ವೈರಲ್ ಆಯ್ತು ಬೆಣ್ಣೆದೋಸೆ ನಗರಿ ಡ್ಯಾನ್ಸರ್ಸ್
ರ್ಯಾಪ್ ಸಾಂಗ್
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹೊಸಬರ ಆಲ್ಬಂ ಸಾಂಗ್ ಹೊರಬಂದಿವೆ. ಇದಷ್ಟೇ ಅಲ್ಲ, ಬಹಳಷ್ಟು ಯುವಕರು ಹಿಪ್ಪಪ್ ಸಾಂಗ್, ರ್ಯಾಪ್ ಸಾಂಗ್‌ಗಳನ್ನೂ ಬಿಡುಗಡೆ ಮಾಡುತ್ತಿದ್ದಾರೆ. ತಮ್ಮದೇ ಶೈಲಿಯಲ್ಲಿ ಸಾಂಗ್ ಕಂಪೋಸ್ ಮಾಡಿ, ಅದಕ್ಕೊಂದು ಚಂದದ ನೃತ್ಯ ನಿರ್ದೇಶನ ಮಾಡಿ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಅಂತಹ ಪ್ಯಾಷನ್ ಇರೋ ಡ್ಯಾನ್ಸರ್ಸ್ ಸಾಲಿಗೆ ದಾವಣಗೆರೆ ಹುಡುಗರೂ ಸೇರಿದ್ದಾರೆ ಅನ್ನೋದೇ ವಿಶೇಷ.
ಹೇಳಿ ಕೇಳಿ ದಾವಣಗೆರೆ ಅಂದಾಕ್ಷಣ ನೆನಪಾಗೋದೇ ವಿದ್ಯಾನಗರಿ ಅನ್ನೋದು. ಅಲ್ಲಿ ವಿದ್ಯೆಯ ಜೊತೆಗೆ ಕಲೆಗೂ ಸಾಕಷ್ಟು ನಂಟು ಇದೆ. ರಂಗಭೂಮಿಯ ಅನೇಕ ಕಲಾವಿದರು ಬೀಡುಬಿಟ್ಟಿರುವ ನಗರವದು. ವಾಣಿಜ್ಯ ನಗರಿ ಎಂದೇ ಕರೆಸಿಕೊಳ್ಳುವ ದಾವಣಗೆರೆ ಮೊದಲಿನಿಂದಲೂ ಎಲ್ಲಾ ಪ್ರಾಕಾರಗಳಲ್ಲೂ ಸೈ ಎನಿಸಿಕೊಂಡಿದೆ. ಅಲ್ಲಿ, ಲಲಿತಕಲೆ, ನಾಟಕ, ಸಾಹಿತ್ಯ, ಕಲೆ, ಕ್ರೀಡೆ, ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಕಲೆಯನ್ನು ಹೊಂದಿರುವ ನೆಲವದು. ಈಗಾಗಲೇ ದಾವಣಗೆರೆ ಮಂದಿ ಈ ಕಲಾಕ್ಷೇತ್ರದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದುಂಟು. ಈಗ ಅಲ್ಲೊಂದು ಯುವಕರ ಗುಂಪು ರ್ಯಾಪ್ ಸಾಂಗ್‌ವೊಂದಕ್ಕೆ ಹಿಪ್ಪಪ್ ಸ್ಟೆಪ್ ಹಾಕುವ ಮೂಲಕ ಜೋರು ಸುದ್ದಿ ಮಾಡುತ್ತಿದೆ. ಅದೇ ಈ ಹೊತ್ತಿನ ವಿಶೇಷ.
ದಾವಣಗೆರೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದಲೂ ನಡೆಯುತ್ತಿರುವ ಡಿ-ವೈರಸ್ ಸ್ಟನ್ನರ್ಸ್ ಎಂಬ ಹೆಸರಿನ ಡ್ಯಾನ್ಸ್ ಶಾಲೆಯ ಹುಡುಗರು ಸೇರಿಕೊಂಡು “ಸುಮ್ ಸುಮ್ನೆ..” ಎಂಬ ಅಫಿಶಿಯಲ್ ಕನ್ನಡ ರ್ಯಾಪ್ ಡ್ಯಾನ್ಸ್ ಕವರ್” ಸಾಂಗ್‌ಗೆ ಕುಣಿದು ಕುಪ್ಪಳಿಸಿದ್ದಾರೆ. ಸುಮಾರು ೩.೨೦ ನಿಮಿಷ ಅವಧಿಯ ಈ ಹಾಡು “ಡಿ-ವೈರಸ್ ಸ್ಟನ್ನರ್ಸ್ ಡ್ಯಾನ್ಸ್ ಅಕಾಡೆಮಿ” ಹೆಸರಿನ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಗಂಟೆಗಳಲ್ಲೇ ಒಳ್ಳೆಯ ಮೆಚ್ಚುಗೆಗೂ ಪಾತ್ರವಾಗಿದೆ.
