ಕನ್ನಡ ಚಿತ್ರರಂಗಕ್ಕೆ ಬಂದ ಬೆರಳೆಣಿಕೆ ವರ್ಷಗಳಲ್ಲೇ ನಟಿ ಅದಿತಿ ಪ್ರಭುದೇವ ಸಾಕಷ್ಟು ಸುದ್ದಿ ಮಾಡಿದ್ದಾರೆ. ಹಾಗಂತ ಬೇರೇನೋ ವಿಷಯದಲ್ಲಿ ಸುದ್ದಿ ಮಾಡಿದ್ದಾರೆ ಅಂತಲ್ಲ. ಅವರೀಗ ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಸದ್ಯ ಅವರ ಅಭಿನಯದ “ಆನ” ಸಿನಿಮಾದ ಮೋಷನ್ ಪೋಸ್ಟರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಎಲ್ಲೆಡೆಯಿಂದಲೂ ಆ ಮೋಷನ್ ಪೋಸ್ಟರ್‌ಗೆ ಮೆಚ್ಚುಗೆ ಸಿಗುತ್ತಿದೆ.
ಸಾಲು ಸಾಲು ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿರುವುದಕ್ಕೆ ಕಾರಣ, ಅವರ ಅಭಿನಯ ಮತ್ತು ಸ್ಪಷ್ಟ ಭಾಷೆ. ಹೌದು, ಅದಿತಿ ಪ್ರಭುದೇವ ಹಾಗೆ ನೋಡಿದರೆ, ನಿರೂಪಕಿಯಾಗಿದ್ದವರು. ಚಂದದ ಮಾತುಗಳನ್ನು ಆಡುವ ಮೂಲಕವೇ ಅವರು ಕಿರುತೆರೆಯ ಗಮನಸೆಳೆದವರು. ಅಲ್ಲಿಂದ ಅವರು “ಗುಂಡ್ಯಾನ ಹೆಂಡತಿ” ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ಆ ಬಳಿಕ “ನಾಗ ಕನ್ನಿಕೆ” ಧಾರಾವಾಹಿಯಲ್ಲೂ ಮಿಂಚಿದರು. ನಂತರದ ದಿನಗಳಲ್ಲಿ ಅವರು ಬೆಳ್ಳಿತೆರೆಗೆ ಬಡ್ತಿ ಪಡೆದು, ಅಜೇಯ್‌ರಾವ್ ಜೊತೆಗೆ “ಧೈರ್ಯಂ” ಸಿನಿಮಾಗೆ ನಾಯಕಿಯಾಗಿ ಕಾಣಿಸಿಕೊಂಡರು.
ಆ ಚಿತ್ರದ ಬಳಿಕ ಅದಿತಿ ಪ್ರಭುದೇವ ಹಿಂದಿರುಗಿ ನೋಡಿಲ್ಲ. ಅಷ್ಟರಮಟ್ಟಿಗೆ ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದರು. ಸಿನಿಮಾ ಮಂದಿಗಷ್ಟೇ ಅಲ್ಲ, ಪಡ್ಡೆ ಹುಡುಗರಿಗೂ ಅದಿತಿ ಪ್ರಭುದೇವ ಫೇವರೇಟ್ ನಾಯಕಿ ಎನಿಸಿಕೊಂಡರು. ಸದ್ಯಕ್ಕೆ ಎಸ್.ನಾರಾಯಣ್ ನಿರ್ದೇಶನದ “೫ಡಿ” ಸಿನಿಮಾದಲ್ಲಿ ಆದಿತ್ಯ ಜೊತೆಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ.
ಸದಾ ನಗುಮೊಗದ ಈ ಅದಿತಿಗೆ ಒಂದಷ್ಟು ಸಿನಿಮಾಗಳು ಹುಡುಕಿ ಬಂದಿವೆ. ನೋಡ ನೋಡುತ್ತಿದ್ದಂತೆಯೇ ಕೆಲವು ನಟರ ಜೊತೆಗೆ ನಟಿಸುವ ಮೂಲಕ ಶ್ಯಾನೆ ಬಿಝಿಯಾಗಿಬಿಟ್ಟರು. ಈಗಾಗಲೇ “ಬ್ರಹ್ಮಚಾರಿ”, “ಬಜಾರ್”, “ಸಿಂಗ” ಸೇರಿದಂತೆ ಹಲವು ಹೊಸಬರ ಸಿನಿಮಾಗಳಲ್ಲೂ ಅದಿತಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಕೈಯಲ್ಲಿರುವ ಸಿನಿಮಾಗಳ ಬಿಡುಗಡೆ ಎದುರು ನೋಡುತ್ತಿದ್ದಾರೆ ಅದಿತಿ.