Categories
ಸಿನಿ ಸುದ್ದಿ

ಮಿತ್ರ ಫಿಲ್ಮ್‌ ಅಕಾಡೆಮಿ – ನಟಿಸೋರಿಗೊಂದು ಹೊಸ ವೇದಿಕೆ ಕಲ್ಪಿಸಿಕೊಟ್ಟ ಹಾಸ್ಯ ಕಲಾವಿದ

ಹಾಸ್ಯ ನಟ ಕಮ್‌ ನಿರ್ಮಾಪಕ ಮಿತ್ರ ಅಂದಾಕ್ಷಣ ನೆನಪಾಗೋದೇ “ರಾಗ” ಎಂಬ ಅದ್ಭುತ ಸಿನಿಮಾ. ಹೌದು, ಈ ಚಿತ್ರದ ಮೂಲಕ ನಿರ್ಮಾಪಕ ಎನಿಸಿಕೊಂಡ ಮಿತ್ರ, ಒಂದೊಳ್ಳೆಯ ಸಿನಿಮಾ ನಿರ್ಮಿಸಿದ ಕಲಾವಿದ ಎಂಬ ಮಾತಿಗೂ ಕಾರಣರಾದರು. ನೂರಾರು ಸಿನಿಮಾಗಳ ಮೂಲಕ ಕನ್ನಡ ಚಿತ್ರರಸಿಕರ ಪಾಲಿಗೆ ಪ್ರೀತಿಯ ನಟ ಎನಿಸಿಕೊಂಡಿರುವ ಮಿತ್ರ ಅವರೀಗ ಹೊಸದೊಂದು ಕಾರ್ಯಕ್ಕೆ ಕೈ ಹಾಕಿದ್ದಾರೆ. ಹಾಗಂತ, ಹೊಸ ಸಿನಿಮಾ ನಿರ್ಮಾಣಕ್ಕಿಳಿದು ಬಿಟ್ಟರಾ? ಈ ಪ್ರಶ್ನೆ ಎದುರಾಗೋದು ಸಹಜ.

ಆದರೆ, ಮಿತ್ರ, ಹೊಸ ಸಿನಿಮಾ ಮಾಡೋಕೆ ಸಜ್ಜಾಗಿರೋದು ಸತ್ಯ. ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಿವೆಯಾದರೂ, ಈಗ ಅವರೊಂದು ಹೊಸ ಯೋಚನೆಯಲ್ಲಿದ್ದಾರೆ. ಆ ಯೋಚನೆ ಮತ್ತು ಯೋಜನೆ ಬೇರೇನೂ ಅಲ್ಲ, ಅವರೀಗ “ಆರ್‌ಕೆ ಮಿತ್ರ ಫಿಲ್ಮ್‌ ಅಕಾಡೆಮಿ” ಶುರು ಮಾಡಿದ್ದಾರೆ. ಇದು ಅವರ ಹೊಸ ಕನಸು. ಅವರ ಈ ಹೊಸ ಯೋಜನೆ ಅವರದೇ ಕೂರ್ಗ್‌ನಲ್ಲಿರುವ ಸ್ವರ್ಣಭೂಮಿ ರೆಸಾರ್ಟ್‌ನಲ್ಲಿ ಶುರುವಾಗುತ್ತಿದೆ. ಫೆಬ್ರವರಿ ೨೮ರಿಂದ ಶುರುವಾಗಲಿರುವ ಆವರ “ಆರ್‌ಕೆ ಮಿತ್ರ ಫಿಲ್ಮ ಅಕಾಡೆಮಿ” ಮೂಲಕ ಕೇವಲ ನಟನಾ ತರಬೇತಿ ನಡೆಯಲಿದೆ. ಇದೊಂದು ವಿನೂತನ ಮತ್ತು ಅಪರೂಪ ಎನಿಸುವ ನಟನಾ ತರಬೇತಿ ಎನ್ನುವ ಮಿತ್ರ, “ಸಿನಿಲಹರಿ” ಜೊತೆ ತಮ್ಮ ಅಕಾಡೆಮಿಯೊಳಗಿನ ಮಾಹಿತಿ ಹಂಚಿಕೊಂಡರು.


“ನಾನೊಬ್ಬ ಹಾಸ್ಯ ಕಲಾವಿದನಾಗಿ. ಸದಾ ಹೊಸತನ್ನೇ ಬಯಸುತ್ತಿರುತ್ತೇನೆ. ಏನಾದರೊಂದು ಮಾಡಬೇಕೆಂಬ ತುಡಿತ ನನ್ನದು. ಆ ನಿಟ್ಟಿನಲ್ಲಿ ನಾನು ಸಿನಿಮಾರಂಗದಲ್ಲಿದ್ದುಕೊಂಡೇ “ರಾಗ” ಎಂಬ ಒಂದೊಳ್ಳೆಯ ಚಿತ್ರವನ್ನು ನಿರ್ಮಿಸಿದೆ. ಅದರಿಂದ ನನಗೆ ಹಣ ಬರದಿದ್ದರೂ, ಒಂದೊಳ್ಳೆಯ ಸಿನಿಮಾ ಮಾಡಿದ ತೃಪ್ತಿ ಇದೆ. ಇನ್ನು, ಇದರ ನಡುವೆ ನಾನು ನಟನೆಯಲ್ಲೂ ಬಿಝಿ ಇದ್ದೇನೆ. ಒಂದಷ್ಟು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಕೆಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಇನ್ನಷ್ಟು ಚಿತ್ರಗಳ ಮಾತುಕತೆಯೂ ನಡೆಯುತ್ತಿದೆ. ಇದರ ನಡುವೆಯೇ ನಾನು ಕೂರ್ಗ್‌ನಲ್ಲಿ ಸ್ವರ್ಣಭೂಮಿ ರೆಸಾರ್ಟ್‌ವೊಂದನ್ನು ನಡೆಸುತ್ತಿದ್ದೇನೆ. ಮೂಲತಃ ರೆಸಾರ್ಟ್‌ ಉದ್ಯಮದಿಂದಲೇ ನಾನು ಸಿನಿಮಾ ಲೋಕಕ್ಕೆ ಬಂದವನು. ಹಾಗಾಗಿ, ರೆಸಾರ್ಟ್‌ ಜೊತೆ ನನಗೆ ಅವಿನಾಭಾವ ಸಂಬಂಧವೂ ಇದೆ. ಈಗ ಕೂರ್ಗ್‌ನಲ್ಲಿ ವಿಶಾಲವಾಗಿ, ಸುಸಜ್ಜಿತವಾಗಿ ತಲೆಎತ್ತಿರುವ ಸ್ವರ್ಣಭೂಮಿ ರೆಸಾರ್ಟ್‌ನಲ್ಲೀ “ಆರ್‌ಕೆ ಮಿತ್ರ ಫಿಲ್ಮ ಅಕಾಡೆಮಿ” ಶುರು ಮಾಡಿ, ಆ ಮೂಲಕವೇ ರಂಗತರಬೇತಿ ಶಿಬಿರ ಆಯೋಜಿಸುತ್ತಿದ್ದೇನೆ. ಅದು ಹದಿನೈದು ದಿನಗಳ ಶಿಬಿರವಾಗಿದ್ದು, ಅಲ್ಲಿ ನಟನೆ ತರಗತಿ ಮಾತ್ರ ನಡೆಯಲಿದೆ.

