Categories
ಸೌತ್‌ ಸೆನ್ಸೇಷನ್

ರಶ್ಮಿಕಾ ಮಂದಣ್ಣ ಕಾರ್ತಿ ಜೋಡಿಯ ಸುಲ್ತಾನ್‌ ಟೀಸರ್‌ ಔಟ್‌!

ಏಪ್ರಿಲ್‌ 2ಕ್ಕೆ ಸಿನಿಮಾ ಬಿಡುಗಡೆ

ಕಾರ್ತಿ ನಟನೆಯ ಬಹುನಿರೀಕ್ಷಿತ ತಮಿಳು ಸಿನಿಮಾ ‘ಸುಲ್ತಾನ್‌’ ಟೀಸರ್ ಬಿಡುಗಡೆಯಾಗಿದೆ. ಇಲ್ಲಿ ಮಹಾಭಾರತದಲ್ಲಿನ ಪಾಂಡವರು ಹಾಗೂ ಕೌರವರ ಕುರಿತಂತೆ ಶ್ರೀಕೃಷ್ಣನ ಮಾತುಗಳು ಹಿನ್ನೆಲೆಯಲ್ಲಿ ಕೇಳಿಸುತ್ತವೆ. ಕೃಷ್ಣನು ಕೌರವರನ್ನು ಬೆಂಬಲಿಸಿದಂತೆ ಮಾತುಗಳಿರುವುದು ವಿಶೇಷ. ಕ್ರಿಮಿನಲ್‌ಗಳ ನೆಲಕ್ಕೆ ಎಂಟ್ರಿ ಕೊಡುವ ಹೀರೋ ದುಷ್ಟರನ್ನು ಸಂಹರಿಸುವ ಎಂದಿನ ಕತೆಯ ಎಳೆ ಕಾಣಿಸುತ್ತವೆ.

ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಕಾಲಿವುಡ್‌ ಹಾಸ್ಯನಟ ಯೋಗಿಬಾಬು, ಮಾಲಿವುಡ್ ನಟರಾದ ಲಾಲ್ ಮತ್ತು ಹರೀಶ್‌ ಪೆರಾಡಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ರೆಮೋ’ ಸಿನಿಮಾ ಖ್ಯಾತಿಯ ಭಾಗ್ಯರಾಜ್ ಕಣ್ಣನ್‌ ‘ಸುಲ್ತಾನ್‌’ ನಿರ್ದೇಶನ ಮಾಡಿರುವುದು ವಿಶೇಷ. ಸದ್ಯ ದಕ್ಷಿಣ ಭಾರತದ ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ, ಇಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ತಮಿಳಿನಲ್ಲಿ ಇದು ಅವರ ಮೊದಲ ಸಿನಿಮಾ. ಹೀರೋ ಕಾರ್ತಿ ಸದ್ಯ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್‌’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಮರರ್ ಕಲ್ಕಿ ಅವರ ಅದೇ ಶೀರ್ಷಿಕೆಯ ತಮಿಳು ಕೃತಿಯನ್ನು ಆಧರಿಸಿ ತಯಾರಾಗುತ್ತಿರುವ ಚಿತ್ರವಿದು. ಕೊರೋನಾ ಲಾಕ್‌ಡೌನ್‌ಗಿಂತ ಮುಂಚೆ ಈ ಚಿತ್ರದ ಕೆಲವು ಸನ್ನಿವೇಶಗಳನ್ನು ಚಿತ್ರಿಸಲಾಗಿತ್ತು. ಇದೀಗ ಮತ್ತೆ ಚಿತ್ರೀಕರಣ ಶುರುವಾಗಿದೆ.

Categories
ಸೌತ್‌ ಸೆನ್ಸೇಷನ್

ಕಾಜಲ್‌ ಕಪಲ್‌ ಫೋಟೋಗೆ ಭರ್ಜರಿ ಮೆಚ್ಚುಗೆ

ಪತಿ ಜೊತೆಗಿನ ಫೋಟೋ ಶೇರ್‌ ಮಾಡಿದ ಕಾಜಲ್‌

ಸೋಷಿಯಲ್ ಮೀಡಿಯಾದಲ್ಲಿ ಜೋಡಿಗೆ ಭರ್ಜರಿ ರೆಸ್ಪಾನ್ಸ್‌!

ದಕ್ಷಿಣ ಭಾರತದ ಜನಪ್ರಿಯ ನಟಿ ಕಾಜಲ್ ಅಗರ್‌ವಾಲ್‌ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿದ್ದರು. ಆಗಿನಿಂದ ಅವರು ಆಗಾಗ ಪತಿಯೊಂದಿಗಿನ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ಗೆ ಹಾಕುತ್ತಲೇ ಸುದ್ದಿಯಾಗುತ್ತಿದ್ದರು. ಇದೀಗ ಅವರು ತಮ್ಮ ವಿವಾಹ ಆರತಕ್ಷತೆಯ ಫೋಟೋವೊಂದನ್ನು ಹಾಕಿದ್ದಾರೆ.

ತಮ್ಮ ಮದುವೆ ಸಮಾರಂಭದ ಬಗ್ಗೆ ಕಾಜಲ್‌ ಮೊನ್ನೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, “ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಸೊಗಸಾದ ಊಟ ಮತ್ತು ಸಂಗೀತದೊಂದಿಗೆ ಮದುವೆ ಸಮಾರಂಭವನ್ನು ಸಖತ್ ಎಂಜಾಯ್ ಮಾಡಿದೆವು” ಎಂದಿದ್ದರು. ಕಾಜಲ್ ಮತ್ತು ಗೌತಮ್‌ ಅವರದ್ದು ಒಂಬತ್ತು ವರ್ಷಗಳ ಪರಿಚಯ. ಕಳೆದ ಮೂರು ವರ್ಷಗಳಿಂದ ಡೇಟಿಂಗ್‌ ನಡೆಸಿದ್ದ ಜೋಡಿ ಅಕ್ಟೋಬರ್‌ನಲ್ಲಿ ದಾಂಪತ್ಯ ಬದುಕಿಗೆ ಅಡಿಯಿರಿಸಿದ್ದರು. “ಸ್ನೇಹಿತೆಯೊಬ್ಬರ ಮದುವೆ ಸಮಾರಂಭದಲ್ಲಿ ನನಗೆ ಗೌತಮ್ ಪರಿಚಿತರಾಗಿದ್ದರು.

ಸ್ನೇಹಿತರಾಗಿದ್ದ ನಾವು ಕ್ರಮೇಣ ಪ್ರೇಮಿಗಳಾಗಿ ಈಗ ದಂಪತಿಯಾಗಿದ್ದೇವೆ” ಎನ್ನುವುದು ಅವರ ಮಾತು. ಸದ್ಯ ಶಂಕರ್ ನಿರ್ದೇಶನದ ‘ಇಂಡಿಯನ್‌ 2’ ತಮಿಳು ಚಿತ್ರದಲ್ಲಿ ಕಮಲ ಹಾಸನ್‌ ಜೋಡಿಯಾಗಿ ಕಾಜಲ್‌ ನಟಿಸುತ್ತಿದ್ದಾರೆ. ವೆಂಕಟ್ ಪ್ರಭು ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಲೈವ್ ಟೆಲಿಕಾಸ್ಟ್‌’ನೊಂದಿಗೆ ಅವರು ಮೊದಲ ಬಾರಿ ವೆಬ್‌ ಸರಣಿಯಲ್ಲಿ ಅಭಿನಯಿಸುತ್ತಿರುವುದು ವಿಶೇಷ.

