Categories
ಸಿನಿ ಸುದ್ದಿ

ಆಗ ಆಫೀಸ್ ಬಾಯ್, ಲೈಟ್ ಬಾಯ್ ಕೆಲಸ… ಈಗ ನಟ, ನಿರ್ದೇಶಕ, ನಿರ್ಮಾಪಕ!

ಸಿನಿ ದುನಿಯಾದ ಅದೃಷ್ಟ

ಸಿದ್ದು

ಈ ಚಿತ್ರರಂಗವೇ ಹಾಗೆ. ಒಮ್ಮೆ ಈ ಬಣ್ಣದ ಲೋಕಕ್ಕೆ ಕಾಲಿಟ್ಟರೆ, ಮನಸು ಸಾಧಿಸೋವರೆಗೂ ಬಿಡಲ್ಲ. ಕಲೆ ಎಲ್ಲರನ್ನೂ ಒಪ್ಪಿ ಅಪ್ಪಿಕೊಳ್ಳುವುದಿಲ್ಲ.
ನೂರಾರು ಸಂಕಷ್ಟಗಳ ನಡುವೆಯೇ ಇಲ್ಲಿ ಬದುಕು ಕಟ್ಟಿಕೊಂಡವರೂ ಇದ್ದಾರೆ. ಬೆಟ್ಟದಷ್ಟು ಕನಸು ಕಟ್ಟಿಕೊಂಡು‌ ಬಂದ ಪ್ರತಿಭೆಗಳೂ ಇಲ್ಲಿವೆ. ಆ ಸಾಲಿಗೆ ಈಗ ಸಿದ್ದು ಎಂಬ ಹೊಸ ಪ್ರತಿಭೆಯೂ ಸೇರಿದೆ.
ಸಿದ್ದು ಮೂಲತಃ ಕೋಟೆ ನಾಡು ಚಿತ್ರದುರ್ಗದವರು.
ಸಿದ್ದು, ಸಿನಿಮಾರಂಗಕ್ಕೆ ಬಂದದ್ದು ತಾನೊಬ್ಬ ನಟ‌ ಆಗಬೇಕು, ನಿರ್ದೇಶಕನಾಗಬೇಕು ಅಂತ. ಆದರೆ, ಆ ಕನಸು ಸುಲಭವಾಗಿರಲಿಲ್ಲ. ವರ್ಷಗಟ್ಟಲೆ ಕಷ್ಟಪಟ್ಟಿದ್ದೂ ಇದೆ. ಈಗಲೂ ಆ ಶ್ರಮ ಮುಂದುವರೆದಿದೆ.

ಆಗ ಲೈಟ್ ಬಾಯ್, ಈಗ ನಿರ್ಮಾಪಕ
ಸಿದ್ದು ಆರಂಭದ ದಿನಗಳಲ್ಲಿ ಆಫೀಸ್ ಬಾಯ್ ಆಗಿ, ಲೈಟ್ ಬಾಯ್ ಆಗಿ ನಂತರದ ದಿನಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಇದರೊಂದಿಗೆ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ, ಬರಹಗಾರನಾಗಿಯೂ ಕೆಲಸ ಮಾಡಿದ್ದಾರೆ.
ಈ ಅನುಭವದೊಂದಿಗೆ ಅವರು, 2017 ರಲ್ಲಿ “ಅನಾಸಿನ್” ಎಂಬ ಕಿರುಚಿತ್ರದಲ್ಲಿ ಒಬ್ಬರೇ 6 ಪಾತ್ರಗಳಲ್ಲಿ ನಟಿಸಿ, ನಿರ್ದೇಶನ‌ ಮಾಡಿದ್ದಾರೆ.
ಆಮೇಲೆ ಸ್ವಂತವಾಗಿ ಸಿನಿ ಪ್ಯಾಲೇಸ್ ಸ್ಟುಡಿಯೋ ಎಂಬ ಕ್ಯಾಮೆರಾ ರೆಂಟಲ್ ಶುರು ಮಾಡಿ ಸಿನಿಮಾಗಳು, ಕಿರುಚಿತ್ರಗಳು, ಆಲ್ಬಮ್ ಸಾಂಗ್, ಸೀರಿಯಲ್, ವೆಬ್ ಸೀರೀಸ್ ಗಳು ಮಾಡಿದ್ದಾರೆ.

ಆರ್ಮಿಗೆ ಸೆಲ್ಯೂಟ್ 
ಕಳೆದ 2019ರಲ್ಲಿ ‘ಸೆಲ್ಯೂಟ್ ಫಾರ್ ಸೋಲ್ಡ್ಜರ್ಸ್’ ಎಂಬ ಆಲ್ಬಂ ಸಾಂಗ್ ನಲ್ಲಿ ನಟಿಸಿದ್ದಾರೆ. 2020 ರಲ್ಲಿ ‘ ಆಯ್ತು ಬಿಡಿ’ ಎಂಬ ಆಲ್ಬಮ್ ಸಾಂಗ್ ಗೆ ಸಾಹಿತ್ಯ ಬರೆದು, ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಸದ್ಯ ಈ ಹಾಡಿಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.ಇದರೊಂದಿಗೆ ಸಿದ್ದು, ‘ಬ್ರಾಂಡೆಡ್ ಲವ್’ ಎಂಬ 30 ನಿಮಿಷದ ಕಿರುಚಿತ್ರ ತಯಾರಿಸಿದ್ದಾರೆ. ಈಗ ಇದೇ ಅನುಭವದೊಂದಿಗೆ ಒಂದು ಸಿನಿಮಾವನ್ನು ನಿರ್ದೇಶಿಸಿ, ನಿರ್ಮಿಸಿ, ನಟಿಸಿದ್ದಾರೆ. ಅದನ್ನೀಗ ಬಿಡುಗಡೆಗೆ ರೆಡಿ ಮಾಡುತ್ತಿದ್ದಾರೆ. ಮುಂದಿನ‌ ವರ್ಷ ಫೆಬ್ರವರಿಯಲ್ಲಿ ಒಂದು ಹಾಸ್ಯ ಪ್ರಧಾನ ಚಿತ್ರ ನಿರ್ದೇಶಿಸುವ ಯೋಚನೆಯಲ್ಲಿದ್ದಾರೆ ಸಿದ್ದು.

 

 

Categories
ಸಿನಿ ಸುದ್ದಿ

ಹೀಗೊಂದು ಸಿಹಿ ಸುದ್ದಿ ಗಂಡು ಗರ್ಭ ಧರಿಸಿದ ಕಥೆ!

ಇದು ನೂತನ ವೆಬ್ ಸೀರೀಸ್

ಈಗಾಗಲೇ ಕನ್ನಡದಲ್ಲಿ ತರಹೇವಾರಿ ಶೀರ್ಷಿಕೆ ‌ಇರುವ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಸದ್ಯಕ್ಕೆ ಮತ್ತೊಂದು ವಿಶೇಷ ಎನಿಸುವ, ಗಮನ ಸೆಳೆಯುವ ಶೀರ್ಷಿಕೆ ಹೊತ್ತ ವೆಬ್ ಸೀರೀಸ್ ಗೆ ಚಾಲನೆ ದೊರೆತಿದೆ.
ಹೌದು ಕನ್ನಡದಲ್ಲಿ ಈಗಂತೂ ವೆಬ್ ಸಿರೀಸ್ ಗಳ ಪರ್ವ. ಆ ಸಾಲಿಗೆ ‘ನಿಮಗೊಂದು ಸಿಹಿ ಸುದ್ದಿ’ ಹೆಸರಿನ‌ ವೆಬ್ ಸೀರೀಸ್ ಕೂಡ ಸೇರಿದೆ. ಇದೊಂದು ವಿಶೇಷ ಕಥಾಹಂದರ ಹೊಂದಿರುವ ವೆಬ್ ಸೀರೀಸ್.


ಕನ್ನಡದಲ್ಲಿ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸೊಬ್ಬನ ಕಥೆ ಈ ವೆಬ್ ಸೀರೀಸ್ ನಲ್ಲಿ ಮೂಡಿ ಬರಲಿದೆ.
ಹಾಗೆ ಹೇಳುವುದಾದರೆ, ಕನ್ನಡದ ಮಟ್ಟಿಗೆ ಇದು
ಹೊಸ ಕಾನ್ಸೆಪ್ಟ್. ಸುಮಾರು
ಎಂಟು ಎಪಿಸೋಡುಗಳನ್ನು ಹೊಂದಿರುವ ಈ ಫ್ಯಾಮಿಲಿ ಎಂಟರ್ಟೈನ್ಮೆಂಟ್ ವೆಬ್ ಸಿರೀಸ್ ಗೆ ಇತ್ತೀಚೆಗೆ ಪೂಜೆ ನೆರವೇರಿದೆ. ಪರ್ಪಲ್ ರಾಕ್ ಎಂಟರ್ಟೈನರ್ಸ್ ಮತ್ತು ಗೋಲ್ಡ್ ಚೈನ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಶುರುವಾಗುತ್ತಿರುವ ಈ ವೆಬ್ ಸರಣಿಗೆ ಗೋವಾದ ಶಾಂತದುರ್ಗ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ.
ಸುಮಾರು 30 ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.


