Categories
ಸಿನಿ ಸುದ್ದಿ

ಜೈ ಕರ್ನಾಟಕ ಪದ ಬೇಡ ಅನ್ನುವುದಾದರೆ, ಆ ಪ್ರೋಗ್ರಾಮ್‌ ಕ್ಯಾನ್ಸಲ್‌ ಮಾಡಿ!

ಆರ್ಮುಗಂ ರವಿಶಂಕರ್‌ ಹೀಗೆಂದು ಖಡಕ್‌ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

“ನಾನು ಕನ್ನಡಿಗರಿಗೆ ಚಿರಋಣಿ. ಇಲ್ಲಿನ ನೆಲ, ಜಲ, ಭಾಷೆ ನನ್ನ ಬದುಕನ್ನು ಹಸನಾಗಿಸಿದೆ. ನನಗೆ ಜೀವನ ಕೊಟ್ಟ ಕರ್ನಾಟಕವನ್ನು ಎಂದಿಗೂ ಮರೆಯೋದಿಲ್ಲ…”
_ ಇದು “ಆರ್ಮುಗಂ” ಖ್ಯಾತಿಯ ರವಿಶಂಕರ್‌ ಸದಾ ಪ್ರೀತಿಯಿಂದಲೇ ಹೇಳುವ ಮಾತು.

ಇಷ್ಟಕ್ಕೂ ಖಳನಟ ರವಿಶಂಕರ್‌ ಅವರ ಬಗ್ಗೆ ಇಲ್ಲೇಕೆ ಪ್ರಸ್ತಾಪ ಎಂಬ ಪ್ರಶ್ನೆಗೆ, ರವಿಶಂಕರ್‌ ಬುಧವಾರ “ಸಿನಿಲಹರಿ” ಕಚೇರಿಗೆ ಆಗಮಿಸಿದ್ದರು. ಈ ವೇಳೆ ತಮ್ಮ ಸಿನಿ ಜರ್ನಿ ಕುರಿತು ಹೇಳಿಕೊಳ್ಳುತ್ತಿರುವಾಗ, ಒಂದು ಮರೆಯದ ಘಟನೆಯನ್ನೂ ನೆನಪಿಸಿಕೊಂಡರು. ಆ ಘಟನೆ ಕುರಿತಂತೆ ಸ್ವತಃ ರವಿಶಂಕರ್‌ ವಿವರಿಸಿದ್ದು ಹೀಗೆ.‌

ಓವರ್‌ ಟು ರವಿಶಂಕರ್…
ತೆಲುಗಿನ ಜನಪ್ರಿಯ ವಾಹಿನಿಯೊಂದರಲ್ಲಿ “ಆಲಿ ತೊ ಸರದಾಗ” ಎಂಬ ಸಕ್ಸಸ್‌ಫುಲ್‌ ಕಾರ್ಯಕ್ರಮವಿದೆ. ಆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ಅಲ್ಲಿ ತೆಲುಗಿನ ಖ್ಯಾತ ನಟ ಆಲಿ ಅವರು ಆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತು. ಮಧ್ಯೆ ಮಾತನಾಡುವಾಗ, ಒಂದು ಚಿತ್ರದ ಡೈಲಾಗ್‌ ಹೇಳಬೇಕು ಎಂಬ ಬೇಡಿಕೆ ಬಂತು.

ಆ ಬೇಡಿಕೆಯನ್ನು ಸ್ವೀಕರಿಸಿದ ನಾನು, ಡೈಲಾಗ್‌ ಹೇಳೋಕೆ ಅಣಿಯಾದೆ. ಆದರೆ, ಎಲ್ಲರಿಗೂ ನಾನು ತೆಲುಗಿನ “ಅರುಧಂತಿ” ಸಿನಿಮಾದ “ವದಲಾ ಬೊಮ್ಮಾಲಿ..” ಡೈಲಾಗ್‌ ಹೇಳಬಹುದು ಎಂದೇ ನಿರೀಕ್ಷಿಸಿದ್ದರು. ಆದರೆ, ನಾನು ಮಾತ್ರ ಹೇಳಿದ್ದು, “ಕೆಂಪೇಗೌಡ” ಚಿತ್ರದ “ಶಾಕ್‌ ಆಯ್ತಾ… ಶಾಕ್‌ ಆಗಲೇಬೇಕು ಅಂತ ತಾನೇ ನಾನಿಲ್ಲಿ ಮಾಗಡಿ ರೋಡ್‌ಗೆ ಪೋಸ್ಟಿಂಗ್‌ ಹಾಕಿಸಿದ್ದು…” ಎಂಬ ಡೈಲಾಗ್‌ ಹರಿಬಿಟ್ಟೆ. ಅಲ್ಲಿ ಕುಳಿತ ಆಡಿಯನ್ಸ್‌ ಎಲ್ಲರೂ ಚಪ್ಪಾಳೆ, ಶಿಳ್ಳೆಗಳ ಸುರಿಮಳೆಗೈದರು. ಕೊನೆಯಲ್ಲಿ ಎಲ್ಲರಿಗೂ ನಮಸ್ಕರಿಸುತ್ತಲೇ, ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎಂದು ಹೇಳಿದೆ.

ಆ ಕಾರ್ಯಕ್ರಮ ಮುಗಿದ ಬಳಿಕ, ಆ ಜನಪ್ರಿಯ ವಾಹಿನಿಯ ಸಂಪಾದಕರು ನನಗೆ ಫೋನ್‌ ಮಾಡಿ, ಎಲ್ಲಾ ಓಕೆ, ಆದರೆ, ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎನ್ನುವುದನ್ನು ಕಟ್‌ ಮಾಡ್ತೀನಿ. ಯಾಕೆಂದರೆ, ಇದು ತೆಲುಗು ವಾಹಿನಿ ಅಂದರು. ಆಗ ನಾನು, ಹಾಗೇನಾದರೂ ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಪದವನ್ನು ಕಟ್‌ ಮಾಡುವುದಾದರೆ, ಆ ಪ್ರೋಗ್ರಾಮ್‌ ಕ್ಯಾನ್ಸಲ್‌ ಮಾಡಿ. ನನಗೆ ಪಬ್ಲಿಸಿಟಿಯ ಅಗತ್ಯವೇ ಇಲ್ಲ ಅಂದುಬಿಟ್ಟೆ. ಹಾಗಾಗಿ, ಇವತ್ತಿಗೂ ಆ ಕಾರ್ಯಕ್ರಮದಲ್ಲಿ ನಾನು ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎಂದು ಹೇಳಿರುವುದಿದೆ‌ʼ ಎನ್ನುತ್ತಾರೆ ರವಿಶಂಕರ್.

ಅದೇನೆ ಇರಲಿ, ರವಿಶಂಕರ್‌ ಅವರು ಕನ್ನಡ ಚಿತ್ರರಂಗವನ್ನು ತುಂಬಾ ಗೌರವದಿಂದ ನೋಡುತ್ತಾರೆ. ಇಲ್ಲಿನ ಜನರನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ. ಕನ್ನಡ ಭಾಷೆ ಮೇಲೆ ಸದಾ ಪ್ರೀತಿ ತೋರುವ ಅವರು, ನನ್ನ ಅಣ್ಣ ಸಾಯಿಕುಮಾರ್‌ ಅವರಿಗೆ “ಪೊಲೀಸ್‌ ಸ್ಟೋರಿ” ದೊಡ್ಡ ಹೆಸರು ತಂದುಕೊಟ್ಟಿತು. ಕನ್ನಡದಲ್ಲೇ ಅಣ್ಣ ಕೂಡ ಸುದ್ದಿಯಾದವರು. ನನ್ನ ತಮ್ಮ ಅಯ್ಯಪ್ಪ ಶರ್ಮ ಕೂಡ ಇಲ್ಲಿ ಸದ್ದು ಮಾಡಿದವರೇ. ಇನ್ನು, ನನಗೆ, ತೆಲುಗು ಚಿತ್ರರಂಗದಲ್ಲಿ ಮೂರು ದಶಕ ಕೆಲಸ ಮಾಡಿದರೂ, ಹೇಳಿಕೊಳ್ಳುವ ಹೆಸರು ಸಿಗಲಿಲ್ಲ. ಆದರೆ, ಕನ್ನಡ ಚಿತ್ರರಂಗ ನನಗೆ ಹೆಸರು, ಗೌರವ ಎಲ್ಲವನ್ನೂ ಕೊಟ್ಟಿದೆ.