Categories
ಸೌತ್‌ ಸೆನ್ಸೇಷನ್

ಬ್ರಹ್ಮಾನಂದಂಗೆ ಬರ್ತ್‌ಡೇ ಸಂಭ್ರಮ

ಜನಪ್ರಿಯ ಹಾಸ್ಯನಟನಿಗೆ ಸ್ಟಾರ್ಸ್‌ ಶುಭ ಹಾರೈಕೆ

ತೆಲುಗು ಚಿತ್ರರಂಗದಲ್ಲಿ ಬ್ರಹ್ಮಾನಂದಂ ಹೆಸರು ಕೇಳಿದವರಿಗೆ ಹಾಗೊಂದು ಜೋರು ನಗು ಬರದೇ ಇರದು. ಅಷ್ಟರಮಟ್ಟಿಗೆ ಸಿನಿರಸಿಕರವನ್ನು ನಕ್ಕು ನಲಿಸಿರುವ ಖ್ಯಾತಿ ಈ ಬ್ರಹ್ಮಾನಂದಂ ಅವರಿಗಿದೆ. ಈಗ ಬ್ರಹ್ಮಾನಂದಂ ಅವರ ಕುರಿತು ಇಷ್ಟೊಂದು ಪೀಠಿಕೆ ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಬ್ರಹ್ಮಾನಂದ್‌ ಈಗ 65ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ತೆಲುಗು ಚಿತ್ರರಂಗದ ಜನಪ್ರಿಯ ತಾರೆಯರೆಲ್ಲರೂ ಶುಭ ಹಾರೈಸಿದ್ದಾರೆ. ತೆಲುಗು, ತಮಿಳು, ಕನ್ನಡ, ಹಿಂದಿ ಸೇರಿದಂತೆ 1200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಬ್ರಹ್ಮಾನಂದಂ ಅವರಿಗಿದೆ.

ಪದ್ಮಶ್ರೀ ಪುರಸ್ಕೃತ ನಟ “ಆಹಾ ನಾ ಪೆಳ್ಳಂಟ” (1986) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಇವರು, ನಟರಾಗುವ ಮುನ್ನ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಪದ್ಮಶ್ರೀ ಪುರಸ್ಕೃತ ನಟನಿಗೆ ಈವರೆಗೆ ಹತ್ತಾರು ಗೌರವಗಳು ಸಂದಿವೆ.

ತಮ್ಮೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿರುವ ಬ್ರಹ್ಮಾನಂದಂ ಅವರಿಗೆ ತೆಲುಗು ತಾರೆಯರು ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ. ನಟ ರಾಮ್‌ಚರಣ್ ತೇಜಾ, “ಕಾಮಿಡಿ ಕಿಂಗ್‌ ಬ್ರಹ್ಮಾನಂದಂ ಅಂಕಲ್‌ಗೆ ಶುಭಾಶಯ” ಎಂದು ಹಾರೈಸಿದ್ದಾರೆ. ನಟ ವರುಣ್ ತೇಜ್‌ ಅವರು ಬ್ರಹ್ಮಾನಂದ ಜೊತೆಗಿನ ತಮ್ಮ ಫೋಟೋ ಹಾಕಿ ಶುಭ ಕೋರಿದ್ದಾರೆ.

ನಟರಾದ ರವಿ ತೇಜಾ, ಅಲ್ಲು ಅರ್ಜುನ್‌, ನಿರ್ದೇಶಕರಾದ ಸುರೇಂದರ್‌ ರೆಡ್ಡಿ, ಬಾಬ್ಬಿ, ಗೋಪಿಚಂದ್ ಮಾಲಿನೇನಿ, ವೆನ್ನಲ ಕಿಶೋರ್‌, ಹರೀಶ್ ಶಂಕರ್‌, ನಟ ಸಾಯಿ ಧರ್ಮ್‌ ತೇಜ್‌, ಚಿತ್ರಸಾಹಿತಿ ಕೋನಾ ವೆಂಕಟ್‌ ಸೇರಿದಂತೆ ಚಿತ್ರರಂಗದ ಹಲವರು ಹಿರಿಯ ಹಾಸ್ಯನಟನಿಗೆ ಶುಭ ಕೋರಿದ್ದಾರೆ.

Categories
ಸೌತ್‌ ಸೆನ್ಸೇಷನ್

ಏಪ್ರಿಲ್‌ಗೆ ಧನುಷ್‌ ಅವರ ಕರ್ಣನ್‌ ರಿಲೀಸ್‌

ಬಿಡುಗಡೆ ದಿನ ಘೋಷಿಸಿ ವೀಡಿಯೋ, ಪೋಸ್ಟರ್ ಟ್ವೀಟ್ ಮಾಡಿದ ನಟ

ಅಭಿಮಾನಿಗಳು ಫುಲ್‌ ಖುಷ್‌

“ಪೆರಿಯೇರುಮ್‌ ಪೆರುಮಾಳ್‌” ಸಿನಿಮಾ ಖ್ಯಾತಿಯ ಮಾರಿ ಸೆಲ್ವರಾಜ್‌ ನಿರ್ದೇಶನದಲ್ಲಿ ಧನುಷ್‌ ನಟಿಸಿರುವ “ಕರ್ಣನ್‌” ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಏಪ್ರಿಲ್‌ನಲ್ಲಿ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರ ಓಟಿಟಿಯಲ್ಲಿ ತೆರೆಕಾಣಲಿದೆ ಎನ್ನುವ ಸುದ್ದಿ ಜೋರಾಗಿಯೇ ಓಡಾಡುತ್ತಿತ್ತು. ಸಹಜವಾಗಿಯೇ ಈ ಸುದ್ದಿಯಿಂದ ವಿತರಕರು ಹಾಗೂ ಪ್ರದರ್ಶಕರು ಆತಂಕಗೊಂಡಿದ್ದರು. ಇದೀಗ ಸಿನಿಮಾ ಥಿಯೇಟರ್‌ಗಳಲ್ಲಿ ತೆರೆಕಾಣುವುದು ಖಚಿತವಾಗಿದ್ದು, ನಟ ಧನುಷ್‌ ಈ ಬೆವಳವಣಿಗೆ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

“ಕರ್ಣನ್‌ ಏಪ್ರಿಲ್‌ನಲ್ಲಿ ಥಿಯೇಟರ್‌ಗೆ ಬರಲಿದೆ. ಕೊರೊನಾ ಸಂಕಷ್ಟದಲ್ಲಿರುವ ಉದ್ಯಮಕ್ಕೆ ಇದು ಒಳ್ಳೆಯ ಸುದ್ದಿ. ನಮ್ಮ ನಿರ್ಮಾಪಕರು ಉದ್ಯಮದ ವಿತರಕರು, ಪ್ರದರ್ಶಕರು ಹಾಗೂ ಚಿತ್ರರಂಗವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಾಗಿ ಅವರಿಗೆ ನನ್ನ ಮತ್ತು ಅಭಿಮಾನಿಗಳೆಲ್ಲರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ” ಎಂದು ಧನುಷ್ ಟ್ವೀಟ್ ಮಾಡಿದ್ದಾರೆ.

