Categories
ಸಿನಿ ಸುದ್ದಿ

ಪೈರಸಿ ತಡೆಗೆ ಹೊಸ ಸಾಫ್ಟ್‌ವೇರ್‌ – ರೆಕಾರ್ಡ್‌ ಮಾಡೋರಿಗೆ ಕಾದಿದೆ ಹಬ್ಬ!

ತಾಂತ್ರಿಕತೆಗೆ ಪುನೀತ್‌ ಚಾಲನೆ-ಮೆಚ್ಚುಗೆ

ಯಾವುದೇ ಭಾಷೆಯ ಚಿತ್ರವಿರಲಿ, ಪೈರಸಿ ಕಾಟ ತಪ್ಪಿದ್ದಲ್ಲ. ಇದು ನಿನ್ನೆ ಮೊನ್ನೆಯ ಸಮಸ್ಯೆಯಂತೂ ಅಲ್ಲ. ಹಲವು ವರ್ಷಗಳಿಂದಲೂ ಇದೆ. ಈ ಪೈರಸಿ ಎಂಬ ಗುಮ್ಮನಿಗೆ ಸಾಕಷ್ಟು ಸಲ ಗುದ್ದಲು ಪ್ರಯತ್ನ ಪಟ್ಟರೂ, ಪದೇ ಪದೇ ತನ್ನ ಅಟ್ಟಹಾಸ ಮೆರೆಯುತ್ತಲೇ ಇದೆ. ಇದರಿಂದಾಗಿ ಯಾವುದೇ ಸಿನಿಮಾಗಳು ಚಿತ್ರಮಂದಿರ ಹೊಕ್ಕರೂ, ಅಲ್ಲಿ ಪೈರಸಿ ಎಂಬ ಪೆಡಂಭೂತದಿಂದಾಗಿ ನಿರ್ಮಾಪಕ ಹೈರಾಣಾಗುತ್ತಿದ್ದಾನೆ. ಈ ಪೈರಸಿ ತಡೆಗೆ ಹೊಸ ತಾಂತ್ರಿಕತೆಯ ಅಗತ್ಯವಿತ್ತು. ಆದೀಗ ಈಡೇರಿದೆ. ಹೌದು, ಕಾಂಟ್ರಫೈನ್‌ ಸಂಸ್ಥೆಯ ದುರ್ಗಾಪ್ರಸಾದ್‌ ಹಾಗೂ ರಾಹುಲ್‌ರೆಡ್ಡಿ ಮತ್ತು ತಂಡ ಜೊತೆಗೂಡಿ ಪೈರಸಿ ತಡೆಗಟ್ಟುವ ಹೊಸ ತಾಂತ್ರಿಕತೆಯನ್ನು ಹೊರತಂದಿದ್ದು, ಅದಕ್ಕೆ ಚಾಲನೆಯೂ ಸಿಕ್ಕಿರುವುದು ವಿಶೇಷ.


ಕಾಂಟ್ರಫೈನ್ಸ್‌ ಸಂಸ್ಥೆಯ “ಫೆಂಡೆ” ಹೆಸರಿನ ಸಾಫ್ಟ್‌ವೇರ್‌ಗೆ ಪುನೀತ್‌ರಾಜಕುಮಾರ್‌ ಅವರು ಚಾಲನೆ ನೀಡುವ ಮೂಲಕ, ಹೊಸ ತಾಂತ್ರಿಕತೆಯಲ್ಲಿ ಮಾತ್ರ ಈಗ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಪೈರೆಸಿ ಅನ್ನುವುದು ಹೊಸದಲ್ಲ. ಅದು ವಿಡಿಯೋ ಜಮಾನ ಬಂದಾಗಿನಿಂದಲೂ ಇದೆ. ಈಗಂತೂ ಡಿಜಿಟಲ್‌ ಹವಾ. ಅದು ಹೆಚ್ಚಾಗುತ್ತಿದ್ದಂತೆ ಸಿನಿಮಾ ಮೇಕರ್ಸ್‌ ಸಂಖ್ಯೆಯೂ ಹೆಚ್ಚುತ್ತಿದೆ. ತಮ್ಮ ಜೇಬಿನಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಹೊರಗೆ ಬಿಟ್ಟು ಪೈರೆಸಿ ಮಾಡುತ್ತಿದ್ದಾರೆ. ಚಿತ್ರಮಂದಿರಗಳ ಬಳಿಕ ಅನೇಕ ಸಿನಿಮಾಗಳು ಓಟಿಟಿ ಫ್ಲಾಟ್‌ಫಾರಂನತ್ತ ಹೋಗುತ್ತಿವೆ. ಈಗ ಯುವ ಬಳಗ ಸೇರಿ, ಈ ಹೊಸ ತಾಂತ್ರಿಕತೆ ಕಂಡುಹಿಡಿದಿದೆ. ಅವರ ಈ ಹೊಸ ಸಾಫ್ಟ್‌ವೇರ್ ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲರಿಗೂ ಉಪಯೋಗವಾಗಲಿ ಎಂದರು.


ನಟಿ ಶೃತಿ ಕೂಡ ಈ ಹೊಸ ತಾಂತ್ರಿಕತೆಯನ್ನು ಪ್ರೀತಿಯಿಂದಲೇ ಸ್ವಾಗತಿಸಿದರು. ಚಿತ್ರರಂಗದ ಅನ್ನದಾತ ನಿರ್ಮಾಪಕ. ಅವರ ಉಳಿವಿಗೆ ಮತ್ತು ಸಿನಿಮಾಗಳ ಉಳಿವಿಗೆ ಈ ಹೊಸ ತಾಂತ್ರಿಕತೆ ಬಂದಿದೆ. ಪೈರಸಿ ತೊಲಗಿಸಲು ಈ ಯುವಕರ ತಂಡ ನಿಂತಿದೆ. ನಮ್ಮ ಕನ್ನಡಿಗರು ಈ ಹೊಸ ತಾಂತ್ರಿಕತೆಯ ಹಿಂದೆ ನಿಂತಿರೋದು ಹೆಮ್ಮೆಯ ವಿಷಯ ಎಂದರು.
ಕಾಂಟ್ರಫೈನ್ಸ್ ಸಂಸ್ಥೆಯ ಫೆಂಡೆ ಸಾಫ್ಟ್‌ವೇರ್‌ ಪೈರೆಸಿ ತಡೆಯುವ ಹೊಸ ತಾಂತ್ರಿಕತೆ ಹೊಂದಿದೆ. ಇದನ್ನು ಚಿತ್ರಮಂದಿರಗಳಲ್ಲಿ ಅಳವಡಿಸಿದರೆ, ಪ್ರೇಕ್ಷಕ ಮೊಬೈಲ್‌ನಿಂದ ಸೆರೆಹಿಡಿಯುವ ದೃಶ್ಯಗಳು ರೆಕಾರ್ಡ್ ಆಗುತ್ತದೆ. ಆದರೆ ಸೌಂಡ್‌ ಮಾತ್ರ ರೆಕಾರ್ಡ್‌ ಆಗುವುದಿಲ್ಲ. ಆತ ಎಲ್ಲಿ ಕುಳಿತು ಪೈರಸಿ ಮಾಡುತ್ತಿದ್ದಾನೆ ಎಂಬುದನ್ನು ಕೂಡ ಈ ಹೊಸ ಸಾಫ್ಟ್‌ವೇರ್‌ ಪತ್ತೆ ಹಚ್ಚುತ್ತದೆ. ತಿಳಿಸುತ್ತದೆ. ಅಷ್ಟೇ ಅಲ್ಲ, ಆ ಪ್ರದರ್ಶನಕ್ಕೆ ಸಂಬಂಧಿಸಿದವರಿಗೆ ಹಾಗೂ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡುತ್ತದೆ. ಮುಂದಿನ ದಿನಗಳಲ್ಲಿ ವಿಡಿಯೋ ರೆಕಾರ್ಡ್‌ ಆಗದ ಸಾಫ್ಟ್‌ವೇರ್ ಕೂಡ ಹೊರಬರಲಿದೆ ಎಂದು ಸಂಸ್ಥೆಯ ಯುವಕರು ಹೇಳಿಕೊಂಡರು.


ಅಂದಹಾಗೆ, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್‌ಬಾಬು, ದಿನಕರ ತೂಗದೀಪ, ಶೃತಿ ಅವರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ನೋಡಿದಾಗ ಕೇವಲ ವಿಡಿಯೋ ಕಾಣಿಸಿತು ವಿನಃ, ಆಡಿಯೋ ಕೇಳಿಸಲಿಲ್ಲ. ಅಲ್ಲಿಗೆ ಈ ಯುವಕರ ಸಾಧನೆ ಯಶಸ್ವಿ ಎಂಬ ಮಾತುಗಳು ಕೇಳಿಬಂದವು. ಈ ವೇಳೆ, ನಿರ್ಮಾಪಕ ಸಂಘದ ಅಧ್ಯಕ್ಷ ಡಿ.ಕೆ.ರಾಮಕೃಷ್ಣ, ಕೆ.ಸಿ.ಎನ್.ಚಂದ್ರಶೇಖರ್, ಬಾ.ಮ.ಹರೀಶ್, ಆರ್.ಎಸ್.ಗೌಡ, ಎನ್.ಎಂ.ಸುರೇಶ್ ಇತರರು ಇದ್ದರು.

Categories
ಸಿನಿ ಸುದ್ದಿ

ತನಿಖೆಗೆ ಬಂದ ವಸಿಷ್ಠ -ಕಿಶೋರ್‌ ಜೊತೆ ಹೊಸ ಚಿತ್ರ

ವೃತ್ತಿ ಬದುಕಿನ ಜವಾಬ್ದಾರಿ ಕುರಿತ ಚಿತ್ರಣ

ಕನ್ನಡ ಚಿತ್ರರಂಗದಲ್ಲಿ ಈಗ ವಸಿಷ್ಠ ಸಿಂಹ ಫುಲ್‌ ಬಿಝಿ. ಒಂದು ರೌಂಡ್‌ ಸೌತ್‌ ಇಂಡಿಯಾ ರೌಂಡ್‌ ಹೊಡೆದಿರುವ ವಸಿಷ್ಠ ಸದ್ಯಕ್ಕಂತೂ ಕನ್ನಡದಲ್ಲಿ ಗಟ್ಟಿ ನೆಲೆ ಕಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲೂ ಅವರು ನಟಿಸುತ್ತಿರುವುದು ಖುಷಿಯ ವಿಷಯ. ಹೊಸ ಬಗೆಯ ಕಥೆ ಮತ್ತು ಪಾತ್ರಕ್ಕೆ ಸದಾ ಹಾತೊರೆಯುವ ಒಬ್ಬ ಅದ್ಭುತ ನಟ ವಸಿಷ್ಠ ಸಿಂಹ. ಈಗ ವಸಿಷ್ಠ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅವರೊಂದಿಗೆ ಮತ್ತೊಬ್ಬ ನಟ ಕಿಶೋರ್‌ ಕೂಡ ಸಾಥ್‌ ನೀಡುತ್ತಿದ್ದಾರೆ. ಈ ಇಬ್ಬರೂ ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದಮೇಲೆ, ಅದೊಂದು ಹೊಸ ಬಗೆಯ ಚಿತ್ರ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ವಸಿಷ್ಠ ಸಿಂಹ, ನಟ

ಹೌದು, ವಸಿಷ್ಠ ಸಿಂಹ ಹಾಗೂ ಕಿಶೋರ್‌ ಅಭಿನಯದ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ಚಿತ್ರದ ಮೂಲಕ ವಚನ್‌ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ಕುರಿತು ಮಾಧ್ಯಮ ಎದುರು ಒಂದಷ್ಟು ವಿವರ ಹಂಚಿಕೊಂಡಿದ್ದು ಹೀಗೆ.

