ಎಲ್ಲೆಡೆ ಕೊರೊನಾ ಹಾವಳಿ ಕಮ್ಮಿಯಾಗಿದೆ. ಬಹುತೇಕ ಕ್ಷೇತ್ರಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಪೂರ್ಣಗೊಳಿಸಿವೆ. ಆದರೆ, ಕನ್ನಡ ಚಿತ್ರರಂಗಕ್ಕೆ ಮಾತ್ರ ಇನ್ನೂ ಸರಿಯಾದ ಅನುಮತಿ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಚಿತ್ರ ಪ್ರದರ್ಶನಕ್ಕೆ ಅನುಮತಿ ಕೊಟ್ಟಿದ್ದರೂ, ರಾಜ್ಯ ಸರ್ಕಾರ ಮಾತ್ರ, ಅನುಮತಿ ನೀಡದೆ, ಇನ್ನೂ ಶೇ.೫೦ರಷ್ಟು ಅನುಮತಿಯಲ್ಲೇ ಚಿತ್ರಮಂದಿರಗಳು ಪ್ರದರ್ಶನ ಕೊಡಬೇಕು ಎಂದು ಹೇಳಿದೆ. ಸರ್ಕಾರದ ಈ ನಡೆಯನ್ನು ಇಡೀ ಚಿತ್ರೋದ್ಯಮವೇ ಪ್ರಶ್ನಿಸಿದೆ. ಟ್ವಿಟ್ಟರ್‌ನಲ್ಲಿ ಧ್ರುವ ಸರ್ಜಾ ಕೂಡ ಸ್ಟೇಟಸ್ ಹಾಕಿಕೊಳ್ಳುವ ಮೂಲಕ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಿಂದ ನಟ ಧ್ರುವಸರ್ಜಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಬೇಸರ ಹೊರಹಾಕಿದ್ದು, ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
ಈ ವಿಚಾರದ ಕುರಿತು, ಟ್ವೀಟರ್ ನಲ್ಲಿ ಪೋಸ್ಟ್ ಮಾಡಿರುವ ಇವರು ತನ್ನ ಧೋರಣೆಯನ್ನು ಸಲೀಸಾಗಿ ತೆರೆದಿಟ್ಟಿದ್ದಾರೆ. “ಬಸ್ನಲ್ಲಿ ಫುಲ್ ರಶ್..! ಮಾರ್ಕೆಟ್‌ನಲ್ಲಿ ಗಿಜಿ ಗಿಜಿ ಅಂತ ಜನರು ತುಂಬಿಕೊಂಡಿರುತ್ತಾರೆ. ಆದರೆ, ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಯಾಕೆ..” ಹೀಗೆ ಬರೆದ ಒಂದು ಪೋಸ್ಟ್ ಹಾಕಿರುವ ಧ್ರುವ ಸರ್ಜಾ ಅವರಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಅಂತೆಯೇ ಸಿನಿಮಾರಂಗದ ಅನೇಕ ನಟ,ನಟಿಯರು ಕೂಡ ಟ್ವೀಟ್‌ಗೆ ಬೆಂಬಲ ಸೂಚಿಸಿದ್ದಾರೆ. “ಬೇರೆ ರಾಜ್ಯಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಜನ ಸೇರಲು ಅವಕಾಶ ನೀಡಲಾಗಿದೆ ಆದರೆ, ನಮ್ಮ ರಾಜ್ಯದಲ್ಲಿ ಯಾಕೆ ಹೀಗೆ ಎಂದು ಹೇಳಿರುವ ಧ್ರುವ ಸರ್ಜಾ ಅವರ ಮಾತಿಗೆ ಅನೇಕರು ಸಾಥ್ ಕೊಟ್ಟಿದ್ದಾರೆ.
ಅಂದಹಾಗೆ, ಫೆ.18ರಂದು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ “ಪೊಗರು” ರಿಲೀಸ್ ಆಗಲಿದೆ. ಸರ್ಕಾರದ ಈ ರೀತಿಯ ಮಾರ್ಗಸೂಚಿಯಿಂದ ಸಿನಿಮಾರಂಗದ ಮಂದಿ ಬೇಸರ ಹೊರಹಾಕಿದ್ದಾರೆ. ಧ್ರುವ ಅವರ ಈ ಟ್ವೀಟ್‌ಗೆ ಅಭಿಮಾನಿಗಳೂ ಕೂಡ ಒಂದು ರೀತಿಯ ಅಭಿಯಾನ ಶುರುಮಾಡಿದ್ದಾರೆ. ಸದ್ಯಕ್ಕೆ ಧ್ರುವ ಸರ್ಜಾ ಅವರ ಈ ಪೋಸ್ಟ್ ಸಖತ್ ವೈರಲ್ ಆಗಿದೆ.
ಮಾರ್ಕೆಟ್‌ನಲ್ಲಿ ಗಿಜಿಗಿಜಿ ಜನ… ಬಸ್‌ನಲ್ಲೂ ಫುಲ್ ರಶ್…. ಚಿತ್ರಮಂದಿರಕ್ಕೆ ಮಾತ್ರ ಏಕೆ ೫೦% ನಿರ್ಬಂಧ…?
– ಇದು ಕನ್ನಡ ಚಿತ್ರರಂಗ ಶುರು ಮಾಡಿರುವ ಅಭಿಯಾನ. ಹೌದು, ಕೇಂದ್ರ ಸರ್ಕಾರ ಈಗಾಗಲೇ ಫೆಬ್ರವರಿಯಿಂದ ಚಿತ್ರಮಂದಿರಗಳ ಪೂರ್ಣ ಪ್ರಮಾಣದ ಪ್ರದರ್ಶನಕ್ಕೆ ಅನುಮತಿ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಮಾತ್ರ ಅನುಮತಿ ನೀಡದೆ, ಶೇ.೫೦ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ಕೊಡಬೇಕು ಎಂದು ಹೇಳಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬೇಸತ್ತಿರುವ ಕನ್ನಡ ಚಿತ್ರೋದ್ಯಮ ಈಗ ಸರ್ಕಾರವನ್ನು ಒತ್ತಾಯಿಸುತ್ತಿದೆ. ಅದಕ್ಕೆಂದೇ ಕನ್ನಡ ಚಿತ್ರರಂಗದ ಸ್ಟಾರ್ ನಟರು, ನಿರ್ಮಾಪಕರು, ನಿರ್ದೇಶಕರು ಈಗ ಸರ್ಕಾರಕ್ಕೆ ಮನವಿ ಮಾಡುತ್ತಿದ್ದು, ನಮಗೂ ಶೇ.೧೦೦ರಷ್ಟು ಅವಕಾಶ ಮಾಡಿಕೊಡಬೇಕು ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಬಹುತೇಕ ಸ್ಟಾರ್ ನಟರೆಲ್ಲರೂ ತಮ್ಮ ಟ್ವೀಟ್ ಮೂಲಕ ಹೀಗೊಂದು ಅಭಿಯಾನವನ್ನೂ ಶುರುಮಾಡಿದ್ದಾರೆ.
