಡುತ್ತಿದ್ದ ನಾಟಕವೊಂದರಲ್ಲಿನಟಿಸಲು ಅವಕಾಶ ಕೊಟ್ಟಿದ್ದಾರೆ. ನಟನೆಯ ಗಂಧ ತಿಳಿಯದ ಅವರಿಗೆ ಅಲ್ಲಿಂದ ನಟನೆ ಕಡೆ ಆಸಕ್ತಿ ಬೆಳೆದಿದೆ. ಅಲ್ಲಿಂದಲೇ ಅವರು ಸಿನಮಾ ಕಡೆ ವಾಲುವಂತಾಗಿದೆ. ನಟನೆ ಜೊತೆ ಕಥೆ ಬರೆಯುವ ಹುಚ್ಚು ಇಟ್ಟುಕೊಂಡಿದ್ದ ಶ್ರೀಧರ್‌ ಶೆಟ್ಟಿ, 1993 ರಲ್ಲಿ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರನ್ನು ಭೇಟಿಯಾದ ಶ್ರೀಧರ್‌ ತಾವು ಬರೆದ ಕಥೆ ಹೇಳಿದಾಗ, ಸಿದ್ಧಲಿಂಗಯ್ಯ ಅವರು “ಡಬ್ಬಾ ಥರಾ ಇದೆ ಎಂದು ಬೈದು ಕಳಿಸಿದ್ದರಂತೆ. ಅಷ್ಟಾದರೂ ಶ್ರೀಧರ್‌ ಕಥೆ ಬರೆಯುವುದನ್ನು ನಿಲ್ಲಿಸದೆ, ಸಿದ್ಧಲಿಂಗಯ್ಯ ಇರುತ್ತಿದ್ದ ಟೂರಿಸ್ಟ್‌ ಹೋಟೆಲ್‌ಗೆ ಹೋಗಿ ಕಥೆ ಹೇಳಲು ಕಾಡಿದ್ದಾರೆ. ಕೊನೆಗೆ ಇವರ ಕಾಟ ತಾಳಲಾರದೆ, ಸಿದ್ಧಲಿಂಗಯ್ಯ ಕೂರಿಸಿಕೊಂಡು ಕಥೆ ಬರೆಯುವುದನ್ನು ಹೇಳಿಕೊಟ್ಟಿದ್ದಾರೆ. ಆ ಬಳಿಕ ಶ್ರೀಧರ್‌, ಮತ್ತೊಂದು ಹೊಸ ಕಥೆ ಬರೆದುಕೊಂಡು ಹೋಗಿ ಕಥೆ ಹೇಳಿದಾಗ, ಪರವಾಗಿಲ್ಲ ಅರಿತಿದ್ದೀಯ ಅಂತ ಹೇಳಿದ್ದಲ್ಲದೆ, ನಾನೇ ಈ ಕಥೆಯನ್ನು ಸಿನಿಮಾ ಮಾಡ್ತೀನಿ ಎಂದಿದ್ದಾರೆ. ಆ ವೇಳೆ “ಪ್ರೇಮ ಪ್ರೇಮ” ಸಿನಿಮಾ ಸೋಲು ಕಂಡಿದ್ದರಿಂದ ಅವರು ಸಿನಿಮಾ ಮಾಡುವ ಪ್ರಯತ್ನ ಮಾಡಲಿಲ್ಲ. ಅಂದು ಶ್ರೀಧರ್‌ ಅವರ ಕಥೆಗೆ ಸಿದ್ಧಲಿಂಗಯ್ಯ ಅವರು ಇಟ್ಟ ಹೆಸರು, “ಬನವಾಸಿಯ ಬಯಲಲ್ಲಿ”. ಇಂದಿಗೂ ಆ ಕಥೆ ಹಾಗೆಯೇ ಇದೆ ಎಂಬುದು ಶ್ರೀಧರ್‌ ಶೆಟ್ಟಿ ಮಾತು.

ಇಷ್ಟಾದರೂ ಶ್ರೀಧರ್‌ ಸಿನಿಮಾ ಮೇಲಿನ ಆಸಕ್ತಿ ಕಳೆದುಕೊಳ್ಳದೆ, ಮರಳಿ ಯತ್ನವ ಮಾಡು ಎಂಬಂತೆ ಅವಕಾಶಕ್ಕಾಗಿ ಅಲೆದಾಡಿದ್ದಾರೆ. ಕೊನೆಗೆ ಕಿರುತೆರೆ ನಿರ್ದೇಶಕ ಅಮರ್‌ದೇವ್‌, ನಾಗತಿಹಳ್ಳಿ ಚಂದ್ರಶೇಖರ್‌ ಅವರ ಸಂಪರ್ಕ ಬೆಳೆಸಿಕೊಂಡು “ವಠಾರ” ಧಾರಾವಾಹಿಗೆ ಬರೆಯುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸುಮಾರು 600 ಸಂಚಿಕೆಗಳಿಗೆ ಬರೆಯುವುದರ ಜೊತೆಗೆ 300 ಸಂಚಿಕೆಗಳಲ್ಲಿ ನಟಿಸುವ ಅವಕಾಶವನ್ನೂ ಪಡೆದ ಶ್ರೀಧರ್‌, ನಾಗತಿಹಳ್ಳಿ ಚಂದ್ರಶೇಖರ್‌ ಅವರೊಂದಿಗೆ “ಬೆಳ್ಳಿಚುಕ್ಕಿ”ಯಲ್ಲೂ ಬರೆಯುವ ಅವಕಾಶ ಪಡೆದಿದ್ದಾರೆ. ಆದರೆ, 6ನೇ ತರಗತಿ ಓದಿದವನು ಹೇಗೆಲ್ಲಾ ಬರೆಯಬಹುದು ಎಂಬ ಅನುಮಾನದ ಮಾತುಗಳನ್ನಾಡಿದ್ದರಿಂದ, ಬೇಸತ್ತು, ಅಲ್ಲಿಂದ ಹೊರಬಂದಿದ್ದಾರೆ. ಕಾಲ ಕ್ರಮೇಣ ಅವರು ಸಿನಿಮಾ ನಿರ್ದೇಶನ ಕಡೆ ಮುಖ ಮಾಡಿದ್ದಾರೆ. “ಚಕ್ರ ಸುಳಿ” ಎಂಬ ಸಿನಿಮಾಗೆ ಕೈ ಹಾಕಿದ್ದಾರೆ. ಆ ಸಿನಿಮಾ ಮುಗಿಯುವ ಹಂತದಲ್ಲೇ ಅವರು “ಜನುಮದ ಸ್ನೇಹಿತರು” ಚಿತ್ರ ಮಾಡಿದ್ದಾರೆ. ಆ ಚಿತ್ರದ ಹೀರೋ ರೋಹಿತ್‌ ಶೆಟ್ಟಿ ಅವರು “ಆರೋಹಣ” ಚಿತ್ರ ನಿರ್ದೇಶನಕ್ಕೆ ಅವಕಾಶವನ್ನೂ ಕೊಟ್ಟಿದ್ದಾರೆ. ಈಗ ಅವರ “ಚಕ್ರ ಸುಳಿ” ಬಿಡುಗಡೆಗೆ ಸಿದ್ಧಗೊಂಡಿದೆ. ಕೈಯಲ್ಲಿ “ಮ್ಯಾಜಿಕ್‌ ಮನೆ” ಚಿತ್ರವಿದೆ. ಕಳೆದ ಯುಗಾದಿಯಲ್ಲಿ ಪೂಜೆಯಾಗಿದೆ. ಆದರೆ, ಲಾಕ್‌ಡೌನ್‌ ಆಗಿದ್ದರಿಂದ ಅದು ಸದ್ಯಕ್ಕೆ ಬ್ರೇಕ್‌ನಲ್ಲಿದೆ. ಇದರೊಂದಿಗೆ ಮೈಸೂರಿನ ರವಿ ಮತ್ತು ಅರ್ಬಾಜ್‌ ಎಂಬುವವರ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ತಡವಾದರೂ, ಅವಕಾಶ ಪಡೆದ ಶ್ರೀಧರ್‌, ಕನ್ನಡ ಚಿತ್ರರಂಗದಲ್ಲಿ ಚಂದದ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಅನುಭವ ಹೊಂದಿರುವ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅವರಿಗೆ ಸೂಕ್ತ ಕಾಲದಲ್ಲಿ ಅವಕಾಶ ಸಿಗಬೇಕಷ್ಟೆ. ಇಲ್ಲಿ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡರೆ, ಮುಂದಿನ ದಿನಗಳಲ್ಲಿ ಒಳ್ಳೆಯ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ.

Categories
ಸಿನಿ ಸುದ್ದಿ

ಲಹರಿ ಈಗ ಕೋಟಿ ಒಡೆಯ!

ವಜ್ರ ಪದಕ ಖುಷಿಯಲ್ಲಿ ಲಹರಿ ಮ್ಯೂಸಿಕ್‌ ಸಂಸ್ಥೆ

* 9 ವರ್ಷಗಳ ಕಠಿಣ ಶ್ರಮ * 6500 ಹಾಡುಗಳು * 4000 ಚಿತ್ರಗಳ ಟೀಸರ್‌, ಟ್ರೇಲರ್‌ * ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲೂ ಹವಾ * ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನ

ಮನೋಹರ್‌ ನಾಯ್ಡು, ವೇಲು

” ಯಾವುದೇ ಒಂದು ಸಾಧನೆಯ ಹಿಂದೆ ಒಂದು ಕಥೆ ಇರುತ್ತೆ. ಅಲ್ಲಿ ರಾತ್ರಿ-ಹಗಲಿನ ಕಠಿಣ ಶ್ರಮ ಇದ್ದೇ ಇರುತ್ತೆ. ಲಹರಿ ಮ್ಯೂಸಿಕ್‌ ಸಂಸ್ಥೆ ಕೂಡ ಅಂಥದ್ದೊಂದು ಕಠಿಣ ಶ್ರಮದ ಮೇಲೆಯೇ ಇಂದು ದಕ್ಷಿಣ ಭಾರತದಲ್ಲಿ ಟಾಪ್‌ನಲ್ಲಿದೆ. ದಶಕಗಳ ಹಿಂದೆ ಕೇವಲ 500 ರುಪಾಯಿ ಬಂಡವಾಳ ಹೂಡಿ ತನ್ನ ಶ್ರದ್ಧೆಯ ಕಾಯಕ ಶುರುಮಾಡಿದ ಲಹರಿ ಸಂಸ್ಥೆ, ಈಗ ಸಾವಿರಾರು ಕೋಟಿಯ ಒಡೆಯನಾಗಿದೆ ಅಂದರೆ, ಹಿಂದಿನ ಶ್ರಮದ ಫಲವದು”