ಈ ಹದಿನೈದು ದಿನಗಳಲ್ಲಿ ನುರಿತ ಕಲಾವಿದರು, ತಾಂತ್ರಿಕ ವರ್ಗದವರು, ಸಿನಿಮಾ ಪತ್ರಕರ್ತರು ಬಂದು ಶಿಬಿರಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ನಟನೆ ಬಗ್ಗೆ ಒಂದಷ್ಟು ಮಾಹಿತಿಯನ್ನೂ ಕೊಡಲಿದ್ದಾರೆ. ಉಳಿದಂತೆ ಶಿಬಿರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿತಿಗಳಿಗೆ ನಾವೇ ಕಿರುಚಿತ್ರ ತಯಾರು ಮಾಡಿ, ಅವರ ಪ್ರತಿಭೆಗೊಂದು ವೇದಿಕೆ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಹದಿನೈದು ದಿನಗಳ ಕಾಲ ಅಲ್ಲೇ ವಾಸ್ತವ್ಯ, ಊಟ, ತಿಂಡಿಯ ವ್ಯವಸ್ಥೆಯೂ ಇರಲಿದೆ. ಹದಿನೈದು ದಿನಗಳ ಕಾಲ ರೆಸಾರ್ಟ್‌ನಲ್ಲಿ ತಂಗುವುದರ ಜೊತೆಗೆ ಸುಪ್ತ ಪ್ರತಿಭೆ ಆಚೆ ತರುವ ಕೆಲಸ ನಡೆಯುತ್ತದೆ. ಹೆಚ್ಚಿನ ವಿವರಗಳಿಗೆ “www.rkmithrafilmacademy.com” ವೆಬ್‌ಸೈಟ್‌ ವೀಕ್ಷಿಸಬಹುದಾಗಿದೆ.


ವಿಶೇಷವಾಗಿ ಹೇಳುವುದಾದರೆ, ಈ ಹದಿನೈದು ದಿನದ ತರಬೇತಿಯ ಬ್ಯಾಚ್‌ನಲ್ಲಿ ಕೇವಲ ೨೦ ಜನರಿಗೆ ಮಾತ್ರ ಅವಕಾಶವಿದೆ. ತಿಂಗಳಿಗೊಂದು ಬ್ಯಾಚ್‌ ನಡೆಯುತ್ತಿದ್ದು, 20 ಜನರ ಮೇಲೆ ಎಷ್ಟೇ ಹಣ ಕೊಟ್ಟರೂ, ಅವಕಾಶ ಇರುವುದಿಲ್ಲ. ಇಲ್ಲಿ ಹಣಕ್ಕಿಂತ ಮೊದಲು, ಒಂದೊಳ್ಳೆಯ ವೇದಿಕೆ ಕಲ್ಪಿಸಬೇಕೆಂಬುದು ನಮ್ಮ ಉದ್ದೇಶ. ನಿರ್ದೇಶನದ ಕನಸು ಕಟ್ಟಿಕೊಂಡಿರುವವರಿಗೆ ಇಲ್ಲಿ ಕಿರುಚಿತ್ರ ನಿರ್ದೇಶನಕ್ಕೂ ಅವಕಾಶ ಮಾಡಿಕೊಡುತ್ತಿದ್ದು, ಆ ಕಿರುಚಿತ್ರದ ನಿರ್ಮಾಣವನ್ನೂ ಆರ್‌ಕೆ ಮಿತ್ರ ಫಿಲ್ಮ್ಮ್ಸ್‌ ಅಕಾಡೆಮಿ ನೋಡಿಕೊಳ್ಳಲಿದೆ. ಅವರ ಶಾರ್ಟ್‌ ಸಿನಿಮಾ ನಮ್ಮದೇ ಚಾನೆಲ್‌ನಲ್ಲೂ ಪ್ರಸಾರ ಮಾಡಲಿದ್ದೇವೆ. ರಾಜ್ಯದ ಯಾವುದೇ ಮೂಲೆಯಿಂದಲೂ ಸಿನಿಮಾ ಮೇಲೆ ಪ್ರೀತಿ ಇದ್ದವರು ಬಂದವರಿಗೆ ಇಲ್ಲಿ ಅವಕಾಶವಿದೆ. ಮೊದಲು ರಿಜಿಸ್ಟರ್‌ ಮಾಡಿಕೊಂಡವರಿಗೆ ಮೊದಲ ಆದ್ಯತೆ. ಇಲ್ಲಿ ಸಂಪೂರ್ಣ ಹೊಸ ರೀತಿಯ ಅನುಭವದ ಜೊತೆ, ನಟನೆ ಕಲಿಕೆಯ ವೇದಿಕೆ ವ್ಯವಸ್ಥೆ ಮಾಡಲಾಗುವುದು” ಎನ್ನುತ್ತಾರೆ ಮಿತ್ರ.

Categories
ಸಿನಿ ಸುದ್ದಿ

ಏ ತುಕಾಲಿ ನೀನ್‌ ಮಾಸ್‌ ಆದ್ರೆ, ನಾನು ಆ ಮಾಸ್‌ಗೆ… ಹೀಗಂತ ದರ್ಶನ್‌ ಟಾಂಗ್‌ ಕೊಟ್ಟಿದ್ದು ಯಾರಿಗೆ? ವೈರಲ್‌ ಆಯ್ತು ರಾಬರ್ಟ್‌‌ ಅಫಿಶಿಯಲ್ ಟ್ರೇಲರ್

 

“ಏ ತುಕಾಲಿ ನೀನ್‌ ಮಾಸ್‌ ಆದ್ರೆ, ನಾನು ಆ ಮಾಸ್‌ಗೆ…
– ಇದು ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಅವರ ಖದರ್‌ ಡೈಲಾಗ್.‌ ಇಂಥದ್ದೊಂದು ಸಖತ್‌ ಡೈಲಾಗ್‌ ಇರೋದು. “ರಾಬರ್ಟ್‌” ಟ್ರೇಲರ್‌ನಲ್ಲಿ. ಹೌದು, ಫೆಬ್ರವರಿ 16ರಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಹುಟ್ಟುಹಬ್ಬ. ಅವರ ಬರ್ತ್‌ಡೇಗೆ “ರಾಬರ್ಟ್‌” ಚಿತ್ರತಂಡ ಅದ್ಧೂರಿಯಾಗಿರುವ ಒಂದು ಟ್ರೇಲರ್‌ ಬಿಡುಗಡೆ ಮಾಡಿದೆ. ನಿಜಕ್ಕೂ ಅದೊಂದು ಅದ್ಭುತವಾಗಿ ರೂಪುಗೊಂಡಿರುವ ಟ್ರೇಲರ್.‌ ಆ ಟ್ರೇಲರ್‌ ನೋಡಿದ ಪ್ರತಿಯೊಬ್ಬ ದರ್ಶನ್‌ ಅಭಿಮಾನಿಗಳು ಖುಷ್.‌

