ಆಸ್ಕರ್ ರೇಸ್‌ನಿಂದ ಹೊರಬಿದ್ದ ‘ಜಲ್ಲಿಕಟ್ಟು’

ಭಾರತೀಯ ಸಿನಿಮಾಗಳಿಗೇಕೆ ಇಲ್ಲ ಮನ್ನಣೆ?  ಗಿರೀಶ್‌ ಕಾಸರವಳ್ಳಿ ವಿಶ್ಲೇಷಣೆ ಇಲ್ಲಿದೆ

  • ಲೇಖನ- ಶಶಿಧರ ಚಿತ್ರದುರ್ಗ

ಲಿಜೋ ಜೋಸ್ ಪೆಲ್ಲಿಸ್ಸರಿ ನಿರ್ದೇಶನದ ‘ಜಲ್ಲಿಕಟ್ಟು’ ಮಲಯಾಳಂ ಸಿನಿಮಾ 93ನೇ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ನಾಮ ನಿರ್ದೇಶನಗೊಂಡಿತ್ತು. ಅತ್ಯುತ್ತಮ ಅಂತಾರಾಷ್ಟ್ರೀಯ ಫ್ಯೂಚರ್ ಸಿನಿಮಾ ವಿಭಾಗಕ್ಕೆ ನಾಮ ನಿರ್ದೇಶನಗೊಂಡಿದ್ದ ಸಿನಿಮಾ ಅಂತಿಮ ಐದು ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗುವಲ್ಲಿ ವಿಫಲವಾಗಿದೆ. ಈ ಮೂಲಕ ಆಸ್ಕರ್ ಪ್ರಶಸ್ತಿ ಪಡೆಯುವ ಭಾರತೀಯರ ಕನಸು ಮತ್ತೊಮ್ಮೆ ಕಮರಿ ಹೋಗಿದೆ. ಹಾಗೆ ನೋಡಿದರೆ ‘ಜೆಲ್ಲಿಕಟ್ಟು’ ಚಿತ್ರದ ಬಗ್ಗೆ ಹಿರಿಯ ಸಿನಿಮಾ ತಂತ್ರಜ್ಞರು ಭಾರಿ ಭರವಸೆಯಿಟ್ಟಿದ್ದರು. ಈ ಚಿತ್ರದೊಂದಿಗೆ ಭಾರತಕ್ಕೆ ಆಸ್ಕರ್‌ ಗೌರವ ಸಿಗಲಿದೆ ಎಂದೇ ಹೇಳಲಾಗಿತ್ತು.

ಆದರೆ ನಿರೀಕ್ಷೆ ಹುಸಿಯಾಗಿದೆ. ಇಲ್ಲಿಯವರೆಗೆ ಆಸ್ಕರ್‌ ಅಂತಾರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಅಂತಿಮ ಐದರ ಪಟ್ಟಿಗೆ ಹೋಗಿರುವುದು ಮೂರು ಸಿನಿಮಾಗಳಷ್ಟೆ. “ಮದರ್ ಇಂಡಿಯಾ” (1958), “ಸಲಾಂ ಬಾಂಬೆ” (1989) ಮತ್ತು “ಲಗಾನ್‌” (2001) ಅಂತಿಮ ಐದು ಚಿತ್ರಗಳ ಪಟ್ಟಿಗೆ ಹೋದರೂ ಆಸ್ಕರ್ ಪ್ರಶಸ್ತಿ ಗಳಿಸುವಲ್ಲಿ ವಿಫಲವಾಗಿದ್ದವು. ಭಾರತೀಯ ಸಿನಿಮಾಗಳು ವಿವಿಧ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸುವುದಿದೆ. ಆದರೆ ಆಸ್ಕರ್ ಸಂದರ್ಭದಲ್ಲಿ ಇದಾಗದು. ಕನ್ನಡದ ಹೆಮ್ಮೆಯ ಹಿರಿಯ ಚಿತ್ರನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು ವಿಶ್ಲೇಷಿಸುವುದು ಹೀಗೆ –