ಶಿವರಾಜಕುಮಾರ್ ತಮ್ಮ ಟ್ವೀಟ್ ಮೂಲಕ ವಿಡಿಯೊವೊಂದನ್ನು ಹರಿಬಿಟ್ಟಿದ್ದು, ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆ ವಿಡಿಯೋದಲ್ಲಿ ” ಎಲ್ಲರಿಗೂ ೧೦೦ರಷ್ಟು ಸೀಟು ಭರ್ತಿಗೆ ಅವಕಾಶ ಕೊಟ್ಟಿರಬೇಕಾದರೆ, ನಮಗೆ ಮಾತ್ರ ಶೇ.೫೦ ಯಾಕೆ? ನಮಗೂ ೧೦೦% ಭರ್ತಿ ಬೇಕೇ ಬೇಕು. ಇಂಡಸ್ಟ್ರಿಗೋಸ್ಕರ ನಾವೆಲ್ಲಾ ಜೊತೆಗಿದ್ದೇವೆ. ಸರ್ಕಾರದ ನಿರ್ಧಾರ ಬದಲಾಗಬೇಕು. ಜೈ ಹಿಂದ್ ಜೈ ಕರ್ನಾಟಕ ಮಾತೆ” ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಇನ್ನು, ನಟ ಧನಂಜಯ್ ಕೂಡ ಟ್ವೀಟ್ ಮಾಡಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ ? ಊರೆಲ್ಲ ಜನಜಂಗುಳಿ ತುಂಬಿ ತುಳುಕುತಿರಲು, ಥಿಯೇಟರ್ ಒಳಗೆ ಮಾತ್ರ ಕೊರೋನಾಗೆ ಅಂಜಿದೊಡೆಂತಯ್ಯ? ಎಂದು ಬರೆದುಕೊಳ್ಳುವ ಮೂಲಕ ಸರ್ಕಾರ ಕೂಡಲೇ ಶೇ>೧೦೦ಭರ್ತಿಗೆ ಅವಕಾಶ ಮಾಡಿಕೊಡಬೇಕು” ಎಂದು ಮನವಿ ಮಾಡಿದ್ದಾರೆ. ನಿರ್ದೇಶಕ ಸುನಿ ಕೂಡ ತಮ್ಮ ಟ್ವಿಟ್ಟರ್‌ನಲ್ಲಿ ” ವಿಮಾನದೊಳಗೆ ಭುಜಕ್ಕೆ ಭುಜ ತಾಕಿ ಕೂರಬಹುದು.. ದೇವಸ್ಥಾನದಲ್ಲಿ ಎಲ್ಲರ ಕೈಗಳು ಒಂದೇ ಗಂಟೆ ಬಾರಿಸಬಹುದು.. ಮಾರ್ಕೆಟ್ ನಲ್ಲಿ ಮಾಮುಲಿ ವ್ಯಾಪಾರ, ರಾಜಕೀಯ ರ಼್ಯಾಲಿಗೆ ಜನಸಾಗರ.
ಪಬ್ ಹೋಟೆಲ್ ನಲ್ಲಿ ಎಲ್ಲರ ವಿಹಾರ, ಚಿತ್ರಮಂದಿರಕೆ ಮಾತ್ರ ಯಾಕೆ ಕಟ್ಟೆಚ್ಚರ?” ಎಂದು ಬರೆದಿದ್ದಾರೆ. ಉಳಿದಂತೆ ಪುನೀತ್‌ರಾಜಕುಮಾರ್, ಪ್ರಶಾಂತ್ ನೀಲ್, ಧ್ರುವಸರ್ಜಾ, ದುನಿಯಾ ವಿಜಯ್, ಶಶಾಂಕ್, ಪವನ್ ಒಡೆಯರ್ ಸೇರಿದಂತೆ ಹಲವರು ಟ್ವೀಟ್ ಅಭಿಯಾನ ಶುರುಮಾಡಿದ್ದಾರೆ.
ಕನ್ನಡ ಚಿತ್ರರಂಗ ಈಗ ಮತ್ತಷ್ಟು ರಂಗೇರಿದೆ. ಈಗಂತೂ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಅಬ್ಬರ! ಹೌದು, ಕನ್ನಡದಲ್ಲಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳ ಪೈಕಿ “ಕಬ್ಜ” ಚಿತ್ರವೂ ಸೇರಿದೆ. ನಿರ್ದೇಶಕ ಆರ್.ಚಂದ್ರು ಅದ್ಧೂರಿ ವೆಚ್ಚದಲ್ಲೇ ತಮ್ಮ ಕನಸಿನ “ಕಬ್ಜ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಉದ್ಯಮಿ ಹಾಗೂ ಹಾಲಿ ಮಿನಿಸ್ಟರ್ ಎಂಟಿಬಿ ನಾಗರಾಜ್ ಅವರು ಈ ಚಿತ್ರಕ್ಕೆ ಸಾಥ್ ನೀಡಿರುವುದು, ಇನ್ನೂ ಒಂದು ಹಂತಕ್ಕೆ ಹೋಗಲು ಕಾರಣ. ಹೀಗಾಗಿ “ಕಬ್ಜ” ದೊಡ್ಡ ಮಟ್ಟಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಹಜವಾಗಿಯೇ ಕನ್ನಡದ “ಕಬ್ಜ” ಮೇಲೆ ಹೆಮ್ಮೆಯೂ ಇದೆ. ಉಪೇಂದ್ರ ಅಭಿಮಾನಿಗಳಿಗೂ ಇದು ಖುಷಿಯ ವಿಷಯವೇ. ಅದೆಲ್ಲಾ ಸರಿ, ಆದರೆ, ನಿರ್ದೇಶಕ ಆರ್.ಚಂದ್ರು ಮಾತ್ರ ತಮ್ಮ “ಕಬ್ಜ” ಚಿತ್ರದ ಕೆಲವು ವಿಚಾರಗಳಲ್ಲಿ ತೆಗೆದುಕೊಂಡಿರುವ ನಿರ್ಧಾರಗಳು ಅವರ ಫ್ಯಾನ್ಸ್‌ಗೆ, ಉಪೇಂದ್ರ ಫ್ಯಾನ್ಸ್‌ಗೂ ಗೊಂದಲ ಮತ್ತು ಅನುಮಾನಕ್ಕೆ ಕಾರಣವಾಗಿವೆ.
ಆರ್.ಚಂದ್ರು, ನಿರ್ದೇಶಕ
ಇಷ್ಟಕ್ಕೂ ಆ ಅನುಮಾನ, ಗೊಂದಲಕ್ಕೆ ಕಾರಣದ ಬಗ್ಗೆ ಹೇಳುವುದಾದರೆ, ಉಪೇಂದ್ರ ಅವರು ಸ್ಟಾರ್ ನಟ. ಇದರಲ್ಲಿ ಎರಡು ಮಾತಿಲ್ಲ. ಅವರಿಗೇ ಆದ ಒಂದು ಛಾಪು ಇದೆ. ತೆಲುಗಿನಲ್ಲು ದೊಡ್ಡ ಹೆಸರು ಇರುವ ನಟ. ಇಂದಿಗೂ ತೆಲುಗಿನಲ್ಲಿ ಉಪೇಂದ್ರ ಅಂದಾಕ್ಷಣ, ಒಂದು ಹೊಸ ಕ್ರೇಜ್ ಶುರುವಾಗುತ್ತೆ. ಈ ನಿಟ್ಟಿನಲ್ಲಿ ಅವರೀಗ “ಕಬ್ಜ” ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ತೆಲುಗಿಗೆ ಮೊದಲು ಎಂಟ್ರಿಕೊಟ್ಟವವರು ಉಪೇಂದ್ರ . ಈ ಹಿಂದೆಯೇ ಅವರನ್ನು ಸೌತ್ ಸ್ಟಾರ್ ಅಂತ ಕರೆಯಲಾಗಿದೆ. ತೆಲುಗು ಫ್ಯಾನ್ಸ್‌ಗೆ ಉಪೇಂದ್ರ ಅವರ “ಎ” ಸಿನಿಮಾ ಅಂದರೆ, ಇವತ್ತಿಗೂ ಕ್ರೇಜ್ ಇದೆ. ಅಂತಹ ನೇಮು, ಫೇಮು ಇರುವ ನಟರನ್ನು ಇಟ್ಟುಕೊಂಡು ಪ್ಯಾನ್ ಇಂಡಿಯಾ ಚಿತ್ರ ಮಾಡಲು ಹೊರಟಿರುವ ಆರ್.ಚಂದ್ರು, ತಮ್ಮ ಚಿತ್ರಕ್ಕೆ ಸುದೀಪ್ ಅವರನ್ನೂ ಕರೆತಂದಿದ್ದಾರೆ.