ಇದು ಸುಮಾರು ಎರಡ್ಮೂರು ದಶಕಗಳ ಹಿಂದಿನ ಮಾತು. ಆಗೆಲ್ಲಾ ಟೇಪ್‌ ರೆಕಾರ್ಡ್‌ಗಳ ಸುಗ್ಗಿ. ನಗರ, ಪಟ್ಟಣವಷ್ಟೇ ಅಲ್ಲ, ಹಳ್ಳಿಗಳಲ್ಲೂ “ಪ್ರೇಮಲೋಕ” ಚಿತ್ರದ ಹಾಡುಗಳದ್ದೇ ಹಬ್ಬ! ಟೇಪ್‌ ರೆಕಾರ್ಡ್‌ ಇದ್ದವರ ಮನೆಯಲ್ಲಂತೂ “ಪ್ರೇಮಲೋಕ” ಕ್ಯಾಸೆಟ್‌ ಫಿಕ್ಸ್.‌ ಅಷ್ಟರಮಟ್ಟಿಗೆ “ಪ್ರೇಮಲೋಕ” ಹಾಡುಗಳು ಜನಪ್ರಿಯಗೊಂಡಿದ್ದವು. ಈ ಜನಪ್ರಿಯ ಹಾಡುಗಳನ್ನು ಅಂದಿನ ಕಾಲಕ್ಕೆ ಮನೆ ಮನಸ್ಸಿಗೆ ತಲುಪಿಸಿದ್ದು ಲಹರಿ ಆಡಿಯೋ ಸಂಸ್ಥೆ. ಆ ಕಾಲಕ್ಕೇ ಲಹರಿ ಆಡಿಯೋ ಸಂಸ್ಥೆಯದು ದೊಡ್ಡ ಹೆಸರು. ಆ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದಿರುವುದಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಉನ್ನತ ಸ್ಥಾನದಲ್ಲಿದೆ. ಅಷ್ಟೇ ಆಗಿದ್ದರೆ, ಹೆಚ್ಚು ಹೇಳುವ ಅಗತ್ಯ ಇರುತ್ತಿರಲಿಲ್ಲ. ಲಹರಿ ಮ್ಯೂಸಿಕ್‌ ಸಂಸ್ಥೆ ಈಗ ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಲಹರಿ ಮ್ಯೂಸಿಕ್‌ ಸಂಸ್ಥೆ ಬರೋಬ್ಬರಿ ಒಂದು ಕೋಟಿ ಚಂದಾದಾರರನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ ಎಂಬುದೇ ಈ ಹೊತ್ತಿನ ವಿಶೇಷ.

ಲಹರಿ ಆಡಿಯೋ ಸಂಸ್ಥೆ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುವ ಮೂಲಕ ತನ್ನ ಚಂದಾದಾರರನ್ನೂ ಖುಷಿಪಡಿಸುತ್ತಿದೆ ಎಂಬುದು ಹೆಮ್ಮೆಯ ವಿಷಯ. ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಈ ಸಂಸ್ಥೆಯ ರೂವಾರಿಗಳು ಎಂಬುದು ಮತ್ತೊಂದು ಖುಷಿ. ಸಾಕಷ್ಟು ಸಂಕಷ್ಟಗಳ ಸವಾಲುಗಳನ್ನು ಎದುರಿಸಿದ ಈ ಸಹೋದರರು ಈಗ ಅನೇಕ ಉತ್ಸಾಹಿ ಯುವ ಉದ್ಯಮಿಗಳಿಗೆ, ಚಿತ್ರರಂಗದ ಹೊಸ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ. ಇಷ್ಟಕ್ಕೂ ಈ ಲಹರಿ ಮ್ಯೂಸಿಕ್‌ ಸಂಸ್ಥೆ ಖಾತೆಯಲ್ಲಿ ಒಂದು ಕೋಟಿ ಚಂದಾದಾರರು ಇದ್ದಾರೆಂದರೆ ಅದು ಲಹರಿ ಮ್ಯೂಸಿಕ್‌ ಸಂಸ್ಥೆ ಕೊಡುತ್ತಿರುವ ಗುಣಮಟ್ಟದ ಹಾಗೂ ಚಂದದ ಹಾಡುಗಳು ಕಾರಣ. ಇಷ್ಟೆಲ್ಲಾ ಪ್ರಗತಿಗೊಂಡಿರುವ ಲಹರಿ ಮ್ಯೂಸಿಕ್‌ ಸಂಸ್ಥೆ ಈಗಾಗಲೇ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಹಿಂದೆ ಯೂಟ್ಯೂಬ್‌ ಕೊಡಮಾಡುವ ಪ್ರತಿಷ್ಠಿತ ಸ್ವರ್ಣಪದಕ ಪ್ರಶಸ್ತಿಗೆ ಭಾಜನವಾಗಿದ್ದ ಲಹರಿ ಮ್ಯೂಸಿಕ್‌ ಈಗ ವಜ್ರ ಪದಕ ಪಡೆಯುವ ಉತ್ಸಾಹದಲ್ಲಿದೆ. ಅಂದಹಾಗೆ, ಈ ಅವಾರ್ಡ್‌ ಪಡೆಯುತ್ತಿರುವ ದಕ್ಷಿಣ ಭಾರತದ ಮೊದಲ ಮ್ಯೂಸಿಕ್‌ ಸಂಸ್ಥೆ ಎಂಬುದು ವಿಶೇಷ.

ಯಶಸ್ಸಿಗೆ ದಶಕದ ಕಠಿಣ ಶ್ರಮ ಕಾರಣ

ಯಾವುದೇ ಒಂದು ಸಾಧನೆಯ ಹಿಂದೆ ಒಂದು ಕಥೆ ಇರುತ್ತೆ. ಅಲ್ಲಿ ರಾತ್ರಿ-ಹಗಲಿನ ಕಠಿಣ ಶ್ರಮ ಇದ್ದೇ ಇರುತ್ತೆ. ಲಹರಿ ಮ್ಯೂಸಿಕ್‌ ಸಂಸ್ಥೆ ಕೂಡ ಅಂಥದ್ದೊಂದು ಕಠಿಣ ಶ್ರಮದ ಮೇಲೆಯೇ ಇಂದು ದಕ್ಷಿಣ ಭಾರತದಲ್ಲಿ ಟಾಪ್‌ನಲ್ಲಿದೆ. ದಶಕಗಳ ಹಿಂದೆ ಕೇವಲ 500 ರುಪಾಯಿ ಬಂಡವಾಳ ಹೂಡಿ ತನ್ನ ಶ್ರದ್ಧೆಯ ಕಾಯಕ ಶುರುಮಾಡಿದ ಲಹರಿ ಸಂಸ್ಥೆ, ಈಗ ಸಾವಿರಾರು ಕೋಟಿಯ ಒಡೆಯನಾಗಿದೆ ಅಂದರೆ, ಹಿಂದಿನ ಶ್ರಮದ ಫಲವದು. ಈ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು, “ಈ ಸಾಧನೆಗೆ ಕಾರಣ ನಾವೊಬ್ಬರೇ ಅಲ್ಲ. ನನ್ನ ಸಿಬ್ಬಂದಿಯೂ ಇದ್ದಾರೆ. ಲಹರಿ ಮ್ಯೂಸಿಕ್‌ ಸಂಸ್ಥೆ ಒಂದು ಕೋಟಿ ಚಂದಾದಾರರನ್ನು ಹೊಂದಿದೆ ಅಂದರೆ, ನಿಜಕ್ಕೂ ಸುಲಭದ ಮಾತಲ್ಲ. ಇದಕ್ಕಾಗಿ ನಾವು ಕಳೆದ ಒಂದು ದಶಕದಿಂದಲೂ ಹಗಲು-ರಾತ್ರಿ ಕಠಿಣ ಶ್ರಮಪಟ್ಟಿದ್ದರಿಂದಲೇ ಇಂದು ಈ ಪ್ರತಿಫಲ ಕಾಣುವುದಕ್ಕೆ ಕಾರಣ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ಏಕೈಕ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ ನಮ್ಮದು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸಿದೆ. ಇದೊಂದು ರೀತಿ ಡಿಜಿಟಲ್‌ ಕ್ರಾಂತಿ. ಎಲ್ಲವೂ ಡಿಜಿಟಲ್‌ಮಯ ಆಗಿದ್ದರಿಂದ ಬಹಳಷ್ಟು ಆಡಿಯೋ ಕಂಪೆನಿಗಳು ಭಯಗೊಂಡಿದ್ದು ನಿಜ. ಆಗ ನಾವು ಬೇರೆ ಏನನ್ನೂ ಯೋಚಿಸದೆ, ಲಹರಿ ಮ್ಯೂಸಿಕ್‌ ಹೆಸರಲ್ಲಿ ಸಿಂಪಲ್ಲಾಗಿ ಒಂದು ಯುಟ್ಯೂಬ್‌ ಚಾನೆಲ್‌ ಶುರುಮಾಡಿದೆವು. ಆರಂಭದಲ್ಲಿ ಯಾವುದೇ ನಿರೀಕ್ಷೆಗಳಿಲ್ಲದೆ ಕೆಲಸ ಮಾಡಿದೆವು. ಜೀರೋದಿಂದ ಆರಂಭಿಸಿದ ಈ ಸಂಸ್ಥೆ ಈಗ ಉನ್ನತಮಟ್ಟದಲ್ಲಿದೆ. ಸಂಗೀತ ಕ್ಷೇತ್ರ ಎಂಬುದು ನಮ್ಮ ಪಾಲಿಗೆ ನಮ್ಮ ತಾಯಿ ಇದ್ದಂತೆ. ಇದಕ್ಕೆ ಚಿತ್ರರಂಗದ ಎಲ್ಲರೂ ಕಾರಣ ಎಂಬುದು ಲಹರಿ ವೇಲು ಮಾತು.