ವಚನ್‌, ನಿರ್ದೇಶಕ

“ಇದು ನನ್ನ ಮೊದಲ ಸಿನಿಮಾ. ಈ ಹಿಂದೆ ನಾನು “ಲೂಸಿಯಾʼ ಪವನ್‌ ಕುಮಾರ್‌ ಅವರ “ಯು ಟರ್ನ್‌” ಸಿನಿಮಾದಲ್ಲಿ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದೆ. ಹೈದರಾಬಾದ್‌ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲೇ ಈ ಚಿತ್ರದ ಒನ್‌ಲೈನ್‌ ಹೊಳೆದಿತ್ತು. ಅಲ್ಲಿಂದ ಬೆಂಗಳೂರಿಗೆ ಬಂದವನೆ, ಡಿಓಪಿ ನವೀನ್‌ಕುಮಾರ್‌ ಅವರೊಂದಿಗೆ ಚರ್ಚೆ ಮಾಡಿದೆ. ಅವರು ಕಥೆ ಕೇಳಿದ ಕೂಡಲೇ ಇಷ್ಟಪಟ್ಟು, ಈ ಚಿತ್ರದ ಹೀರೋ ವಸಿಷ್ಠ ಸಿಂಹ ಹಾಗೂ ನಿರ್ಮಾಪಕ ಜನಾರ್ದನ್‌ ಅವರನ್ನು ಪರಿಚಯಿಸಿದರು. ಅಲ್ಲಿಂದ ಈ ಚಿತ್ರಕ್ಕೆ ಸುಮಾರು ಒಂಬತ್ತು ತಿಂಗಳ ಕಾಲ ಸ್ಕ್ರಿಪ್ಟ್‌ ಕೆಲಸ ನಡೆಯಿತು. ಇನ್ನೇನು ಸಿನಿಮಾ ಶುರು ಮಾಡಬೇಕು ಅಂತ ಹೊರಡುವಾಗಲೇ, ಕೊರೊನಾ ಸಮಸ್ಯೆ ತಲೆದೋರಿತು. ಆ ಬಳಿಕ ಇಷ್ಟ ತಿಂಗಳು ಕಾದು ಈಗ ಅಧಿಕೃತವಾಗಿ ಚಾಲನೆ ಸಿಕ್ಕಿದೆ ಎಂದು ತಮ್ಮ ಕಥೆ ಕುರಿತು ಹೇಳಿಕೊಂಡ ವಚನ್‌, ಇದೊಂದು ತನಿಖೆಯ ಕಥಾಹಂದರ ಹೊಂದಿದೆ. ಇಲ್ಲಿ ವಸಿಷ್ಠ ಸಿಂಹ ಹಾಗು ಕಿಶೋರ್‌ ಇದ್ದಾರೆ. ಇವರಿಬ್ಬರನ್ನೂ ಇಟ್ಟುಕೊಂಡು ಸ್ಕ್ರಿಪ್ಟ್‌ ಮಾಡೋದೇ ಒಂದು ಸಾಹಸ. ನನಗೆ ನನ್ನ ಕಥೆಯೇ ಸ್ಟ್ರೆಂಥ್.‌ ಉಳಿದಂತೆ ನನ್ನೊಂದಿಗೆ ಸ್ಟ್ರಾಂಗ್‌ ಟೆಕ್ನಿಕಲ್‌ ಟೀಮ್‌ ಇದೆ. ಬಹುತೇಕ ಬೆಂಗಳೂರಲ್ಲೇ ನಡೆಯೋ ಕಥೆ ಇದು. ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುವ ಇಬ್ಬರು ಪೊಲೀಸ್‌ ಅಧಿಕಾರಿಗಳ ನಡುವೆ ನಡೆಯೋ ಕಥೆ ಇಲ್ಲಿ ಹೈಲೈಟ್.‌ ಅವರಿಬ್ಬರ ಒಳಜಗಳವೇ ಸಿನಿಮಾದ ಟ್ವಿಸ್ಟ್‌. ಒಟ್ಟಾರೆ ವೃತ್ತಿ ಜೀವನದಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ಕೆಲಸ ಮಾಡಿ ತೋರಿಸಿ, ತಮ್ಮ ವೃತ್ತಿ ಬದುಕಲ್ಲಿ ತಾವು ಹೀರೋ ಅನ್ನುವುದನ್ನು ಸಾಬೀತುಪಡಿಸುತ್ತಾರೆ. ಅದನ್ನೇ ಇಲ್ಲಿ ಹೇಳಹೊರಟಿದ್ದೇವೆʼ ಎಂದು ವಿವರ ಕೊಡುತ್ತಾರೆ ವಚನ್.

ಕಿಶೋರ್‌, ವಸಿಷ್ಠ

ಖುಷಿಯಲ್ಲಿದ್ದ ವಸಿಷ್ಠ ಸಿಂಹ, “ಶೀರ್ಷಿಕೆ ಇಡದ ಚಿತ್ರವಿದು. ಇದನ್ನು “ವಸಿಷ್ಠ ಗೆಳೆಯರ ಬಳಗ”ದ ಚಿತ್ರ ಎಂದೂ ಕರೆಯಬಹುದು. ಇದೊಂದು ನಿರ್ದೇಶಕನ ಕನಸು. ಒಳ್ಳೆಯ ತಂಡ ಜೊತೆಗಿದೆ. ಸಿನಿಮಾ ಮೇಲೆ ಭವ್ಯ ಭರವಸೆಯೂ ಇದೆ. ಇಬ್ಬರು ಪೊಲೀಸ್‌ ಅಧಿಕಾರಿಗಳ ತನಿಖೆಯ ಜರ್ನಿ ಇಲ್ಲಿದೆ. ಇಲ್ಲಿ ಪ್ರತಿ ಪಾತ್ರಕ್ಕೂ ತನ್ನದೇ ಆದ ವಿಶೇಷತೆ ಇದೆ. ಮಂಡ್ಯ, ಮಂಗಳೂರು, ಕೋಲಾರ, ಉತ್ತರ ಕರ್ನಾಟಕ ಹೀಗೆ ರಾಜ್ಯದ ನಾನಾ ಭಾಗದ ನೈಜ ಭಾಷೆ ಇಲ್ಲಿರಲಿದೆ. ಒಂದಂತೂ ಗ್ಯಾರಂಟಿ ಕೊಡ್ತೀನಿ. ಇದು ಅಪ್ಪಟ ಮನರಂಜನೆಯ, ಎಲ್ಲರಿಗೂ ಇಷ್ಟವಾಗುವ ಸಿನಿಮಾ ಆಗಲಿದೆ. ಪೊಲೀಸ್‌ ಅಧಿಕಾರಿ ಅಂದಮೇಲೆ, ಆ ಶಿಸ್ತು, ಗತ್ತು, ಹಮ್ಮು-ಗಿಮ್ಮು ಕಾಮನ್.‌ ಅದೆಲ್ಲದರ ಜೊತೆಯಲ್ಲಿ ಇಲ್ಲೊಂದು ಕೇಸ್‌ ತನಿಖೆಯ ಜಾಡು ಹಿಡಿದು ಹೊರಡು ಅಧಿಕಾರಿಗಳ ಸ್ಪೆಷಲ್‌ ವರ್ಕ್‌ ಕಾಣಬಹುದು. ಅದೇ ಸಿನಿಮಾದ ಜೀವಾಳ. ನೈಜತೆಗೆ ಹತ್ತಿರ ಎನಿಸುವ ದೈಶ್ಯಗಳು ಇಲ್ಲಿವೆ. ಆಕ್ಷನ್‌ ಕೂಡ ಇದೆಯಾದರೂ, ಅದೊಂದು ರೀತಿ ಸ್ಪೆಷಲ್‌ ಡಿಸೈನ್‌ ಆಗಿದೆ” ಎನ್ನುತ್ತಾರೆ ವಸಿಷ್ಠ ಸಿಂಹ.

ಜನಾರ್ದನ್‌, ನಿರ್ಮಾಪಕ

ನಿರ್ಮಾಪಕ ಜನಾರ್ದನ್‌ ಅವರಿಗೆ ಇದು ಮೊದಲ ಚಿತ್ರ. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ಜನಾರ್ದನ್‌ ಅಪ್ಪಟ ಕನ್ನಡ ಸಿನಿಮಾ ಮಾಡುವ ಕನಸು ಕಂಡಿದ್ದರಂತೆ. ಅದಕ್ಕೆ ಸರಿಯಾಗಿ ಈ ಕಥೆ ಸಿಕ್ಕಿದೆ. ವಸಿಷ್ಠ ಸಿಂಹ ಗೆಳೆಯರಾಗಿದ್ದರಿಂದ ಅವರೊಂದಿಗೆ ಚರ್ಚಿಸಿ ಈ ಸಿನಿಮಾಗೆ ಕೈ ಹಾಕಿದ್ದಾರೆ.

ಮಾಸ್ತಿ, ಸಂಭಾಷಣೆಕಾರ

ಮಾಸ್ತಿ ಈ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ. ಅವರಿಗೆ ನಿರ್ದೇಶಕ ವಚನ್‌ ಹೇಳಿದ ಕತೆ ಇಷ್ಟವಾಗಿ, ನೈಜತೆಗೆ ಹತ್ತಿರ ಎನಿಸಿತಂಎ. ಪೊಲೀಸ್‌ ವ್ಯವಸ್ಥೆ, ಅವರೊಳಗಿರುವ ಈಗೋ ಇತ್ಯಾದಿ ವಿಷಯಗಳ ಮೇಲೆ ಕಥೆ ಸಾಗಲಿದೆ. ಒಳ್ಳೆಯ ನಟರಿದ್ದಾರೆ. ಹಾಗಾಗಿ ನಮ್ಮಂತಹ ಬರಹಗಾರರಿಗೂ ಅದೊಂದು ಚಾಲೆಂಜ್‌ ಎನಿಸುತ್ತೆ ಎಂಬುದು ಮಾಸ್ತಿ ಮಾತು.