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಟ್ರೇಲರ್‌ನಲ್ಲಿ ಭರ್ಜರಿ ಮಾಸ್‌ ಡೈಲಾಗ್‌ಗಳಿವೆ. ಅದರಲ್ಲೂ, ಮೇಕಿಂಗ್‌ ಬಗ್ಗೆ ಹೇಳುವಂತೆಯೇ ಇಲ್ಲ. ಟ್ರೇಲರ್‌ ನೋಡಿದವರಿಗೆ “ರಾಬರ್ಟ್‌” ದರ್ಶನ ಮಾಡಲೇಬೇಕು ಎಂಬಷ್ಟರ ಮಟ್ಟಿಗೆ ನಿರ್ದೇಶಕ ತರುಣ್‌ ಸುಧೀರ್‌ ಅವರು ಟ್ರೇಲರ್‌ ಕಟ್‌ ಮಾಡಿಸಿದ್ದಾರೆ. ಆ ಟ್ರೇಲರ್‌ ನೋಡಿದವರಿಗೆ ಸಿನಿಮಾದ ಕ್ವಾಲಿಟಿ ಮತ್ತು ಅದ್ಧೂರಿತನ ಗೊತ್ತಾಗುತ್ತೆ. ದರ್ಶನ್ ಅವರ ಹೊಸ ಲುಕ್ ಇಲ್ಲಿ ಸ್ಪೆಷಲ್ ಎನಿಸುತ್ತೆ. ಸಾಕಷ್ಟು ಪವರ್‌ ಕೂಡ ಇದೆ. ಇನ್ನು, ಇಡೀ ಟ್ರೇಲರ್‌ನಲ್ಲಿ ಅಬ್ಬರದ ಡೈಲಾಗ್‌ಗಳೇ ತುಂಬಿವೆ.


“ಏ ತುಕಾಲಿ ನೀನ್‌ ಮಾಸ್‌ ಆದ್ರೆ, ನಾನು ಆ ಮಾಸ್‌ಗೆ..” ಎಂಬ ಡೈಲಾಗ್‌ ಕೇಳಿದವರಿಗೆ ದರ್ಶನ್‌ ಅವರು ಯಾರಿಗೆ ಈ ಡೈಲಾಗ್‌ ಮೂಲಕ ಟಾಂಗ್‌ ಕೊಟ್ಟಿದ್ದಾರೆ ಎಂಬ ಪ್ರಶ್ನೆಗಳೂ ಗಿರಕಿ ಹೊಡೆಯುತ್ತವೆ. ಅಷ್ಟೇ ಅಲ್ಲ, ಅವರ ಇನ್ನೊಂದು ಡೈಲಾಗ್‌ ಕೂಡ ಅಂಥದ್ದೊಂದು ಪ್ರಶ್ನೆಗೂ ಕಾರಣವಾಗುತ್ತೆ. “ಒಬ್ಬರ ಲೈಫಲ್ಲಿ ನಾವ್‌ ಹೀರೋ ಆಗಬೇಕೆಂದರೆ, ಇನ್ನೊಬ್ಬರ ಲೈಫಲ್ಲಿ ನಾವ್‌ ವಿಲನ್‌ ಆಗಲೇಬೇಕು…” ಎಂಬ ಡೈಲಾಗ್‌ ಕೇಳಿದವರಿಗೆ ಇಲ್ಲಿ ದರ್ಶನ್‌ ಯಾರ ಲೈಫ್‌ಗೆ ವಿಲನ್‌ ಆಗಿದ್ದಾರೆ? ಅವರು ಯಾರ ಕುರಿತಾಗಿ ಈ ಡೈಲಾಗ್‌ ಹೇಳಿದ್ದಾರೆ ಅನ್ನೋ ಪ್ರಶ್ನೆ ಕೂಡ ಸಹಜವಾಗಿಯೇ ಮೂಡುತ್ತೆ. ಮತ್ತೊಂದು ಡೈಲಾಗ್‌ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲೂ ಒಂದು ಟಾಂಗ್‌ ಇದೆ. “ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣ ಮುಂದೆ ಗೆಲ್ಲೋದು ಗೊತ್ತು…” ಈ ಕೌಂಟ್‌ ಡೌನ್‌ ಸ್ಟಾರ್ಟ್ಸ್ಸ್‌ʼ ಎಂದು ಬರುವ ಡೈಲಾಗ್‌ ಕೂಡ ಸಖತ್‌ ಮಾಸ್‌ ಆಗಿದೆ.


ಅದೆಲ್ಲಾ ಏನೇ ಇದ್ದರೂ, “ರಾಬರ್ಟ್‌” ಚಿತ್ರ ನೋಡಿದಾಗಲೇ, ದರ್ಶನ್‌ ಅವರ ಈ ಡೈಲಾಗ್‌ ಅಲ್ಲಿರುವ ವಿಲನ್‌ಗಾಗಿಯೇ ಹೇಳಿದ್ದು ಅಂತ ಗೊತ್ತಾಗುತ್ತೆ. ಒಂದಂತೂ ನಿಜ, “ರಾಬರ್ಟ್‌” ಚಿತ್ರ ನೋಡೋಕೆ ಅವರ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲೂ “ರಾಬರ್ಟ್‌” ಚಿತ್ರ ತೆರೆಗೆ ಬರುತ್ತಿದೆ.
ಟ್ರೇಲರ್‌ನಲ್ಲಿ ಸಾಕಷ್ಟು ವಿಶೇಷತೆಗಳಿವೆ. ದೊಡ್ಡ ತಾರಾಬಳಗವೇ ಇದೆ. ಜಗಪತಿ ಬಾಬು, ದೇವರಾಜ್‌ ಸೇರಿದಂತೆ ದೊಡ್ಡ ಕಲಾವಿದರ ದಂಡೇ ತುಂಬಿದೆ. ಇನ್ನು, ಬಾಲ ಶ್ರೀರಾಮನನ್ನು ತನ್ನ ಹೆಗಲ ಮೇಲೆ ಹೊತ್ತ ಆಂಜನೇಯ ಪಾತ್ರದಲ್ಲಿ ದರ್ಶನ್‌ ಇಲ್ಲಿ ಕಾಣಿಸಿಕೊಂಡಿದ್ದಾರೆ.

ಆ ಪಾತ್ರ ಯಾಕೆ ಅನ್ನೋದನ್ನೂ ಸಿನಿಮಾದಲ್ಲೇ ನೋಡಬೇಕು. ಒಟ್ನಲ್ಲಿ, ನಿರ್ದೇಶಕ ತರುಣ್‌ ಸುಧೀರ್‌ ಅವರು, ಕುತೂಹಲ ಕೆರಳಿಸುವಂತಹ ಸಿನಿಮಾ ಮಾಡಿದ್ದಾರೆ ಎಂಬುದಂತೂ ಸತ್ಯ. ಟ್ರೇಲರ್‌ನಲ್ಲೇ ಅಂಥದ್ದೊಂದು ಥ್ರಿಲ್‌ ಕಟ್ಟಿಕೊಟ್ಟಿರುವ ನಿರ್ದೇಶಕರು ಭರವಸೆ ಮೂಡಿಸಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಅವರು ಅದ್ಧೂರಿಯಾಗಿಯೇ ತಯಾರಿಸಿದ್ದಾರೆ. ಆಶಾಭಟ್‌ ದರ್ಶನ್‌ಗೆ ಜೋಡಿಯಾಗಿದ್ದಾರೆ. ಅಂದಹಾಗೆ, ಟ್ರೇಲರ್‌ ಬಂದು ಕೇವಲ 42 ನಿಮಿಷಕ್ಕೆ ಹತ್ತು ಲಕ್ಷ ಜನ ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ್ದು ವಿಶೇಷ.