“ಕಬ್ಜ”ದ ಮಾರ್ಕೆಟ್ ಇದರಿಂದ ಇನ್ನೂ ಹೆಚ್ಚಾಗಿದ್ದು ಸುಳ್ಳಲ್ಲ. ಆದರೆ, ಉಪೇಂದ್ರ ಅವರ ಫೇಮ್ ಕಮ್ಮಿ ಇದೆಯಾ? ಎಂಬ ಪ್ರಶ್ನೆ ಕೂಡ ಎದುರಾಗುತ್ತೆ. ಉಪೇಂದ್ರ ಒಬ್ಬರನ್ನಿಟ್ಟುಕೊಂಡು ಚಿತ್ರ ಮಾಡಿದರೆ, “ಕಬ್ಜ” ಮಾರ್ಕೆಟ್‌ಗೆ ಪೆಟ್ಟು ಬೀಳಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡರಾ ಎಂಬ ಪ್ರಶ್ನೆಯೂ ಈಗ ಗಾಂಧಿನಗರದಲ್ಲಿ ಓಡಾಡುತ್ತಿದೆ. ಆರಂಭದಲ್ಲೆಲ್ಲೂ ಇನ್ನೊಬ್ಬ ಸ್ಟಾರ್ ನಟರು ಇಲ್ಲಿರುತ್ತಾರೆ ಎಂದು ಸುಳಿವು ಕೊಡದ ಆರ್.ಚಂದ್ರು, ಸುದೀಪ್‌ಗಾಗಿಯೇ ಹೊಸ ಪಾತ್ರ ಸೃಷ್ಠಿ ಮಾಡಿಬಿಟ್ಟರಾ ಎಂಬ ಮತ್ತೊಂದು ಪ್ರಶ್ನೆಯೂ ಗಿರಕಿಹೊಡೆಯುತ್ತಿದೆ. ಯಾಕೆಂದರೆ, ಇದ್ದಕ್ಕಿದ್ದಂತೆಯೇ ಸುದೀಪ್ ಎಂಟ್ರಿಯಾಗಿದ್ದೇ ಈ ಪ್ರಶ್ನೆಗಳಿಗೆ ಕಾರಣ.
ಇನ್ನು, ಸುದೀಪ್ ಬಂದರೆ, “ಕಬ್ಜ” ಇನ್ನಷ್ಟು ಚೆನ್ನಾಗಿರುತ್ತೆ ಅಂತ ಅನಿಸಿದ್ದರಿಂದಲೇ ಆರ್.ಚಂದ್ರು ಈ ನಿರ್ಧಾರ ಮಾಡಿದ್ದಾರೆ. ಅದು ತಪ್ಪಲ್ಲ. ಆದರೆ, ಉಪೇಂದ್ರ ಅವರ ಬಹುಭಾಗದ ಚಿತ್ರೀಕರಣ ಮುಗಿಸಿದ ನಂತರ, ಈಗ ಸುದೀಪ್ ಅವರನ್ನು ಈ ಹಂತದಲ್ಲಿ ಕರೆತಂದಿದ್ದರ ಹಿಂದೆ ಒಂದಷ್ಟು ಮಾತುಗಳು ಕೇಳಿಬರುತ್ತಿವೆ. ಉಪೇಂದ್ರ ಅವರೊಬ್ಬರೇ ಇದ್ದರೆ, “ಕಬ್ಜ” ಮಾರ್ಕೆಟ್ ಕಡಿಮೆಯಾಗಬಹುದು ಅಥವಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಇನ್ನೊಬ್ಬ ಸ್ಟಾರ್ ಬೇಕು ಎಂಬ ಕಾರಣಕ್ಕೆ ಸ್ವತಃ ಚಂದ್ರು ಹೀಗೊಂದು ನಿರ್ಧಾರ ಮಾಡಿ, ಸುದೀಪ್ ಅವರಿಗೊಂದು ಪಾತ್ರವನ್ನು ಕ್ರಿಯೇಟ್ ಮಾಡಿ ಕರೆತಂದಿದ್ದಾರಾ ಅನ್ನೋದು ಕೂಡ ಪ್ರಶ್ನೆಯಾಗಿಯೇ ಉಳಿದಿದೆ. ಮೂಲಗಳ ಪ್ರಕಾರ ಸುದೀಪ್ ಅವರ ಪಾತ್ರದ ಮೂಲಕವೇ “ಕಬ್ಜ” ಚಿತ್ರದ ಕಥೆ ಓಪನ್ ಆಗಲಿದೆಯಂತೆ. ಹೆಚ್ಚು ಕಡಿಮೆ ಅದು ಒಂದೆರೆಡು ದಿನಗಳ ಚಿತ್ರೀಕರಣದ ಅವಧಿ ಎನ್ನಲಾಗುತ್ತಿದೆ. ಆರಂಭದಲ್ಲಿ ಕತೆ ನಿರೂಪಣೆ ಮಾಡುವ ಪಾತ್ರವದು ಎಂಬುದು ಸುದ್ದಿ.
ಅದೇನೆ ಇದ್ದರೂ, ಆರ್.ಚಂದ್ರು ಅವರನ್ನು ಮೊದಲಿನಿಂದಲೂ ಸೂಕ್ಷ್ಮವಾಗಿ ಗಮನಿಸುತ್ತಾ ಬಂದರೆ, ಮೊದಲ ನಿರ್ದೇಶನದಿಂದ ಹಿಡಿದು, ಇಲ್ಲಿಯವರೆಗೆ ಮಾಡಿಕೊಂಡು ಬಂದ ಎಲ್ಲಾ ಚಿತ್ರಗಳ ಹಿಂದೆಯೂ ಒಂದೊಂದು ಕಥೆ ಇದೆ, ಅಲ್ಲಿ ಶ್ರಮವಿದೆ, ಜಯವಿದೆ. ಈಗಲು ಸಹ “ಕಬ್ಜ”ದಲ್ಲಿ ಅಂಥದ್ದೊಂದು ಕಥೆ ಇದೆ ಎಂಬ ಕಾರಣಕ್ಕೆ ಉಪೇಂದ್ರ ಅವರ ಜೊತೆ ಸುದೀಪ್ ಅವರನ್ನೂ ಕರೆತಂದು, ತಮ್ಮ ಎಂದಿನ ಫೇಮ್ ಕಾಪಾಡಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ ಚಂದ್ರು.
ಪ್ಯಾನ್ ಇಂಡಿಯಾ ಎಂಬ ಪ್ಯಾಷನ್ ಟಾಕ್
ಕನ್ನಡದಲ್ಲಿ “ಕೆಜಿಎಫ್” ಬಳಿಕ ಪ್ಯಾನ್ ಇಂಡಿಯಾ ಚಿತ್ರಗಳ ಹವಾ ಕೊಂಚ ಜಾಸ್ತಿಯೇ ಆಯ್ತು. ಈಗಂತೂ ಯಾವುದೇ ಸ್ಟಾರ್ ಸಿನಿಮಾ ಮಾಡಿದರೂ, ಅದು ಪ್ಯಾನ್ ಇಂಡಿಯಾ ಚಿತ್ರವಾಗುತ್ತಿದೆ. ಎಲ್ಲರೂ ನಮ್ಮದೂ ಪ್ಯಾನ್ ಇಂಡಿಯಾ ಚಿತ್ರ ಅಂತಾನೇ ಹೇಳಿಕೊಳ್ಳುತ್ತಿದ್ದಾರೆ. “ಕಬ್ಜʼ ಕೂಡ ಪ್ಯಾನ್ ಇಂಡಿಯಾ ಚಿತ್ರವೇ. ಯಾವುದೇ ಒಂದು ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ತಯಾರಾದರೆ, ಅದು ಪ್ಯಾನ್ ಇಂಡಿಯಾ ಸಿನಿಮಾನೇ ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಒಂದು ರೀತಿ ಹೇಳಿಕೊಳ್ಳೋರಿಗೆ “ಪ್ಯಾನ್ ಇಂಡಿಯಾ ಸಿನಿಮಾ” ಅನ್ನುವುದು ಪ್ಯಾಷನ್ ಆಗಿಬಿಟ್ಟಿದೆ.