” ಒಂದು ಸಂಸ್ಥೆಯ ಬೆಳವಣಿಗೆ ಹಿಂದೆ ಮಹಾನ್‌ ವ್ಯಕ್ತಿಯೊಬ್ಬರು ಇದ್ದೇ ಇರುತ್ತಾರೆ. ನಮ್ಮ ಈ ಲಹರಿ ಮ್ಯೂಸಿಕ್‌ ಸಂಸ್ಥೆಗೆ ನನ್ನ ಅಣ್ಣ ಮನೋಹರ್‌ ನಾಯ್ಡು ಅವರೇ ಬೆನ್ನೆಲುಬು. ನಮಗೆ ಅವರೇ ನಿಜವಾದ ಕ್ಯಾಪ್ಟನ್.‌ ನಾನು ಕೇವಲ ಈ ಲಹರಿ ಆಡಿಯೋ ಸಂಸ್ಥೆಯ ಉದ್ಯೋಗಿೈಷ್ಟೇ. ಇನ್ನು, ನನ್ನ ಅಣ್ಣನ ಮಕ್ಕಳಾದ ನವೀನ್‌ ಕುಮಾರ್‌ ಹಾಗೂ ಚಂದ್ರು ವಿದೇಶದಲ್ಲಿ ಓದಿದವರು. ಅವರು ತಾಂತ್ರಿಕತೆಯಲ್ಲಿ ಸಾಕಷ್ಟು ತಿಳಿದುಕೊಂಡಿದ್ದಾರೆ. ಅವರ ಆ ತಾಂತ್ರಿಕ ತಿಳುವಳಿಕೆ ಕೂಡ ನಮ್ಮ ಆಡಿಯೋ ಸಂಸ್ಥೆಯ ವ್ಯಾಪಾರ ವಹಿವಾಟುಗೆ ಸಹಕಾರಿಯಾಗಿದೆ ” 

ಲಹರಿಗೆ ನನ್ನ ಸಹೋದರ ಬೆನ್ನೆಲುಬು

ಒಂದು ಸಂಸ್ಥೆಯ ಬೆಳವಣಿಗೆ ಹಿಂದೆ ಮಹಾನ್‌ ವ್ಯಕ್ತಿಯೊಬ್ಬರು ಇದ್ದೇ ಇರುತ್ತಾರೆ. ನಮ್ಮ ಈ ಲಹರಿ ಮ್ಯೂಸಿಕ್‌ ಸಂಸ್ಥೆಗೆ ನನ್ನ ಅಣ್ಣ ಮನೋಹರ್‌ ನಾಯ್ಡು ಅವರೇ ಬೆನ್ನೆಲುಬು. ನಮಗೆ ಅವರೇ ನಿಜವಾದ ಕ್ಯಾಪ್ಟನ್.‌ ನಾನು ಕೇವಲ ಈ ಲಹರಿ ಆಡಿಯೋ ಸಂಸ್ಥೆಯ ಉದ್ಯೋಗಿೈಷ್ಟೇ. ಇನ್ನು, ನನ್ನ ಅಣ್ಣನ ಮಕ್ಕಳಾದ ನವೀನ್‌ ಕುಮಾರ್‌ ಹಾಗೂ ಚಂದ್ರು ವಿದೇಶದಲ್ಲಿ ಓದಿದವರು. ಅವರು ತಾಂತ್ರಿಕತೆಯಲ್ಲಿ ಸಾಕಷ್ಟು ತಿಳಿದುಕೊಂಡಿದ್ದಾರೆ. ಅವರ ಆ ತಾಂತ್ರಿಕ ತಿಳುವಳಿಕೆ ಕೂಡ ನಮ್ಮ ಆಡಿಯೋ ಸಂಸ್ಥೆಯ ವ್ಯಾಪಾರ ವಹಿವಾಟುಗೆ ಸಹಕಾರಿಯಾಗಿದೆ. ಇಲ್ಲಿಯವರೆಗೆ ಸುಮಾರು 6500 ಹಾಡುಗಳು ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಹೊರಬಂದಿವೆ. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಗಳ ಟೀಸರ್‌, ಟ್ರೇಲರ್‌ ಬಿಡುಗಡೆಗೊಂಡಿದೆ. ಕೇವಲ ಕನ್ನಡಕ್ಕೆ ಮಾತ್ರವಲ್ಲ, ತೆಲುಗು, ತಮಿಳು, ಮಲಯಾಳಂ ಭಾಷೆಗೂ ಇದು ವಿಸ್ತರಣೆಯಾಗಿದೆ. ಇವತ್ತು ಈ ಲಹರಿ ಮ್ಯೂಸಿಕ್‌ ಸಂಸ್ಥೆ ಈ ಎತ್ತರಕ್ಕೆ ಬೆಳೆದಿದೆ ಅಂದರೆ, ಅದರ ಹಿಂದೆ ದೊಡ್ಡ ಶ್ರಮವಿದೆ. ನೂರಾರು ಕೋಟಿ ಹಣ ಹೂಡಿಕೆ ಮಾಡಿದ್ದೇವೆ. ದೊಡ್ಡ ಮಟ್ಟದ ಯಶಸ್ವಿ ಚಿತ್ರಗಳ ಹಾಡುಗಳಿಗೆ ಕೋಟಿಗಟ್ಟಲೆ ಖರ್ಚು ಮಾಡಿ ಹಕ್ಕು ಖರೀದಿಸಿದ್ದೇವೆ. ಪ್ರತಿ ಹಂತದಲ್ಲೂ ತುಂಬಾನೇ ರಿಸ್ಕ್‌ ತೆಗೆದುಕೊಂಡೇ ಕೆಲಸ ಮಾಡಿದ್ದೇವೆ ಅನ್ನೋದು ವೇಲು ಹೇಳಿಕೆ.

ಭಾವಗೀತೆಗೆ ಪ್ರತ್ಯೇಕ ಚಾನೆಲ್‌

ಬಹುಶಃ ಭಾವಗೀತೆಗೆಂದೇ ಪ್ರತ್ಯೇಕ ಯೂಟ್ಯೂಬ್‌ ಚಾನೆಲ್‌ ವಿರಳ. ಅದರಲ್ಲೂ ಸಂಗೀತ ಕ್ಷೇತ್ರದಲ್ಲಿ ಭಾವಗೀತೆ ಹಾಡುಗಳನ್ನು ಎಲ್ಲೆಡೆ ಪಸರಿಸಲು ಲಹರಿ ಮ್ಯೂಸಿಕ್‌ ಸಂಸ್ಥೆ ಪ್ರತ್ಯೇಕ ಯೂಟ್ಯೂಬ್‌ ಚಾನೆಲ್‌ ಮಾಡಿದ್ದು ವಿಶೇಷತೆಗಳಲ್ಲೊಂದು. ಇದು ಭಾರತೀಯ ಚಿತ್ರರಂಗದಲ್ಲೇ ಮೊದಲು. ಹಾಗಾಗಿ ಇದೊಂದು ಮೈಲಿಗಲ್ಲು ಎನ್ನಬಹುದು. ಸದ್ಯಕ್ಕೆ ಭಾವಗೀತೆಗೆಂದೇ ವಿಶೇಷವಾಗಿ ರೂಪಿಸಿರುವ ಯೂಟ್ಯೂಬ್‌ ಚಾನೆಲ್‌ನಲ್ಲಿ ಈಗ ಎಂಟು ಲಕ್ಷ ಚಂದಾದಾರರಿದ್ದಾರೆ. ಇನ್ನು ಎರಡು ಲಕ್ಷ ಚಂದಾದಾರರಾದರೆ, ನಿಜಕ್ಕೂ ಇದೊಂದು ಹಿರಿಮೆ. ಈ ಕುರಿತು ಮಾತನಾಡುವ ವೇಲು, ಅವರು, ಆರಂಭದಲ್ಲಿ ಸಣ್ಣದ್ದಾಗಿ ಶುರು ಮಾಡಿದ ಈ ಸಂಸ್ಥೆ ಕೋಟಿ ಮಂದಿ ಚಂದಾದಾರರನ್ನು ಹೊಂದುತ್ತೆ ಎಂದು ಅಂದಾಜು ಇರಲಿಲ್ಲ. ಯಾವಾಗ ಡಿಜಿಟಲ್‌ ಮಾಧ್ಯಮದ ಹವಾ ಹೆಚ್ಚಾಯ್ತೋ, ಕೆಲವು ಆಡಿಯೋ ಕಂಪೆನಿಗಳು ಮುಚ್ಚಬೇಕಾಯ್ತು. ಆಗ ಇನ್ನೇನು ಸಂಗೀತ ಕ್ಷೇತ್ರದಲ್ಲಿರುವ ಆಡಿಯೋ ಕಂಪೆನಿಗಳು ಬಾಗಿಲು ಮುಚ್ಚುತ್ತವೆ ಅಂತ ಜನ ಮಾತಾಡತೊಡಗಿದರು. ಕೆಲವರು ಆಡಿಯೋ ಕಂಪೆನಿ ಮಾರಿದರು. ಆದರೆ, ನಾವು, ನೋಡೋಣ, ನಡೆಸೋಣ ಅಂತ ತಾಳ್ಮೆಯಿಂದ ಕಾದು ನೋಡಿದೆವು. ರಾತ್ರಿ-ಹಗಲು ಕಷ್ಟಪಟ್ಟೆವು. ಫಲ ಸಿಕ್ಕಿತು. ಈ ಸಾಧನೆ ಹಿಂದೆ ಹಲವರಿದ್ದಾರೆ. ನಮ್ಮ ಕಂಪೆನಿ ಮೇಲೆ ನಂಬಿಕೆ ಇಟ್ಟು ಬಂದವರಿಗೆ ಇದುವರೆಗೂ ಸಮಸ್ಯೆ ಆಗಿಲ್ಲ ಎಂಬುದು ಅವರ ಮಾತು.

Categories
ಸಿನಿ ಸುದ್ದಿ

ಅಭಿಮಾನಿಗಳೆ  ನನ್ನ  ಉಳಿಸಿ..!

  1. ಕಳೆದು ಹೋಗುತ್ತಿರುವ ಚಿತ್ರಮಂದಿರಗಳ ಗೋಳು ಕೇಳುತ್ತೀರಾ? 

” ಶುಕ್ರವಾರ ಬಂತೆಂದರೆ ಸಾಕು, ನನ್ನ ಎದುರು ಜನಜಾತ್ರೆ. ಹಲಗೆ, ಡೊಳ್ಳು, ಶಿಳ್ಳೆ, ಕೇಕೆ ಜೊತೆ ಕುಣಿತದ ಸಂಭ್ರಮವೇ ತುಂಬಿ ತುಳುಕುತ್ತಿತ್ತು. ಹಾರ, ತುರಾಯಿ ಹಾರಾಟ ಜೋರಾಗಿಯೇ ಇರುತ್ತಿತ್ತು. ಅದೆಷ್ಟೋ ಜನರನ್ನು ಕುಣಿಸಿದ್ದೇನೆ, ಖುಷಿಪಡಿಸಿದ್ದೇನೆ. ರಂಜಿಸಿದ್ದೇನೆ. ಹೇಳಲಾಗದಷ್ಟು ಸಂಭ್ರಮಕ್ಕೆ ಕಾರಣವಾಗಿದ್ದೇನೆ. ಆದರೆ, ಕೊರೊನಾ ಎಂಬ ಮಹಾಮಾರಿ ನನ್ನಲ್ಲಿದ್ದ ಆ ಖುಷಿಯನ್ನು ದೂರಪಡಿಸಿತ್ತಲ್ಲದೆ, ನನ್ನೊಂದಿಗಿದ್ದ ನೌಕರರನ್ನೂ ನನ್ನಿಂದ ದೂರ ಮಾಡುವಂತಹ ಪರಿಸ್ಥಿತಿಗೆ ನೂಕಿಬಿಟ್ಟಿದೆ. ಇಷ್ಟೇ ಆಗಿದ್ದರೆ, ನನ್ನ ನೋವನ್ನು ನಾನೀಗ ತೋಡಿಕೊಳ್ಳುತ್ತಿರಲಿಲ್ಲ. ಕೊರೊನಾ ನೆಪ ಹೇಳಿ ಇನ್ನು ಮುಂದೆ ಸಂಪೂರ್ಣವಾಗಿಯೇ ನನ್ನನ್ನು ಕಡೆಗಣಿಸುತ್ತಾರೇನೋ ಎಂಬ ಭಯ ನನ್ನನ್ನು ಕಾಡುತ್ತಿದೆ…”