 

Categories
ಸಿನಿ ಸುದ್ದಿ

ಶೂಟಿಂಗ್‌ ವೇಳೆ ನಟ ಜಾನ್ ಅಬ್ರಾಹಂಗೆ ಗಾಯ- ಅಟ್ಯಾಕ್‌ ಸಿನಿಮಾದಲ್ಲಿ ಅವಘಡ

ಸಿನಿಮಾ ಅಂದಮೇಲೆ ರಿಸ್ಕ್‌ ಇದ್ದೇ ಇರುತ್ತೆ. ಅದರಲ್ಲೂ ಈ ಸ್ಟಂಟ್‌ ವಿಚಾರಕ್ಕೆ ಬಂದರೆ, ಸಾಕಷ್ಟು ಎಚ್ಚರದಿಂದ ಇರಲೇಬೇಕು. ಎಷ್ಟೇ ಎಚ್ಚರವಹಿಸಿದರೂ, ಒಂದಷ್ಟು ಸಮಸ್ಯೆಗಳು ಸಹಜ. ಸಣ್ಣಪುಟ್ಟ ಗಾಯಗಳ ಜೊತೆಗೆ ಅದೆಷ್ಟೋ ಫೈಟರ್ಸ್‌, ಮಾಸ್ಟರ್ಸ್‌ ಕೂಡ ನೋವು ಅನುಭವಿಸಿರುವುದುಂಟು. ಇಲ್ಲೀಗ ಹೇಳಹೊರಟಿರುವ ವಿಷಯ, ಬಾಲಿವುಡ್‌ ನಟ ಜಾನ್‌ ಅಬ್ರಾಹಂ ಕುರಿತು. ಹೌದು, ಜಾನ್‌ ಅಬ್ರಾಹಂ ಅವರು ಶೂಟಿಂಗ್‌ ಟೈಮ್‌ನಲ್ಲಿ ಫೈಟ್‌ ಸೀನ್‌ ಮಾಡುವಾಗ ಗಾಯಗೊಂಡಿದ್ದಾರೆ.

“ಅಟ್ಯಾಕ್‌” ಎನ್ನುವ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಫೈಟ್‌ ಸೀನ್‌ ವೇಳೆ ಟ್ಯೂಬ್‌ಲೈಟ್‌ನಿಂದ ಡಾನ್‌ಗಳು ನಟ ಜಾನ್‌ ಅಬ್ರಾಹಂ ಅವರ ಮೇಲೆ ಹಲ್ಲೆ ಮಾಡುವ ದೃಶ್ಯವದು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಬ್ರಾಹಂ ಅವರಿಗೆ ಪೆಟ್ಟಾಗಿದೆ. ತಕ್ಷಣವೇ ಶೂಟಿಂಗ್‌ ನಿಲ್ಲಿಸಿದ ಚಿತ್ರತಂಡ ಅವರ ಆರೋಗ್ಯ ವಿಚಾರಿಸಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಜಾನ್ ಅಬ್ರಾಹಂ, “ನನಗೆ ಗಂಭೀರ ಗಾಯವಾಗಿಲ್ಲ. ಯಾರೂ ಕೂಡ ಭಯಪಡಬೇಕಿಲ್ಲ” ಎಂದು ಹೇಳಿದ್ದಾರೆ.

Categories
ಸಿನಿ ಸುದ್ದಿ

ಬಾಲಿವುಡ್ ನಟ ಸಂದೀಪ್ ನಹರ್‌ ಆತ್ಮಹತ್ಯೆ

ಅಕ್ಷಯ್ ಕುಮಾರ್ ನಟನೆಯ ‘ಕೇಸರಿ’, ‘ಧೋನಿ’ ಬಯೋಪಿಕ್‌ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ನಟ ಸಂದೀಪ್ ನಹರ್ ನಿನ್ನೆ ಮುಂಬೈನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ‘ಕೆಹ್ನೆ ಕೋ ಹಮ್‌ಸಫರ್ ಹೈ’ ಸೇರಿದಂತೆ ಕೆಲವು ಹಿಂದಿ ಸರಣಿಗಳ ನಟನಾಗಿಯೂ ಅವರು ಚಿರಪರಿಚಿತರು. ಆತ್ಮಹತ್ಯೆಗೂ ಮುನ್ನ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಅವರು ಸೂಸೈಡ್ ನೋಟ್ ಬರೆದಿದ್ದು, ತಮ್ಮ ನಿರ್ಧಾರಕ್ಕೆ ಪತ್ನಿ ಮತ್ತು ಅತ್ತೆಯ ಕಿರುಕುಳ ಕಾರಣ ಎಂದಿದ್ದಾರೆ.

ಸಂಗೀಪ್ ನಹರ್ ಎರಡು ವರ್ಷಗಳ ಹಿಂದೆ ಕಂಚನ್ ಅವರನ್ನು ವರಿಸಿದ್ದರು. ಇವರ ದಾಂಪತ್ಯದಲ್ಲಿ ವಿರಸ ತಲೆದೋರಿದ್ದು, ದಂಪತಿ ಮಧ್ಯೆ ಮನಸ್ತಾಪವಿತ್ತು ಎನ್ನಲಾಗಿದೆ. “ಆತ್ಮಹತ್ಯೆ ನಿರ್ಧಾರದ ಬಗ್ಗೆ ನನಗೆ ಖೇದವಿದೆ. ಇಂಥದ್ದೊಂದು ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಾನು ದಾಂಪತ್ಯ ಬದುಕು ಸರಿಪಡಿಸಿಕೊಳ್ಳಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಕೊನೆಗೂ ನನಗೆ ಒಳಿತಾಗಲಿಲ್ಲ. ಜೀವನದಲ್ಲಿ ನಾನು ನರಕವನ್ನೇ ನೋಡಿದ್ದೇನೆ. ಹಾಗಾಗಿ ಸಂತೋಷದಿಂದ ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ” ಎಂದು ಸೂಯಿಸೈಡ್‌ ನೋಟ್‌ ಅಲ್ಲಿ ಬರೆದುಕೊಂಡಿದ್ದಾರೆ ಸಂದೀಪ್‌.

ವೈಯಕ್ತಿ ಕಾರಣಗಳಲ್ಲದೆ ಬಾಲಿವುಡ್‌ನಲ್ಲಿ ರಾಜಕೀಯದ ಬಗ್ಗೆಯೂ ಅವರು ನೋಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ನಟನಾಗಿ ಅಲ್ಲಿ ತಾವು ಹೇಗೆ ಕಿರುಕುಳ ಅನುಭವಿಸಬೇಕಾಯ್ತು ಎನ್ನುವ ವಿವರಣೆ ಅಲ್ಲಿದೆ. “ಚಿಕ್ಕ ನಟರಿಗೆ ಬಾಲಿವುಡ್‌ನಲ್ಲಿ ತುಂಬಾ ಕಷ್ಟವಿದೆ. ಕೊನೆಯ ಹಂತದಲ್ಲಿ ನಮ್ಮ ಅವಕಾಶಗಳನ್ನು ಬೇರೆಯವರು ಕಸಿದುಬಿಡುತ್ತಾರೆ. ಇದು ಕಲಾವಿದರನ್ನು ಹತಾಶೆಗೆ ದೂಡುತ್ತದೆ” ಎಂದು ಬರೆದಿದ್ದಾರೆ ಸಂದೀಪ್‌.