ಚಿತ್ರದಲ್ಲಿ ಧನುಷ್‌ಗೆ ನಾಯಕಿಯಾಗಿ ರಜಿಶಾ ವಿಜಯನ್‌ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾಗಿರುವ ಚಿತ್ರದ ಹೊಸ ಪೋಸ್ಟರ್‌ನಲ್ಲಿ ಬೆಟ್ಟದ ತುದಿಯಲ್ಲಿ ಕತ್ತಿಯನ್ನು ಹಿಡಿದು ನಿಂತಿರುವ ಧನುಷ್‌ ಕಾಣಿಸುತ್ತಿದ್ದಾರೆ. ಕೆಳಗೆ ದೊಡ್ಡ ಸಂಖ್ಯೆಯ ಜನರು ಅವರೆಡೆ ನೋಡುತ್ತಿರುವಂತಿದೆ. ಸಿನಿಮಾ ಬಿಡುಗಡೆ ಸುದ್ದಿಯನ್ನು ಹೇಳುವ ಆಕರ್ಷಕ ಬ್ಲಾಕ್‌ ಅಂಡ್‌ ವೈಟ್ ವೀಡಿಯೋ ಕೂಡ ಇದೆ! ಈ ವೀಡಿಯೋ ಗಮನಿಸಿದಾಗ ಇದೊಂದು ಪೀರಿಯಡ್‌ ಡ್ರಾಮಾ ಇರಬಹುದೆಂದು ಊಹಿಸಬಹುದು.

“ನಾನು ಕೇಳಿದ ಕಾಲ್ಪನಿಕ ಕಥೆಯೊಂದನ್ನು ಸಿನಿಮಾ ಮಾಡಿದ್ದೇನೆ. ಹಾಗೆ ನೋಡಿದರೆ ‘ಕರ್ಣನ್‌’ ನನ್ನ ನಿರ್ದೇಶನದ ಮೊದಲ ಚಿತ್ರವಾಗಬೇಕಿತ್ತು. ಹಿರಿಯರ ಸಲಹೆ ಮೇರೆಗೆ ಮೊದಲು ‘ಪೆರಿಯೇರುಮ್‌ ಪೆರುಮಾಳ್‌’ ಸಿನಿಮಾ ಮಾಡಿದೆ. ಆ ಚಿತ್ರ ನೋಡಿದ ನಂತರ ನಟ ಧನುಷ್ ತಾವಾಗಿಯೇ ಕರೆ ಮಾಡಿದ್ದರು. ಅಲ್ಲಿಂದ ಮುಂದೆ ‘ಕರ್ಣನ್‌’ಗೆ ಚಾಲನೆ ಸಿಕ್ಕಿತು” ಎನ್ನುತ್ತಾರೆ ನಿರ್ದೇಶಕ ಮಾರಿ ಸೆಲ್ವರಾಜ್‌. ಅದೇನೆ ಇರಲಿ, ಧನುಷ್‌ ಫ್ಯಾನ್ಸ್‌ ಈಗ ಭರ್ಜರಿ ಖುಷಿಯಲ್ಲಿರುವುದಂತೂ ದಿಟ.

Categories
ಸಿನಿ ಸುದ್ದಿ

ಅಥಿರಾ ಈಕೆ ಮಲಯಾಳಿ ಹುಡುಗಿ

ಆದ್ರೂ ಅಪ್ಪಟ ಕನ್ನಡತಿ ಕಣ್ರೀ ಈ ಬೆಡಗಿ

 

ದಿನ ಕಳೆದಂತೆ ಕನ್ನಡಕ್ಕೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಅಥಿರಾ ಎಂಬ ನವನಟಿ ಕೂಡ ಸೇರಿದ್ದಾರೆ. ಹೌದು, ಅಥಿರಾ ಈಗಷ್ಟೇ ಕನ್ನಡ ಚಿತ್ರರಂಗದ ಬಾಗಿಲ ಬಳಿ ಬಂದು ನಿಂತಿದ್ದಾರೆ. ಇದಕ್ಕೂ ಮುನ್ನ, ಮಲಯಾಳಂ ಚಿತ್ರರಂಗದಲ್ಲಿ ಕಾಲಿಟ್ಟು, ಸೈ ಎನಿಸಿಕೊಂಡಿದ್ದಾರೆ. ಅಂದಹಾಗೆ, ಅಥಿರಾ “ಹಾಫ್‌” ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ್ದಾರೆ. ಹೌದು, ಅಥಿರಾ ಈಗಷ್ಟೇ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾರಂಗಕ್ಕೆ ಬಂದಿರುವ ಅಥಿರಾ ತಮ್ಮ ಸಿನಿಜರ್ನಿ ಕುರಿತು “ಸಿನಿಲಹರಿ” ಜೊತೆ ಹಂಚಿಕೊಂಡಿದ್ದಾರೆ.

ಓವರ್‌ ಟು ಅಥಿರಾ
ನಾನು ಈಗಷ್ಟೇ ಕಾಲೇಜು ಓದುತ್ತಿದ್ದೇನೆ. ಸಿನಿಮಾ ನನ್ನ ಪ್ಯಾಷನ್.‌ ಇಲ್ಲಿ ಒಳ್ಳೆಯ ಕಥೆ, ಪಾತ್ರಗಳ ಮೂಲಕ ಕಾಣಿಸಿಕೊಂಡು ಭದ್ರ ನೆಲೆಕಂಡುಕೊಳ್ಳು ಆಸೆ ನನ್ನದು. ಹಾಗಾಗಿಯೇ, ನಾನು ಸಿನಿಮಾರಂಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸದ್ಯಕ್ಕೆ ನಾನು ನಟನೆ ಕೋರ್ಸ್‌ ಅನ್ನುವುದೇನೂ ಮಾಡಿಲ್ಲ. ಆಡಿಷನ್‌ ಮೂಲಕ ಆಯ್ಕೆಯಾಗಿದ್ದು, ಈಗಾಗಲೇ ಮಲಯಾಳಂ ಭಾಷೆಯ “ಲಾಲ್‌ ಜೋಸ್‌” ಸಿನಿಮಾದಲ್ಲಿ ನಟಿಸಿದ್ದೇನೆ. ಈಗ ಕನ್ನಡ ಸಿನಿಮಾಗೂ ಆಯ್ಕೆಯಾಗಿ ನಟಿಸಿದ್ದೇನೆ.