“ಕಬ್ಜ” ಕೂಡ ಪ್ಯಾನ್ ಇಂಡಿಯಾ ಸಿನಿಮಾನೇ. ಇದಕ್ಕೂ ಮೊದಲೇ ಉಪೇಂದ್ರ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡು ಪ್ಯಾನ್ ಇಂಡಿಯಾ ಸಿನಿಮಾ ಹೀರೋ ಆಗಿದ್ದವರು. ಅದೇನೆ ಇರಲಿ, ನಿರ್ದೇಶಕ ಆರ್.ಚಂದ್ರು ಈಗ “ಕಬ್ಜʼ ಜಪ ಮಾಡುತ್ತಿದ್ದಾರೆ. ಅದರಲ್ಲೂ “ಕೆಜಿಎಫ್” ಲೆವೆಲ್‌ನಲ್ಲೇ ಈ ಸಿನಿಮಾ ಮಾಡಬೇಕು ಎನ್ನುವುದಕ್ಕಿಂತ, ತಮ್ಮ ಚಿತ್ರ ಸುದ್ದಿಯಾಗಬೇಕು ಎಂಬ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕನ್ನಡದಲ್ಲಿ “ಕೆಜಿಎಫ್” ಆಗದೇ ಹೋಗಿದ್ದರೆ, ಬೇರೆ ಚಿತ್ರಗಳ ಹೆಸರು ಹೇಳುವ ಮೂಲಕ ತಮ್ಮ ಸಿನಿಮಾ ಆ ಸಿನಿಮಾ ರೇಂಜ್‌ನಲ್ಲಿ ಮಾಡುವ ಬಗ್ಗೆಯೇ ಒಂದಷ್ಟು ಹೇಳಿಕೊಳ್ಳುತ್ತಿದ್ದರೇನೋ? ಒಂದು ಖುಷಿಯ ವಿಷಯವೆಂದರೆ, ಕನ್ನಡ ಚಿತ್ರರಂಗ ಈಗ ಗರಿಗೆದರಿದೆ. ಹೀಗಾಗಿ, ಎಲ್ಲರೂ ತಮ್ಮ ಸಿನಿಮಾಗಳನ್ನು ಬೇರೆ ಲೆವೆಲ್‌ಗೆ ಕೊಂಡೊಯ್ಯಬೇಕು ಎಂಬ ಹಠದಲ್ಲೇ ಕೆಲಸ ಮಾಡುತ್ತಿದ್ದಾರೆ. ಚಂದ್ರು ಕೂಡ “ಕಬ್ಜ” ಚಿತ್ರವನ್ನು ದೊಡ್ಡ ಮಟ್ಟದಲ್ಲೇ ತಯಾರಿಸಿ, ಜೋರು ಸದ್ದಿನೊಂದಿಗೆ ಬರುವ ಯೋಚನೆಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದು, “ಕಬ್ಜ” ಹೊರಬಂದಾಗಷ್ಟೇ, ಅದರೊಳಗಿನ ವಿಶೇಷತೆಗಳು ನೋಡುಗರಿಗೆ ಗೊತ್ತಾಗುತ್ತವೆ. ಅಲ್ಲಿಯವರೆಗೆ ಕಾಯಲೇಬೇಕು.
ಅಭಿಮಾನಿ ಪ್ರಶ್ನೆಗೆ ಕನ್ನಡ ಮೂಲದ ರೂಪದರ್ಶಿ, ನಟಿಯ ಖಡಕ್ ಉತ್ತರ
ಕನ್ನಡ ಮೂಲದ ರೂಪದರ್ಶಿ, ನಟಿ ಸನಂ ಶೆಟ್ಟಿ ಕಾಲಿವುಡ್‌ನಲ್ಲಿ ಹೆಚ್ಚು ಪರಿಚಿತರು. ‘ಅಥರ್ವ’ ಕನ್ನಡ ಸಿನಿಮಾ ಸೇರಿದಂತೆ ತಮಿಳು, ತೆಲುಗು, ಮಲಯಾಳಂನ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ‘ಮಿಸ್ ಸೌತ್ ಇಂಡಿಯಾ’ (2016) ಪ್ರಶಸ್ತಿ ವಿಜೇತೆಯಾದ ಸನಂ ಬೆಳ್ಳಿತೆರೆಗೆ ಪರಿಚಯವಾಗಿದ್ದು ‘ಅಂಬುಲಿ’ ತಮಿಳು ಚಿತ್ರದೊಂದಿಗೆ. ನಟ ಕಮಲ್ ಹಾಸನ್ ನಿರೂಪಿಸಿದ ‘ಬಿಗ್‌ಬಾಸ್ 4’ ರಿಯಾಲಿಟಿ ಶೋ ಸ್ಪರ್ಧಿಯಾಗಿ ಅವರು ಜನರಿಗೆ ಹೆಚ್ಚು ಹತ್ತಿರವಾದರು. ನೇರ ಮಾತಿನ ಸನಂ ಕೋಪತಾಪಗಳನ್ನು ಪ್ರದರ್ಶಿಸಿದರೂ ಬಲಿಷ್ಠ ಸ್ಪರ್ಧಿಯಾಗಿದ್ದ ಅವರು 63ನೇ ದಿನ ಬಿಗ್‌ಬಾಸ್ ಮನೆಯಿಂದ ಹೊರ ಬಿದ್ದಿದ್ದರು.
ಬಿಗ್‌ಬಾಸ್‌ನಿಂದ ಹೊರಬಂದ ಅವರಿಗೆ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಅಲ್ಲಿ ಅಭಿಮಾನಿಗಳು ನಟಿಯ ಮದುವೆ ಬಗ್ಗೆ ಪ್ರಶ್ನಿಸಿದ್ದಾರೆ. “ನೀವು ಬೈತಲೆಯಲ್ಲಿ ಸಿಂಧೂರ ಇಡುತ್ತೀರಿ. ನೀವು ಮದುವೆ ಆಗದ್ದೀರಾ?” ಎನ್ನುವ ಪ್ರಶ್ನೆಗಳಿಗೆ ನಟಿ ಕೋಪ ಮಾಡಿಕೊಳ್ಳುತ್ತಾರೆ. “ಮದುವೆಯಾದ ಮಹಿಳೆಯರಷ್ಟೇ ಸಿಂಧೂರ ಇಡಬೇಕೆನ್ನುವ ನಿಯಮವೇನೂ ಇಲ್ಲ. ನನಗಿನ್ನೂ ಮದುವೆಯಾಗಿಲ್ಲ. ಹಾಗೇನಾದರೂ ಇದ್ದರೆ ನಿಮಗೆ ತಿಳಿಸಿಯೇ ಮದ್ವೆ ಆಗುತ್ತೇನೆ” ಎಂದು ಉತ್ತರ ಕೊಟ್ಟಿದ್ದಾರೆ ಸನಂ. ‘ಬಿಗ್‌ಬಾಸ್ 3’ ಸ್ಪರ್ಧಿ ರರ್ಶನ್ ತ್ಯಾಗರಾಜ್ ಅವರೊಂದಿಗೆ ಸನಂ ನಿಶ್ಚಿತಾರ್ಥ ನೆರವೇರಿತ್ತು. ಇನ್ನೇನು ಇಬ್ಬರು ಮದುವೆಯಾಗುತ್ತಾರೆ ಎನ್ನುವ ವೇಳೆಗೆ ಸಂಬಂಧ ಮುರಿದುಬಿದ್ದಿತು. ಇದೇ ಕಾರಣಕ್ಕೆ ಅವರ ಮದುವೆ ಕುರಿತಂತೆ ಊಹಾಪೋಹಗಳು ಹರಡುತ್ತಿರುವುದು ಎನ್ನಲಾಗಿದೆ.