ಗಿರೀಶ್‌ ಕಾಸರವಳ್ಳಿ

“ಈ ವಿಚಾರವನ್ನು ನಾವು ವಿವಿಧ ಆಯಾಮಗಳಲ್ಲಿ ಗಮನಿಸಬೇಕಾಗುತ್ತದೆ. ಅಲ್ಲಿನ ಮಾನ ದಂಡಗಳೇ ಬೇರೆ ಇರುತ್ತವೆ. ಅಲ್ಲಿ ಕತೆ ಹೇಳುವ ಕ್ರಮವೇ ಬೇರೆ ಇರುತ್ತದೆ. ನಾವು ನಮ್ಮನೆಯಲ್ಲಿ ಮಾಡಿದ ಅಡುಗೆಯೇ ಶ್ರೇಷ್ಠ ಎಂದುಕೊಳ್ಳಲಾಗದು. ಜೊತೆಗೆ ನಾವು ಅಲ್ಲಿಗೆ ರೆಕಮೆಂಡ್ ಮಾಡುವ ಸಿನಿಮಾಗಳು ಕೂಡ ಸರಿ ಇಲ್ಲದಿರಬಹುದು. ಆದರೆ ಈ ಬಾರಿಯ “ಜೆಲ್ಲಿಕಟ್ಟು” ಸಿನಿಮಾ ಉತ್ತಮ ಆಯ್ಕೆಯೇ ಆಗಿತ್ತು. ಆದಾಗ್ಯೂ ಅಲ್ಲಿನ ಜ್ಯೂರಿಗಳು ಚಿತ್ರದಲ್ಲಿ ಹುಡುಕುವ ವಸ್ತು ಬೇರೆಯದ್ದೇ ಆಗಿರುತ್ತದೆ. ಚಿತ್ರದಲ್ಲಿ ಪೊಲಿಟಿಕಲ್ ಟೋನ್‌, ಏಸ್ತಟಿಕ್ ಸೆನ್ಸ್ ನೋಡುತ್ತಾರೆ. ಹೀಗೆ ಹಲವು ಕಾರಣಗಳಿರುತ್ತವೆ. ಮುಖ್ಯವಾಗಿ ಅಲ್ಲಿ ವೋಟಿಂಗ್ ಇರುತ್ತದೆ. ಸಾಕಷ್ಟು ಹಣ ಖರ್ಚು ಮಾಡಿ ಜ್ಯೂರಿಗಳಿಗೆ ಸಿನಿಮಾ ತೋರಿಸಿ, ಅವರನ್ನು ಮೆಚ್ಚಿಸಬೇಕಾಗುತ್ತದೆ.

ಮಿತ ವೆಚ್ಚದಲ್ಲಿ ಸಿನಿಮಾ ಮಾಡುವ ನಮಗೆ ಅದೆಲ್ಲವೂ ಕೈಗೆಟುಕದು. ಬಹುಶಃ ಆ ಪ್ರಕ್ರಿಯೆಯಲ್ಲೂ ಭಾರತೀಯ ಸಿನಿಮಾಗಳು ಹಿಂದೆ ಉಳಿಯುವಂತಾಗುತ್ತದೆ. ಮೊದಲೆಲ್ಲಾ ಆಸ್ಕರ್‌ಗೆ ಹಾಡು, ಕುಣಿತದ ಸಾಕಷ್ಟು ಭಾರತೀಯ ಸಿನಿಮಾಗಳನ್ನು ಆಸ್ಕರ್‌ಗೆ ನಾಮನಿರ್ದೇಶನ ಮಾಡಲಾಗಿದೆ. ಇಂತಹ ಚಿತ್ರಗಳನ್ನು ನೋಡಿರುವ ಜ್ಯೂರಿಗಳು ಭಾರತೀಯ ಸಿನಿಮಾಗಳ ಬಗ್ಗೆಯೇ ಒಂದು ಪೂರ್ವಾಗ್ರಹ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿರುತ್ತವೆ.
ಬೆಂಗಾಲಿ ನಿರ್ದೇಶಕ ಸತ್ಯಜಿತ್ ರೇ ಸಿನಿಮಾಗಳು ಆಸ್ಕರ್ ಗೌರವ ಪಡೆಯುವ ಯೂನಿವರ್ಸಲ್ ವಸ್ತು ಇದ್ದಂಥವು. ರೇ ಅವರ ‘ಚಾರುಲತ’ ಸೇರಿದಂತೆ ಮತ್ತೊಂದೆರೆಡು ಚಿತ್ರಗಳು ಅಂತಹ ಗುಣ ಹೊಂದಿದ್ದವು. ಆದರೆ ಅವರ ಚಿತ್ರಗಳನ್ನು ನಾಮನಿರ್ದೇಶನ ಮಾಡುವಲ್ಲಿ ಹಿಂದೆ ಉಳಿದರು. ಕೊನೆಗೆ ಆಸ್ಕರ್ ಕಮಿಟಿಯವರೇ ಬಂದು ಸತ್ಯಜಿತ್ ರೇ ಅವರ ಕೊನೆಗಾಲದಲ್ಲಿ ಅವರಿಗೆ ಗೌರವ ಸಲ್ಲಸಿದರು. ಬರ್ಲಿನ್‌, ಫ್ರಾನ್ಸ್ ಸೇರಿದಂತೆ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಸಿನಿಮಾ ಆಯ್ಕೆಯ ಮಾನದಂಡಗಳೇ ಬೇರೆಯಾಗಿರುತ್ತವೆ. ಆಸ್ಕರ್ ಕೂಡ ಇದಕ್ಕೆ ಹೊರತಲ್ಲ” ಎಂಬುದು ಅವರ ಮಾತು.

Related Posts

error: Content is protected !!