“ಹಾಫ್‌” ನನ್ನ ಮೊದಲ ಕನ್ನಡ ಚಿತ್ರ. ಒಳ್ಳೆಯ ಕಥೆ, ಪಾತ್ರ ಇದ್ದುದರಿಂದ ನಾನು ಆ ಚಿತ್ರ ಮಾಡಲು ಒಪ್ಪಿದ್ದೇನೆ. ಸದ್ಯಕ್ಕೆ ಇನ್ನೂ ಎರಡು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ನನ್ನ ಬಗ್ಗೆ ಹೇಳುವುದಾದರೆ, ಕಳೆದ ಒಂಭತ್ತು ವರ್ಷಗಳಿಂದ ಕಥಕ್‌ ಮತ್ತು ಭರತನಾಟ್ಯ ಅಭ್ಯಾಸ ಮಾಡಿದ್ದೇನೆ. ನಟನೆ ಬಗ್ಗೆ ಪ್ಯಾಷನ್‌ ಇತ್ತು. ಹಾಗಾಗಿ ಒಳ್ಳೆಯ ಅವಕಾಶ ಎದುರು ನೋಡುತ್ತಿದ್ದೆ. “ಹಾಫ್”‌ ಒಳ್ಳೆಯ ಅವಕಾಶ ಒದಗಿಸಿಕೊಟ್ಟಿದೆ. ಇನ್ನು, ಇಲ್ಲಿ ನನಗೆ ಎಲ್ಲಾ ರೀತಿಯ ಪಾತ್ರ ಮಾಡಲು ಇಷ್ಟ. ಇನ್ನು, ನನಗೆ ಯಶ್‌ ಹಾಗೂ ರಾಧಿಕಾ ಪಂಡಿತ್‌ ರೋಲ್‌ ಮಾಡೆಲ್.‌ ನನಗೆ ಕಮರ್ಷಿಯಲ್‌ ಮತ್ತು ಕಲಾತ್ಮಕ ಸಿನಿಮಾಗಳು ಎಂಬುದಿಲ್ಲ. ಯಾವುದೇ ಸಿನಿಮಾ ಇದ್ದರೂ, ಒಳ್ಳೆಯ ಕಥೆ ಮತ್ತು ಪಾತ್ರ ಇದ್ದರೆ, ಖಂಡಿತ ಒಪ್ಪಿಕೊಂಡು ಕೆಲಸ ಮಾಡುತ್ತೇನೆ. ಒಟ್ಟಲ್ಲಿ ಆ ಪಾತ್ರ ಜನರಿಗೆ ತಲುವಂತಿರಬೇಕಷ್ಟೇ ಎಂಬುದು ಅಥಿರಾ ಮಾತು.‌

ಗ್ಲಾಮರಸ್‌ಗೆ ತಕರಾರಿಲ್ಲ…
ಇನ್ನು, “ಹಾಫ್‌” ಚಿತ್ರದ ಬಗ್ಗೆ ಹೇಳುವುದಾದರೆ, ಚಿತ್ರದಲ್ಲಿ ಒಂದೊಳ್ಳೆಯ ಪಾತ್ರವೇ ಸಿಕ್ಕಿದೆ. ಅದೊಂದು ರೀತಿ ನನಗೆ ಹೊಸ ರೀತಿಯ ಪಾತ್ರ. ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿಯುವ ಹಂತ ತಲುಪಿದೆ. ಸಾಂಗ್‌ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಎಂದು ಹೇಳಿಕೊಳ್ಳುವ ಅಥಿರಾ, ನನಗೆ ಎಲ್ಲಾ ಭಾಷೆಯ ಸಮಸ್ಯೆ ಇಲ್ಲ. ಮಲಯಾಳಂ, ಕನ್ನಡ, ತೆಲುಗು ಭಾಷೆ ಬರುತ್ತೆ. ಯಾಕೆಂದರೆ, ನಾನು ಇಲ್ಲಿಯವಳಾಗಿದ್ದರೂ, ಮೂಲತಃ ಕೇರಳದವಳು.

ಅಪ್ಪ ಅರುಣ್‌ ಕನ್ನಡದವರು. ಅಮ್ಮ ಶ್ರೀಜಾ ಕೇರಳದವರು. ಹಾಗಾಗಿ ಎರಡೂ ಭಾಷೆ ನನಗೆ ಸುಲಲಿತ. “ಹಾಫ್” ಬಗ್ಗೆ ಹೇಳುವುದಾದರೆ, ಈ ಚಿತ್ರ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ. ನಿರ್ದೇಶಕ ಲೋಕೇಂದ್ರ ಸೂರ್ಯ ಪ್ರತಿ ಸೀನ್‌ ಮುನ್ನ ತಾವೇ ನಟಿಸಿ ತೋರಿಸುತ್ತಿದ್ದರು. ಒಂದೊಳ್ಳೆಯ ಚಿತ್ರ ಮಾಡಿದ ಹೆಮ್ಮೆ ನನಗಿದೆ. ಮುಂದೆ ಯಾವುದೇ ಸಿನಿಮಾಗಳಿರಲಿ, ಕಥೆ ಹಾಗೂ ಪಾತ್ರಕ್ಕೆ ಅಗತ್ಯವಿದ್ದರೆ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಯಾವ ತಕರಾರೂ ಇಲ್ಲ ಎಂಬುದು ಅಥಿರಾ ಮಾತು.

ಮೊದಲ ಪೋಸ್ಟರ್‌ ರಿಲೀಸ್
ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸಿರುವ “ಹಾಫ್” ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ. “ಹಾಫ್” ಚಿತ್ರಕ್ಕೆ ಆಡಿಷನ್ ಮೂಲಕ ಸೆಲೆಕ್ಟ್ ಆದ ಅಥಿರಾ ನಟನೆ ಬಗ್ಗೆ ನಿರ್ದೇಶಕ ಲೋಕೇಂದ್ರ ಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻʻನಮ್ಮ ಸಿನಿಮಾಗೆ ಸ್ಕೂಲ್ ಸ್ಟೂಡೆಂಟ್ ಕ್ಯಾರೆಕ್ಟರಿನ ನಾಯಕನಟಿ ಬೇಕಿತ್ತು. ಆಡಷನ್‌ನಲ್ಲಿ ಅಥಿರಾ ಭಾವಾಭಿವ್ಯಕ್ತಿ ನೋಡಿ ಸೆಲೆಕ್ಟ್ ಮಾಡಿಕೊಂಡೆ.

ಸದ್ಯ ಅಥಿರಾ ಅವರ ಭಾವಚಿತ್ರ ಇರುವ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. “ವರ್ಲ್ಡ್‌ ಬುಕ್ ಆಫ್ ರೆಕಾರ್ಡ್”ನಲ್ಲಿ ʻರೆಡ್ ಅಂಡ್ ವೈಟ್ ಮ್ಯಾನ್ʼ ಎಂದು ಕರೆಸಿಕೊಳ್ಳುವ ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಅಡಿಯಲ್ಲಿ ಡಾ. ಪವಿತ್ರ ಆರ್. ಪ್ರಭಾಕರ್ ರೆಡ್ಡಿ ನಿರ್ಮಾಣವಿದೆ. ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕರಾಗಿಯೂ ಅಭಿನಯಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಬಿ.ಆರ್. ಛಾಯಾಗ್ರಹಣವಿದೆ. ಯುಡಿವಿ ವೆಂಕಿ ಸಂಕಲನ ಮಾಡಿದರೆ, ರಾಕಿ ಸೋನು ಸಂಗೀತವಿದೆ. ಥ್ರಿಲ್ಲರ್ ಮಂಜು ಸಾಹಸವಿದೆ.

Categories
ಸೌತ್‌ ಸೆನ್ಸೇಷನ್

ನಿರ್ದೇಶಕ ಶಂಕರ್‌ಗೆ ಜಾಮೀನು ರಹಿತ ವಾರೆಂಟ್‌!

