ನಿರ್ದೇಶಕ ಶಂಕರ್‌ಗೆ ಜಾಮೀನು ರಹಿತ ವಾರೆಂಟ್‌!

ಎಂಧಿರನ್‌ ಚಿತ್ರದ ಕಥೆ ಕದ್ದ ದೂರು

ಖ್ಯಾತ ತಮಿಳು ನಿರ್ದೇಶಕ ಕೆ.ಶಂಕರ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು, ‘ಎಂಧಿರನ್‌’ ಚಿತ್ರದ ಕಥೆ ಕದ್ದ ದೂರಿಗೆ ಸಂಬಂಧಿಸಿದಂತೆ, ಎಗ್ಮೋರ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್‌ ಅವರಿಗೆ ಜಾಮೀನು ರಹಿತ ವಾರೆಂಟ್‌ ನೀಡಿದೆ. ಶಂಕರ್‌ ನಿರ್ದೇಶನದಲ್ಲಿ ಸೂಪರ್‌ಸ್ಟಾರ್ ರಜನೀಕಾಂತ್‌ ನಟಿಸಿದ್ದ ‘ಎಂಧಿರನ್‌’ (2010) ಸೈಂಟಿಫಿಕ್ ಫಿಕ್ಷನ್‌ ಸಿನಿಮಾ ಭಾರತದಾದ್ಯಂತ ದೊಡ್ಡ ಯಶಸ್ಸು ಕಂಡಿತ್ತು.

ರಜನೀಕಾಂತ್ ಮತ್ತು ಐಶ್ವರ್ಯಾ ರೈ ಜೋಡಿಯ ಸಿನಿಮಾ ಗ್ರಾಫಿಕ್ಸ್‌ ಪರಿಣತಿ ಮತ್ತು ಆಕರ್ಷಕ ಮೇಕಿಂಗ್‌ನಿಂದಾಗಿ ಸಾಗರದಾಚೆಯೂ ಗಮನಸೆಳೆದಿದ್ದ ಪ್ರಯೋಗ. ಈ ಯಶಸ್ಸಿನ ಹಿಂದೆಯೇ ಕಥೆಗಾರ ಅರೂರ್‌ ತಮಿಳ್‌ನಾಡನ್‌ ಎನ್ನುವವರೊಬ್ಬರು ಚಿತ್ರತಂಡದ ವಿರುದ್ಧ ದೂರು ಸಲ್ಲಿಸಿದ್ದರು. 1996ರಲ್ಲಿ ತಾವು ಬರೆದ ‘ಜಿಗೂಬಾ’ ಕತೆಯ ಎಳೆಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ ಎಂದು ಆತ ಕಾನೂನಿನ ಮೊರೆ ಹೋಗಿದ್ದರು.


ಕಳೆದೊಂದು ದಶಕದಿಂದ ಈ ಕೇಸು ನಡೆದಿತ್ತು. ಕಳೆದ ವರ್ಷ ನಿರ್ದೇಶಕ ಶಂಕರ್ ಪರ ವಕೀಲರು ಕಥೆ ಕದ್ದ ಕೇಸನ್ನು ವಜಾ ಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಪಿಟಿಷನ್ ಹಾಕಿದ್ದರು. ಆದರೆ ಕೋರ್ಟ್‌ ಮನವಿಯನ್ನು ಪುರಸ್ಕರಿಸದೆ ಕೇಸು ಮುಂದುವರೆಸಲು ಸೂಚಿಸಿತ್ತು. ಶಂಕರ್ ಪರ ವಕೀಲರು ನಿರಂತರವಾಗಿ ಹಿಯರಿಂಗ್‌ಗೆ ಹಾಜರಾಗದ ಕಾರಣ, ಇದೀಗ ಜಾಮೀನು ರಹಿತ ವಾರೆಂಟ್‌ ನೀಡಿದೆ. ದೂರು ದಾಖಲಿಸಿರುವುದಲ್ಲದೆ ಕಥೆಗಾರ ಅರೂರ್ ತಮಿಳ್‌ನಾಡನ್‌ ಅವರು ಚಿತ್ರದ ನಿರ್ದೇಶಕರು, ನಿರ್ಮಾಪಕರಿಂದ 1 ಕೋಟಿ ರೂಪಾಯಿ ಪರಿಹಾರ ಮೊತ್ತವನ್ನೂ ಕೇಳಿದ್ದಾರೆ. ಸದ್ಯ ಶಂಕರ್ ಅವರು ಕಮಲ್ ಹಾಸನ್ ನಟನೆಯ ‘ಇಂಡಿಯನ್‌ 2’ ಸಿನಿಮಾಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದಾರೆ. ಕೋರ್ಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಮುಂದಿನ ನಿಲುವಿನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

Related Posts

error: Content is protected !!