ಹೀಗಾಗಿ ನನಗೆ ಕನ್ನಡವೇ ನನ್ನ ಬದುಕಿನ ಭಾಷೆ, ಮಾತೃಭಾಷೆ ಎಲ್ಲವೂ ಇಲ್ಲೇ. ಇಂದು ನಾನು ಏನೆಲ್ಲಾ ಆಗಿದ್ದೇನೋ ಅದಕ್ಕೆಲ್ಲಾ ಕನ್ನಡಿಗರೇ ಕಾರಣ” ಮುಂದಿನ ದಿನಗಳಲ್ಲಿ ನನ್ನ ಮಗನನ್ನೂ ಕನ್ನಡ ಚಿತ್ರರಂಗದ ಮೂಲಕವೇ ಪರಿಚಯಿಸುತ್ತೇನೆ. ಅದಕ್ಕೆ ಈಗಾಗಲೇ ತಯಾರಿ ನಡೆದಿದೆ. ಈ ಹಿಂದೆಯೇ ಪರಿಚಯಿಸಬೇಕಿತ್ತು. ಆದರೆ, ಕೊರೊನಾ ಹಾವಳಿಯಿಂದ ಸ್ವಲ್ಪ ತಡವಾಗಿದೆ. ಬರುವ ಮೇ ತಿಂಗಳಲ್ಲಿ ಮಗನನ್ನು ಕನ್ನಡ ಸಿನಿಮಾ ಮೂಲಕ ಇಂಡಸ್ಟ್ರಿಗೆ ಪರಿಚಯಿಸುತ್ತಿದ್ದೇನೆ ಎನ್ನುತ್ತಾರೆ ಅವರು.

 

ಆಲ್‌ ದಿ ಬೆಸ್ಟ್‌ ಸಿನಿಲಹರಿ
ಕಚೇರಿಯಲ್ಲಿ ಕುಳಿತು ಇಷ್ಟೆಲ್ಲಾ ಮಾತನಾಡಿದ ಖಳನಟ ರವಿಶಂಕರ್‌ ಅವರು, ಕೊನೆಗೆ “ಸಿನಿಲಹರಿ” ಯಶಸ್ವಿಯಾಗಲಿ. ನಿಮ್ಮ ಬರವಣಿಗೆಯೇ ನಿಮಗೆ ಶಕ್ತಿ. ಕನ್ನಡ ಚಿತ್ರರಂಗದಲ್ಲಿ “ಸಿನಿಲಹರಿ” ಹೊಸ ಹೆಜ್ಜೆ ಮೂಡಿಸಲಿ. ಹೊಸ ಸುದ್ದಿಗಳ ಜೊತೆಗೆ ಕನ್ನಡ ಚಿತ್ರರಂಗದ ಪರ ಈ ಸಿನಿಲಹರಿ ಕೆಲಸ ಮಾಡಲಿ” ಎಂದು ಶುಭಹಾರೈಸಿದರು.

 

Categories
ಸೌತ್‌ ಸೆನ್ಸೇಷನ್

ಓಟಿಟಿಯಲ್ಲಿ ಮಾಸ್ಟರ್‌ ಪ್ರದರ್ಶಕರ ಅಸಮಾಧಾನ!

ಥಿಯೇಟರ್‌ಗೆ ಬಂದ ಎರಡನೇ ವಾರಕ್ಕೇ ಓಟಿಟಿಯಲ್ಲಿ ವಿಜಯ್ ತಮಿಳು ಚಿತ್ರ

ವಿಜಯ್‌ ತಮಿಳು ಸಿನಿಮಾ ನಾಡಿದ್ದು ಅಮೇಜಾನ್ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ತೆರೆಕಂಡ ಎರಡನೇ ವಾರಕ್ಕೇ ಓಟಿಟಿಯಲ್ಲಿ ಬಂದರೆ ತಮಗೆ ಅನ್ಯಾಯವಾಗುತ್ತದೆ ಎಂದು ವಿತರಕರು, ಪ್ರದರ್ಶಕರು ಅಲವತ್ತುಕೊಂಡಿದ್ದಾರೆ.  ಕೊರೋನಾ ಸಂಕಷ್ಟದಲ್ಲಿದ್ದ ದಕ್ಷಿಣದ ಚಿತ್ರೋದ್ಯಮಕ್ಕೆ ವಿಜಯ್‌ ನಟನೆಯ ‘ಮಾಸ್ಟರ್‌’ ಹುರುಪು ತುಂಬಿತ್ತು. ಥಿಯೇಟರ್‌ನಲ್ಲಿ ಶೇ.50ರಷ್ಟು ಮಾತ್ರ ಪ್ರೇಕ್ಷಕರಿರಬೇಕು ಎನ್ನುವ ನಿಯಮದ ಮಧ್ಯೆಯೂ ಈ ಚಿತ್ರ ದೊಡ್ಡ ವಹಿವಾಟು ನಡೆಸಿತು. ಅಧಿಕೃತ ಮೂಲಗಳ ಪ್ರಕಾರ ಈ ಚಿತ್ರದ ದೇಸಿ ಮತ್ತು ಜಾಗತಿಕ ಮಾರುಕಟ್ಟೆ ವಹಿವಾಟು 220 ಕೋಟಿ ರೂಪಾಯಿ ದಾಟುತ್ತಿದೆ ಎನ್ನಲಾಗಿದೆ. ಲೋಕೇಶ್ ಕನಗರಾಜ್‌ ನಿರ್ದೇಶನದ ಚಿತ್ರ ಇದೀಗ ಓಟಿಟಿ ಮೂಲಕ ಜಗತ್ತಿನ ಮೂಲೆಮೂಲೆಗಳಿಗೂ ತಲುಪಲಿದೆ.

ನಾಡಿದ್ದು ಜನವರಿ 29ಕ್ಕೆ ‘ಮಾಸ್ಟರ್‌’ ಅಮೇಜಾನ್ ಪ್ರೈಮ್‌ ವೀಡಿಯೋದಲ್ಲಿ ಪ್ರೀಮಿಯರ್ ಆಗಲಿದೆ. ತಮಿಳು ಸ್ಟಾರ್ ಹೀರೋ ವಿಜಯ್ ಮತ್ತು ತಮ್ಮದೇ ಆದ ಅಭಿಮಾನಿ ವಲಯ ಹೊಂದಿರುವ ವಿಜಯ್ ಸೇತುಪತಿ ನಟನೆಯ ‘ಮಾಸ್ಟರ್‌’ ಜನವರಿ 13ರ ಪೊಂಗಲ್‌ನಂದು ತೆರೆಕಂಡಿತ್ತು. ಪ್ರೊಫೆಸರ್‌ ಜಾನ್‌ ದೊರೈರಾಜ್‌ ಮತ್ತು ಮಕ್ಕಳನ್ನು ಬಳಸಿಕೊಂಡು ಕ್ರಿಮಿನಲ್ ಚಟುವಟಿಕೆ ನಡೆಸುವ ಭೂಗತ ಪಾತಕಿ ಭವಾನಿ ಮಧ್ಯೆಯ ಹೋರಾಟವೇ ಚಿತ್ರದ ಕಥಾವಸ್ತು. ಉತ್ತಮ ತಾಂತ್ರಿಕ ಗುಣಮಟ್ಟ ಹಾಗೂ ಮೇಕಿಂಗ್‌ನಿಂದಾಗಿ ಗಮನ ಸೆಳೆದಿದ್ದ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡಿದ್ದರು. ಇದೀಗ ಚಿತ್ರದ ಓಟಿಟಿ ದಿನಾಂಕ ಘೋಷಣೆಯಾಗಿದ್ದು, ಚಿತ್ರದ ವಿತರಕರು ಹಾಗೂ ಪ್ರದರ್ಶಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