Categories
ಸಿನಿ ಸುದ್ದಿ

ಖಾತೆಯಲ್ಲಿ ಹಣವಿಲ್ಲದಿದ್ದರೂ ಡಬ್ಬಿಂಗ್‌ ಜೋರು! ತಮ್ಮ ಪಾತ್ರಕ್ಕೆ ಉಮಾಶ್ರೀ ಮಾತು

ದಿಗಂತ್‌ ಹಾಗೂ ಐಂದ್ರಿತಾ ರೇ ಅಭಿನಯದ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರದ ಚಿತ್ರೀಕರಣ ಮುಗಿದಿದ್ದು, ಇದೀಗ ಡಬ್ಬಿಂಗ್‌ ಕೆಲಸದಲ್ಲಿ ನಿರತವಾಗಿದೆ. ಚಿತ್ರಕ್ಕೆ ಪ್ರಜ್ವಲ್ ಪೈ ಅವರ‌ ಸ್ಟುಡಿಯೋದಲ್ಲಿ ಡಬ್ಬಿಂಗ್‌ ಕೆಲಸ ನಡೆಯುತ್ತಿದ್ದು, ಇತ್ತೀಚೆಗೆ ಹಿರಿಯ ನಟಿ ಉಮಾಶ್ರೀ ಅವರು ತಮ್ಮ ಪಾತ್ರಕ್ಕೆ ಡಬ್‌ ಮಾಡಿದ್ದಾರೆ. ಸಾಗರ, ಸಿಗಂಧೂರು ಹಾಗೂ ಬೆಂಗಳೂರಿನ ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಉಪ್ಪಿ ಎಂಟರ್ ಟೈನರ್ ಬ್ಯಾನರ್‌ನಲ್ಲಿ ಸಿಲ್ಕ್ ಮಂಜು ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ವಿನಾಯಕ ಕೋಡ್ಸರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.‌ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವ ಇರುವ ವಿನಾಯಕ ಕೋಡ್ಸರ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಔಿನಾಯಕ ಕೋಡ್ಸರ ಅವರದೇ ಕಥೆ, ಚಿತ್ರಕಥೆ ಇದಕ್ಕಿದೆ. ವೇಣು ಹಸ್ರಾಳಿ ಅವರು ಚಿತ್ರಕಥೆ ಜೊತೆಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಚಿತ್ರಕ್ಕೆ ಪ್ರಜ್ವಲ್ ಪೈ ಅವರ ಸಂಗೀತವಿದೆ. ರವೀಂದ್ರ ಜೋಶಿ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದು, ನಂದ ಕಿಶೋರ್ ಎನ್.ರಾವ್ ಅವರ ಛಾಯಾಗ್ರಹಣವಿದೆ.

ರಾಹುಲ್ ವಸಿಷ್ಠ ಅವರ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಿಶ್ವಜಿತ್‌ ರಾವ್ ಹಾಗೂ ತ್ರಿಲೋಕ್ ತ್ರಿವಿಕ್ರಂ ಸಾಹಿತ್ಯವಿದೆ. ಸಂಪೂರ್ಣ ಹಾಸ್ಯಮಯ ಕಥಾಹಂದರ ಹೊಂದಿರುವ ಈ ಚಿತ್ರದ ತಾರಾಬಳಗದಲ್ಲಿ ರಂಜನಿ ರಾಘವನ್ ನಾಯಕಿಯಾಗಿದ್ದಾರೆ. ಕಾಸರಾಗೋಡು ಚಿನ್ನ, ಪಿ.ಡಿ.ಸತೀಶ್‌ ಹಾಗೂ ನೀನಾಸಂನ ಹಲವು ಪ್ರತಿಭಾವಂತರು ಇಲ್ಲಿದ್ದಾರೆ.

Categories
ಸೌತ್‌ ಸೆನ್ಸೇಷನ್

ಕಿರಾತಕ ನಟಿ ಓವಿಯಾ ವಿರುದ್ಧ ದೂರು ದಾಖಲು

ತಮಿಳು ಮೂಲದ ಬಹುಭಾಷಾ ನಟಿ ಓವಿಯಾ ವಿರುದ್ಧ ಬಿಜೆಪಿ ಪಕ್ಷದ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.  ಭಾನುವಾರವಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿಗೆ ಭೇಟಿ ನೀಡಿದ್ದರು. ಅದರ ಹಿಂದಿನ ದಿನ ನಟಿ ಓವಿಯಾ ‘ಗೋಬ್ಯಾಕ್‌ ಮೋದಿ ’ ಆಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದರು. ನಟಿಯ ಈ ಟ್ವೀಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇದೀಗ ಬಿಜೆಪಿ ಸದಸ್ಯರು ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ನಟಿ ಓವಿಯಾ ಈ ಹಿಂದೆ ಯಶ್ ಅಭಿನಯದ ಸೂಪರ್‌ ಹಿಟ್‌  ‘ಕಿರಾತಕ’ ಚಿತ್ರದ ನಾಯಕಿಯಾಗಿ ನಟಿಸಿದ್ದರು. ಅದಾದ ನಂತರ ಅವರು ‘ಮಿಸ್ಟರ್ ಮೊಮ್ಮಗ’ ಚಿತ್ರದೊಂದಿಗೆ ಮತ್ತೆ ಕನ್ನಡಕ್ಕೆ ಬಂದಿದ್ದರು. ತಮಿಳು ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಹೆಸರು ಮಾಡಿದ್ದ ಅವರು ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. “ತಮ್ಮ ಟ್ವೀಟ್‌ ಮೂಲಕ ನಟಿ ಸಾರ್ವಜನಿಕ ಅಶಾಂತಿ ಉಂಟುಮಾಡಿದ್ದಾರೆ.

ಅವರ ಈ ಟ್ವೀಟ್ ಹಿಂದಿನ ಉದ್ದೇಶ, ಅವರ ಇತರೆ ಸಂಪರ್ಕಗಳ ಬಗ್ಗೆ ತನಿಖೆಯಾಗಲಿ” ಎನ್ನುವ ಒಕ್ಕಣಿಯೊಂದಿಗೆ ಪಕ್ಷದ ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಓವಿಯಾ ಅವರಿಂದ ಇದಕ್ಕೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

Categories
ಸಿನಿ ಸುದ್ದಿ

ತಾಪ್ಸಿ ‘ಲೂಪ್‌ ಲಪೇಟಾ’ ರಿಲೀಸ್‌ಗೆ ರೆಡಿ!