‘ಡಿಯರ್ ಸತ್ಯ’ ಸಿನಿಮಾದ ಬಳಿಕ ಪರ್ಪಲ್ ರಾಕ್ ಎಂಟರ್ಟೈನರ್ಸ್ ಶುರು ಮಾಡುತ್ತಿರುವ ವೆಬ್ ಸೀರೀಸ್ ನಲ್ಲಿ ರಘು ಭಟ್ ಪ್ರಮುಖ ಆಕರ್ಷಣೆ. ಕಾವ್ಯ ಶೆಟ್ಟಿ ನಾಯಕಿ. ಆನಂದ್ ಸುಂದರೇಶ ಛಾಯಾಗ್ರಹಣವಿದೆ. ‘ಟೋಪಿವಾಲಾ’ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಸುಧೀಂದ್ರ ನಾಡಿಗರ್ ಆರ್ ಈ ವೆಬ್ ಸಿರೀಸ್ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

Categories
ಸಿನಿ ಸುದ್ದಿ

ಜಗ್ಗೇಶ್ ಕಲಾ ಬದುಕಿಗೆ ನಾಲ್ಕು ದಶಕ

ನವರಸ ನಾಯಕನ 40 ವರ್ಷಗಳ ಯಶಸ್ವಿ ಜರ್ನಿ

ಕನ್ನಡ ಚಿತ್ರರಂಗದ ನವರಸ ನಾಯಕ‌ ಅಂದಾಕ್ಷಣ ನೆನಪಾಗೋದೆ ಜಗ್ಗೇಶ್. ಕನ್ನಡ‌ ಚಿತ್ರರಗ ಕಂಡ ಅಪರೂಪದ ನಟ ಜಗ್ಗೇಶ್.
ಆರಂಭದ ದಿನಗಳಲ್ಲಿ ಅವಕಾಶಕ್ಕಾಗಿ ಅಲೆದಾಡುತ್ತಿದ್ದ ಜಗ್ಗೇಶ್ ಅವರ ಸಿನಿ ಜರ್ನಿ ನಿಜಕ್ಕೂ ಅದ್ಭುತ. ಅವರ ಸಿನಿಮಾ‌ ಪಯಣಕ್ಕೀಗ ನಾಲ್ಕು ದಶಕ.
ಹೌದು, ಜಗ್ಗೇಶ್ ಕಲಾ ಬದುಕಿಗೆ ಎಂಟ್ರಿಯಾಗಿ ನಲವತ್ತು ದಶಕಗಳಾಗಿವೆ. ಇಷ್ಟು ವರ್ಷಗಳ ಸಿನಿ ಬದುಕಲ್ಲಿ ಹಲವು ಸೋಲು‌ ಕಂಡಿದ್ದಾರೆ. ಬದುಕು ಕಟ್ಟಿಕೊಳ್ಳಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಗೆಲುವು ಬಂದಾಗ ಹಿಗ್ಗದ ಸೋಲು‌ ಕಂಡಾಗ ಕುಗ್ಗದ ಜಗ್ಗೇಶ್ ತಮ್ಮ ಸಿನಿಮಾ ಪಯಣದಲ್ಲಿ ಹಲವು ಬಗೆಯ ಪಾತ್ರಗಳ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದಾರೆ.


ಸಿನಿಮಾ‌ ಜೊತೆಗೆ ಜಗ್ಗೇಶ್ ಅವರು, ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ.
ಸಿನಿಮಾ ಜೊತೆ ಜೊತೆಗೆ ಅವರು ಕಿರುತೆರೆಯಲ್ಲೂ ಸದ್ದು ಮಾಡಿದ್ದು ಗೊತ್ತೇ ಇದೆ. ಸದಾ ರಾಯರ ನೆನೆಯುವ ಜಗ್ಗೇಶ್, ಈಗ ಯಶಸ್ವಿ ನಾಲ್ಕು ದಶಕ ಪೂರೈಸಿದ್ದಾರೆ. ಇನ್ನೂ ನಟನೆಯ ಉತ್ಸಹದಲ್ಲಿರುವ ಜಗ್ಗೇಶ್ ಇನ್ನಷ್ಟು ವಿಭಿನ್ನ ಸಿನಿಮಾ ಮಾಡಲಿ.

Categories
ಸಿನಿ ಸುದ್ದಿ

ತನಿಖೆಗೆ ಬಂದ ಹೊಸಬರು

ನವೆಂಬರ್‌ 20ಕ್ಕೆ ನಮ್ಮ ಫ್ಲಿಕ್ಸ್‌ನಲ್ಲಿ ಚಿತ್ರ ರಿಲೀಸ್

ಕನ್ನಡದಲ್ಲಿ ಈಗಾಗಲೇ ಓಟಿಟಿ ಫ್ಲಾಟ್‌ಫಾರ್ಮ್‌ ಮೂಲಕ ಒಂದಷ್ಟು ಸಿನಿಮಾಗಳು ಬಿಡುಗಡೆಯಾಗಿವೆ.ಇನ್ನಷ್ಟು ಚಿತ್ರಗಳು ಬಿಡುಗಡೆಗೂ ಸಜ್ಜಾಗಿವೆ. ಆ ಸಾಲಿಗೆ ಈಗ “ತನಿಖೆ” ಎಂಬ ಹೊಸಬರ ಚಿತ್ರವೂ ಸೇರಿದೆ

ಚಂದನಾ, ನಾಯಕಿ

“ತನಿಖೆ” ಎಂಬ ಶೀರ್ಷಿಕೆ ಕೇಳಿದಾಕ್ಷಣ, ಕಳೆದ ಎರಡುವರೆ ದಶಕದ ಹಿಂದೆ ಬಂದ ಗುಲ್ಜಾರ್‌ ಖಾನ್‌ ಅವರ “ತನಿಖೆ” ನೆನಪಾಗದೇ ಇರದು. ಈಗ ಆದೇ ಶೀರ್ಷಿಕೆ ಇಟ್ಟುಕೊಂಡು ಹೊಸಬರು ಹೊಸ ಪ್ರಯತ್ನದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು, ಈ ಹೊಸಬರ “ತನಿಖೆ” ಸಿನಿಮಾ ಈ ಹಿಂದೆಯೇ ತೆರೆಗೆ ಬರಬೇಕಿತ್ತು. ಕೊರೊನಾ ಹಾವಳಿಯಿಂದಾಗಿ, ಚಿತ್ರ ಈಗ ಬಿಡುಗಡೆಯಾಗುತ್ತಿದೆ. ಅದರಲ್ಲೂ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಎಂಬುದು ವಿಶೇಷ.

ತನಿಖೆ ಚಿತ್ರತಂಡ…

“ನಮ್ಮ ಫ್ಲಿಕ್ಸ್” ಎಂಬ ಓಟಿಟಿ ಫ್ಲಾಟ್‌ಫಾರ್ಮ್ ನಲ್ಲಿ ನವೆಂಬರ್‌ 20 ರಂದು “ತನಿಖೆ” ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಕಲಿಗೌಡ ನಿರ್ದೇಶನ ಮಾಡಿದ್ದಾರೆ. ಇವರಿಗೆ ಇದು ಮೊದಲ ಚಿತ್ರ. ತಮ್ಮ ಗೆಳೆಯರ ಜೊತೆಗೂಡಿ ನಿರ್ಮಾಣವನ್ನೂ ಮಾಡಿದ್ದಾರೆ. ಇನ್ನು, ಈ ಚಿತ್ರ ಬಿಡುಗಡೆ ಕುರಿತು ನಿರ್ದೇಶಕ ಕಲಿಗೌಡ ಹೇಳುವುದಿಷ್ಟು. “ಬಹುತೇಕ ಹೊಸಬರೇ ಸೇರಿ ಮಾಡಿರುವ “ತನಿಖೆ” ಇದು. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೊದಲೇ ನಾವು, “ನಮ್ಮ ಫ್ಲಿಕ್ಸ್” ಓಟಿಟಿ ಫ್ಲಾಟ್‌ಫಾರ್ಮ್‌ ನಲ್ಲಿ ನೇರವಾಗಿ ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೇ ನಾವು ಟಿಕೆಟ್‌ಗಳನ್ನೂ ವಿತರಿಸಿದ್ದೇವೆ. ಸುಮಾರು 30 ಸಾವಿರ ಟಿಕೆಟ್‌ ವಿತರಿಸಲಾಗಿದೆ. ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ೯೯ ರುಪಾಯಿ ಕೊಟ್ಟು ಟಿಕೆಟ್‌ ಖರೀದಿಸುವ ಪ್ರೇಕ್ಷಕ ನಾವು ಕೊಡುವ ಒಂದು ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ, ತಮ್ಮ ಮೊಬೈಲ್, ಲ್ಯಾಪ್‌ ಟಾಪ್‌, ಟಿವಿಯಲ್ಲಿ ನಮ್ಮ ಸಿನಿಮಾವನ್ನು ವೀಕ್ಷಿಸಬಹುದು.