ಎಂಧಿರನ್‌ ಚಿತ್ರದ ಕಥೆ ಕದ್ದ ದೂರು

ಖ್ಯಾತ ತಮಿಳು ನಿರ್ದೇಶಕ ಕೆ.ಶಂಕರ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು, ‘ಎಂಧಿರನ್‌’ ಚಿತ್ರದ ಕಥೆ ಕದ್ದ ದೂರಿಗೆ ಸಂಬಂಧಿಸಿದಂತೆ, ಎಗ್ಮೋರ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್‌ ಅವರಿಗೆ ಜಾಮೀನು ರಹಿತ ವಾರೆಂಟ್‌ ನೀಡಿದೆ. ಶಂಕರ್‌ ನಿರ್ದೇಶನದಲ್ಲಿ ಸೂಪರ್‌ಸ್ಟಾರ್ ರಜನೀಕಾಂತ್‌ ನಟಿಸಿದ್ದ ‘ಎಂಧಿರನ್‌’ (2010) ಸೈಂಟಿಫಿಕ್ ಫಿಕ್ಷನ್‌ ಸಿನಿಮಾ ಭಾರತದಾದ್ಯಂತ ದೊಡ್ಡ ಯಶಸ್ಸು ಕಂಡಿತ್ತು.

ರಜನೀಕಾಂತ್ ಮತ್ತು ಐಶ್ವರ್ಯಾ ರೈ ಜೋಡಿಯ ಸಿನಿಮಾ ಗ್ರಾಫಿಕ್ಸ್‌ ಪರಿಣತಿ ಮತ್ತು ಆಕರ್ಷಕ ಮೇಕಿಂಗ್‌ನಿಂದಾಗಿ ಸಾಗರದಾಚೆಯೂ ಗಮನಸೆಳೆದಿದ್ದ ಪ್ರಯೋಗ. ಈ ಯಶಸ್ಸಿನ ಹಿಂದೆಯೇ ಕಥೆಗಾರ ಅರೂರ್‌ ತಮಿಳ್‌ನಾಡನ್‌ ಎನ್ನುವವರೊಬ್ಬರು ಚಿತ್ರತಂಡದ ವಿರುದ್ಧ ದೂರು ಸಲ್ಲಿಸಿದ್ದರು. 1996ರಲ್ಲಿ ತಾವು ಬರೆದ ‘ಜಿಗೂಬಾ’ ಕತೆಯ ಎಳೆಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ ಎಂದು ಆತ ಕಾನೂನಿನ ಮೊರೆ ಹೋಗಿದ್ದರು.


ಕಳೆದೊಂದು ದಶಕದಿಂದ ಈ ಕೇಸು ನಡೆದಿತ್ತು. ಕಳೆದ ವರ್ಷ ನಿರ್ದೇಶಕ ಶಂಕರ್ ಪರ ವಕೀಲರು ಕಥೆ ಕದ್ದ ಕೇಸನ್ನು ವಜಾ ಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಪಿಟಿಷನ್ ಹಾಕಿದ್ದರು. ಆದರೆ ಕೋರ್ಟ್‌ ಮನವಿಯನ್ನು ಪುರಸ್ಕರಿಸದೆ ಕೇಸು ಮುಂದುವರೆಸಲು ಸೂಚಿಸಿತ್ತು. ಶಂಕರ್ ಪರ ವಕೀಲರು ನಿರಂತರವಾಗಿ ಹಿಯರಿಂಗ್‌ಗೆ ಹಾಜರಾಗದ ಕಾರಣ, ಇದೀಗ ಜಾಮೀನು ರಹಿತ ವಾರೆಂಟ್‌ ನೀಡಿದೆ. ದೂರು ದಾಖಲಿಸಿರುವುದಲ್ಲದೆ ಕಥೆಗಾರ ಅರೂರ್ ತಮಿಳ್‌ನಾಡನ್‌ ಅವರು ಚಿತ್ರದ ನಿರ್ದೇಶಕರು, ನಿರ್ಮಾಪಕರಿಂದ 1 ಕೋಟಿ ರೂಪಾಯಿ ಪರಿಹಾರ ಮೊತ್ತವನ್ನೂ ಕೇಳಿದ್ದಾರೆ. ಸದ್ಯ ಶಂಕರ್ ಅವರು ಕಮಲ್ ಹಾಸನ್ ನಟನೆಯ ‘ಇಂಡಿಯನ್‌ 2’ ಸಿನಿಮಾಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದಾರೆ. ಕೋರ್ಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಮುಂದಿನ ನಿಲುವಿನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

Categories
ಸಿನಿ ಸುದ್ದಿ

ಸಿನಿ ಹಬ್ಬ ಜೋರು

ಮಂಗಳವಾರ ಶ್ಯಾಡೊ ಜೊತೆ ಜೊತೆ ಇನ್ಸ್‌ಪೆಕ್ಟರ್‌ ಬರ್ತಾರೆ!

ಕನ್ನಡ ಸಿನಿಮಾರಂಗ ಮೆಲ್ಲನೆ ಬಿಝಿಯಾಗುತ್ತಿದೆ. ಇದೀಗ ಬಿಡುಗಡೆ ಚಿತ್ರಗಳ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚುತ್ತಲೇ ಇದೆ. ಈ ವಾರ (ಫೆಬ್ರವರಿ ೫) ವಿನೋದ್‌ ಪ್ರಭಾಕರ್‌ ಅಭಿನಯದ “ಶ್ಯಾಡೊ”, ಚಂದನ್‌ ಆಚಾರ್‌ ನಟಿಸಿರುವ “ಮಂಗಳವಾರ ರಜಾದಿನ”, ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ” ಸಿನಿಮಾಗಳು ತೆರೆಗೆ ಬರುತ್ತಿವೆ.
ವಿನೋದ್ ಪ್ರಭಾಕರ್ ಅಭಿನಯದ “ಶ್ಯಾಡೊ” ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ.

ರವಿ ಗೌಡ ನಿರ್ದೇಶನದ ಈ ಚಿತ್ರಕ್ಕೆ ಅಚ್ಚು ಸಂಗೀತ ನೀಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ ಮಾಡಿದ್ದಾರೆ. ಛೋಟಾ ಕೆ. ಪ್ರಸಾದ್ ಸಂಕಲನ ಮಾಡಿದರೆ, ವಿನೋದ್ ಅವರ ಸಾಹಸ ನಿರ್ದೇಶನವಿದೆ. ಶ್ರೀಕನಕದುರ್ಗ ಚಲನಚಿತ್ರ ಬ್ಯಾನರ್‌ನಲ್ಲಿ ಚಕ್ರವರ್ತಿ ಸಿ.ಹೆಚ್ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಶೋಭಿತಾ ರಾಣಾ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಶ್ರೀಗಿರಿ, ಶ್ರವಣ್, ಗಿರಿಶಾಮ್, ಸತ್ಯದೇವ್, ಸಿರಿ ಇತರರು ಇದ್ದಾರೆ.

ಇನ್ಸ್‌ಪೆಕ್ಟರ್‌ ವಿಕ್ರಂ
ಇನ್ನು ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ” ಸಿನಿಮಾ ಕೂಡ ಈ ವಾರ ತೆರೆಗೆ ಅಪ್ಪಳಿಸುತ್ತಿದೆ. ಶಿವರಾಜಕುಮಾರ್‌ ಅವರು ಈ ಹಿಂದೆ ಇದೇ ಹೆಸರಿನ ಚಿತ್ರ ಮಾಡಿದ್ದರು. ಆಗ ಸೂಪರ್‌ ಹಿಟ್‌ ಆಗಿತ್ತು. ಈಗ ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ” ಕೂಡ ಸಾಕಷ್ಟು ಸುದ್ದಿ ಮಾಡಿದೆ. ವಿಖ್ಯಾತ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರಜ್ವಲ್‌ ವಿಭಿನ್ನ ಕಾಪ್‌ ಪಾತ್ರ ನಿರ್ವಹಿಸಿದ್ದಾರೆ.


