ಏಪ್ರಿಲ್‌ಗೆ ಧನುಷ್‌ ಅವರ ಕರ್ಣನ್‌ ರಿಲೀಸ್‌

ಬಿಡುಗಡೆ ದಿನ ಘೋಷಿಸಿ ವೀಡಿಯೋ, ಪೋಸ್ಟರ್ ಟ್ವೀಟ್ ಮಾಡಿದ ನಟ

ಅಭಿಮಾನಿಗಳು ಫುಲ್‌ ಖುಷ್‌

“ಪೆರಿಯೇರುಮ್‌ ಪೆರುಮಾಳ್‌” ಸಿನಿಮಾ ಖ್ಯಾತಿಯ ಮಾರಿ ಸೆಲ್ವರಾಜ್‌ ನಿರ್ದೇಶನದಲ್ಲಿ ಧನುಷ್‌ ನಟಿಸಿರುವ “ಕರ್ಣನ್‌” ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಏಪ್ರಿಲ್‌ನಲ್ಲಿ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರ ಓಟಿಟಿಯಲ್ಲಿ ತೆರೆಕಾಣಲಿದೆ ಎನ್ನುವ ಸುದ್ದಿ ಜೋರಾಗಿಯೇ ಓಡಾಡುತ್ತಿತ್ತು. ಸಹಜವಾಗಿಯೇ ಈ ಸುದ್ದಿಯಿಂದ ವಿತರಕರು ಹಾಗೂ ಪ್ರದರ್ಶಕರು ಆತಂಕಗೊಂಡಿದ್ದರು. ಇದೀಗ ಸಿನಿಮಾ ಥಿಯೇಟರ್‌ಗಳಲ್ಲಿ ತೆರೆಕಾಣುವುದು ಖಚಿತವಾಗಿದ್ದು, ನಟ ಧನುಷ್‌ ಈ ಬೆವಳವಣಿಗೆ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

“ಕರ್ಣನ್‌ ಏಪ್ರಿಲ್‌ನಲ್ಲಿ ಥಿಯೇಟರ್‌ಗೆ ಬರಲಿದೆ. ಕೊರೊನಾ ಸಂಕಷ್ಟದಲ್ಲಿರುವ ಉದ್ಯಮಕ್ಕೆ ಇದು ಒಳ್ಳೆಯ ಸುದ್ದಿ. ನಮ್ಮ ನಿರ್ಮಾಪಕರು ಉದ್ಯಮದ ವಿತರಕರು, ಪ್ರದರ್ಶಕರು ಹಾಗೂ ಚಿತ್ರರಂಗವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಾಗಿ ಅವರಿಗೆ ನನ್ನ ಮತ್ತು ಅಭಿಮಾನಿಗಳೆಲ್ಲರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ” ಎಂದು ಧನುಷ್ ಟ್ವೀಟ್ ಮಾಡಿದ್ದಾರೆ.

ಚಿತ್ರದಲ್ಲಿ ಧನುಷ್‌ಗೆ ನಾಯಕಿಯಾಗಿ ರಜಿಶಾ ವಿಜಯನ್‌ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾಗಿರುವ ಚಿತ್ರದ ಹೊಸ ಪೋಸ್ಟರ್‌ನಲ್ಲಿ ಬೆಟ್ಟದ ತುದಿಯಲ್ಲಿ ಕತ್ತಿಯನ್ನು ಹಿಡಿದು ನಿಂತಿರುವ ಧನುಷ್‌ ಕಾಣಿಸುತ್ತಿದ್ದಾರೆ. ಕೆಳಗೆ ದೊಡ್ಡ ಸಂಖ್ಯೆಯ ಜನರು ಅವರೆಡೆ ನೋಡುತ್ತಿರುವಂತಿದೆ. ಸಿನಿಮಾ ಬಿಡುಗಡೆ ಸುದ್ದಿಯನ್ನು ಹೇಳುವ ಆಕರ್ಷಕ ಬ್ಲಾಕ್‌ ಅಂಡ್‌ ವೈಟ್ ವೀಡಿಯೋ ಕೂಡ ಇದೆ! ಈ ವೀಡಿಯೋ ಗಮನಿಸಿದಾಗ ಇದೊಂದು ಪೀರಿಯಡ್‌ ಡ್ರಾಮಾ ಇರಬಹುದೆಂದು ಊಹಿಸಬಹುದು.

“ನಾನು ಕೇಳಿದ ಕಾಲ್ಪನಿಕ ಕಥೆಯೊಂದನ್ನು ಸಿನಿಮಾ ಮಾಡಿದ್ದೇನೆ. ಹಾಗೆ ನೋಡಿದರೆ ‘ಕರ್ಣನ್‌’ ನನ್ನ ನಿರ್ದೇಶನದ ಮೊದಲ ಚಿತ್ರವಾಗಬೇಕಿತ್ತು. ಹಿರಿಯರ ಸಲಹೆ ಮೇರೆಗೆ ಮೊದಲು ‘ಪೆರಿಯೇರುಮ್‌ ಪೆರುಮಾಳ್‌’ ಸಿನಿಮಾ ಮಾಡಿದೆ. ಆ ಚಿತ್ರ ನೋಡಿದ ನಂತರ ನಟ ಧನುಷ್ ತಾವಾಗಿಯೇ ಕರೆ ಮಾಡಿದ್ದರು. ಅಲ್ಲಿಂದ ಮುಂದೆ ‘ಕರ್ಣನ್‌’ಗೆ ಚಾಲನೆ ಸಿಕ್ಕಿತು” ಎನ್ನುತ್ತಾರೆ ನಿರ್ದೇಶಕ ಮಾರಿ ಸೆಲ್ವರಾಜ್‌. ಅದೇನೆ ಇರಲಿ, ಧನುಷ್‌ ಫ್ಯಾನ್ಸ್‌ ಈಗ ಭರ್ಜರಿ ಖುಷಿಯಲ್ಲಿರುವುದಂತೂ ದಿಟ.

Related Posts

error: Content is protected !!