ಕಾರ್ತಿ ನಟನೆಯ ಬಹುನಿರೀಕ್ಷಿತ ತಮಿಳು ಸಿನಿಮಾ ‘ಸುಲ್ತಾನ್’ ಟೀಸರ್ ಬಿಡುಗಡೆಯಾಗಿದೆ. ಇಲ್ಲಿ ಮಹಾಭಾರತದಲ್ಲಿನ ಪಾಂಡವರು ಹಾಗೂ ಕೌರವರ ಕುರಿತಂತೆ ಶ್ರೀಕೃಷ್ಣನ ಮಾತುಗಳು ಹಿನ್ನೆಲೆಯಲ್ಲಿ ಕೇಳಿಸುತ್ತವೆ. ಕೃಷ್ಣನು ಕೌರವರನ್ನು ಬೆಂಬಲಿಸಿದಂತೆ ಮಾತುಗಳಿರುವುದು ವಿಶೇಷ. ಕ್ರಿಮಿನಲ್‌ಗಳ ನೆಲಕ್ಕೆ ಎಂಟ್ರಿ ಕೊಡುವ ಹೀರೋ ದುಷ್ಟರನ್ನು ಸಂಹರಿಸುವ ಎಂದಿನ ಕತೆಯ ಎಳೆ ಕಾಣಿಸುತ್ತವೆ.
ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಕಾಲಿವುಡ್ ಹಾಸ್ಯನಟ ಯೋಗಿಬಾಬು, ಮಾಲಿವುಡ್ ನಟರಾದ ಲಾಲ್ ಮತ್ತು ಹರೀಶ್ ಪೆರಾಡಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ರೆಮೋ’ ಸಿನಿಮಾ ಖ್ಯಾತಿಯ ಭಾಗ್ಯರಾಜ್ ಕಣ್ಣನ್ ‘ಸುಲ್ತಾನ್’ ನಿರ್ದೇಶನ ಮಾಡಿರುವುದು ವಿಶೇಷ. ಸದ್ಯ ದಕ್ಷಿಣ ಭಾರತದ ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ, ಇಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ತಮಿಳಿನಲ್ಲಿ ಇದು ಅವರ ಮೊದಲ ಸಿನಿಮಾ. ಹೀರೋ ಕಾರ್ತಿ ಸದ್ಯ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಮರರ್ ಕಲ್ಕಿ ಅವರ ಅದೇ ಶೀರ್ಷಿಕೆಯ ತಮಿಳು ಕೃತಿಯನ್ನು ಆಧರಿಸಿ ತಯಾರಾಗುತ್ತಿರುವ ಚಿತ್ರವಿದು. ಕೊರೋನಾ ಲಾಕ್‌ಡೌನ್‌ಗಿಂತ ಮುಂಚೆ ಈ ಚಿತ್ರದ ಕೆಲವು ಸನ್ನಿವೇಶಗಳನ್ನು ಚಿತ್ರಿಸಲಾಗಿತ್ತು. ಇದೀಗ ಮತ್ತೆ ಚಿತ್ರೀಕರಣ ಶುರುವಾಗಿದೆ.
ದಕ್ಷಿಣ ಭಾರತದ ಜನಪ್ರಿಯ ನಟಿ ಕಾಜಲ್ ಅಗರ್‌ವಾಲ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿದ್ದರು. ಆಗಿನಿಂದ ಅವರು ಆಗಾಗ ಪತಿಯೊಂದಿಗಿನ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ಗೆ ಹಾಕುತ್ತಲೇ ಸುದ್ದಿಯಾಗುತ್ತಿದ್ದರು. ಇದೀಗ ಅವರು ತಮ್ಮ ವಿವಾಹ ಆರತಕ್ಷತೆಯ ಫೋಟೋವೊಂದನ್ನು ಹಾಕಿದ್ದಾರೆ.
ತಮ್ಮ ಮದುವೆ ಸಮಾರಂಭದ ಬಗ್ಗೆ ಕಾಜಲ್ ಮೊನ್ನೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, “ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಸೊಗಸಾದ ಊಟ ಮತ್ತು ಸಂಗೀತದೊಂದಿಗೆ ಮದುವೆ ಸಮಾರಂಭವನ್ನು ಸಖತ್ ಎಂಜಾಯ್ ಮಾಡಿದೆವು” ಎಂದಿದ್ದರು. ಕಾಜಲ್ ಮತ್ತು ಗೌತಮ್ ಅವರದ್ದು ಒಂಬತ್ತು ವರ್ಷಗಳ ಪರಿಚಯ. ಕಳೆದ ಮೂರು ವರ್ಷಗಳಿಂದ ಡೇಟಿಂಗ್ ನಡೆಸಿದ್ದ ಜೋಡಿ ಅಕ್ಟೋಬರ್‌ನಲ್ಲಿ ದಾಂಪತ್ಯ ಬದುಕಿಗೆ ಅಡಿಯಿರಿಸಿದ್ದರು. “ಸ್ನೇಹಿತೆಯೊಬ್ಬರ ಮದುವೆ ಸಮಾರಂಭದಲ್ಲಿ ನನಗೆ ಗೌತಮ್ ಪರಿಚಿತರಾಗಿದ್ದರು.
ಸ್ನೇಹಿತರಾಗಿದ್ದ ನಾವು ಕ್ರಮೇಣ ಪ್ರೇಮಿಗಳಾಗಿ ಈಗ ದಂಪತಿಯಾಗಿದ್ದೇವೆ” ಎನ್ನುವುದು ಅವರ ಮಾತು. ಸದ್ಯ ಶಂಕರ್ ನಿರ್ದೇಶನದ ‘ಇಂಡಿಯನ್ 2’ ತಮಿಳು ಚಿತ್ರದಲ್ಲಿ ಕಮಲ ಹಾಸನ್ ಜೋಡಿಯಾಗಿ ಕಾಜಲ್ ನಟಿಸುತ್ತಿದ್ದಾರೆ. ವೆಂಕಟ್ ಪ್ರಭು ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಲೈವ್ ಟೆಲಿಕಾಸ್ಟ್’ನೊಂದಿಗೆ ಅವರು ಮೊದಲ ಬಾರಿ ವೆಬ್ ಸರಣಿಯಲ್ಲಿ ಅಭಿನಯಿಸುತ್ತಿರುವುದು ವಿಶೇಷ.
ತೆಲುಗು ಚಿತ್ರರಂಗದಲ್ಲಿ ಬ್ರಹ್ಮಾನಂದಂ ಹೆಸರು ಕೇಳಿದವರಿಗೆ ಹಾಗೊಂದು ಜೋರು ನಗು ಬರದೇ ಇರದು. ಅಷ್ಟರಮಟ್ಟಿಗೆ ಸಿನಿರಸಿಕರವನ್ನು ನಕ್ಕು ನಲಿಸಿರುವ ಖ್ಯಾತಿ ಈ ಬ್ರಹ್ಮಾನಂದಂ ಅವರಿಗಿದೆ. ಈಗ ಬ್ರಹ್ಮಾನಂದಂ ಅವರ ಕುರಿತು ಇಷ್ಟೊಂದು ಪೀಠಿಕೆ ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಬ್ರಹ್ಮಾನಂದ್ ಈಗ 65ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ತೆಲುಗು ಚಿತ್ರರಂಗದ ಜನಪ್ರಿಯ ತಾರೆಯರೆಲ್ಲರೂ ಶುಭ ಹಾರೈಸಿದ್ದಾರೆ. ತೆಲುಗು, ತಮಿಳು, ಕನ್ನಡ, ಹಿಂದಿ ಸೇರಿದಂತೆ 1200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಬ್ರಹ್ಮಾನಂದಂ ಅವರಿಗಿದೆ.