ಮಂಗಳವಾರ ರಜಾದಿನ
“ಬಿಗ್‌ಬಾಸ್‌” ಹುಡುಗ ಚಂದನ್‌ ಆಚಾರ್‌ ಅವರು ಹೊಸ ಚಿತ್ರ ಮಾಡಿದ್ದು, ಈ ವಾರ ತೆರೆಗೆ ಬರುತ್ತಿದೆ. “ಮಂಗಳವಾರ ರಜಾದಿನ” ಹೆಸರಿನ ಈ ಸಿನಿಮಾ ವಿಭಿನ್ನ ಕಥಾಹಂದರ ಹೊಂದಿದೆ. ಕ್ಷೌರಿಕನೊಬ್ಬನಿಗೆ ನಟ ಸುದೀಪ್ ಅವರಿಗೆ ಕೇಶ ವಿನ್ಯಾಸ ಮಾಡಬೇಕೆಂದು ಆಸೆ ಇರುತ್ತದೆ. ಆ ಆಸೆ ಈಡೇರುತ್ತಾ ಇಲ್ಲವಾ ಅನ್ನೋದೇ ಕಥೆ. ಸ್ಟುಡಿಯೋ 18 ಸುಧೀರ್ ಕೆ.ಎಂ. ಈ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ತ್ರಿವರ್ಗ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಯವಿನ್ ನಿರ್ದೇಶಿಸಿದ್ದಾರೆ.

“ಬಿಗ್ ಬಾಸ್” ಖ್ಯಾತಿಯ ಚಂದನ್ ಆಚಾರ್ ಇಲ್ಲಿ ಹೀರೋ ಆಗಿದ್ದು, ಅವರು ಕ್ಷೌರಿಕನ ಪಾತ್ರ ಮಾಡಿದ್ದಾರೆ. ಲಾಸ್ಯ ನಾಗರಾಜ್ ಅವರಿಗೆ ನಾಯಕಿಯಾಗಿದ್ದಾರೆ. ಜಹಂಗೀರ್, ರಜನಿಕಾಂತ್, ಗೋಪಾಲ್ ದೇಶಪಾಂಡೆ, ನಂದನ್ ರಾಜ್ ಮುಂತಾದವರು ನಟಿಸಿದ್ದಾರೆ. ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಋತ್ವಿಕ್‌ ಮುರಳೀಧರ್ ಹಿನ್ನೆಲೆ ಸಂಗೀತ ನೀಡಿದರೆ, ಉದಯ್ ಲೀಲಾ ಛಾಯಾಗ್ರಹಣವಿದೆ. ಮಧು ತುಂಬಕೆರೆ ಸಂಕಲನ ಮಾಡಿದ್ದಾರೆ.

Categories
ಸಿನಿ ಸುದ್ದಿ

ತೆಲುಗಲ್ಲೂ ದರ್ಶನ್ ನಟನೆಯ ರಾಬರ್ಟ್ ರಿಲೀಸ್ ಸಲೀಸು

ಸೌತ್ ಫಿಲಂ ಚೇಂಬರ್ ನಡೆಸಿದ ಸಭೆ ಸಕ್ಸಸ್

100 ಥಿಯೇಟರಲ್ಲಿ ಬಿಡುಗಡೆಗೆ ರೆಡಿ

ಬಹುನಿರೀಕ್ಷಿತ ” ರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲಗು ಚಿತ್ರರಂಗ ಅಡ್ಡಿಯಾಗಿತ್ತು ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಭಾನುವಾರ ನಡೆದ ಸೌತ್ ಫಿಲಂ ಚೇಂಬರ್ ಸಭೆಯಲ್ಲಿ “ರಾಬರ್ಟ್” ಸಿನಿಮಾವನ್ನು ತೆಲುಗಿನ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಸಮ್ಮತಿ ಸಿಕ್ಕಿದೆ. ತೆಲುಗು ಚಿತ್ರರಂಗದ ವಿತರಕರು “ರಾಬರ್ಟ್” ಸಿನಿಮಾದ ವಿತರಣೆಗೆ ನಿರಾಕರಿಸಿದ್ದರು.
ಈ ಕುರಿತಂತೆ, ದರ್ಶನ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.

ತಕ್ಷಣವೇ ಮಂಡಳಿ ಈ ಸಂಬಂಧ ಸೌತ್ ಫಿಲಂ ಚೇಂಬರ್ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿತ್ತು. ಅದರಂತೆ ಈಗ ಸಭೆ‌ ನಡೆಸಿ, “ರಾಬರ್ಟ್” ಚಿತ್ರದ ಬಿಡುಗಡೆ ಸಮಸ್ಯೆ ಬಗೆಹರಿಸಿದೆ.
ತೆಲುಗು ಚಿತ್ರರಂಗದಲ್ಲಿ ಈ ವಿಚಾರ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ದರ್ಶನ್‌ ಗುಟುರು ಹಾಕಿದ್ದರು. ಇದರಿಂದ ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲೇ ತಲ್ಲಣ ಹುಟ್ಟಿದ್ಸು ನಿಜ. ಕೂಡಲೇ ಕರ್ನಾಟಕ ವಾಣಿಜ್ಯ ಮಂಡಳಿ ಎಚ್ಚೆತ್ತುಕೊಂಡು ಭಾನುವಾರ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿ “ರಾಬರ್ಟ್‌‌” ಚಿತ್ರದ ಬಿಡುಗಡೆ ಬಿಕ್ಕಟ್ಟು ಬಗೆಹರಿಸಿದೆ.


ʼರಾಬರ್ಟ್‌ʼ ಚಿತ್ರವನ್ನು ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಂಡ ಸಜ್ಜಾಗಿದೆ.
ಒಂದು ಮೂಲದ‌ ಪ್ರಕಾರ ರಾಬರ್ಟ್‌ ಚಿತ್ರದ ಬಿಡುಗಡೆಗೆ ತೆಲುಗಿನಲ್ಲಿ ವಿರೋಧ ಅಗಿಲ್ಲ. ಆದರೆ ಮಾರ್ಚ್‌ 11 ರಂದೇ ತೆಲುಗಿನಲ್ಲೂ ಒಂದು ಅದ್ದೂರಿ ವೆಚ್ಚದ ಚಿತ್ರ ತೆರೆ ಕಾಣುತ್ತಿದೆ. ಹಾಗಾಗಿ ಒಂದಷ್ಟು ಗೊಂದಲ ನಿರ್ಮಾಣವಾಗಿದೆ ಎನ್ನಲಾಗಿತ್ತು. ಈಗ ಅದಕ್ಕೆಲ್ಲವೂ ಹಾದಿ ಸುಗಮವಾಗಿದೆ.