ಕಲಿಗೌಡ, ನಿರ್ದೇಶಕ

 

ಕೇವಲ 99 ರುಪಾಯಿಗೆ ಮನೆಮಂದಿ ಕೂಡ ಸಿನಿಮಾ ನೋಡಬಹುದಾಗಿದೆ. ಇದೊಂದು ಒಳ್ಳೆಯ ವೇದಿಕೆಯಾಗಿದ್ದರಿಂದ ನಾವು ಓಟಿಟಿ ಮೊರೆ ಹೋಗಿದ್ದೇವೆ. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ಗ್ರಾಮದಲ್ಲಿ ನಡೆಯುವ ಕಥೆ. ಐವರು ಸೋಮಾರಿ ಗೆಳೆಯರ ಸುತ್ತ ನಡೆಯುವ ಸ್ಟೋರಿ ಇದಾಗಿದ್ದು, ಅವರು ಇರುವ ಹಳ್ಳಿಯಲ್ಲೊಂದು ಕ್ರೈಮ್‌ ನಡೆದು ಹೋಗುತ್ತದೆ. ಅದು ಅವರ ಮೇಲೆ ಆರೋಪ ಕೇಳಿಬರುತ್ತದೆ. ಆಗ ಭಯಗೊಂಡ ಆ ಐವರು ಗೆಳೆಯರು ಊರು ಬಿಟ್ಟು ಹೋಗುತ್ತಾರೆ. ಆಗ ಅಲ್ಲಿಗೆ ಬರುವ ಖಡಕ್‌ ಪೊಲೀಸ್‌ ಅಧಿಕಾರಿ, “ತನಿಖೆ” ನಡೆಸುತ್ತಾರೆ. ಆ ತನಿಖೆಯೇ ಸಸ್ಪೆನ್ಸ್.‌ ಅದನ್ನು ಸಿನಿಮಾದಲ್ಲೇ ನೋಡಬೇಕು” ಎನ್ನುತ್ತಾರೆ ಕಲಿಗೌಡ.
ಈ ಚಿತ್ರವನ್ನು “ನಮ್ಮ ಫ್ಲಿಕ್ಸ್”‌ ಬಿಡುಗಡೆ ಮಾಡುತ್ತಿರುವ ಓಟಿಟಿಯ ಮುಖ್ಯಸ್ಥ ವಿಜಯಪ್ರಕಾಶ್‌, ಮಾತನಾಡಿ, ಇದೊಂದು ಒಳ್ಳೆಯ ಬೆಳವಣಿಗೆ. ಸಿನಿಮಾ ತಂಡ ಹೊಸದು. ಅವರಿಗೆ ನಮ್ಮ ಫ್ಲಾಟ್‌ಫಾರ್ಮ್ ಕಲ್ಪಿಸಿಕೊಡುತ್ತಿದ್ದೇವೆ. ಈಗಾಗಲೇ30 ಸಾವಿರ ಟಿಕೆಟ್‌ ಸೇಲ್‌ ಆಗಿದೆ. ಚಿತ್ರ ಬಿಡುಗಡೆ ನಂತರವೂ ಚಿತ್ರಕ್ಕೆ ಟಿಕೆಟ್‌ ಪಡೆದು ವೀಕ್ಷಿಸಬಹುದು. ಕನ್ನಡ ಚಿತ್ರರಂಗಕ್ಕೆ, ಕನ್ನಡ ಚಿತ್ರಗಳಿಗಾಗಿಯೇ ಈ ವೇದಿಕೆ ಕಲ್ಪಿಸಲಾಗಿದೆ ಎಂದರು.


ನಾಯಕಿ ಚಂದನಾ ಜಾನಕಿ ಅವರಿಗೆ ಇದು ಮೊದಲ ಸಿನಿಮಾ. ಅವರು ಈ ಚಿತ್ರದ ಮೇಲೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದಾರಂತೆ. ಅವರೇ ಹೇಳುವಂತೆ, “ಇದು ನನ್ನ ಮೊದಲ ಚಿತ್ರ. ನಾನಿಲ್ಲಿ ಶಾಲೆಯ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದೇನೆ. ಕಾಲೇಜು ದಿನಗಳಲ್ಲಿ ಕ್ರಶ್‌ ಆಗುತ್ತೆ. ಆಮೇಲೆ ಒಂದಷ್ಟು ಸಮಸ್ಯೆಗಳೂ ನಡೆದುಹೋಗುತ್ತವೆ. ಆಗ ಏನೆಲ್ಲಾ ಸಮಸ್ಯೆ ಎದುರಿಸುತ್ತೇನೆ ಎಂಬುದು ಕಥೆ. ಈ ಚಿತ್ರ ನವೆಂಬರ್‌ 20 ರಂದು ರಿಲೀಸ್‌ ಆಗುತ್ತಿದೆ. ಎಲ್ಲರೂ ವೀಕ್ಷಿಸಿ, ಕನ್ನಡ ಚಿತ್ರರಂಗವನ್ನು ಬೆಳೆಸಿ” ಎಂದರು ಚಂದನಾ.
ಮಚ್ಚು ಮುನಿ ಅವರಿಗೆ ಇದು ಮೊದಲ ಚಿತ್ರವಂತೆ. ಇಲ್ಲಿ ಎಲ್ಲರೂ ಹೊಸಬರೇ ಸೇರಿ ಸಿನಿಮಾ ಮಾಡಿದ್ದೇವೆ. ನಮ್ಮಂತಹ ಹೊಸಬರನ್ನು ಪ್ರೋತ್ಸಾಹಿಸಿ ಎಂದರು ಮುನಿ. ಛಾಯಾಗ್ರಾಹಕ ಶ್ಯಾಮ್‌ ಸುಂದರ್‌ ಕೂಡ, “ತನಿಖೆ” ಚಿತ್ರ ಹೊಸಬರಿಂದ ಕೂಡಿದೆ. ಒಂದು ಕ್ರೈಂ ಸುತ್ತ ನಡೆಯುವ ಕಥೆ ಇದು. ಇಡೀ ಸಿನಿಮಾ ಸಸ್ಪೆನ್ಸ್‌ ಆಗಿಯೇ ಸಾಗಲಿದೆ ಎಂದರು. ಅನಿಲ್‌ ಆಡಿ, ಹರ್ಷಿಕಾ, ಅನಿಲ್‌,‌ ಅಪ್ಪು ಬಡಿಗೇರ್ ಇತರರು ಇದ್ದರು.

Categories
ಸಿನಿ ಸುದ್ದಿ

ಕಳೆದು ಹೋದ ಪಿಂಕಿ ಚಿತ್ರೋತ್ಸವಗಳಲ್ಲಿ ಪ್ರತ್ಯಕ್ಷ!

ಪಿಂಕಿ ಎಲ್ಲಿ ಕನ್ನಡ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮೆಚ್ಚುಗೆ

ಈಗಾಗಲೇ ಹಲವು ವಿದೇಶಗಳನ್ನು ಸುತ್ತಿ ಬಂದಿದ್ದಲ್ಲದೆ, ಅಲ್ಲಿನ ಜನರ ಪ್ರೀತಿಗೆ ಪಾತ್ರವಾಗಿದೆ. ಸೌತ್‌ ಕೊರಿಯಾದ ಬುಸಾನ್‌ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ಕೆಯಾದ ಭಾರತದ ೫ ಸಿನಿಮಾಗಳ ಪೈಕಿ “ಪಿಂಕಿ ಎಲ್ಲಿ” ಎಂಬ ಚಿತ್ರವೂ ಒಂದು. ಇನ್ನು, ಮುಂಬೈ ಫಿಲ್ಮ್‌ ಫೆಸ್ಟಿವಲ್‌ನ ಗೋಲ್ಡ್‌ ವಿಭಾಗದಲ್ಲೂ ಆಯ್ಕೆಯಾಗಿದೆ. ಇನ್ನು ಕಳೆದ ವರ್ಷ ಗೋವಾದ ಫಿಲ್ಮ್‌ ಬಜಾರ್‌ ಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರಶಸ್ತಿಗೆ ಭಾಜನವಾಗಿದೆ.

ಕನ್ನಡ ಚಿತ್ರರಂಗ ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿರುವುದು ಹೊಸದೇನಲ್ಲ. ಹಲವು ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಬಾಚಿಕೊಂಡಿರುವುದು ಗೊತ್ತೇ ಇದೆ. ಸದಾ ನೈಜತೆಗೆ ಹೆಚ್ಚು ಒತ್ತು ಕೊಡುವ ಮೂಲಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ವಿದೇಶಿ ಸಿನಿರಸಿಕರನ್ನು ರಂಜಿಸಿದ್ದಲ್ಲದೆ, ಅವರು ಅಂತಹ ಅಪರೂಪದ ಕನ್ನಡ ಸಿನಿಮಾಗಳ ಬಗ್ಗೆ ಹೊಗಳಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಅಂತಹ ಮೆಚ್ಚುಗೆಗೆ ಮತ್ತೊಂದು ಕನ್ನಡದ ಸಿನಿಮಾ ಪಾತ್ರವಾಗಿದೆ ಎಂಬುದು ವಿಶೇಷ. ಆ ಸಾಲಿಗೆ ಸೇರಿರುವ ಸಿನಿಮಾ. “ಪಿಂಕಿ ಎಲ್ಲಿ” ಎಂಬ ಸಿನಿಮಾ.