ಪದ್ಮಶ್ರೀ ಪುರಸ್ಕೃತ ನಟ “ಆಹಾ ನಾ ಪೆಳ್ಳಂಟ” (1986) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಇವರು, ನಟರಾಗುವ ಮುನ್ನ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಪದ್ಮಶ್ರೀ ಪುರಸ್ಕೃತ ನಟನಿಗೆ ಈವರೆಗೆ ಹತ್ತಾರು ಗೌರವಗಳು ಸಂದಿವೆ.
ತಮ್ಮೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿರುವ ಬ್ರಹ್ಮಾನಂದಂ ಅವರಿಗೆ ತೆಲುಗು ತಾರೆಯರು ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ. ನಟ ರಾಮ್‌ಚರಣ್ ತೇಜಾ, “ಕಾಮಿಡಿ ಕಿಂಗ್ ಬ್ರಹ್ಮಾನಂದಂ ಅಂಕಲ್‌ಗೆ ಶುಭಾಶಯ” ಎಂದು ಹಾರೈಸಿದ್ದಾರೆ. ನಟ ವರುಣ್ ತೇಜ್ ಅವರು ಬ್ರಹ್ಮಾನಂದ ಜೊತೆಗಿನ ತಮ್ಮ ಫೋಟೋ ಹಾಕಿ ಶುಭ ಕೋರಿದ್ದಾರೆ.
ನಟರಾದ ರವಿ ತೇಜಾ, ಅಲ್ಲು ಅರ್ಜುನ್, ನಿರ್ದೇಶಕರಾದ ಸುರೇಂದರ್ ರೆಡ್ಡಿ, ಬಾಬ್ಬಿ, ಗೋಪಿಚಂದ್ ಮಾಲಿನೇನಿ, ವೆನ್ನಲ ಕಿಶೋರ್, ಹರೀಶ್ ಶಂಕರ್, ನಟ ಸಾಯಿ ಧರ್ಮ್ ತೇಜ್, ಚಿತ್ರಸಾಹಿತಿ ಕೋನಾ ವೆಂಕಟ್ ಸೇರಿದಂತೆ ಚಿತ್ರರಂಗದ ಹಲವರು ಹಿರಿಯ ಹಾಸ್ಯನಟನಿಗೆ ಶುಭ ಕೋರಿದ್ದಾರೆ.
ಬಿಡುಗಡೆ ದಿನ ಘೋಷಿಸಿ ವೀಡಿಯೋ, ಪೋಸ್ಟರ್ ಟ್ವೀಟ್ ಮಾಡಿದ ನಟ
ಅಭಿಮಾನಿಗಳು ಫುಲ್ ಖುಷ್
“ಪೆರಿಯೇರುಮ್ ಪೆರುಮಾಳ್” ಸಿನಿಮಾ ಖ್ಯಾತಿಯ ಮಾರಿ ಸೆಲ್ವರಾಜ್ ನಿರ್ದೇಶನದಲ್ಲಿ ಧನುಷ್ ನಟಿಸಿರುವ “ಕರ್ಣನ್” ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಏಪ್ರಿಲ್‌ನಲ್ಲಿ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರ ಓಟಿಟಿಯಲ್ಲಿ ತೆರೆಕಾಣಲಿದೆ ಎನ್ನುವ ಸುದ್ದಿ ಜೋರಾಗಿಯೇ ಓಡಾಡುತ್ತಿತ್ತು. ಸಹಜವಾಗಿಯೇ ಈ ಸುದ್ದಿಯಿಂದ ವಿತರಕರು ಹಾಗೂ ಪ್ರದರ್ಶಕರು ಆತಂಕಗೊಂಡಿದ್ದರು. ಇದೀಗ ಸಿನಿಮಾ ಥಿಯೇಟರ್‌ಗಳಲ್ಲಿ ತೆರೆಕಾಣುವುದು ಖಚಿತವಾಗಿದ್ದು, ನಟ ಧನುಷ್ ಈ ಬೆವಳವಣಿಗೆ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರಿಗೆ ಧನ್ಯವಾದ ಅರ್ಪಿಸಿದ್ದಾರೆ.
“ಕರ್ಣನ್ ಏಪ್ರಿಲ್‌ನಲ್ಲಿ ಥಿಯೇಟರ್‌ಗೆ ಬರಲಿದೆ. ಕೊರೊನಾ ಸಂಕಷ್ಟದಲ್ಲಿರುವ ಉದ್ಯಮಕ್ಕೆ ಇದು ಒಳ್ಳೆಯ ಸುದ್ದಿ. ನಮ್ಮ ನಿರ್ಮಾಪಕರು ಉದ್ಯಮದ ವಿತರಕರು, ಪ್ರದರ್ಶಕರು ಹಾಗೂ ಚಿತ್ರರಂಗವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಾಗಿ ಅವರಿಗೆ ನನ್ನ ಮತ್ತು ಅಭಿಮಾನಿಗಳೆಲ್ಲರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ” ಎಂದು ಧನುಷ್ ಟ್ವೀಟ್ ಮಾಡಿದ್ದಾರೆ.
ಚಿತ್ರದಲ್ಲಿ ಧನುಷ್‌ಗೆ ನಾಯಕಿಯಾಗಿ ರಜಿಶಾ ವಿಜಯನ್ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾಗಿರುವ ಚಿತ್ರದ ಹೊಸ ಪೋಸ್ಟರ್‌ನಲ್ಲಿ ಬೆಟ್ಟದ ತುದಿಯಲ್ಲಿ ಕತ್ತಿಯನ್ನು ಹಿಡಿದು ನಿಂತಿರುವ ಧನುಷ್ ಕಾಣಿಸುತ್ತಿದ್ದಾರೆ. ಕೆಳಗೆ ದೊಡ್ಡ ಸಂಖ್ಯೆಯ ಜನರು ಅವರೆಡೆ ನೋಡುತ್ತಿರುವಂತಿದೆ. ಸಿನಿಮಾ ಬಿಡುಗಡೆ ಸುದ್ದಿಯನ್ನು ಹೇಳುವ ಆಕರ್ಷಕ ಬ್ಲಾಕ್ ಅಂಡ್ ವೈಟ್ ವೀಡಿಯೋ ಕೂಡ ಇದೆ! ಈ ವೀಡಿಯೋ ಗಮನಿಸಿದಾಗ ಇದೊಂದು ಪೀರಿಯಡ್ ಡ್ರಾಮಾ ಇರಬಹುದೆಂದು ಊಹಿಸಬಹುದು.