ಅನೂಪ್‌ ಸೀಳಿನ್‌, ಸಂಗೀತ ನಿರ್ದೇಶಕ

ಸಂಗೀತ ನೀಡುತ್ತಿರುವ ಅನೂಪ್‌ ಸೀಳಿನ್‌, “ಲಾಕ್‌ಡೌನ್‌ ಮುನ್ನವೇ ಶುರುವಾಗಬೇಕಿತ್ತು. ಕೊರೊನಾ ಬಂದಿದ್ದರಿಂದ ತಡವಾಯ್ತು. ಅದರಲ್ಲೂ ಸಿನಿಮಾ ಶುರುವಾಗುತ್ತೋ ಇಲ್ಲವೋ ಎಂಬ ಭಯವಿತ್ತು. ಯಾಕೆಂದರೆ, ಒಳ್ಳೆಯ ಕಥೆ ಇದ್ದುದರಿಂದ ಇದು ಸಿನಿಮಾ ರೂಪದಲ್ಲಿ ಹೊರಬರಬೇಕೆಂಬ ಆಸೆ ಇತ್ತು. ವಚನ್‌ ಒಳ್ಳೆಯ ಕಥೆ ಮಾಡಿದ್ದಾರೆ. ತಕ್ಕಂತೆ ಹೀರೋಗಳನ್ನೂ ಆಯ್ಕೆ ಮಾಡಿ, ತಾಂತ್ರಿಕತೆಯಲ್ಲೂ ಸ್ಟ್ರಾಂಗ್‌ ಟೀಮ್‌ ಕಟ್ಟಿಕೊಂಡಿದ್ದಾರೆ. ಇಲ್ಲಿ ಹಾಡುಗಳೂ ಇವೆ. ಅದಕ್ಕಿಂತ ಹೆಚ್ಚಾಗಿ ಹಿನ್ನೆಲೆ ಸಂಗೀತಕ್ಕೆ ಒತ್ತು ಕೊಡಬೇಕಿದೆ. ಬಹುಶಃ ನಿರ್ದೇಶಕರು ಆ ಹಿನ್ನೆಲೆಯಿಂದ ನನ್ನ ಆಯ್ಕೆ ಮಾಡಿರಬೇಕು. ಹಾಡುಗಳಿಗೆ ಪ್ರಮೋದ್‌ ಮರವಂತೆ ಸಾಹಿತ್ಯ ಬರೆಯುತ್ತಿದ್ದಾರೆ ಎಂಬ ವಿವರ ಕೊಟ್ಟರು ಅನೂಪ್‌.

ಹರೀಶ್‌ ಕೊಮ್ಮೆ, ಸಂಕಲನಕಾರ

ಚಿತ್ರಕ್ಕೆ ಹರೀಶ್‌ ಕೊಮ್ಮೆ ಸಂಕಲನವಿದೆ. ಧರ್ಮಣ್ಣ ಕಡೂರು ಇಲ್ಲಿ ಬ್ಯಾಂಡ್‌ ಸೆಟ್‌ ಹುಡುಗನ ಪಾತ್ರ ಮಾಡುತ್ತಿದ್ದಾರಂತೆ. ಉಳಿದಂತೆ ಚಿತ್ರಕ್ಕೆ ಸತೀಶ್‌ ಕಲಾನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮಣಿ ಶಶಾಂಕ್‌ ಇದ್ದಾರೆ. ಮಹಾಂತೇಶ್‌ ಬಡಿಗೇರ್‌ ಸೇರಿದಂತೆ ಹಲವು ಕಲಾವಿದರಿದ್ದಾರೆ. ನಾಯಕಿ ಆಯ್ಕೆ ಇನ್ನಷ್ಟೇ ಆಗಬೇಕಿದೆ.

Categories
ರಿ ವಿವ್ಯೂ ಸಿನಿ ಸುದ್ದಿ

ಯಾರೋ ಹೆಣೆದ ಬಲೆಗೆ ಸೆರೆ ಸಿಕ್ಕ ಜೀವ

ಆಸೆ -ದುರಾಸೆ, ಸುಳ್ಳು, ಮೋಸಕ್ಕೆ ಬೆಂದ ಮನಸು!

ಚಿತ್ರ ವಿಮರ್ಶೆ

“ನೀನ್‌ ಯಾಕೆ ಈ ಕೊಲೆ ಮಾಡಿದೆ…”
– ಯಾರೂ ಇರದ ಆ ಮನೆಯೊಳಗೆ ಹೋಗಿ ಸಿಲುಕುವ  ಯುವಕನೊಬ್ಬನ ಮೊಬೈಲ್‌ ಕರೆಯಲ್ಲಿ, ಹೆಣ್ಣು ಧ್ವನಿಯೊಂದು ಈ ಪ್ರಶ್ನೆ ಕೇಳುತ್ತೆ. ಅಷ್ಟಕ್ಕೂ ಅಲ್ಲಿ ಆ ಕೊಲೆ ಮಾಡಿದ್ದು ಯಾರು, ಯಾಕೆ, ಆ ಹೆಣ್ಣು ಧ್ವನಿ ಯಾರದ್ದು, ಆ ಕೊಲೆ  ಮಾಡಿದ್ದು ಆ ಯುವಕನಾ ಅಥವಾ ಬೇರೆ ಯಾರದ್ದಾದರೂ ಕೈವಾಡವಿದೆಯಾ?
– ಹೀಗೆ ಇವಿಷ್ಟೂ ಕುತೂಹಲದೊಂದಿಗೆ ಅಂತ್ಯದವರೆಗೂ ಸಾಗುವ “ಅರಿಷಡ್ವರ್ಗ” ಚಿತ್ರದ ಒನ್‌ಲೈನ್.

ಒಂದು ಕೊಲೆ ಸುತ್ತ ಸಾಗುವ‌ ರೋಚಕ ಕಥಾಹಂದರ ಎನ್ಲಡ್ಡಿಯಿಲ್ಲ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಕ್ರೈಮ್‌ ಥ್ರಿಲ್ಲರ್‌ ಸ್ಟೋರಿ ಬಂದಿವೆ. ಮರ್ಡರ್‌ ಮಿಸ್ಟ್ರಿ ಕಥೆಗಳು ಬಂದು ಹೋಗಿವೆ. ಅಂಥದ್ದೇ, ಸಾಕಷ್ಟು ತಿರುವುಗಳ ಜೊತೆಗೆ ಮುಂದೇನಾಗುತ್ತೆ ಎಂಬ ಸಣ್ಣ ಆತಂಕದಲ್ಲೇ ನೋಡಿಸಿಕೊಂಡು ಹೋಗುವ ತಾಕತ್ತು ಈ ಚಿತ್ರಕ್ಕಿದೆ ಎಂಬುದೇ ಸಮಾಧಾನ. ನಿರ್ದೇಶಕ ಅರವಿಂದ್‌ ಕಾಮತ್‌ ಕಟ್ಟಿಕೊಟ್ಟಿರುವ ಕಥೆಯಲ್ಲಿ ಗಟ್ಟಿತನವಿದೆ. ಹೆಣೆದಿರುವ ಚಿತ್ರಕಥೆಯಲ್ಲಿ ಬಿಗಿ ಹಿಡಿತವಿದೆ. ಏನು ಹೇಳಬೇಕು, ಎಷ್ಟು ಹೇಳಬೇಕು, ಯಾವುದನ್ನು ತೋರಿಸಬೇಕು ಎಂಬುದರ ಸ್ಪಷ್ಟತೆ ಇದೆ. ಹಾಗಾಗಿ “ಅರಿಷಡ್ವರ್ಗ” ಯಾವುದೇ ಗೊಂದಲವಿಲ್ಲದೆ, ಎಲ್ಲಿಯೂ ಪ್ರಶ್ನೆಗಳಿಗೆ ಆಸ್ಪದ ನೀಡದೆ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ.


ಮೊದಲೇ ಹೇಳಿದಂತೆ ಇದೊಂದು ಕ್ರೈಮ್‌ ಕುರಿತಾದ ಕಥೆ. ಒಂದು ಕೊಲೆಯ ಸುತ್ತ ನಡೆಯುವ ಕಥೆಗೆ ಅಷ್ಟೇ ಇಷ್ಟವಾಗುವಂತಹ ಚಿತ್ರಕಥೆ ಕೂಡ ಚಿತ್ರಕ್ಕೆ ಸಾಥ್‌ ನೀಡಿರುವುದೇ ಚಿತ್ರದ ಮೆಚ್ಚುಗೆಗೆ ಕಾರಣ. ಇಲ್ಲಿ ಹೊಡಿ, ಬಡಿ,ಕಡಿ ಎಂಬ ಸದ್ದಿನ ಆರ್ಭಟವಿಲ್ಲ. ತಲ್ಲಣಿಸೋ ಕಥೆಯೊಳಗೆ ಬಿಸಿಯುಸಿರಿನ ಸ್ಪರ್ಶ ಕೊಡುವ ಮೂಲಕ ಹಿಡಿಯಷ್ಟು ಕಾಮ, ಕ್ರೋಧ, ಬೊಗಸೆಯಷ್ಟು ಆಸೆ, ದುರಾಸೆ,ಬಯಕೆ, ಸುಳ್ಳು, ಅಧಿಕಾರ, ನಿಯತ್ತು, ಅಸಹಾಯಕತೆ… ಇವೆಲ್ಲದರ ಮಿಶ್ರಣದ ಜೊತೆ ಥ್ರಿಲ್‌ ಎನಿಸುವ ನಿರೂಪಣೆಯೊಂದಿಗೆ ಸಾಗುವ ಚಿತ್ರದಲ್ಲಿ ಪ್ರತಿ ಪಾತ್ರಗಳು ಒಂದೊಂದು ರೀತಿ ತಪ್ಪಾಗಿ ಅರ್ಥೈಸಿಕೊಂಡು ಕಾಣದ ಸುಳಿಯಲ್ಲಿ ಸಿಲುಕಿ ಆ ಸಂಕಷ್ಟಗಳಿಂದ ಹೊರಬರಲು ಹೆಣಗಾಡುವ ಹೋರಾಟವೇ ಚಿತ್ರದ ಹೈಲೈಟ್.‌ ಆ ಹೋರಾಟ, ಚೀರಾಟದ ಚಿತ್ರಣವನ್ನು ಅಷ್ಟೇ ಪರಿಣಾಮಕಾರಿಯಾಗಿಸಿರುವ ನಿರ್ದೇಶಕರ ಜಾಣತನ ಇಲ್ಲಿ ಇಷ್ಟವಾಗುತ್ತೆ.


