ಮಣಿರತ್ನಂ ಸಿನಿಮಾದಲ್ಲಿ ಶಾಲಿನಿ ಅಜಿತ್‌?

ಇಪ್ಪತ್ತು ವರ್ಷಗಳ ನಂತರ ಮತ್ತೆ ತೆರೆಗೆ!

ಎಂಬತ್ತರ ದಶಕದ ಜನಪ್ರಿಯ ಬಾಲನಟಿ ಶಾಲಿನಿ. ತಮಿಳು, ತೆಲುಗು ಮತ್ತು ಮಲಯಾಳಂನ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಬಾಲನಟಿಯಾಗಿ ಮಿಂಚಿದ್ದರು. 1997ರಲ್ಲಿ ಫಾಝಿಲ್ ನಿರ್ದೇಶನದ ‘ಅನಿಯಾಥು ಪಿರವು’ ಮಲಯಾಳಂ ಚಿತ್ರದೊಂದಿಗೆ ಅವರು ನಾಯಕಿಯಾದರು. ಈ ಸಿನಿಮಾ ‘ಕಾದಲುಕ್ಕು ಮರ್ಯಾದೈ’ ಶೀರ್ಷಿಕೆಯಡಿ ತಮಿಳಿಗೆ ರಿಮೇಕ್ ಆಯ್ತು. ವಿಜಯ್ ಹೀರೋ ಆಗಿ ನಟಿಸಿದ್ದ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು.

ಹಾಗೆ ಶಾಲಿನಿ ನಾಯಕಿಯಾಗಿಯೂ ಗೆಲುವು ಕಂಡರು. ಸುಮಾರು ಹತ್ತು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಶಾಲಿನಿ ‘ಅಮರ್‌ ಕಲಂ’ ತಮಿಳು ಸಿನಿಮಾ ಸಂದರ್ಭದಲ್ಲಿ ನಟ ಅಜಿತ್‌ರ ಪ್ರೇಮದ ಬಲೆಗೆ ಸಿಲುಕಿದರು. 2000ನೇ ಇಸವಿಯಲ್ಲಿ ಅಜಿತ್‌ರನ್ನು ವರಿಸಿದ ಅವರು ಮುಂದೆ ಸಿನಿಮಾದಿಂದ ದೂರವೇ ಉಳಿದರು. ಈ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಅನೌಷ್ಕಾ ಮತ್ತು ಆದ್ಯಂತ್‌. 2001ರಲ್ಲಿ ತೆರೆಕಂಡ ಪ್ರಶಾಂತ್ ಜೊತೆಗಿನ ‘ಪಿರ್ಯಾತ ವರಂ ವೇಂಡಂ’ ಅವರು ನಾಯಕಿಯಾಗಿ ಕಾಣಿಸಿಕೊಂಡ ಕೊನೆಯ ಸಿನಿಮಾ.


ಇದೀಗ ಇಪ್ಪತ್ತು ವರ್ಷಗಳ ನಂತರ ಅವರು ತೆರೆಗೆ ಮರಳುವ ಸೂಚನೆ ಸಿಕ್ಕಿದೆ. ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ‘ಪೊನ್ನಿಯಿನ್ ಸೆಲ್ವನ್‌’ ತಮಿಳು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅವರು ನಟಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮಣಿರತ್ನಂ ನಿರ್ದೇಶನದ ಸೂಪರ್‌ಹಿಟ್‌ ‘ಅಲೈಪಾಯುತೆ’ ಚಿತ್ರದಲ್ಲಿ ಮಾಧವನ್‌ ಜೊತೆ ನಟಿಸಿದ್ದರು ಶಾಲಿನಿ. ಇದೀಗ ಮಣಿರತ್ನಂ ಅವರದೇ ಚಿತ್ರದೊಂದಿಗೆ ತೆರೆಗೆ ಮರಳಲಿದ್ದಾರೆ. ನಟ ಅಜಿತ್‌ ಕೂಡ ಈ ಬಗ್ಗೆ ಖುಷಿಯಾಗಿದ್ದು, ಅಧಿಕೃತ ಘೋಷಣೆ ಹೊರ ಬೀಳಬೇಕಿದೆ.

Related Posts

error: Content is protected !!