ವಿದೇಶದಲ್ಲಿ ಪಿಂಕಿ ಸದ್ದು

ವಿಶೇಷವೆಂದರೆ, “ಪಿಂಕಿ ಎಲ್ಲಿ” ಎಂಬ ಸಿನಿಮಾ ಸದ್ದಿಲ್ಲದೆಯೇ ಚಿತ್ರೀಕರಣಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೋರು ಸುದ್ದಿ ಮಾಡುತ್ತಿದೆ ಎಂಬುದು ಮತ್ತೊಂದು ವಿಶೇಷ. ಬಹುತೇಕ ಹೊಸ ಪ್ರತಿಭೆಗಳೇ ಇರುವ ಈ ಚಿತ್ರ ಈಗಾಗಲೇ ಹಲವು ವಿದೇಶಗಳನ್ನು ಸುತ್ತಿ ಬಂದಿದ್ದಲ್ಲದೆ, ಅಲ್ಲಿನ ಜನರ ಪ್ರೀತಿಗೆ ಪಾತ್ರವಾಗಿದೆ. ಸೌತ್‌ ಕೊರಿಯಾದ ಬುಸಾನ್‌ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ಕೆಯಾದ ಭಾರತದ ೫ ಸಿನಿಮಾಗಳ ಪೈಕಿ “ಪಿಂಕಿ ಎಲ್ಲಿ” ಎಂಬ ಚಿತ್ರವೂ ಒಂದು. ಇನ್ನು, ಮುಂಬೈ ಫಿಲ್ಮ್‌ ಫೆಸ್ಟಿವಲ್‌ನ ಗೋಲ್ಡ್‌ ವಿಭಾಗದಲ್ಲೂ ಆಯ್ಕೆಯಾಗಿದೆ. ಇನ್ನು ಕಳೆದ ವರ್ಷ ಗೋವಾದ ಫಿಲ್ಮ್‌ ಬಜಾರ್‌ ಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರಶಸ್ತಿಗೆ ಭಾಜನವಾಗಿದೆ.

ಮಗು ಸುತ್ತ ನಡೆಯೋ ತಲ್ಲಣದ ಕಥೆ

ಅಂದಹಾಗೆ, ಈ ಚಿತ್ರವನ್ನು ಪೃಥ್ವಿ ಕೊಣನೂರು ನಿರ್ದೇಶಿಸಿದ್ದಾರೆ. ಇವರಿಗೆ ಸಿನಿಮಾ ಹೊಸದೇನಲ್ಲ. ಮೂಲತಃ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಪೃಥ್ವಿ ಕೊಣನೂರು, ಈ ಹಿಂದೆ “ಆಲೆಗಳು” ಮತ್ತು “ರೈಲ್ವೇ ಚಿಲ್ಡ್ರನ್”‌ ಸಿನಿಮಾ ನಿರ್ದೇಶಿಸಿದ್ದಾರೆ. ತಮ್ಮ “ಪಿಂಕಿ ಎಲ್ಲಿ” ಸಿನಿಮಾ ಕುರಿತು “ಸಿನಿ ಲಹರಿ” ಜೊತೆ ಮಾತನಾಡುವ ಅವರು, “ಇದೊಂದು ಎಂಟು ತಿಂಗಳ ಮಗುವಿನ ಸುತ್ತ ನಡೆಯುವ ಕಥೆ. ಆ ಮಗು ಕಳೆದು ಹೋದಾಗ, ನಡೆಯುವ ಒಂದು ಕಥಾಹಂದರ ಹೊಂದಿದೆ. ನೈಜ ಘಟನೆಯೊಂದರ ಸ್ಫೂರ್ತಿಯಿಂದ ಮಾಡಿದ ಸಿನಿಮಾ ಇದು. ಮಗು ಕಳೆದಾಗ, ಸುತ್ತಲೂ ಆವರಿಸಿಕೊಳ್ಳುವ ಒಂದಷ್ಟು ಪಾತ್ರಗಳ ಗೊಂದಲ ಇತ್ಯಾದಿ ಸಿನಿಮಾದ ಹೈಲೈಟ್.‌ ಪ್ರಸ್ತುತ ನಗರಗಳಲ್ಲಿ ವಾಸಿಸುವ ಗಂಡ-ಹೆಂಡತಿ ಇಬ್ಬರೂ ಉದ್ಯೋಗಕ್ಕೆ ಹೊರ ಹೋದರೆ, ತಮ್ಮ ಮಗುವನ್ನು ನೋಡಿಕೊಳ್ಳುವಂತೆ ಮನೆಗೆಲಸದವರಿಗೆ ಬಿಡುತ್ತಾರೆ. ಆದರೆ, ಮನೆಗೆಲಸದವರು ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆ. ಆ ಮಗು ಯಾರ ಕೈಗೆ ಸಿಗುತ್ತದೆ. ಒಂದು ಹಂತದಲ್ಲಿ ಭಿಕ್ಷುಕರು ಈ ಮಗುವನ್ನು ಬಳಸಿಕೊಂಡು ಭಿಕ್ಷೆಗೆ ಮುಂದಾಗುತ್ತಾರೆ. ತಮ್ಮ ಮಗು ಕಳುವಾದಾಗ ನಡೆಯುವಂತಹ ತಲ್ಲಣವೇ ಕಥೆಯ ವಿಶೇಷ. ಇನ್ನು, ಈ ಚಿತ್ರದಲ್ಲಿ ಎಲ್ಲರೂ ಮೊದಲ ಸಲ ನಟಿಸಿದ್ದಾರೆ. ಬಹುತೇಕ ಸ್ಲಂ ವಾಸಿಗಳಿಂದಲೇ ನಟನೆ ಮಾಡಿಸಿದ್ದು ವಿಶೇಷ” ಎಂಬುದು ನಿರ್ದೇಶಕರ ಹೇಳಿಕೆ.

ಪೃಥ್ವಿ  ನಿರ್ದೇಶಕ

ಸಾಮಾಜಿಕ ಕಾಳಜಿ ಚಿತ್ರ

ನಟನೆ ಬಗ್ಗೆ ಏನೂ ಗೊತ್ತಿಲ್ಲದವರನ್ನು ಕರೆತಂದು, ಅವರಿಗೆ ಒಂದಷ್ಟು ತರಬೇಡಿ ಕೊಟ್ಟು ನಂತರ ಕ್ಯಾಮೆರಾ ಮುಂದೆ ನಿಲ್ಲಿಸಿರುವುದು ಸುಲಭದ ವಿಷಯವಲ್ಲ. ನೈಜತೆಗಾಗಿಯೇ ನಿರ್ದೇಶಕರು ಸ್ಲಂನಲ್ಲಿ ವಾಸಿಸುವ, ಕಥೆ ಮತ್ತು ಪಾತ್ರಕ್ಕೆ ಸೂಕ್ತವೆನಿಸುವ ಮಂದಿಯನ್ನು ಆಯ್ಕೆ ಮಾಡಿಕೊಂಡು ನಟನೆ ಮಾಡಿಸಿರುವುದು ಸವಾಲಿನ ಕೆಲಸ. ಸ್ಲಂ ಸೇರಿದಂತೆ ಇತರೆಡೆ ಚಿತ್ರೀಕರಿಸಲಾಗಿದೆ. ಇಂಥದ್ದೊಂದು ಸಾಮಾಜಿಕ ಕಾಳಜಿ ಇರುವಂತಹ ಸಿನಿಮಾ ನಿರ್ಮಾಣ ಮಾಡಿರುವುದು ಕೃಷ್ಣೇಗೌಡ. ತಮ್ಮ “ಪಿಂಕಿ ಎಲ್ಲಿ” ಸಿನಿಮಾ ಬಗ್ಗೆ ಹೇಳುವ ಅವರು, “ನಾನು ನಿರ್ದೇಶಕರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅಭಿರುಚಿ ಇರುವ ನಿರ್ಮಾಪಕರಿಗೆ ಇಂತಹ ನಿರ್ದೇಶಕರು ಸಿಗಬೇಕು.

ಕೃಷ್ಣೇಗೌಡ, ನಿರ್ಮಾಪಕ

ಒಂದೊಳ್ಳೆ ಚಿತ್ರ ಮಾಡಿದ ತೃಪ್ತಿ

ಒಳ್ಳೆಯ ಕಥೆಗಾರ. ಹೇಳಿದ್ದನ್ನು ಮಾಡಿ ತೋರಿಸುವ ನಿರ್ದೇಶಕ ಎನ್ನುವುದು ಗೊತ್ತಾದ ಮೇಲೆ, ಅವರಿಗೆ ನಾನು ಸಂಪೂರ್ಣ ಬೆಂಬಲ ಕೊಟ್ಟೆ. ನಿರ್ದೇಶಕರು ಹಾಲಿವುಡ್‌ನಲ್ಲಿ ಸಿನಿಮಾ ಕುರಿತು ಓದಿಕೊಂಡು ಬಂದವರು. ತುಂಬಾನೇ ಸೂಕ್ಷ್ಮತೆ ಇರುವ ಕಥೆ ಆಯ್ಕೆ ಮಾಡಿಕೊಂಡು, ಒಂದು ಸಾಮಾಜಿಕ ಬದ್ಧತೆ ಇಟ್ಟುಕೊಂಡು ಮಾಡಿರುವಂತಹ ಸಿನಿಮಾ ಇದು. ಈ ಚಿತ್ರ ನೋಡಿದವರು ಖಂಡಿತವಾಗಿಯೂ ಇದರ ಬಗ್ಗೆ ಮಾತಾಡುತ್ತಾರೆ. ದೊಡ್ಡ ಮಟ್ಟದಲ್ಲಿ ಜಾಗೃತಿಯೂ ಮೂಡುತ್ತದೆ. ಈ ಹಿಂದೆ ನಿರ್ದೇಶಕ ಪೃಥ್ವಿ ಕೊಣನೂರು ಅವರು, “ರೈಲ್ವೇ ಚಿಲ್ಡ್ರನ್”‌ ಸಿನಿಮಾ ಮಾಡಿದ್ದರು. ಆ ಚಿತ್ರ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಅಲ್ಲಿಯೂ ಕೂಡ ನೈಜತೆಗೆ ಒತ್ತು ಕೊಟ್ಟಿದ್ದರು. ಈಗ “ಪಿಂಕಿ ಎಲ್ಲಿ” ಸಿನಿಮಾದಲ್ಲೂ ಅಂತಹ ನೈಜತೆ ಕಾಣಬಹುದು. ಒಂದೊಳ್ಳೆಯ ಸಿನಮಾ ನಿರ್ಮಾಣ ಮಾಡಿದ್ದೇನೆ ಎಂಬ ತೃಪ್ತಿ ನನ್ನದು” ಎನ್ನುತ್ತಾರೆ ಕೃಷ್ಣೇಗೌಡ.