– ಇದು ಯಾರೋ ಹೇಳಿದ ಮಾತಲ್ಲ. ಪ್ರಸ್ತುತ ರಾಜ್ಯದಲ್ಲಿರುವ ಕೆಲವು ಚಿತ್ರಮಂದಿರಗಳು ಹೇಳಿಕೊಳ್ಳುತ್ತಿರುವ ಪರಿ. ಹೌದು, ಕೊರೊನಾ ಇಡೀ ಜಗತ್ತನ್ನೇ ಕಾಡಿದ್ದು ಸುಳ್ಳಲ್ಲ. ಇದಕ್ಕೆ ಚಿತ್ರರಂಗವೂ ಹೊರತಲ್ಲ ಬಿಡಿ. ಕೊರೊನಾದಿಂದ ಅದೆಷ್ಟೋ ಮಂದಿ ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. ನೆಲೆ ಕಾಣದೆ ಪರಿತಪಿಸುತ್ತಿದ್ದಾರೆ. ಹೊಸ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇಡೀ ಜಗತ್ತಿನ ವ್ಯಾಪಾರ-ವಹಿವಾಟು ಕುಸಿದಿದ್ದಷ್ಟೇ ಅಲ್ಲ, ಕಷ್ಟಪಟ್ಟು ಕಟ್ಟಿಕೊಂಡಿದ್ದ ಬದುಕು ಕೂಡ ರಪ್ಪನೆ ಕಳಚಿಬಿದ್ದಿದೆ. ಇಲ್ಲೀಗ ಕಳಚಿ ಬೀಳುತ್ತಿರುವ ಚಿತ್ರಮಂದಿರಗಳ ಬಗ್ಗೆಯೂ ಹೇಳಲೇಬೇಕಿದೆ.

ಹೌದು, ಕಪ್ಪು-ಬಿಳುಪು ಸಿನಿಮಾಗಳ ಕಾಲದಿಂದಲೂ ದಶಕಗಳ ಕಾಲ ಜನರನ್ನು ರಂಜಿಸುತ್ತಿದ್ದ ಅದೆಷ್ಟೋ ಚಿತ್ರಮಂದಿರಗಳು ಈಗಲೂ ಇವೆ. ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು, ಪಟ್ಟಣಗಳಲ್ಲಿದ್ದ ಕೆಲವು ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದು ಗೊತ್ತೇ ಇದೆ. ಜನರಿಗೆ ರಸದೌತಣ ನೀಡುತ್ತಿದ್ದ ಚಿತ್ರಮಂದಿರಗಳು ಮಾಲೀಕರ ನಿರ್ಧಾರದಿಂದಾಗಿ ನೆಲಸಮಗೊಂಡು ಕಮರ್ಷಿಯಲ್‌ ಬಿಲ್ಡಿಂಗ್‌ ರೂಪ ಪಡೆದುಕೊಂಡಿವೆ. ಈಗ ಕೊರೊನೊ ತಂದ ಅವಾಂತರದಿಂದಾಗಿ, ಇದ್ದ ಬದ್ದ ಕೆಲವು ಚಿತ್ರಮಂದಿರಗಳೂ ಕೂಡ ಸಂಪೂರ್ಣ ಮುಚ್ಚುವ ಸಾಧ್ಯತೆ ಇದೆ. ಇದಕ್ಕೆ ಕಾರಣ, ಮತ್ತದೇ ಕೊರೊನಾ!

ಇದು ನಿಜಕ್ಕೂ ನೋವಿನ ಸಂಗತಿ

ದಶಕಗಳ ಕಾಲ ಸಾವಿರಾರು ಸಿನಿಮಾಗಳ ಪ್ರದರ್ಶನ ಮಾಡಿರುವ ಕೆಲವು ಚಿತ್ರಮಂದಿರಗಳು ಕೊರೊನಾ ಹೊಡೆತಕ್ಕೆ ಬಲಿಯಾಗುತ್ತಿವೆ ಎಂಬ ಮಾತು ಜೋರಾಗಿಯೇ ಕೇಳಿಬರುತ್ತಿವೆ. ಇದು ನಿಜವಾದರೂ, ಎಷ್ಟರ ಮಟ್ಟಿಗೆ ಅದು ದೃಢ ಎಂಬುದು ಸದ್ಯಕ್ಕೆ ಸ್ಪಷ್ಟವಿಲ್ಲ. ಆದರೂ, ಒಂದಷ್ಟು ಚಿತ್ರಮಂದಿರಗಳು ಪುನಃ ಬಾಗಿಲು ತೆಗೆಯುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಲೇ ಇದೆ. ಎಲ್ಲಾ ಸರಿ, ಅಷ್ಟಕ್ಕೂ ಚಿತ್ರಮಂದಿರಗಳೇಕೆ ಮುಚ್ಚುವ ಪರಿಸ್ಥಿತಿಯಲ್ಲಿವೆ ಎಂಬ ಪ್ರಶ್ನೆಗೆ ಉತ್ತರ, ಕೊರೊನಾ ತಂದ ನಷ್ಟ.

ನಿಜ, ಕೊರೊನಾದಿಂದಾಗಿ ಲಾಕ್‌ಡೌನ್‌ ಮಾಡಬೇಕಾದ ಪರಿಸ್ಥಿತಿ ಬಂದೊದಗಿತು. ಇದರಿಂದ ಎಲ್ಲವೂ ಬಂದ್‌ ಆಯ್ತು. ಚಿತ್ರಮಂದಿರಗಳೂ ಇದಕ್ಕೆ ಹೊರತಾಗಲಿಲ್ಲ. ಕಳೆದ ಎಂಟು ತಿಂಗಳಿನಿಂದಲೂ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದರಿಂದ, ಅಲ್ಲಿ ಕೆಲಸ ಮಾಡುತ್ತಿದ್ದ ನೂರಾರು ನೌಕರರು ಕೂಡ ಬೀದಿಗೆ ಬಿದ್ದರು. ಅಷ್ಟೇ ಯಾಕೆ, ಸ್ವತಃ ಮಾಲೀಕರು ಸಹ, ಚಿತ್ರಮಂದಿರವನ್ನು ಮೇಂಟೈನ್‌ ಮಾಡದಂತಹ ಪರಿಸ್ಥಿತಿಗೆ ಬಂದು ಮುಚ್ಚುವ ನಿರ್ಧಾರ ಮಾಡುವಂತಾಗಿದೆ. ಮಾಹಿತಿ ಪ್ರಕಾರ ರಾಜ್ಯದಲ್ಲಿರುವ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳು ಬಾಗಿಲು ಮುಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಬೆಳವಣಿಗೆಗೆ ಕಾರಣ? ನಷ್ಟ. ಇದು ನಿಜ, ಚಿತ್ರಮಂದಿರಗಳು ಈಗ ನಷ್ಟದಲ್ಲಿವೆ.

ಅದರಲ್ಲೂ ಈ ಲಾಕ್‌ಡೌನ್‌ ಟೈಮ್‌ನಲ್ಲಿ ಬಾಗಿಲು ಮುಚ್ಚಿದ್ದರಿಂದ ಕರೆಂಟ್‌ ಬಿಲ್‌, ವಾಟರ್‌ ಬಿಲ್‌ ಇತ್ಯಾದಿ ಖರ್ಚುಗಳೆಲ್ಲವೂ ಚಿತ್ರಮಂದಿರಗಳ ಮಾಲೀಕರ ಮೇಲೆಯೇ ಬಂದಿದೆ. ಅದು ಸಾವಿರಾರು ರುಪಾಯಿ ಆಗಿದ್ದರೆ, ಹೇಗೋ ಪರಿಸ್ಥಿತಿ ನಿವಾರಿಸಿಕೊಳ್ಳಬಹುದಿತ್ತೇನೋ? ಆದರೆ, ಲಕ್ಷಾಂತರ ರುಪಾಯಿ ಬಿಲ್‌ ಪಾವತಿಸುವುದೆಂದರೆ ನಿಜಕ್ಕೂ ನಿವಾರಿಸುವುದು ಕಷ್ಟ ಸಾಧ್ಯ. ಇದೊಂದೇ ಕಾರಣಕ್ಕೆ ಮಾಲೀಕರು ತಮ್ಮ ಚಿತ್ರಮಂದಿರಗಳನ್ನು ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟುವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ದುಡಿದ ನೌಕರರನ್ನೂ ಹೊರಗಿಡುವ ಪರಿಸ್ಥಿತಿ ಬಂದೊದಗಿದೆ ಎಂಬುದು ಚಿತ್ರಮಂದಿರ ಮಾಲೀಕರೊಬ್ಬರ ನೋವಿನ ನುಡಿ. ಚಿತ್ರಮಂದಿರಗಳನ್ನು ಪುನಃ ಆರಂಭಿಸುವ ಮುನ್ನ, ಕರೆಂಟ್‌ ಬಿಲ್‌ ಸೇರಿದಂತೆ ಇತ್ಯಾದಿ ಬಿಲ್‌ಗಳನ್ನು ಭರಿಸಲೇಬೇಕು. ಭರಿಸಲು ಮಾಲೀಕರಲ್ಲಿ ಈಗ ಅಷ್ಟೊಂದು ಹಣವಿಲ್ಲ.