 ವಿಶ್ಲೇಷಕರು ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಜರ್ಮನ್ ಸಿನಿಮಾ ‘ರನ್‌ ಲೋಲಾ ರನ್‌’ ರೀಮೇಕ್‌ ‘ಲೂಪ್ ಲಪೇಟಾ’. ತಾಪ್ಸಿ ಪನ್ನು ಮತ್ತು ತಾಹಿರ್ ರಾಜ್ ನಟನೆಯ ಈ ಹಿಂದಿ ಸಿನಿಮಾ ಈಗ ತೆರೆಗೆ ಸಿದ್ಧವಾಗಿದೆ. ಬಾಲಿವುಡ್‌ನಲ್ಲಿ ಈ ಜರ್ಮನ್ ರೀಮೇಕ್‌ ಬಗ್ಗೆ ದೊಡ್ಡ ನಿರೀಕ್ಷೆ ಇರುವುದಂತೂ ಹೌದು. ಆಕಾಶ್ ಭಾಟಿಯಾ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರದ ಬಗ್ಗೆ ನಟಿ ತಾಪ್ಸಿ ಅಪಾರ ಭರವಸೆ ಹೊಂದಿದ್ದಾರೆ.


ಈ ಚಿತ್ರದ ಸ್ಕ್ರಿಪ್ಟ್ ಕೇಳಿದಾಗ ಮೊದಲು ತಾಪ್ಸಿ ಒಲ್ಲೆ ಎಂದಿದ್ದರಂತೆ. ಅದರೆ ಅದನ್ನು ನಿರ್ದೇಶಕರು ಸಾವಧಾನವಾಗಿ ನಿರೂಪಿಸಿದಾಗ ಕೂಡಲೇ ಒಪ್ಪಿಗೆ ಕೊಟ್ಟಿದ್ದಾರೆ. “ಕೆಲವು ಬಾರಿ ನಾನಾಗಿಯೇ ಸಿನಿಮಾಗಳ ಹಿಂದೆ ಹೋಗುತ್ತೇನೆ. ಇನ್ನು ಕೆಲವು ತಾನಾಗಿಯೇ ನನ್ನ ಪಾಲಿಗೆ ಒದಗಿಬರುತ್ತವೆ. ಈ ಲೂಪ್‌ ಲಪೇಟಾ ಅಂಥ ಚಿತ್ರಗಳಲ್ಲೊಂದು. ಇಂಥದ್ದೊಂದು ಅವಕಾಶಕ್ಕೆ ನಿರ್ದೇಶಕರಿಗೆ ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ ತಾಪ್ಸಿ.


‘ರನ್ ಲೋಲಾ ರನ್‌’ ಜರ್ಮನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಫ್ರಾಂಕಾ ಪೊಟೆಂಟ್‌ ಮತ್ತು ಮಾರಿಟ್ಝ್‌ ಬ್ಲೀಬ್‌ಟ್ರೂ ನಟಿಸಿದ್ದಾರೆ. ಫ್ರಾಂಕಾ ಪಾತ್ರದಲ್ಲಿ ತಾಪ್ಸಿ ಕಾಣಿಸಿಕೊಂಡಿದ್ದು, ಹಿಂದಿ ಅವತರಣಿಕೆಯಲ್ಲಿ ಅವರ ಹೆಸರು ‘ಸವಿ’. ಚಿತ್ರದ ಬಿಡುಗಡೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ.

Categories
ಸೌತ್‌ ಸೆನ್ಸೇಷನ್

ಫ್ಯಾಮಿಲಿ ಫೋಟೋ ಶೇರ್ ಮಾಡಿ ಖುಷಿಗೊಂಡ ರಮ್ಯಕೃಷ್ಣ

ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿರುವ ರಮ್ಯಕೃಷ್ಣ ದಕ್ಷಿಣ ಭಾರತದ ಜನಪ್ರಿಯ ನಟಿ. “ಅಮ್ಮನ್‌”, “ಪಡಯಪ್ಪ”, “ಪಂಚತಂತ್ರಂ”, “ಬಾಹುಬಲಿ” ಸೇರಿದಂತೆ ಹಲವಾರು ಚಿತ್ರಗಳಲ್ಲಿ ರಮ್ಯಕೃಷ್ಣ ತಮ್ಮ ಪಾತ್ರಗಳ ಮೂಲಕ ಛಾಪು ಮೂಡಿಸಿರುವ ಕಲಾವಿದೆ. ದಕ್ಷಿಣದ ಜನಪ್ರಿಯ ನಾಯಕನಟರಿಗೆ ಜೋಡಿಯಾಗಿ ನಟಿಸಿರುವ ಅವರಿಗೆ ಈಗಲೂ ಬಹು ಬೇಡಿಕೆಯಿದೆ.

ರಮ್ಯಕೃಷ್ಣ ಅವರು ತೆಲುಗು ಜನಪ್ರಿಯ ಚಿತ್ರ ನಿರ್ದೇಶಕ ವಂಶಿಕೃಷ್ಣ ಅವರನ್ನು ವರಿಸಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ತಮ್ಮ ಫ್ಯಾಮಿಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪುತ್ರ ಋತ್ವಿಕ್ ಕೃಷ್ಣನ ಹದಿನಾರನೇ ಹುಟ್ಟು ಹಬ್ಬದ ಸಂಭ್ರಮದ ಅವರ ಈ ಫೋಟೋಗಳಿಗೆ ಅಭಿಮಾನಿಗಳಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪತಿ, ಪುತ್ರ ಮತ್ತು ಸಹೋದರಿ ವಿನಯಾ ಅವರೊಂದಿಗಿನ ನಟಿಯ ಫೋಟೋಗಳು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿವೆ. ಸದ್ಯ ಎರಡು ಚಿತ್ರಗಳ ಚಿತ್ರೀಕರಣದಲ್ಲಿ ರಮ್ಯಾಕೃಷ್ಣ ಬಿಝಿ. ವಿಜಯ್ ದೇವರಕೊಂಡ ಹೀರೋ ಆಗಿರುವ ‘ಲಿಗರ್‌’ ತೆಲುಗು – ಹಿಂದಿ ದ್ವಿಭಾಷಾ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರವಿದೆಯಂತೆ. ಈ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.

Categories
ಆಡಿಯೋ ಕಾರ್ನರ್

ಸುಶಾಂತ್ ಸಿಂಗ್ ರಜಪೂತ್ ನೆನಪು – ನಟನಿಗೆ ‌ಸಂಗೀತ ನಿರ್ದೇಶಕ ವಿನಯ್‌ ಚಂದ್ರ ಅಲ್ವಿದಾ ಆಲ್ಬಂ ಗೌರವ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಇಂದು ನಮ್ಮೊಂದಿಗಿಲ್ಲ. ಆದರೆ, ಅವರ ಸಿನಿಮಾಗಳು, ಅವರ ಹಾಡುಗಳು ಇಂದಿಗೂ ಅಚ್ಚಳಿಯದೆ ಎಲ್ಲರ ಮನದಲ್ಲಿ ಉಳಿದಿವೆ. ಕಡಿಮೆ ಅವಧಿಯಲ್ಲೇ ಜೋರು ಸುದ್ದಿಯಾದ ಸುಶಾಂತ್‌ ಸಿಂಗ್‌ ಅವರ ನೆನಪಿಗೋಸ್ಕರ “ಅಲ್ವಿದಾ” ಆಲ್ಬಂವೊಂದನ್ನು ಹೊರತರಲಾಗಿದೆ. ಹೌದು, ಬಾಲಿವುಡ್‌ನಲ್ಲಿ ಒಂದಷ್ಟು ಸಾಧನೆ ಮಾಡಿದ ಸುಶಾಂತ್‌ ಸಿಂಗ್‌ ಕುರಿತ “ಅಲ್ವಿದಾ” ಆಲ್ಬಂ ಹಾಡು ಸಿದ್ಧಗೊಂಡಿದ್ದು, ಅದನ್ನು ಇತ್ತೀಚೆಗೆ ಪ್ಲೇ ಟು ಮೀ ಅರ್ಪಿಸಿದೆ.