 

Categories
ಸಿನಿ ಸುದ್ದಿ

ಲವ್‌ ಮಾಕ್ಟೇಲ್‌ ಜೋಡಿಗೆ ಶುಭ ಕೋರಿದ ಸುದೀಪ್‌

ಸದಾ ಹೀಗೆ ಖುಷಿಯಾಗಿರಿ ಎಂದ ಕಿಚ್ಚ

ಶ್ರೀಲೀಲಾ

ಲವ್‌ಮಾಕ್ಟೇಲ್‌ ಮೂಲಕ ಜೋರು ಸುದ್ದಿಯಾದ “ಮದರಂಗಿ” ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಫೆಬ್ರವರಿ ೧೪ ರಂದು ಮದುವೆ ಆಗುತ್ತಿರುವುದನ್ನು ಘೋಷಿಸಿಕೊಂಡಿದ್ದಾರೆ. ಈ ಮುದ್ದಾದ ಜೋಡಿಗೆ ಈಗಾಗಲೇ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ನಟ ಕಿಚ್ಚ ಸುದೀಪ್‌ ಅವರೂ ಕೂಡ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ಜೋಡಿಗೆ ಶುಭಾಶಯ ಕೋರಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಶುಭಕೋರಿರುವ ಸುದೀಪ್‌, ‘ಫೆಬ್ರವರಿ 14ಕ್ಕೆ ಹೊಸ ಜೀವನಕ್ಕೆ ಕಾಲಿಡುತ್ತಿರುವ ನಿಮ್ಮಬ್ಬರಿಗೂ ಶುಭ ಹಾರೈಕೆಗಳು. ನೀವು ಯಾವಾಗಲು ಹೀಗೆ ಖುಷಿಯಾಗಿ ಜೊತೆಯಾಗಿರಿ’ ಎಂದಿದ್ದಾರೆ. ಜೊತೆಗೆ ಕೃಷ್ಣ ಮತ್ತು ಮಿಲನಾ ಅವರ ಫೋಟೋವನ್ನು ಶೇರ್‌ ಮಾಡಿದ್ದಾರೆ.

ಕಳೆದ ಆರು ವರ್ಷಗಳಿಂದಲೂ ಕೃಷ್ಣ ಮತ್ತು ಮಿಲನಾ ಇಬ್ಬರೂ ಪ್ರೀತಿಯಲ್ಲಿದ್ದರು. “ಲವ್‌ ಮಾಕ್ಟೇಲ್”‌ ಸಿನಿಮಾ ಹಿಟ್‌ ಆಗುತ್ತಿದ್ದಂತೆಯೇ, ಈ ಜೋಡಿ ಮಾಧ್ಯಮ ಎದುರು ಬಂದು ತಮ್ಮ ಪ್ರೀತಿಯನ್ನು ಹೇಳಿಕೊಂಡಿತ್ತು. ಇತ್ತೀಚೆಗೆ ತಾವು ಮದುವೆ ಆಗುವುದನ್ನು ಸಹ ಹೇಳಿಕೊಂಡಿದ್ದರು.   ಸದ್ಯಕ್ಕೆ ಮಿಲನಾ ನಾಗರಾಜ್, ಕೃಷ್ಣ ಇವರಿಬ್ಬರಿಗೂ ಸಾಕಷ್ಟು ಮಂದಿ ಶುಭಾಶಯ ಕೋರುತ್ತಿದ್ದಾರೆ. ಒಟ್ಟಾರೆ, ಪ್ರೇಮಿಗಳ ದಿನದಂದೇ ಈ ಪ್ರೇಮಿಗಳು ವಿವಾಹ ಆಗುತ್ತಿರುವುದು ಅವರ ಅಭಿಮಾನಿ ವರ್ಗಕ್ಕೆ ಖುಷಿ ಕೊಟ್ಟಿದೆ.

Categories
ಸಿನಿ ಸುದ್ದಿ

ಶೂಟಿಂಗ್‌ ಮುನ್ನವೇ ನಾನ್ ‌ ನಿಮ್ಗೆ ಸಿನ್ಮಾ ತೋರಿಸ್ತೀನಿ !

ನಿಮ್ಮ ಕಥೆಗೆ ಅನಿಮೇಷನ್‌ ಸ್ಪರ್ಶ

ಕನ್ನಡಕ್ಕೆ ಬಂದಿದೆ ಡಿಜಿಟಲ್‌ ಸ್ಟೋರಿಬೋರ್ಡ್‌ ಪ್ರಿವಿಶ್ಯುಲೇಷನ್‌ ಅನಿಮೇಷನ್‌ ಮೂವಿ

ಕಾಲ ಬದಲಾದಂತೆ ಚಿತ್ರರಂಗ ಕೂಡ ಬದಲಾಗುತ್ತಿದೆ. ಬದಲಾಗಿದೆ ಕೂಡ. ಚಿತ್ರರಂಗಕ್ಕೆ ಹೊಸ ಹೊಸ ತಾಂತ್ರಿಕತೆಯೂ ಬಂದಿದೆ. ನೋಡುಗನ ನೋಟವೂ ಬದಲಾಗಿದೆ. ಇವೆಲ್ಲದರ ಜೊತೆಗೆ ಈಗ ಮತ್ತೊಂದು ಹೊಸ ಹೊಸ ತಾಂತ್ರಿಕತೆ ಸೇರ್ಪಡೆಯಾಗಿದೆ. ಹೌದು, ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್‌ ಸ್ಟೋರಿ ಬೋರ್ಡ್‌ ಪ್ರಿವಿಶ್ಯುಲೇಷನ್‌ ಅನಿಮೇಷನ್‌ ಮೂವೀ ಎಂಬ ಹೊಸ ಕಲ್ಪನೆ ಪರಿಚಯವಾಗುತ್ತಿದೆ. ಇಂಥದ್ದೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿರೋದು ಶ್ರೀರಾಮ್‌ ಬಾಬು.

ಇಷ್ಟಕ್ಕೂ ಈ “ಡಿಜಿಟಲ್‌ ಸ್ಟೋರಿ ಬೋರ್ಡ್‌ ಪ್ರಿವಿಶ್ಯುಲೇಷನ್‌ ಅನಿಮೇಷನ್‌ ಮೂವೀ” ಬಗ್ಗೆ ಹೇಳುವುದಾದರೆ, ಇದೊಂದು ನಿರ್ದೇಶಕ ಹಾಗೂ ನಿರ್ಮಾಪಕರಿಗಾಗಿಯೇ ಪರಿಚಯಿಸುತ್ತಿರುವ ಹೊಸ ಕಲ್ಪನೆ. ಈಗಷ್ಟೇ ಇಂಡಸ್ಟ್ರಿಗೆ ಬರುವ, ಬಂದಿರುವ ಯುವ ನಿರ್ದೇಶಕ, ನಿರ್ಮಾಪಕರಿಗೆ ಸಿನಿಮಾ ಮೇಲಿನ ಹಿಡಿತ ಇರಲಿ ಎಂಬ ಕಾರಣಕ್ಕೆ ಇದನ್ನು ಪರಿಚಯಿಸಲಾಗಿದೆ. ಹಾಗಾದರೆ, ಇದೆಲ್ಲಾ ಹೇಗೆ ವರ್ಕೌಟ್‌ ಆಗತ್ತೆ ಎಂಬ ಪ್ರಶ್ನೆ ಎದುರಾಗಬಹುದು. ಒಂದು ಚಿತ್ರ ಮಾಡಲು ಹೊರಡುವ ನಿರ್ದೇಶಕ, ನಿರ್ಮಾಪಕ ಈ ಡಿಜಿಟಲ್‌ ಸ್ಟೋರಿಬೋರ್ಡ್‌ ಪ್ರಿವಿಶ್ಯುಲೇಷನ್‌ ಅನಿಮೇಷನ್‌ ಮೂವೀ ಎಂಬ ಹೊಸ ತಾಂತ್ರಿಕತೆಯನ್ನು ಬಳಸಿಕೊಂಡರೆ, ತಾವು ಮಾಡ ಹೊರಡುವ ಒಂದು ಸಿನಿಮಾದ ರೂಪವನ್ನು ಮೊದಲೇ ತಿಳಿದುಕೊಳ್ಳಬಹುದು. ಸಿನಿಮಾ ಬಜೆಟ್‌ ಪ್ರಕಾರ ಸಿನಿಮಾ ಮೂಡಿಬರುತ್ತೋ ಇಲ್ಲವೋ ಎಂಬುದನ್ನೂ ತಿಳಿದುಕೊಳ್ಳಬಹುದು. ನಿರ್ದೇಶಕ ಕಥೆ, ಚಿತ್ರಕಥೆಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬಹುದು. ಮೇಕಿಂಗ್‌ ಅನ್ನೂ ಕೂಡ ಹೊಸ ರೀತಿಯಲ್ಲಿ ಪ್ರಯತ್ನಿಸಲು ಮುಂದಾಗಬಹುದು. ಶೆಡ್ಯೂಲ್‌ ಪ್ಲಾನ್‌ ಕೂಡ ಕಡಿಮೆಗೊಳಿಸಿಕೊಳ್ಳಬಹುದು. ಇದರಿಂದ ನಿರ್ಮಾಪಕರಿಗೆ ನಿರ್ದೇಶಕರ ಮೇಲೆ ನಂಬಿಕೆ ಹೆಚ್ಚಾಗಲಿದೆ.