ಇಷ್ಟಕ್ಕೂ ಕಥೆ ಏನು?
ಮನೆಯೊಂದರಲ್ಲಿ ಚಿತ್ರ ನಿರ್ಮಾಪಕ, ಉದ್ಯಮಿ ಮಂಜುನಾಥ ಭಟ್‌ ಅವರ ಕೊಲೆ ನಡೆದಿರುತ್ತೆ. ಈ ಸಂಬಂಧ ಆ ಮನೆಯಲ್ಲಿದ್ದ ಮೂವರು ಶಂಕಿತರನ್ನು ಬಂಧಿಸಲಾಗುತ್ತೆ. ಅಷ್ಟಕ್ಕೂ ಆ ಮನೆಯಲ್ಲಿನ ಕೊಲೆಗೂ ಆ ಮೂವರು ಶಂಕಿತರಿಗೆ ಸಂಬಂಧವಿದೆಯಾ? ಗೊತ್ತಿಲ್ಲ. ಆ ಕುರಿತು ನಡೆಯುವ ತನಿಖೆಯೇ ಇಡೀ ಸಿನಿಮಾದ ಜೀವಾಳ. ಇಲ್ಲಿ ಯಾರೋ ಯಾರಿಗಾಗಿಯೋ ದಾಳವಾಗುತ್ತಾರೆ ಅನ್ನುವ ಅಂಶ ಮೆಲ್ಲನೆ ಗೊತ್ತಾಗುತ್ತಿದ್ದಂತೆ, ಆ ಕೊಲೆಯ ಹಿಂದಿನ ರಹಸ್ಯಕ್ಕೆ ಮತ್ತಷ್ಟು ತಿರುವು ಸಿಗುತ್ತಾ ಹೋಗುತ್ತದೆ. ಆ ತಿರುವಿನಲ್ಲೇ ಸಾಕಷ್ಟು ರೋಚಕತೆ ಇದೆ. ಫಿಫ್ಟಿ ಪ್ಲಸ್‌ ಉದ್ಯಮಿಯನ್ನು ಮದುವೆಯಾದ ಯುವತಿಯ ಬಯಕೆ ಒಂದೆಡೆಯಾದರೆ, ಅದನ್ನು ಈಡೇರಿಸಲು ಆಗದೆ ಒಳಗೊಳಗೇ ನೋವು ಅನುಭವಿಸುವ ಉದ್ಯಮಿಯ ಸ್ಥಿತಿ ಇನ್ನೊಂದೆಡೆ, ಈ ಮಧ್ಯೆ ತಾನು ನಟಿ ಆಗಬೇಕು ಅನ್ನೋ ಮತ್ತೊಬ್ಬ ಹುಡುಗಿಯ ಆಸೆ, ನಾನೊಬ್ಬ ಹೀರೋ ಆಗಬೇಕು ಅನ್ನೋ ಪ್ರೀತಿಯೂ ಹುಡುಗನೊಬ್ಬನದು ಅದೇ ಕನಸು. ಉದ್ಯಮಿ ಪತ್ನಿಯ ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಸಿಗಬಹುದೇನೋ ಎಂಬ ಆಸೆಯ ಕಂಗಳಲ್ಲಿ ನಟಿಯ ಹುಚ್ಚು ಹಿಡಿಸಿಕೊಂಡ ಹುಡುಗಿ, ಹೀರೋ ಆಗುವ ಕನಸು ಕಟ್ಟಿಕೊಂಡ ಹುಡುಗ  ಅವರ ಮನೆಗೆ ಬಂದಾಗ, ಅಲ್ಲಿ ನಡೆಯೋ ದೃಶ್ಯವೇ ಬೇರೆ. ಅಲ್ಲಿ ಉದ್ಯಮಿ ಕೊಲೆ ನೋಡಿ ದಂಗಾಗುತ್ತಾರೆ. ಅವರಷ್ಟೇ ಅಲ್ಲ, ಆ ಉದ್ಯಮಿ ಮನೆಗೆ ಕನ್ನ ಹಾಕಲು ಸಂಚು ರೂಪಿಸುವ ಕಳ್ಳನೊಬ್ಬನೂ ಆ ಮನೆಗೆ ಎಂಟ್ರಿಯಾಗುತ್ತಾನೆ. ಅಲ್ಲಿಗೆ ಆ ಮೂವರು ಕೊಲೆಯಾದ ಉದ್ಯಮಿ ಮನೆಯಲ್ಲಿ ಬಂಧಿಯಾಗುತ್ತಾರೆ. ಹೊರ ಹೋಗೋಕೂ ಭಯ, ಆತಂಕ ಕಾರಣ, ಎಲ್ಲವೂ ಆ ಮನೆಯೊಳಗಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆ. ಮುಂದೆ ಪೊಲೀಸ್‌ ತನಿಖೆ ಶುರುವಾಗುತ್ತೆ. ಇಲ್ಲಿ ಮುಖ್ಯವಾಗಿ “ಸಂಬಂಧ”ದ ಅಂಶವೂ ಗಮನಿಸಲೇಬೇಕು. ಅದನ್ನೂ ಕೂಡ ವಾಸ್ತವತೆಗೆ ಹತ್ತಿರವಾಗುವಂತೆ ಕಟ್ಟಿಕೊಡಲಾಗಿದೆ. ಹಾಗಾದರೆ, ಆ ಕೊಲೆ ಮಾಡಿದ್ದು ಯಾರು? ಈ ಪ್ರಶ್ನೆಯನ್ನಿಟ್ಟುಕೊಂಡು ಕೊನೆಯವರೆಗೂ ಕುತೂಹಲದೊಂದಿಗೆ ಸಿನಿಮಾ ತೋರಿಸಿರುವ ರೀತಿಗೆ ಮೆಚ್ಚಬೇಕು. ಎಲ್ಲಾ ಸರಿ, ಕೊಲೆಗಾರ ಯಾರು? ಈ ಪ್ರಶ್ನೆಗೆ ಉತ್ತರ ಬೇಕಾದರೆ, “ಅರಿಷಡ್ವರ್ಗ” ನೋಡಬೇಕು.

ನಿರ್ದೇಶಕ ಅರವಿಂದ್‌ ಕಾಮತ್‌  ಕಥೆ, ಚಿತ್ರಕಥೆ, ಸಂಭಾಷಣೆಯನ್ನಷ್ಟೇ ಅಲ್ಲ, ನೋಡುಗರಿಗೂ ಅಂದಗಾಣಿಸುವಂತೆ ನಿರೂಪಿಸಿ, ಪ್ರತಿ ಪಾತ್ರಗಳನ್ನೂಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲರ್ದ ಕುತೂಹಲ ಕೆರಳಿಸುತ್ತಾ ಸಾಗುವ ಸಿನಿಮಾ ದ್ವಿತಿಯಾರ್ದದಲ್ಲಿ ಆ ಕುತೂಹಲ ದುಪ್ಪಟ್ಟಾಗುತ್ತೆ. ಇಷ್ಟಕ್ಕೆಲ್ಲಾ ಕಾರಣ, ಮತ್ತದೇ ಕಥೆ, ಪಾತ್ರಗಳ ಆಯ್ಕೆ, ಅವಿನಾಶ್‌ ಎಂದಿಗಿಂತಲೂ ಇಲ್ಲಿ ಇಷ್ಟವಾಗುತ್ತಾರೆ. ನಂದ ಗೋಪಾಲ್‌ ತನಿಖಾಧಿಕಾರಿಯಾಗಿ ಗಮನಸೆಳೆಯುತ್ತಾರೆ. ಉಳಿದಂತೆ
ಅಂಜು ಆಳ್ವಾ, ಸಂಯುಕ್ತಾ ಹೊರನಾಡು, ನಂದಗೋಪಾಲ್‌, ಗೋಪಾಲಕೃಷ್ಣ ದೇಶಪಾಂಡೆ, ಶ್ರೀಪತಿ ಮಂಜನ ಬಯಲು, ಅರವಿಂದ್‌ ಕುಪ್ಳಿಕರ್‌ ಇವರೆಲ್ಲರೂ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಚಿತ್ರದ ವೇಗ ಹೆಚ್ಚಿಸಿರೋದು ಬಾಲಾಜಿ ಮನೋಹರ್‌ ಛಾಯಾಗ್ರಹಣ ಮತ್ತು ಅರವಿಂದ್‌ ಅವರ ಸಂಕಲನ.  ಉದಿತ್‌ ಹರಿದಾಸ್‌ ಸಂಗೀತವೂ ಸ್ಕೋರ್‌ ಮಾಡಿದೆ.  “ಭಂಗಿ ಸೇದೋ ಭಂಗಿ ನೋವುಗಳೆಲ್ಲ ಹೋಗಲಿ ಹಿಂಗಿ..”  ಸೇರಿದಂತೆ ಅಲ್ಲಲ್ಲಿ ಕೇಳುವ ಹಾಡು ಕಥೆರೆ ಪೂರಕ ಎನಿಸಿದೆ.


ಕೊನೇ ಮಾತು- ಒಂದು ಕಥೆಯನ್ನು ಹೇಗೆ ಹೇಳಬೇಕು, ಹೇಗೆ ತೋರಿಸಬೇಕು, ನೋಡುಗರನ್ನು ಎಷ್ಟರಮಟ್ಟಿಗೆ ಹಿಡಿದು ಕೂರಿಸಬೇಕು ಎಂಬ ಜಾಣ್ಮೆಯೇ “ಅರಿಷಡ್ವರ್ಗ” ನೋಡುವಿಕೆಗೆ ಕಾರಣ.

ಚಿತ್ರ : ಅರಿಷಡ್ವರ್ಗ
ನಿರ್ಮಾಣ : ಕನಸು ಟಾಕೀಸ್‌
ನಿರ್ದೇಶನ: ಅರವಿಂದ್‌ ಕಾಮತ್‌
ತಾರಾಗಣ: ಅವಿನಾಶ್‌,  ಸಂಯುಕ್ತಾ ಹೊರನಾಡು, ಅಂಜು ಆಳ್ವಾ ನಾಯಕ್‌, ನಂದಗೋಪಾಲ್‌, ಗೋಪಾಲಕೃಷ್ಣ ದೇಶಪಾಂಡೆ, ಶ್ರೀಪತಿ ಮಂಜನ ಬಯಲು, ಅರವಿಂದ್‌ ಕುಪ್ಳಿಕರ್‌, ಮಹೇಶ್‌ ಬಂಗ್‌ ಇತರರು.