ಸಂಗೀತ ನಿರ್ದೇಶಕ ಕಮ್‌ ಗಾಯಕ ವಿನಯ್‌ ಚಂದ್ರ ಅವರು ವಿಶೇಷವಾಗಿಯೇ “ಅಲ್ವಿದಾ” ಹಾಡನ್ನು ರೆಡಿಮಾಡಿದ್ದಾರೆ. ಇತ್ತೀಚೆಗೆ ವಿನಯ್‌ಚಂದ್ರ ಅವರ ತಂಡ ಆ ಹಾಡಿನ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು. ಹಾಡು ಹಿಂದಿಯಲ್ಲಿಯೇ ತಯಾರಾಗಿದ್ದು, ಹಾಡಿಗೆ ದನಿಯಾಗುವುದರ ಜತೆಗೆ ಸಂಗೀತವನ್ನೂ ನೀಡಿದ್ದಾರೆ ವಿನಯ್ ಚಂದ್ರ. ಅಷ್ಟೇ ಅಲ್ಲ ಈ ಹಾಡಲ್ಲೂ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅದರ ಟೀಸರ್ ಕೂಡ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ.


ಈ ವೇಳೆ ಮಾತಿಗಿಳಿದ ಸಂಗೀತ ನಿರ್ದೇಶಕ ವಿನಯ್‌ ಚಂದ್ರ, “ಬಾಲಿವುಡ್ ನಲ್ಲಿ‌ ನೆಲೆ ನಿಲ್ಲಲು ಸುಶಾಂತ್ ಅವರ ಶ್ರಮ ಹೇಗಿತ್ತು ಎಂಬುದನ್ನು ಈ‌ ಹಾಡಿನಲ್ಲಿ ತೋರಿಸಿದ್ದೇವೆ. ಅವರ ಬಾಲ್ಯದ ಫೋಟೋಗಳಿಂದ ಹಿಡಿದ ಇತ್ತೀಚಿನ ಫೋಟೋಗಳನ್ನು ಮೂರು ನಿಮಿಷದ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಕೊನೆಗೆ ತಮ್ಮ ಈ ಸಿನಿಮಾ ಪಯಣದಲ್ಲಿ ಕೈ ಹಿಡಿದವರಿಗೆ, ಆಸರೆಯಾದವರಿಗೂ ಥ್ಯಾಂಕ್ಸ್ ಹೇಳಿ ಹೊರಡುವ ಪರಿಕಲ್ಪನೆಯ ಹಾಡು ಅಂದು ಎಂಬುದು ಅವರ ಮಾತು.


ಎರಡೂವರೆ‌ ದಿನಗಳ ಕಾಲ ಬೆಂಗಳೂರಿನಲ್ಲಿಯೇ ಸಂಪೂರ್ಣವಾಗಿ ಸೆಟ್ ಹಾಕಿ ಅಲ್ವಿದಾ ಹಾಡಿನ ಶೂಟಿಂಗ್ ನಡೆಸಿರುವುದು ವಿಶೇಷ. ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ, ಅದ್ಧೂರಿಯಾಗಿಯೇ ಚಿತ್ರೀಕರಿಸಲಾಗಿದೆ. ಸದ್ಯ ಟೀಸರ್ ಬಿಡುಗಡೆಯಾಗಿದ್ದು, ಇನ್ನೊಂದು ವಾರದಲ್ಲಿ ಯೂಟ್ಯೂಬ್ ನಲ್ಲಿ ಹಾಡು ಬಿಡುಗಡೆಯಾಗಲಿದೆ.
ಪ್ಲೇ ಟು ಮಿ ಇಂಡಿಯಾದ ಬಿಗೆಸ್ಟ್ ಫರ್ಫಾಮಿಂಗ್ ನಮಗೊಂದು ಒಳ್ಳೆಯ ವೇದಿಕೆ ಕಲ್ಪಿಸಿದೆ.

ಇದೀಗ ಪ್ಲೇ ಟು ಮಿ ಒರಿಜಿನಲ್ಸ್ ಶುರುಮಾಡಿದ್ದು, ಆ ಮೂಲಕ ನನ್ನ ಮೊದಲ ಹಾಡಾಗಿ ಅಲ್ವಿದಾ ಮೂಡಿಬಂದಿದೆ. ಕೀರ್ತಿ ವಾಸನ್ ಸುಬ್ರಮಣ್ಯಂ ಪ್ಲೇ ಟು ಮಿಯ ಸಿಇಒ ಆಗಿದ್ದಾರೆ. 104 ಎಫ್ಎಂನ ಸಿಇಒ ಮತ್ತು ವಲ್ಫೂಲ್ ಬ್ರಾಂಡ್ ನ ಬಿಸಿನೆಸ್ ಹೆಡ್ ಕೂಡ ಅವರು. ಇನ್ನು, ಶ್ರೀಧರ್ ಮತ್ತು ಶೀತಲ್ ಈ ಹಾಡಿಗೆ ಹಣ ಹಾಕಿದ್ದಾರೆ. ಹಾಡಿನ ನಿರ್ದೇಶನವನ್ನೂ ಶ್ರೀಧರ್ ಮಾಡಿದ್ದಾರೆ.

ಹಾಡಿನ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಅಂದು ಅತಿಥಿಗಳ ದಂಡೇ ಹಾಜರಿತ್ತು. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್, ಸಾಹಸ‌ ನಿರ್ದೇಶಕ ಥ್ರಿಲ್ಲರ್ ಮಂಜು, ವಿನಯ್ ಚಂದ್ರ ಅವರ ತಂದೆ ಮತ್ತು ಹಿರಿಯ ಪತ್ರಕರ್ತರು, ಕಲಾವಿದರಾಗಿರುವ ಸುರೇಶ್ ಚಂದ್ರ, ರವಿಚೇತನ್, ನಟಿ ರೂಪಿಕಾ, ಅಭಯ್ ಚಂದ್ರ, ಕೀರ್ತಿ ವಾಸನ್ ಸೇರಿದಂತೆ ಹಲವು ಗೆಳೆಯರು ಆಗಮಿಸಿ ವಿನಯ್‌ ಚಂದ್ರ ಅವರ ಪ್ರಯತ್ನಕ್ಕೆ ಶುಭಕೋರಿದರು.

ಈಗಾಗಲೇ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ‌ಮಾಡುತ್ತಿರುವ ಅನಿಲ್ ಕುಮಾರ್ , ಆಲ್ವಿದಾ ಹಾಡಿಗೆ ಕ್ಯಾಮರಾ ಹಿಡಿದಿದ್ದಾರೆ. ಜತೆಗೆ ಸಂಕಲನವನ್ನೂ ಮಾಡಿದ್ದಾರೆ. ವಿನಯ್‌ ಚಂದ್ರ ಸ್ವತಃ ಸಂಗೀತದ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ. ಇನ್ನು, ಅಭಿಲಾಷ್ ಗುಪ್ತಾ ಸಾಹಿತ್ಯವಿದೆ.