ನಿರ್ಮಾಪಕರಿಗೆ ತಮ್ಮ ಸಿನಿಮಾ ಬಜೆಟ್‌ನ ಶೇ. 30ರಷ್ಟು ಖರ್ಚು ಕಡಿಮೆ ಮಾಡಿಕೊಳ್ಳಬಹುದು. ದುಂದುವೆಚ್ಚಕ್ಕೂ ಕಡಿವಾಣ ಹಾಕಬಹುದು. ಆರಂಭದಲ್ಲೇ ಈ ಸಿನಿಮಾ ನಿರ್ಮಿಸಬೇಕಾ ಬೇಡವಾ ಎಂಬುದನನು ನಿರ್ಧರಿಸಬಹುದು. ಒಂದು ಸಿನಿಮಾದ ಕಥೆ ಕೇಳಿದರೆ, ಕಲ್ಪನೆ ಮೂಡಬಹುದಷ್ಟೆ. ಆದರೆ, ತಮ್ಮ ಸಿನಿಮಾ ಹೇಗೆ ಮೂಡಿಬರುತ್ತೆ ಎಂಬುದನ್ನು ಡಿಜಿಟಲ್‌ ಸ್ಟೋರಿಬೋರ್ಡ್‌ ಪ್ರಿವಿಶ್ಯುಲೇಷನ್‌ ಅನಿಮೇಷನ್‌ ಮೂವಿ ಮೂಲಕ ಹಿನ್ನೆಲೆ ಸಂಗೀತ, ಸಂಭಾಷಣೆ ಜೊತೆಗೆ ನೋಡಿದಾಗ ನಿರ್ಧರಿಸಲು ಅನುಕೂಲವಾಗುತ್ತೆ. ಒಂದು ಸಿನಿಮಾದ ಫೀಲ್‌ ಮೊದಲೇ ಸಿಕ್ಕಾಗ, ಏನು ಬೇಕು, ಬೇಡ ಅನ್ನುವುದನ್ನೂ ಇಲ್ಲಿ ನಿರ್ಧರಿಸಬಹುದು.

ಇಷ್ಟಕ್ಕೂ ಇಂತಹ ಪ್ರಯತ್ನಕ್ಕೆ ದೊಡ್ಡ ಬಜೆಟ್‌ ಬೇಕಾಗುತ್ತಾ ಎಂಬ ಪ್ರಶ್ನೆ ಕೂಡ ಮೂಡಬಹುದು. ಆದರೆ, ತ್ರೀಡಿ ಅನಿಮೇಷನ್‌ ಮೂವಿಗೆ ಚಿತ್ರವೊಂದರ ವೇಸ್ಟೇಡ್‌ ಅಮೌಂಟ್‌ ಸಾಕಾಗುತ್ತೆ. ಕಥೆ ಓಕೆ ಮಾಡುವ ನಿರ್ಮಾಪಕರು, ತಮ್ಮ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಬರೆಸಿಕೊಳ್ಳಲು ರೂಮ್‌ ಹಾಕಿ ಕಚೇರಿ ಶುರುಮಾಡಿ ಇತರೆ ಖರ್ಚುಗಳೊಂದಿಗೆ ಕೆಲಸ ಆರಂಭಿಸಿದರೆ, ಆ ಸ್ಕ್ರಿಪ್ಟ್‌ ಮುಗಿಯುವ ಹೊತ್ತಿಗೆ ಲಕ್ಷಾಂತರ ವೆಚ್ಚವಾಗಿರುತ್ತೆ. ಆದೇ ಈ ಡಿಜಿಟಲ್‌ ತಾಂತ್ರಿಕತೆಗೆ ಮೊರೆ ಹೋದರೆ, ಕಡಿಮೆ ವೆಚ್ಚದಲ್ಲಿ ಇಡೀ ಸಿನಿಮಾವನ್ನೇ ಚಿತ್ರ ಚಿತ್ರೀಕರಿಸುವ ಮೊದಲೇ ವೀಕ್ಷಿಸಬಹುದು. ಈ ಹೊಸ ತಾಂತ್ರಿಕತೆಗೆ ಹೆಚ್ಚು ಹಣ ಬೇಕಿಲ್ಲ. ಮೊದಲೇ ಎಲ್ಲವೂ ಸ್ಪಷ್ಟವಾಗಲಿದೆ. ಇಂತಹ ಪ್ರಯೋಗ ಬೇರೆ ಇಂಡಸ್ಟ್ರಿಯಲ್ಲೂ ಇದೆ. ಇಲ್ಲಿ ಅಳವಡಿಸಿಕೊಳ್ಳುವ ಮನಸ್ಸುಗಳು ಬೇಕಿದೆ. ಈಗ ಬಹುತೇಕ ಡಿಜಿಟಲ್‌ಮಯ ಆಗಿರುವುದರಿಂದ ಸಮಯ ಉಳಿಸಿಕೊಳ್ಳಲು ಇದೊಂದು ಸೂಕ್ತ ವೇದಿಕೆಯಾಗಬಹುದೇನೋ?

ಶೂಟಿಂಗ್‌ ಹೋಗುವ ಮುನ್ನವೇ ಈ ಪ್ರಯತ್ನ ಮಾಡಿದರೆ, ಇಡೀ ಸಿನಿಮಾ ಈ ಅನಿಮೇಷನ್‌ ಮೂವಿಯಲ್ಲಿ ಸಿಗಲಿದೆ. ಶಾಟ್‌ ಲೆಂಥ್‌ ಎಷ್ಟಿರಬೇಕು, ಡೈಲಾಗ್‌ ಎಷ್ಟಿರಬೇಕು, ಇತ್ಯಾದಿ ಸೀನ್‌ಗಳು ಹೇಗಿರಬೇಕು ಎಂಬುದು ಈ ಪ್ರಿವಿಶ್ಯಲೇಷನ್‌ ಅನಿಮೇಶನ್‌ ಮೂವಿಯಲ್ಲಿರಲಿದೆ. ಹೊಸದಾಗಿ ಸಿನಿಮಾ ಮಾಡಲು ಬರುವವರಿಗೆ ಈ ತಾಂತ್ರಿಕತೆ ಬಳಕೆಯಾದರೆ, ಖಂಡಿತ ಇಲ್ಲೊಂದಷ್ಟು ಕಲಿಯಬಹುದು. ಪ್ಲಾನ್‌ ಕೂಡ ಮಾಡಬಹುದು. ಇಷ್ಟಕ್ಕೂ ಈ ತಾಂತ್ರಿಕತೆ ಮೂಲಕ ಸಿನ್ಮಾ ರೂಪ ಪಡೆಯಲು ಕೇವಲ ಒಂದುವರೆ ತಿಂಗಳು ಸಾಕು.

ಶ್ರೀರಾಮ್‌ ಬಾಬು

ಇನ್ನು, ಶ್ರೀರಾಮ್‌ ಬಾಬು ತಮ್ಮ ಹರ್ ಶ್ರೀ ಕ್ರಿಯೇಟಿಂಗ್‌ನಡಿ ಈ ಹೊಸ ಡಿಜಿಟಲ್‌ ಮಾಧ್ಯಮ ಶುರು ಮಾಡಿದ್ದು, ಏಳು ಮಂದಿ ಕೆಲಸಗಾರರ ಜೊತೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ತಾಂತ್ರಿಕತೆ ಬಯಸುವವರು 9663961270 ಸಂಪರ್ಕಿಸಬಹುದು.

Categories
ಸಿನಿ ಸುದ್ದಿ

ಲವ್ ಗುರು ತರುಣ್ ಚಂದ್ರ ಮತ್ತೆ ಬಂದ್ರು!

ಐದು ವರ್ಷ ಗ್ಯಾಪ್ ಬಳಿ ಮತ್ತೆ

ಲವ್ ಗುರು ಅಂತ ಬಂದ ಗೆಳೆಯ

ರಂಗದಲ್ಲಿ ಹಲವರು‌ ಬಂದು‌ ಹೋಗಿದ್ದು ಗೊತ್ತೇ ಇದೆ. ಕೆಲವರು ಸಿನಿಮಾ ಮೂಲಕ ಸುದ್ದಿಯಾಗಿ ನಂತರ ಬೇರೆಲ್ಲೋ ಕೆಲಸಗಳಲ್ಲಿ ಬಿಝಿಯಾಗಿ ಆ ನಂತರ ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದೂ ಇದೆ. ಅಂತಹವರ ಸಾಲಿಗೆ ಈಗ ನಟ ತರುಣ್ ಚಂದ್ರ ಕೂಡ ಇದ್ದಾರೆ. ಲವ್ ಗುರು ,ಗೆಳೆಯ ಚಿತ್ರದ ಖ್ಯಾತಿಯ ನಟ ತರುಣ್ ಮತ್ತೆ ಬೆಳ್ಳಿತೆರೆಗೆ ಎಂಟ್ರಿ ಆಗಿದ್ದಾರೆ ಎಂಬುದು ಈ ಹೊತ್ತಿನ ಸುದ್ದಿ. ಸತತ ನಾಲ್ಕೈದು ವರ್ಷಗಳ ಗ್ಯಾಪ್ ನಂತರ “ಲವ್ ಗುರು” ಹೆಸರಿನ ಆಲ್ಬಂ‌ಸಾಂಗ್ ಮೂಲಕ‌ ಮತ್ತೆ ಕ್ಯಾಮೆರಾ ಎದುರಿಸಿದ್ದಾರೆ.‌ “ಲವ್ ಗುರು” ನಟ ತರುಣ್ ಅಭಿನಯದ ಹಿಟ್ ಚಿತ್ರದ ಹೆಸರು.