“ನಾನು ಕೇಳಿದ ಕಾಲ್ಪನಿಕ ಕಥೆಯೊಂದನ್ನು ಸಿನಿಮಾ ಮಾಡಿದ್ದೇನೆ. ಹಾಗೆ ನೋಡಿದರೆ ‘ಕರ್ಣನ್’ ನನ್ನ ನಿರ್ದೇಶನದ ಮೊದಲ ಚಿತ್ರವಾಗಬೇಕಿತ್ತು. ಹಿರಿಯರ ಸಲಹೆ ಮೇರೆಗೆ ಮೊದಲು ‘ಪೆರಿಯೇರುಮ್ ಪೆರುಮಾಳ್’ ಸಿನಿಮಾ ಮಾಡಿದೆ. ಆ ಚಿತ್ರ ನೋಡಿದ ನಂತರ ನಟ ಧನುಷ್ ತಾವಾಗಿಯೇ ಕರೆ ಮಾಡಿದ್ದರು. ಅಲ್ಲಿಂದ ಮುಂದೆ ‘ಕರ್ಣನ್’ಗೆ ಚಾಲನೆ ಸಿಕ್ಕಿತು” ಎನ್ನುತ್ತಾರೆ ನಿರ್ದೇಶಕ ಮಾರಿ ಸೆಲ್ವರಾಜ್. ಅದೇನೆ ಇರಲಿ, ಧನುಷ್ ಫ್ಯಾನ್ಸ್ ಈಗ ಭರ್ಜರಿ ಖುಷಿಯಲ್ಲಿರುವುದಂತೂ ದಿಟ.
ದಿನ ಕಳೆದಂತೆ ಕನ್ನಡಕ್ಕೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಅಥಿರಾ ಎಂಬ ನವನಟಿ ಕೂಡ ಸೇರಿದ್ದಾರೆ. ಹೌದು, ಅಥಿರಾ ಈಗಷ್ಟೇ ಕನ್ನಡ ಚಿತ್ರರಂಗದ ಬಾಗಿಲ ಬಳಿ ಬಂದು ನಿಂತಿದ್ದಾರೆ. ಇದಕ್ಕೂ ಮುನ್ನ, ಮಲಯಾಳಂ ಚಿತ್ರರಂಗದಲ್ಲಿ ಕಾಲಿಟ್ಟು, ಸೈ ಎನಿಸಿಕೊಂಡಿದ್ದಾರೆ. ಅಂದಹಾಗೆ, ಅಥಿರಾ “ಹಾಫ್” ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ್ದಾರೆ. ಹೌದು, ಅಥಿರಾ ಈಗಷ್ಟೇ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾರಂಗಕ್ಕೆ ಬಂದಿರುವ ಅಥಿರಾ ತಮ್ಮ ಸಿನಿಜರ್ನಿ ಕುರಿತು “ಸಿನಿಲಹರಿ” ಜೊತೆ ಹಂಚಿಕೊಂಡಿದ್ದಾರೆ.
ಓವರ್ ಟು ಅಥಿರಾ
ನಾನು ಈಗಷ್ಟೇ ಕಾಲೇಜು ಓದುತ್ತಿದ್ದೇನೆ. ಸಿನಿಮಾ ನನ್ನ ಪ್ಯಾಷನ್. ಇಲ್ಲಿ ಒಳ್ಳೆಯ ಕಥೆ, ಪಾತ್ರಗಳ ಮೂಲಕ ಕಾಣಿಸಿಕೊಂಡು ಭದ್ರ ನೆಲೆಕಂಡುಕೊಳ್ಳು ಆಸೆ ನನ್ನದು. ಹಾಗಾಗಿಯೇ, ನಾನು ಸಿನಿಮಾರಂಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸದ್ಯಕ್ಕೆ ನಾನು ನಟನೆ ಕೋರ್ಸ್ ಅನ್ನುವುದೇನೂ ಮಾಡಿಲ್ಲ. ಆಡಿಷನ್ ಮೂಲಕ ಆಯ್ಕೆಯಾಗಿದ್ದು, ಈಗಾಗಲೇ ಮಲಯಾಳಂ ಭಾಷೆಯ “ಲಾಲ್ ಜೋಸ್” ಸಿನಿಮಾದಲ್ಲಿ ನಟಿಸಿದ್ದೇನೆ. ಈಗ ಕನ್ನಡ ಸಿನಿಮಾಗೂ ಆಯ್ಕೆಯಾಗಿ ನಟಿಸಿದ್ದೇನೆ.
“ಹಾಫ್” ನನ್ನ ಮೊದಲ ಕನ್ನಡ ಚಿತ್ರ. ಒಳ್ಳೆಯ ಕಥೆ, ಪಾತ್ರ ಇದ್ದುದರಿಂದ ನಾನು ಆ ಚಿತ್ರ ಮಾಡಲು ಒಪ್ಪಿದ್ದೇನೆ. ಸದ್ಯಕ್ಕೆ ಇನ್ನೂ ಎರಡು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ನನ್ನ ಬಗ್ಗೆ ಹೇಳುವುದಾದರೆ, ಕಳೆದ ಒಂಭತ್ತು ವರ್ಷಗಳಿಂದ ಕಥಕ್ ಮತ್ತು ಭರತನಾಟ್ಯ ಅಭ್ಯಾಸ ಮಾಡಿದ್ದೇನೆ. ನಟನೆ ಬಗ್ಗೆ ಪ್ಯಾಷನ್ ಇತ್ತು. ಹಾಗಾಗಿ ಒಳ್ಳೆಯ ಅವಕಾಶ ಎದುರು ನೋಡುತ್ತಿದ್ದೆ. “ಹಾಫ್” ಒಳ್ಳೆಯ ಅವಕಾಶ ಒದಗಿಸಿಕೊಟ್ಟಿದೆ. ಇನ್ನು, ಇಲ್ಲಿ ನನಗೆ ಎಲ್ಲಾ ರೀತಿಯ ಪಾತ್ರ ಮಾಡಲು ಇಷ್ಟ. ಇನ್ನು, ನನಗೆ ಯಶ್ ಹಾಗೂ ರಾಧಿಕಾ ಪಂಡಿತ್ ರೋಲ್ ಮಾಡೆಲ್. ನನಗೆ ಕಮರ್ಷಿಯಲ್ ಮತ್ತು ಕಲಾತ್ಮಕ ಸಿನಿಮಾಗಳು ಎಂಬುದಿಲ್ಲ. ಯಾವುದೇ ಸಿನಿಮಾ ಇದ್ದರೂ, ಒಳ್ಳೆಯ ಕಥೆ ಮತ್ತು ಪಾತ್ರ ಇದ್ದರೆ, ಖಂಡಿತ ಒಪ್ಪಿಕೊಂಡು ಕೆಲಸ ಮಾಡುತ್ತೇನೆ. ಒಟ್ಟಲ್ಲಿ ಆ ಪಾತ್ರ ಜನರಿಗೆ ತಲುವಂತಿರಬೇಕಷ್ಟೇ ಎಂಬುದು ಅಥಿರಾ ಮಾತು.
ಗ್ಲಾಮರಸ್‌ಗೆ ತಕರಾರಿಲ್ಲ…
ಇನ್ನು, “ಹಾಫ್” ಚಿತ್ರದ ಬಗ್ಗೆ ಹೇಳುವುದಾದರೆ, ಚಿತ್ರದಲ್ಲಿ ಒಂದೊಳ್ಳೆಯ ಪಾತ್ರವೇ ಸಿಕ್ಕಿದೆ. ಅದೊಂದು ರೀತಿ ನನಗೆ ಹೊಸ ರೀತಿಯ ಪಾತ್ರ. ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿಯುವ ಹಂತ ತಲುಪಿದೆ. ಸಾಂಗ್ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಎಂದು ಹೇಳಿಕೊಳ್ಳುವ ಅಥಿರಾ, ನನಗೆ ಎಲ್ಲಾ ಭಾಷೆಯ ಸಮಸ್ಯೆ ಇಲ್ಲ. ಮಲಯಾಳಂ, ಕನ್ನಡ, ತೆಲುಗು ಭಾಷೆ ಬರುತ್ತೆ. ಯಾಕೆಂದರೆ, ನಾನು ಇಲ್ಲಿಯವಳಾಗಿದ್ದರೂ, ಮೂಲತಃ ಕೇರಳದವಳು.