 

Categories
ಸಿನಿ ಸುದ್ದಿ

ಪ್ಯಾನ್‌ ಇಂಡಿಯಾ ಬಗ್ಗೆ ಮಾತಾಡಿದ ಜಗ್ಗೇಶ್‌ ವಿರುದ್ಧ ಟೀಕೆ

ಟ್ವಿಟ್ಟರ್‌ನಲ್ಲಿ ತಿರುಗೇಟು ನೀಡಿದ ನವರಸನಾಯಕ

ನವರಸನಾಯಕ ಜಗ್ಗೇಶ್‌ ಅವರು ತಮ್ಮ ಸಿನಿಬದುಕಿನ ೪೦ ವರ್ಷಗಳ ಪಯಣವನ್ನು ಮುಗಿಸಿರುವುದು ಎಲ್ಲರಿಗೂ ಗೊತ್ತಿದೆ. ಆ ಖುಷಿಗೆ ಅವರು ಇತ್ತೀಚೆಗೆ ಮಾಧ್ಯಮ ಮುಂದೆ ಬಂದು ತಮ್ಮ ಸಿನಿಜರ್ನಿ ಕುರಿತು ಮಾತನಾಡಿದ್ದರು. ಆ ಸಮಯದಲ್ಲಿ ಅವರು “ಪ್ಯಾನ್‌ ಇಂಡಿಯಾ” ಸಿನಿಮಾ ಬಗ್ಗೆಯೂ ಮಾತಾಡಿದ್ದರು. ಮೊದಲು ಕನ್ನಡದ ಬಗ್ಗೆ ಗಮನಹರಿಸಿ, ಕನ್ನಡಿಗರಿಗೆ ಕೆಲಸ ಕೊಡಿ ಎನ್ನುವುದು ಅವರ ಮನವಿಯಾಗಿತ್ತು. ಆದರೆ, ಅವರು ಆಡಿರುವ ಆ ಮಾತು ಇದೀಗ ವಿವಾದಕ್ಕೆ ಕಾರಣವಾಗಿದೆ. ಪ್ಯಾನ್‌ ಇಂಡಿಯಾ ಸಿನಿಮಾ ಬಗ್ಗೆ ಮಾತಾಡಿದ ಜಗ್ಗೇಶ್‌ ಪರ ಅನೇಕರು ನಿಂತರೆ, ಒಂದಷ್ಟು ಮಂದಿ ಅವರ ವಿರುದ್ಧ ಟೀಕೆ ಮಾಡಲು ಶುರುಮಾಡಿದ್ದಾರೆ. ಆದರೆ, ಇವೆಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸಿರುವ ಜಗ್ಗೇಶ್‌ ಮಾತ್ರ, ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಒಂದು ಸ್ಟೇಟಸ್‌ ಹಾಕಿ ಕೈ ಬಿಟಿದ್ದಾರೆ. ಅವರ ಟ್ವಿಟರ್‌ ಖಾತೆಯಲ್ಲಿ ಹೇಳಿರುವುದೇನು ಗೊತ್ತಾ?


“‘ಕನ್ನಡ ಚಿತ್ರರಂಗ, ಬೆಳೆಯುವ ಯುವನಟ ನಟಿಗಾಗಿ ಆಡಿದ ಮಾತಿಗೆ ಹೀಗಾ? ಪರವಾಗಿಲ್ಲಾ ಮಕ್ಕಳು ಎಷ್ಟೇ ಬೆಳೆದರು ತಂದೆಯ ಮುಂದೆ ಮಕ್ಕಳೆ ವಿನಃ ತಂದೆಯಾಗಲ್ಲಾ. ಶಿವಣ್ಣ, ಪುನೀತ್, ದರ್ಶನ್, ಗಣೇಶ್, ವಿಜಿ ಪ್ಯಾನ್ ಇಂಡಿಯಾ ನಂಬದೆ ಕನ್ನಡ ಕನ್ನಡಿಗರ ಸೀಮೆಯಲ್ಲೆ ಕನ್ನಡದ ಕಲಾವಿದ ತಂತ್ರಜ್ಞರ ಬೆಳಸಿ ತಾವು ಇದ್ದಾರೆ. offcorce ನಾನು ಇರುವೆ. ನಮಗೆ 100% ಕನ್ನಡ ಜನ ಸಾಕು” ಎಂದು ಹೇಳಿದ್ದಾರೆ.
ಅದೇನೆ ಇರಲಿ, ಜಗ್ಗೇಶ್‌ ಮಾತು ಈಗ ಭಾರೀ ವಿವಾದಕ್ಕೂ ಗುರಿಯಾಗಿದೆ. ಅದೇನೆ ಇದ್ದರೂ, ಪ್ಯಾನ್‌ ಇಂಡಿಯಾ ಚಿತ್ರಗಳ ಸಂಖ್ಯೆ ಕನ್ನಡದಲ್ಲೂ ಹೆಚ್ಚುತ್ತಿವೆ. ಜಗ್ಗೇಶ್‌ ಮಾತಲ್ಲಿ ತಪ್ಪಿಲ್ಲ. ಆದರೆ, ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಇಲ್ಲಿಯವರಿಗೂ ಕೆಲಸ ಸಿಗುತ್ತಿದೆಯಲ್ಲಾ ಅನ್ನೋದು ಕೆಲವರ ವಾದ.

Categories
ಎಡಿಟೋರಿಯಲ್ ಸಿನಿ ಸುದ್ದಿ

ತಲ್ವಾರ್‌ ಪೇಟೆಯಲ್ಲಿ ಸೀರಿಯಲ್ ಸೆಟ್ ಚಂದ್ರಪ್ಪ! ವಿಶೇಷ ಪಾತ್ರದಲ್ಲಿ ರವಿಶಂಕರ್‌ ಎಂಟ್ರಿ

ವಸಿಷ್ಠ ಜೊತೆ ಆರ್ಮುಗಂ ಆರ್ಭಟ!

ಕನ್ನಡದಲ್ಲಿ ಈಗಾಗಲೇ “ತಲ್ವಾರ್‌ಪೇಟೆ” ಸಿನಿಮಾ ಶುರುವಾಗಿದ್ದು ಗೊತ್ತೇ ಇದೆ. ವಸಿಷ್ಠ ಸಿಂಹ ಹೀರೋ ಆಗಿ ಕಾಣಿಸಿಕೊಂಡಿರುವುದು ಗೊತ್ತೇ ಇದೆ. ಈಗ ಹೊಸ ಸುದ್ದಿ ಅಂದರೆ, “ಆರ್ಮುಗಂ” ಖ್ಯಾತಿಯ ರವಿಶಂಕರ್‌ ಕೂಡ ಎಂಟ್ರಿಯಾಗಿದ್ದಾರೆ. ಹೌದು, ಶ್ರೀನಾಗಬ್ರಹ್ಮ ಕ್ರಿಯೇಷನ್ಸ್ ನಲ್ಲಿ ಡಾ. ಶೈಲೇಶ್ ಕುಮಾರ್.ಬಿ.ಎಸ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಸದ್ದಿಲ್ಲದೆಯೇ ಜೋರಾಗಿ ನಡೆಯುತ್ತಿದೆ.

ಈ ಚಿತ್ರದಲ್ಲೀಗ ಖಳನಟ ರವಿಶಂಕರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ರವಿಶಂಕರ್‌ ಚಿತ್ರದಲ್ಲಿ “ಸೀರಿಯಲ್‌ ಸೆಟ್‌” ಚಂದ್ರಪ್ಪ ಎಂಬ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಭಾಗದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗುತ್ತಿದ್ದು, ಒಂದಷ್ಟು ಹೊಸ ದೃಶ್ಯಗಳನ್ನು ನಿರ್ದೇಶಕ ಕೆ.ಲಕ್ಷ್ಮಣ್‌ ಸೆರೆಹಿಡಿಯುತ್ತಿದ್ದಾರೆ.


ನಿರ್ಮಾಪಕ ಡಾ.ಶೈಲೇಶ್ ಕುಮಾರ್ ಅವರಿಗೆ ಕನ್ನಡ ಮೇಲೆ ಅಗಾಧ ಪ್ರೀತಿ. ಆ ಕಾರಣಕ್ಕೆ ಒಂದೊಳ್ಳೆಯ ಮನರಂಜನಾತ್ಮಕ ಚಿತ್ರ ಮಾಡುವ ಆಸೆ ಇತ್ತು. “ತಲ್ವಾರ್‌ ಪೇಟೆ” ಕಥೆ ಹೊಸ ರೀತಿಯಿಂದ ಕೂಡಿದ್ದರಿಂದ ಈ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಅವರು, ತಮ್ಮ ಚಿತ್ರದಲ್ಲಿ ಎಲ್ಲರಿಗೂ ಗೊತ್ತಿರುವ ಕಲಾವಿದರೇ ಇರಬೇಕು ಎಂಬ ಕಾರಣಕ್ಕೆ ಪ್ರತಿಯೊಂದು ಪಾತ್ರಗಳಿಗೂ ನುರಿತ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ವಸಿಷ್ಠ ಸಿಂಹ ಹೀರೋ. ಅವರಿಗೆ ನಾಯಕಿಯಾಗಿ ಸೋನಾಲ್ ಮಾಂತೆರೊ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಹರೀಶ್ ಉತ್ತಮನ್, ಯಶವಂತ್‌ ಶೆಟ್ಟಿ, ಆಶಾಲತಾ, ವೀಣಾ ಪೊನ್ನಪ್ಪ, ಲಿಂಗರಾಜ್ ಬಲವಾಡಿ, ಸುರೇಶ್ ಚಂದ್ರ ಪ್ರದೀಪ್ ಪೂಜಾರಿ, ರಜನಿ ಕಾಂತ್, ಮನು ಇತರರು ಕಾಣಿಸಿಕೊಳ್ಳುತ್ತಿದ್ದಾರೆ.

. ಚಿತ್ರಕ್ಕೆ “ಮಫ್ತಿ”, “ಉಗ್ರಂ” ಚಿತ್ರಗಳಿಗೆ ಕಥೆ, ಸಂಭಾಷಣೆ ಬರೆದು, ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಕೆ.ರಾಮ್ , ಶ್ರೀಲಕ್ಷ್ಮಣ್ ಸಹೋದರರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಇನ್ನು, ಕೆ.ಲಕ್ಷ್ಮಣ್ ಶ್ರೀ ರಾಮ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಎಂ.ಯು. ನಂದಕುಮಾರ್ ಛಾಯಾಗ್ರಹಣವಿದೆ. ಶ್ರೀಕಾಂತ್ (ಉಗ್ರಂ, ಕೆ.ಜಿ.ಎಫ್) ಸಂಕಲನವಿದೆ. ಡಿಫರೆಂಟ್ ಡ್ಯಾನಿ, ರಾಮ್ ಲಕ್ಷ್ಮಣ್ ಸಾಹಸವಿದೆ. ಮುರಳಿ, ಮೋಹನ್, ಧನು, ಗೀತ ನೃತ್ಯ ನಿರ್ದೇಶನ ಹಾಗೂ ಆರ್ಟ್ ರಘು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಜಯಂತ್ ಕಾಯ್ಕಿಣಿ ಹಾಗೂ ಕೆ.ರಾಮ್ ಶ್ರೀಲಕ್ಷ್ಮಣ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತವಿದೆ.