Categories
ಸಿನಿ ಸುದ್ದಿ

ಸುದೀಪ್ 25ರ ಸಂಭ್ರಮಕ್ಕೆ ಬೆಳ್ಳಿ ನಾಣ್ಯ ಬಿಡುಗಡೆ

ಸುದೀಪ್ ಸಾಂಸ್ಕೃತಿಕ ಪರಿಷತ್ ನಿಂದ ಒಂದು ಸಾವಿರ ಬೆಳ್ಳಿ ನಾಣ್ಯ

ಕನ್ನಡ ಚಿತ್ರರಂಗಕ್ಕೆ ಸುದೀಪ್ ಪಾದಾರ್ಪಣೆ ಮಾಡಿ 25 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ “ಸುದೀಪ್ ಸಾಂಸ್ಕೃತಿಕ ಪರಿಷತ್ತು ಆ ಸಂಭ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ.
ಚಿತ್ರರಂಗದಲ್ಲಿ ಅನೇಕ ಯಶಸದವಿ ಸಿನಿಮಾಗಳನ್ನು ನೀಡಿರುವ ಸುದೀಪ್ ಅವರ ವೃತ್ತಿ ಜೀವನದ ಅವಿಸ್ಮರಣೆಗಾಗಿ “ಸುದೀಪ್ ಸಾಂಸ್ಕೃತಿಕ ಪರಿಷತ್ತು ವಿಶೇಷ 25 ಗ್ರಾಮ್ ನ 1000 ಬೆಳ್ಳಿ ನಾಣ್ಯವನ್ನು ಬಿಡುಗಡೆ ಮಾಡಲಿದೆ.


ಈ ಸಂದರ್ಭದಲ್ಲಿ ಸುದೀಪ್ ರವರಿಗೆ ಉಡುಗೊರೆಯಾಗಿ 100 ಗ್ರಾಮ್ ಬೆಳ್ಳಿ ನಾಣ್ಯವನ್ನು ಕೊಡಲು ಪರಿಷತ್ ನಿರ್ಧರಿಸಿದೆ.
ಸುದೀಪ್ ಅವರ ವೃತ್ತಿ ಜೀವನದ 25 ವರ್ಷಗಳನ್ನು ಸ್ಮರಿಸುವ ಅವರ ಭಾವಚಿತ್ರವಿರುವ “25 ಗ್ರಾಮ್ ಬೆಳ್ಳಿ ನಾಣ್ಯಗಳನ್ನು ಅಭಿಮಾನಿಗಳಿಗಾಗಿಯೇ ರೆಡಿ ಮಾಡಲಾಗಿದೆ.

Categories
ಸಿನಿ ಸುದ್ದಿ

ನಾನು ಅನುಭವಿಸಿದ ನೋವು, ಅವಮಾನ ಯಾರಿಗೂ ಬೇಡ

ನನ್ನ ಹಾಗೆ ನೀವೂ ಕಷ್ಟ ಪಟ್ಟಿದ್ದೀರಿ, ಗೆಲ್ತೀರಿ, ಮುನ್ನುಗ್ಗಿ ಅಂದ್ರು ವಿನೋದ್‌ಪ್ರಭಾಕರ್

“ನಾನು ಅನುಭವಿಸಿದ ನೋವು, ಅವಮಾನದ ಮುಂದೆ ನಿಮ್ಮದೇನೂ ಅಲ್ಲ. ಸಾಕಪ್ಪ ಸಾಕು, ಈ ಬಣ್ಣದ ಬದುಕು ಅಂದಾಗ ಜನರು ಆಶೀರ್ವಾದ ನೀಡಿದ್ರು. ನಿಮ್ಗೆ ಇದೆಲ್ಲ ಅನುಭವ ಆಗಿಲ್ಲ. ಆದ್ರೂ ನನ್ನ ಹಾಗೆಯೇ ನೀವೂ ಕೂಡ ಕಷ್ಟಪಟ್ಟಿದ್ದೀರಿ, ಅದೇ ನಿಮ್ಗೆ ಗೆಲುವು ತಂದುಕೊಡುತ್ತದೆ. ಇಂದಲ್ಲ ನಾಳೆ ಗೆಲುವು ನಿಮ್ಮದೇ, ಮುನ್ನುಗ್ಗಿ…” ನಟ ವಿನೋದ್‌ಪ್ರಭಾಕರ್‌ಸ್ಟಾರ್‌ಆದ ಹಿಂದಿನ ತಮ್ಮ ಕಠಿಣ ಪರಿಶ್ರಮದ ಅನುಭವವನ್ನು “ಸಿನಿಲಹರಿ” ಮುಂದೆ ಹೀಗೆ ತೆರೆದಿಟ್ಟು, ನೀವು ಗೆದ್ದೇ ಗೆಲ್ತೀರಿ ಅಂತ ಹರಿಸಿದರು.

ಅವರು ಈ ಪ್ರೀತಿಯ ಮಾತುಗಳನ್ನು ಹೇಳಿದ್ದು, “ಸಿನಿ ಲಹರಿ” ಕಚೇರಿಗೆ ಭೇಟೀ ನೀಡಿದ ಸಂದರ್ಭ. ವಿನೋದ್‌ಪ್ರಭಾಕರ್‌ಈಗ ಚಂದನವನದ ಬಹು ಬೇಡಿಕೆಯ ಸ್ಟಾರ್‌ನಟ. “ಮರಿ ಟೈಗರ್‌‌” ಅಂತಾನೇ ಜನಪ್ರಿಯತೆ ಪಡೆದ ನಟ. ಫೆ.೫ ರಂದು ತೆರೆ ಕಾಣುತ್ತಿರುವ “ಶ್ಯಾಡೋ” ಸೇರಿದಂತೆ ಸಾಲು ಸಾಲು ಸಿನಿಮಾಗಳಿಗೆ ಅವರು ಹೀರೋ. ಹಾಗೆಯೇ ಈಗವರು, ದೊಡ್ಡದೊಂದು ಬ್ರೇಕಿಂಗ್‌ಸುದ್ದಿ ಕೊಡುವುದಕ್ಕೂ ರೆಡಿ ಆಗಿದ್ದಾರೆ. ಒಂದು ಮೂಲದ ಪ್ರಕಾರ, ಮುಂಬೈನ ದೊಡ್ಡ ಪ್ರೊಡಕ್ಷನ್‌ಹೌಸ್‌ನಿರ್ಮಾಣ ಮಾಡುತ್ತಿರುವ ಅದ್ದೂರಿ ವೆಚ್ಚದ ಪ್ಯಾನ್‌ಇಂಡಿಯಾ ಸಿನಿಮಾಕ್ಕೆ ವಿನೋದ್‌ಪ್ರಭಾಕರ್‌ಹೀರೋ ಅಂತೆ. ಇದಿನ್ನೂ ಕನ್ಫರ್ಮ್‌ಆಗಿಲ್ಲ. ಆದರೆ, ಆ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎನ್ನುವ ಸುದ್ದಿಯಂತೂ ಖಾತರಿ.