ಸಿನಿಮಾ ಬಿಡುಗಡೆಯಾಗಿ, ಥಿಯೇಟರ್‌ ಚಾಲನೆಯಲ್ಲಿರುತ್ತಿದ್ದರೆ, ಎಲ್ಲವೂ ಸರಿಯಾಗಿರುತ್ತಿತ್ತು. ಆದರೆ, ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಹೀಗಾಗಿಯೇ, ಚಿತ್ರಮಂದಿರಗಳನ್ನು ಮುಚ್ಚುವುದರ ಜೊತೆಗೆ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುವ ನಿರ್ಧಾರಕ್ಕೆ ಮಾಲೀಕರು ಬಂದಿದ್ದಾರೆ ಎನ್ನಲಾಗಿದೆ. ಅದೇನೆ ಇರಲಿ, ವರ್ಷಾನುಗಟ್ಟಲೆ ರಂಜಿಸಿದ್ದ ಚಿತ್ರಮಂದಿರಗಳು ಹೀಗೆ ದಿಢೀರನೆ ಮುಚ್ಚುತ್ತವೆ ಅಂದಾಗ, ಎಂಥವರಿಗೂ ಬೇಸರ ಇದ್ದೇ ಇರುತ್ತೆ. ಸಿನಿರಸಿಕರಿಗಂತೂ ಚಿತ್ರಮಂದಿರಗಳ ಮೇಲೆ ಪ್ರೀತಿ ಇದ್ದೇ ಇರುತ್ತೆ. ಅದರಲ್ಲೂ ಚಿತ್ರಮಂದಿರವನ್ನು ಸ್ವಚ್ಛವಾಗಿಟ್ಟುಕೊಂಡು, ಪ್ರತಿ ದಿನ ಬರುವ ಪ್ರೇಕ್ಷಕರನ್ನು ಅಷ್ಟೇ ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ಕೂಡ ಈಗ ಅಕರಶಃ ಬೀದಿಪಾಲು. ಇದಕ್ಕೊಂದು ಪರಿಹಾರ ಇದೆಯಾ? ಗೊತ್ತಿಲ್ಲ. ಅದನ್ನು ಚಿತ್ರಮಂದಿರ ಮಾಲೀಕರೇ ನಿರ್ಧರಿಸಬೇಕು, ಚಿತ್ರಮಂದಿರ ಪಾಲಿಗೆ ಒಳ್ಳೆಯ ದಿನಗಳು ಬರಬೇಕು ಅನ್ನುವುದು “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಸ್ಟಾರ್ಸ್‌ ಬರಬೇಕು, ಸಿನ್ಮಾ ರಥ ಸಾಗಬೇಕು‌ !

ಉತ್ಸಾಹದಲ್ಲಿ ಕನ್ನಡ ಚಿತ್ರರಂಗ

 

ಚಿತ್ರಮಂದಿರಕ್ಕೆ ಸ್ಟಾರ್ಸ್‌ ಸಿನಿಮಾಗಳು ಬರುವ ಮೂಲಕ ಸಿನಿರಸಿಕರನ್ನು ಕರೆತರುವ ಅಗತ್ಯವಿದೆ. ಆದರೆ, ಮೊದಲು ಚಿತ್ರಮಂದಿರಕ್ಕೆ ಬರುವ ಧೈರ್ಯ ಯಾರು ಮಾಡುತ್ತಾರೆ ಅನ್ನೋದು ಮುಖ್ಯ. ಸ್ಟಾರ್ಸ್‌ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿರುತ್ತೆ. ಅವರು ಬಿಡುಗಡೆಗೆ ರೆಡಿಯಾಗಿರುವ ತಮ್ಮ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಮನಸ್ಸು ಮಾಡಿ, ಬಿಡುಗಡೆ ಮಾಡಿದ್ದಲ್ಲಿ, ಫ್ಯಾನ್ಸ್‌ ಸಿನಿಮಾ ನೋಡೋಕೆ ಬರುತ್ತಾರೆ.

Categories
ಸಿನಿ ಸುದ್ದಿ

ರಾಜ್ಯೋತ್ಸವ ವಿಶೇಷ, ಮಾರಿಗೋಲ್ಡ್ ಶೀರ್ಷಿಕೆ ಫಸ್ಟ್ ಲುಕ್ !

ಒಂದು ಗನ್‌, ಬುಲೆಟ್ಸ್‌ ಹಾಗೂ ಗೋಲ್ಡ್‌ ಬಿಸ್ಕತ್‌ ! 

ಮಾರಿಗೋಲ್ಡ್‌ ಚಿತ್ರತಂಡ ಬಿಡುಗಡೆ ಮಾಡಿರುವ ಶೀರ್ಷಿಕೆ ಫಸ್ಟ್‌ ಲುಕ್‌ ನೋಡಿದರೆ, ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಬರುತ್ತೆ. ಆ ಪೋಸ್ಟರ್‌ನಲ್ಲಿ ಒಂದು ಗನ್‌, ಬುಲೆಟ್ಸ್‌ ಹಾಗೂ ಗೋಲ್ಡ್‌ ಬಿಸ್ಕತ್‌ಗಳಿವೆ. ಹೀಗಾಗಿ ಸಣ್ಣದ್ದೊಂದು ಕುತೂಹಲವಂತೂ ಈ “ಮಾರಿಗೋಲ್ಡ್‌” ಮೇಲಿದೆ”

“ದೂದ್‌ಪೇಡ” ದಿಗಂತ್‌ ಅಭಿನಯದ “ಮಾರಿಗೋಲ್ಡ್”‌ ಚಿತ್ರದ ಮಾತಿನಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿಸಿಕೊಂಡಿದೆ ಚಿತ್ರತಂಡ. ಆರಂಭಕ್ಕೂ ಮುನ್ನವೇ ಒಂದಷ್ಟು ಸುದ್ದಿಯಾಗಿದ್ದ “ಮಾರಿಗೋಲ್ಡ್”‌ ಇದೀಗ ಮತ್ತೊಂದು ಸುದ್ದಿಗೆ ಕಾರಣವಾಗಿದೆ. ಕನ್ನಡ ರಾಜ್ಯೋತ್ಸವದಂದು ಚಿತ್ರತಂಡ ಶೀರ್ಷಿಕೆ ಫಸ್ಟ್ ‌ಲುಕ್‌ ಬಿಡುಗಡೆ ಮಾಡಿದೆ. ಶೀರ್ಷಿಕೆ ಮೂಲಕವೇ ಒಂದಷ್ಟು ಕುತೂಹಲ ಮೂಡಿಸಿದ್ದ ಚಿತ್ರತಂಡ, ಈಗ ಫಸ್ಟ್‌ ಲುಕ್‌ ಬಿಡುಗಡೆ ಮಾಡುವ ಮೂಲಕ ಹೊಸದೊಂದು ನಿರೀಕ್ಷೆ ಹುಟ್ಟಿಸಿದೆ. ರಘುವರ್ಧನ್‌ ನಿರ್ಮಾಣದ ಈ ಚಿತ್ರವನ್ನು ರಾಘವೇಂದ್ರ ಎಂ. ನಾಯಕ್‌ ನಿರ್ದೇಶನ ಮಾಡಿದ್ದಾರೆ.

ನಿರ್ದೇಶಕ ರಾಘವೇಂದ್ರ ಎಂ.ನಾಯಕ್

ಇದು ಇವರಗೆ ಮೊದಲ ಸಿನಿಮಾ. “ಮಾರಿಗೋಲ್ಡ್”‌ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಆ ಕಾರಣಕ್ಕೆ ಇದು ಸಾಕಷ್ಟು ವಿಶೇಷ ಎನಿಸಿಕೊಂಡಿದೆ. ಇದೊಂದು ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಕಥಾಹಂದರ ಹೊಂದಿದ್ದು, ದಿಗಂತ್‌ ಅವರಿಗೆ ಸಂಗೀತಾ ಶೃಂಗೇರಿ ಜೋಡಿಯಾಗಿದ್ದಾರೆ. ಇವರೊಂದಿಗೆ ಸಂಪತ್‌ ಕುಮಾರ್‌, ಕಾಕ್ರೋಚ್‌ ಸುಧಿ, ಯಶ್‌ ಶೆಟ್ಟಿ, ರಾಜ್‌ಬಲವಾಡಿ, ಗಣೇಶ್‌ರಾವ್‌ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಈ ಚಿತ್ರಕ್ಕೆ ಕೆ.ಎಸ್.‌ ಚಂದ್ರಶೇಖರ್‌ ಛಾಯಾಗ್ರಹಣವಿದೆ. ವೀರ್‌ಸಮರ್ಥ್‌ ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ. ರಘು ನಿಡುವಳ್ಳಿ ಅವರ ಸಂಭಾಷಣೆ ಇದೆ. ಯೋಗರಾಜ್‌ ಭಟ್‌, ಕವಿರಾಜ್‌, ವಿಜಯ್‌ ಭರಮಸಾಗರ ಸಾಹಿತ್ಯವಿದೆ.‌

ನಿರ್ಮಾಪಕ‌, ರಘುವರ್ಧನ್

ಅದೇನೆ ಇರಲಿ, ಚಿತ್ರತಂಡ ಬಿಡುಗಡೆ ಮಾಡಿರುವ ಫಸ್ಟ್‌ ಲುಕ್‌ ನೋಡಿದರೆ, ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಬರುತ್ತೆ. ಆ ಪೋಸ್ಟರ್‌ನಲ್ಲಿ ಒಂದು ಗನ್‌, ಬುಲೆಟ್ಸ್‌ ಹಾಗೂ ಗೋಲ್ಡ್‌ ಬಿಸ್ಕತ್‌ಗಳಿವೆ. ಹೀಗಾಗಿ ಸಣ್ಣದ್ದೊಂದು ಕುತೂಹಲವಂತೂ ಈ “ಮಾರಿಗೋಲ್ಡ್‌” ಮೇಲಿದೆ.ಅಂದಹಾಗೆ, ದಿಗಂತ್‌ ಸದ್ಯ ಬಿಝಿಯಾಗಿದ್ದಾರೆ. ಇತ್ತೀಚೆಗೆ ಅವರ “ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರ ಕೂಡ ಸೆಟ್ಟೇರಿದೆ. ಜೊತೆಗೆ ತೆಲುಗು ಚಿತ್ರದ ರಿಮೇಕ್‌ ಸಿನಿಮಾ ಕೂಡ ಮುಹೂರ್ತ ಕಂಡಿದೆ. ಅದರೊಂದಿಗೆ ಯೋಗರಾಜ್‌ ಭಟ್‌ ಅವರ “ಗಾಳಿಪಟ 2” ಸಿನಿಮಾದಲ್ಲೂ ಇದ್ದಾರೆ.‌ “ಮಾರಿಗೋಲ್ಡ್‌” ಚಿತ್ರದ ಫಸ್ಟ್ ಲುಕ್‌ ಈಗಷ್ಟೆ ಬಿಡುಗಡೆಯಾಗಿದ್ದು, ಇಷ್ಟರಲ್ಲೇ ಒಂದೊಂದೇ ವಿಶೇಷತೆಗಳು ಚಿತ್ರತಂಡದಿಂದ ಹೊರಬೀಳಲಿವೆ.