 

ಅದೇ ಹೆಸರಲ್ಲೀಗ ಗಣೇಶ್ ಪಾಪಣ್ಣ ನಿರ್ದೇಶನ ಮಾಡಿರುವ ಲವ್ ಗುರು ಆಲ್ಬಂ ಸಾಂಗ್ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ ತರುಣ್ ಚಂದ್ರ.  ಸುಮಾರು ಐದು ವರ್ಷಗಳಿಂದ ಚಿತ್ರರಂಗದಿಂದ ದೂರವುಳಿದಿದ್ದ ತರುಣ್ ,ಒಂದಷ್ಟು ಕಾಲ ಉದ್ಯಮದಲ್ಲಿದ್ದರು.‌ಆನಂತರ ನಿರ್ದೇಶನ ಕಲಿಕೆಗೆ ಅಂತ ಅಮೆರಿಕಕ್ಕೆ ಹೋಗಿದ್ದರು. ಅಲ್ಲಿಂದ ಬಂದು ನಿರ್ದೇಶನಕ್ಕೆ ಕಥೆ ಹುಡುಕುತ್ತಿದ್ದಾಗ “ಲವ್ ಗುರು” ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರಂತೆ.

 

 

ತರುಣ್ ಚಂದ್ರ ಅವರು ಎಲ್ಲರಿಗೂ ಗೊತ್ತಿರುವಂತೆ “ಗೆಳೆಯ” ಮೂಲಕ ಎಲ್ಲರಿಗೂ ಹತ್ತಿರವಾದವರು. “ಲವ್ ಗುರು” ಎಂಬ ಹಿಟ್ ಸಿನಿಮಾ ಕೊಟ್ಟವರು “ಪದೇ ಪದೇ” ಸಿನಿಮಾ‌ ಮೂಲಕವೂ ಸುದ್ದಿಯಾದವರು. ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರ “ನಾನಲ್ಲ” ಸಿನಿಮಾದಲ್ಲೂ ಗಮನಸೆಳೆದವರು. ಅತ್ತ ಸುದೀಪ್ ಜೊತೆಯಲ್ಲಿ ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ (ಸಿಸಿಎಲ್)ನಲ್ಲೂ ಕಾಣಿಸಿಕೊಂಡು ರಂಜಿಸಿದವರು. ಆ ಬಳಿಕ ಅವರು ವರ್ಷಾನುಗಟ್ಟಲೆ ಎಲ್ಲೂ ಸುದ್ದಿಯಾಗಲಿಲ್ಲ.ಈಗ ಮತ್ತೆ ಎಂಟ್ರಿಯಾಗಿದ್ದಾರೆ ಎಂಬುದು ಸಂತಸದ ಸುದ್ದಿ.

ಈ ಬಾರಿ ಅವರು ಸ್ಪೆಷಲ್ ಎಂಟ್ರಿ ಕೊಟ್ಟಿರುವುದು ವಿಶೇಷ. ಲಹರಿ ಮ್ಯೂಸಿಕ್ ಪ್ರೊಡಕ್ಷನ್ ತಯಾರಿಸಿರುವ ವಿಡಿಯೋ ಆಲ್ಬಂನಲ್ಲಿ ತರುಣ್ ಚಂದ್ರ ಕಾಣಿಸಿಕೊಡಿದ್ದಾರೆ. ಹೌದು ಅವರೀಗ ಲವ್‌ ಗುರು ವಿಡಿಯೊ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಲಹರಿ ಮ್ಯೂಸಿಕ್‌ ಒರಿಜಿನಲ್‌ನ ಮೊದಲ ಪ್ರಯತ್ನ ಎಂಬುದು ವಿಶೇಷ. ಗಣೇಶ್‌ ಪಾಪಣ್ಣ ನಿರ್ದೇಶನ ಮಾಡಿದ್ದಾರೆ. ಲಕ್ಕಿ ಲಕ್ಷ್ಮಣ್‌ ಹಾಡಿದ್ದಾರೆ.‌ ಇನ್ನು ನವೀನ್‌ ಮನೋಹರ್‌ ಇದನ್ನು ನಿರ್ಮಿಸಿದ್ದಾರೆ.

Categories
ಸಿನಿ ಸುದ್ದಿ

ಕತ್ಲೆ ಕಾಡಿನ ಹಾಡು ಪಾಡು !

ಹೀಗೊಂದು ಪ್ರಕೃತಿ ಬಗ್ಗೆ ಕಾಳಜಿಯ ಚಿತ್ರ

 

ನಿರ್ದೇಶಕ ರಾಜು ದೇವಸಂದ್ರ ಅವರ ನಿರ್ದೇಶನದ “ಕತ್ಲೆ ಕಾಡು” ಸಿನಿಮಾದ ಟೀಸರ್‌ ಮತ್ತು ಹಾಡುಗಳು  ಹೊರಬಂದಿವೆ. ಇದು ಹಿಂದಿ ಭಾಷೆಯಲ್ಲೂ ತಯಾರಾಗಿದ್ದು, ಅದಕ್ಕೆ “ಕಾಲ ಜಂಗಲ್”‌ ಎಂದು ಹೆಸರಿಡಲಾಗಿದೆ. ಪಂಕಜ್ ಕೊಠಾರಿ ಅವರು ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ. ಇನ್ನು ಈ ಹಾಡು ಮತ್ತು ಟೀಸರ್‌ ಸಿರಿಮ್ಯೂಸಿಕ್ ಸಂಸ್ಥೆ ಮೂಲಕ ಹೊರ ತರಲಾಗಿದೆ. ಇನ್ನು ಇದೇ ವೇಳೆ “ಕಾಲ ಜಂಗಲ್” ಹಿಂದಿ ಭಾಷೆಯ ಸಿನಿಮಾದ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಶಕ್ತಿ ಕಪೂರ್ ಅಭಿನಯದ “ಲೇನೆ ಕೆ ದೇನೆ” ಎಂಬ ಹಿಂದಿಯ ಹಾಸ್ಯ ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ.

ನಿಯಾಜುದ್ದೀನ್‌ ಈ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ರಾಜು ದೇವಸಂದ್ರ ನಿರ್ದೇಶನ ಮಾಡಿದ್ದಾರೆ. ಆರವ್‌ ರಿಶಿಕ್ ಸಂಗೀತವಿದೆ. ರಮೇಶ್ ಕೋಯಿರ ಛಾಯಾಗ್ರಹಣ ಮಾಡಿದ್ದಾರೆ. ಇನ್ನು ರಾಜ್ ಭಾಸ್ಕರ್ ಹಿನ್ನಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಶಿವಾಜಿನಗರ ಲಾಲ್ ಪ್ರಮುಖ ಪಾತ್ರ ನಿರ್ವಹಿಸಿದರೆ,  ಸಿಂಧುರಾವ್, ಸಿಂಚನ, ಸಂಜನಾ ನಾಯ್ಡು, ಸಂಜೀವ್ ಕುಮಾರ್ ಇತರರು ನಟಿಸಿದ್ದಾರೆ. ಕಥೆ ಕುರಿತು ಹೇಳುವುದಾದರೆ, ಇದೊಂದು ಪ್ರಕೃತಿ ಬಗ್ಗೆ ಕಾಳಜಿ ಇಟ್ಟುಕೊಂಡು ಹೆಣೆದಿರುವ ಕಾಲ್ಪನಿಕ ಕಥೆ.

ಬಹುತೇಕ ದಟ್ಟವಾದ ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಕತ್ಲೆ ಕಾಡಿಗೆ ಹೋದವರು ಯಾಕೆ ಆಚೆ ಬರೊಲ್ಲ ಎಂಬ ಕುತೂಹಲ ಚಿತ್ರದ ಹೈಲೈಟ್.‌ ಇದರೊಂದಿಗೆ ಮೂಢನಂಬಿಕೆ ವಿಷಯಗಳೂ ಇವೆ. ನಿರ್ಮಾಪಕ ನಿಯಾಜುದ್ದೀನ್‌ ಅವರು ಗಾಯಕರಾಗಿದ್ದು, ಅವರಿಲ್ಲಿ, ಕನ್ನಡ ಭಾಷೆಯ ಕುರಿತಾದ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್‌ ಮಂಡಳಿ “ಯು” ಪ್ರಮಾಣ ಪತ್ರ ನೀಡಿದ್ದು, ಶ್ರೀರಾಜ್‌ ವಿತರಣೆ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಧ್ರುವ ಈಗ ಇನ್ನಷ್ಟು ದುಬಾರಿ

ಉದಯ್ ಮೆಹ್ತಾ ಸಿನಿಮಾ ಟೈಟಲ್ ಫಿಕ್ಸ್

 