ಅಂದಹಾಗೆ, ಮಾರ್ಟಿನ್ ಯೊ, ಲೇಜಿ, ಬಿ ಅವರು ಬರೆದಿರುವ “ರ್ಯಾಪ್ ಅಂದ್ರೆ ಹೇಳೋದಲ್ಲ ಸುಮ್‌ಸುಮ್ನೆ… ಎಲ್ಲ ಗೊತ್ತು ಅನ್ನಬೇಡಿ ಸುಮ್ ಸುಮ್ನೆ.. ಹಾಡಲ್ಲಿ ಒಂದೊಳ್ಳೆಯ ತಾತ್ಪರ್ಯವಿದೆ. ಈಗಿನ ಯೂಥ್‌ಗೆ ಹೇಳುವಂತಹ ಸಂದೇಶವೂ ಇದೆ. ವಾಸ್ತವತೆಯ ಚಿತ್ರಣವೂ ಇದೆ. ಈ ಹಾಡಿಗೆ ಆನಂದ್ ಡಿವಿಎಸ್ ನೃತ್ಯ ನಿರ್ದೇಶನ ಮಾಡಿದ್ದಾರೆ. ತಮ್ಮ ಡ್ಯಾನ್ಸ್ ಶಾಲೆಯ ಸ್ಟುಡೆಂಟ್ ಇಟ್ಟುಕೊಂಡೇ ಈ ಹಾಡನ್ನು ಚಿತ್ರೀಕರಿಸಿದ್ದಾರೆ. ಈ ಹುಡುಗರ ರ್ಯಾಪ್ ಸಾಂಗ್ ಸ್ಟೆಪ್‌ಗೆ ವಿಜಯಕುಮಾರ್ ಜೆ.ಎಸ್. ಅವರು ಕ್ಯಾಮೆರಾ ಹಿಡಿದಿದ್ದಾರೆ. ಓಂಕಾರ್ ಅವರ ಸಂಕಲನವಿದೆ.
ಗೆಳೆಯರ ಪ್ರೀತಿ ಗೀತಿ ಇತ್ಯಾದಿ…
ಇಷ್ಟಕ್ಕೂ ಇಂಥದ್ದೊಂದು ರ್ಯಾಪ್ ಸಾಂಗ್ ಮಾಡೋಕೆ ಕಾರಣ, ಗೆಳೆತನ. ಆನಂದ್ ಡಿವಿಎಸ್, ವಿಜಯಕುಮಾರ್ ಗೆಳೆಯರು. ಆ ಗೆಳೆತನ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಇನ್ನು, ಕೋರಿಯೋಗ್ರಾಫರ್ ಆನಂದ್ ಡಿವಿಎಸ್ ಕುರಿತು ಹೇಳುವುದಾದರೆ, ಆನಂದ್ ಒಬ್ಬ ಪ್ರೊಫೆಷನಲ್ ಡ್ಯಾನ್ಸರ್. ಅಷ್ಟೇ ಅಲ್ಲ, ಡ್ಯಾನ್ಸನ್ನೇ ಬದುಕನ್ನಾಗಿಸಿಕೊಂಡಿದ್ದಾರೆ. ಇವರ ತಂದೆ ಆಟೋ ಓಡಿಸುತ್ತಿದ್ದಾರೆ. ಮಗನಿಗೆ ಡ್ಯಾನ್ಸ್ ಮೇಲಿರುವ ಪ್ರೀತಿ ಕಂಡು ಅವನಿಷ್ಟಕ್ಕೆ ಬಿಟ್ಟು ಬಿಟ್ಟಿದ್ದಾರೆ. ಸದಾ ಡ್ಯಾನ್ಸ್ ಮೇಲೆ ಪ್ರೀತಿ ಇಟ್ಟುಕೊಂಡಿರುವ ಆನಂದ್, ಈಗಾಗಲೇ ದಾವಣಗೆರೆ ಮಟ್ಟಿಗೆ ಸಾಕಷ್ಟು ಗುರುತಿಸಿಕೊಂಡಿದ್ದಾರೆ.