ಅಪ್ಪ ಅರುಣ್ ಕನ್ನಡದವರು. ಅಮ್ಮ ಶ್ರೀಜಾ ಕೇರಳದವರು. ಹಾಗಾಗಿ ಎರಡೂ ಭಾಷೆ ನನಗೆ ಸುಲಲಿತ. “ಹಾಫ್” ಬಗ್ಗೆ ಹೇಳುವುದಾದರೆ, ಈ ಚಿತ್ರ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ. ನಿರ್ದೇಶಕ ಲೋಕೇಂದ್ರ ಸೂರ್ಯ ಪ್ರತಿ ಸೀನ್ ಮುನ್ನ ತಾವೇ ನಟಿಸಿ ತೋರಿಸುತ್ತಿದ್ದರು. ಒಂದೊಳ್ಳೆಯ ಚಿತ್ರ ಮಾಡಿದ ಹೆಮ್ಮೆ ನನಗಿದೆ. ಮುಂದೆ ಯಾವುದೇ ಸಿನಿಮಾಗಳಿರಲಿ, ಕಥೆ ಹಾಗೂ ಪಾತ್ರಕ್ಕೆ ಅಗತ್ಯವಿದ್ದರೆ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಯಾವ ತಕರಾರೂ ಇಲ್ಲ ಎಂಬುದು ಅಥಿರಾ ಮಾತು.
ಮೊದಲ ಪೋಸ್ಟರ್ ರಿಲೀಸ್
ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸಿರುವ “ಹಾಫ್” ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ. “ಹಾಫ್” ಚಿತ್ರಕ್ಕೆ ಆಡಿಷನ್ ಮೂಲಕ ಸೆಲೆಕ್ಟ್ ಆದ ಅಥಿರಾ ನಟನೆ ಬಗ್ಗೆ ನಿರ್ದೇಶಕ ಲೋಕೇಂದ್ರ ಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻʻನಮ್ಮ ಸಿನಿಮಾಗೆ ಸ್ಕೂಲ್ ಸ್ಟೂಡೆಂಟ್ ಕ್ಯಾರೆಕ್ಟರಿನ ನಾಯಕನಟಿ ಬೇಕಿತ್ತು. ಆಡಷನ್‌ನಲ್ಲಿ ಅಥಿರಾ ಭಾವಾಭಿವ್ಯಕ್ತಿ ನೋಡಿ ಸೆಲೆಕ್ಟ್ ಮಾಡಿಕೊಂಡೆ.
ಸದ್ಯ ಅಥಿರಾ ಅವರ ಭಾವಚಿತ್ರ ಇರುವ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. “ವರ್ಲ್ಡ್ ಬುಕ್ ಆಫ್ ರೆಕಾರ್ಡ್”ನಲ್ಲಿ ʻರೆಡ್ ಅಂಡ್ ವೈಟ್ ಮ್ಯಾನ್ʼ ಎಂದು ಕರೆಸಿಕೊಳ್ಳುವ ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಅಡಿಯಲ್ಲಿ ಡಾ. ಪವಿತ್ರ ಆರ್. ಪ್ರಭಾಕರ್ ರೆಡ್ಡಿ ನಿರ್ಮಾಣವಿದೆ. ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕರಾಗಿಯೂ ಅಭಿನಯಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಬಿ.ಆರ್. ಛಾಯಾಗ್ರಹಣವಿದೆ. ಯುಡಿವಿ ವೆಂಕಿ ಸಂಕಲನ ಮಾಡಿದರೆ, ರಾಕಿ ಸೋನು ಸಂಗೀತವಿದೆ. ಥ್ರಿಲ್ಲರ್ ಮಂಜು ಸಾಹಸವಿದೆ.
ಖ್ಯಾತ ತಮಿಳು ನಿರ್ದೇಶಕ ಕೆ.ಶಂಕರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು, ‘ಎಂಧಿರನ್’ ಚಿತ್ರದ ಕಥೆ ಕದ್ದ ದೂರಿಗೆ ಸಂಬಂಧಿಸಿದಂತೆ, ಎಗ್ಮೋರ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್ ಅವರಿಗೆ ಜಾಮೀನು ರಹಿತ ವಾರೆಂಟ್ ನೀಡಿದೆ. ಶಂಕರ್ ನಿರ್ದೇಶನದಲ್ಲಿ ಸೂಪರ್‌ಸ್ಟಾರ್ ರಜನೀಕಾಂತ್ ನಟಿಸಿದ್ದ ‘ಎಂಧಿರನ್’ (2010) ಸೈಂಟಿಫಿಕ್ ಫಿಕ್ಷನ್ ಸಿನಿಮಾ ಭಾರತದಾದ್ಯಂತ ದೊಡ್ಡ ಯಶಸ್ಸು ಕಂಡಿತ್ತು.
ರಜನೀಕಾಂತ್ ಮತ್ತು ಐಶ್ವರ್ಯಾ ರೈ ಜೋಡಿಯ ಸಿನಿಮಾ ಗ್ರಾಫಿಕ್ಸ್ ಪರಿಣತಿ ಮತ್ತು ಆಕರ್ಷಕ ಮೇಕಿಂಗ್‌ನಿಂದಾಗಿ ಸಾಗರದಾಚೆಯೂ ಗಮನಸೆಳೆದಿದ್ದ ಪ್ರಯೋಗ. ಈ ಯಶಸ್ಸಿನ ಹಿಂದೆಯೇ ಕಥೆಗಾರ ಅರೂರ್ ತಮಿಳ್‌ನಾಡನ್ ಎನ್ನುವವರೊಬ್ಬರು ಚಿತ್ರತಂಡದ ವಿರುದ್ಧ ದೂರು ಸಲ್ಲಿಸಿದ್ದರು. 1996ರಲ್ಲಿ ತಾವು ಬರೆದ ‘ಜಿಗೂಬಾ’ ಕತೆಯ ಎಳೆಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ ಎಂದು ಆತ ಕಾನೂನಿನ ಮೊರೆ ಹೋಗಿದ್ದರು.
ಕಳೆದೊಂದು ದಶಕದಿಂದ ಈ ಕೇಸು ನಡೆದಿತ್ತು. ಕಳೆದ ವರ್ಷ ನಿರ್ದೇಶಕ ಶಂಕರ್ ಪರ ವಕೀಲರು ಕಥೆ ಕದ್ದ ಕೇಸನ್ನು ವಜಾ ಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಪಿಟಿಷನ್ ಹಾಕಿದ್ದರು. ಆದರೆ ಕೋರ್ಟ್ ಮನವಿಯನ್ನು ಪುರಸ್ಕರಿಸದೆ ಕೇಸು ಮುಂದುವರೆಸಲು ಸೂಚಿಸಿತ್ತು. ಶಂಕರ್ ಪರ ವಕೀಲರು ನಿರಂತರವಾಗಿ ಹಿಯರಿಂಗ್‌ಗೆ ಹಾಜರಾಗದ ಕಾರಣ, ಇದೀಗ ಜಾಮೀನು ರಹಿತ ವಾರೆಂಟ್ ನೀಡಿದೆ. ದೂರು ದಾಖಲಿಸಿರುವುದಲ್ಲದೆ ಕಥೆಗಾರ ಅರೂರ್ ತಮಿಳ್‌ನಾಡನ್ ಅವರು ಚಿತ್ರದ ನಿರ್ದೇಶಕರು, ನಿರ್ಮಾಪಕರಿಂದ 1 ಕೋಟಿ ರೂಪಾಯಿ ಪರಿಹಾರ ಮೊತ್ತವನ್ನೂ ಕೇಳಿದ್ದಾರೆ. ಸದ್ಯ ಶಂಕರ್ ಅವರು ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದಾರೆ. ಕೋರ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಮುಂದಿನ ನಿಲುವಿನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.