“ಪೊಗರು” ಚಿತ್ರ ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಬೆನ್ನಲೇ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್ ಜೋಡಿ ಮತ್ತೊಂದು ಚಿತ್ರಕ್ಕೆ ರೆಡಿಯಾಗಿದ್ದು ಗೊತ್ತೇ ಇದೆ. ವಾಸವಿ ಎಂಟರ್​ಪ್ರೈಸಸ್​​ ಅಡಿಯಲ್ಲಿ ಉದಯ್ ಕೆ. ಮೆಹ್ತಾ ಪ್ರೊಡಕ್ಸನ್ಸ್ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಎಂಬುದೂ ಎಲ್ಲರಿಗೂ ಗೊತ್ತು. ಅದ್ದೂರಿ‌ ವೆಚ್ಚದ ಸಿನಿಮಾ‌‌ಗೆ “ದುಬಾರಿ” ಎಂಬ ಶೀರ್ಷಿಕೆ ಇಡಲಾಗಿದೆ. ನವೆಂಬರ್ 6ಕ್ಕೆ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಶುಕ್ರವಾರ ಬೆಳಗ್ಗೆ 5 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ನವರಂಗ ಸಮೀಪದ ಗಣೇಶ್ ದೇವಾಲಯದಲ್ಲಿ ಪೂಜೆ ನೆರವೇರಿದೆ. ಹಿರಿಯ ನಟ ದೊಡ್ಡಣ್ಣ ಮತ್ತು ನಟಿ ತಾರಾ ಆಗಮಿಸಿ ತಂಡದ ಮುಹೂರ್ತಕ್ಕೆ ಚಾಲನೆ ನೀಡಿ, ಕ್ಲಾಪ್​ ಮಾಡಿದರು.   ಸರ್ಜಾ‌ ಕುಟುಂಬಕ್ಕೆ ತುಂಬಾನೆ ಹತ್ತಿರದಲ್ಲಿರುವ ನಿರ್ಮಾಪಕ‌ ಉದಯ್ ಕೆ.‌ಮೆಹ್ತಾ ಅವರು ತಮ್ಮ ಹೊಸ ಚಿತ್ರದ ಮುಹೂರ್ತವನ್ನು ಇತ್ತೀಚೆಗೆ ಬಸವೇಶ್ವರ ನಗರದಲ್ಲಿರುವ ಗಣೇಶ ದೇವಸ್ಥಾನದಲ್ಲಿ ನಡೆಸಿದ್ದರು.

ಈ ಹಿಂದೆ ಚಿರು ಕಾಂಬಿನೇಷನ್‌ಮೂಲಕ’ ಸಿಂಗ ‘ ಚಿತ್ರ ನಿರ್ಮಿಸಿ ತೆರೆಗೆ‌‌ ತಂದಿದ್ದ ನಿರ್ಮಾಪಕ‌ ಮೆಹ್ತಾ ಅವರು, ಆಗಲೇ ಧ್ರುವ ಸರ್ಜಾ ಕಾಂಬಿನೇಷನ್ ಮೂಲಕ‌ ಮತ್ತೊಂದು ಸಿನಿಮಾ‌ ನಿರ್ಮಾಣಕ್ಕೂ ಮುಂದಾಗಿದ್ದರು. ಇನ್ನು ನಂದ‌ಕಿಶೋರ್ ಈ ಚಿತ್ರ ನಿರ್ದೇಶಿಸಲಿದ್ದಾರೆ. ಕೊರೊನಾ ನಡುವೆಯೇ ಈಗ ಒಂದಷ್ಟು ಚಟುವಟಿಕೆಗಳಿಗೆ ಚಿತ್ರೋದ್ಯಮ ತೆರೆದುಕೊಂಡಿದೆ. ಅದರ ಬೆನ್ನಲೇ ಉದಯ್ ಮೆಹ್ತಾ ಅವರು ಧ್ರುವ ಸರ್ಜಾ ಅವರ “ದುಬಾರಿ” ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.  ಸದ್ಯ ಧ್ರುವ ಸರ್ಜಾ ಫ್ಯಾನ್ಸ್ ಗಳಿಗೆ ಕ್ರೇಜ್ ಹೆಚ್ಚಿಸಿದೆ. ಈಗಾಗಲೇ ಧ್ರುವ ಸರ್ಜಾ ಅವರ ಹುಟ್ಟುಹಬ್ಬಕ್ಕ ಒಂದು ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ. ಇದು ಧ್ರುವ ಸರ್ಜಾ ಅಭಿನಯದ ಐದನೇ ಸಿನಿಮಾ.

ನವೆಂಬರ್​ ಅಂತ್ಯದಲ್ಲಿ ಚಿತ್ರೀಕರಣ ಶುರು…

ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ, ನವೆಂಬರ್‌ ಅಂತ್ಯದಲ್ಲಿ ಚಿತ್ರೀಕರಣ ನಡೆಸಲು ತಯಾರಿ ನಡೆಸಿದೆ. “ಪೊಗರು” ನಿರ್ದೇಶಕ ನಂದಕಿಶೋರ್​, “ದುಬಾರಿ”ಗೂ ಆ್ಯಕ್ಷನ್​ ಕಟ್​ ಹೇಳಲಿದ್ದು, ಈಗಾಗಲೇ ಚಿತ್ರಕಥೆ ಎಲ್ಲವೂ ಅಂತಿಮವಾಗಿದೆ. ಈ ಕುರಿತು ಮಾತನಾಡುವ  ನಿರ್ಮಾಪಕ ಉದಯ್​ ಮೆಹ್ತಾ, “ಪ್ರೀ ಪ್ರೊಡಕ್ಷನ್​ ಕೆಲಸಗಳು ಬಹುತೇಕ ಎಲ್ಲವೂ ಮುಗಿದಿದೆ. ಮುಂದಿನ ದಿನಗಳಲ್ಲಿ ಚಿತ್ರೀಕರಣಕ್ಕೆ ಹೋಗಬೇಕಿದೆ. ಬೆಂಗಳೂರು, ಮಂಡ್ಯ ಮತ್ತು ವಿದೇಶದ ಹಲವೆಡೆ ಶೂಟಿಂಗ್ ನಡೆಯಲಿದೆ” ಎಂದು ವಿವರ ಕೊಡುತ್ತಾರೆ.

 

ಈಗಾಗಲೇ 8 ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಉದಯ್ ಮೆಹ್ತಾ, ಇದೀಗ 9 ಚಿತ್ರದಲ್ಲಿ ಧ್ರುವ ಜತೆ ಕೈ ಜೋಡಿಸಿದ್ದಾರೆ. ಅದ್ದೂರಿ ವೆಚ್ಚದಲ್ಲಿ ಈ ಚಿತ್ರ ಸಿದ್ಧವಾಗಲಿದ್ದು, ಹಿಂದೆಂದೂ ಕಾಣಿಸದ ರೀತಿಯಲ್ಲಿ ಸ್ಟೈಲಿಶ್​ ಆಗಿ ಧ್ರುವ ಕಾಣಿಸಿಕೊಳ್ಳಲಿದ್ದಾರಂತೆ.  ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತವಿದೆ. ಶೇಖರ್ ಚಂದ್ರು ಛಾಯಾಗ್ರಹಣ ಮಾಡಿದರೆ, ಕೆ.ಎಂ ಪ್ರಕಾಶ್​ ಸಂಕಲನವಿದೆ. ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಮತ್ತು ಪ್ರಶಾಂತ್ ರಾಜಪ್ಪ ಸಂಭಾಷಣೆ ಇದೆ. ಮುಹೂರ್ತ ವೇಳೆ ನಟ ಧರ್ಮ, ಚಂದನ್​ ಶೆಟ್ಟಿ, , ಮಹೇಶ್ ಕುಮಾರ್, ಪ್ರಥಮ್​ ಇತರರು ಇದ್ದರು.

 

“ರಿ” ಎಂಬ ಯಶಸ್ಸಿನ ಅಕ್ಷರ ಕುರಿತು ಗೊತ್ತಾ?

ಧ್ರುವ ಸರ್ಜಾ ಅವರೀಗ “ದುಬಾರಿ” ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಶೀರ್ಷಿಕೆಯಲ್ಲೊಂದು ವಿಶೇಷತೆಯೂ ಇದೆ. ಅದೇನೆಂದರೆ “ರೀ”. ಹೌದು, ಮೊದಲ ಚಿತ್ರ “ಅದ್ಧೂರಿ” ಆ ಬಳಿಕ ಬಂದಿದ್ದು, “ಭರ್ಜರಿ”. ಈಗ “ದುಬಾರಿ” ಇಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, “ರಿ”ಗೆ ಒಂದು ವಿಶೇಷ ಸಂಬಂಧವಂತೂ ಇದೆ. “ಪೊಗರು” ಚಿತ್ರದಲ್ಲಿ “ರಿ” ಇರದಿದ್ದರೂ, “ರ” ಅಕ್ಷರ ಕನೆಕ್ಟ್‌ ಇದೆ. “ರ ಮತ್ತು ರಿ”ಗೆ ಒಂದು ಯಶಸ್ಸಿದೆ. ಈಗಾಗಲೇ ಅದು ಸಾಬೀತಾಗಿದೆ ಕೂಡ. ಇಲ್ಲೂ “ರಿ” ಅಕ್ಷರ ಮುಂದುವರೆದಿದೆ. ಕನ್ನಡ ಚಿತ್ರರಂಗಕ್ಕೆ “ದುಬಾರಿ” ದೊಡ್ಡ ಕೊಡುಗೆ ಕೊಡಲಿ ಎಂಬುದು “ಸಿನಿ ಲಹರಿ” ಹಾರೈಕೆ.

 

error: Content is protected !!