Categories
ಸಿನಿ ಸುದ್ದಿ

ಸಕ್ಸಸ್‌ಫುಲ್‌ ಜರ್ನಿ ನಿರೀಕ್ಷೆಯಲ್ಲಿ ಶ್ರೀಮುರಳಿ

ಡಿಸೆಂಬರ್‌ಗೆ ಟೀಸರ್‌, ಏಪ್ರಿಲ್ ಗೆ‌ ಮದಗಜ ರಿಲೀಸ್‌ ಸಾಧ್ಯತೆ

 

ರೋರಿಂಗ್‌ ಸ್ಟಾರ್‌ ಶ್ರೀಮುರಳಿ. ಈ ಹೆಸರು ಹೇಳಿದಾಕ್ಷಣ, ಸಿನಿರಂಗಕ್ಕೆ ಎಂಟ್ರಿಯಾಗಿರುವ ಹೊಸಬರಿಗೆ ಒಂಥರಾ ಖುಷಿ. ಅದಕ್ಕೆ ಕಾರಣ, ಅರಂಭದಿಂದಲೂ ಹೊಸಬರನ್ನು ಪ್ರೋತ್ಸಾಹಿಸಿಕೊಂಡು ಬಂದಿರುವ ಶ್ರೀಮುರಳಿ, ಅದೆಷ್ಟೋ ಹೊಸಬರ ಚಿತ್ರಗಳಿಗೆ ಶುಭಕೋರುವ ಮೂಲಕ ಪ್ರೀತಿಯ ಮಾತುಗಳನ್ನಾಡಿ, ಹುರಿದುಂಬಿಸಿದವರು. ಆ ಕಾರಣಕ್ಕೆ ಶ್ರೀಮುರಳಿ ಹೊಸ ಪ್ರತಿಭೆಗಳ ಪಾಲಿಗೆ ರಿಯಲ್‌ ಹೀರೋ. ಶ್ರೀಮುರಳಿ ಅವರ ಜರ್ನಿ ಕೂಡ ಆರಂಭದಲ್ಲಿ ಸುಲಭವಾಗಿರಲಿಲ್ಲ.

“ಅನೇಕ ಏಳು-ಬೀಳುವಿನ ನಡುವೆಯೂ ಆದೇ ಮುಗಳ್ನಗೆ ಮೂಲಕ ಎಲ್ಲರ ಮನಸ್ಸು ಗೆಲ್ಲುವ ಮೂಲಕವೇ ಅವರು ಚಿತ್ರರಂಗದಲ್ಲಿ ಗೆಲುವಿನ ಮೆಟ್ಟಿಲೇರಿ ನಿಂತರು. ಎಲ್ಲೆಲ್ಲೂ ತಮ್ಮದ್ದೊಂದು ಛಾಪು ಮೂಡಿಸುವುದರ ಜೊತೆಗೆ ಸಿನಿರಸಿಕರ ಮನದಲ್ಲಿ, ಚಿತ್ರರಂಗದ ಅಂಗಳದಲ್ಲಿ “ಭರಾಟೆ” ಎಬ್ಬಿಸಿದ್ದಂತೂ ಸುಳ್ಳಲ್ಲ. ಅದೇ ಮೈಲೇಜ್‌ ಉಳಿಸಿಕೊಂಡಿರುವ ಶ್ರೀಮುರಳಿ ಮತ್ತೊಂದು ಬಹುದೊಡ್ಡ ನಿರೀಕ್ಷೆಯಲ್ಲೂ ಇದ್ದಾರೆ”

 

ಅನೇಕ ಏಳು-ಬೀಳುವಿನ ನಡುವೆಯೂ ಆದೇ ಮುಗಳ್ನಗೆ ಮೂಲಕ ಎಲ್ಲರ ಮನಸ್ಸು ಗೆಲ್ಲುವ ಮೂಲಕವೇ ಅವರು ಚಿತ್ರರಂಗದಲ್ಲಿ ಗೆಲುವಿನ ಮೆಟ್ಟಿಲೇರಿ ನಿಂತರು. ಎಲ್ಲೆಲ್ಲೂ ತಮ್ಮದ್ದೊಂದು ಛಾಪು ಮೂಡಿಸುವುದರ ಜೊತೆಗೆ ಸಿನಿರಸಿಕರ ಮನದಲ್ಲಿ, ಚಿತ್ರರಂಗದ ಅಂಗಳದಲ್ಲಿ “ಭರಾಟೆ” ಎಬ್ಬಿಸಿದ್ದಂತೂ ಸುಳ್ಳಲ್ಲ. ಅದೇ ಮೈಲೇಜ್‌ ಉಳಿಸಿಕೊಂಡಿರುವ ಶ್ರೀಮುರಳಿ ಮತ್ತೊಂದು ಬಹುದೊಡ್ಡ ನಿರೀಕ್ಷೆಯಲ್ಲೂ ಇದ್ದಾರೆ.
ಹೌದು, ಶ್ರೀಮುರಳಿ ಸದ್ಯಕ್ಕೆ “ಮದಗಜ”ನ ಜಪದಲ್ಲಿದ್ದಾರೆ. ಹಾಗೆ ನೋಡಿದರೆ, ಅವರು “ಉಗ್ರಂ” ಗೆಲುವಿನ ನಂತರ ಸಾಕಷ್ಟು ಚ್ಯೂಸಿ ಆಗಿದ್ದಂತೂ ಹೌದು. ಆ ಎಚ್ಚರ ಇದ್ದುದರಿಂದಲೇ ಅವರು, ಒಂದೊಂದೇ ಸಿನಿಮಾವನ್ನು ಕೊಡುವ ಮೂಲಕ ಇಂದಿಗೂ ಅಸ್ತಿತ್ವ ಉಳಿಸಿಕೊಂಡಿದ್ದಾರೆ.

 

ಈಗ “ಮದಗಜ” ಕೂಡ ದೊಡ್ಡ ಭರವಸೆ ಮೂಡಿಸಿದೆ. ಚಿತ್ರದ ಶೀರ್ಷಿಕೆಯೇ ಮೊದಲ ನಂಬಿಕೆ ಹೆಚ್ಚಿಸಿದೆ. ಆರಂಭದ ಪೋಸ್ಟರ್‌ ಇನ್ನಷ್ಟು ಕುತೂಹಲ ಮೂಡಿಸಿರುವುದಂತೂ ನಿಜ. ಈಗ “ಮದಗಜ”ನ ಹವಾ ಜೋರಾಗಿದೆ. ಈಗಾಗಲೇ ಎರಡನೇ ಹಂತದ ಚಿತ್ರೀಕರಣ ಮುಗಿಸಿರುವ “ಮದಗಜ” ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ.

ಬಿನ್ನಿಮಿಲ್‌ನಲ್ಲಿ ಭರ್ಜರಿ ಫೈಟ್‌ ಸೀನ್‌ಗಳಿಗಾಗಿಯೇ ದೊಡ್ಡ ಸೆಟ್‌ ಹಾಕಲಾಗುತ್ತಿದೆ. ಸುಮಾರು ಹದಿನೈದು ದಿನಗಳ ಕಾಲ ಸೆಟ್‌ ಹಾಕಲಾಗುತ್ತಿದ್ದು, ಅದು ಪೂರ್ಣಗೊಂಡ ನಂತರ ಫೈಟ್‌ ಸೀನ್‌ ಶೂಟಿಂಗ್‌ ನಡೆಯಲಿದೆ. ಆ ಭರ್ಜರಿ ಕಾಳಗದ ದೃಶ್ಯಗಳು “ಮದಗಜ” ಚಿತ್ರದ ವಿಶೇಷತೆಗಳಲ್ಲೊಂದು. ಈಗಾಗಲೇ ವಾರಣಾಸಿಯಲ್ಲಿ ಪ್ರಮುಖ ಭಾಗದ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ “ಮದಗಜ”, ಇತ್ತೀಚೆಗೆ ಮೈಸೂರು ಸುತ್ತಮುತ್ತಲ ಪ್ರದೇಶಗಳಲ್ಲೂ ಚಿತ್ರೀಕರಣ ಮುಗಿಸಿದೆ. ಈಗ ಮತ್ತೊಂದು ಹಂತದ ಚಿತ್ರೀಕರಣಕ್ಕೆ ರೆಡಿಯಾಗಿದ್ದು, ಇನ್ನೇನು ಇಷ್ಟರಲ್ಲೇ ಚಿತ್ರತಂಡ ಸೆಟ್‌ಗೆ ಹೊರಡಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ಗೆ “ಮದಗಜ” ಟೀಸರ್‌ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಲವ್‌ ಹಾಸ್ಟೆಲ್‌ನಲ್ಲಿ ನಿಂತ ಶಾರುಖ್!

ಹೊಸ ಸಿನ್ಮಾ ನಿರ್ಮಾಣಕ್ಕೆ ಕೈ ಹಾಕಿದ ಬಾಲಿವುಡ್‌ ಬಾದ್‌ಶಾ

ಶಾರುಖ್‌ಖಾನ್‌ ಸದ್ಯಕ್ಕೆ ಐಪಿಎಲ್‌ ಪಂದ್ಯಾವಳಿಯಲ್ಲೇ ಬಿಝಿಯಾಗಿದ್ದಾರೆ. ಅಷ್ಟಕ್ಕೂ ಅವರ ಮುಂದಿನ ಸಿನಿಮಾ ಯಾವುದು ಅನ್ನುವುದಕ್ಕೆ ಇದುವರೆಗೆ ಉತ್ತರವಿರಲಿಲ್ಲ. ಇದೀಗ ಅವರೇ ಸ್ವತಃ ಹೊಸ ಚಿತ್ರ ಮಾಡುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಹೌದು, ಬಾಲಿವುಡ್‌ ನಟ ಶಾರುಖ್‌ ಖಾನ್‌ ಕಳೆದ ಎರಡು ವರ್ಷಗಳಿಂದಲೂ ಯಾವುದೇ ಸಿನಿಮಾ ಘೋಷಣೆ ಮಾಡಿರಲಿಲ್ಲ. ತಮ್ಮ ಬಹು ಕನಸಿನ “ಜೀರೋ” ಸಿನಿಮಾ ನಂತರ ಹೊಸದೊಂದು ಮ್ಯಾಜಿಕ್‌ ಆಗುತ್ತೆ ಅಂದುಕೊಂಡಿದ್ದರು. ಆದರೆ, ಅವರು ಅಂದುಕೊಂಡಂತಹ ದೊಡ್ಡ ಮ್ಯಾಜಿಕ್‌ ನಡೆಯಲೇ ಇಲ್ಲ. “ಜೀರೋ” ಕೂಡ ಪ್ರೇಕ್ಷಕ ಪ್ರಭುವಿನ ಮನಸ್ಸನ್ನು ತಟ್ಟಲಿಲ್ಲ. ಹಾಗಾಗಿ ಅವರು ಈಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಹಾಗಂತ ಶಾರುಖ್‌ ಖಾನ್‌ ಅವರು ನಟಿಸುತ್ತಿದ್ದಾರಾ? ಈ ಪ್ರಶ್ನೆಗೆ ಉತ್ತರ, ಖಂಡಿತ ಇಲ್ಲ. ಅವರು ತಮ್ಮ ರೆಡ್‌ ಚಿಲ್ಲಿಸ್‌ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಡಿ ಹೊಸದೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ ಎಂಬುದು ಸುದ್ದಿ.