Categories
ಸಿನಿ ಸುದ್ದಿ

ಹೀರೋ ಆಗಿ ಜಿಮ್ ರವಿ – ಅವರೀಗ ಪುರುಷೋತ್ತಮ

ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಎ.ವಿ.ರವಿ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ‌ ಗುರುತಿಸಿಕೊಂಡಿದ್ದ ರವಿ ಅವರನ್ನು ಅಭಿಮಾನದಿಂದ ಜಿಮ್‌ರವಿ ಎಂದೇ ಕರೆಯುವುದುಂಟು. ರವಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ‌ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಈವರೆಗೆ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ಅವರು, ’ರವಿ ಜಿಮ್’ ತರಬೇತಿ ಶಾಲೆ ಶುರು ಮಾಡಿ ಕಳೆದ ಮೂರು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ.

ಈವರೆಗೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ರವಿ ಈಗ ಪೂರ್ಣ ಪ್ರಮಾಣದ ಹೀರೋ ಆಗಿದ್ದಾರೆ. ಹೌದು ರವಿ ಈಗ, ’ಪುರುಷೋತ್ತಮ’ ಚಿತ್ರಕ್ಕೆ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದ್ದು, ರವಿಸ್ ಜಿಮ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರೇಮಿಗಳ ದಿನದಂದು ಅದ್ದೂರಿಯಾಗಿ ಚಿತ್ರದ ಮಹೂರ್ತ ನಡೆಯಿತು. ಕಲಾಸಾಮ್ರಾಟ್ ಎಸ್.ನಾರಾಯಣ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ಜೈಜಗದೀಶ್, ವಿಜಯಲಕ್ಷೀಸಿಂಗ್, ತುರುವೆಕೆರೆ ಶಾಸಕ ಮಸಾಲೆಜಯರಾಂ ಮುಂತಾದವರು ಶುಭ ಹಾರೈಸಿದ್ದಾರೆ.
ಚಿತ್ರಕ್ಕೆ ಎಸ್.ವಿ.ಅಮರನಾಥ್ ನಿರ್ದೇಶಕರು. ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಜವಬ್ದಾರಿ ಕೂಡ ಅವರದೇ.

ತಮ್ಮ ಸಿನಿಮಾ ಕುರಿತು ಹೇಳಿಕೊಂಡ ನಿರ್ದೇಶ ಎಸ್.ವಿ.ಅಮರನಾಥ್‌, ರವಿ ಅವರನ್ನು ಈವರೆಗೆ ಕ್ರೀಡಾಪಟು, ಕಲಾವಿದರನ್ನಾಗಿ ನೋಡಿದ್ದೀರಾ. ಈಗ ಅವರಲ್ಲಿರುವ ಹೊಸ ಪ್ರತಿಭೆಯನ್ನು ಬೇರೆ ರೀತಿ ಪರದೆ ಮೇಲೆ ತೋರಿಸವ ಪ್ರಯತ್ನ ಇಲ್ಲಿ ಮಾಡಲಾಗುತ್ತಿದೆ. ಹಾಗಂತ ಇಲ್ಲಿ ಕ್ರೀಡೆ, ಆಕ್ಷನ್ ದೃಶ್ಯಗಳು ಇರುವುದಿಲ್ಲ. ಪೂರ್ಣ ಪ್ರಮಾಣದ ಹಾಸ್ಯದ ಎಳೆಯಲ್ಲೇ ಕಥೆ ಸಾಗುತ್ತದೆ. ಮಧ್ಯಮ ವರ್ಗದ ಕುಟುಂಬದವರು ಪ್ರತಿ ನಿತ್ಯ ಏನಾದರೂ ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಆ ರೀತಿಯ ದೊಡ್ಡ ಚಾಲೆಂಜ್ ಇವರ ಬದುಕಲ್ಲಿ ಬಂದಾಗ, ಅದನ್ನು ಹೇಗೆ ನಿಭಾಯಿಸುತ್ತಾರೆ. ಇಲ್ಲಿ ನಾಯಕ ದೇಹ ಶಕ್ತಿಯನ್ನು ಪ್ರದರ್ಶಿಸದೆ, ಕೇವಲ ಬುದ್ದಿ ಶಕ್ತಿಯಿಂದ ಹೇಗೆಲ್ಲಾ ಅವಘಡಗಳನ್ನು ಸರಿಪಡಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಸಾರಾಂಶ.

ಬೆಂಗಳೂರು, ಮೈಸೂರು ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ನಿರ್ಮಾಪಕರು ಕಥೆಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಇಲ್ಲಿ ವ್ಯವಸ್ಥೆಗೊಳಿಸಿದ್ದಾರೆ. ನಾಯಕಿ ಸೇರಿದಂತೆ ಇತರೆ ಆಯ್ಕೆ ಪ್ರಕ್ರಿಯೆ ಇಷ್ಟರಲ್ಲೇ ಆಗಬೇಕಿದೆ ಎನ್ನುತ್ತಾರೆ ಅವರು.
ಮೊದಲ ಸಲ ತೆರೆ ಮೇಲೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ರವಿ, ಡಾ.ರಾಜ್‌ಕುಮಾರ್ ಅಭಿಮಾನಿಯಾಗಿ, ಅಣ್ಣಾವ್ರು ಹೇಳಿದ ಒಂದು ಮಾತನ್ನು ಇಂದಿಗೂ ಉಳಿಸಿಕೊಂಡಿದ್ದೇನೆ. ನಾಯಕನಿಂದ ಒದೆ ತಿನ್ನಿಸಿಕೊಳ್ಳುತ್ತಿರುವ ದೃಶ್ಯಗಳನ್ನು ನೋಡಿತ್ತಿದ್ದ ಹಿತೈಷಿಗಳು, ನೀವು ಯಾವಾಗ ಹೀರೋ ಆಗೋದು ಅಂತ ಕೇಳುತ್ತಲೇ ಇದ್ದರು.

ಅದಕ್ಕೆ ಈಗ ಕಾಲ ಕೂಡಿಬಂದಿದೆ. ನಿರ್ದೇಶಕರು ಯಾವುದೇ ಪಾತ್ರ ಕೊಟ್ಟರೂ ಶ್ರದ್ಧೆಯಿಂದ ಮಾಡುತ್ತಿದ್ದೆ. ನಾನು ಹಣದ ಹಿಂದೆ ಯಾವತ್ತು ಹೋಗಿರಲಿಲ್ಲ. ಈ ಚಿತ್ರದ ಪಾತ್ರಕ್ಕಾಗಿ ಹದಿನೆಂಟು ಕೆ.ಜಿ ತೂಕ ಇಳಿಸಿಕೊಂಡಿದ್ದೇನೆ” ಎಂದು ಮನವಿ ಮಾಡಿಕೊಂಡರು. ಆನಂದ್‌ ಪ್ರಿಯಾ, ಪ್ರಮೋದ್‌ ಮರವಂತೆ ಸಾಹಿತ್ಯವಿದೆ. ಶ್ರೀಧರ್.ವಿ.ಸಂಭ್ರಮ್ ಸಂಗೀತವಿದೆ. ಅರ್ಜುನ್ ಕಿಟ್ಟು ಸಂಕಲನವಿದೆ. ಬೇಬಿ ಅಂಕಿತಮೂರ್ತಿ ಇತರರು ಇದ್ದರು.

error: Content is protected !!