 

Categories
ಸಿನಿ ಸುದ್ದಿ

ಅಗ್ನಿಪ್ರವ ಶುರು- ವಿಜಯೇಂದ್ರ ಪ್ರಸಾದ್ ಚಾಲನೆ

ಸಂಸ್ಕೃತ ಪದವೇ ಚಿತ್ರದ ಶೀರ್ಷಿಕೆ

ಕನ್ನಡದಲ್ಲಿ ಸಂಸ್ಕೃತ ಪದವುಳ್ಳ ಶೀರ್ಷಿಕೆ ಸಿನಿಮಾಗಳು ಈಗಾಗಲೇ ಸಾಕಷ್ಟು ಬಂದಿವೆ. ಈಗಲೂ ಬರುತ್ತಿವೆ. ಆ ಸಾಲಿಗೆ ಈಗ “ಅಗ್ನಿ ಪ್ರವ” ಎಂಬ ಸಿನಿಮಾವೂ ಸೇರಿದೆ. ಹೌದು, ಇದೊಂದು ಸಂಸ್ಕೃತ ಭಾಷೆಯ ಪದ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ಸಿನಿಮಾ ಮೂಲಕ ಸುರೇಶ ಆರ್ಯ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗುತ್ತಿದ್ದಾರೆ. ಹಾಗಂತ ಇವರಿಗೆ ಸಿನಿಮಾರಂಗ ಹೊಸದಲ್ಲ. ಈಗಾಗಲೇ ತೆಲುಗಿನ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ “ಅಗ್ನಿ ಪ್ರವ” ಮೊದಲ ಚಿತ್ರ. ಈ ಚಿತ್ರದ ವಿಶೇಷವೆಂದರೆ, ಕಥೆಗಾರ, “ಬಾಹುಬಲಿ” ಖ್ಯಾತಿಯ ವಿಜಯೇಂದ್ರ ಪ್ರಸಾದ್ ಅವರು ಕ್ಯಾಮರಾ ಚಾಲನೆ ಮಾಡುವ ಮೂಲಕ ಚಿತ್ರಕ್ಕೂ ಚಾಲನೆ ನೀಡಿದ್ದಾರೆ. ಇನ್ನು, ಡಾ.ರಾಜಕುಮಾರ್ ಅವರ ಹಿರಿಯ ಪುತ್ರಿ ಲಕ್ಷ್ಮೀ ಮತ್ತು ಗೋವಿಂದ್ ರಾಜ್ ಕ್ಲಾಪ್​ ಮಾಡಿ ಶುಭಕೋರಿದ್ದಾರೆ.


ಚಿತ್ರಕ್ಕೆ ಶುಭಕೋರಿದ ಕಥೆಗಾರ ವಿಜಯೇಂದ್ರ ಪ್ರಸಾದ್​, “ನಾನು ಈ ಚಿತ್ರದ ಕಥೆ ಕೇಳಿದಾಗ ಕುತೂಹಲವಿತ್ತು. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ ಎನಿಸಿತು. ಆ ಕಥೆಯ ಒನ್‌ಲೈನ್‌ ಕೇಳಿದಾಗ ನಿಜಕ್ಕೂ ಇದು ವರ್ಕೌಟ್‌ ಆಗುತ್ತೆ ಎನಿಸಿತು. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಅಷ್ಟೇ ಅಲ್ಲ, ಈ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ರಾಜ್‌ಕುಮಾರ್‌ ಅವರ ಪುತ್ರಿ ಬಂದಿದ್ದಾರೆ ಅಂದಮೇಲೆ, ಚಿತ್ರಕ್ಕೂ ಒಳ್ಳೆಯದಾಗಲಿದೆ ಎಂಬುದು ವಿಜಯೇಂದ್ರ ಪ್ರಸಾದ್ ಅವರ ಮಾತು.
ಈ ಚಿತ್ರ ನವರತ್ನ ಪಿಕ್ಚರ್ಸ್​ ಬ್ಯಾನರ್‌ನಡಿ ನಿರ್ಮಾಣವಾಗುತ್ತಿದ್ದು, ವರ್ಷಾ ತಮ್ಮಯ್ಯ ಈ ಚಿತ್ರದ ನಿರ್ಮಾಪಕರು. ಅವರು ಚಿತ್ರದ ನಾಯಕಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ 5 ಚಿತ್ರಗಳನ್ನು ಮಾಡಿರುವ ವರ್ಷಾ, ಅವರು, “ಅಗ್ನಿಪ್ರವ” ಕಥೆ ಚೆನ್ನಾಗಿದೆ ಎಂಬ ಕಾರಣಕ್ಕೆ ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿದ್ದಾರೆ.

ಇವರೊಂದಿಗೆ ಜೀತೇಂದ್ರ ಜೋಸೈಮನ್​ ಕೂಡ ನಿರ್ಮಾಣದಲ್ಲಿ ಸಾಥ್​ ನೀಡುತ್ತಿದ್ದಾರೆ. ತಮ್ಮ ನಿರ್ಮಾಣದ ಚಿತ್ರದ ಕುರಿತು ಮಾತನಾಡುವ ವರ್ಷಾ ತಮ್ಮಯ್ಯ, “ನನಗೆ ಚಿತ್ರದ ಕಥೆ ಇಷ್ಟವಾಯಿತು. ಕಮರ್ಷಿಯಲ್‌ ಅಂಶಗಳೊಂದಿಗೆ ಈ ಚಿತ್ರ ಮಾಡುತ್ತಿದ್ದೇನೆ. ಇಲ್ಲಿ ಆ್ಯಕ್ಷನ್ ದೃಶ್ಯಗಳು ಹೆಚ್ಚಾಗಿವೆ. ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಾಣಲಿದೆ ಎನ್ನುತ್ತಾರೆ ಅವರು.
ತಮ್ಮ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸುರೇಶ್ ಆರ್ಯ. “ಇದೊಂದು ಮಹಿಳಾ ಪ್ರಧಾನ ಚಿತ್ರ. ಅಗ್ನಿಪ್ರವ ಅಂದರೆ, ಬೆಳಕು ಪ್ರವಹಿಸುವುದು ಎಂದರ್ಥ. ಇಡೀ ಸಿನಿಮಾ ನಾಯಕಿ ಸುತ್ತಲೇ ಸಾಗುವುದರಿಂದ ಕಮರ್ಷಿಯಲ್ ಅಂಶಗಳ ಜತೆಗೆ ಒಂದಷ್ಟು ಮಿಸ್ಟರಿ ಥ್ರಿಲ್ಲರ್ ಅಂಶಗಳನ್ನು ಸೇರಿಸಿದ್ದೇವೆ.

ಸಿನಿಮಾ ನೋಡುತ್ತಿದ್ದರೆ, ನಾಯಕಿ ಇಲ್ಲಿ ನೆಗೆಟಿವ್‌ ಅನಿಸುತ್ತಾಳೆ. ಆದರೆ, ಚಿತ್ರದ ಹೀರೋಯಿನ್ ಕೂಡ ಅವಳೇ ಆಗಿರುತ್ತಾಳೆ. ಸಿನಿಮಾ ಬಗ್ಗೆ ಹೇಚ್ಚು ಹೇಳುವುದಿಲ್ಲ. ಸಿನಿಮಾ ಬಿಡುಗಡೆಯಾದ ಬಳಿಕ ಕಥೆ ಎಂಥದ್ದು ಎಂಬುದು ಅರ್ಥವಾಗುತ್ತದೆ” ಎನ್ನುತ್ತಾರೆ ಅವರು.
ನಟ ನಿರ್ದೇಶಕ ಜೋ ಸೈಮನ್ ಈ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ. ಇನ್ನುಳಿದಂತೆ ನಾರಾಯಣ ಸ್ವಾಮಿ, ನಟಿ ಜ್ಯೋತಿ ರೈ, ವೆಂಕಟೇಶ್ ಪ್ರಸಾದ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಸೇರಿ ಹಲವರು ಇದ್ದರು. ಚಿತ್ರಕ್ಕೆ ಉದಯ್ ಶೆಟ್ಟಿ, ಯುವ, ಸುರೇಶ್ ಆರ್ಯ ಕಥೆ ಬರೆದರೆ, ಲವಿತ್ ಛಾಯಾಗ್ರಹಣವಿದೆ. ವದತ್ತ, ಡಾ ರಾಮಕೃಷ್ಣ ಕೋಡೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

Categories
ಸಿನಿ ಸುದ್ದಿ

ಪೊಗರು ರಿಲೀಸ್‌ ಡೇಟ್‌ ಫಿಕ್ಸ್‌ ! ಕ್ರಿಸ್ಮಸ್‌ ಇಲ್ಲವೇ ಸಂಕ್ರಾಂತಿಗೆ ಬಿಡುಗಡೆ

ಕೊರೊನಾ ಬಳಿಕ ಮೊದಲು ರಿಲೀಸ್‌ ಆಗಲಿದೆಯಾ ದೊಡ್ಡ ಬಜೆಟ್‌ ಸಿನಿಮಾ?

ಕನ್ನಡದಲ್ಲೀಗ ಸಿನಿಮಾ ಬಿಡುಗಡೆ ಪರ್ವ!
ಹೌದು, ಮೇಲಿನ ಮಾತನ್ನು ಸ್ವಲ್ಪ ಅಚ್ಚರಿಯಂತೆ ಕಾಣಬಹುದಾದರೂ, ಕೊರೊನಾ ಹಾವಳಿ ಬಳಿಕ ಚಿತ್ರರಂಗ ಮೆಲ್ಲನೆ ಚೇತರಿಸಿಕೊಳ್ಳುತ್ತಿರುವುದಂತೂ ಹೌದು, ಈಗಾಗಲೇ ಮರುಬಿಡುಗಡೆಯಾದ ಚಿತ್ರಗಳು ಹೀಗೆ ಬಂದು ಹಾಗೆ ಹೋದವು. ಹಾಗಂತ, ಹೊಸ ಚಿತ್ರಗಳನ್ನು ಬಿಡುಗಡೆ ಮಾಡಲು ಒಂದಷ್ಟು ಮಂದಿ ಹಿಂದೇಟು ಹಾಕುತ್ತಿರುವ ಬೆನ್ನಲ್ಲೇ. ನವೆಂಬರ್‌ ೨೦ರಂದು ಮಂಸೋರೆ ನಿರ್ದೇಶನದ “ಆಕ್ಟ್‌-೧೯೭೮” ಚಿತ್ರ ಬಿಡುಗಡೆಯಾಯಿತು. ಅದರ ಬೆನ್ನಲ್ಲೇ ನ.೨೭ರಂದು “ಅರಿಷಡ್ವರ್ಗ” ಚಿತ್ರವೂ ತೆರೆಗೆ ಅಪ್ಪಳಿಸುತ್ತಿದೆ. ಹಾಗೆಯೇ ಒಂದಷ್ಟು ಹೊಸಬರು ಕೂಡ ಚಿತ್ರಮಂದಿರದಲ್ಲೇ ಸಿನಿಮಾ ಬಿಡುಗಡೆ ಮಾಡಲು ಧೈರ್ಯ ತೋರಿದ್ದಾರೆ. ಇಲ್ಲಿಯವರೆಗೆ ಹೊಸಬರೇ ಚಿತ್ರಮಂದಿರಕ್ಕೆ ಬರುವ ಧೈರ್ಯ ಮಾಡಿದ್ದರು. ಈಗ “ಪೊಗರು” ಕೂಡ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ.