 

ಆ ಸಿನಿಮಾಗೆ “ಲವ್‌ ಹಾಸ್ಟೆಲ್‌” ಎಂಬ ಹೆಸರನ್ನಿಡಲಾಗಿದೆ. ಅಂದಹಾಗೆ, “ಲವ್‌ ಹಾಸ್ಟೆಲ್‌” ಕ್ರೈಂ ಥ್ರಿಲ್ಲರ್‌ ಕಥೆ ಹೊಂದಿದೆ. ಈ ಚಿತ್ರಕ್ಕೆ ಶಂಕರ್‌ ರಾಮನ್‌ ನಿರ್ದೇಶನವಿದೆ. ಗೌರಿ ಖಾನ್‌ ಮತ್ತು ಮನೀಶ್‌ ಮುಂದ್ರ, ಗೌರವ್‌ ವರ್ಮಾ ಅವರು ಜೊತೆಗೂಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಹೊಸ ಚಿತ್ರದಲ್ಲಿ ಸನ್ಯ ಮಲ್ಹೋತ್ರ, ವಿಕ್ರಾಂತ್ ಮಸ್ಸಿ, ಮತ್ತು ಬಾಬಿ ಸೇರಿದಂತೆ ಇತರರು ನಟಿಸುತ್ತಿದ್ದಾರೆ. ಮುಂದಿನ ವರ್ಷ ಶುರುವಾಗಲಿದ್ದು, ವರ್ಷದ ಅಂತ್ಯದಲ್ಲಿ ಬಿಡುಗಡೆ ಕಾಣುವ ಸಾಧ್ಯತೆ ಇದೆ.
ಹಾಗಾದರೆ, ಶಾರುಖ್‌ಖಾನ್‌ ನಟಿಸೋದು ಯಾವಾಗ? ಅವರ ಮುಂದಿನ ಚಿತ್ರ ಯಾವುದು? ಇದಕ್ಕಿನ್ನೂ ಉತ್ತರವಿಲ್ಲ. ಆದರೆ, ತಮಿಳು ನಿರ್ದೇಶಕ ಅಟ್ಲಿ ಹಾಗೂ ರಾಜ್‌ಕುಮಾರ್‌ ಹಿರಾನಿ ಮತ್ತು ಸಿದ್ಧಾರ್ಥ್‌ ಆನಂದ ನಿರ್ದೇಶಕರ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕಿನ್ನೂ ಸ್ಪಷ್ಟತೆ ಇಲ್ಲ.

Categories
ಸಿನಿ ಸುದ್ದಿ

ಎಲ್ಲರೂ ಪ್ರೀತಿಸುತ್ತ ಬಾಳೋಣ ಜಗ್ಗೇಶ್‌ ನುಡಿಮುತ್ತು

ಇರೋ ತನಕ ಸಂಬ‍ಂಧ, ಹೋದ ಮೇಲೆ ನೆನಪು ಮಾತ್ರ!

ಜಗ್ಗೇಶ್‌ ಸದಾ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಅವರು ಹಾಕುವ ಒಂದೊಂದು ಸ್ಟೇಟಸ್‌ನಲ್ಲೂ ಸಾಕಷ್ಟು ಸಂದೇಶ ಅಡಗಿರುತ್ತೆ. ಅವರು ಆಗಾಗ ತಮ್ಮ ಟ್ವಿಟರ್‌ ಖಾತೆಯಲ್ಲಿ, ಫೇಸ್‌ಬುಕ್‌ ಖಾತೆಯಲ್ಲಿ ಒಂದಷ್ಟು ಫೋಟೋ ಜೊತೆ ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಜಗ್ಗೇಶ್‌ ಬರೆದುಕೊಂಡಿದ್ದೇನು ಗೊತ್ತಾ?

ಅವರೇ ಬರೆದುಕೊಂಡ ಬರಹವಿದು…
“ಇರುವವರೆಗೂ ಸಂಬಂಧಗಳು, ಹೋದ ಮೇಲೆ ನೆನಪು ಮಾತ್ರ…” ಹೀಗೆ ಬರೆದುಕೊಂಡು ಅದರೊಂದಿಗೆ ತಮ್ಮ ಪತ್ನಿ ಪರಿಮಳ, ಮಕ್ಕಳಾದ ಗುರುರಾಜ್‌, ಯತಿ ಜಗ್ಗೇಶ್‌ ಹಾಗು ಸೊಸೆ, ಮೊಮ್ಮಗನೊಂದಿಗಿನ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಾಕಿದ್ದಾರೆ. ಅಷ್ಟಕ್ಕೂ ಈ ಫೋಟೋ ಹಾಕಿಕೊಂಡು ಬರೆದಿಕೊಂಡಿರುವ ಜಗ್ಗೇಶ್‌, ಪರಿಮಳ ಜಗ್ಗೇಶ್‌ ಅವರ ಹುಟ್ಟುಹಬ್ಬದ ವೇಳೆ. ಇತ್ತೀಚೆಗೆ ಪರಿಮಳ ಜಗ್ಗೇಶ್‌ ಅವರ ಹುಟ್ಟುಹಬ್ಬವನ್ನು ಕುಟುಂಬದವರೆ ಸೇರಿ ಆಚರಿಸಿಕೊಂಡಿದ್ದಾರೆ. “ಮಡದಿ ಪರಿಮಳನಿಗೆ ಸಣ್ಣ ಸಂತೋಷ ನೀಡಿದ ಪುಟ್ಟ ಸಂಸಾರದ ಸದಸ್ಯರು. ಭೂಮಿಯಲ್ಲಿ ಇರುವಷ್ಟು ದಿನ ಮಾತ್ರ ಸಂತೋಷ ಸಂಬಂಧ, ನಂತರ ನೆನಪು ಮಾತ್ರದ ನಶ್ವರ ಜಗತ್ತು. ಸಾಧ್ಯವಾದಷ್ಟು ಸಂತೋಷ ಪಡೆದು ಹಂಚಿ ಬಾಳಿಬಿಡಬೇಕು. ಇರುವವರೆಗು ಸಂಬಂಧಗಳು ಹೋದಮೇಲೆ ನೆನಪು ಮಾತ್ರ. ಬದುಕಿನ ಚಿತ್ರಕಥೆ ದೇವರಿಂದ ಬರೆಯಲ್ಪಟ್ಟ ಕಥಾಸಂಗಮ. ನಾವೆಲ್ಲಾ ಪಾತ್ರದಾರಿಗಳು ಮಾತ್ರ. ನಮ್ಮ ಬದುಕಿನ ಅದ್ಭುತ ಚಿತ್ರಕಥೆ ಬರೆದು ಅದರಲ್ಲಿ ಕೋಟ್ಯಂತರ ಪ್ರೀತಿಸುವ ನಿಮ್ಮ ಆತ್ಮಗಳನ್ನು ನಮ್ಮ ಬದುಕಿಗೆ ಸೇರಿಸಿದ ದೇವರಿಗೆ ಧನ್ಯವಾದ. ಪ್ರೀತಿಸುತ್ತ ಬಾಳುವ. ಪ್ರೀತಿ ದೇವರ ಇನ್ನೊಂದು ರೂಪ” ಎಂದು ಅರ್ಥಪೂರ್ಣವಾಗಿ ಬರೆದುಕೊಂಡಿದ್ದಾರೆ.

Categories
ಸಿನಿ ಸುದ್ದಿ

ಗುಡ್‌ ಗುಡ್ಡರ್‌ ಗುಡ್ಡೆಸ್ಟ್…!‌ ವಿನೂತನ ಚಿತ್ರ

ಹೊಸಬರ ಹೊಸ ಪ್ರಯತ್ನ, ಪ್ರಯೋಗ

ನಿರ್ದೇಶಕ ಸಂದೀಪ್‌ ಬಿ.ಹೆಚ್

ಕನ್ನಡ ಚಿತ್ರರಂಗ ಇದೀಗ ಗರಿಗೆದರಿದೆ. ಕಳೆದ ಏಳೆಂಟು ತಿಂಗಳಿನಿಂದಲೂ ಕೊರೊನಾ ಹೊಡೆತಕ್ಕೆ ಮೆತ್ತಗಾಗಿದ್ದ ಚಿತ್ರರಂಗ ಇದಿಗ ಪುನಃ ಪುಟಿದೇಳುತ್ತಿದೆ. ಹೌದು, ಕೊರೊನಾ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದ್ದ ಚಿತ್ರರಂಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಕಳೆದ ಅಕ್ಟೋಬರ್ ಎರಡನೇ ವಾರದಿಂದ‌ ಕೆಲವು ಚಿತ್ರಗಳು ಮರುಬಿಡುಗಡೆಯಾಗುವ ಮೂಲಕ ಚಿತ್ರಮಂದಿರಕ್ಕೆ ಬರಲು ನಾವ್‌ ರೆಡಿ ಎಂಬುದನ್ನು ಸಾಬೀತುಪಡಿಸಿವೆ. ಅದಕ್ಕೆ ತಕ್ಕಂತೆ ಸಿನಿಮಾ ಪ್ರೇಕ್ಷಕರು ಕೂಡ ಸಿನಿಮಾರಂಗದ ಬೆನ್ನುತಟ್ಟುವ ಕೆಲಸ ಮಾಡಿದ್ದಾರೆ. ಹಾಗೆ ನೋಡಿದರೆ, ಸ್ಟಾರ್‌ ನಟರ ಜೊತೆ ಸಾಕಷ್ಟು ಹೊಸಬರ ಚಿತ್ರಗಳು ಸೆಟ್ಟೇರಿವೆ ಎಂಬುದು ವಿಶೇಷ. ಇನ್ನೂ ಒಂದಷ್ಟು ಹೊಸಬರ ಚಿತ್ರಗಳು ಈ ವರ್ಷವೇ ಸೆಟ್ಟೇರಲು ಸಜ್ಜಾಗಿವೆ. ಕೆಲ ಚಿತ್ರಗಳು ಶೀರ್ಷಿಕೆ ಅನಾವರಣ ಮಾಡಲು ತಯಾರು ನಡೆಸಿವೆ. ಆ ಸಾಲಿಗೆ ಸಂದೀಪ್‌ ಬಿ.ಹೆಚ್.‌ ನಿರ್ದೇಶನದ ಹೊಸ ಸಿನಿಮಾವೂ ಒಂದು. ಅವರು ತಮ್ಮ ಚಿತ್ರಕ್ಕೆ ಹೊಸ ಬಗೆಯ ಶೀರ್ಷಿಕೆ ಇಟ್ಟಿದ್ದಾರೆ ಅನ್ನೋದೇ ವಿಶೇಷತೆಗಳಲ್ಲೊಂದು. ಇನ್ನೊಂದು ವಿಶೇಷವೆಂದರೆ, ನವೆಂಬರ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ, ಶುಭ ಹಾರೈಸಲಿದ್ದಾರೆ.