“ಈ ಸುದ್ದಿ ನಮಗೆ ಶಾಕ್ ತಂದಿದೆ. ಚಿತ್ರ ಬಿಡುಗಡೆಯಾಗಿ ಎರಡು ವಾರವಷ್ಟೇ ಆಗಿದೆ. ಮೂರು ಮತ್ತು ನಾಲ್ಕನೇ ವಾರ ನಾವು ಲಾಭ ಮಾಡುತ್ತಿದ್ದೆವು. ಓಟಿಟಿಯಲ್ಲಿ ಬರುವುದರಿಂದ ಪ್ರೇಕ್ಷಕರು ಥಿಯೇಟರ್‌ಗೆ ಬರುವುದಿಲ್ಲ. ನಮಗಿದು ನಷ್ಟದ ಬಾಬತ್ತು” ಎನ್ನುವುದು ಥಿಯೇಟರ್‌ ಮಾಲೀಕರ ಅಳಲು. ಒಪ್ಪಂದದಂತೆ 70:30 ಅನುಪಾತದಲ್ಲಿ ಹಣ ಹಂಚಿಕೊಳ್ಳುವುದು ಯೋಜನೆ. ನೂರು ರೂಪಾಯಿ ಟಿಕೆಟ್ ದರವಿದ್ದರೆ ಅದರಲ್ಲಿ 70 ರೂಪಾಯಿ ಚಿತ್ರದ ನಿರ್ಮಾಪಕರಿಗೆ ಹೋದರೆ ಪ್ರದರ್ಶಕರಿಗೆ 30 ರೂಪಾಯಿ ಪ್ರದರ್ಶಕರದ್ದು. ಎರಡು ವಾರಗಳ ನಂತರ ಪ್ರದರ್ಶಕರಿಗೆ ಶೇ.10ರಷ್ಟು ಲಾಭಾಂಶ ಹೆಚ್ಚಿಗೆ ಸಿಗಬೇಕೆನ್ನುವುದು ಒಪ್ಪಂದ. ಇದೀಗ ಚಿತ್ರ ಓಟಿಟಿಯಲ್ಲಿ ಪ್ರಸಾರವಾಗುವುದರಿಂದ ಥಿಯೇಟರ್‌ ಬರುವ ಪ್ರೇಕ್ಷಕರು ಕಡಿಮೆಯಾಗುತ್ತಾರೆ. ಹಾಗಾಗಿ ತಮಗೆ ಅನ್ಯಾಯವಾಗುತ್ತದೆ ಎಂದು ವಿತರಕರು, ಪ್ರದರ್ಶಕರು ದನಿ ಎತ್ತಿದ್ದಾರೆ. ಓಟಿಟಿ ಲೆಕ್ಕಾಚಾರದಿಂದ ಥಿಯೇಟರ್‌ನವರಿಗೆ ತೊಂದರೆಯಾಗುತ್ತದೆ ಎನ್ನುವ ವಾದಕ್ಕೆ ‘ಮಾಸ್ಟರ್‌’ ಉದಾಹರಣೆಯಾದಂತಿದೆ. ಆದರೆ ಈ ಬಗ್ಗೆ ಚಿತ್ರತಂಡವಿನ್ನೂ ಪ್ರತಿಕ್ರಿಯಿಸಿಲ್ಲ. ಓಟಿಟಿಯಲ್ಲಿ ಬರಲಿರುವ ತಮ್ಮ ಚಿತ್ರದ ಬಗ್ಗೆ ನಟ ವಿಜಯ್‌, “ನಮ್ಮ ಚಿತ್ರ ಪ್ರೈಮ್ ವೀಡಿಯೋ ಮೂಲಕ ಜಾಗತಿಕ ಪ್ರೇಕ್ಷಕರನ್ನು ತಲುಪಲಿದೆ. ಇದು ಇಡೀ ಚಿತ್ರತಂಡಕ್ಕೆ ಖುಷಿಯ ಸಂಗತಿ” ಎಂದಿದ್ದಾರೆ. ಮಾಳವಿಕಾ ಮೋಹನನ್, ಆಂಡ್ರಿಯಾ ಜೆರಿಮಿ, ಶಂತನು ಭಾಗ್ಯರಾಜ್‌, ಅರ್ಜುನ್ ದಾಸ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂಗೀತ ಅನಿರುದ್ಧ ರವಿಚಂದ್ರನ್ ಅವರದು.

Categories
ಸಿನಿ ಸುದ್ದಿ

ಕೆಜಿಎಫ್‌ ರೇಂಜ್‌ ಚೇಂಜ್‌ ಆಯ್ತು!

ಭಾರೀ ಮೊತ್ತಕ್ಕೆ ಸೇಲ್‌ ಆಯ್ತು ಹಿಂದಿ ಡಬ್ಬಿಂಗ್‌ ರೈಟ್ಸ್‌

ಭಾರತೀಯ ಸಿನಿಮಾರಂಗದಲ್ಲೇ ಜೋರು ಸುದ್ದಿ ಮಾಡಿರುವ “ಕೆಜಿಎಫ್‌ 2” ಇದೀಗ ಮತ್ತೊಂದು ಹೊಸ ದಾಖಲೆ ಬರೆದಿದೆ. ಹೌದು, ಈಗಾಗಲೇ ಬಹುನಿರೀಕ್ಷೆ ಹುಟ್ಟಿಸಿರುವ “ಕೆಜಿಎಫ್-‌೨” ಹೊಸದೊಂದು ದಾಖಲೆ ಮಾಡಿದೆ. ಬಿಡುಗಡೆಗೂ ಮುನ್ನವೇ ಒಂದು ಕುತೂಹಲ ಕೆರಳಿಸಿರುವ ಈ ಚಿತ್ರ ಈಗಾಗಲೇ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

ಮೂಲಗಳ ಪ್ರಕಾರ ತೆಲುಗಿನಲ್ಲಿ ದೊಡ್ಡ ಬೆಲೆಗೆ ಡಬ್ಬಿಂಗ್ ಹಕ್ಕು ಮಾರಾಟವಾಗಿರುವ ಕುರಿತು ವರದಿಯಾಗಿದೆ. ಸದ್ಯದ ಹೊಸ ಸುದ್ದಿ ಅಂದರೆ, ಹಿಂದಿಯಲ್ಲಿ “ಕೆಜಿಎಫ್-2” ಚಿತ್ರ ದಾಖಲೆ ಬೆಲೆಗೆ ಮಾರಾಟಗೊಂಡಿದೆ ಎಂಬ ಸುದ್ದಿ ಹೊರಬಿದ್ದಿದೆ.

ಮೊದಲ ಚಾಪ್ಟರ್‌ “ಕೆಜಿಎಫ್” ಚಿತ್ರವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಿದ್ದ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಈಗ “ಚಾಪ್ಟರ್-2” ಚಿತ್ರವನ್ನು ಖರೀದಿಸಿದೆ ಎನ್ನಲಾಗಿದೆ. ಬಾಲಿವುಡ್ ನಟ-ನಿರ್ಮಾಪಕ ಫರಾನ್ ಅಖ್ತರ್ ಎರಡನೇ ಭಾಗಕ್ಕೆ ದೊಡ್ಡ ಬೆಲೆ ನೀಡಿದ ಖರೀದಿಸಿದ್ದಾರೆ ಎಂದು ಬಾಲಿವುಡ್‌ ಡಿಜಿಟಲ್‌ ಮಾಧ್ಯಮಗಳು ವರದಿ ಮಾಡಿವೆ.


ಮೂಲಗಳ ಪ್ರಕಾರ ಸುಮಾರು 90 ಕೋಟಿ ರುಪಾಯಿಗೆ “ಕೆಜಿಎಫ್-‌2” ಮಾರಾಟ ಆಗಿದೆ ಎನ್ನಲಾಗಿದೆ. ಫರಾನ್ ಅಖ್ತರ್ ಸಂಸ್ಥೆ ಸುಮಾರು ಈ ಮೊತ್ತ ಕೊಟ್ಟು, ಹಕ್ಕು ಪಡೆದಿದೆ ಎನ್ನಲಾಗುತ್ತಿದೆ. ಮೂಲ ಚಿತ್ರದ ಬಜೆಟ್‌ಗಿಂತ ಹೆಚ್ಚು ಎಂದು ಸ್ವತಃ ಎಕ್ಸೆಲ್ ಸಂಸ್ಥೆಯ ಮೂಲಗಳು ಹೇಳಿಕೊಂಡಿವೆ. “ಕೆಜಿಎಫ್” ಈ ಹಿಂದೆ ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲೇ ವ್ಯಾಪಾರ ವಹಿವಾಟು ನಡೆಸಿತ್ತು. “ಚಾಪ್ಟರ್ 1” ಚಿತ್ರ ಆಗ 40 ಕೋಟಿವರೆಗೂ ಗಳಿಕೆ ಕಂಡಿದೆ ಎಂಬ ವರದಿಯಾಗಿತ್ತ. ಕನ್ನಡ ಸಿನಿಮಾವೊಂದು ಹಿಂದಿಯಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರವಾಗಿ ಹೊರಹೊಮ್ಮಿತ್ತು ಎಂಬುದು ವಿಶೇಷ.