ಹೌದು, ಇತ್ತೀಚೆಗಷ್ಟೇ ಸಿನಮಾದ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ನಂದಕಿಶೋರ್‌, ಈಗ ತಮ್ಮ “ಪೊಗರು” ಚಿತ್ರವನ್ನು ರಿಲೀಸ್‌ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾ ಯಾವಾಗ ರಿಲೀಸ್‌ ಆಗುತ್ತೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಧ್ರುವ ಸರ್ಜಾ ಎಲ್ಲೇ ಕಾಣಿಸಿಕೊಂಡರೂ, ಅಭಿಮಾನಿಗಳು “ಪೊಗರು” ಯಾವಾಗ ಚಿತ್ರಮಂದಿರಕ್ಕೆ ಬರುತ್ತೆ ಎಂದು ಪ್ರಶ್ನೆ ಕೇಳುತ್ತಿದ್ದರು. ಈಗ ಅದಕ್ಕೆ ಉತ್ತರವೂ ಸಿಕಿದೆ. ಮೂಲಗಳ ಪ್ರಕಾರ “ಪೊಗರು” ಡಿಸೆಂಬರ್ 25ರ ಕ್ರಿಸ್ಮಸ್ ಹಬ್ಬಕ್ಕೆ ಬರಲಿದೆ ಎನ್ನಲಾಗುತ್ತಿದೆ.

ಒಂದು ವೇಳೆ ಕ್ರಿಸ್‌ಮಸ್‌ ಹಬ್ಬಕ್ಕೆ ಬರಲು ತಡವಾದರೆ, ಜನವರಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ ಎನ್ನಲಾಗಿದೆ. ಒಂದು ವೇಳೆ ಚಿತ್ರತಂಡದ ಯೋಜನೆಯಂತೆಯೇ “ಪೊಗರು” ತೆರೆಗೆ ಅಪ್ಪಳಿಸಿದರೆ, ಕನ್ನಡ ಚಿತ್ರರಂಗದಲ್ಲಿ ಕೊರೊನಾ ಬಳಿಕ ಬಿಡುಗಡೆಯಾಗುವ ಮೊದಲ ದೊಡ್ಡ ಬಜೆಟ್‌ ಸಿನಿಮಾ ಇದಾಗಲಿದೆ. ಈ ಚಿತ್ರದಲ್ಲಿ ಧ್ರುವ ಅವರಿಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅದೇನೆ ಇರಲಿ, ಈಗಾಗಲೇ ಬಿಡುಗಡೆಯಾಗಿರುವ ಸಾಂಗ್‌ ಹಾಗೂ ಟ್ರೇಲರ್‌ ದೊಡ್ಡ ನಿರೀಕ್ಷೆ ಹುಟ್ಟಿಸಿದ್ದು, ಅಭಿಮಾನಿಗಳು ಈಗ ಸಿನಿಮಾ ಬಿಡುಗಡೆಯ ಎದುರು ನೋಡುತ್ತಿದ್ದಾರೆ.

Categories
ಸಿನಿ ಸುದ್ದಿ

ಮತ್ತೆ ರಾಮಾಚಾರಿ ಸದ್ದು! ತೇಜ್‌ ಚಿತ್ರಕ್ಕೆ ಚಾಲನೆ

ಇಲ್ಲಿ ವಿಧಿಯೇ ವಿಲನ್!‌ ಜಲೀಲ, ಮಾರ್ಗರೇಟ್‌ ಇಲ್ಲೂ ಇದ್ದಾರೆ!!

ಕನ್ನಡ ಚಿತ್ರರಂಗದಲ್ಲಿ ಈ ರಾಮಾಚಾರಿ ಅನ್ನೋ ಹೆಸರಲ್ಲಿ ಒಂದು ಪವರ್‌ ಇದೆ, ಖದರ್‌ ಇದೆ. ಅಷ್ಟೇ ಕೆಪಾಸಿಟಿಯೂ ಇದೆ. ಹೌದು, ರಾಮಾಚಾರಿ ಅಂದಾಕ್ಷಣ ನೆನಪಾಗೋದೇ ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಡಾ.ವಿಷ್ಣುವರ್ಧನ್‌ ಅಭಿನಯದ “ನಾಗರಹಾವು” ಚಿತ್ರ. ಈ ಚಿತ್ರದ ಯಂಗ್‌ ರೆಬೆಲ್‌ ಹೀರೋ ಆಗಿ ಕಾಣಿಸಿಕೊಂಡಿದ್ದ ವಿಷ್ಣುವರ್ಧನ್‌ ಅವರು ರಾಮಾಚಾರಿ ಹೆಸರಿನ ಪಾತ್ರ ನಿರ್ವಹಿಸಿದ್ದು ಎಲ್ಲರಿಗೂ ಗೊತ್ತು. ಇವತ್ತಿಗೂ ಚಿತ್ರದುರ್ಗ ಅಂದಾಕ್ಷಣ ನೆನಪಿಗೆ ಬರೋದೇ ರಾಮಾಚಾರಿಯ ಅ ರೆಬೆಲ್‌ ಪಾತ್ರ. ಆ ಬಳಿಕ ರವಿಚಂದ್ರನ್‌ ಅವರ “ರಾಮಾಚಾರಿ” ಕೂಡ ಮಾಸದ ಚಿತ್ರ. ಇನ್ನು, ಯಶ್‌ ಹಾಗೂ ರಾಧಿಕಾ ಪಂಡಿತ್‌ ಅಭಿನಯಿಸಿದ “ಮಿಸ್ಟರ್‌ ಅಂಡ್‌ ಮಿಸ್ಸಸ್‌ ರಾಮಾಚಾರಿ” ಚಿತ್ರದ ಬಗ್ಗೆ ಬೇರೇನೂ ಹೇಳುವಂತಿಲ್ಲ. ಇಲ್ಲೂ ರಾಮಾಚಾರಿಯೇ ಹೈಲೈಟ್. ಇಷ್ಟಕ್ಕೂ ಈಗ ಯಾಕೆ ಈ ರಾಮಾಚಾರಿಯ ವಿಷಯ ಅಂದರೆ, “ರಾಮಾಚಾರಿ೨.೦” ಎಂಬ ಹೊಸ ಚಿತ್ರ ಸೆಟ್ಟೇರಿದೆ. ಹಾಗಾಗಿ “ರಾಮಾಚಾರಿ” ಬಗ್ಗೆ ಹೇಳಲೇಬೇಕಿತ್ತು.

ತೇಜ್‌, ಶಿಲ್ಪಾಶೆಟ್ಟಿ

ಹೊಸ ಪ್ರಯತ್ನಕ್ಕೆ ಶುಭ ಹಾರೈಕೆ

ಅಂದಹಾಗೆ, ಹೊಸ ಯಂಗ್‌ ರೆಬೆಲ್‌ ರಾಮಾಚಾರಿಯಾಗಿ ತೇಜ್‌ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ಅವರು ನಾಯಕರಾಗಿ ನಟಿಸುತ್ತಿರುವುದಷ್ಟೇ ಅಲ್ಲ, ನಿರ್ದೇಶಕರಾಗಿಯೂ, ನಿರ್ಮಾಪಕರಾಗಿಯೂ ಅವರ ಎಂಟ್ರಿಯಾಗುತ್ತಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಅಂದು ನಿರ್ದೇಶಕರಾದ ಶಶಾಂಕ್‌, ಮಹೇಶ್‌, ಪ್ರವೀಣ್‌ ನಾಯಕ್‌, ಫೈವ್‌ ಸ್ಟಾರ್‌ ಗಣೇಶ್‌, ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ, ಚಿತ್ರತಂಡಕ್ಕೆ ಹಾಗೂ ತೇಜ್‌ ಅವರ ಹೊಸ ಪ್ರಯತ್ನಕ್ಕೆ ಶುಭಕೋರಿದ್ದಾರೆ.

ಬುದ್ಧಿವಂತನ ಕಥೆ

ಪನಾರೋಮಿಕ್​ ಸ್ಟುಡಿಯೋದ ಸಹಯೋಗದಲ್ಲಿ ಮೇಘನಾ ಕ್ರಿಯೇಷನ್ಸ್ ಬ್ಯಾನರ್‌ನಡಿ ತಯಾರಾಗುತ್ತಿರುವ ಈ ಚಿತ್ರದ ಕುರಿತು ಸ್ವತಃ ನಾಯಕ ಕಮ್‌ ನಿರ್ದೇಶಕ ತೇಜ್‌ ಹೇಳುವುದಿಷ್ಟು. “ಇದೊಂದು ತುಂಬಾ ಬುದ್ಧಿವಂತ ಹುಡುಗನ ಕಥೆ. ಒಂದು ರೀತಿಯ ಬಟರ್​ಫ್ಲೈ ಪರಿಕಲ್ಪನೆಯ ಸಿನಿಮಾ. ವಿಧಿಯೇ ಈ ಚಿತ್ರದಲ್ಲಿ ವಿಲನ್​ ಆಗಿದೆ. ಆ ವಿಧಿಯನ್ನು ಹೀರೋ ಇಲ್ಲಿ ಹೇಗೆಲ್ಲಾ ನಿಭಾಯಿಸುತ್ತಾನೆ ಅನ್ನೋದೇ ಕಥೆ. ಡಿಸೆಂಬರ್‌ ಅಥವಾ ಜನವರಿಯಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂದು ಮಾಹಿತಿ ಕೊಡುತ್ತಾರೆ ತೇಜ್.‌

ಹೈ ವೋಲ್ಟೇಜ್‌ ಸಿನ್ಮಾ

ಈ ಚಿತ್ರದಲ್ಲಿ ನಾಯಕ ತೇಜ್‌ ಅವರಿಗೆ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ನಾಯಕಿಯಾಗಿದ್ದಾರೆ. ಅವರಿಗೆ ಈ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದು ಅದೃಷ್ಟವಂತೆ. ಆರಂಭದಲ್ಲಿ ಎಲ್ಲರಿಗೂ ಇರುವಂತೆ ಅವರಿಗೂ ಒಂದು ಕಡೆ ಭಯವಿದೆಯಂತೆ. ಬಹುತೇಕ ಗ್ರಾಮೀಣ ಭಾಗದಲ್ಲೇ ಚಿತ್ರೀಕರಣ ನಡೆಯಲಿದ್ದು, ಮಂಡ್ಯ ಮತ್ತು ಬೆಂಗಳೂರು ಸುತ್ತಮುತ್ತ ಶೂಟಿಂಗ್‌ ಪ್ಲಾನ್‌ ಇದೆ ಎಂಬುದು ಚಿತ್ರತಂಡದ ಹೇಳಿಕೆ.
ಚಿತ್ರದಲ್ಲಿ ವಿಜಯ್‌ ಚೆಂಡೂರ್‌ ಅವರಿಲ್ಲಿ ಜಲೀಲ ಪಾತ್ರ ಮಾಡುತ್ತಿದ್ದಾರಂತೆ. ಸಹಜವಾಗಿಯೇ ಅವರಿಗೂ ಆ ಹೆಸರಲ್ಲಿ ಪಾತ್ರ ಮಾಡೋಕೆ ಭಯವಿದೆಯಂತೆ. ಆ ಹೆಸರಲ್ಲೇ ಒಂದು ಹೈ ವೋಲ್ಟೇಜ್‌ ಇರುವುದರಿಂದ ನೀಟ್‌ ಆಗಿಯೇ ನಿರ್ವಹಿಸುವ ಜವಾಬ್ದಾರಿ ಇದೆಯಂತೆ.