ಸ್ಯಾಂಡಲ್‌ವುಡ್‌ಗೆ ಇದಂತೂ ಸೆನ್ಸೇಷನ್‌ಸುದ್ದಿ. ಸದ್ಯಕ್ಕೆ ಹೀಗೆಲ್ಲ ಬ್ಯುಸಿ ಆಗಿರುವ ನಟ ವಿನೋದ್‌ಪ್ರಭಾಕರ್‌, ಇತ್ತೀಚೆಗೆ ಪತ್ನಿ ಸಮೇತ “ಸಿನಿ ಲಹರಿ” ಕಚೇರಿಗೆ ಬಂದಿದ್ದರು. ಇದೊಂದು ಔಪಚಾರಿಕ ಭೇಟಿ ಮಾತ್ರ. ನಮ್ಮ ಮೇಲಿನ ಪ್ರೀತಿ, ಅಭಿಮಾನದ ಮೇರೆಗೆ ತಮ್ಮ ಬ್ಯುಸಿ ಶೆಡ್ಯೂಲ್‌ನಡುವೆಯೂ ಕಚೇರಿಗೆ ಬಂದು ಸುಮಾರು ಅರ್ಧ ತಾಸು ಕಚೇರಿಯಲ್ಲಿದ್ದು ಒಂದಷ್ಟು ಹರಟಿದರು. “ಸಿನಿ ಲಹರಿ” ವೆಬ್‌ಸೈಟ್‌ವೀಕ್ಷಿಸಿ, ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. “ಸಿನಿಲಹರಿ”ಯಲ್ಲಿರುವ ಬರಹಗಳೇ ಅದ್ಭುತವಾಗಿವೆ. ಇಂತಹ ಗುಣಮಟ್ಟ ಮತ್ತು ನಿಖರವಾದ ವರದಿ, ಸುದ್ದಿಗಳು ಚಿತ್ರರಂಗಕ್ಕೆ ಬೇಕು” ಎಂದು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆ ನಂತರ ಸಜ್ಜುಗೊಳ್ಳುತ್ತಿರುವ “ಸಿನಿಲಹರಿ” ಸ್ಟುಡಿಯೋ ವೀಕ್ಷಿಸಿ, ಖುಷಿಯ ಜೊತೆಗೆ ಅಚ್ಚರಿ ಪಟ್ಟರು. “ಏನೋ ಸಣ್ಣದಾಗಿ ಕಚೇರಿ ಮಾಡಿಕೊಂಡಿದ್ದೀರಿ ಅನ್ಕೊಂಡ್ರೆ, ತುಂಬಾನೆ ಕಷ್ಟಪಟ್ಟು ದೊಡ್ಡ ಸ್ಟುಡಿಯೋವನ್ನೇ ಮಾಡಿದ್ದೀರಿ. ತುಂಬಾ ವರ್ಷಗಳ ಕಾಲ ಪ್ರಾಮಾಣಿಕ ಪತ್ರಿಕೋದ್ಯಮವನ್ನೇ ನಂಬಿಕೊಂಡ ಬಂದ ನೀವು, ಇವತ್ತು ಅಷ್ಟೇ ಶ್ರದ್ದೆ ಮತ್ತು ನಂಬಿಕೆಯಿಂದ ಇಷ್ಟೇಲ್ಲ ಮಾಡಿದ್ದೀರಿ ಅಂತಂದ್ರೆ ಗೆದ್ದೇ ಗೆಲ್ಲುತ್ತೀರಿ, ಒಳ್ಳೆಯದಾಗಲಿʼ ಅಂತ ಹರಸಿದರು. ಕೆಲಸ ಕಳೆದುಕೊಂಡು ನಾವು ಅನುಭವಿಸಿದ ಕ್ಷಣಗಳು, ಆನಂತರ ನಮ್ಮದೇ ಬದುಕು ಕಟ್ಟಿಕೊಳ್ಳಬೇಕೆಂದು ಆರಂಭಿಸಿದ “ಸಿನಿ ಲಹರಿʼಯ ಶುರುವಿನ ದಿನಗಳು, ಆ ನಂತರದ ಜರ್ನಿಯ ಕ್ಷಣಗಳನ್ನು ತಾಳ್ಮೆಯಿಂದ ಕೇಳಿದ ವಿನೋದ್‌ಪ್ರಭಾಕರ್‌, ನಾನು ಅನುಭವಿಸಿದ ನೋವು, ಅವಮಾನ, ನಿಂದನೆಗಳ ಮುಂದೆ ನಿಮ್ದೇನು ಅಲ್ಲ ಅಂತೆನಿಸುತ್ತೆ. ನಟ ಪ್ರಭಾಕರ್‌ಅವರ ಮಗ ಎನ್ನುವ ಪರಿಚಯ ನನಗಿದ್ದರೂ, ಅದೆಲ್ಲ ಉದ್ಯಮದ ಮುಂದೆ ವರ್ಕೌಟ್‌ಆಗಲಿಲ್ಲ. ಅದರ ಪರಿಣಾಮ ಸೋಲು, ನೋವು ನನ್ನನ್ನೇ ಹೈರಾಣಾಗಿಸಿತುʼ ಅಂತ ಒಂದು ಕ್ಷಣ ಭಾವುಕರಾದರು ವಿನೋದ್‌ಪ್ರಭಾಕರ್.‌

ಮರಿ ಟೈಗರ್‌ವಿನೋದ್‌ಪ್ರಭಾಕರ್‌ಮಾತು ಮುಂದುವರೆಸಿದರು. ” ನಮ್ಮ-ನಿಮ್ಮಂತವರಿಗೆ ಸಕ್ಸಸ್‌ಸುಮ್ಮನೆ ಸಿಗೋದಿಲ್ಲ. ಕಷ್ಟಪಟ್ಟ ಮೇಲೆಯೇ ಗೆಲುವು. ನನಗೂ ಕೂಡ. ಸಾಕಪ್ಪ ಸಾಕು, ಈ ಸೋನು, ನೋವು ಅಂದಾಗ ಜನ ಕೈ ಹಿಡಿದರು. ಕೊನೆಗೂ ಸಕ್ಸಸ್‌ಕಂಡೆ. ಅಲ್ಲಿಂದ ನನ್ನದೇ ಒಂದು ಸೂತ್ರ ಇಟ್ಕೊಂಡು ಸಿನಿಮಾ ಮಾಡುತ್ತಾ ಬರುತ್ತಿದ್ದೇನೆ. ನಾನು ಯಾರನ್ನೂ ಮೋಸ ಮಾಡಲಾರೆ. ಯಾರಿಗೂ ಅನಗತ್ಯ ಬಂಡವಾಳ ಹಾಕುವಂತೆ ಹೇಳಲಾರೆ. ನನ್ನ ಸಿನಿಮಾದ ಬಜೆಟ್‌ಇಷ್ಟು, ಅದರಿಂದ ಬರುವ ಆದಾಯ ಇಷ್ಟು, ಬೇಕಾದ್ರೆ ಸಿನಿಮಾ ಮಾಡಿ, ಇಲ್ಲ ಅಂದ್ರೆ ಬೇರೆ ಯಾರನ್ನಾದರೂ ನೋಡಿಕೊಳ್ಳಿ ಅಂತ ಹೇಳಿ ಬಿಡುತ್ತೇನೆ. ಇಷ್ಟು ನಿಷ್ಟುರತೆಯಿಂದ ಯಾರು ಹೇಳುತ್ತಾರೋ ಗೊತ್ತಿಲ್ಲ. ಇದು ನನ್ನ ಪಾಲಿಸಿʼ ಎಂದು ಹೇಳುತ್ತಾ ಸಿನಿ ಲಹರಿಗೆ ಆಲ್‌ದಿ ಬೆಸ್ಟ್‌ಹೇಳಿ, ಶೂಟಿಂಗ್‌ಬ್ಯುಸಿ ಅಂತ ಕಾರು ಹತ್ತಿದರು.

error: Content is protected !!