ಸದ್ಯಕ್ಕೆ ಈಗ “ಚಾಪ್ಟರ್ 2” ಸಿನಿಮಾ ಮೇಲೆ ಎಲ್ಲರಿಗೂ ನಿರೀಕ್ಷೆ ಹೆಚ್ಚಿದೆ. ಕಾರಣ, “ಚಾಪ್ಟರ್ 2” ಚಿತ್ರದಲ್ಲಿ ಸಂಜಯ್ ದತ್, ರವೀನಾ ಟಂಡನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿಯೇ ಒಂದಷ್ಟು ಹೆಚ್ಚು ಹಣ ಗಳಿಸುವ ಲೆಕ್ಕಾಚಾರದಲ್ಲಿ ಫರಾನ್ ಅಖ್ತರ್ ದೊಡ್ಡ ಮೊತ್ತ ಕೊಟ್ಟು ಹಕ್ಕು ಖರೀದಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು, ತೆಲುಗಿನಲ್ಲಿ ದಾಖಲೆ ಬೆಲೆಗೆ ಸೇಲ್ ಆಗಿರುವುದು ಕೂಡ ಸುದ್ದಿಯಾಗಿದೆ. ವರಾಹಿ ಸಂಸ್ಥೆ ಈಗ ಚಾಪ್ಟರ್ 2 ಚಿತ್ರಕ್ಕೆ ಸುಮಾರು 60 ಕೋಟಿ ನೀಡಿ ಡಿಜಿಟಲ್ ಹಾಗೂ ಸ್ಯಾಟ್‌ಲೈಟ್ ಹಕ್ಕು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Categories
ಸಿನಿ ಸುದ್ದಿ

ಇದು ಅನೈತಿಕ! ರಾಜ್‌ಮೌಳಿ ವಿರುದ್ಧ ಗುಡುಗಿದ ಬೋನಿ ಕಪೂರ್‌

ತಮ್ಮ “ಮೈದಾನ್‌” ಚಿತ್ರದ ದಿನದಂದೇ ‘ಆರ್‌ಆರ್‌ಆರ್‌’ ಬಿಡುಗಡೆಗೆ ನಿರ್ಮಾಪಕ ಕಿಡಿ

ಮೊನ್ನೆಯಷ್ಟೇ ನಿರ್ದೇಶಕ ರಾಜ್‌ಮೌಳಿ ತಮ್ಮ ಮಹತ್ವಾಕಾಂಕ್ಷೆಯ “ಆರ್‌ಆರ್‌ಆರ್‌” ತೆಲುಗು ಸಿನಿಮಾ ದಸರಾಗೆ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದರು. ಈ ಸಿನಿಮಾ ಮೂಲ ತೆಲುಗು ಸೇರಿದಂತೆ ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಡಬ್ಬಿಂಗ್ ಅವತರಣಿಕೆಗಳಲ್ಲಿ ಥಿಯೇಟರ್‌ಗೆ ಬರಲಿದೆ. ಇದೀಗ ಬಾಲಿವುಡ್ ನಿರ್ಮಾಪಕ ಬೋನಿಕಪೂರ್ ಇದಕ್ಕೆ ತಕರಾರು ತೆಗೆದಿದ್ದಾರೆ.

“ಅದೇ ದಿನ ನನ್ನ ನಿರ್ಮಾಣದ “ಮೈದಾನ್‌” ಹಿಂದಿ ಸಿನಿಮಾ ತೆರೆಕಾಣುತ್ತಿದೆ. ಆರು ತಿಂಗಳ ಹಿಂದೆಯೇ ನಾನು ಬಿಡುಗಡೆ ದಿನಾಂಕ ಘೋಷಿಸಿದ್ದೆ. ಇದು ಗೊತ್ತಿದ್ದೂ ರಾಜಮೌಳಿ ಅದೇ ದಿನ ತಮ್ಮ ಸಿನಿಮಾ ಬಿಡುಗಡೆ ಮಾಡಲು ಸನ್ನದ್ಧರಾಗಿದ್ದಾರೆ. ಇದು ಅನೈತಿಕ!” ಎಂದು ಹೇಳುವ ಮೂಲಕ ಗುಡುಗಿದ್ದಾರೆ ಬೋನಿಕಪೂರ್‌.
ಜೀ ಸ್ಟುಡಿಯೋಸ್‌ ಹಾಗೂ ಮತ್ತಿಬ್ಬರು ನಿರ್ಮಾಪಕರೊಡಗೂಡಿ ಬೋನಿಕಪೂರ್ “ಮೈದಾನ್‌” ಹಿಂದಿ ಚಿತ್ರ ನಿರ್ಮಿಸುತ್ತಿದ್ದಾರೆ. ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶನದ ಈ ಸಿನಿಮಾ, ಖ್ಯಾತ ಫುಟ್‌ಬಾಲ್ ಕೋಚ್‌ ಸೈಯದ್ ಅಬ್ದುಲ್‌ ರಹೀಂ ಅವರ ಜೀವನಕಥೆಯನ್ನು ಆಧರಿಸಿದ ಚಿತ್ರವಾಗಿದ್ದು, ಒಂದು ರೀತಿಯ ಹೊಸ ಪ್ರಯೋಗವಿದು. ಅಜಯ್ ದೇವಗನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಬಯೋಪಿಕ್‌ನಲ್ಲಿ ಪ್ರಿಯಾಮಣಿ ಹಿರೋಯಿನ್‌. ಹಾಗೆ ನೋಡಿದರೆ ರಾಜ್‌ಮೌಳಿ ನಿರ್ದೇಶನದ “ಆರ್‌ಆರ್‌ಆರ್‌” ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಒಂದೇ ದಿನ ಅಜಯ್‌ರ ಎರಡು ಚಿತ್ರಗಳು ತೆರೆಕಾಣಲಿವೆ.


“ಕೊರೋನಾ ಕಾಲದಲ್ಲಿ ಮೊದಲೇ ಸಿನಿಮಾರಂಗ ಬಸವಳಿದಿದೆ. ಹೀಗಿರುವಾಗ ಒಮ್ಮೆಗೇ ಎರಡು ದೊಡ್ಡ ಸಿನಿಮಾಗಳು ತೆರೆಕಂಡರೆ ನಿರ್ಮಾಪಕರಿಗೆ ನಷ್ಟವಾಗುತ್ತದೆ. ಒಟ್ಟಾರೆ ಸಿನಿಮೋದ್ಯಮಕ್ಕೆ ತೊಂದರೆ. ರಾಜ್‌ಮೌಳಿ ತಮ್ಮ ಸಿನಿಮಾ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಮಾಡುವುದು ಒಳಿತು” ಎಂದಿದ್ದಾರೆ ಬೋನಿಕಪೂರ್‌. ಇದಕ್ಕೆ “ಆರ್‌ಆರ್‌ಆರ್‌” ತಂಡದ ಪ್ರತಿಕ್ರಿಯೆ ಏನು ಎನ್ನುವ ಕುತೂಹಲದೊಂದಿಗೆ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಅಪ್ಪ ಮಗನ ಬಾಂಧವ್ಯದ ಹಾಡಿಗೆ ಅಪ್ಪು ಧ್ವನಿ

ಮಂಗಳವಾರ ರಜಾ ದಿನ ಚಿತ್ರದ ಸಾಂಗ್‌ ಮಂಗಳವಾರವೇ ರಿಲೀಸ್‌

ಸಾಂಗ್‌ ರಿಲೀಸ್‌ ಮಾಡಿದ ಅಭಿಷೇಕ್‌ ಅಂಬರೀಶ್‌ 

ಕನ್ನಡದಲ್ಲಿ ಈಗಾಗಲೇ ವಿಭಿನ್ನ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಬರುತ್ತಲೇ ಇವೆ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ, “ಮಂಗಳವಾರ ರಜಾದಿನ” ಸಿನಿಮಾ ಕೂಡ ಚಿತ್ರೀಕರಣಗೊಂಡು ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.‌

ಹೌದು, ಚಂದನ್‌ ಆಚಾರ್‌ ಅಭಿನಯದ “ಮಂಗಳವಾರ ರಜಾ ದಿನ” ಚಿತ್ರದ ಹಾಡು ಇದೀಗ ಹೊರಬಂದಿದೆ. ಈ ಚಿತ್ರದ ಹಾಡನ್ನು ನಟ ಅಭಿಷೇಕ್‌ ಅಂಬರೀಶ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಂದಹಾಗೆ, ಈ ಚಿತ್ರದ ಹಾಡನ್ನು ಗೌಸ್‌ಪೀರ್‌ ಬರೆದಿದ್ದು, ನಟ ಪುನೀತ್‌ರಾಜಕುಮಾರ್‌ ಹಾಡಿದ್ದಾರೆ. ಲಹರಿ ಮ್ಯೂಸಿಕ್‌ ಸಂಸ್ಥೆ ಮೂಲಕ ಈ ಹಾಡನ್ನು ಹೊರ ತರಲಾಗಿದೆ.