ಚಿತ್ರದಲ್ಲಿ ಸಂದೀಪ್ ಮಲಾನಿ, ಪ್ರಭು ಸೂರ್ಯ, ಸ್ಪರ್ಶ ರೇಖಾ, ಕೃಷ್ಣಮೂರ್ತಿ ಕವತಾರ್, ಅಶ್ವಿನ್ ಹಾಸನ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ವಿನಯ ಪಾಂಡವಪುರ ಈ ಚಿತ್ರದ ಹಾಡುಗಳಿಗೆ ಗೀತೆ ಬರೆದರೆ, ಪ್ರೇಮ್​ ಕ್ಯಾಮೆರಾ ಹಿಡಿದಿದ್ದಾರೆ. ಸುಂದರ್​ ಮೂರ್ತಿ ಸಂಗೀತವಿದೆ. ರಾಜೇಶ್​ ಕೃಷ್ಣನ್, ಸಂತೋಷ್, ಐಶ್ವರ್ಯಾ ಹಾಡುಗಳಿಗೆ ಧ್ವನಿಯಾಗಲಿದ್ದಾರೆ ಎಂಬುದು ಚಿತ್ರತಂಡದ ಮಾತು.

Categories
ಸಿನಿ ಸುದ್ದಿ

ಪದವಿಪೂರ್ವಕ್ಕೆ ಚಾಲನೆ- ಶಾಮನೂರು ಫ್ಯಾಮಿಲಿಯ ಹೊಸ ಚಿತ್ರ

ನಿರ್ಮಾಣದಲ್ಲಿ ಯೋಗರಾಜ್‌ ಭಟ್‌ ಸಾಥ್‌

ಈ ಹಿಂದೆ “ಪದವಿ ಪೂರ್ವ” ಸಿನಿಮಾ ಕುರಿತು ಒಂದಷ್ಟು ಹೇಳಲಾಗಿತ್ತು. ಈಗ ಆ ಚಿತ್ರಕ್ಕೆ ಮುಹೂರ್ತ ಕೂಡ ನಡೆದಿದೆ. ಇತ್ತೀಚೆಗೆ ರಾಜಾಜಿನಗರದ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಚಿತ್ರಕ್ಕೆ ಪೂಜೆ ನಡೆದಿದ್ದು, ಯೋಗರಾಜ್‌ಭಟ್‌ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರಕ್ಕೆ ಶುಭಕೋರಿದ್ದಾರೆ.

ಅಂದಹಾಗೆ, ಇದು ಹರಿಪ್ರಸಾದ್ ಜಯಣ್ಣ ನಿರ್ದೇಶನದ ಚಿತ್ರ. ಇನ್ನು, ಯೋಗರಾಜ್ ಭಟ್ ಮತ್ತು ರವಿಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರವಿದು. ಅಂದು ನಿರ್ಮಾಪಕರಾದ ರವಿ ಶಾಮನೂರು ಅವರ ಪುತ್ರಿ ಸೃಷ್ಠಿ ಶಾಮನೂರ್ ಕ್ಲಾಪ್ ಮಾಡಿದ್ದಾರೆ. ಚಿತ್ರದಲ್ಲಿ ಪೃಥ್ವಿ ಶಾಮನೂರ್ ನಾಯಕರಾದರೆ, ಅವರಿಗೆ ಅಂಜಲಿ ಅನೀಶ್ ಹಾಗು ಯಶಾ ಶಿವಕುಮಾರ್ ನಾಯಕಿಯರು.

ಇದು ಹರಿಪ್ರಸಾದ್ ಜಯಣ್ಣ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಚಿತ್ರದ ಮೊದಲ ಹಂತದ ಚಿತ್ರೀಕರಣ ಶುರುವಾಗಿದ್ದು, ಚಿತ್ರದ ಎರಡನೇ ಹಂತದ ಚಿತ್ರೀಕರಣವನ್ನು ಮಲೆನಾಡಿನ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ತಯಾರಿ ನಡೆಸಿದೆ. ಅರ್ಜುನ್ ಜನ್ಯ ಸಂಗೀತವಿದೆ. ಮಧು ತುಂಬಕೆರೆ ಸಂಕಲನ ಮಾಡಿದರೆ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ಮತ್ತೆ ಮದಗಜನ ಸದ್ದು!

ಡಿಸೆಂಬರ್‌ 1ರಿಂದ 3ನೇ ಹಂತದ ಶೂಟಿಂಗ್‌

ಅದ್ಧೂರಿ ಸೆಟ್‌ನಲ್ಲಿ ಚಿತ್ರೀಕರಣ

ಶ್ರೀಮುರಳಿ ಅಭಿನಯದ “ಮದಗಜ” ಆರಂಭದಿಂದಲೂ ಸದ್ದು ಮಾಡುತ್ತಲೇ ಬಂದಿದೆ. ಈಗಾಗಲೇ ಚಿತ್ರ ಎರಡು ಹಂತಗಳ ಚಿತ್ರೀಕರಣ ಮುಗಿಸಿದ್ದು, ಈಗ ಮೂರನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸಿದೆ. ಹೌದು, ಸಾಕಷ್ಟು ಕುತೂಹಲ ಕೆರಳಿಸಿರುವ “ಮದಗಜ” ಈಗ ಅದ್ಧೂರಿ ಸೆಟ್‌ನಲ್ಲಿ ಶೂಟಿಂಗ್‌ ನಡೆಸಲು ಹಲವು ರೀತಿಯ ಯೋಜನೆ ಹಾಕಿಕೊಂಡಿದೆ. ನಿರ್ದೇಶಕ ಮಹೇಶ್‌ಕುಮಾರ್‌ ಅವರು ಕಲಾ ನಿರ್ದೇಶಕ ಮೋಹನ್‌ ಬಿ.ಕೆರೆ ಅವರಿಗೆ ಒಂದು ದೊಡ್ಡ ಜವಾಬ್ದಾರಿ ವಹಿಸಿದ್ದು, ಮಿನರ್ವ ಮಿಲ್‌ ಹಾಗೂ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಸೆಟ್‌ ಹಾಕುವ ಕೆಲಸ ಕೊಟ್ಟಿದ್ದಾರೆ. ಈಗಾಗಲೇ ಬಹುತೇಕ ಕೆಲಸಗಳು ಮುಗಿಯುತ್ತ ಬಂದಿದ್ದು, ಡಿಸೆಂಬರ್ 1ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎಂಬುದು ಚಿತ್ರತಂಡದ ಹೇಳಿಕೆ.


“ಮದಗಜ” ಒಂದು ಪಕ್ಕಾ ಫ್ಯಾಮಿಲಿ ಆಕ್ಷನ್ ಡ್ರಾಮಾ ಆಗಿದ್ದು, ಶ್ರೀಮುರಳಿ ಅವರ ಹಿಂದಿನ ಸಿನಿಮಾಗಳಿಗಿಂತಲೂ ವಿಭಿನ್ನವಾದ ಆಕ್ಷನ್‌ ಮತ್ತು ಕಥೆಯೊಂದಿಗೆ ಅಭಿಮಾನಿಗಳನ್ನು ರಂಜಿಸಲಿದೆ ಎಂಬುದು ನಿರ್ದೇಶಕರ ಮಾತು. ಇನ್ನು, ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್‌ ಅವರು ಅದ್ಧೂರಿ ಬಜೆಟ್‌ನಲ್ಲೇ ನಿರ್ಮಾಣ ಮಾಡುತ್ತಿದ್ದಾರೆ.

ಉಮಾಪತಿ, ನಿರ್ಮಾಪಕ

“ರಾಬರ್ಟ್” ಸಿನಿಮಾ ನಿರ್ಮಿಸಿರುವ ಉಮಾಪತಿ ಶ್ರೀನಿವಾಸ್ “ಮದಗಜ” ಚಿತ್ರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕರು ಶ್ರೀಮುರಳಿ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಚಿತ್ರದ ಮೊದಲ ಹಂತ ವಾರಣಾಸಿಯಲ್ಲಿ ಮುಗಿದಿದ್ದು, ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ನಡೆಸಲಾಗಿತ್ತು.


ಈ ಚಿತ್ರಕ್ಕೆ ಆಶಿಕಾ ರಂಗನಾಥ್‌ ಅವರು ಶ್ರೀಮುರಳಿಗೆ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ತೆಲುಗು ಖ್ಯಾತ ನಟ ಜಗಪತಿ ಬಾಬು ವಿಲನ್‌ ಆಗಿದ್ದು, ಸುಮಾರು 20 ವರ್ಷದ ನಂತರ ದಕ್ಷಿಣ ಭಾರತದ ಖ್ಯಾತ ನಟಿ ದೇವಯಾನಿ ಕನ್ನಡ ಚಿತ್ರರಂಗಕ್ಕೆ ಈ ಚಿತ್ರದ ಮೂಲಕ ಪುನಃ ಬರುತ್ತಿರುವುದು ವಿಶೇಷತೆಗಳಲ್ಲೊಂದು. ಚಿತ್ರಕ್ಕೆ ನವೀನ್ ಕುಮಾರ್ ಕ್ಯಾಮೆರಾ ಹಿಡಿದರೆ, ರವಿ ಬಸ್ರೂರು ಸಂಗೀತವಿದೆ. ಚೇತನ್ ಕುಮಾರ್ ಸಾಹಿತ್ಯವಿದೆ.

ಮಹೇಶ್‌ ಕುಮಾರ್‌, ನಿರ್ದೇಶಕ
error: Content is protected !!