 

ನಿರ್ಮಾಪಕ ಸುರೇಶ್‌ ಬಿ.

ಗ್ರಾಮರ್‌ ಮತ್ತು ಗ್ಲಾಮರ್
ಅಷ್ಟಕ್ಕೂ ಸಂದೀಪ್‌ ತಮ್ಮ ನಿರ್ದೇಶನದ ಚಿತ್ರಕ್ಕೆ ಇಟ್ಟುಕೊಂಡಿರುವ ಹೆಸರೇನು ಗೊತ್ತಾ? “ಗುಡ್‌ ಗುಡ್ಡರ್‌ ಗುಡ್ಡೆಸ್ಟ್”.‌ ಈ ಶೀರ್ಷಿಕೆ ನೋಡಿದಾಕ್ಷಣ, ವಿಭಿನ್ನ ಎನಿಸದೇ ಇರದು. ಕಥೆಗೆ ಪೂರಕವಾಗಿಯೇ ಈ ಶೀರ್ಷಿಕೆ ಇಟ್ಟಿದ್ದಾರಂತೆ ಸಂದೀಪ್.‌ ತಮ್ಮ ಶೀರ್ಷಿಕೆ ಕುರಿತು ನಿರ್ದೇಶಕ ಸಂದೀಪ್‌ ಹೇಳುವುದಿಷ್ಟು. “ಗ್ರಾಮೀಣ ಭಾಗದಲ್ಲಿ ಗ್ರಾಮರ್‌ ಬರದಂತಹ ಹುಡುಗರು ಮಾಡುವ ಜೋಕ್‌ ಇಟ್ಟುಕೊಂಡೇ ಈ ಶೀರ್ಷಿಕೆ ಇಡಲಾಗಿದೆ. ಗುಡ್‌ ಅಂದರೆ ಉತ್ತಮ, ಗುಡ್ಡರ್‌ಗೆ ಅತ್ಯುತ್ತಮ, ಗುಡ್ಡೆಸ್ಟ್‌ಗೆ ಸರ್ವೋತ್ತಮ ಎಂಬ ಅರ್ಥ ಗ್ರಾಮೀಣ ಹುಡುಗರದು. ಕಥೆಯಲ್ಲಿ ಬರುವ ಹಂತಗಳಲ್ಲಿ ಈ ಗ್ರಾಮೀಣ ಗ್ರಾಮರ್‌ ಬಳಕೆಯಾಗಲಿದೆ. ಇಲ್ಲಿ ಬ್ಯಾಡ್‌ ಗ್ರಾಮರ್‌ ಇದ್ದರೂ, ಗ್ರಾಮೀಣದ ಕೆಲ ಹುಡುಗರಿಗೆ ಅದು ಒಂದು ರೀತಿ ಕರೆಕ್ಟ್‌ ಗ್ರಾಮರ್. ಅದನ್ನಿಟ್ಟುಕೊಂಡು ಶೀರ್ಷಿಕೆ ಇಡಲಾಗಿದೆ. ಸಿನಿಮಾ ನೋಡಿದವರಿಗೆ ಶೀರ್ಷಿಕೆ ಕೂಡ ಪೂರಕ ಅನ್ನೋದು ಗೊತ್ತಾಗುತ್ತೆ.‌ ಇನ್ನು, ಗ್ರಾಮರ್‌ ಕುರಿತ ವಿಷಯವಿದ್ದರೂ, ಗ್ಲಾಮರ್‌ಗೂ ಇಲ್ಲಿ ಕಮ್ಮಿ ಇಲ್ಲ. ಗ್ರಾಮರ್‌ ಜೊತೆಯಲ್ಲಿ ಗ್ಲಾಮರ್‌ಗೂ ಇಲ್ಲಿ ಜಾಗವಿದೆ. ಹಾಗಾಗಿ ಗ್ಲಾಮರ್‌ ಎಷ್ಟಿದೆ, ಗ್ರಾಮರ್‌ ಎಷ್ಟಿದೆ ಅನ್ನುವುದನ್ನೂ ಚಿತ್ರದಲ್ಲೇ ನೋಡಬೇಕು. ಅದೇನೆ ಇದ್ದರೂ, ಸಿನಿಮಾ ಗ್ರಾಮರ್‌ ಇಟ್ಟುಕೊಂಡೇ ಸಿನಿಮಾ ಮಾಡುತ್ತಿದ್ದರೂ, ಹೇಳುವ ವಿಷಯದಲ್ಲಿ ಮಾತ್ರ ಸ್ಪಷ್ಟತೆ ಇರಲಿದೆ. ಹೊಸ ಪ್ರಯತ್ನದ ಜೊತೆಯಲ್ಲಿ ಪ್ರಯೋಗವೂ ಇಲ್ಲಿರಲಿದೆ” ಎನ್ನುತ್ತಾರೆ ಸಂದೀಪ್.

 

ಕನಸಿನ ಸಿನಿಮಾ
ಇನ್ನು, ಈ ಚಿತ್ರದ ಮೂಲಕ ನಿರ್ದೇಶಕನ ಪಟ್ಟ ಅಲಂಕರಿಸುತ್ತಿರುವ ಸಂದೀಪ್‌ ಬಗ್ಗೆ ಹೇಳುವುದಾದರೆ, ಇದು ಇವೆ ಚೊಚ್ಚಲ ನಿರ್ದೇಶನದ ಸಿನಿಮಾ. ಪಕ್ಕಾ ಅನುಭವ ಪಡೆದುಕೊಂಡೇ ಅವರು ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಸರಿ ಸುಮಾರ 17 ವರ್ಷಗಳಿಂದಲೂ ಕನ್ನಡ ಚಿತ್ರರಂಗವನ್ನು ಬಲ್ಲವರು. ಇಷ್ಟು ವರ್ಷಗಳ ಕಾಲ ಪಕ್ವಗೊಂಡು ಈಗ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.
ತಮ್ಮ ಚೊಚ್ಚಲ ಪ್ರಯತ್ನದ ಕುರಿತು “ಸಿನಿ ಲಹರಿʼ ಜೊತೆ ಮಾತನಾಡುವ ನಿರ್ದೇಶಕ ಸಂದೀಪ್‌, “ಇದು ನನ್ನ ಕನಸಿನ ಚಿತ್ರ. ಇಷ್ಟು ವರ್ಷಗಳ ಅನುಭವಗಳನ್ನು ಈ ಸಿನಿಮಾಗೆ ಸುರಿಯುತ್ತಿದ್ದೇನೆ. ನನ್ನ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿರೋದು ನಿರ್ಮಾಪಕರಾದ ಸುರೇಶ ಬಿ. ಅವರಿಗೂ ಇದು ಮೊದಲ ಪ್ರಯತ್ನ. ಅವರಿಗೆ ಪ್ಯಾಷನ್‌ ಇರುವುದರಿಂದಲೇ ಹೊಸ ಬಗೆಯ ಕಥೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟು, ನಮ್ಮಂತಹ ಹೊಸಬರಿಗೆ ಬೆನ್ನು ತಟ್ಟುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಹೇಳುವುದಾದರೆ, ಇದೊಂದು ಡಾರ್ಕ್‌ ಹ್ಯೂಮರ್‌ ಸೆಟೈರ್‌ ಕಾಮಿಡಿ ಚಿತ್ರ. ಇದರೊಂದಿಗೆ ರೊಮ್ಯಾನ್ಸ್‌, ಥ್ರಿಲ್ಲರ್‌, ಡ್ರಾಮಾ, ಕ್ರೈಮ್‌, ಸ್ಟಂಟ್ಸ್‌ ಸೇರಿದಂತೆ ಇತ್ಯಾದಿ ಅಂಶಗಳೂ ಸೇರಿವೆ. ಇದು ಒಂದೇ ಜಾನರ್‌ಗೆ ಸೇರುವ ಸಿನಿಮಾವಲ್ಲ. ಹಲವು ಜಾನರ್‌ಗಳ ಸಮ್ಮಿಶ್ರಣವಿದೆ. ಹಾಗಾಗಿ ನನ್ನ ಪ್ರಕಾರ ಇದು ಕನ್ನಡಕ್ಕೆ ಹೊಸ ಪ್ರಯತ್ನ.

 

ಇಲ್ಲಿ ಎಲ್ಲವೂ ವಿಶೇಷ
ಇನ್ನು, ಚಿತ್ರಕಥೆಯೇ ಚಿತ್ರದ ಜೀವಾಳ. ಅದರಲ್ಲೂ ಅದು ವಿಭಿನ್ನವಾಗಿ ಮೂಡಿಬರಲಿದೆ. ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲೂ ಮೂರು ಆ್ಯಕ್ಟ್‌ ಸ್ಟ್ರಕ್ಚರ್ಸ್‌ ಇದ್ದರೆ, ಇಲ್ಲಿ ಆರು ಆ್ಯಕ್ಟ್‌ ಸ್ಟ್ರಕ್ಚರ್ಸ್‌ ಇರಲಿದೆ. ಹೇಗೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಪ್ರಮಖ ಪಾತ್ರಗಳೊಂದಿಗೆ 80 ಕ್ಕೂ ಹೆಚ್ಚು ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಆ ಎಲ್ಲಾ ಪಾತ್ರಗಳಿಗೂ ತನ್ನದೇ ಆದಂತಹ ವಿಶೇಷತೆಗಳಿವೆ. ಇನ್ನುಳಿದಂತೆ ರಂಗಶಂಕರ, ನೀನಾಸಂ, ಮಾಲ್ಗುಡಿ ಡೇಸ್‌ನಲ್ಲಿ ಕೆಲಸ ಮಾಡಿದ ಹಿರಿಯ ರಂಗಕಲಾವಿದರು ಇಲ್ಲಿರಲಿದ್ದಾರೆ. ಸುಮಾರು 45 ದಿನಗಳ ಕಾಲ ಬೆಂಗಳೂರಲ್ಲೇ ಚಿತ್ರೀಕರಣ ನಡೆಸುವ ಯೋಚನೆ ಇದೆ” ಎಂದು ವಿವರ ಕೊಡುತ್ತಾರೆ ಸಂದೀಪ್‌ ಬಿ.ಹೆಚ್.‌

ಚಿತ್ರಕ್ಕೆ ನಾಯಕ ಮತ್ತು ನಾಯಕಿಯ ಅಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ತಂತ್ರಜ್ವರ ಆಯ್ಕೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಎಲ್ಲವೂ ಪೂರ್ಣಗೊಂಡ ಬಳಿಕ ಸಿನಿಮಾಗೆ ಚಾಲನೆ ಸಿಗಲಿದೆ.

error: Content is protected !!