“ನೀನೇ ಗುರು, ನೀನೇ ಗುರಿ, ನೀನೆ ಗುರುತು…’ ಎಂದು ಸಾಗುವ ಹಾಡನ್ನು ಅಭಿಷೇಕ್ ಅಂಬರೀಶ್ ಗಣರಾಜ್ಯೋತ್ಸವದ ದಿನ ಬಿಡುಗಡೆ ಮಾಡಿ, ಹಾಡಿನ ಬಗ್ಗೆ ಗುಣಗಾನ ಮಾಡಿದ್ದಾರೆ. ಈ ಹಾಡಿನ ಕುರಿತು ಮಾತನಾಡಿರುವ ಅಭಿಷೇಕ್‌ ಅಂಬರೀಷ್‌, “ತಂದೆ, ಮಗನ‌ ಭಾಂದವ್ಯದ ಹಾಡನ್ನು ಗೌಸ್‌ ಪೀರ್‌ ಚೆನ್ನಾಗಿ ಬರೆದಿದ್ದಾರೆ. ಹಾಗೆಯೇ ಪುನೀತ್‌ ರಾಜಕುಮಾರ್‌ ಕೂಡ ತುಂಬಾನೇ ಸೊಗಸಾಗಿ ಹಾಡಿದ್ದಾರೆ. ಇನ್ನು, ಈ ಹಾಡು ಕೇಳುವ ಪ್ರತಿಯೊಬ್ಬರಿಗೂ ತಮ್ಮ ತಂದೆ ನೆನಪಾಗುತ್ತಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ” ಎಂದು ಶುಭಹಾರೈಸಿದ್ದಾರೆ ಅಭಿಷೇಕ್‌ ಅಂಬರೀಶ್‌.

ತ್ರಿವರ್ಗ ಫಿಲಂಸ್ ‌ನಿರ್ಮಾಣದ ಈ ಚಿತ್ರವನ್ನು ಯುವಿನ್ ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ 5 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದಹಾಗೆ, ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಋತ್ವಿಕ್ ಮುರಳಿಧರ್ ಸಂಗೀತ ನೀಡಿದ್ದಾರೆ.

 

Categories
ಸಿನಿ ಸುದ್ದಿ

ಚಕ್ರವರ್ತಿ ದಿ ಹೀರೋ – ಚಂದ್ರಚೂಡ್ ವಿಶೇಷ ಪಾತ್ರ

ಕೇಳು ಜನಮೇಜಯ

ಮತ್ತೊಂದು ಸಾಹಸದ ಚಿತ್ರ

ಸದಾ ಏನಾದರೊಂದು ಸುದ್ದಿಯಲ್ಲಿರುವ ಚಕ್ರವರ್ತಿ ಚಂದ್ರಚೂಡ ಈಗ ಮತ್ತೊಂದು ಸುದ್ದಿಯಲ್ಲಿದ್ದಾರೆ. ಪತ್ರಕರ್ತರಾಗಿ, ಒಳ್ಳೆಯ ಮಾತುಗಾರರಾಗಿ, ನಿರ್ದೇಶಕರಾಗಿ, ನಟರಾಗಿ ಸೈ ಎನಿಸಿಕೊಂಡಿರುವ ಅವರೀಗ, ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿರುವ ಚಂದ್ರಚೂಡ್, ಹೀಗೊಂದು ವಿಭಿನ್ನ ಶೀರ್ಷಿಕೆ ಇರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಅಣಿಯಾಗಿದ್ದಾರೆ.
ಹೌದು, ಚಕ್ರವರ್ತಿ ಚಂದ್ರಚೂಡ್ ಈಗ “ಕೇಳು ಜನಮೇಜಯ” ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಜನವರಿ26ಕ್ಕೆ ಚಿತ್ರದ. ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಬೇರ್ ಬಾಡಿ ತೋರಿಸಿರುವ ಚಕ್ರವರ್ತಿ ಚಂದ್ರಚೂಡ್, ಇಲ್ಲಿ‌ ಖೈದಿಯೋ, ಅಮಾಯಕರೋ ಎಂಬ ಪ್ರಶ್ನೆಗೆ ಕಾರಣರಾಗಿದ್ದಾರೆ.
ಇನ್ನು ಈ ಚಿತ್ರವನ್ನು ಸಂತೋಷ್‌ ಕೊಡಂಕೇರಿ ನಿರ್ದೇಶನ ಮಾಡುತ್ತಿದ್ದಾರೆ. ರಘುನಾಥ್ ಎಚ್.ಎ. ಮತ್ತು ದೃಷ್ಟಿ ಮೀಡಿಯಾ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರ ತಯಾರಾಗುತ್ತಿದೆ. ಈ ಚಿತ್ರದ ಹಿಂದೆ ಶ್ರೀನಿ, ಧನ್ವಿಕ್ ಗೌಡ, ವಿನಾಯಕ್ ಗೌಡ, ರಘು, ಚಂದ್ರು, ಸಂತೋಷ್ ಆನಂದ್ ಮಧು ಸಾಸಿರ್ ಇದ್ದಾರೆ.


ಪೋಸ್ಟರ್ ನೋಡಿದರೆ ಇದೊಂದು ಅಪರಾಧದ ಹಿನ್ನೆಲೆಯಲ್ಲಿ ಸಾಗುವ ಚಿತ್ರ ಇರಬಹುದೇನೊ ಎಂದೆನಿಸಿದರೂ ಇಲ್ಲಿ ಹಲವು ಕುತೂಹಲಕಾರಿ ಅಂಶಗಳಿವೆ ಅನ್ನೋದು ಸತ್ಯ.
ಸದ್ಯಕ್ಕೆ ಪೋಸ್ಟರ್ ಬಿಡುಗಡೆಯಾಗಿದೆ. ಉಳಿದಂತೆ ಮತ್ತಷ್ಟು ಮಾಹಿತಿ ಜೊತೆ ಚಿತ್ರತಂಡ ಬರಲಿದೆ.

Categories
ಬ್ರೇಕಿಂಗ್‌ ನ್ಯೂಸ್

ಡಿಟೆಕ್ಟಿವ್‌ ದಿವಾಕರನ ಹೊಸ ಸಾಹಸ

ಇನ್ನೊಂದು ಕೇಸ್‌ ಮೂಲಕ ರಿಷಭ್‌ ಶೆಟ್ಟಿ ಎಂಟ್ರಿ

ಬೆಲ್‌ ಬಾಟಂ ಭಾಗ-2 ಸಜ್ಜು

ಬೆಲ್‌ ಬಾಟಂ…

ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಪಡೆದ ಸಿನಿಮಾ. ಜಯತೀರ್ಥ ನಿರ್ದೇಶನದ ಈ ಚಿತ್ರದಲ್ಲಿ ರಿಷಭ್‌ ಶೆಟ್ಟಿ ಹೀರೋ ಆಗಿದ್ದರು. ಹರಿಪ್ರಿಯಾ ನಾಯಕಿಯಾಗಿದ್ದರು. ಈ ಚಿತ್ರ ಯಾವಾಗ, ದೊಡ್ಡ ಯಶಸ್ಸು ಪಡೆಯಿತೋ, ಆಗಲೇ ಮತ್ತೊಂದು ಸಿನಿಮಾ ಮಾಡುವ ಕುರಿತು ನಿರ್ದೇಶಕ ಜಯತೀರ್ಥ ಮತ್ತು ಕಥೆಗಾರ ದಯಾನಂದ್‌ ಯೋಚಿಸಿದ್ದರು.

ಅದರಂತೆ, “ಬೆಲ್‌ ಬಾಟಂ-2” ಸಿನಿಮಾ ಬರಲಿದೆ ಎಂದು ಹೇಳಲಾಗಿತ್ತು. ಈಗ ಹೊಸ ಸಿನಿಮಾಗೆ ಎಲ್ಲಾ ತಯಾರಿಯೂ ನಡೆದಿದ್ದು, ಜನವರಿ 27ರಂದು ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದೆ. ಅಧಿಕೃತವಾಗಿ ಬಿಡುಗಡೆಯಾಗುತ್ತಿರುವ ಚಿತ್ರದ ಶೀರ್ಷಿಕೆ ಏನೆಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಇಷ್ಟರಲ್ಲೇ ಟೈಟಲ್‌ ಹೊರಬರಲಿದ್ದು, ಚಿತ್ರದ ಇನ್ನಷ್ಟು ಮಾಹಿತಿಯನ್ನು ಹೊರಹಾಕಲಿದೆ ಚಿತ್ರತಂಡ.

