ಏಪ್ರಿಲ್ 2ಕ್ಕೆ ಸಿನಿಮಾ ಬಿಡುಗಡೆ
ಕಾರ್ತಿ ನಟನೆಯ ಬಹುನಿರೀಕ್ಷಿತ ತಮಿಳು ಸಿನಿಮಾ ‘ಸುಲ್ತಾನ್’ ಟೀಸರ್ ಬಿಡುಗಡೆಯಾಗಿದೆ. ಇಲ್ಲಿ ಮಹಾಭಾರತದಲ್ಲಿನ ಪಾಂಡವರು ಹಾಗೂ ಕೌರವರ ಕುರಿತಂತೆ ಶ್ರೀಕೃಷ್ಣನ ಮಾತುಗಳು ಹಿನ್ನೆಲೆಯಲ್ಲಿ ಕೇಳಿಸುತ್ತವೆ. ಕೃಷ್ಣನು ಕೌರವರನ್ನು ಬೆಂಬಲಿಸಿದಂತೆ ಮಾತುಗಳಿರುವುದು ವಿಶೇಷ. ಕ್ರಿಮಿನಲ್‌ಗಳ ನೆಲಕ್ಕೆ ಎಂಟ್ರಿ ಕೊಡುವ ಹೀರೋ ದುಷ್ಟರನ್ನು ಸಂಹರಿಸುವ ಎಂದಿನ ಕತೆಯ ಎಳೆ ಕಾಣಿಸುತ್ತವೆ.
ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಕಾಲಿವುಡ್ ಹಾಸ್ಯನಟ ಯೋಗಿಬಾಬು, ಮಾಲಿವುಡ್ ನಟರಾದ ಲಾಲ್ ಮತ್ತು ಹರೀಶ್ ಪೆರಾಡಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ರೆಮೋ’ ಸಿನಿಮಾ ಖ್ಯಾತಿಯ ಭಾಗ್ಯರಾಜ್ ಕಣ್ಣನ್ ‘ಸುಲ್ತಾನ್’ ನಿರ್ದೇಶನ ಮಾಡಿರುವುದು ವಿಶೇಷ. ಸದ್ಯ ದಕ್ಷಿಣ ಭಾರತದ ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ, ಇಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ತಮಿಳಿನಲ್ಲಿ ಇದು ಅವರ ಮೊದಲ ಸಿನಿಮಾ. ಹೀರೋ ಕಾರ್ತಿ ಸದ್ಯ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಮರರ್ ಕಲ್ಕಿ ಅವರ ಅದೇ ಶೀರ್ಷಿಕೆಯ ತಮಿಳು ಕೃತಿಯನ್ನು ಆಧರಿಸಿ ತಯಾರಾಗುತ್ತಿರುವ ಚಿತ್ರವಿದು. ಕೊರೋನಾ ಲಾಕ್‌ಡೌನ್‌ಗಿಂತ ಮುಂಚೆ ಈ ಚಿತ್ರದ ಕೆಲವು ಸನ್ನಿವೇಶಗಳನ್ನು ಚಿತ್ರಿಸಲಾಗಿತ್ತು. ಇದೀಗ ಮತ್ತೆ ಚಿತ್ರೀಕರಣ ಶುರುವಾಗಿದೆ.