ಅಪ್ಪಟ ಕನ್ನಡಿಗನಾದರೂ ತೆಲುಗಿನ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಡಿ ಜೋಡಿ ರಿಯಾಲಿಟಿ ಶೋನಲ್ಲಿ ಅಸಿಸ್ಟೆಂಟ್ ಕೋರಿಯಾಗ್ರಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುವ ಮಹಾದಾಸೆ ಹೊಂದಿದ್ದಾರೆ. ಇತ್ತೀಚೆಗೆ ವಾಹಿನಿಯೊಂದರ ಡ್ಯಾನ್ಸ್ ಆಡಿಷನ್‌ನಲ್ಲೂ ಭಾಗವಹಿಸಿ ಗಮನಸೆಳೆದಿದ್ದಾರೆ. ಇನ್ನಷ್ಟೇ ವಾಹಿನಿಯಿಂದ ಕರೆ ಬರುವುದನ್ನು ನಿರೀಕ್ಷೆಯಲ್ಲಿದ್ದಾರೆ.
ಡ್ಯಾನ್ಸ್ ಪ್ರಿಯರಿಗೆ ಉಚಿತ ತರಬೇತಿ
ಈ ನಡುವೆ ದಾವಣಗೆರೆಯಲ್ಲಿ ಕಳೆದ ಏಳು ವರ್ಷಗಳ ಹಿಂದೆ ಶುರುವಾದ “ಡಿ-ವೈರಸ್ ಸ್ಟನ್ನರ್ಸ್ ಡ್ಯಾನ್ಸ್ ಅಕಾಡೆಮಿ”ಯಲ್ಲಿ ಕೋರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಡ್ಯಾನ್ಸ್ ಶಾಲೆ ಹುಟ್ಟು ಹಾಕಿದ್ದು, ದಯಾನಂದ್ ಎಸ್.ನಾಯಕ ಇವರು ಈ ಡ್ಯಾನ್ಸ್ ಶಾಲೆಯ ಮಾಸ್ಟರ್. ಸದ್ಯ ಬೆಂಗಳೂರಲ್ಲಿ ನೆಲೆಸಿರುವ ದಯಾನಂದ್ ಅವರು, ಆನಂದ್ ಡಿವಿಎಸ್ ಅವರಿಗೆ ಆ ಡ್ಯಾನ್ಸ್ ಶಾಲೆ ಒಪ್ಪಿಸಿದ್ದಾರೆ.
ಆನಂದ್ ಕೂಡ ಮಧ್ಯಮ ವರ್ಗದ ಹುಡುಗನಾಗಿದ್ದರಿಂದ ಡ್ಯಾನ್ಸ್ ಮೇಲೆ ಪ್ರೀತಿ ಇರುವ, ಶಾಲೆಗೆ ಶುಲ್ಕ ಕಟ್ಟಲು ಸಾಧ್ಯವಾಗದ ಹುಡುಗರಿಗೆ ಉಚಿತವಾಗಿಯೇ ಡ್ಯಾನ್ಸ್ ಕಲಿಕೆಯ ತರಬೇತಿ ಕೊಡುತ್ತಿದ್ದಾರೆ. ಅವರನ್ನೇ ಇಟ್ಟುಕೊಂಡು ಈಗ “ಸುಮ್ ಸುಮ್ನೆ” ಎಂಬ ರ್ಯಾಪ್ ಸಾಂಗ್ ಮಾಡಿದ್ದಾರೆ.
ಈ ಸಾಂಗ್ ಸ್ಪೆಷಾಲಿಟಿ ಅಂದರೆ, ಸಾಮಾನ್ಯವಾಗಿ ಈ ರ್ಯಾಪ್ ಸಾಂಗ್‌ನಲ್ಲಿ ಡ್ಯಾನ್ಸ್ ಕಮ್ಮಿ. ಬರೀ ಕೈ ಮೂವ್‌ಮೆಂಟ್ ಇರುತ್ತೆ. ಈ ಹಾಡಿಗೆ ಆನಂದ್ ತಮ್ಮ ತಂಡ ಕಟ್ಟಿಕೊಂಡು ಹಿಪ್ಪಪ್ ಸ್ಟೆಪ್ ಹಾಕಿದ್ದಾರೆ. ಈ ಹಾಡಲ್ಲಿ ರಜತ್ ತೆರದಾಳ್, ಪ್ರೀತಮ್, ಭರತ್, ಗುಣಶ್ರೀ, ಸೌಮ್ಯ ಕಾಣಿಸಿಕೊಂಡಿದ್ದು, ಹಾಡಿಗೆ ತಕ್ಕಂತೆ ಕಲರ್‌ಫುಲ್ ಸ್ಟೆಪ್ ಹಾಕಿದ್ದಾರೆ. ಅದೇನೆ ಇರಲಿ, ದಾವಣಗೆರೆ ಹುಡುಗರ ಈ ರ್ಯಾಪ್ ಸಾಂಗ್ ನೋಡುವುದರ ಜೊತೆಗೆ ಒಂದು ಮೆಚ್ಚುಗೆ ಇರಲಿ.