Categories
ಸಿನಿ ಸುದ್ದಿ

ನಮ್‌ ಸ್ಟಾರ್‌ ಗ್ರೇಟ್‌ ಅನ್ನೋರಿಗೆ ಒಂದೇ ಅಖಾಡ! ಶುರುವಾಯ್ತು ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌

ಸ್ಟಾರ್ಸ್‌ ಅಭಿಮಾನಿಗಳಿಗೆ ಹೀಗೊಂದು ಪಂದ್ಯ

ಇದೊಂದು ಸೌಹಾರ್ದಯುತ ಕ್ರಿಕೆಟ್‌ ಪಂದ್ಯಾವಳಿ

ಕ್ರಿಕೆಟ್‌ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಹುಡುಗರಿಂದ ಹಿಡಿದು ವೃದ್ಧರವರೆಗೂ ಕ್ರಿಕೆಟ್‌ ಅಂದರೆ ಪಂಚಪ್ರಾಣ. ಹೌದು, ಈಗ ಇಲ್ಲೇಕೆ ಕ್ರಿಕೆಟ್‌ ವಿಷಯ ಅಂದುಕೊಂಡ್ರಾ? ವಿಷಯ ಇದೆ. ಈ ಕ್ರಿಕೆಟ್‌ ಎಲ್ಲೆಡೆ ವಿಸ್ತಾರಗೊಂಡಿರುವುದು ಗೊತ್ತೇ ಇದೆ. ಸಿನಿಮಾ ನಟರು ಕೂಡ ಕ್ರಿಕೆಟ್‌ ಕ್ರೀಡೆಗೆ ಮಾರುಹೋಗಿರುವುದುಂಟು. ದೇಶ ದೇಶಗಳ ನಡುವೆ ಕ್ರಿಕೆಟ್‌ ಆಯ್ತು, ರಾಜ್ಯ ರಾಜ್ಯಗಳ ನಡುವೆಯೂ ಕ್ರಿಕೆಟ್‌ ಆಟ ಶುರುವಾಯ್ತು. ಕೆಸಿಎಲ್‌ (ಕರ್ನಾಟಕ ಕ್ರಿಕೆಟ್‌ ಲೀಗ್), ಸಿಸಿಎಲ್‌ (ಸೆಲಬ್ರಿಟಿ ಕ್ರಿಕೆಟ್‌ ಲೀಗ್‌) ಕೂಡ ಪ್ರತಿ ವರ್ಷ ನಡೆಯುತ್ತಲೇ ಇದೆ. ಈಗ ಎಫ್‌ಸಿಎಲ್‌ ಕೂಡ ಅಖಾಡಕ್ಕಿಳಿಯಲಿದೆ.


ಎಫ್‌ಸಿಎಲ್‌ ಅಂದರೆ, ಫ್ಯಾನ್ಸ್‌ ಕ್ರಿಕೆಟ್‌ ಲೀಗ್.‌ ಇದುವರೆಗೆ ಸ್ಟಾರ್‌ ನಡುವೆ ಕ್ರಿಕೆಟ್‌ ಪಂದ್ಯಾವಳಿ ನಡೆಯುತ್ತಿತ್ತು. ಅಭಿಮಾನಿಗಳು ನೋಡಿ ಚಪ್ಪಾಳೆ, ಶಿಳ್ಳೆ ತಟ್ಟುತ್ತಿದ್ದರು. ಈಗ ಅಂತಹ ಸ್ಟಾರ್‌ಗಳ ಅಭಿಮಾನಿಗಳಿಗಾಗಿಯೇ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಶುರುವಾಗಿದೆ. ಈಗಾಗಲೇ ಐದು ಸೀಸನ್‌ ಮುಗಿಸಿರುವ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಈಗ ಆರನೇ ಆವೃತ್ತಿಯತ್ತ ಸಾಗಿದೆ.
ಜನವರಿ ‌26 ರ ಗಣರಾಜ್ಯೋತ್ಸವ ದಿನದಂದೇ ಎಫ್‌ಸಿಎಲ್‌ಗೆ ಚಾಲನೆ ಸಿಗಲಿದ್ದು, ಗೊರಗುಂಟೆ ಪಾಳ್ಯದಲ್ಲಿರುವ ರಾಜಣ್ಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಮುನಿರತ್ನ,‌ ನಾಗೇಂದ್ರ ಪ್ರಸಾದ್, ಕೆ.ಪಿ.ಶ್ರೀಕಾಂತ್‌,ರಘುಮುಖರ್ಜಿ, ಚೇತನ್‌ ಕುಮಾರ್‌, ಪವನ್‌ ಒಡೆಯರ್‌, ಸುನಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.

 

ಇಷ್ಟಕ್ಕೂ ಈ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ನಲ್ಲಿ ಯಾರೆಲ್ಲಾ ಸ್ಟಾರ್‌ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರವಿದು. ಶಿವರಾಜಕುಮಾರ್‌ ಫ್ಯಾನ್ಸ್‌, ರಮ್ಯಾ ಫ್ಯಾನ್ಸ್‌, ಸುದೀಪ್‌ ಫ್ಯಾನ್ಸ್‌, ದರ್ಶನ್‌ ಫ್ಯಾನ್ಸ್‌, ಗಣೇಶ್‌ ಫ್ಯಾನ್ಸ್‌ ಮತ್ತು ಪ್ರಜ್ವಲ್‌ ದೇವರಾಜ್‌ ಈ ಆರು ಸ್ಟಾರ್ಸ್‌ ಅಭಿಮಾನಿಗಳು ಈ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಇನ್ನು, ನಮ್‌ ಟಾಕೀಸ್‌ ಈ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದು, ಪ್ರತಿ ವರ್ಷ ಒಬ್ಬೊಬ ಸಿನಿಮಾ ಲೆಜೆಂಡರಿ ನೆನಪಿಗೆ ಫ್ಯಾನ್ಸ್‌ ಕ್ರಿಕೆಟ್‌ ಲೀಗ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿತ್ತು. ಆದರೆ, ಈಗ ನಟ ಜಗ್ಗೇಶ್‌ ಅವರ ಪ್ರೋತ್ಸಾಹದೊಂದಿಗೆ ನಡೆಸಲಾಗುತ್ತಿದೆ.

ಎಲ್ಲಾ ಸ್ಟಾರ್‌ ಫ್ಯಾನ್ಸ್‌ಗಳು ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಜಗಳ ಶುರುಮಾಡುತ್ತಲೇ ಇರುತ್ತಾರೆ. ಸ್ಟಾರ್‌ಗಳು ಮಾತ್ರ ಚೆನ್ನಾಗಿಯೇ ಇರುತ್ತಾರೆ. ಆದರೆ, ಅಂತಹ ಸ್ಟಾರ್ಸ್ ಫ್ಯಾನ್ಸ್‌ಗಳನ್ನು‌ ಒಂದೆಡೆ ಕಲೆಹಾಕಿ, ಅವರಿಗೆ ಸೌಹಾರ್ದತೆಗಾಗಿ ಈ ಪಂದ್ಯಾವಳಿ ನಡೆಸುವ ಮೂಲಕ ಅವರಲ್ಲೂ ಗೆಳೆತನ ಮೂಡಿಸುವ ಒಂದು ಪ್ರಯತ್ನ ಇಲ್ಲಾಗುತ್ತಿದೆ ಎಂಬುದು ಆಯೋಜಕರ ಮಾತು.


ಈ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಎಲ್ಲಾ ಸ್ಟಾರ್ಸ್‌ ಅಭಿಮಾನಿಗಳು ಪ್ರೀತಿಯಿಂದಲೇ ಪಾಲ್ಗೊಳ್ಳುತ್ತಿರುವುದು ವಿಶೇಷ. ಇಲ್ಲಿ ಒಟ್ಟು ಆರು ತಂಡಗಳಿದ್ದು, ನಾಲ್ಕು ತಂಡಗಳು ಸೆಮಿಫೈನಲ್‌ ತಲುಪಲಿವೆ. ಅವುಗಳ ಪೈಕಿ ಎರಡು ತಂಡಗಳು ಅಂತಿಮ ಸೆಣೆಸಾಟ ನಡೆಸಲಿವೆ. ಅಂತಿಮವಾಗಿ ಆ ಎರಡಲ್ಲಿ ಒಂದು ತಂಡ ಜಯಶಾಲಿಯಾಗಿ ಹೊರಹೊಮ್ಮಲಿದೆ. ಗೆದ್ದ ತಂಡಕ್ಕೆ ಟ್ರೋಫಿ ವಿತರಣೆ ಮಾಡಲಾಗುತ್ತಿದೆ.

Categories
ಸಿನಿ ಸುದ್ದಿ

ಮದರಂಗಿ ಕೃಷ್ಣನ ಹೊಸ ಚಿತ್ರದಲ್ಲಿ ಪವರ್‌ಸ್ಟಾರ್‌!

ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್‌ ನಿರ್ದೇಶನ

“ಮದರಂಗಿ” ಕೃಷ್ಣ ಯಾವಾಗ “ಲವ್‌ ಮಾಕ್ಟೇಲ್‌” ಸಿನಿಮಾ ಮೂಲಕ ಸುದ್ದಿಯಾಗಿಬಿಟ್ಟರೋ, ಅಲ್ಲಿಂದ ಅವರ ಅದೃಷ್ಟದ ಬಾಗಿಲು ತೆರೆದಿದ್ದು ನಿಜ. ಸಾಲು ಸಾಲು ಸಿನಿಮಾಗಳಲ್ಲಿ ಮದರಂಗಿ ಕೃಷ್ಣ ನಟಿಸುತ್ತಿರೋದು ನಿಜ. ಈಗ ಹೊಸ ಸುದ್ದಿ ಅಂದರೆ, ನೃತ್ಯ ನಿರ್ದೇಶಕ ನಾಗೇಂದ್ರ ಪ್ರಸಾದ್‌ ಅವರಿಗೊಂದು ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಮದರಂಗಿ ಕೃಷ್ಣ ಹೀರೋ. ಇನ್ನು, ನಾಗೇಂದ್ರ ಪ್ರಸಾದ್‌ ಅವರು ಮಾಡುತ್ತಿರುವ ಹೊಸ ಚಿತ್ರದ ಮತ್ತೊಂದು ವಿಶೇಷ ಅಂದರೆ, ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, ಸದ್ಯಕ್ಕೆ ಈ ಸುದ್ದಿ ಜೋರಾಗಿದೆ. ಅಂದಹಾಗೆ, ಕೃಷ್ಣ ನಟಿಸಿದರೋದು ಸ್ವಮೇಕ್‌ ಸಿನಿಮಾದಲ್ಲಲ್ಲ. ಬದಲಾಗಿ ತಮಿಳು ಸಿನಿಮಾದ ರಿಮೇಕ್‌ ಚಿತ್ರ. ಅದು “ಓ ಮೈ ಕಡವುಲೆ’ ಸಿನಿಮಾ. ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲು ತಯಾರಿ ನಡೆಸಲಾಗಿದೆ. ಈ ಚಿತ್ರ ರಿಮೇಕ್‌ ಆಗಿದ್ದರೂ, ಕನ್ನಡಕ್ಕೆ ಒಂದಷ್ಟು ಬದಲಾವಣೆ ಮಾಡಿಕೊಂಡು. ಕನ್ನಡದಲ್ಲಿ ತಯಾರಾಗುತ್ತಿದೆ. ಇನ್ನು, ಈ ಮೂಲ ಚಿತ್ರದಲ್ಲಿ ಅಶೋಕ್ ಸೆಲ್ವನ್ ನಾಯಕರಾಗಿದ್ದರು. ರಿತಿಕಾ ಸಿಂಗ್ ನಾಯಕಿಯಾಗಿದ್ದರು. ಅತಿಥಿ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ನಟಿಸಿದ್ದರು.

ಈಗ ಕನ್ನಡದಲ್ಲಿ ತಯಾರಾಗಲಿರುವ ಈ ಚಿತ್ರದಲ್ಲಿ ವಿಜಯ್‌ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರು ನಟಿಲು ಒಪ್ಪಿದ್ದಾರೆ ಎನ್ನಲಾಗಿದೆ. ಈಗಾಗಲೇ ಪುನೀತ್ ಅವರ ಜೊತೆ  ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಅವರು ನಟಿಸುವ ಬಗ್ಗೆ ಯೋಚಿಸಿದ್ದಾರೆ ಎನ್ನಲಾಗಿದೆ. ಅದೇನೆ ಇದ್ದರೂ, ಇಲ್ಲೀಗ ಸಿನಿಮಾತಂಡ ಕೂಡ ಆ ಕುರಿತಂತೆ ವಿಷಯ ಹೊರಹಾಕಬೇಕಿದೆ.  ನಾಗೇಂದ್ರ ಪ್ರಸಾದ್‌ ಅಂದಾಕ್ಷಣ, ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅದೇ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಸಹೋದರ ಅಂದರೆ ಗೊತ್ತಾಗುತ್ತೆ. ಮೂಗುರು ಸುಂದರಂ ಅವರ ಮೂರನೇ ಪುತ್ರ ನಾಗೇಂದ್ರ ಪ್ರಸಾದ್‌ ಈಗಾಗಲೇ ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದು, ಅಲ್ಲೂ ಜೋರು ಸುದ್ದಿಯಾಗಿದ್ದಾರೆ. ಕನ್ನಡದಲ್ಲಿ ನಾಗೇಂದ್ರ ಪ್ರಸಾದ್ ಅವರು “೧೨೩”, “ಮನಸೆಲ್ಲಾ ನೀನೆ” ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ಕನ್ನಡಕ್ಕೆ ಎಂಟ್ರಿ ಕೊಡುತ್ತಿರುವ ನಾಗೇಂದ್ರ ಪ್ರಸಾದ್ ಈಗ ಇಲ್ಲಿ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ತೆರೆ ಮೇಲೂ ಸೈ ಅಂತಾರೆ ಮಾಲೂರು ಶ್ರೀನಿವಾಸ್

 

ಇದೇ‌ ಮೊದಲ ಸಲ 5ಡಿ ಚಿತ್ರದಲ್ಲಿ ಖಡಕ್ ಕಾಪ್

ನೃತ್ಯ ನಿರ್ದೇಶಕನಾಗಿ ಇದ್ದವನು ನಾನು.‌ ಸದಾ ತೆರೆ ಹಿಂದೆ ಇರುವಂಥವನಿಗೆ ಒಳ್ಳೆಯ ಅವಕಾಶವಿದು.
ನಾನು ಈ ಹಿಂದೆ ಈಟಿವಿ, ಕಸ್ತೂರಿ, ಉದಯ, ಸುವರ್ಣ, ಜೀ ಕನ್ನಡ ಸೇರಿದಂತೆ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದ ಹೆಗ್ಗಳಿಕೆ ಇದೆ…

ಮಾಲೂರು ಶ್ರೀನಿವಾಸ್. ಕನ್ನಡ‌ ಚಿತ್ರರಂಗ ಕಂಡ ಯಶ್ವಿ ನೃತ್ಯ ನಿರ್ದೇಶಕ. ಈ ಬಣ್ಣದ ಲೋಕ ಸ್ಪರ್ಶಿಸಿ ಎರಡು ದಶಕ ಕಳೆದಿರುವ ಮಾಲೂರು ಶ್ರೀನಿವಾಸ್, ಸುಮಾರು 400ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ‌ ಕೆಲಸ‌ ಮಾಡಿದ್ದಾರೆ. ಕನ್ನಡದ ಬಹುತೇಕ ಸ್ಟಾರ್ ಸೇರಿದಂತೆ ಹೊಸಬರಿಗೂ ಸ್ಟೆಪ್ ಹೇಳಿಕೊಟ್ಟ ಕೀರ್ತಿ ಇವರದು.


ಇಷ್ಟಕ್ಕೂ ಈ ಡ್ಯಾನ್ಸ್ ಮಾಸ್ಟರ್ ಮಾಲೂರು ಶ್ರೀನಿವಾಸ್ ಕುರಿತು ಇಷ್ಟೊಂದು ಪೀಠಿಕೆ‌ಯಾಕೆ ಗೊತ್ತಾ? ಮಾಲೂರು ತೆರೆ ಹಿಂದಷ್ಟೇ ಅಲ್ಲ, ತೆರೆ ಮೇಲೂ ಕಾಣಿಸಿಕೊಂಡಿದ್ದಾರೆ. ಹಾಗಂತ, ಅವರಿಗೆ ಇದು ಹೊಸದಲ್ಲ. ಹಲವು ಸಿನಿಮಾಗಳಲ್ಲಿ ಸ್ಟಾರ್ ಜೊತೆ ಹೆಜ್ಜೆ ಹಾಕಿದ್ದಾರೆ.

ಸಣ್ಣಪುಟ್ಟ ಪಾತ್ರಕ್ಕೂ ಜೈ ಎಂದಿದ್ದಾರೆ. ಆದರೆ, ಈಗ ಮೊದಲ ಸಲ‌ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ಹೌದು, ಮಾಲೂರು ಶ್ರೀನಿವಾಸ್, ಎಅ್.ನಾರಾಯಣ್ ನಿರ್ದೇಶನದ “5ಡಿ” ಚಿತ್ರದಲ್ಲಿ ಒಂದೊಳ್ಳೆಯ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿ ಗನ್ ಹಿಡಿದಿದ್ದಾರೆ.


ಆ ಕುರಿತು ಹೇಳುವ ಮಾಲೂರು ಶ್ರೀನಿವಾಸ್, ” ಇದು ಮೊದಲ ಕಾಪ್ ಪಾತ್ರ. ನಾನು ಹಿಂದೆ ಒಂದಷ್ಟು ಸಿನಿಮಾದಲ್ಲಿ‌ ನಟಿಸಿದ್ದರೂ, ಈ ರೀತಿಯ ಪಾತ್ರ ಮಾಡಿರಲಿಲ್ಲ. ಈಗ ನಾರಾಯಣ್ ಸರ್ ನನ್ನ ಗುರುಗಳು. ಅವರ ಎಲ್ಲಾ ಸಿನಿಮಾಗಳಿಗೂ ನಾನೇ ಕೋರಿಯೋಗ್ರಾಫರ್. ಹಾಗಾಗಿ ಇಲ್ಲೂ ಹಾಡುಗಳಿಗೆ ಕೋರಿಯೋಗ್ರಾಫ್ ಮಾಡಿದ್ದೇನೆ. ನಾರಾಯಣ್ ಸರ್ ಇಲ್ಲಿ ಕಾಪ್ ಪಾತ್ರ ಮಾಡಿಸಿದ್ದಾರೆ. ಈಗಾಗಲೇ ಆ ಸೀನ್ ಚಿತ್ರೀಕರಣಗೊಂಡಿದೆ.


ನಾನೊಬ್ಬ ಕಡಕ್ ಪೊಲೀಸ್ ಅಧಿಕಾರಿ. ನನ್ ಕಂಟ್ರೋಲ್ ಇರುವ ಒಂದು ಪೊಲೀಸ್ ಸ್ಟೇಷನ್ ಅಧಿಕಾರಿ‌ ನಾನು. ಚೆನ್ನಾಗಿದೆ. ಮೂರು‌ ದಿನಗಳ ಕಾಲ‌ ನನ್ನ ಎಪಿಸೋಡ್ ಮಾಡಲಾಗಿದೆ. ಆದಿತ್ಯ ಅವರ ಜೊತೆಗಿನ ಕಾಂಬಿನೇಷನ್ ಇಲ್ಲ.


ಒಂದು ತನಿಖೆ ಅಧಿಕಾರಿ. ಒಳ್ಳೆಯ ಪಾತ್ರವದು. ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ನಂಬರ್ ಆಫ್ ಶಾಟ್ಸ್, ಬಿಲ್ಡಪ್ಸ್ ಇವೆ. ಒಂದು ದಿನ ಫುಲ್ ಇಂಟ್ರಡಕ್ಷನ್ ಸೀನ್ ಮಾಡಿದ್ದಾರೆ. ಎಲ್ಲರಿಗೂ ಮಾಲೂರು ಸ್ಕ್ರೀನ್ ಮೇಲೆ ಬೇರೆ ರೀತಿ ಕಾಣುತ್ತಾರೆ. ಈ ಚಿತ್ರದಲ್ಲಿ ನಾನು ತೆರೆಯ ಹಿಂದೆ, ಮುಂದೆ ಎರಡು ರೀತಿ ಕೆಲಸ ಮಾಡಿದ್ದೇನೆ.

ಸಾಂಗ್ ಗೂ ಕೋರಿಯೊಗ್ರಾಫ್ ಮಾಡಿದ್ದೇನೆ. ಕಾಪ್ ಆಗಿಯೂ ನಟಿಸಿದ್ದೇನೆ. ಇದೊಂದು ಅಪರೂಪದ ಪಾತ್ರ. ನಾರಾಯಣ್ ಸರ್ ಕರೆದು ಈ ಪಾತ್ರ ಮಾಡಿ‌ ಅಂದಾಗ, ಇಲ್ಲ ಅನ್ನೋಕೆ ಆಗಲಿಲ್ಲ. ಮಾಡಿದೆ.
ನೃತ್ಯ ನಿರ್ದೇಶಕನಾಗಿ ಇದ್ದವನು ನಾನು.‌ ಸದಾ ತೆರೆ ಹಿಂದೆ ಇರುವಂಥವನಿಗೆ ಇದೊಂದು ಒಳ್ಳೆಯ ಅವಕಾಶ.
ನಾನು ಈ ಹಿಂದೆ ಈಟಿವಿ, ಕಸ್ತೂರಿ, ಉದಯ, ಸುವರ್ಣ, ಜೀ ಕನ್ನಡ ಸೇರಿದಂತೆ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದ ಹೆಗ್ಗಳಿಕೆ ಇದೆ.

ಬಹುತೇಕ ವಾಹಿನಿಗಳಿಗೆ ರಿಯಾಲಿಟಿ ಶೋಗಳಿಗೆ ಮೊದಲು ಎಂಟ್ರಿಕೊಟ್ಟವನು ಎಂಬ ಹೆಮ್ಮೆ‌ಯೂ ಇದೆ. ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದವನು. ಅಲ್ಲಿಂದ ಒಂದು ಡ್ಯಾನ್ಸ್ ಶೋ ಸಂಗ್ರಾಮ ಮಾಡಿದ ಖುಷಿ ಇದೆ. “ಕುಣಿಯೋಣು ಬಾರಾ” ಎಂಬ ಜನಪ್ರಿಯ ಶೋ ಮೂಲಕ ಹೊಸ ಡ್ಯಾನ್ಸ್ ಕ್ರಾಂತಿಯೇ ಆಗೋಯ್ತು. ಆಗಲೇ 9 ಸೀಸನ್ ಮಾಡಿದ್ದೆ. ಆ ದಿನಗಳಲ್ಲೇ‌ ನನಗೆ ಹೀರೋ ಆಗಿ ನಟಿಸುವ ಅವಕಾಶ ಬಂದಿದ್ದವು.

ಆದರೆ, ನಾನು ಆಗ ಬಿಝಿ ಇದ್ದಂತಹ ಕಾಲಘಟ್ಟ, ಒಂದು ಕಡೆ ರಿಯಾಲಿಟಿ ಶೋ, ಇನ್ನೊಂದು ಕಡೆ‌‌ ಸಾಲು‌ ಸಾಲು ಸಿನಿಮಾಗಳಿದ್ದವು. ಹಾಗಾಗಿ ಮಾಡಲು ಸಾಧ್ಯವಾಗಿರಲಿಲ್ಲ. ಈಗ ನಟನೆಯತ್ತ ವಾಲಿದ್ದೇನೆ. ನನಗೆ ಸೂಕ್ತ ಎನಿಸುವ ಪಾತ್ರ ಇದ್ದರೆ ಖಂಡಿತ ಮಾಡ್ತೀನಿ. ಸದ್ಯ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆ” ಎನ್ನುತ್ತಾರೆ ಮಾಲೂರು ಶ್ರೀನಿವಾಸ್.


ಅದೇನೆ ಇರಲಿ‌‌ ದಶಕಗಳ‌ ಕಾಲ ನೃತ್ಯ ನಿರ್ದೇಶಕರಾಗಿರುವ ಮಾಲೂರು ಶ್ರೀನಿವಾಸ್, ಈಗ ನಟನೆ ಕಡೆ ಗಮನ ಹರಿಸಿದ್ದಾರೆ. ಒಬ್ಬ ಯಶಸ್ವಿ ಡ್ಯಾನ್ಸ್ ಮಾಸ್ಟರ್ ಆಗಿರುವ ಅವರು, ಒಳ್ಳೆಯ ಕಲಾವಿದರಾಗಿಯೂ ಹೊರ ಹೊಮ್ಮಲಿ ಎಂಬುದು “ಸಿನಿಲಹರಿ” ಹಾರೈಕೆ.

error: Content is protected !!